ಭಾನುವಾರ, ಅಕ್ಟೋಬರ್ 28, 2007

ಹಳ್ಳಿಯೊಂದರಲ್ಲಿರುವ ಜಲಧಾರೆಗಳು


ಈ ಹಳ್ಳಿಯ ಜನರು ತಮಗೆ ಸಾಕಾಗುವಷ್ಟು ವಿದ್ಯುತ್ತನ್ನು ಯಾರ ನೆರವಿಲ್ಲದೇ ಉತ್ಪಾದಿಸಿಕೊಳ್ಳುವ ಬಗ್ಗೆ ಲೇಖನವೊಂದು 'ತರಂಗ'ದಲ್ಲಿ ಬಂದಿತ್ತು. ಗೆಳೆಯ ದಿನೇಶ್ ಹೊಳ್ಳರ ಆಫೀಸಿನಲ್ಲಿ ಅವರ ಚಾರಣ ಸಂಬಂಧಿತ ಲೇಖನ ಸಂಗ್ರಹದೆಡೆ ಕಣ್ಣಾಡಿಸುತ್ತಿರುವಾಗ ಈ ಲೇಖನ ಸಿಕ್ಕಿತು. ಆ ಲೇಖನದಲ್ಲಿದ್ದ ಚಿತ್ರವೊಂದರಲ್ಲಿ ನಾಲ್ಕಾರು ಜನರು ನಿಂತಿದ್ದರೆ ಅವರ ಹಿಂದೆ ಅಸ್ಪಷ್ಟವಾಗಿ ಜಲಧಾರೆಯೊಂದು ಗೋಚರಿಸುತ್ತಿತ್ತು. ಜಲಪಾತ ಕಂಡೊಡನೆ ಇನ್ನಷ್ಟು ಆಸಕ್ತಿಯಿಂದ ಕಣ್ಣಾಡಿಸಿದಾಗ ಎಳನೀರು, ಸಂಸೆಯ ಸಮೀಪವಿರುವುದೆಂದು ತಿಳಿಯಿತು.

ಈ ಎಳೆಯನ್ನು ಹಿಡಿದು ೨೦೦೪ರ ಫೆಬ್ರವರಿ ತಿಂಗಳ ಅದೊಂದು ರವಿವಾರ ಯಮಾಹಾವನ್ನು ಈ ಹಳ್ಳಿಯತ್ತ ಓಡಿಸಿದೆ. ಜಲಪಾತದಿಂದ ಹರಿದು ಬರುವ ನೀರನ್ನು ದಾಟಿಹೋಗಲು ಇರುವ ಸಣ್ಣ ಸೇತುವೆಯನ್ನು ದಾಟಿದ ಕೂಡಲೇ ಸಿಗುವ ಮೊದಲ ಮನೆ ಶ್ರೀ ಸತ್ಯೇಂದ್ರ ಹೆಗಡೆಯವರದ್ದು. ಇವರ ಮನೆಯ ಹಿಂಭಾಗದಲ್ಲಿರುವ ತೋಟದಲ್ಲಿ ಒಂದೈದು ನಿಮಿಷ ಮೇಲೇರಿದರೆ ಮಾವಿನಸಸಿ ಹೊಳೆಯಿಂದ ನಿರ್ಮಿತವಾಗುವ ಈ ಜಲಪಾತದೆಡೆ ತಲುಪಬಹುದು. ಜಲಧಾರೆ ಸಂಪೂರ್ಣವಾಗಿ ಒಣಗಿತ್ತು. ಇದೊಂದು ಮಳೆಗಾಲದ ಜಲಧಾರೆ ಎಂಬ ವಿಷಯ ತಿಳಿದಿರಲಿಲ್ಲ. 'ಮಳೆ ಬಿದ್ದ ಮೇಲೆ ಬನ್ನಿ. ಚೆನ್ನಾಗಿರುತ್ತೆ', ಎಂದು ಹೆಗ್ಡೆಯವರು ನನ್ನನ್ನು ಬೀಳ್ಕೊಟ್ಟರು. ಆ ವರ್ಷ ಮಳೆರಾಯ ಬೇಗನೇ ಆಗಮಿಸಿದ್ದರಿಂದ ಮೇ ತಿಂಗಳ ಕೊನೆಗೆ ಮತ್ತೂಮ್ಮೆ ಈ ಹಳ್ಳಿಗೆ ಭೇಟಿ ನೀಡಿದೆ. ಮತ್ತೆ ಹೆಗ್ಡೆಯವರು ಆದರದಿಂದ ಬರಮಾಡಿಕೊಂಡರು. ಆದರೆ ಮಾವಿನಸಸಿಹೊಳೆ ಜಲಪಾತದಲ್ಲಿ ನೀರಿನ ಪ್ರಮಾಣ ಕಡಿಮೆ ಇತ್ತು. 'ಬಹಳ ಬೇಗನೇ ಬಂದ್ಬಿಟ್ರಿ. ಒಂದೆರಡು ತಿಂಗಳು ಬಿಟ್ಟು ಬರ್ಬೇಕಿತ್ತು', ಎನ್ನುತ್ತಾ ಮತ್ತೊಮ್ಮೆ ಹೆಗ್ಡೆಯವರು ಬೀಳ್ಕೊಟ್ಟರು.

ಜೂನ್ ೨೦೦೪ರ ಕೊನೇ ವಾರದಲ್ಲಿ ಗೆಳೆಯ ದಿನೇಶ್ ಹೊಳ್ಳ, 'ನಿಮ್ಮಲ್ಲಿ ಮಾವಿನಸಸಿಹೊಳೆ ಜಲಪಾತದ ಫೋಟೊ ಇದೆಯಾ' ಎಂದು ಕೇಳಿದಾಗ, 'ಇದೆ, ಆದರೆ ಹೆಚ್ಚು ನೀರಿರಲಿಲ್ಲ ಅಲ್ಲಿ. ಬೇಕಿದ್ದರೆ ಮತ್ತೊಮ್ಮೆ ಹೊಗೋಣ' ಎಂದಾಗ ಅವರು ಒಪ್ಪಿದರು. ಶನಿವಾರ ನಮಗೆ 'ಹಾಫ್ ಡೇ' ಆಗಿರುವುದು ಚಾರಣ/ಪ್ರಯಾಣ ಕಾರ್ಯಕ್ರಮಗಳಿಗೆ ಬಹಳ ಉಪಯುಕ್ತವಾಗುತ್ತದೆ. ಜುಲಾಯಿ ೩, ೨೦೦೪ ರಂದು ಮತ್ತೆ ಈ ಹಳ್ಳಿಯೆಡೆ ಹೊರಟೆ. ಈ ಬಾರಿ ಜೊತೆಯಲ್ಲಿ ದಿನೇಶ್ ಇದ್ದರು. ನಾವಿಬ್ಬರೂ ಮಂಗಳೂರಿನಿಂದ ಹೊರಟಾಗಲೇ ಮಧ್ಯಾಹ್ನ ೧.೩೦ ಆಗಿತ್ತು. ಮೂಡಬಿದ್ರೆಯಲ್ಲಿ ಟಯರ್ ಪಂಕ್ಚರ್ ಆಗಿ, ಸರಿ ಮಾಡಿಸಿ ಹೊರಟಾಗ ೩.೩೦. ರಭಸವಾಗಿ ಮಳೆ ಸುರಿಯುತ್ತಿದ್ದರಿಂದ ನಿಧಾನವಾಗಿ ಬೈಕನ್ನು ಚಲಾಯಿಸಬೇಕಾಯಿತು. ಹಳ್ಳಿ ತಲುಪಿದಾಗ ಸಂಜೆ ೬ ಆಗಿತ್ತು.


ಮತ್ತೊಮ್ಮೆ ಸತ್ಯೇಂದ್ರ ಹೆಗ್ಡೆ ನನ್ನನ್ನು ಬರಮಾಡಿಕೊಂಡರು. ಅಂತೂ ನನ್ನ ೩ನೇ ಭೇಟಿಯಲ್ಲಿ ಏನು ನೋಡಬೇಕಿತ್ತೋ ಅದು ಸಾಧ್ಯವಾಯಿತಲ್ಲಾ ಎಂದು ಅವರಿಗೆ ಖುಷಿ. ಮಾವಿನಸಸಿಹೊಳೆ ಜಲಪಾತ ಭೋರ್ಗರೆಯುತ್ತಿತ್ತು. ವಿದ್ಯುತ್ ಉತ್ಪಾದಿಸುವ ಪಂಪ್ ಹೌಸ್ ಬಳಿ ನಿಧಾನವಾಗಿ ಕೆಳಗಿಳಿದು, ರಭಸವಾಗಿ ಹರಿಯುತ್ತಿದ್ದ ಮಾವಿನಸಸಿಹೊಳೆಯಲ್ಲಿ ಕಾಲಿಟ್ಟೆವು. ತಂಪು ತಂಪು ತಂಪು. ಹಾಕಿದ್ದ ರೈನ್ ಕೋಟ್ ನ್ನು ಭೇದಿಸಿ ಚಳಿಗಾಳಿ ಮೈಯನ್ನು ಕೊರೆಯುತ್ತಿತ್ತು. ಈ ನೀರು ಇನ್ನಷ್ಟು ತಂಪಾಗಿದ್ದು, ನೀರಲ್ಲಿ ಹೆಜ್ಜೆಯಿಟ್ಟು ಮುನ್ನಡೆಯಲು ಕಷ್ಟವಾಗುತ್ತಿತ್ತು. ಮೇಲೆ ಸುಮಾರು ೪೦ಅಡಿಯಷ್ಟು ಎತ್ತರದಿಂದ ಧುಮುಕುವ ಮಾವಿನಸಸಿಹೊಳೆ ಜಲಪಾತ ನಂತರ ಇಳಿಜಾರಿನಲ್ಲಿ ರಭಸವಾಗಿ ಕೆಳಗೆ ಹರಿಯುತ್ತದೆ. ಈ ಇಳಿಜಾರನ್ನೂ ಸೇರಿಸಿದರೆ ಒಟ್ಟಾರೆ ಎತ್ತರ ಸುಮಾರು ೭೦ಅಡಿಯಷ್ಟು ಆಗಬಹುದು. ಸರಿಯಾಗಿ ಜಲಪಾತದ ಮುಂದೆ ನಿಂತರೆ ಅದೊಂದು ಮೋಹಕ ದೃಶ್ಯ. ಬೇಕಾದ ಫೋಟೋಗಳನ್ನು ಕ್ಲಿಕ್ಕಿಸಿ, ಅಲ್ಲೊಂದು ೧೫ನಿಮಿಷ ಕಳೆದು ಮರಳಿ ಹೆಗ್ಡೆಯವರ ಮನೆಗೆ ಬಂದೆವು.


