ಮಂಗಳವಾರ, ಆಗಸ್ಟ್ 25, 2015

ಮಂಗಳವಾರ, ಆಗಸ್ಟ್ 18, 2015

ರಾಮನಗುಂಡಿ


ಈ ಹಳ್ಳಿಯ ಸಮೀಪ ಕಾಡಿನಲ್ಲೊಂದು ಜಲಧಾರೆಯಿದೆ ಎಂದು ನಕ್ಷೆಯಲ್ಲಿ ಕಂಡುಕೊಂಡು, ೨೦೧೧ರ ನವೆಂಬರ್ ತಿಂಗಳ ಅದೊಂದು ದಿನ ಹಳ್ಳಿಯತ್ತ ತೆರಳಿದೆ. ಅಲ್ಲಿ ವಿಚಾರಿಸಿದಾಗ ಹಳ್ಳಿಯ ಜನರಿಗೆ ಜಲಧಾರೆಯ ಬಗ್ಗೆ ಗೊತ್ತಿರಲಿಲ್ಲ. ಸ್ವಲ್ಪ ಸಮಯದ ಬಳಿಕ ವಯಸ್ಕ ವ್ಯಕ್ತಿಯೊಬ್ಬರು ಜಲಧಾರೆಯೊಂದರ ಇರುವಿಕೆಯ ಬಗ್ಗೆ ತಿಳಿಸಿದರು. ಇವರನ್ನೇ ಮಾರ್ಗದರ್ಶಿಯಾಗಿ ಬರಲು ಒಪ್ಪಿಸಿ, ನಾವು ಕಾಡಿನೊಳಗೆ ಚಾರಣ ಆರಂಭಿಸಿದೆವು.


ಇವರು ಜಲಧಾರೆಯನ್ನು ತೋರಿಸಿದರೇನೋ ಸರಿ. ಆದರೆ ಅದು ನಾನು ನಕ್ಷೆಯಲ್ಲಿ ಕಂಡ ಜಲಧಾರೆಯಲ್ಲ ಎಂದು ನನಗೆ ಕೂಡಲೇ ತಿಳಿಯಿತು. ಆದರೆ ಆ ವಯಸ್ಕರು ಇಲ್ಲಿ ಬೇರೆ ಜಲಧಾರೆಯಿಲ್ಲ ಎಂದು ಹೇಳಿದಾಗ ನಾನು ಸುಮ್ಮನಾದೆ. ಆದರೆ ನಾನು ನೋಡಬೇಕೆಂದಿದ್ದ ಜಲಧಾರೆ ಅಲ್ಲೇ ಸಮೀಪದಲ್ಲೆಲ್ಲೋ ಇದೆ ಎಂದು ನನಗೆ ಖಾತ್ರಿಯಿದೆ. ಆ ಬಗ್ಗೆ ಅಲ್ಲೇ ಸಮೀಪದ ಇನ್ನೊಂದು ಹಳ್ಳಿಯ ವ್ಯಕ್ತಿಯೊಬ್ಬ ನನಗೆ ತಿಳಿಸಿದ್ದ. ತಾನು ಮಾರ್ಗದರ್ಶಿಯಾಗಿ ಬರುವೆನೆಂದೂ ತಿಳಿಸಿದ್ದ. ಆದರೆ ಆತನನ್ನು ಸಂಪರ್ಕಿಸಲು ನನಗೆ ಇನ್ನೂ ಆಗಿಲ್ಲ.


ಅದೇನೇ ಇರಲಿ. ಈಗ ಇನ್ನೊಂದು ಹೊಸ ಜಲಧಾರೆ ಸಿಕ್ಕಿತಲ್ಲ ಎಂದು ಸಮಾಧಾನ. ನೀರಿನ ಹರಿವು ಕಡಿಮೆಯಿತ್ತು. ಈ ಜಲಧಾರೆಗೆ ರಾಮನಗುಂಡಿ ಜಲಧಾರೆ ಎಂದು ಹೆಸರು.


