ಸೋಮವಾರ, ನವೆಂಬರ್ 24, 2008

ಉಡುಪಿ ಯೂತ್ ಹಾಸ್ಟೆಲ್ ರಾಜ್ಯ ಮಟ್ಟದ ಚಾರಣದ ಕೆಲವು ಚಿತ್ರಗಳು


ಉಡುಪಿ ಯೂತ್ ಹಾಸ್ಟೆಲ್, ನವೆಂಬರ್ ೧೩,೧೪,೧೫ ಮತ್ತು ೧೬ರಂದು ಆಯೋಜಿಸಿದ ರಾಜ್ಯ ಮಟ್ಟದ ಚಾರಣದ ಕೆಲವು ಚಿತ್ರಗಳನ್ನು ಇಲ್ಲಿ ಹಾಕಿದ್ದೇನೆ. ಅರಣ್ಯ ಇಲಾಖೆಯ ಕೊನೆಯ ಗಳಿಗೆಯ ನಖರಾ ಮತ್ತು ದರ್ಪದ ಹೊರತಾಗಿಯೂ ನಾವು ಈ ಚಾರಣವನ್ನು ಯಾವುದೇ ವಿಘ್ನವಿಲ್ಲದೇ ನಡೆಸಿದ್ದೇ ಸೋಜಿಗವೆನಿಸುತ್ತಿದೆ. ೬೪ ಚಾರಣಿಗರು ಭಾಗವಹಿಸಿ, ನಮ್ಮ ನಿರೀಕ್ಷೆಗೂ ಮೀರಿ ಈ ಚಾರಣ ಕಾರ್ಯಕ್ರಮ ಯಶಸ್ವಿಯಾಗಲು ಸಹಕರಿಸಿದರು. ಅವರಿಗೆಲ್ಲರಿಗೂ ಉಡುಪಿ ಯೂತ್ ಹಾಸ್ಟೆಲ್ ಆಭಾರಿ. ಮೇಲೆ ಇರುವುದು ಎಲ್ಲಾ ಚಾರಣಿಗರ ಗ್ರೂಪ್ ಚಿತ್ರ.ಗೆಳೆಯ ಗುರುದತ್ ಕಾಮತ್ ಒಬ್ಬ ಅಸಾಮಾನ್ಯ ಫೋಟೋಗ್ರಾಫರ್. ಯಾವುದೇ ಚಿತ್ರಗಳನ್ನು ಇವರು ನಂತರ ಸ್ಪೆಷಲ್ ಎಫೆಕ್ಟ್ಸ್ ಹಾಕಿ ಚಂದ ಕಾಣುವಂತೆ ಮಾಡುವುದಿಲ್ಲ. ಬದಲಾಗಿ ಚಿತ್ರಗಳನ್ನೇ ಅಷ್ಟು ಚೆನ್ನಾಗಿ ಕ್ಲಿಕ್ ಮಾಡುತ್ತಾರೆ. ಇಲ್ಲಿ ಎಲ್ಲಾ ಅವರು ತೆಗೆದ ಚಿತ್ರಗಳನ್ನೇ ಹಾಕಿದ್ದೇನೆ. ನಾನು ತೆಗೆದ ಸೆಕೆಂಡ್ ಕ್ಲಾಸ್ ಚಿತ್ರಗಳು ಸ್ವಲ್ಪ ದಿನಗಳ ನಂತರ. ಬೇಸ್ ಕ್ಯಾಂಪ್ ಇದ್ದದ್ದು ಮಾವಿನಕಾರಿನಲ್ಲಿ. ನಮ್ಮ ಅಡುಗೆಯ ತ್ರಿಮೂರ್ತಿಗಳೂ ಈ ಕಾರ್ಯಕ್ರಮ ಯಶಸ್ವಿಯಾಗಲು ಪ್ರಮುಖ ಕಾರಣವೂ ಹೌದು. ಮಾವಿನಕಾರಿನಲ್ಲಿ ೧೩ನೇ ತಾರೀಕಿನ ರಾತ್ರಿ ಗೇರು ಮರಗಳ ಕೆಳಗೆ ಕುಳಿತು ಕಾರ್ಯನಿರ್ವಹಿಸುತ್ತಿದ್ದಾರೆ.


ನಮ್ಮ ಬೇಸ್ ಕ್ಯಾಂಪ್ - ಮಾವಿನಕಾರು. ಸಮೀಪದಲ್ಲೇ ತೊರೆಯೊಂದು ಹರಿಯುತ್ತಿರುವುದರಿಂದ ಎಲ್ಲರೂ ಈ ಜಾಗವನ್ನು ಬಹಳ ಇಷ್ಟಪಟ್ಟರು.


೧೪ನೇ ತಾರೀಕಿನಂದು ಮಾವಿನಕಾರು-ಬಾವುಡಿ-ಮೇಲ್ಬಾವುಡಿ-ತೀರ್ಥಬರೆ ಜಲಧಾರೆ-ಮೇಗಣಿ ಚಾರಣ ಆರಂಭವಾಗುವ ಮೊದಲು ನಮ್ಮ ಲೀಡರ್ ಪ್ರೊಫೆಸರ್ ಕೆ.ಎಸ್. ಅಡಿಗರು ಚಾರಣಿಗರಿಗೆ ಸೂಚನೆಗಳನ್ನು ನೀಡುತ್ತಿರುವುದು.


ವಲಯ ಅರಣ್ಯಾಧಿಕಾರಿಗಳು ಚಾರಣಿಗರನ್ನು ಉದ್ದೇಶಿಸಿ ಒಂದೆರಡು ಮಾತುಗಳನ್ನಾಡುತ್ತಿದ್ದಾರೆ.


ವಲಯ ಅರಣ್ಯಾಧಿಕಾರಿಗಳು ರಾಜ್ಯ ಮಟ್ಟದ ಚಾರಣಕ್ಕೆ ಹಸಿರು ನಿಶಾನೆ ತೋರಿಸುತ್ತಿದ್ದಾರೆ. ಎಲ್ಲಾ ಚಾರಣಿಗರಿಗಿಂತ ಮುಂದೆ ನಮ್ಮ ಸುಹಾಸ್ ಕಿಣಿಯವರಿದ್ದರೆ, ಎಲ್ಲರಿಗಿಂತ ಹಿಂದೆ ವಿವೇಕ್ ಕಿಣಿಯವರಿದ್ದರು. ಇವರಿಬ್ಬರ ನಡುವೆಯೇ ಎಲ್ಲಾ ೬೪ ಚಾರಣಿಗರು ಇರಬೇಕೆಂದು ಸೂಚಿಸಲಾಗಿತ್ತು.


ಮೇಗಣಿಯಲ್ಲಿ ಅಡುಗೆಯ ಸ್ಥಳ. ಒಂಟಿ ಗೇರು ಮರವೊಂದರ ಕೆಳಗೆ.

ಮೇಗಣಿ ಕ್ಯಾಂಪ್ ಸೈಟ್

ಮುಸ್ಸಂಜೆಯ ಸಮಯದಲ್ಲಿ ಮೇಗಣಿ ಕ್ಯಾಂಪ್ ಸೈಟ್

ಮೇಗಣಿ ಕ್ಯಾಂಪ್ ಸೈಟ್! ಚಿತ್ರದ ಬಲದಲ್ಲಿರುವ ಶಿಖರವೇ ದೇವಕುಂದ!

ಮೇಗಣಿಯಲ್ಲಿ ಮುಂಜಾನೆ ಉಪಹಾರದ ಸಮಯ

೧೫ನೇ ತಾರೀಕು ಮೇಗಣಿ - ಕುನ್ನಿಕಟ್ಟೆ - ದೇವಕುಂದ - ಹದ್ದುಬರೆ - ಗಾಳಿಗುಡ್ಡ - ಮೇಗಣಿ ಚಾರಣಕ್ಕೆ ಎಲ್ಲರೂ ರೆಡಿ

ಮುಸ್ಸಂಜೆ ಮೋಡಗಳ ಚಿತ್ತಾರ

೧೫ನೇ ತಾರೀಕು ರಾತ್ರಿ ಕ್ಯಾಂಪ್ ಬೆಂಕಿ!

ಆಯೋಜಕರು

ರಾತ್ರಿ ವೇಳೆ ಮೇಗಣಿ ಕ್ಯಾಂಪ್ ಸ್ಥಳದ ನೋಟ

೧೬ನೇ ತಾರೀಕು ಮುಂಜಾನೆ ಮೇಗಣಿ ಕ್ಯಾಂಪ್ ಸ್ಥಳದ ರಮಣೀಯ ನೋಟ

ಗಗನದ ಚೆಲುವು

ಮೇಗಣಿ!