ಆಗ ಹೆಗ್ಡೆಯವರು ಅವರ ಮನೆಯ ಮುಂದಿರುವ ಗುಡ್ಡದಲ್ಲಿ, ಕಾಡಿನ ಮರೆಯಲ್ಲಿ ಅಡಗಿರುವ ಮತ್ತೊಂದು ಜಲಪಾತವನ್ನು ತೋರಿಸಿದರು. ಒಂದು ಜಲಧಾರೆ ನೋಡಲು ಬಂದ ನಮಗೆ ಇದೊಂದು ಬೋನಸ್. ಈ ಜಲಪಾತದ ಹೆಸರು ಬಡಮನೆ ಅಬ್ಬಿ ಜಲಪಾತ ಎಂದು. ಬಡಮನೆ ಎಂಬ ಹಳ್ಳಿಯಿಂದ ಹರಿದು ಬರುವ ಹಳ್ಳದಿಂದ ಉಂಟಾಗಿರುವುದರಿಂದ ಈ ಜಲಪಾತಕ್ಕೆ ಆ ಹೆಸರು. ಅವರ ಮನೆಯಿಂದ ೫ನಿಮಿಷ ನಡೆದು, ೧೫ ನಿಮಿಷ ಕಠಿಣ ಏರುದಾರಿಯನ್ನು ಹತ್ತಿ, ಈ ಜಲಪಾತದ ಪಾರ್ಶ್ವಕ್ಕೆ ಬರಬಹುದು. ಸುಮಾರು ೬೦ಅಡಿ ಎತ್ತರವಿರುವ ಒಂದೇ ಜಿಗಿತದ ಜಲಧಾರೆ, ನಂತರ ಮುಂದೆ ೧೦೦ಅಡಿಗಳಷ್ಟು ಕೆಳಗೆ ಅಡ್ಡಾದಿಡ್ದಿಯಾಗಿ ಹರಿದು, ಮಾವಿನಸಸಿಹೊಳೆ ಜಲಪಾತದಿಂದ ಹರಿದು ಬರುವ ನೀರನ್ನು ಸೇರಿಕೊಳ್ಳುತ್ತದೆ. ಹಳ್ಳಿಯಿಂದ ಸುಮಾರು ಒಂದು ತಾಸು ನಡೆದರೆ ಬಂಗ್ರಬಲಿಗೆ ಎಂಬಲ್ಲಿ ಇನ್ನೊಂದು ಸಣ್ಣ ಜಲಪಾತವಿದೆ ಎಂದು ಹೆಗ್ಡೆಯವರು ತಿಳಿಸಿದಾಗ ನನಗಿನ್ನೂ ಸಂತೋಷವಾಯಿತು. ಅಂದು ಅದಾಗಲೇ ಕತ್ತಲಾಗುತ್ತಿದ್ದರಿಂದ 'ಮುಂದಿನ ಸಲ ಬಂದಾಗ ಕರೆದೊಯ್ಯುವೆ' ಎಂದು ನಮ್ಮನ್ನು ಬೀಳ್ಕೊಟ್ಟರು ಹೆಗ್ಡೆಯವರು.

ನಾವು ಹಳ್ಳಿಯಿಂದ ಹೊರಟಾಗ ೭.೧೫ ಆಗಿತ್ತು. ಘಾಟಿಯಲ್ಲಿ ದಟ್ಟವಾದ ಮಂಜು. ಏನೇನೂ ಕಾಣಿಸುತ್ತಿರಲಿಲ್ಲ. ರಸ್ತೆಯ ಅಂಚಿನಲ್ಲಿ ಬೆಳೆದಿರುವ ಹುಲ್ಲು ಮಾತ್ರ 'ಹೆಡ್ ಲೈಟ್' ಬೆಳಕಿನಲ್ಲಿ ಮುಂದಿನ ಚಕ್ರದ ಪಕ್ಕದಲ್ಲಿ ಮಾತ್ರ ಕಾಣಿಸುತ್ತಿತ್ತು. ಅದನ್ನೇ ಆಧಾರವಾಗಿಟ್ಟುಕೊಂಡು ಬಹಳ ನಿಧಾನವಾಗಿ ಬೈಕು ಚಲಾಯಿಸುತ್ತಾ ಬಂದೆವು. ೧೦ಕಿಮಿ ಕ್ರಮಿಸಲು ೪೦ ನಿಮಿಷ ಬೇಕಾದವು. ಹಾಗಿತ್ತು ಮಂಜಿನ ಹಿತವಾದ ಹಾವಳಿ. ಮಂಗಳೂರು ತಲುಪುವಷ್ಟರಲ್ಲಿ ಉಡುಪಿಗೆ ಕೊನೆಯ ಬಸ್ಸು ಹೊರಟಾಗಿರುತ್ತದೆ ಎಂದು, ಪಡುಬಿದ್ರೆ ಎಂಬಲ್ಲಿಗೆ ಬಂದಾಗ ೧೦.೩೦ ಆಗಿತ್ತು. ಇಲ್ಲಿಂದ ನಾನು ಬಸ್ಸಿನಲ್ಲಿ ಉಡುಪಿಗೆ ಬಂದರೆ ದಿನೇಶ್ ನನ್ನ ಬೈಕನ್ನು ಚಲಾಯಿಸಿ ಮಂಗಳೂರಿನೆಡೆ ತೆರಳಿದರು.

ಇದೊಂದು ಶಾಂತ ಮತ್ತು ಸುಂದರ ಹಳ್ಳಿ. ೨ ಗುಡ್ಡಗಳ ನಡುವೆ ಇರುವ ಈ ಹಳ್ಳಿಗೆ ದಾರಿ ಇರುವುದು ಬಲಬದಿಯ ಗುಡ್ಡದಿಂದ. ನಾಲ್ಕಾರು 'ಯು' ತಿರುವುಗಳನ್ನೊಳಗೊಂಡ ಈ ರಸ್ತೆಯನ್ನು ಹಳ್ಳಿಗರೇ ನಿರ್ಮಿಸಿಕೊಂಡಿದ್ದಾರೆ. ಯಾವಾಗಲೂ ಇರುವ ಮಂಜು, ನೀರಿನ ಸದ್ದು, ತಂಪಾದ ಗಾಳಿ, ೨ ಜಲಪಾತಗಳು, ಅನತಿ ದೂರದಲ್ಲಿ ದಟ್ಟವಾದ ಕಾಡು ಮತ್ತು ಯಾವಾಗಲೂ ನಗುನಗುತ್ತಾ ಸ್ವಾಗತಿಸುವ ಜನರು, ಇಷ್ಟೆಲ್ಲಾ ಇರುವ ಈ ಹಳ್ಳಿಗೆ ಸರಿಯಾದ ಹೆಸರೇ ಸಿಕ್ಕಿದೆ.

ಹಳ್ಳಿಗೆ ವಿದ್ಯುತ್ ಸಂಪರ್ಕ ಇಲ್ಲ. ಅದ್ದರಿಂದ ಹಳ್ಳಿಗರು ಮಾವಿನಸಸಿಹೊಳೆ ಜಲಪಾತ ಧುಮುಕುವಲ್ಲಿ ಸಣ್ಣ ಟರ್ಬೈನ್ ಒಂದನ್ನು ಹಾಕಿ ೩೦ ಮನೆಗಳಿಗಾಗುವಷ್ಟು ವಿದ್ಯುತ್ತನ್ನು ಉತ್ಪಾದಿಸುತ್ತಾರೆ. ಆದರೆ ಈ ವ್ಯವಸ್ಥೆ ನವೆಂಬರ್ ತಿಂಗಳವರೆಗೆ ಮಾತ್ರ ಕಾರ್ಯಮಾಡುತ್ತದೆ. ಆನಂತರ ನೀರಿನ ಹರಿವು ಕಡಿಮೆಯಾಗುವುದರಿಂದ ನಂತರದ ೬-೭ ತಿಂಗಳು ಮತ್ತೆ ಕತ್ತಲೆ.

ಹಳ್ಳಿಗೆ ದಾರಿ ಚಿಕ್ಕಮಗಳೂರು ಜಿಲ್ಲೆಯಿಂದ ಇದ್ದರೂ, ಅದು ಒಳಪಟ್ಟಿರುವುದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿಗೆ. ಘಟ್ಟದ ಕೆಳಗೆ ಬೆಳ್ತಂಗಡಿ ತಾಲೂಕಿನ ಕೊನೆಯ ಗ್ರಾಮವಾದ ದಿಡುಪೆಗೆ ಇಲ್ಲಿಂದ ಕೇವಲ ೯ ಕಿಮಿ ದೂರ. ಆದರೆ ಈ ದಾರಿಯಲ್ಲಿ ವಾಹನ ಓಡಾಡದು. ತಾಲೂಕು ಕೇಂದ್ರವಾದ ಬೆಳ್ತಂಗಡಿಗೆ ಬರಬೇಕಾದ್ದಲ್ಲಿ ಸುತ್ತುಬಳಸಿ, ೧೦೦ಕಿಮಿ ದೂರವನ್ನು ಕ್ರಮಿಸಬೇಕು. ದಿಡುಪೆ ಮೂಲಕವಾದರೆ ಕೇವಲ ೨೮ ಕಿಮಿ. ಈ ರಸ್ತೆಯನ್ನು, ಸರಿಪಡಿಸಬೇಕೆಂದು ಸರ್ಕಾರದ ಮುಂದಿಟ್ಟಿರುವ ಮನವಿ ಹಾಗೇ ಉಳಿದಿದೆ. ಈ ಕಡೆ ರಸ್ತೆ ಮಾಡಬಾರದೆಂದು ಅರಣ್ಯ ಇಲಾಖೆಯ ಕಟ್ಟಪ್ಪಣೆ.