ಜಲಧಾರೆಯ ತಳದಲ್ಲಿದ್ದ ಕೊಳವು ಈಜಾಡಲು ಆಕರ್ಷಕವಾಗಿ ಕಂಡರೂ, ಅದು ತುಂಬಾ ಆಳವಿದೆ ಎಂದು ನಮ್ಮ ಮಾರ್ಗದರ್ಶಿ ಹೇಳಿದಾಗ, ನಾವ್ಯಾರೂ ನೀರಿಗಿಳಿಯುವ ಸಾಹಸ ಮಾಡಲಿಲ್ಲ. ಸುಮಾರು ೩೫ ಅಡಿ ಎತ್ತರದಿಂದ ಬಳುಕುತ್ತಾ ಆಲಸ್ಯದಿಂದ ಕೆಳಗಿಳಿಯುವ ಜಲಕನ್ಯೆ ಇವಳು.


ನಾವು ಚಾರಣ ಆರಂಭಿಸಿದ ಹಳ್ಳಿಯ ಸಮೀಪದಿಂದಲೇ ಹಾದುಹೋಗುವ ಈ ಹಳ್ಳವು, ಈ ಜಲಧಾರೆಯನ್ನು ನಿರ್ಮಿಸಿದ ಕೂಡಲೇ ಪ್ರಮುಖ ನದಿಯೊಂದನ್ನು ಸೇರಿಕೊಳ್ಳುತ್ತದೆ. ನೀರಿನ ಹರಿವು ಹೆಚ್ಚಿದ್ದರೆ ನೋಡಲು ಜಲಧಾರೆ ಇನ್ನೂ ಹೆಚ್ಚು ಆಕರ್ಷಕವಾಗಿರುವುದು.


ನಂತರ ಜಲಧಾರೆಯ ಮೇಲಕ್ಕೆ ತೆರಳಿ ಅಲ್ಲಿ ಸ್ವಲ್ಪ ಕಾಲಹರಣ ಮಾಡಿದೆವು. ಈ ಜಲಧಾರೆಗೆ ಹಳ್ಳಿಯಿಂದ ಕೇವಲ ೩೦ ನಿಮಿಷಗಳ ಚಾರಣ. ಆದರೆ ಕಾಡು ಮಾತ್ರ ದಟ್ಟವಾಗಿದ್ದು, ಕೊನೆಯ ೧೦-೧೨ ನಿಮಿಷಗಳ ಇಳಿಜಾರಿನ ದಾರಿ ರೋಮಾಂಚನ ತರಿಸುವಂಥದ್ದು.

ಭಾನುವಾರ, ಆಗಸ್ಟ್ 09, 2015

ಅಂದ ಹಾಗೂ ದುರಾಸೆ...


ಖಾಸಗಿ ಸ್ಥಳದಲ್ಲಿರುವ ಈ ಜಲಧಾರೆಯನ್ನು ನೋಡಲೋಸುಗ ಸಮೀಪದ ಪಟ್ಟಣಕ್ಕೆ ನಾವು ಬಂದಿಳಿದಾಗ ಸಮಯ ಬೆಳಿಗ್ಗೆ ೧೦.೧೫. ಇಲ್ಲಿಂದ ಸುಮಾರು ೭ ಕಿಮಿ ದೂರವಿರುವ ಈ ಜಲಧಾರೆಗೆ ನಡೆದೇ ಹೋಗಿ ಬರುವ ಇರಾದೆ ನಮಗಿತ್ತು. ಆದರೆ ಉಡುಪಿಗೆ ಅಲ್ಲಿಂದ ಕೊನೆಯ ಬಸ್ಸು ಮಧ್ಯಾಹ್ನ ೩.೪೫ಕ್ಕೆ ಎಂದು ತಿಳಿದಾಗ, ಈಗ ಆಟೋದಲ್ಲಿ ತೆರಳಿ ಹಿಂತಿರುಗುವಾಗ ನಡೆದು ಬರುವ ನಿರ್ಧಾರ ಮಾಡಿದೆವು.