೧೬ನೇ ತಾರೀಕು ಮೇಗಣಿ-ಹುಲ್ಕಡಿಕೆ ಚಾರಣದ ಆರಂಭ

ಹುಲ್ಕಡಿಕೆಯ ದಾರಿಯಲ್ಲಿ

೩ ದಿನಗಳ ಚಾರಣದ ಬಳಿಕ ದಣಿದ ಚಾರಣಿಗರು ಹುಲ್ಕಡಿಕೆಯ ದೇವಾಲಯದಲ್ಲಿ ಬೀಳ್ಕೊಡುಗೆ ಸಮಾರಂಭದಲ್ಲಿ...

ಗುರುದತ್ ತೆಗೆದಿರುವ ಎಲ್ಲಾ ಚಿತ್ರಗಳನ್ನು ಇಲ್ಲಿಂದ ಡೌನ್-ಲೋಡ್ ಮಾಡಿಕೊಳ್ಳಬಹುದು.

ಸೋಮವಾರ, ನವೆಂಬರ್ 17, 2008

ಪ್ರಕೃತಿ ದೇವತೆ ದೇವಕುಂದ


೧೬ ಅಕ್ಟೋಬರ್ ೨೦೦೮.

ಮೇಗಣಿಯಿಂದ ದೂರದಲ್ಲಿ ತಲೆಯೆತ್ತಿ ನಿಂತಿರುವ ಬೆಟ್ಟವೊಂದು ಗೋಚರಿಸುತ್ತದೆ. ಇದೇ ದೇವಕುಂದ. ಈ ಶ್ರೇಣಿಯ ಬೆಟ್ಟಗಳಲ್ಲಿ ಎತ್ತರದಲ್ಲಿ ಕೊಡಚಾದ್ರಿಯ ನಂತರದ ಸ್ಥಾನ ಇದಕ್ಕೆ. ಮುಂಜಾನೆ ಬಿಸಿಲೇರುವ ಮೊದಲೇ ದೇವಕುಂದದ ತುದಿಯಲ್ಲಿರಬೇಕು ಎಂಬ ಪ್ಲ್ಯಾನ್ ಹಾಕಿ ಮುನ್ನಾ ದಿನವೇ ಮೇಗಣಿ ತಲುಪಿ ಪ್ರಶಸ್ತ ಸ್ಥಳವನ್ನು ಆಯ್ಕೆ ಮಾಡಿ ಡೇರೆ ಹಾಕಿದೆವು. ನಾವು ಡೇರೆ ಹಾಕಿದ ಸ್ಥಳವಂತೂ ಅದ್ಭುತವಾಗಿತ್ತು. ಒಂದೆಡೆ ಕೊಡಚಾದ್ರಿಯ ರಮಣೀಯ ನೋಟ. ವಿರುದ್ಧ ದಿಕ್ಕಿನಲ್ಲಿ ಕೈ ಬೀಸಿ ಕರೆಯುತ್ತಿದ್ದ ದೇವಕುಂದ. ಇನ್ನೊಂದೆಡೆ ಬಹಳ ಉದ್ದದವರೆಗೂ ಚಾಚಿ ನಿಂತಿರುವ ಹುಲ್ಲುಮಡಿ ಬೆಟ್ಟ ಮತ್ತು ಮಗದೊಂದೆಡೆ ಕುನ್ನಿಕಟ್ಟೆ ಬೆಟ್ಟ. ಪ್ರಕೃತಿಯ ಅಪೂರ್ವ ನೋಟ.


ಅಂದು ಆ ಚಾರಣಕ್ಕೆ ನಾವು ನಾಲ್ವರೇ ಹೊರಟಿದ್ದೆವು. ಅಡಿಗ ಸಾರ್ ನಮ್ಮ ಲೀಡರ್. ಹುಣ್ಣಿಮೆ ಚಂದ್ರನ ಬೆಳಕಿನಲ್ಲಿ ರಾಗಣ್ಣ ಮತ್ತು ಮಾಧವರ ಸಹಾಯದಿಂದ ಅಡಿಗರು ಟೆಂಟನ್ನು ಹಾಕಿದರು. ನಂತರ ಕೂಡಲೇ ಅಡಿಗರು ಅಡಿಗೆ ಮಾಡಲು ಆರಂಭಿಸಿದರು. ನಾವು ಅವರಿಗೆ ಸಣ್ಣ ಪುಟ್ಟ ಸಹಾಯವನ್ನಷ್ಟೇ ಮಾಡುತ್ತಿದ್ದೆವು. ಸ್ವಲ್ಪ ಹೊತ್ತಿನಲ್ಲೇ ಊಟ ರೆಡಿ. ಅಡಿಗರ ಕೈ ರುಚಿಯೇ ಸೂಪರ್. ಆ ಹುಣ್ಣಿಮೆ ರಾತ್ರಿಯಲ್ಲಿ, ಡೇರೆ ಹೊರಗೆ ತಣ್ಣಗೆ ಗಾಳಿಯಲ್ಲಿ ಕುಳಿತು, ಬೆಳದಿಂಗಳ ರಾತ್ರಿಯಲ್ಲಿ ಮಿನುಗುತ್ತಿದ್ದ ಕೊಡಾಚಾದ್ರಿ ಮತ್ತು ದೇವಕುಂದಗಳ ಮನತಣಿಯುವ ನೋಟವನ್ನು ಆನಂದಿಸುತ್ತಾ, ಬಾಳೆ ಎಲೆ ಊಟ ಮಾಡುವಾಗ ಅನುಭವಿಸಿದ ಪರಮಾನಂದ ಇನ್ನೆಲ್ಲಾದರೂ ಸಿಗಬಹುದೇ.


ಎಂಟು ಮಂದಿ ಮಲಗಬಹುದಾದ ಡೇರೆಯೊಳಗೆ ನಾವು ನಾಲ್ವರೇ ಆರಾಮವಾಗಿ ಬಿದ್ದುಕೊಂಡೆವು. ನನಗಂತೂ ಎಲ್ಲೇ ಮಲಗಿದರೂ, ಎಷ್ಟೇ ಗಲಾಟೆಯಿದ್ದರೂ ನಿದ್ದೆ ಬೀಳುತ್ತದೆ. ಹೀಗಿರುವಾಗ ರಭಸವಾದ ಗಾಳಿ ಬೀಸಿ ರಾತ್ರಿ ಸುಮಾರು ೧೨ ಗಂಟೆಗೆ ಡೇರೆಯ ಹುಕ್-ಗಳು ಹಾರಿಹೋಗಿದ್ದವು. ಉಳಿದ ಮೂವ್ವರು ಅದನ್ನು ಸರಿಪಡಿಸಿ ಮಲಗಿದ್ದರು. ನನಗದು ಗೊತ್ತೇ ಆಗಲಿಲ್ಲ. ಆ ಪರಿಯ ಸುಖ ನಿದ್ರೆಯಲ್ಲಿದ್ದೆ ನಾನು. ಆದರೆ ಬೆಳಗ್ಗಿನ ಜಾವ ೩ ಗಂಟೆಗೆ ತಲೆಗೆ ಏನೋ ತಾಗುತ್ತಿರುವಂತೆ ಭಾಸವಾದಾಗ ಎಚ್ಚರವಾಯಿತು. ಗಾಳಿಯ ರಭಸಕ್ಕೆ ಡೇರೆಯ ಅಧಾರಕ್ಕಿರುವ ಸಣ್ಣ ರಾಡುಗಳು ಸಂಪೂರ್ಣವಾಗಿ ಬಗ್ಗಿ ತಲೆಗೆ ತಾಗುತ್ತಿದ್ದವು. ಆದರೂ ಹಾಗೇ ಮಲಗಿಕೊಂಡೆ. ಅಡಿಗ ಸಾರ್ ಮತ್ತು ಮಾಧವ ಮತ್ತೆ ಹೊರನಡೆದು ಎಲ್ಲವನ್ನು ಸರಿಪಡಿಸಿ ಬಂದರು. ಮೇರುತಿ ಪರ್ವತದಲ್ಲೂ ಇದೇ ರೀತಿ ಗಾಳಿ ಬೀಸುತ್ತಿತ್ತು. ಆದರೆ ಮೇರುತಿ ಪರ್ವತದಲ್ಲಿ ನಾವು ಇದೇ ಡೇರೆಯೊಳಗೆ ೧೦ ಜನರು ಮಲಗಿದ್ದರೆ ಇಲ್ಲಿ ನಾಲ್ಕೇ ಮಂದಿ! ಪ್ರಕೃತಿಯ ಮಡಿಲಲ್ಲಿ ಈ ಹುಣ್ಣಿಮೆ ರಾತ್ರಿಯನ್ನು ಮನಸಾರೆ ಆನಂದಿಸಿದೆವು.