ಕೊನೆಗೂ ಬೇಸತ್ತ ಜನರು, ಹಾರೆ, ಗುದ್ದಲಿ ಇತ್ಯಾದಿ ಸಲಕರಣೆಗಳನ್ನು ಹಿಡಿದು, ಗುಪ್ತ ಕಾರ್ಯಾಚರಣೆಯೊಂದರಲ್ಲಿ ೨-೩ ವಾರ, ಪ್ರತಿ ದಿನ ರಾತ್ರಿ ಈ ರಸ್ತೆಯನ್ನು ಸರಿ ಮಾಡುವ ಕಾಯಕಕ್ಕಿಳಿದರು. ಇದು ನಡೆದದ್ದು ಸುಮಾರು ಒಂದು ವರ್ಷದ ಹಿಂದೆ. ಈ ವಿಷಯವನ್ನು ಬಲೂ ಗುಪ್ತವಾಗಿರಿಸಲಾಗಿತ್ತು. ೩-೪ ವಾರಗಳಲ್ಲಿ ರಸ್ತೆ ರೆಡಿಯಾಯಿತು. ಅರಣ್ಯ ಇಲಾಖೆಗೆ ತಿಳಿದು ಅವರು ಓಡೋಡಿ ಬಂದು, ರಸ್ತೆ ನೋಡಿ ಗುಟುರು ಹಾಕಿದರಷ್ಟೇ ವಿನ: ಮತ್ತೇನೂ ಮಾಡಲಾಗಲಿಲ್ಲ ಅವರಿಂದ. ಹಳ್ಳಿಗರಲ್ಲಿ ಕೇಳಿದರೆ, 'ನಮಗೆ ಗೊತ್ತಿಲ್ಲ ರಸ್ತೆ ಯಾರು ಮಾಡಿದರೆಂದು' ಎಂಬ ನಿರ್ಲಿಪ್ತ ಉತ್ತರ. ಕೇಸು ಹಾಕೋಣವೆಂದರೆ ಯಾರ ಮೇಲೆ? ಮತ್ತು, '೮-೯ ಕಿಮಿ ರಸ್ತೆ ಮಾಡುತ್ತಿರಬೇಕಾದರೆ, ಈ ಅರಣ್ಯ ಇಲಾಖೆ ಏನು ಮಾಡುತ್ತಿತ್ತು? ಗಾಢ ನಿದ್ರೆಯಲ್ಲಿತ್ತೇ' ಎಂಬ ಪ್ರಶ್ನೆಗಳಿಗೆ ಉತ್ತರ ನೀಡಿ ಮುಜುಗರಕ್ಕೊಳಬೇಕಾಗುವ ಸಂಧಿಗ್ದ ಪರಿಸ್ಥಿತಿ! ಈಗ ಈ ರಸ್ತೆಯಿಂದ ಹಳ್ಳಿಗರು ಜೀಪ್, ಬೈಕುಗಳನ್ನು ಸಲೀಸಾಗಿ ಓಡಿಸಿ ದಿಡುಪೆ ಮೂಲಕ ಸುಲಭದಲ್ಲಿ ತಾಲೂಕು ಕೇಂದ್ರ ಬೆಳ್ತಂಗಡಿಗೆ ತೆರಳುತ್ತಾರೆ.

ಈ ಹಳ್ಳಿಗೆ ಮೊದಲು ಹೆಚ್ಚಿನವರು ಚಾರಣಕ್ಕೆಂದು ಬರುತ್ತಿರಲಿಲ್ಲ. ನಾನು ತೆರಳಿದ ನಂತರ, ಮಂಗಳೂರು ಯೂತ್ ಹಾಸ್ಟೆಲಿನ ೩ ಚಾರಣ ಕಾರ್ಯಕ್ರಮಗಳನ್ನು ಈ ಹಳ್ಳಿಗೆ, ಬಂಗ್ರಬಲಿಗೆ ಮತ್ತು ಹಿರಿಮರಿಗುಪ್ಪೆಗೆ ಆಯೋಜಿಸಲಾಗಿತ್ತು. ಈ ಚಾರಣಗಳಿಗೆ ಬಂದವರು ನಂತರ ಅವರಾಗಿಯೇ ಗುಂಪು ಕಟ್ಟಿಕೊಂಡು ಈ ಸ್ಥಳಗಳಿಗೆ ಹೋಗಿ ಬರಲು ಆರಂಭಿಸಿದರು. ಹಳ್ಳಿಯಿಂದ ಬಂಗ್ರಬಲಿಗೆ ದಾರಿಯಲ್ಲಿ ಸ್ವಲ್ಪ ದೂರ ಕಾಲಿಟ್ಟರೆ, ಅದು ಕುದುರೆಮುಖ ರಕ್ಷಿತಾರಣ್ಯಕ್ಕೆ ಒಳಪಟ್ಟಿರುವ ಜಾಗ. ಅದಲ್ಲದೇ ಹಳ್ಳಿಗೆ ಇಳಿಯುವಾಗ ಸಿಗುವ 'ಯು' ತಿರುವುಗಳಲ್ಲಿ ೨ ತಿರುವುಗಳು ಕುದುರೆಮುಖ ರಕ್ಷಿತಾರಣ್ಯದೊಳಗೇ ಇವೆ! ಎಲ್ಲಾಕಡೆ ಗೇಟುಗಳನ್ನು ಹಾಕಿ ರಕ್ಷಿತಾರಣ್ಯದೊಳಗೆ ಅಪ್ಪಣೆಯಿಲ್ಲದೆ ಯಾರಿಗೂ ಪ್ರವೇಶವಿಲ್ಲದಂತೆ ಮಾಡಿದ್ದ ಅರಣ್ಯ ಇಲಾಖೆಗೆ, ಈ ಹಳ್ಳಿಯ ಮುಖಾಂತರ ಇತ್ತೀಚೆಗೆ ಬಹಳಷ್ಟು ಚಾರಣ ಕುದುರೆಮುಖ ರಕ್ಷಿತಾರಣ್ಯದೊಳಗೆ ನಡೆಯುತ್ತಿದೆ ಎಂಬ ಮಾಹಿತಿ ದೊರಕಿತು.

ನಮ್ಮೊಲ್ಲೊಬ್ಬರಾದ ಗಣಪತಿ ಭಟ್ಟರು ತನ್ನ ಕಾಲೇಜಿನ ಮಕ್ಕಳನ್ನು ಕರಕೊಂಡು ಒಂದು ದಿನದ ಚಾರಣಕ್ಕೆ ಇಲ್ಲಿಗೆ ತೆರಳಿದರೆ, ಇಳಿಜಾರಿನ ದಾರಿ ಶುರುವಾಗುವಲ್ಲೇ ಅರಣ್ಯ ಇಲಾಖೆಯ ಗೇಟು ಮತ್ತು ಆ ಗೇಟನ್ನು ಕಾಯಲು ಇಬ್ಬರು ಸಿಬ್ಬಂದಿಗಳು! ಅಪ್ಪಣೆಯಿಲ್ಲದೆ ಒಳಗೆ ಪ್ರವೇಶವಿಲ್ಲ ಎಂಬ ನಾಟಕ ಬೇರೆ. ಮೊನ್ನೆ ಎಪ್ರಿಲ್ ೨೦೦೭ರ ಅದೊಂದು ರವಿವಾರ ಗೆಳೆಯರಾದ ರಮೇಶ್ ಕಾಮತ್ ಮತ್ತು ಸುಧೀರ್ ಕುಮಾರ್ ಸಂಸಾರ ಸಮೇತ ಆದಿತ್ಯವಾರ ಕಳೆಯಲೆಂದು ಕುದುರೆಮುಖಕ್ಕೆ ತೆರಳಿದ್ದರು. ಪರಿಚಯವಿದ್ದುದರಿಂದ ಹಳ್ಳಿಗೆ ತೆರಳಿ ಹೆಗಡೆಯವರನ್ನು ಭೇಟಿ ಮಾಡಿ ಬರೋಣ ಎಂದು ಸಿಹಿತಿಂಡಿ ಇತ್ಯಾದಿಗಳನ್ನು ಮಂಗಳೂರಿನಿಂದಲೇ ಖರೀದಿಸಿ ತೆರಳಿದ್ದರು. ಆಗ ಅಲ್ಲಿ ಗೇಟ್ ಇರಲಿಲ್ಲ! ಅಲ್ಲೇ ವಾಹನ ನಿಲ್ಲಿಸಿ ಇಳಿಜಾರಿನ ಹಾದಿಯಲ್ಲಿ ನಡೆಯುತ್ತಾ ಸಾಗುತ್ತಿರುವಾಗ, ಕೆಳಗೆ ಸತ್ಯೇಂದ್ರ ಹೆಗಡೆಯವರು ತಮ್ಮ ಮನೆಯ ಮೇಲೇರಿ ಹೆಂಚುಗಳನ್ನು ಸರಿಪಡಿಸುತ್ತಿರುವುದನ್ನು ಇವರು ನೋಡಿದ್ದಾರೆ. ಇವರು ಬರುತ್ತಿರುವುದನ್ನು ಕಂಡ ಹೆಗಡೆಯವರು ಅವಸರದಿಂದ ಕೆಳಗಿಳಿದು ಮನೆಯೊಳಗೆ ತೆರಳಿದ್ದನ್ನೂ ಇವರು ನೋಡಿದ್ದಾರೆ. ಮನೆಗೆ ತೆರಳಿದರೆ ಹೆಗಡೆಯವರ ಮಕ್ಕಳಿಬ್ಬರು 'ಅಪ್ಪ ಅಮ್ಮ ಇಬ್ಬರೂ ಇಲ್ಲ' ಎಂದು ಇವರು ಕೇಳುವ ಮೊದಲೇ ಹೇಳಿದ್ದಾರೆ.

ಬಹುಶ: ಅರಣ್ಯ ಇಲಾಖೆಯ ಗತ್ತಿನ ಅಧಿಕಾರಿಗಳು ಹೆಗಡೆಯವರಿಗೆ ಬಹಳ ಕಿರುಕುಳ ಕೊಟ್ಟಿರಬೇಕು. ಯಾರು ಬಂದಿರುವುದು, ಯಾಕೆ ಬಂದಿದ್ದರು, ನೀವ್ಯಾಕೆ ಅವರನ್ನು ಅಲ್ಲಿಲ್ಲಿ ಕರಕೊಂಡು ಜಾಗಗಳನ್ನು ತೋರಿಸುತ್ತಿದ್ದೀರಿ ...ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿ ಬಹಳ ಕಾಟ ಕೊಟ್ಟಿರಬೇಕು. ದೂರದಲ್ಲಿ ನನ್ನ ಬೈಕ್ ಕಂಡೊಡನೆ ಮನೆಯಿಂದ ಹೊರಬಂದು ಮಂದಹಾಸ ಬೀರುತ್ತಾ ಸ್ವಾಗತಿಸುತ್ತಿದ್ದ ಸತ್ಯೇಂದ್ರ ಹೆಗಡೆಯವರು, ತಾನು ಮನೆಯೊಳಗಿದ್ದೂ, ಮಕ್ಕಳಿಂದ 'ಇಲ್ಲ' ಎಂದು ಹೇಳಿಸಬೇಕಾದರೆ ಈ ಅರಣ್ಯ ಇಲಾಖೆಯ ದರಿದ್ರ ಸಿಬ್ಬಂದಿಗಳು ಅವರನ್ನು ಯಾವ ಪರಿ ಕಾಡಿರಬೇಡ.