ಅಲ್ಲೊಂದೆಡೆ ಉಪಹಾರ ಮುಗಿಸಿ ಹೊರಬರುತ್ತಿರುವಾಗ ರಿಕ್ಷಾವೊಂದು ಎಲ್ಲೋ ಹೊರಡಲು ಅಣಿಯಾಗುತ್ತಿತ್ತು. ಚಾಲಕ ಇನ್ನೂ ಹದಿಹರೆಯದವನಾಗಿದ್ದ. ಆತನಲ್ಲಿ ವಿಚಾರಿಸಿದಾಗ, ಜಲಧಾರೆ ತನಗೆ ಗೊತ್ತು.. ತಾನಲ್ಲಿ ತೆರಳಿದ್ದೇನೆ.. ಕರೆದೊಯ್ಯುತ್ತೇನೆ...ಎಂದು ನಮ್ಮನ್ನು ಹತ್ತಿಸಿ ಹೊರಟೇಬಿಟ್ಟ.


ಈತನ ಹೆಸರು ಸಂದೇಶ. ಪದವೀಧರ. ಓದಿನ ಬಳಿಕ ಸದ್ಯದ ವೃತ್ತಿ ರಿಕ್ಷಾ ಚಾಲನೆ. ಕೊನೆಯ ಮೂರು ಕಿಮಿ ರಸ್ತೆ ತೀರಾ ಹದಗೆಟ್ಟಿತ್ತು. ಫೋರ್ ವ್ಹೀಲ್ ಡ್ರೈವ್ ಜೀಪ್ ಮಾತ್ರ ಸಂಚರಿಸುವ ರಸ್ತೆಯಾಗಿತ್ತು. ಆದರೂ ಸಂದೇಶ ತನ್ನ ಆಪೆ ರಿಕ್ಷಾವನ್ನು, ’ಆದಷ್ಟು ಮುಂದೆ ಹೋಗುವ’ ಎನ್ನುತ್ತ ಚಾಕಚಕ್ಯತೆಯಿಂದ ಓಡಿಸುತ್ತಿದ್ದ.


ಒಂದೆರಡು ಕಡೆ ರಸ್ತೆಯ ಅವಸ್ಥೆ ನೋಡಿ ನಾವಾಗಿಯೇ ’ಸಾಕಪ್ಪಾ ಇಲ್ಲೇ ನಿಲ್ಲಿಸು’ ಎಂದರೂ ಕೇಳದೇ, ಹಟಕ್ಕೆ ಬಿದ್ದವನಂತೆ ಏನೇನೋ ಕಸರತ್ತು ಮಾಡುತ್ತಾ ಚಲಾಯಿಸುತ್ತಿದ್ದ. ಒಂದು ಕಡೆ ಹಿಂದಿನ ಚಕ್ರ ಕೆಸರಿನಲ್ಲಿ ಹೂತುಹೋದರೂ, ಏನೇನೂ ಬೇಜಾರು ಮಾಡದೆ ಕೆಳಗಿಳಿದು, ಕಲ್ಲುಗಳನ್ನಿಟ್ಟು ಬಹಳ ಕಷ್ಟದಿಂದ ಕೆಸರಿನಿಂದ ಹೊರಬಂದ.


 
ಕೊನೆಗೂ ಜಲಧಾರೆಯಿರುವ ಸ್ಥಳದ ಮಾಲೀಕನ ಮನೆಯ ಬಳಿ ಆತ ನಮ್ಮನ್ನು ’ಸುರಕ್ಷಿತವಾಗಿ’ ಬಿಟ್ಟಾಗ ನಾವು ನಿಟ್ಟುಸಿರುಬಿಟ್ಟೆವು. ಆತ ಕೇಳಿದಷ್ಟನ್ನು ಏನೇನೂ ಚೌಕಾಶಿ ಮಾಡದೆ ನೀಡಿದೆವು. ಆತ ಕಡಿಮೆಯೇ ತಗೊಂಡ ಬಿಡಿ.