ಮುಂಜಾನೆ ೮ಕ್ಕೇ ದೇವಕುಂದದ ದಾರಿ ತುಳಿದೆವು. ಮೇಗಣಿ ಹಳ್ಳಿಯ ಕೊನೆಗಿರುವ ಹಳ್ಳವೊಂದನ್ನು ದಾಟಿ ಸ್ವಲ್ಪ ದೂರ ನಡೆದರೆ ಕಾಡು ಆರಂಭ. ಸುಮಾರು ಅರ್ಧ ಗಂಟೆ ಕಾಡಿನಲ್ಲಿ ಚಾರಣ. ನಂತರದ ಚಾರಣವೆಲ್ಲಾ ಖುಲ್ಲಾ ಜಾಗದಲ್ಲಿ. ಎಲ್ಲೆಡೆ ಪ್ರಕೃತಿಯ ಅಭೂತಪೂರ್ವ ವಿನ್ಯಾಸಗಳು. ಕೊಡಾಚಾದ್ರಿಯಂತೂ ತಾನೇ ಕಿಂಗು ಎಂದು ಭಾರೀ ಪೋಸು ನೀಡುತ್ತಲೇ ಇತ್ತು. ಮೊಣಕಾಲಿನಷ್ಟು ಎತ್ತರಕ್ಕೆ ಬೆಳೆದು ನಿಂತಿದ್ದ ಹುಲ್ಲಿನ ನಡುವೆ ದಾರಿ ಮಾಡಿಕೊಂಡು ಗಾಳಿಗುಡ್ಡ ಸಮೀಪಿಸಿದೆವು. ಗಾಳಿಗುಡ್ಡದ ತುದಿ ತಲುಪಬೇಕಾದರೆ ಒಂದೈದು ನಿಮಿಷದ ಕಠಿಣ ಏರುಹಾದಿ. ಹುಲ್ಲನ್ನೇ ಆಧಾರವಾಗಿಟ್ಟುಕೊಂಡು ಮೇಲೇರಬೇಕು. ಗಾಳಿಗುಡ್ಡದ ಮೇಲೆ ರಭಸವಾಗಿ ಗಾಳಿ ಬೀಸುವುದರಿಂದ ಹಾಗೆ ಹೆಸರು. ಮುಂದೆ ಹದ್ದುಬರೆಯ ಪೂರ್ಣ ನೋಟ ಮತ್ತು ಅದರಾಚೆಗೆ ದೇವಕುಂದದ ತ್ರಿಕೋಣ ತುದಿ ಮಾತ್ರ ಗೋಚರಿಸುತ್ತಿತ್ತು. ಎಡಕ್ಕೆ ಉದ್ದಕ್ಕೂ ಚಾಚಿ ನಿಂತಿರುವ ಹುಲ್ಲುಮಡಿ. ಹಿಂದೆ ದೂರದಲ್ಲಿ ಕೊಡಚಾದ್ರಿ ಮತ್ತು ಸಮೀಪದಲ್ಲಿ ಕುನ್ನಿಕಟ್ಟೆ.


ಗಾಳಿಗುಡ್ಡದಿಂದ ಹದ್ದುಬರೆಗೆ ಹೋಗುವ ದಾರಿ ಈಚಲು ಮರಗಳಿಂದ ಕೂಡಿದೆ. ಇವುಗಳ ನಡುವೆ ದಾರಿಮಾಡಿಕೊಂಡು ಸಾಗುವುದೇ ಸುಂದರ ಅನುಭವ. ಇಲ್ಲಿ ಚಾರಣಕ್ಕೆಂದು ಬಂದವರಲ್ಲಿ ನಾವೇ ಪ್ರಥಮ ಎಂದು ಒಂಥರಾ ರೋಮಾಂಚನ. ಈಚಲು ಮರಗಳ ಈ ತೋಪು ಏರು ಹಾದಿಯಿಂದ ಕೂಡಿದೆ. ಅಲ್ಲಲ್ಲಿ ನಿಂತು ಅದ್ಭುತವಾದ ನೋಟವನ್ನು ಆನಂದಿಸುತ್ತಾ ಹದ್ದುಬರೆ ತಲುಪಿದೆವು. ಹದ್ದುಬರೆಯಿಂದ ಗಾಳಿಗುಡ್ಡದ ತುದಿಯಲ್ಲಿ ನಾವು ವಿಶ್ರಮಿಸಿದ ಬಂಡೆಯು ಸ್ಪಷ್ಟವಾಗಿ ಕಾಣುತ್ತಿತ್ತು. ಹದ್ದುಬರೆಯ ತುದಿಯಲ್ಲಿ ನಿಂತರೆ ಕಣಿವೆ. ಅಲ್ಲೇ ಸಮೀಪದಲ್ಲಿ ನೀರಿನ ಸೆಲೆಯೊಂದಿತ್ತು!!! ಬಂಡೆಗಳ ನಡುವಿನಲ್ಲಿ ಅಲ್ಪ ಪ್ರಮಾಣದಲ್ಲಿ ನೀರು ಜಿನುಗಿ ಕಣಿವೆಯ ಆಳಕ್ಕೆ ಹರಿಯುತ್ತಿತ್ತು.


ಹದ್ದುಬರೆಯ ಎಡಕ್ಕೆ ರಾಮರಕ್ಕಿ ಎಂಬ ಬೆಟ್ಟ. ಇದು ಸ್ವಲ್ಪ ಕೆಳಮಟ್ಟದಲ್ಲಿದ್ದು ಹುಲ್ಲುಮಡಿಯ ಅಗಾಧ ಗಾತ್ರದ ಮುಂದೆ ಕುಬ್ಜವಾಗಿ ಕಾಣುತ್ತದೆ. ಹದ್ದುಬರೆ ಮತ್ತು ದೇವಕುಂದವನ್ನು ಬೇರ್ಪಡಿಸುವ ಮಳೆಕಾಡಿನ ಅಂಚಿನಲ್ಲೇ ಸಾಗಿದೆವು. ಹೀಗೆ ಸುಮಾರು ೨೦ ನಿಮಿಷದ ಚಾರಣ ಕಾಡಿನ ಬದಿಯಿಂದಲೇ ಸಾಗಿತ್ತದೆ. ಹದ್ದುಬರೆಯಲ್ಲೇ ಕಾಡನ್ನು ಹೊಕ್ಕಿ ಮತ್ತೊಂದು ಬದಿಯಿಂದ ಹೊರಬಂದು ನೇರವಾಗಿ ದೇವಕುಂದವನ್ನೇರಬಹುದು.


ಆದರೆ ಪ್ರಕೃತಿಯ ನೋಟವನ್ನು ಆನಂದಿಸಬೇಕಾದರೆ ಮಳೆಕಾಡಿನ ಅಂಚಿನಲ್ಲೇ ಸಾಗಿ, ಮಳೆಕಾಡಿನ ಅಗಲ ಕಿರಿದಾಗಿರುವಲ್ಲಿ ಒಳ ಹೊಕ್ಕಬೇಕು. ನಾವೂ ಹಾಗೇ ಮಾಡಿದೆವು. ಎಡಕ್ಕೆ ಹುಲ್ಲುಮಡಿ ಹಾಗೂ ರಾಮರಕ್ಕಿ, ಬಲಕ್ಕೆ ಎತ್ತರದಲ್ಲಿ ದೇವಕುಂದ ಮತ್ತು ಹಿಂದೆ ಕೊಡಚಾದ್ರಿ ಹಾಗೂ ಕುನ್ನಿಕಟ್ಟೆ. ಈ ನೋಟವನ್ನು ಆನಂದಿಸುತ್ತಾ ಮುಂದೆ ಸಾಗಿ ಮಳೆಕಾಡಿನ ಅಗಲ ಕಿರಿದಾಗಿರುವಲ್ಲಿ ಕಾಡಿನೊಳಗೆ ಹೊಕ್ಕರೆ ಅಲ್ಲೊಂದು ಆಘಾತಕಾರಿ ದೃಶ್ಯ.