ಈಗ ನಮ್ಮಲ್ಲಿ ಯಾರೂ ಈ ಹಳ್ಳಿಯೆಡೆ ಹೋಗುವ ಮಾತನ್ನಾಡುತ್ತಿಲ್ಲ. ನಮ್ಮಿಂದ ಹಳ್ಳಿಗರಿಗೆ ತೊಂದರೆಯುಂಟಾಗುವುದಾದರೆ ನಾವು ಅಲ್ಲಿಂದ ದೂರ ಉಳಿಯುವುದೇ ಒಳಿತು.

ಮಾಹಿತಿ: ಯು.ಬಿ.ರಾಜಲಕ್ಷ್ಮೀ

ಭಾನುವಾರ, ಅಕ್ಟೋಬರ್ 21, 2007

ಇನ್ನೆರಡು ಜಲಧಾರೆಗಳು


ಮನೆಯೊಂದರ ತೋಟದಲ್ಲಿ ೧೦ ನಿಮಿಷ ನಡೆದರೆ ಸುಂದರ ಜಲಪಾತದ ದರ್ಶನವಾಗುವುದು. ಸುಮಾರು ೧೨೫ ಆಡಿಯಷ್ಟು ಎತ್ತರದಿಂದ ಒಂದೇ ನೆಗೆತದಲ್ಲಿ ಧುಮುಕುವ ಈ ಜಲಪಾತದಲ್ಲಿ ಬೇಸಗೆಯಲ್ಲೂ ನೀರಿರುವುದು. ಜಲಪಾತವನ್ನು ಸಮೀಪದಿಂದ ನೋಡಬೇಕಿದ್ದಲ್ಲಿ ಹಳ್ಳವನ್ನು ಸಾವಕಾಶವಾಗಿ ಎಚ್ಚರಿಕೆಯಿಂದ ದಾಟಿ ಹೋಗಬೇಕು.

ಜಲಧಾರೆ ಇರುವ ಜಾಗಕ್ಕೆ ೩ ಕಿಮಿ ದಾರಿ ಕಚ್ಚಾ ರಸ್ತೆಯಾಗಿದ್ದು, ನಡೆದುಕೊಂಡು ಕ್ರಮಿಸುವುದೇ ಲೇಸು. ಸ್ವಲ್ಪವಾದರೂ ಚಾರಣ ಮಾಡಿದಂತಾಗುತ್ತದೆ. ಈ ದಾರಿಯಲ್ಲಿ ಸ್ವಲ್ಪ ದೂರ ಬೈಕ್ ಓಡಿಸಿದ ನಾವು ನಂತರ ಮನೆಯೊಂದರ ಬಳಿ ಬೈಕ್ ಇಟ್ಟು ಅಲ್ಲಿಂದ ಕಾಲ್ನಡಿಗೆಯಲ್ಲಿ ತೆರಳಿದೆವು. ಐದಾರು ಮನೆಗಳು ಒಂದೇ ಕಡೆ ಸುಂದರ ಪರಿಸರದಲ್ಲಿ ಕಾಣಬಂದಾಗ ಜಲಪಾತದ ದಾರಿ ಕೇಳಿದೆವು. ಇಲ್ಲಿ 'ಮರಾಠೆ ಮನೆ' ಎಂಬ ಹೆಸರಿನ ಮನೆಯೊಂದಿದೆ. ಅನುಮತಿ ಪಡೆದು ಇವರ ತೋಟದಲ್ಲಿ ಹತ್ತು ನಿಮಿಷ ನಡೆದು ಸುಂದರ ಆನಡ್ಕ ಜಲಪಾತದ ಬಳಿ ಬಂದೆವು. ಮರಾಠೆಯವರ ತೋಟದಲ್ಲಿ ನಡೆಯುತ್ತಿರುವಾಗ ಮೇಲೆ ಬಹಳ ಎತ್ತರದಲ್ಲಿ ಇದೇ ಹಳ್ಳ ಮತ್ತೆರಡು ಜಲಪಾತಗಳನ್ನು ಸೃಷ್ಟಿಸಿರುವುದು ಕಾಣಬರುವುದು.

ನೀರಿನ ಹರಿವು ಸಾಧಾರಣ ಮಟ್ಟದಲ್ಲಿದ್ದರಿಂದ ಹಳ್ಳವನ್ನು ದಾಟಿ ಜಲಪಾತದ ಮುಂದೆ ಬಂದು ಒಂದು ತಾಸು ವಿಶ್ರಮಿಸಿ ಪ್ರಕೃತಿಯ ಸೌಂದರ್ಯವನ್ನು ಮನಸಾರೆ ಆಸ್ವಾದಿಸಿದೆವು. ಹೆಚ್ಚು ಕಷ್ಟಪಡದೆ ಸುಂದರ ಜಲಪಾತವೊಂದನ್ನು ಸಂದರ್ಶಿಸಿ ಒಂದಷ್ಟು ಹೊತ್ತನ್ನು ಪ್ರಕೃತಿಯ ಮಡಿಲಲ್ಲಿ ನೀರಿಗೆ ಮೈಯೊಡ್ಡಿ ಕಳೆಯುವ ಇಚ್ಛೆಯಿದ್ದವರಿಗೆ ಈ ಜಲಪಾತ ಹೇಳಿ ಮಾಡಿಸಿದಂತಿದೆ. ಈ ಜಲಪಾತಕ್ಕೆ ಮತ್ತೊಂದು ಹೆಸರು ಕಡಮೆಗುಂಡಿ ಜಲಪಾತ ಎಂದು.


ಸಮೀಪದಲ್ಲೇ ಇದೆ ಇನ್ನೊಂದು ಜಲಧಾರೆ. ವಿಜಯ ಕರ್ನಾಟಕದಲ್ಲಿ ಈ ಜಲಧಾರೆಯ ಚಿತ್ರ ಬಂದಿತ್ತು. ದೇವಯ್ಯ ಗೌಡರ ಮನೆಯಿಂದ ಅವರ ತೋಟದಲ್ಲಿ ಒಂದೈದು ನಿಮಿಷ ನಡೆದರೆ ಈ ಜಲಧಾರೆ.

ಶಿವರಾಜಕುಮಾರನ ಯಾವುದೋ ಚಲನಚಿತ್ರದ ಚಿತ್ರೀಕರಣ ಈ ಜಲಧಾರೆಯ ಸಮೀಪ ನಡೆದಿದ್ದರಿಂದ ಅಲ್ಲಿವರೆಗೂ ರಸ್ತೆ ಮಾಡಲಾಗಿತ್ತು. ಈಗ ಆ ರಸ್ತೆಯನ್ನು ಗೌಡರು ಮುಚ್ಚಿದ್ದಾರೆ. ಬದಿಯಿಂದಲೇ ಮೇಲೇರಿ ಜಲಧಾರೆಯ ಮೇಲ್ಭಾಗಕ್ಕೆ ತಲುಪಬಹುದು. ಇದು ೨ ಹಂತಗಳುಳ್ಳ ಸುಮಾರು ೬೫-೭೦ ಅಡಿಯಷ್ಟೆತ್ತರವಿರುವ ಜಲಧಾರೆ. ದೊಡ್ಡ ಗಾತ್ರದ ಮೀನುಗಳು ಈ ಜಲಧಾರೆಯ ಗುಂಡಿಯಲ್ಲಿ ಅರಾಮವಾಗಿ ಈಜಾಡಿಕೊಂಡಿವೆ. ಮನಸಾರೆ ಜಲಕ್ರೀಡೆಯಾಡಬಹುದು ಇಲ್ಲಿ.

'ಎರ್ಮಾಯಿ' ಎಂಬ ಹೆಸರು ಬರಲು ಒಂದು ಕಾರಣವಿದೆ. ಬಹಳ ಹಿಂದೆ ಒಂದು ಎತ್ತು (ತುಳು ಭಾಷೆಯಲ್ಲಿ 'ಎರು') ಇಲ್ಲಿ ಕಣ್ಮರೆ (ತುಳು ಭಾಷೆಯಲ್ಲಿ 'ಮಾಯಿ') ಆಗಿತ್ತು. ಹಾಗೆ 'ಎರ್ಮಾಯಿ ಎಂಬ ಹೆಸರು. ಏಳುವರೆ ಹಳ್ಳ ಎಂಬ ವಿಚಿತ್ರ ಹೆಸರು ಈ ಹಳ್ಳಕ್ಕೆ. ಕಡ್ತಕುಮೇರು ಶ್ರೇಣಿಯ ಬೆಟ್ಟ ಗುಡ್ಡಗಳಿಂದ ಏಳು ಹಳ್ಳಗಳು ಕೆಳಗೆ ಹರಿದು ಬಂದು ಜತೆಗೂಡಿ, ಅವುಗಳೊಂದಿಗೆ ಒಂದು ಸಣ್ಣ ಹಳ್ಳವೂ ಜತೆಗೂಡಿ ಈ ಹಳ್ಳ ನಿರ್ಮಿತವಾಗಿರುವುದರಿಂದ 'ಏಳುವರೆ ಹಳ್ಳ' ಎಂಬ ಹೆಸರು.