ಮನೆಯನ್ನು ದಾಟಿ ಕೇವಲ ಮೂರೇ ನಿಮಿಷಗಳಷ್ಟು ನಡೆದು ಜಲಧಾರೆಯ ಮುಂದೆ ಇದ್ದೆವು. ಸುಮಾರು ೩೫ ಅಡಿಗಳಷ್ಟು ಎತ್ತರವಿರುವ ಜಲಧಾರೆಯ ತಳದಲ್ಲಿ ಆಕರ್ಷಕ ಕೊಳವಿದೆ. ಇಲ್ಲಿ ಮನಸೋ ಇಚ್ಛೆ ಜಲಕ್ರೀಡೆಯಾಡಬಹುದು. ನೀರು ಬೀಳುವಲ್ಲಿ ಆಳವಿರುವುದರಿಂದ ಅಲ್ಲಿಂದ ದೂರವುಳಿದರೆ ಒಳಿತು ಎಂದು ಸ್ಥಳದ ಮಾಲೀಕರ ಅಭಿಪ್ರಾಯ.


ಸಮೀಪದ ಊರಿನಲ್ಲಿರುವ ರೆಸಾರ್ಟ್‍ನವರು ತಮ್ಮಲ್ಲಿ ಬಂದ ಗ್ರಾಹಕರನ್ನು ಇಲ್ಲಿಗೆ ಕರೆತರುತ್ತಾರೆ. ಹಾಗೆ ಬಂದಾಗ ಈ ಸ್ಥಳದ ಮಾಲೀಕರಿಗೆ, ಒಬ್ಬೊಬ್ಬರಿಗೆ ಇಂತಿಷ್ಟು ಎಂದು ಹಣ ನೀಡುತ್ತಾರೆ. ಇದನ್ನೆಲ್ಲಾ ಕಂಡು ಈಗ ಸ್ಥಳದ ಮಾಲೀಕರಿಗೆ ಅತಿ ದುರಾಸೆ ಉಂಟಾಗಿದೆ. ಜೆಸಿಬಿಯೊಂದನ್ನು ತಂದು ಗದ್ದೆಗಳನ್ನೆಲ್ಲಾ ಸಮತಟ್ಟುಗೊಳಿಸಿ ತಾನೇ ಒಂದು ಹೋಮ್‍ಸ್ಟೇ ನಿರ್ಮಿಸುತ್ತೇನೆ ಎಂದು ನಮ್ಮಲ್ಲಿ ತನ್ನ ಯೋಜನೆಗಳನ್ನು ಹೇಳಿಕೊಂಡರು.


ಅವರ ಯೋಜನೆಗಳನ್ನು ಕೇಳಿ ದಿಗ್ಭ್ರಮೆಗೊಂಡ ನಾನು, ’ಈಗ ನಿಮಗೇನಾದರೂ ಕಡಿಮೆಯಿದೆಯೇ’ ಎಂದು ಕೇಳಿದೆ. ಇಬ್ಬರು ಗಂಡು ಮಕ್ಕಳು ಉತ್ತಮ ಕೆಲಸದಲ್ಲಿದ್ದು, ತಾನೂ ಕೃಷಿಯಿಂದ ಉತ್ತಮ ಆದಾಯ ಗಳಿಸಿ ಆರೋಗ್ಯವಂತನಾಗಿ ಸುಖವಾಗಿ ಇದ್ದೇನೆ ಎಂದು ಉತ್ತರ ನೀಡಿದರು!