ನಾಲ್ಕು ಸಣ್ಣ ಮರಗಳನ್ನು ಕಡಿದು ಅವನ್ನು ಚೌಕಾಕಾರದ ನಾಲ್ಕು ತುದಿಯಲ್ಲಿ ಆಧಾರವಾಗಿ ನೆಲದಲ್ಲಿ ಊರಲಾಗಿತ್ತು. ಮೇಲಿನಿಂದ ಉದ್ದಕ್ಕೂ ಅಗಲಕ್ಕೂ ಚಪ್ಪರದಂತೆ ಮತ್ತಷ್ಟು ರೆಂಬೆ ಕೊಂಬೆಗಳನ್ನು ಹಾಕಲಾಗಿತ್ತು. ಕೆಳಗಡೆ ಬೆಂಕಿಯನ್ನು ಮಾಡಿದ ಕುರುಹುಗಳು. ಸ್ವಲ್ಪ ಕೂಲಂಕೂಷವಾಗಿ ಅಲ್ಲಿದ್ದ ಬೂದಿಯನ್ನು ಪರಿಶೀಲಿಸಿದಾಗ ಕಾಡುಕೋಣದ ಕೊಂಬುಗಳು ಸಿಕ್ಕವು. ಕಾಡುಪ್ರಾಣಿಯನ್ನು ಕೊಂದು, ಚರ್ಮವನ್ನು ಸುಲಿದು ಇಲ್ಲೇ ಹದವಾಗಿಸುವ ವ್ಯವಸ್ಥೆ. ಚರ್ಮವನ್ನೂ ಮಾಂಸವನ್ನೂ ಬೇರ್ಪಡಿಸುವ ಸುವ್ಯವಸ್ಥೆ! ಇದನ್ನು ನಾವು ನಿರೀಕ್ಷಿಸಿರಲಿಲ್ಲ.


ಐದೇ ನಿಮಿಷದಲ್ಲಿ ಮಳೆಕಾಡಿನಿಂದ ಹೊರಬಂದೆವು. ಮುಂದೆನೇ ದೇವಕುಂದ. ನಿಧಾನವಾಗಿ ಮೇಲೇರತೊಡಗಿದೆವು. ದೇವಕುಂದದ ಕೊನೆಯ ೨೦ ನಿಮಿಷದ ಚಾರಣ ಏರುಹಾದಿ. ಮೇಲೇರುತ್ತಾ ಹೋದಂತೆ ಹುಲ್ಲುಮಡಿ, ರಾಮರಕ್ಕಿ, ಹದ್ದುಬರೆ, ಕುನ್ನಿಕಟ್ಟೆ, ಗಾಳಿಗುಡ್ಡ ಎಲ್ಲವೂ ಸಣ್ಣದಾಗತೊಡಗಿದವು. ಸುಮಾರು ೩ ತಾಸಿನ ಚಾರಣದ ಬಳಿಕ ೧೧ ಗಂಟೆಗೆ ದೇವಕುಂದದ ತುದಿ ತಲುಪಿದೆವು. ಈಗ ದೇವಕುಂದದ ಇನ್ನೊಂದು ಬದಿಯ ಅದ್ಭುತ ನೋಟವನ್ನು ಆನಂದಿಸುವ ಭಾಗ್ಯ. ದೂರದಲ್ಲಿತ್ತು ಅಂಬಾರಗುಡ್ಡ. ಸಮೀಪದಲ್ಲಿತ್ತು ಕುನ್ನಿಕಟ್ಟೆ. ಇವೆರಡರ ನಡುವೆ ’ಕಡವೆ ಮೆಟ್ಟಿದ ಕಲ್ಲು’ ಎಂಬ ಹೆಸರಿನ ಬೆಟ್ಟ. ಅಂಬಾರಗುಡ್ಡದಾಚೆಗೆ ಬಹಳ ದೂರದಲ್ಲಿ ಲಿಂಗನಮಕ್ಕಿ ಹಿನ್ನೀರಿನ ದೃಶ್ಯ.


ದೇವಕುಂದದ ತುದಿಯಲ್ಲಿ ಅರ್ಧ ಗಂಟೆ ಸಂತಸಮಯ ಸಮಯವನ್ನು ಕಳೆದೆವು. ಕೆಳಗಿಳಿಯುವಾಗ ಬೇರೆ ದಾರಿಯಲ್ಲಿ ಬಂದೆವು. ಬೆಟ್ಟವನ್ನು ನೇರವಾಗಿ ಇಳಿಯತೊಡಗಿದರಿಂದ ಸ್ವಲ್ಪ ಬೇಗನೇ ಬಂದೆವು. ದೇವಕುಂದದಿಂದ ಸ್ವಲ್ಪ ಕೆಳಗಿರುವ ಮಳೆಕಾಡಿನಲ್ಲಿ ಯಾವಾಗಲೂ ನೀರು ಹರಿಯುತ್ತಿರುತ್ತದೆ. ಇಲ್ಲಿ ಊಟ. ಅಡಿಗರು ಒಂದಷ್ಟು ಚಪಾತಿ, ಸೂಪರ್ ಚಟ್ಣಿ, ತುಪ್ಪ ಮತ್ತು ಬೆಲ್ಲ ಇವಿಷ್ಟನ್ನು ಮನೆಯಿಂದಲೇ ತಂದಿದ್ದರು. ಚಾರಣದಲ್ಲಿ ಅಡಿಗರಿದ್ದಾಗ ಹೊಟ್ಟೆಗೆ ತೊಂದರೆಯಿರುವುದಿಲ್ಲ. ಚಪಾತಿಯ ಮೇಲೆ ಬೆಲ್ಲ ಮತ್ತು ತುಪ್ಪ ಸುರಿದು ’ರೋಲ್’ ಮಾಡಿ ತಿನ್ನತೊಡಗಿದಾಗ ಆಯಾಸವೆಲ್ಲಾ ಮಾಯವಾದ ಅನುಭವ. ನಂತರ ಚಪಾತಿ ಮತ್ತು ಚಟ್ಣಿಯ ಕಾಂಬಿನೇಷನ್. ಚಾರಣದ ಮುನ್ನಾ ದಿನ, ’ಫುಡ್ ಎಲ್ಲಾ ನಾನು ನೋಡಿಕೊಳ್ಳುತ್ತೇನೆ. ನೀವೇನೂ ತರುವುದು ಬೇಡ’ ಎಂದು ಫೋನಾಯಿಸುವ ಅಡಿಗರೇ, ನಿಮಗೆ ಸಾಷ್ಟಾಂಗ ನಮಸ್ಕಾರ.

ನಮಗರಿವಿಲ್ಲದಂತೆ ನಾವು ಹದ್ದುಬರೆಯನ್ನು ದಾಟಿ ಬಂದುಬಿಟ್ಟಿದ್ದೆವು. ನೇರವಾಗಿ ಕೆಳಗಿಳಿದಿದ್ದರಿಂದ ದೇವಕುಂದದ ಬಳಿಕ ಹದ್ದುಬರೆಯ ಕೆಳಗೆ ಅದರ ಪಾರ್ಶ್ವದಲ್ಲೇ ಇಳಿದುಬಿಟ್ಟಿದ್ದೆವು! ಗಾಳಿಗುಡ್ಡದ ಮೇಲೆ ಸ್ವಲ್ಪ ವಿಶ್ರಮಿಸಿ ನಂತರ ಸೀದಾ ಮೇಗಣಿಯ ಹಾದಿ ತುಳಿದೆವು. ನಾನು ತುಂಬಾ ಎಂಜಾಯ್ ಮಾಡಿದ ಟ್ರೆಕ್ ಇದು.

ಶನಿವಾರ, ನವೆಂಬರ್ 08, 2008

ಕಾನೂರು ಕೋಟೆ


ಜನವರಿ ೨೮, ೨೦೦೬ ರಂದು ಬಿಳಿಗಾರು ತಲುಪಿದಾಗ ಸಂಜೆ ೭ರ ಸಮಯ. ಅಲ್ಲಿ ಅನಿಲನ ಬಗ್ಗೆ ವಿಚಾರಿಸಿದರೆ ಶಾಲೆ ಕಡೆ ಹೋಗಿದ್ದಾನೆ ಎಂದು ತಿಳಿಯಿತು. ಆ ದಿನ ಬಿಳಿಗಾರಿನ ಶಾಲೆಯ ವಾರ್ಷಿಕೋತ್ಸವ. ಶಾಲೆಯ ವಾರ್ಷಿಕೋತ್ಸವದಲ್ಲಿ ಅನಿಲನದ್ದು ಏಕಪಾತ್ರಾಭಿನಯದ ಕಾರ್ಯಕ್ರಮವಿತ್ತು. ಸ್ವಲ್ಪ ಹೊತ್ತಿನಲ್ಲಿ ಅನಿಲ್ ಹಾಜರಾದ. ’ವಾರ್ಷಿಕೋತ್ಸವ ಇದೆ. ಇವತ್ತು ನನ್ನ ಮನೆಯಲ್ಲೇ ಉಳಿದುಕೊಳ್ಳುವಿರಂತೆ. ನಾಳೆ ಬೆಳಗ್ಗೆ ಕೋಟೆಗೆ ಹೋಗೋಣವೇ’ ಎಂದು ಅನಿಲ್ ಕೇಳಿದಾಗ, ಸಮ್ಮತಿಸದೆ ಬೇರೆ ವಿಧಾನವಿರಲಿಲ್ಲ. ನಂತರ ವಾರ್ಷಿಕೋತ್ಸವದ ಕಾರ್ಯಕ್ರಮಗಳನ್ನು ನೋಡೋಣವೆಂದು ಶಾಲೆಯತ್ತ ತೆರಳಿದೆ.