ಭಾನುವಾರ, ಅಕ್ಟೋಬರ್ 14, 2007

ಎರಡು ಜಲಧಾರೆಗಳಿಗೆ ಚಾರಣ


ದೂರದಲ್ಲಿ ಎರಡು ಗುಡ್ಡಗಳು ಸಂಧಿಸುವಲ್ಲಿ ಜಲಧಾರೆಯೊಂದು ಧುಮುಕುವುದನ್ನು ಈ ಸ್ಥಳಕ್ಕೆ ನನ್ನ ಪ್ರಥಮ ಭೇಟಿಯಿಂದಲೇ ನೋಡುತ್ತಿದ್ದೆ. ನನಗೆ ಅದೊಂದು ಅನಾಮಿಕ ಜಲಧಾರೆಯಾಗಿತ್ತು. ಅದರ ಹೆಸರು ಗೊತ್ತಿರಲಿಲ್ಲ, ಎಲ್ಲೂ ಅದರ ಬಗ್ಗೆ ಓದಿರಲಿಲ್ಲ. ೨೦೦೭ ಅಗೋಸ್ಟ್ ತಿಂಗಳ ಉಡುಪಿ ಯೂತ್ ಹಾಸ್ಟೆಲ್ ಮೀಟಿಂಗು ನಡೆದಿತ್ತು. ಮೀಟಿಂಗಿಗೆ ನಾನು ಗೈರುಹಾಜರಾಗಿದ್ದೆ. ಹೊಸ ತಾಣಕ್ಕೆ ಹೋಗುವ ಬಗ್ಗೆ ಫೋನಿನಲ್ಲೇ ಚರ್ಚಿಸಲಾಯಿತು. ಈ ಜಲಧಾರೆಯ ನೆನಪಾಗಿ ಅಲ್ಲಿಗೆ ತೆರಳುವ ಪ್ರಸ್ತಾಪ ಮಾಡಿದೆ. ಹಾಗೇ ಸಮಯವಿದ್ದಲ್ಲಿ ಸಮೀಪವಿರುವ ಇನ್ನೊಂದು ಜಲಧಾರೆಗೂ ಹೋಗಿ ಬರೋಣವೆಂದಾಗ ಎಲ್ಲರೂ 'ಜೈ' ಎಂದುಬಿಟ್ಟರು.

ನಮ್ಮ ಅಸಾಮಾನ್ಯ ಲೀಡರ್ ಶ್ರೀ ಸೂರ್ಯನಾರಾಯಣ ಅಡಿಗರ ನೇತೃತ್ವದಲ್ಲಿ ೨೦೦೭ ಅಗೋಸ್ಟ್ ೧೮ರ ಶನಿವಾರ ನಾವು ಇಲ್ಲಿ ತಲುಪಿದಾಗ ಸಂಜೆ ೫.೪೫ ಆಗಿತ್ತು. ವಾಹನದಿಂದ ಇಳಿದ ಕೂಡಲೇ ತಮ್ಮ ಶಿಷ್ಯ ರಾಕೇಶ್ 'ಜಿರಾಫೆ' ಹೊಳ್ಳನೊಂದಿಗೆ ಅಡಿಗರು ೨ ಕಿ.ಮಿ ದೂರವಿರುವ ರಾತ್ರಿ ಉಳಿದುಕೊಳ್ಳುವ ಸ್ಥಳದತ್ತ ವೇಗವಾಗಿ ಹೆಜ್ಜೆ ಹಾಕಿದರು. ಉಳಿದವರು ತಲುಪುವಷ್ಟರಲ್ಲಿ ಚಹಾ ಮತ್ತು ತಿಂಡಿ ರೆಡಿಯಾಗಿತ್ತು! ದೇವಸ್ಥಾನದ ಬಳಿ ಇರುವ ಜಲಧಾರೆಯಲ್ಲಿ ಮೀಯಲು ಕೆಲವರು ತೆರಳಿದರೆ, ಅಡಿಗರು ರಾತ್ರಿಯ ಊಟದ ತಯಾರಿ ಮಾಡತೊಡಗಿದರು. ಈ ಅಡಿಗರು ಅಡಿಗೆ ಮಾಡುವುದರಲ್ಲಿ ಎತ್ತಿದ ಕೈ. ಒಬ್ಬರೇ ಪಾದರಸದಂತೆ ಅತ್ತಿತ್ತ ಓಡಾಡುತ್ತ ಅಡಿಗೆ ತಯಾರಿಯಲ್ಲಿ ತೊಡಗಿಕೊಳ್ಳುತ್ತಾರೆ.

ಸಾಮಾನ್ಯವಾಗಿ ಸರಾಸರಿ ೨೫ ಜನರಿಗೆ ಎರಡು ಊಟ ಮತ್ತು ೨ ಉಪಹಾರಗಳಿಗಾಗುವಷ್ಟು ಅಡಿಗೆಯ ವಸ್ತುಗಳನ್ನು ಹಲವಾರು ಸಣ್ಣ ಸಣ್ಣ ಪೊಟ್ಟಣಗಳಲ್ಲಿ ತಮ್ಮ ಮನೆಯಿಂದಲೇ ಶ್ರೀ ಅಡಿಗರು ಕಟ್ಟಿಕೊಂಡು ಬಂದಿರುತ್ತಾರೆ. ಎರಡು ದಿನಗಳ ಮಟ್ಟಿಗಾದರೂ ಕೆಡದೆ ಇರುವಂತಹ ಅದ್ಭುತ ರುಚಿಯ ಪಲ್ಯವನ್ನು ಮನೆಯಲ್ಲೇ ಮಾಡಿ, ಡಬ್ಬಿಯೊಂದರಲ್ಲಿ ತುಂಬಿಸಿ ತರುತ್ತಾರೆ. ಈ ಪಲ್ಯದ ರುಚಿ ಮಾತ್ರ ಅಹಾಆಆಆಆ! ಎಲ್ಲರೂ ಮತ್ತೆ ಮತ್ತೆ ಬಡಿಸಿ ತಿನ್ನುವುದನ್ನೊಮ್ಮೆ ನೋಡಬೇಕು. ಹೆಚ್ಚಾಗಿ ರಾತ್ರಿಗೆ ಭರ್ಜರಿ ಊಟದ ತಯಾರಿ, ಬೆಳಗ್ಗೆ ಗಂಜಿ ಮತ್ತು ಮಧ್ಯಾಹ್ನಕ್ಕೆ ಚಿತ್ರಾನ್ನ ಅಥವಾ ಪಲಾವ್ ಮಾಡುವುದು ಅಡಿಗಾ ಸ್ಟೈಲ್. ಇದೆಲ್ಲಾ ಈ ಹಿರಿಯರ ನಿಸ್ವಾರ್ಥ ಸೇವೆ. ಊಟ, ತಿಂಡಿ, ಚಹಾ ಇವುಗಳಿಗೆಲ್ಲಾ ಒಂದು ಪೈಸೆಯನ್ನೂ ಅಡಿಗರು ತಗೊಳ್ಳುವುದಿಲ್ಲ. ಎಳಗ್ಗಿನ ಜಾವ ೪ ಗಂಟೆಗೇ ಎದ್ದು ಅಡಿಗರು ಗಂಜಿ ಮತ್ತು ಕಟ್ಟಿಕೊಂಡು ಒಯ್ಯಬೇಕಾಗಿದ್ದ ಅಪರಾಹ್ನದ ಊಟ - ಚಿತ್ರಾನ್ನದ ತಯಾರಿಯನ್ನು ಶುರುಮಾಡಿಯಾಗಿತ್ತು. ಪಾತ್ರೆಯೊಂದರಲ್ಲಿ ಚಿತ್ರಾನ್ನವನ್ನು ಚೆನ್ನಾಗಿ 'ಪ್ಯಾಕ್' ಮಾಡಿ ಆ ಅನಾಮಿಕ ಜಲಧಾರೆಯತ್ತ ಹೊರಟೆವು.

ಆ ದಾರಿಯಾಗಿ ಸಿಗುವ ಕೊನೆಯ ಮನೆಯ ಬಳಿ ಪೋರನೊಬ್ಬ ಕಾಣಸಿಕ್ಕಿದ. ಅವನಲ್ಲಿ ಆ ಜಲಧಾರೆಯ ಬಗ್ಗೆ ಕೇಳಿದರೆ 'ನಾನು ಈ ಊರಿನವನಲ್ಲ. ನನ್ನ ಮಾಮನನ್ನು ಕೇಳಿ' ಎಂದು ತನ್ನ ಮಾಮನನ್ನು ಕರೆದ. ಸುಂದರ ಯುವಕನೊಬ್ಬ ನನ್ನೆಡೆಗೆ ಬರಲು ಆತನಲ್ಲಿ ಈ ಜಲಧಾರೆಯ ಬಗ್ಗೆ ಕೇಳಿದೆ. ತಾನು ಈಗ ಸಂತೆಗೆ ಹೊರಟಿರುವುದಾಗಿಯೂ, ಆದ್ದರಿಂದ ಮಾರ್ಗದರ್ಶಿಯಾಗಿ ಬರಲಾಗುವುದಿಲ್ಲವೆಂದೂ ತನ್ನ ಅಸಹಾಯಕತೆಯನ್ನು ಹೇಳಿಕೊಂಡ. ಆತನ ಹೆಸರು ಗಣಪತಿ. ಮತ್ತೆ ನಾನು ಪರಿಪರಿಯಾಗಿ ವಿನಂತಿಸಿ, 'ಕಾಡಿನಲ್ಲಿ ಸ್ವಲ್ಪ ದೂರದವರೆಗಾದರೂ ಬಂದು ದಾರಿ ತೋರಿಸಿದರೆ ನಂತರ ನಾವೇ ಹೇಗಾದರೂ ಮಾಡಿ ಜಲಧಾರೆಯನ್ನು ಹುಡುಕಿಕೊಳ್ಳುತ್ತೇವೆ. ದೂರದಿಂದ ನಿಮ್ಮೂರಿನ ಈ ಜಲಧಾರೆಯನ್ನು ನೋಡಲು ಬಂದಿದ್ದೇವೆ' ಎಂದಾಗ, ಗಣಪತಿ ಒಪ್ಪಿಕೊಂಡು, ಕತ್ತಿಯೊಂದನ್ನೆತ್ತಿಕೊಂಡು ಮುನ್ನಡೆದರು. ಅವರೊಂದಿಗೆ ಆ ಪೋರನೂ ಬಂದ. ಈತನ ಹೆಸರು ಸಂತೋಷ.