ಇವರ ಮನೆಯಿಂದ ಜಲಧಾರೆಗೆ ಇರುವ ಮೂರು ನಿಮಿಷಗಳ ದಾರಿ ಬಹಳ ಸುಂದರವಾಗಿದೆ. ಎತ್ತರೆತ್ತರ ಮರಗಳ ನಡುವೆ ಇರುವ ಕಾಲುದಾರಿಯಲ್ಲಿ ಜಲಧಾರೆಯ ಸಮೀಪ ತೆರಳುವುದೇ ಸುಂದರ ಅನುಭವ. ಮರಗಳನ್ನೆಲ್ಲಾ ಕಡಿದುರುಳಿಸಿ, ಗುಡ್ಡದ ಮಣ್ಣನ್ನೆಲ್ಲಾ ಜೆಸಿಬಿಯಿಂದ ಕೆಳಗುರುಳಿಸಿ, ಎತ್ತರದ ಸ್ಥಳದಲ್ಲಿ ವಾಹನಗಳ ಪಾರ್ಕಿಂಗ್‍ಗೆ ಸ್ಥಳ ಮಾಡುತ್ತೇನೆ ಎಂದಾಗಲಂತೂ ನನ್ನ ಜೊತೆಗಿದ್ದ ರಾಘಣ್ಣ ತಲೆತಿರುಗಿ ಬೀಳುವುದು ಬಾಕಿಯಿತ್ತು.


ಒಬ್ಬೊಬ್ಬರಿಗೆ ಮೂರು ಸಾವಿರ ಚಾರ್ಜ್ ಮಾಡುತ್ತಾರೆ.... ನಾನು ಅದರ ಅರ್ಧದಷ್ಟು ಚಾರ್ಜ್ ಮಾಡಿದರೂ ಹಣವೇ ಹಣ ಎಂದು ತನ್ನ ಬಲಗೈಯ ಹೆಬ್ಬೆರಳು ಮತ್ತು ತೋರುಬೆರಳುಗಳನ್ನು ಬಳಸಿ ಹಣದ ಸಂಕೇತ ಮಾಡಿದಾಗ ತಮಾಷೆಯೆನಿಸಿತು. ಇನ್ನು ಮುಂದೆ ನಿಮ್ಮ ಹಾಗೆ ಇಲ್ಲಿ ಬಂದವರಿಗೆ ಹತ್ತು ರೂಪಾಯಿ ಶುಲ್ಕ ವಿಧಿಸುತ್ತೇನೆ ಎಂದು ತನ್ನ ದುರಾಸೆಯ ಪರಮಾವಧಿಯನ್ನು ತೋರ್ಪಡಿಸಿದರು. ಅವರ ಯೋಜನೆಗಳನ್ನು ಕೇಳಿ, ಎಲ್ಲಾ ಇದ್ದರೂ ಮತ್ತೆ ಬೇಕೆನ್ನುವ ದುರಾಸೆ ಕಂಡು ಬಹಳ ವಿಚಿತ್ರವೆನಿಸತೊಡಗಿತು.


ಜಲಧಾರೆಯ ಬಳಿ ಸುಮಾರು ಒಂದು ತಾಸು ಸಮಯ ಕಳೆದೆವು. ಅದಾಗಲೇ ಅಲ್ಲಿ ರೆಸಾರ್ಟ್‍ನಿಂದ ಒಂದು ಜೀಪ್ ಬಂದಿತ್ತು. ನಾವು ಹೊರಡಲು ಅಣಿಯಾಗುತ್ತಿದ್ದಾಗ ಅವರು ’ಇನ್ಯಾಕೆ ಅಲ್ಲಿವರೆಗೆ ನಡೆಯುತ್ತೀರಾ...ನಾವು ಡ್ರಾಪ್ ಕೊಡ್ತೀವಿ..’ ಎಂದು ನಮ್ಮನ್ನು ಪಟ್ಟಣದವರೆಗೆ ಬಿಟ್ಟರು. ಬೇಗನೇ ಬಂದ ನಮಗೆ ೨.೪೫ರ ಬಸ್ಸು ಸಿಕ್ಕಿತು. ಸಂಜೆ ೫ ಗಂಟೆಗೆ ಮನೆಯಲ್ಲಿದ್ದೆ.