ಅನಿಲ್ ಕಾನೂರಿನ ಹುಡುಗ. ಬಿಳಿಗಾರಿನಲ್ಲಿ ಒಂದು ಕೋಣೆಯ ಮನೆಯಲ್ಲಿದ್ದುಕೊಂಡು ಶಾಲೆಗೆ ಹೋಗುತ್ತಿದ್ದ. ಜುಲಾಯಿ ೨೦೦೫ರ ಒಂದು ರವಿವಾರ ಯಾವುದೇ ಚಾರಣ ಕಾರ್ಯಕ್ರಮವಿರದಿದ್ದಾಗ ನಾಗೋಡಿ ಘಟ್ಟವನ್ನೇರಿ, ಕೋಗಾರು ಘಟ್ಟವನ್ನಿಳಿದು ಬರೋಣವೆಂದು ತೆರಳಿದಾಗ, ಕಾನೂರು ಕೋಟೆಗೆ ಹೋಗುವ ಬಗ್ಗೆ ದಾರಿ ತಿಳಿಯುವ ಸಲುವಾಗಿ ಬಿಳಿಗಾರಿಗೆ ತೆರಳಿದ್ದೆ. ಆಗ ಅನಿಲನ ಪರಿಚಯವಾಗಿ, ’ಮಳೆ ನಂತರ ಬನ್ನಿ. ಇದೇ ನನ್ನ ರೂಮು. ನಾನಿಲ್ಲೇ ಇರೋದು. ಕಾನೂರು ಕೋಟೆ ತೋರಿಸ್ತೇನೆ’ ಎಂದಿದ್ದ. ಆ ಭೇಟಿಯ ೬ ತಿಂಗಳ ಬಳಿಕ ಈಗ ಅನಿಲನನ್ನು ಹುಡುಕಿಕೊಂಡು ಬಂದಿದ್ದೆ.

ಶಾಲೆಯಲ್ಲಿ ಕಾರ್ಯಕ್ರಮಗಳು ಜೋರಾಗಿಯೇ ನಡೆದಿದ್ದವು. ಹಿಂದೆ ನಿಂತುಕೊಂಡು ಕಾರ್ಯಕ್ರಮಗಳನ್ನು ನೋಡತೊಡಗಿದೆ. ನಾನು ’ಹೊರಗಿನವನು’ ಎಂದು ಅಲ್ಲಿದ್ದವರಿಗೆ ಸುಲಭದಲ್ಲಿ ಗೊತ್ತಾಗುತ್ತಿತ್ತು. ಒಂದಿಬ್ಬರು ಬಂದು ’ಯಾವೂರು?’, ’ಗವರ್ನಮೆಂಟಾ?’ ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿದರು. ಆಗ ಬಂದು ಮುಂದಕ್ಕೆ ಕರೆದೊಯ್ದ ಅನಿಲ್, ತನ್ನ ಉಪಾಧ್ಯಾಯರ ಪರಿಚಯ ಮಾಡಿಸಿದ. ಅವರಲ್ಲೊಬ್ಬರು ಹೊನ್ನಾವರದವರೇ ಆಗಿದ್ದರಿಂದ ಪರಿಚಯ ಸುಲಭವಾಗಿ ಆಯಿತು. ಕಾರ್ಯಕ್ರಮಗಳ ನಿರ್ವಾಹಕರೂ ಇವರೇ ಆಗಿದ್ದರು. ಸ್ವಲ್ಪ ಹೊತ್ತಿನ ಬಳಿಕ ಇವರು ಅನಿರೀಕ್ಷಿತವಾಗಿ, ’ಇವರು ರಾಜೇಶ್ ನಾಯ್ಕ. ದೂರದ ಉಡುಪಿಯಿಂದ ನಮ್ಮ ಊರಿಗೆ ಕಾನೂರು ಕೋಟೆ ನೋಡಲು ಆಗಮಿಸಿದ್ದಾರೆ. ಎಲ್ಲರ ಪರವಾಗಿ ಇವರಿಗೆ ನಮ್ಮ ಊರಿಗೆ ಸ್ವಾಗತ...’ ಎಂದು ಧ್ವನಿವರ್ಧಕದಲ್ಲಿ ಅನೌನ್ಸ್ ಮಾಡಿ ನನ್ನನ್ನು ತೀರಾ ಮುಜುಗರಕ್ಕೊಳಪಡಿಸಿದರು. ಅಲ್ಲೇ ಮುಂದಿನ ಸಾಲಿನಲ್ಲಿ ನನಗಾಗಿ ಕುರ್ಚಿಯೊಂದನ್ನು ಹಾಕಿಸಿದರು. ಸ್ವಲ್ಪ ಹೊತ್ತಿನ ಬಳಿಕ ಯಾರೋ ಬೆನ್ನ ಹಿಂದೆ ’ರಾಜೇಶ್..’ ಎಂದಾಗ ಹಿಂತಿರುಗಿ ನೋಡಿದರೆ ಗೋದಾವರಿಯವರು!

ದಬ್ಬೆ ಜಲಧಾರೆಗೆ ತೆರಳುವಾಗ ಹೊಸಗದ್ದೆಯಲ್ಲಿ ನಾಗರಾಜ್ ಎಂಬವರ ಮನೆ ಸಿಗುತ್ತದೆ. ಒಂದೆರಡು ಬಾರಿ ತೆರಳಿದ್ದರಿಂದ ಇವರ ಮನೆಯವರ ಪರಿಚಯ ನನಗಿತ್ತು. ಈ ನಾಗರಾಜರ ಮಗಳೇ ಗೋದಾವರಿ. ಇವರ ಮಗ ಇದೇ ಬಿಳಿಗಾರು ಶಾಲೆಯಲ್ಲಿ ಓದುತ್ತಿದ್ದು, ಆತನದ್ದೂ ಒಂದು ಸಣ್ಣ ಕಾರ್ಯಕ್ರಮವಿತ್ತು. ನನ್ನ ಹೆಸರನ್ನು ಅನೌನ್ಸ್ ಮಾಡಿದಾಗ ಹುಡುಕಿಕೊಂಡು ಬಂದು ಮಾತನಾಡಿಸಿದರು. ಬಳಿಕ ಮನೆಗೆ ಬರುವಂತೆ ಒತ್ತಾಯ ಮಾಡತೊಡಗಿದಾಗ, ಅನಿಲನಿಗೆ ಮುಂಜಾನೆ ೭ಕ್ಕೆ ಬರುವೆನೆಂದು ತಿಳಿಸಿ ಹೊಸಗದ್ದೆಯತ್ತ ಹೊರಟೆ. ಆ ದಿನ ರಾತ್ರಿ ಅನುಭವಿಸಿದಷ್ಟು ಚಳಿಯನ್ನು ಎಂದಿಗೂ ಅನುಭವಿಸಿರಲಿಲ್ಲ. ಎರಡು ದಪ್ಪನೆಯ ರಗ್ಗುಗಳನ್ನು ಹೊದ್ದು ಮಲಗಿದರೂ ಚಳಿ ತಡೆದುಕೊಳ್ಳಲಾಗುತ್ತಿರಲಿಲ್ಲ. ನಾನು ಗಡಗಡ ನಡುಗುವುದನ್ನು ನೋಡಿ ನಾಗರಾಜರ ಅಳಿಯ ಚಂದ್ರಶೇಖರ್ ಮತ್ತೊಂದು ರಗ್ಗನ್ನು ’ರಾತ್ರಿ ಚಳಿ ಜೋರಾದರೆ ಬೇಕಾಗಬಹುದು....’ ಎಂದು ನೀಡಿದರು.