ಗಣಪತಿ ಇಲ್ಲಿಗೆ ಬಂದು ನೆಲೆಸಿ ೧೫ ವರ್ಷಗಳಾದವಂತೆ. ಆದರೆ ಈ ಜಲಧಾರೆಯನ್ನು ನೋಡಲು ಈವರೆಗೆ ಯಾರೂ ಬಂದಿಲ್ಲವಂತೆ. ನಾವೇ ಮೊದಲಿಗರಂತೆ. ಈ ಮಾತನ್ನು ನಾನು ನಂಬದಿದ್ದರೂ, ಒಂದು ಕ್ಷಣ ಇದ್ದರೂ ಇರಬಹುದೆಂದು ಯೋಚಿಸಿ ಸಂತೋಷವೆನಿಸಿತು. ಕಾಡಿನಲ್ಲಿ ಅರ್ಧ ಗಂಟೆ ನಮ್ಮೊಂದಿಗೆ ಗಣಪತಿ ದಾರಿ ತೋರಿಸುತ್ತಾ ಮುನ್ನಡೆದರು. ಅವರನ್ನು ಬರುವಂತೆ ಕೇಳಿಕೊಂಡಿದ್ದು ಒಳ್ಳೆಯದೇ ಆಯಿತು. ದಟ್ಟ ಕಾಡಿನಲ್ಲಿ ದಾರಿಯೇ ಇರಲಿಲ್ಲ. ಮರಗಳ ನಡುವೆ ನುಸುಳಿಕೊಂಡು, ಬಂಡೆಗಳನ್ನು ಏರಿ, ಕೊರಕಲನ್ನು ಇಳಿದು ಹತ್ತಿ ಒಂದೆಡೆ ಬಂದಾಗ ಗಣಪತಿ, 'ನಾನಿಲ್ಲಿಂದ ಹಿಂತಿರುಗುತ್ತೇನೆ' ಎಂದಾಗ ನನಗೆ ದಿಗಿಲಾಯಿತು. ಮುಂದೆ ಕಡಿದಾದ ಏರು. ಒಂದೊಂದಕ್ಕೆ ತಾಗಿಕೊಂಡೇ ಇದ್ದ ಮರಗಳು. ದೊಡ್ಡ ಗಾತ್ರದ ಬಳ್ಳಿಗಳು. ಹನಿಹನಿಯಾಗಿ ಎಲೆಗಳ ನಡುವಿನಿಂದ ತನ್ನದೇ ಆದ ಗತ್ತಿನಲ್ಲಿ ಧರೆಗಿಳಿಯುತ್ತಿದ್ದ ಜಿಟಿ ಜಿಟಿ ಮಳೆಯ ನೀರು. ತಮ್ಮಲ್ಲೇ ಅದೇನೋ ಪಿಸುಗುಟ್ಟುತ್ತಿರುವಂತೆ ಕಾಣುತ್ತಿದ್ದ ಮಳೆಯಲ್ಲಿ ಮಿಂದಿದ್ದ ವೃಕ್ಷಗಳು. ನೆಲವನ್ನು ಮರೆಮಾಚಿದ್ದ ಒದ್ದೆಯಾಗಿದ್ದ ಕಪ್ಪು ತರಗೆಲೆಗಳು. ಕತ್ತಲೆಯ ವಾತಾವರಣ ಮತ್ತು ಅದಕ್ಕೆ ತಕ್ಕುದಾಗಿ ಮಳೆಯ ಶಬ್ದ.


'ಇನ್ನೇನು ದೂರವಿಲ್ಲ. ಹೀಗೆ ಮೇಲಕ್ಕೇರಿ, ಎಡಕ್ಕೆ ಮತ್ತೆ ಮೇಲಕ್ಕೇರಿ, ಬಲಕ್ಕೆ ಸ್ವಲ್ಪ ದೂರ ನಡೆದು ಕೆಳಗಿಳಿದರಾಯಿತು', ಎಂದು ಗಣಪತಿ ಹಿಂತಿರುಗಿದರು. ಸಂತೋಷ ನಮ್ಮೊಂದಿಗೆ ಮುನ್ನಡೆದ. ಆತನೂ ನಮ್ಮಂತೆ ಮೊದಲ ಬಾರಿ ಇಲ್ಲಿಗೆ ಬರುತ್ತಿದ್ದ. ಗಣಪತಿ ಅಂದಂತೆ ಅಲ್ಲಲ್ಲಿ ಮೇಲೇರಿ, ಅಚೀಚೆ ನಡೆಯುತ್ತಾ ಮುನ್ನಡೆದೆವು. ಏರುದಾರಿಯಲ್ಲಿ, ನೆಲವೆಲ್ಲಾ ಒದ್ದೆಯಾಗಿದ್ದರಿಂದ ಜಾರುತ್ತಿತ್ತು. ಜಾರಿ ಬೀಳದವರಿಲ್ಲ ನಮ್ಮಲ್ಲಿ. ಗೊತ್ತಿಲ್ಲದ ಕಾಡಿನ ಹಾದಿಯಲ್ಲಿ ಹಾಗೆ ಮುನ್ನಡೆದೆವು. ಕೆಲವರಂತೂ ಹಲ್ಲಿಗಳಂತೆ ಏರುದಾರಿಯಲ್ಲಿ ಮೇಲಕ್ಕೆ ಬರುತ್ತಿದ್ದರು. ಆಗಾಗ ಜಾರಿ ಕೆಳಗೆ ಹೋಗುತ್ತಿದ್ದರೂ, ಪಟ್ಟು ಬಿಡದೆ ಮತ್ತೆ ಮೇಲೆ ಬರುತ್ತಿದ್ದರು. ಬಟ್ಟೆಯನ್ನೆಲ್ಲಾ ಕಪ್ಪು ಮಣ್ಣು ಮೆತ್ತಿಕೊಂಡಿತ್ತು.

ಏರುಹಾದಿ ಮುಗಿದ ಬಳಿಕ ಒಂದೆರಡು ನಿಮಿಷ ಸಮತಟ್ಟಾದ ಹಾದಿಯಲ್ಲಿ ನಡೆದ ಬಳಿಕ ಇಳಿಜಾರು. ಇಳಿಜಾರಿನ ಕೊನೆಯಲ್ಲಿ ಕಾಣುತ್ತಿತ್ತು ಜಲಧಾರೆ. 'ಅಬ್ಬಾ. ಅಂತೂ ಸಿಕ್ಕಿತು' ಎಂದುಕೊಂಡೆ. ಇಳಿಜಾರಿನ ಹಾದಿ ಕಷ್ಟಕರವಾಗಿತ್ತು. ಹೆಜ್ಜೆ ತಪ್ಪಿದರೆ ಉರುಳಿ ಬೀಳುವ ಅಪಾಯ. ಮರಗಳೆಡೆಯಿಂದ ಅಸ್ಪಷ್ಟವಾಗಿ ಗೋಚರಿಸುತ್ತಿತ್ತು ಜಲಧಾರೆ. ಕೆಳಗೆ ತಲುಪಿದಾಗ ಉಂಟಾದ ಸಂತೋಷ ವರ್ಣಿಸಲಸಾಧ್ಯ. ಬರೀ ೫೦ ಅಡಿ ಎತ್ತರವಿರುವ ಜಲಧಾರೆಯಾದರೂ ಚಾರಣದ ಹಾದಿ ಅತ್ಯುತ್ತಮವಾಗಿತ್ತು. ಹಾಗೆ ಮುಂದೆ ಈ ಜಲಧಾರೆ ಇನ್ನೆರಡು ಹಂತಗಳನ್ನು ಹೊಂದಿದೆ. ದಟ್ಟವಾದ ಕಾಡಿನ ನಡುವೆ ಸಣ್ಣ ತೆರೆದ ಜಾಗವೊಂದರಲ್ಲಿ ತನ್ನಷ್ಟಕ್ಕೆ, ಯಾರ ಗೋಜಿಗೂ ಹೋಗದೆ, ಯಾರ ಕಣ್ಣಿಗೂ ಬೀಳದೆ, ಲಜ್ಜಾವತಿಯಾಗಿ ಧುಮುಕುತ್ತಿರುವ ಈ ಜಲಧಾರೆಯನ್ನು ಕಣ್ತುಂಬಾ ನೋಡಿ ಆನಂದಿಸಿದೆ.


೯೦ ನಿಮಿಷದಲ್ಲಿ ಮರಳಿ ಗಣಪತಿಯವರ ಮನೆ ಬಳಿ ಬಂದಾಗ, ಅವರಿನ್ನೂ ಸಂತೆಗೆ ಹೊರಟಿರಲಿಲ್ಲ. ಈ ಜಲಧಾರೆಗೆ 'ಕಲ್ಲುಶಂಖ' ಜಲಧಾರೆ ಎನ್ನುತ್ತಾರೆಂದೂ, ಜಲಧಾರೆಗಿಂತ ಸ್ವಲ್ಪ ಮೇಲೆ ಸರಳಾ ನದಿಯ ಉಗಮವಾಗುತ್ತದೆಂದೂ ತಿಳಿಸಿದರು. ಕಲ್ಲುಶಂಖ ಎಂಬ ಹೆಸರು ಯಾಕೆ ಬಂತು ಎಂಬುದು ಅವರಿಗೆ ಗೊತ್ತಿರಲಿಲ್ಲ.

ಗಣಪತಿಯವರು ನಮ್ಮನ್ನು ಕಲ್ಲುಶಂಖ ಜಲಧಾರೆಯೆಡೆಗೆ ಕರೆದೊಯ್ಯುತ್ತಿರುವಾಗ ಜೊತೆಗೆ ಬಂದಿದ್ದ ಸಂತೋಷನೊಂದಿಗೆ ಮಾತಿಗಿಳಿದಾಗ ಆತ ೬ನೇ ತರಗತಿ ಓದುತ್ತಿದ್ದಾನೆಂದೂ, ಊರು ಬಿಳಚಿಗೋಡು ಎಂದೂ, ಇಲ್ಲಿ ತನ್ನ ಮಾಮನ ಮನೆಗೆ ಮುನ್ನಾ ದಿನ ಬಂದಿದ್ದು, ಮರುದಿನ ತನ್ನೂರಿಗೆ ಮರಳಲಿದ್ದಾನೆಂದೂ ತಿಳಿಯಿತು. ಸಂತೋಷನೊಂದಿಗೆ ಹಾಗೆ ಮಾತು ಮುಂದುವರಿಸಿ, 'ಈ ಬಿಳಚಿಗೋಡು ಎಲ್ಲಿ ಬರುತ್ತೆ?' ಎಂದು ಕೇಳಲು, ಆತ 'ಕಟ್ಟಿನಕಾರು ಬಳಿ' ಎಂದಾಗ ನನ್ನ ಕಿವಿಗಳು ನೆಟ್ಟಗಾದವು. ಯಾಕೆಂದರೆ ನಾವು ನೋಡಬೇಕೆಂದಿದ್ದ ಮತ್ತೊಂದು ಜಲಧಾರೆ ಇರುವುದು ಈ ಕಟ್ಟಿನಕಾರು ಬಳಿಯೇ!