ಒಟ್ಟು ೧೪ಕಿಮಿ ಚಾರಣ ಮಾಡುವ ಇರಾದೆಯಿಂದ ಈ ಜಲಧಾರೆ ನೋಡಲು ತೆರಳಿದ ನಾವು ಅಂದು ಒಂದು ಕಿಮಿ ಕೂಡಾ ಚಾರಣ ಮಾಡಲಿಲ್ಲ!!

ಭಾನುವಾರ, ಆಗಸ್ಟ್ 02, 2015

ಗೋವಿಂದಾಯ ನಮ:


ಈ ಜಲಪಾತಕ್ಕೆ ಎರಡು ಸಲ (೨೦೦೪ ಜುಲಾಯಿ ಹಾಗೂ ೨೦೦೪ ಅಗಸ್ಟ್) ತೆರಳಿದ್ದರೂ, ಸಮೀಪದಿಂದ ಚಿತ್ರ ತೆಗೆಯಲು ಸಾಧ್ಯವಾಗಿರಲಿಲ್ಲ. ನೀರಿನ ಹನಿಗಳು ಎಲ್ಲೆಂದರಲ್ಲಿ ಚಿಮ್ಮುತ್ತಿದ್ದವು. ಕಾಡಿನ ಮರೆಯಿಂದ ಹೊರಬಂದು ಜಲಧಾರೆಯ ಮುಂದೆ ನಿಂತ ಕೂಡಲೇ ಮೈಯಿಡೀ ಒದ್ದೆಯಾಗಿಬಿಟ್ಟಿತ್ತು. ಕ್ಯಾಮರಾ ಹೊರತೆಗೆಯುವುದು ದೂರದ ಮಾತು.


ಕಳೆದ ತಿಂಗಳ (ಜುಲಾಯಿ ೨೦೧೫) ಉಡುಪಿ ಯೂತ್ ಹಾಸ್ಟೆಲ್ ಚಾರಣವನ್ನು ಇದೇ ಜಲಧಾರೆಗೆ ಇಡುವಂತೆ ಅಧ್ಯಕ್ಷರಿಗೆ ಸೂಚಿಸಿದ್ದು ನಾನೇ. ಸಮೀಪದಿಂದ ಚಿತ್ರ ತೆಗೆಯುವ ಅಜೆಂಡಾ ಬಾಕಿ ಇತ್ತಲ್ವೆ!


ಸುಮಾರು ೧೦೦ ಅಡಿ ಎತ್ತರದಿಂದ ಬೀಳುವ ಜಲಧಾರೆ, ಹಸಿರು ಹಣೆಗೆ ಶ್ವೇತ ವರ್ಣದ ನಾಮ ಗೀರಿದಂತೆ, ಚಾರಣ ಆರಂಭವಾಗುವ ಹಳ್ಳಿಯಿಂದಲೇ ಕಾಣಬರುತ್ತದೆ. ಈ ನೋಟ ಹನ್ನೊಂದು ವರ್ಷಗಳ ಹಿಂದೆ ಸಿಕ್ಕಿತ್ತು. ಈ ಬಾರಿ ಮಂಜು ಮುಸುಕಿದ್ದರಿಂದ ಜಲಧಾರೆ ಹಳ್ಳಿಯಿಂದ ಕಾಣಿಸುತ್ತಿರಲಿಲ್ಲ.