ಮುಂಜಾನೆ ೭ಕ್ಕೆ ಬಿಳಿಗಾರಿನಲ್ಲಿ ಅನಿಲ ತಯಾರಾಗಿದ್ದ. ಕಾನೂರಿನಿಂದ ಮುಂದೆ ಕೋಟೆಯವರೆಗಿನ ೮ ಕಿಮಿ ರಸ್ತೆ ಹೆಚ್ಚಿನ ಕಡೆ ತರಗೆಲೆಗಳಿಂದ ಮುಚ್ಚಿಹೋಗಿದೆ. ಹೆಚ್ಚಿನೆಡೆ ರಸ್ತೆ ಕಾಡಿನಿಂದ ಆವೃತವಾಗಿದ್ದು ಕತ್ತಲೆಯ ಕೂಪದಂತಿದೆ. ಕೆಲವೊಂದೆಡೆ ಸಮತಟ್ಟಾದ ರಸ್ತೆಯಲ್ಲಿ ಸಲೀಸಾಗಿ ಸಾಗಬಹುದಾದರೆ ಇನ್ನು ಕೆಲವೆಡೆ ಮೈಯೆಲ್ಲಾ ಕಣ್ಣಾಗಿ ಸಾಗಬೇಕಾಗುತ್ತದೆ. ಕೆಲವೊಂದೆಡೆ ಭಾರಿ ಇಳಿಜಾರಾದರೆ ಮತ್ತೊಂದೆಡೆ ಕಡಿದಾದ ಏರು. ಯಮಾಹಾವಾಗಿದ್ದರಿಂದ ನಮ್ಮಿಬ್ಬರನ್ನೂ ಕೂರಿಸಿ ಸಲೀಸಾಗಿ ಮೇಲೇರಿತು. ಆದರೂ ಅಲ್ಲಲ್ಲಿ, ತರಗೆಲೆಗಳು ಯಾವ ಪರಿ ರಸ್ತೆಯನ್ನು ಮುಚ್ಚಿದ್ದವೆಂದರೆ ಬೈಕಿನ ಗಾಲಿಗಳು ಅವುಗಳಲ್ಲೇ ಹೂತುಹೋಗುತ್ತಿದ್ದವು. ದಾರಿಯಲ್ಲೊಂದೆಡೆ ತಿರುವಿನಲ್ಲಿ ದೂರದಲ್ಲಿ ಗೇರುಸೊಪ್ಪಾದ ಅಣೆಕಟ್ಟು ಗೋಚರಿಸುವುದು.

ಕೋಟೆಗೆ ಒಂದು ಕಿಮಿ ಮೊದಲು ಸುರೇಶ್ ಎಂಬವರ ಮನೆಗೆ ತೆರಳಿದೆವು. ಇಲ್ಲೇ ಬೈಕನ್ನಿರಿಸಿ ಕೋಟೆಯೆಡೆ ತೆರಳಿದೆವು. ಹೆಚ್ಚಿನ ಚಾರಣಿಗರು ಹೊಸಗದ್ದೆಯಲ್ಲಿಳಿದು ದಬ್ಬೆ ಮುಗಿಸಿ, ಅಲ್ಲಿಂದ ಕಾನೂರಿಗೆ ಬರುತ್ತಾರೆ. ಕಾನೂರಿನಲ್ಲಿ ರಾತ್ರಿ ತಂಗಿ ಮರುದಿನ ಕೋಟೆ ನೋಡಿ, ಗೇರುಸೊಪ್ಪಾದ ಹಾದಿ ತುಳಿದು ದೋಣಿಯಲ್ಲಿ ಶರಾವತಿಯನ್ನು ದಾಟಿ ಇನ್ನೂ ಸ್ವಲ್ಪ ನಡೆದರೆ ಗೇರುಸೊಪ್ಪಾ ತಲುಪುತ್ತಾರೆ.


ಸುರೇಶ್ ಮನೆಯಿಂದ ಕೋಟೆಯ ದಾರಿಯಲ್ಲಿ ಅಲ್ಲಲ್ಲಿ ಕೆಲವು ಅವಶೇಷಗಳು. ದೇವಸ್ಥಾನ, ಕಾಲುವೆಗಳಿದ್ದ ಕುರುಹುಗಳು. ಈಗ ಸುತ್ತಲೂ ಕಾಡು ಆವರಿಸಿದೆ. ಕೋಟೆಯ ದ್ವಾರ ಚಿಕ್ಕದಾಗಿದೆ. ಅಲ್ಲಲ್ಲಿ ಕಳ್ಳ ದ್ವಾರಗಳು. ೩ ಸುತ್ತಿನ ಕೋಟೆ ಇದಾಗಿದೆ. ವಿಶಾಲವಾದ ದಿಬ್ಬದ ಮೇಲೆ ಕಾನೂರು ಕೋಟೆ ಇರುವುದು. ಸಂಪೂರ್ಣವಾಗಿ ಕೋಟೆ ನೋಡುವುದಾದರೆ ೩ ದಿನಗಳು ಬೇಕು. ಕಾನೂರಿನಿಂದ ಬರುವಾಗ ಇಳಿಜಾರೊಂದು ಸಿಗುವಾಗಲೇ ಕೋಟೆಯಿರುವ ದಿಬ್ಬದ ದರ್ಶನವಾಗುವುದು. ೩ ದಿಕ್ಕುಗಳಲ್ಲಿ ಆಳವಾದ ಕಣಿವೆಯಿರುವುದು ಕಾನೂರು ಕೋಟೆಯ ವೈಶಿಷ್ಟ್ಯ.


ಗೇರುಸೊಪ್ಪಾದ ಕಾಳು ಮೆಣಸಿನ ರಾಣಿ ಎಂದೇ ಪ್ರಖ್ಯಾತವಾಗಿದ್ದ ಚನ್ನಭೈರಾದೇವಿಯ ರಾಜಧಾನಿಯಾಗಿ ಕಾನೂರು ಪ್ರಸಿದ್ಧಿ ಪಡೆದಿತ್ತು. ಬೇರೆ ದೇಶಗಳೊಂದಿಗೆ ಸಾಂಬಾರು ಪದಾರ್ಥಗಳ ವ್ಯವಹಾರದಲ್ಲಿ ಮುಂಚೂಣಿಯಲ್ಲಿದ್ದರಿಂದ ಚನ್ನಭೈರಾದೇವಿಯನ್ನು ’ಸಾಂಬಾರು ರಾಣಿ’ ಎಂದೂ ಗುರುತಿಸಲಾಗುತ್ತಿತ್ತು. ಈ ಕೋಟೆಯನ್ನೂ ಅವಳೇ ಕಟ್ಟಿಸಿದಳೆಂದು ಹೇಳಲಾಗುತ್ತದೆ. ಕೋಟೆಯ ಒಂದನೇ ಹಂತವನ್ನು ಕಲ್ಲಿನಲ್ಲಿ ಕಟ್ಟಲಾಗಿದ್ದು ಹೊರಗೋಡೆಯನ್ನೊಂದು ಬಿಟ್ಟು ಏನೂ ಉಳಿದಿಲ್ಲ. ಈ ಕಲ್ಲಿನ ಗೋಡೆಗಳನ್ನು ಕಾಡು ಆವರಿಸಿಕೊಂಡು ಬಿಟ್ಟಿದೆಯಾದರೂ ದೃಢವಾಗಿವೆ. ಎರಡನೇ ಸುತ್ತನ್ನು ಕೆಂಪು ಕಲ್ಲಿನಿಂದ ಕಟ್ಟಲಾಗಿದೆ. ಇಲ್ಲಿ ಅರಮನೆ, ದರ್ಬಾರ್, ಅಂತ:ಪುರ, ಉದ್ಯಾನವನ, ಗೋದಾಮು ಇತ್ಯಾದಿಗಳಿದ್ದವೆಂದು ಹೇಳಲಾಗುತ್ತದೆ. ಇಲ್ಲಿ ಕೆಲವೆಡೆ ಗುಂಡಿಗಳನ್ನು ತೋಡಲಾಗಿತ್ತು. ’ಇಲ್ಲೇಕೆ ಇಂಗುಗುಂಡಿಗಳನ್ನು ಮಾಡಿದ್ದೀರಾ’ ಎಂದು ಸುರೇಶರಲ್ಲಿ ಕೇಳಿದರೆ, ’ಇವು ಇಂಗುಗುಂಡಿಗಳಲ್ಲ. ನಿಧಿ ಹುಡುಕುವವರು ಅಗೆದ ಗುಂಡಿಗಳು!’ ಎನ್ನಬೇಕೆ. ೩ನೇ ಸುತ್ತನ್ನು ಇಟ್ಟಿಗೆಯಿಂದ ನಿರ್ಮಿಸಲಾಗಿದೆ. ಈ ಕೋಟೆಗೆ ಪ್ರವೇಶ ಮತ್ತು ನಿರ್ಗಮನ ಒಂದೇ ಬಾಗಿಲಿನಿಂದ.