'ಕಟ್ಟಿನಕಾರಿಗೆ ಹೋಗಿದ್ದೀಯಾ' ಎಂದು ಕೇಳಿದಾಗ, 'ದಿನಾಲೂ ಹೋಗ್ತಿರ್ತೀನಿ. ಅಲ್ಲೇ ನಾನು ಶಾಲೆಗೆ ಹೋಗೋದು' ಎಂದುಬಿಟ್ಟ. ನನ್ನ ಮುಂದಿನ ಪ್ರಶ್ನೆಗೆ ಈತ 'ಹೌದು' ಎಂದು ಉತ್ತರ ಕೊಟ್ಟುಬಿಟ್ಟರೆ ಈತನನ್ನೇ ಮಾರ್ಗದರ್ಶಿಯನ್ನಾಗಿ ಮಾಡಿ ಗೂದನಗುಂಡಿಗೆ ಹೋಗುವುದು ಎಂದು ಮನದಲ್ಲೇ ನಿರ್ಧರಿಸಿ ಪ್ರಶ್ನೆ ಕೇಳಿದೆ.
'ಅಲ್ಲಿರುವ ಜಲಧಾರೆ ಗೊತ್ತಾ?'.
'ಹೋಓಓಓಓಓಓ.... ಗೊತ್ತು. ಹೋಗಿದ್ದೀನಿ ಕೂಡಾ'.
'ದಾರಿ ನೆನಪಿದೆಯಾ?'
'ಹೌದು, ರಸ್ತೆ ಇದೆ . ನಂತರ ನದಿಗುಂಟ ಹೋದ್ರಾತು'.
'ಹಾಗಿದ್ರೆ ನಂಜೊತೆ ಬಂದ್ಬಿಡು. ಜಲಧಾರೆ ನೋಡಿ ನಂತ್ರ ಬಿಳಚಿಗೋಡ್ನಲ್ಲಿ ನಿನ್ನ ಇಳಿಸ್ತೀವಿ' ಎಂದಾಗ ಹುಡ್ಗ ಸುಮ್ನಾದ. ನಂತರ ನಾನೂ ಸುಮ್ಮನಾದೆ. ನಮಗೆ ಅದಾಗಲೇ ನಂತರದ ಜಲಧಾರೆಗೆ 'ಗೈಡ್' ಸಿಕ್ಕ ವಿಷಯವನ್ನು ಅಡಿಗರಿಗೆ ತಿಳಿಸಿ, 'ಅವನನ್ನು ಅವನ ಮನೆಯವರ ಒಪ್ಪಿಗೆ ಪಡೆದು ಹೊರಡಿಸುವ ಜವಾಬ್ದಾರಿ ನಿಮ್ಮದು' ಎಂದು ಅಡಿಗರಲ್ಲಿ ಹೇಳಿದೆ.

ಅಡಿಗರು ತಮ್ಮ 'ಮಾಸ್ತರಿಕೆ'ಯ ದಿನಗಳ ಅನುಭವಗಳನ್ನು ಬಳಸಿ ಸಂತೋಷನನ್ನೂ ಅವನ ಮಾಮನನ್ನೂ ಒಪ್ಪಿಸಿ, ಅವನನ್ನು ಕರೆತಂದರು. ಕಟ್ಟಿನಕಾರು ತಲುಪಿದಾಗ ೧೨.೩೦ ಆಗಿತ್ತು. ಅಲ್ಲಿಂದ ಪಡುಬೀಡು ಎಂಬಲ್ಲಿಗೆ ತೆರಳುವ ಹಾದಿಯಲ್ಲಿ ೪ ಕಿಮಿ ಕ್ರಮಿಸಿದ ಬಳಿಕ ವಾಹನ ನಿಲ್ಲಿಸುವಂತೆ ನಮ್ಮ ಯುವ ಗೈಡ್ ಸೂಚಿಸಿದ. ಎಲ್ಲಾ ಕಡೆ ಹಸಿರು ತುಂಬಿ ತುಳುಕುತ್ತಿದ್ದ ದಾರಿಯಲ್ಲಿ ಸಂತೋಷ ನಮ್ಮನ್ನು ಕರೆದೊಯ್ಯತೊಡಗಿದ್ದ. ಆಹ್ಲಾದಕರವಾದ ನಡಿಗೆಯಾಗಿತ್ತು. ಅಲ್ಲಲ್ಲಿ ಪುಟ್ಟ ಪುಟ್ಟ ನೀರಿನ ಝರಿಗಳು ದಾರಿಯ ಬದಿಯಲ್ಲಿ ಬಳುಕುತ್ತಾ ಹರಿಯತೊಡಗಿದ್ದವು. ಕಲ್ಲುಶಂಖದ ದಣಿವಿನ ದಾರಿಯ ನಂತರ ಈ ಹಸಿರಿನ ದಾರಿಯನ್ನು ತುಂಬಾ ಮೆಚ್ಚಿಕೊಂಡೆ. ಸುಮಾರು ಅರ್ಧ ಗಂಟೆಯ ನಡಿಗೆಯ ಬಳಿಕ ಒಂದೆಡೆ ಕುರುಚಲು ಸಸ್ಯಗಳು 'ತಾವು ರಸ್ತೆ ತಡೆ ನಡೆಸಿದ್ದೇವೆ' ಎಂಬಂತೆ ರಸ್ತೆಯನ್ನು ಸುಮಾರು ೫೦ ಮೀಟರುಗಳಷ್ಟು ದೂರದವರೆಗೆ ಸಂಪೂರ್ಣವಾಗಿ ಆವರಿಸಿಕೊಂಡಿದ್ದವು. ಈ ಅಂತರದಲ್ಲಿದ್ದಷ್ಟು ಇಂಬಳಗಳ ಸಾಂದ್ರತೆಯನ್ನು ಬೇರೆಲ್ಲೂ ನಾನು ಕಂಡಿಲ್ಲ. ೫೦ ಮೀಟರ್ ನಡೆದು ಆ ಸಸ್ಯರಾಶಿಯಿಂದ ಹೊರಬರುವಷ್ಟರಲ್ಲಿ ಎಲ್ಲರ ಕಾಲ ಮೇಲೂ ಏಳೆಂಟು ಇಂಬಳಗಳು!


ನಂತರ ಒಂಥರಾ ಕತ್ತಲ ದಾರಿ. ರಸ್ತೆ ಹಾಗೆ ಅಂಕುಡೊಂಕಾಗಿ ಮುಂದುವರಿದಿತ್ತು. ಕಾಡಿನ 'ಕಪ್ಪು'ತನ ಅದುವರೆಗಿದ್ದ ಹಸಿರನ್ನು ಮರೆಮಾಚಿತ್ತು. ಎಲ್ಲೆಡೆ ವಿಜೃಂಭಿಸುತ್ತಿತ್ತು ಕಪ್ಪು ಬಣ್ಣ. ರಸ್ತೆಯ ಎರಡೂ ಬದಿಗಳಲ್ಲಿದ್ದ ಮರಗಳು, ರಸ್ತೆಯ ಮೇಲೆ ಉದುರಿದ್ದ ತರಗೆಲೆಗಳು, ಅಲ್ಲಲ್ಲಿ ಉರುಳಿಬಿದ್ದಿದ್ದ ಮರದ ಗೆಲ್ಲುಗಳು, ಆಗಸದಲ್ಲಿ ಮೂಡಿದ್ದ ಕರಿಮೋಡಗಳು, ಹೀಗೆ ಎಲ್ಲವೂ ಕಪ್ಪು. ಅಳಿದುಳಿದಿದ್ದ ಅಲ್ಪ ಸ್ವಲ್ಪ ಬೆಳಕನ್ನು ಕೂಡಾ ತಡೆಹಿಡಿದ ದಟ್ಟ ಕಾಡು ಕತ್ತಲ ಅನುಭವವನ್ನು ಮತ್ತಷ್ಟು ಹೆಚ್ಚಿಸಿತ್ತು. ನಿಧಾನವಾಗಿ ಹನಿಹನಿಯಾಗಿ ಬೀಳುತ್ತಿದ್ದ ಮಳೆ ಸೃಷ್ಟಿಸುತ್ತಿದ್ದ ಸದ್ದು ನನ್ನಿಂದ ವಿವರಿಸಲಸಾಧ್ಯ. ಕಾಡಿನ ಸದ್ದಿಗೆ ಈ ಮಳೆಯ ಸದ್ದು ಮತ್ತಷ್ಟು ರಂಗನ್ನು ನೀಡಿತ್ತು. ಈ ಹಾದಿಯನ್ನು ಸಂಪೂರ್ಣವಾಗಿ ಆನಂದಿಸುತ್ತಾ ೧೦ ನಿಮಿಷ ನಡೆದಂತೆ ಎದುರಾಯಿತು ಜಲಧಾರೆಯನ್ನು ನಿರ್ಮಿಸುವ ಹಳ್ಳ.

ಹಳ್ಳ ಉಕ್ಕಿ ಹರಿಯುತ್ತಿತ್ತು. ಆ ಹರಿವಿನ ವೇಗ ಕಂಡು ನಮ್ಮ ಯುವ ಗೈಡ್ ಸಂತೋಷ ಸ್ವಲ್ಪ ಗಲಿಬಿಲಿಗೊಂಡ. ಆದರೂ ತೋರ್ಗೊಡದೆ ಹಳ್ಳಗುಂಟ ಒಂದೈದು ನಿಮಿಷ ನಮ್ಮನ್ನೆಲ್ಲ ಕರೆದೊಯ್ದ. ಆತ ಇಲ್ಲಿಗೆ ಬಂದದ್ದು ಹಳ್ಳದಲ್ಲಿ ನೀರಿನ ಪ್ರಮಾಣ ಬಹಳ ಕಡಿಮೆಯಿದ್ದಾಗ. ಆದ್ದರಿಂದ ಈಗ ಹಳ್ಳವನ್ನು ದಾಟುವುದೆಲ್ಲಿ ಎಂಬುದು ತಿಳಿಯದೆ ಚಡಪಡಿಸುತ್ತಿದ್ದ. ಕಡೆಗೆ ಒಂದೆಡೆ ೩ ಅಡಿಯಷ್ಟು ಆಳವಿದ್ದಲ್ಲಿ ಸುಮಾರು ೨೦ಅಡಿಯಷ್ಟು ದೂರಕ್ಕೆ ನಿಧಾನವಾಗಿ ದಾಟಿದೆವು. ನಂತರ ಮತ್ತೊಂದು ೩೦ಅಡಿಯಷ್ಟು ದೂರ ಜಾರುವ ಕಲ್ಲುಬಂಡೆಗಳ ರಾಶಿಯನ್ನು ದಾಟುವ ಸನ್ನಿವೇಶ. ಮರವೊಂದು ಅಲ್ಲೇ ಉರುಳಿಬಿದ್ದಿದ್ದರಿಂದ ಮತ್ತಷ್ಟು ಕಷ್ಟವಾಯಿತು.