ಹನ್ನೊಂದು ವರ್ಷಗಳ ಬಳಿಕ ಇಲ್ಲಿಗೆ ಬಂದಿದ್ದರಿಂದ ಹಳ್ಳಿಯಲ್ಲಿ ಬದಲಾವಣೆಗಳಾಗಿದ್ದವು. ಅಲ್ಲಲ್ಲಿ ಹೊಸ ದಾರಿಗಳು ಜನ್ಮ ತಳೆದಿದ್ದವು. ದಾರಿಯ ಬಗ್ಗೆ ಸ್ವಲ್ಪ ಗೊಂದಲ ಉಂಟಾದರೂ, ಕಂಡುಕೊಂಡು ಕಾಡನ್ನು ಹೊಕ್ಕೆವು. ಒಮ್ಮೆ ಕಾಡನ್ನು ಪ್ರವೇಶಿಸಿದ ಬಳಿಕ ನಂತರ ಹೆದ್ದಾರಿಯಂತೆ ಸ್ಪಷ್ಟವಾಗಿರುವ ಕಾಲುದಾರಿ... ಜಲಧಾರೆಯ ಬುಡದವರೆಗೂ.


ಜಲಧಾರೆಯ ಬುಡಕ್ಕಿಂತ ಸ್ವಲ್ಪ ಮೊದಲೇ, ಒಂದಷ್ಟು ಚಿತ್ರಗಳನ್ನು ತೆಗೆದು, ಅಂದಿನ ಅಜೆಂಡಾ ಸಮಾಪ್ತಿಗೊಳಿಸಿದೆ. ಇನ್ನೊಂದು ಹದಿನೈದು ಹೆಜ್ಜೆ ಮುಂದೆ ಬಂದ ಬಳಿಕ ಚಿತ್ರ ತೆಗೆಯುವುದು ಅಸಾಧ್ಯದ ಮಾತು... ಮಳೆಗಾಲದಲ್ಲಿ.


ಶಿವರಾತ್ರಿಗೆ ಸಾವಿರಾರು ಶಿವಭಕ್ತರು ಇಲ್ಲಿಗೆ ದಾಂಗುಡಿಯಿಡುತ್ತಾರೆ. ಅಂದು ದಾರಿಯಿಡೀ ’ಗೋವಿಂದಾ ಗೋವಿಂದಾ’ ಎಂಬ ಮಂತ್ರ ಕಾಡಿನ ಮೌನವನ್ನು ಬೆದರಿಸುತ್ತಿರುತ್ತದೆ. ಈ ಶಿವಭಕ್ತರ ಓಡಾಟದಿಂದಲೇ ಅಷ್ಟು ಸ್ಪಷ್ಟವಾದ ಕಾಲುದಾರಿ ಕಾಡಿನೊಳಗೆ ರೂಪುಗೊಂಡಿದೆ.


ಹನ್ನೊಂದು ವರ್ಷಗಳಲ್ಲಿ ಕಾಡು ಸುಮಾರು ೨೦೦ ಮೀಟರುಗಳಷ್ಟು ಹಿಂದೆ ಸರಿದಿದೆ. ೨೦೦೪ರಲ್ಲಿ ನಾವು ಮನೆಯೊಂದರ ಬಳಿ ಕಾಡನ್ನು ಹೊಕ್ಕು, ನಂತರ ಮನೆಯಿಂದ ೧೫೦ ಮೀಟರುಗಳಷ್ಟು ದೂರವಿದ್ದ ತೊರೆಯೊಂದನ್ನು ದಾಟಿ ಮುನ್ನಡೆದಿದ್ದೆವು. ಇಂದು ಈ ತೊರೆಯ ತನಕ ಖಾಸಗಿ (ಆಕ್ರಮಿತ) ಸ್ಥಳ ಕಾಡನ್ನು ಬಲಿ ಪಡೆದಿದೆ. ತೊರೆ ದಾಟಿದ ಬಳಿಕವೂ ಇನ್ನೊಂದು ೫೦ ಮೀಟರುಗಳಷ್ಟು ದೂರದವರೆಗೆ ಬರೀ ಖಾಲಿ ಸ್ಥಳ. ತದನಂತರ ಕಾಡು. ಮುಂದಿನ ದಿನಗಳಲ್ಲಿ ಇನ್ನೆಷ್ಟು ಕಾಡಿನ ಆಹುತಿ ಕಾದಿದೆಯೋ.... ಆ ಗೋವಿಂದನೇ ಬಲ್ಲ.