ಕಾನೂರು ಕೋಟೆಯನ್ನು ಸತ್ಯಾನಾಶ ಮಾಡಿದವರೆಂದರೆ ಈ ನಿಧಿ ಹುಡುಕುವವರು. ಕೋಟೆಯ ತುತ್ತತುದಿಯಲ್ಲಿ ಸಂಪೂರ್ಣವಾಗಿ ಶಿಲೆಯಿಂದ ನಿರ್ಮಿಸಲಾಗಿರುವ ೨ ದೇವಾಲಯಗಳಿವೆ. ಇವುಗಳಲ್ಲಿ ಒಂದನ್ನಂತೂ ಗರ್ಭಗುಡಿಯನ್ನು ಕೂಡಾ ಬಿಡದೆ ಅಗೆದು ಹಾಕಲಾಗಿದೆ. ಎಷ್ಟು ಆಳಕ್ಕೆ ಅಗೆದಿದ್ದಾರೆಂದರೆ, ಏಣಿಯನ್ನು ಇಳಿಬಿಟ್ಟು ೧೦ ಅಡಿ ಆಳಕ್ಕೆ ಅಗೆದು ಹಾಕಲಾಗಿದೆ. ೨ನೇ ದೇವಸ್ಥಾನದಲ್ಲಿ ಯಾವುದೇ ಗುಂಡಿಗಳು ಇರಲಿಲ್ಲವಾದ್ದರಿಂದ, ಮೊದಲನೇ ದೇವಸ್ಥಾನದಲ್ಲಿ ನಿಧಿ ಶೋಧಕರಿಗೆ ಏನೂ ಸಿಗಲಿಕ್ಕಿರಲಿಲ್ಲ. ಸಿಕ್ಕಿದ್ದಿದ್ದರೆ ೨ನೇ ದೇವಸ್ಥಾನವನ್ನು ಹಾಗೆ ಬಿಡುತ್ತಿದ್ದರೇ? ದೇವಸ್ಥಾನಗಳ ಮುಂದಿದ್ದ ಸುಮಾರು ೨೦ ಅಡಿ ಎತ್ತರದ ಸ್ತಂಭವನ್ನು ಕೂಡಾ ಉರುಳಿಸಿ ಅದರ ಅಡಿಯಲ್ಲೂ ಅಗೆಯಲಾಗಿದೆ. ದೇವಸ್ಥಾನದ ದ್ವಾರದಲ್ಲಿದ್ದ ಕಲ್ಲಿನ ಪೀಠವೊಂದನ್ನು ಕಿತ್ತೊಯ್ಯುವ ಸಾಹಸವನ್ನೂ ಮಾಡಲಾಗಿದೆ. ಸ್ವಲ್ಪ ದೂರ ಇಳಿಜಾರು ಕೊನೆಗೊಳ್ಳುವಲ್ಲಿ ಈ ಪೀಠ ಬಿದ್ದಿದೆ. ಇಳಿಜಾರಿನಲ್ಲಿ ದೂಡಿಕೊಂಡು ತರಲಾಗಿದ್ದು, ನಂತರ ಅದನ್ನು ಎತ್ತಲೂ ಆಗದೆ ಹಾಗೆ ಬಿಟ್ಟುಹೋಗಲಾಗಿದೆ.


ಕಾನೂರು ಕೋಟೆಯಲ್ಲಿ ೧೨ ಕೆರೆಗಳಿವೆ. ಕೋಟೆಯನ್ನೆಲ್ಲಾ ಸುತ್ತಾಡಿದರೆ ಎಲ್ಲಾ ಕೆರೆಗಳನ್ನೂ ನೋಡಬಹುದು. ತನಗೆ ಗೊತ್ತಿದ್ದಷ್ಟು ಸ್ಥಳಗಳನ್ನು ಸುರೇಶ್ ನನಗೆ ತೋರಿಸಿದರು.


ಕೋಟೆಯ ೨ನೇ ಸುತ್ತಿನಿಂದ ಒಂದನೇ ಸುತ್ತಿಗೆ ಬರಲು ಶಾರ್ಟ್-ಕಟ್ ಒಂದಿದೆ. ಇದನ್ನು ಕಳ್ಳ ಮಾರ್ಗವೆನ್ನುತ್ತಾರೋ ಅಥವಾ ಶೀಘ್ರ ದಾರಿ ಎನ್ನುತ್ತಾರೋ ಅರಿಯೆ. ಆದರೆ ಇದು ಬಹಳ ಸುಂದರವಾಗಿತ್ತು ಮತ್ತು ಸ್ವಚ್ಛವಾಗಿತ್ತು ಕೂಡಾ. ಕೋಟೆಯಲ್ಲಿ ನಾನು ಇಷ್ಟಪಟ್ಟದ್ದು ದೇವಸ್ಥಾನಗಳು ಮತ್ತು ಈ ಕಳ್ಳದಾರಿ.


ಕಾನೂರು ಕೋಟೆಯ ಅರ್ಧಾಂಶಕ್ಕಿಂತಲೂ ಹೆಚ್ಚಿನ ಭಾಗವನ್ನು ಈಗ ಕಾಡು ಆವರಿಸಿಕೊಂಡಿದೆ. ಗೋಡೆಯ ಕಲ್ಲುಗಳು ಒಂದೊಂದಾಗಿ ಕಳಚಿಕೊಳ್ಳುತ್ತಿವೆ. ಕೋಟೆಯ ಗೋಡೆಗಳ ಮೇಲೆ ಕುಳಿತರೆ ಕೆಲವೊಂದೆಡೆ ಸುಂದರ ನೋಟ ಲಭ್ಯ. ಆದರೆ ಹೆಚ್ಚಿನೆಡೆ ಕೋಟೆಯ ದುರವಸ್ಥೆಯನ್ನು ನೋಡಿ ಬೇಜಾರಾಗದೇ ಇರದು.

ಶುಕ್ರವಾರ, ನವೆಂಬರ್ 07, 2008

ನಾಡಕಲಸಿಯ ದೇವಾಲಯಗಳು


೧೭-೦೨-೨೦೦೮.

ನಿರ್ಮಾಣಗೊಂಡದ್ದು: ಇಸವಿ ೧೧೪೦ರಲ್ಲಿ ಬಾಳೆಯಮ್ಮ ಹೆಗ್ಗಡೆ ಎಂಬ ಹೊಯ್ಸಳ ಮಾಂಡಲೀಕನಿಂದ.

ಹೊಯ್ಸಳ ರಾಜ ಎರಡನೇ ಬಲ್ಲಾಳನ ರಾಜಧಾನಿಯಾಗಿದ್ದ ನಾಡಕಲಸಿಯ ರಾಮೇಶ್ವರ ಮತ್ತು ಮಲ್ಲಿಕಾರ್ಜುನ ದೇವಾಲಯಗಳ ಒಂದೆರಡು ಲೇಖನಗಳು ನನ್ನಲ್ಲಿದ್ದವು. ರಾಮೇಶ್ವರ ದೇವಾಲಯ ಮಿಥುನ ಶಿಲ್ಪಗಳನ್ನೂ ಮತ್ತು ಮಲ್ಲಿಕಾರ್ಜುನ ದೇವಾಲಯ ನಾಟ್ಯ ಶೈಲಿಗಳನ್ನು ಬಿಂಬಿಸಿರುವುದರ ಬಗ್ಗೆ ಈ ಲೇಖನಗಳಲ್ಲಿ ತಿಳಿಸಲಾಗಿತ್ತು. ಕುತೂಹಲದಿಂದಲೇ ನಾಡಕಲಸಿ ತಲುಪಿದೆವು. ಪ್ರಾಂಗಣದೊಳಗೆ ಕಾಲಿಟ್ಟೊಡನೇ ಬಲಕ್ಕೆ ನಾಗರಾಶಿ. ಒಂದಷ್ಟು ನಾಗಕಲ್ಲುಗಳನ್ನು ಇಲ್ಲಿ ರಾಶಿ ಹಾಕಿ ಕೂರಿಸಲಾಗಿದೆ. ಎಡಕ್ಕೆ ರಾಮೇಶ್ವರ ದೇವಾಲಯವಿದ್ದರೆ, ಮುಂದೆ ಮಲ್ಲಿಕಾರ್ಜುನ ದೇವಾಲಯ.


ರಾಮೇಶ್ವರ ದೇವಾಲಯದೊಳಗೆ ಮಣ್ಣು, ಧೂಳು ತುಂಬಿಕೊಂಡಿತ್ತು. ಗರ್ಭಗುಡಿಯಲ್ಲಿ ಆಕರ್ಷಕ ಪೀಠದ ಮೇಲೆ ಶಿವಲಿಂಗ. ಈ ದೇವಾಲಯದಲ್ಲಿ ಅಂತರಾಳವಿಲ್ಲದ ಕಾರಣ, ಗರ್ಭಗುಡಿಯ ಹೊರಗಡೆ ನವರಂಗ. ಗರ್ಭಗುಡಿಯ ಬಲಕ್ಕೆ ಒಂದು ಕವಾಟದಂತಹ ರಚನೆ. ಇಲ್ಲಿ ಏನೂ ಇಲ್ಲ. ಈ ದೇವಾಲಯದ ಇನ್ನೊಂದು ವೈಶಿಷ್ಟ್ಯವೆಂದರೆ ಗರ್ಭಗುಡಿಗೆ ಪ್ರದಕ್ಷಿಣೆ ಹಾಕಲು ದೇವಾಲಯದ ಒಳಗಡೆಯಲ್ಲೇ ಸ್ಥಳಾವಕಾಶ. ಹೊಯ್ಸಳ ಶೈಲಿಯ ದೇವಾಲಯವಾಗಿದ್ದರೂ, ಹೊಯ್ಸಳ ಕಾಲದ ಶಿಲ್ಪಿಗಳು ಚಾಲುಕ್ಯ ಶೈಲಿಯ ಕೆಲವು ವಿಧಾನಗಳನ್ನು ಅಳವಡಿಸಿಕೊಂಡಿದ್ದರಿಂದ ನವರಂಗದಲ್ಲಿ ಚಾಲುಕ್ಯ ಶೈಲಿಯ ೪ ಕಲ್ಲಿನ ಕಂಬಗಳನ್ನು ಕಾಣಬಹುದು. ಇವು ನಮ್ಮ ಪ್ರತಿಬಿಂಬ ನೇರವಾಗಿಯೂ ಮತ್ತು ತಲೆಕೆಳಗಾಗಿಯೂ ಕಾಣಿಸುವ ಕಂಬಗಳು. ರಾಮೇಶ್ವರ ದೇವಾಲಯಕ್ಕೆ ಒಂದೇ ದ್ವಾರ. ಈ ದ್ವಾರದ ಒಂದೆಡೆ ಆನೆಯ ಮೂರ್ತಿಯಿದ್ದರೆ ಇನ್ನೊಂದೆಡೆ ಬಸವನ ಮೂರ್ತಿ. ಹೆಚ್ಚಿನೆಡೆ ಎರಡೂ ಬದಿಯಲ್ಲಿ ಆನೆಗಳಿರುತ್ತವೆ. ಮೊದಲೇ ಹಾಗೆ ಕೆತ್ತಲಾಗಿತ್ತೋ ಅಥವಾ ನಂತರ ಎಲ್ಲಿಂದಲೋ ತಂದು ಕೂರಿಸಿದರೋ ತಿಳಿಯದೇ ಗೊಂದಲಕ್ಕೀಡಾದೆ. ರಾಮೇಶ್ವರ ದೇವಾಲಯದ ಗೋಪುರದಲ್ಲಿ ಸಳ ಮಹಾರಾಜ ಹುಲಿಯನ್ನು ಕೊಲ್ಲುವ ದೃಶ್ಯದ ಕೆತ್ತನೆ.


ಈ ದೇವಸ್ಥಾನದಲ್ಲಿರುವ ಮಿಥುನ ಶಿಲ್ಪಗಳು ಆಶ್ಚರ್ಯಗೊಳಿಸಿದವು. ಸಂಭೋಗದ ಆಸನಗಳನ್ನು ನೋಡಿ ಬೆರಗಾದೆವು. ಆಗಲೂ ಪ್ರಾಣಿ ಸಂಭೋಗದ ಬಗ್ಗೆ ಇದ್ದ ಅರಿವನ್ನು ತಿಳಿದು ಅಚ್ಚರಿಯಾಯಿತು. ಸಲಿಂಗ ಕಾಮಿಗಳು, ಪ್ರಾಣಿ ಸಂಭೋಗ, ಸಮೂಹ ಸಂಭೋಗ ಎಲ್ಲ ರೀತಿಯದ್ದೂ ಇದ್ದವು! ಆ ಎಲ್ಲಾ ಆಸನಗಳನ್ನು ಸಣ್ಣ ಸಣ್ಣ ಕಿಂಡಿಯಂತಹ ಸ್ಥಳಗಳಲ್ಲಿ ಕರಾರುವಕ್ಕಾಗಿ ಕೆತ್ತಿರುವ ನೈಪುಣ್ಯತೆಯನ್ನು ಮೆಚ್ಚದೆ ಇರಲಸಾಧ್ಯ.

ಮಲ್ಲಿಕಾರ್ಜುನ ದೇವಾಲಯಕ್ಕೆ ಗೋಪುರವಿಲ್ಲ. ಹೊಯ್ಸಳ ಶೈಲಿಯ ದೇವಾಲಯಗಳಲ್ಲಿ ಗೋಪುರವಿರದೇ ಇರುವುದು ಬಹಳ ಅಪರೂಪ. ಅಲ್ಲದೇ ಸಳ ಮಹಾರಾಜ ಹುಲಿ ಕೊಲ್ಲುವ ದೃಶ್ಯದ ಕೆತ್ತನೆ ಇರದಿರುವುದು, ಇದು ಹೊಯ್ಸಳ ಕಾಲದ ದೇವಾಲಯ ಆಗಿರಲು ಅಸಾಧ್ಯ ಎಂಬ ವಾದವನ್ನು ಮುಂದಿಟ್ಟಿದೆ. ಈ ಬಗ್ಗೆ ಗೊಂದಲವಿದೆ. ಮಲ್ಲಿಕಾರ್ಜುನ ದೇವಾಲಯವನ್ನು ಕದಂಬರು ನಿರ್ಮಿಸಿದ್ದರು ಎಂಬ ಮಾತೂ ಇದೆ.


ಗೋಪುರರಹಿತ ಮಲ್ಲಿಕಾರ್ಜುನ ದೇವಾಲಯದಲ್ಲಿ ಗರ್ಭಗುಡಿ, ಅಂತರಾಳ, ನವರಂಗ ಮತ್ತು ಮುಖಮಂಟಪಗಳಿವೆ. ಮುಖಮಂಟಪದಲ್ಲಿ ಆಸೀನನಾಗಿರುವ ನಂದಿ ಬಹಳ ಸುಂದರವಾಗಿದ್ದಾನೆ. ಗರ್ಭಗುಡಿಯಲ್ಲಿ ಆಕರ್ಷಕ ಶಿವಲಿಂಗ ಮತ್ತು ಗರ್ಭಗುಡಿಯ ಇಕ್ಕೆಲಗಳಲ್ಲಿ ಕವಾಟಗಳು. ಒಂದರಲ್ಲಿ ದೇವಿಯ ಸುಂದರ ಮೂರ್ತಿಯಿದೆ. ನವರಂಗದಲ್ಲಿರುವ ಕಂಬಗಳ ಮೇಲೆ ನಾಟ್ಯಶಾಸ್ತ್ರವನ್ನು ವಿವರಿಸುವ ರೇಖಾಚಿತ್ರಗಳಿವೆ. ಇವು ಮತ್ತವೇ, ನಮ್ಮ ಪ್ರತಿಬಿಂಬ ನೇರವಾಗಿಯೂ ತಲೆಕೆಳಗಾಗಿಯೂ ಕಾಣುವ ಕಲ್ಲಿನ ಕಂಬಗಳು. ಅಂತಹ ೧೦ ಕಂಬಗಳು ಮಲ್ಲಿಕಾರ್ಜುನ ದೇವಾಲಯದಲ್ಲಿವೆ. ದೇವಾಲಯದ ಮುಖ್ಯ ದ್ವಾರ ಮುಖಮಂಟಪದ ಮುಖಾಂತರವಿದ್ದರೆ, ಉಳಿದೆರಡು ದ್ವಾರಗಳು ನವರಂಗದ ಇಕ್ಕೆಲಗಳಲ್ಲಿವೆ.

ಮಾಹಿತಿ: ಮಹಾಬಲ ಸೀತಾಳಭಾವಿ