ಈಗ ಮತ್ತೆ ಕಾಡಿನ ಅಂಚಿನಲ್ಲಿದ್ದೆವು. ಹಳ್ಳ ತನ್ನ ಹರಿವನ್ನು ಅಂಕುಡೊಂಕಾಗಿ ಮುಂದುವರೆಸಿತ್ತು. ತನ್ನ ಅಧ್ಯಾಪಕರೊಂದಿಗೆ ಮತ್ತು ನಾಲ್ಕೈದು ಸಹಪಾಠಿಗಳೊಂದಿಗೆ ಡಿಸೆಂಬರ್ ತಿಂಗಳಲ್ಲಿ ಇಲ್ಲಿಗೆ ಭೇಟಿ ನೀಡಿದ್ದ ಸಂತೋಷ, ಈಗ ದಾರಿ ತೋಚದವನಂತಾಗಿದ್ದ. ಎಲ್ಲರೂ ಆತನನ್ನು 'ಇನ್ನೂ ಎಷ್ಟು ದೂರ' ಎಂದು ಕೇಳುತ್ತಿದ್ದರು. ಅತನಂತೂ ಸಣ್ಣ ಹುಡುಗ. ಇನ್ನು ಎಷ್ಟು ದೂರವಿದೆ, ಎಂದು ಕೇಳಿದರೆ ಏನು ಉತ್ತರ ನೀಡಬಲ್ಲ? ಆತನ ನಿರುತ್ತರದಿಂದ ಸಹನೆ ಕಳಕೊಂಡು 'ಈ ಚಾರಣ ನಮಗೆ ಬೇಡವಾಗಿತ್ತು' ಎಂದು ನಮ್ಮಲ್ಲಿಯ ಹಿರಿತಲೆಗಳು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದರು. ಆದರೂ ಆತ ಸರಿಯಾದ ದಾರಿಯಲ್ಲೇ ಮುನ್ನಡೆಯುತ್ತಿದ್ದಾನೆ ಎಂದು ನನಗನಿಸತೊಡಗಿದ್ದರಿಂದ ಕಣ್ಣ ಸನ್ನೆಯಲ್ಲೇ ಆತನಿಗೆ ಮುಂದುವರಿಯಲು ಸೂಚಿಸಿದೆ.

ಸಣ್ಣ ಏರುಹಾದಿಯಲ್ಲಿ ಸಂತೋಷ ಮುನ್ನಡೆದ. ಮಳೆಯಂತೂ ತನ್ನ ಹನಿಹನಿ ಪ್ರೋಕ್ಷಣೆ ಮುಂದುವರಿಸಿತ್ತು. ಇಲ್ಲಿ ದಾರೀನೇ ಇರಲಿಲ್ಲ. ಕೇವಲ ದಿಕ್ಕನ್ನು ಗಮನದಲ್ಲಿರಿಸಿ ಸಂತೋಷ ಮುನ್ನಡೆಯುತ್ತಿದ್ದ. ತುಂಬಾ ದಟ್ಟವಾದ ಕಾಡು. ಏರುಹಾದಿಯ ಮೇಲೆ ತಲುಪಿದಾಗ ಸಂತೋಷ ನನ್ನಲ್ಲಿ ಮೆಲ್ಲನೆ ಪಿಸುಗುಟ್ಟಿದ 'ಈಗ ಮತ್ತೊಮ್ಮೆ ನದಿ ದಾಟಬೇಕಾಗಬಹುದು' ಎಂದು. ಅದಾಗಲೇ ಬಹಳ ಕಷ್ಟಪಟ್ಟು 'ಉಸ್ಸಪ್ಪಾ' ಎಂದು ಎಲ್ಲರೂ ನದಿ ದಾಟಿದ್ದರು. ಉಳಿದವರಿಗೆ ಈ ಮಾತನ್ನು ತಿಳಿಸದೆ, ಆತನನ್ನು ಮತ್ತು ರಾಕೇಶ ಹೊಳ್ಳನನ್ನು ದಾರಿ ಹುಡುಕಿಕೊಂಡು ಬನ್ನಿ ಎಂದು ಮುಂದಕ್ಕೆ ಕಳಿಸಿದೆ. ಹತ್ತು ನಿಮಿಷದಲ್ಲಿ ಇಬ್ಬರೂ ಹಿಂತಿರುಗಿದರು. ಆ ದಾರಿಯಿಲ್ಲದ ದಾರಿಯಲ್ಲಿ ೧೫ ನಿಮಿಷ ನಡೆದ ಬಳಿಕ ಮತ್ತೆ ಹಳ್ಳ ಎದುರಾಯಿತು. ಹಳ್ಳ ದಾಟಲು ಪ್ರಶಸ್ತವಾದ ಸ್ಥಳವನ್ನು ಸಂತೋಷ ನೋಡಿಕೊಂಡು ಬಂದಿದ್ದರಿಂದ ಇಲ್ಲಿ ಸುಲಭವಾಯಿತು. ಆದರೂ ನೀರಿನ ಹರಿವಿನಲ್ಲಿ ವೇಗವಿದ್ದಿದ್ದರಿಂದ ಎಚ್ಚರಿಕೆಯಿಂದಲೇ ದಾಟಬೇಕಾಗಿತ್ತು. ಈ ಎರಡನೇ ಬಾರಿಯ ಹಳ್ಳ ದಾಟುವಿಕೆಯನ್ನು ಎಲ್ಲರೂ ಎಂಜಾಯ್ ಮಾಡಿದರು. ಕಡಿಮೆ ಆಳವಿದ್ದ ಸ್ಥಳವಾಗಿದ್ದ ಕಾರಣ ಹಳ್ಳ ಇಲ್ಲಿ ೪ ಕವಲುಗಳಲ್ಲಿ ವಿಶಾಲವಾಗಿ ಹರಿಯುತ್ತಿತ್ತು ಮತ್ತು ಸುಮಾರು ೩೦೦ ಅಡಿಗಳಷ್ಟು ದೂರದವರೆಗೆ ಹಳ್ಳವನ್ನು ದಾಟಬೇಕಾಗಿತ್ತು.


ಈಗಂತೂ ಸಂತೋಷ ನಗುಮುಖದಿಂದ ಮುನ್ನಡೆಯುತ್ತಿದ್ದರಿಂದ ನಾವು ಜಲಧಾರೆಯ ಸಮೀಪಕ್ಕೆ ಬಂದಿದ್ದೇವೆ ಎಂದು ತಿಳಿದುಕೊಂಡೆ. ಇದನ್ನು ತಿಳಿಯದ ಹಲವರು ಇನ್ನೂ ನಕಾರಾತ್ಮಕವಾಗಿ ಮಾತನಾಡುತ್ತ ಆಯೋಜಕರಾದ ಶ್ರೀ ಅಡಿಗರ ತಲೆ ತಿನ್ನುತ್ತಿದ್ದರು. ಹಳ್ಳವನ್ನು ಎರಡನೇ ಬಾರಿ ದಾಟುವಾಗ, 'ಈಗ ದಾಟಿದ ನಂತರ ಅಲ್ಲಿ ಮೇಲೆ ಹತ್ತಿ ಕೆಳಗಿಳಿದರೆ ಗುಂಡಿ' ಎಂದು ಸಂತೋಷ ನನ್ನಲ್ಲಿ ಹೇಳಿದ್ದರಿಂದ ನಾನು, "ಇನ್ನೊಂದು ೧೫ ನಿಮಿಷ ಹೋಗೋಣ ಸರ್, ಫಾಲ್ಸ್ ಸಿಗದಿದ್ದರೆ ಅಲ್ಲೇ ಸಮೀಪದಲ್ಲೆಲ್ಲಾದರೂ ಕುಳಿತು ವಿಶ್ರಮಿಸಿ ಹಿಂತಿರುಗುವ" ಎಂದು ನನ್ನೆಡೆ 'ಏನು ಮಾಡುವುದೆಂದು ತೋಚದ' ನೋಟ ಬೀರುತ್ತಿದ್ದ ಅಡಿಗರಲ್ಲಿ ಎಲ್ಲರಿಗೆ ಕೇಳಿಸುವಂತೆ ಹೇಳಿದೆ.

ಜಾರುವ ಏರುಹಾದಿಯಲ್ಲಿ ಮುನ್ನಡೆದೆವು. ಹತ್ತು ನಿಮಿಷದಲ್ಲಿ ಗೂದನಗುಂಡಿಯ ಮೇಲ್ಭಾಗಕ್ಕೆ ಬಂದು ತಲುಪಿದೆವು. ಇಲ್ಲಿ ಮತ್ತೊಮ್ಮೆ ಹಳ್ಳವನ್ನು ದಾಟಬೇಕಾಗಿತ್ತು. ವಿಶಾಲವಾದ ಹರಿವಾಗಿದ್ದರಿಂದ, ಆಳ ಕಡಿಮೆಯಿತ್ತು. ಇಲ್ಲಿ ಹಳ್ಳದ ಹರಿವಿನ ನೋಟ ಬಹಳ ಸುಂದರವಾಗಿದೆ. ಸ್ವಲ್ಪ ಮುಂದೆಯೇ ನೀರು ಕೆಳಗೆ ಧುಮುಕುವ ಶಬ್ದ ಕೇಳುತ್ತಿತ್ತು. ಅಲ್ಲಿ ತಲುಪಿ, ಕೆಳಗೆ ಇಣುಕಿ ನೋಡಿದಾಗ ಅಬ್ಬಾ ಚಾರಣ ಸಾರ್ಥಕ ಎಂಬ ಭಾವ ಮನದಲ್ಲಿ. ನೀರಿನ ಪ್ರಮಾಣ ವಿಪರೀತವಾಗಿದ್ದಿದ್ದರಿಂದ ಕೆಳಗೆ ಇಳಿಯುವ ಸಾಹಸ ಮಾಡಲಿಲ್ಲ. ಜಲಪಾತದ ಮೇಲ್ಭಾಗದಿಂದ ಸಿಗುವ ನೋಟಕ್ಕೇ ತೃಪ್ತಿಪಟ್ಟೆವು. ಮಂಜು ಪೂರ್ತಿಯಾಗಿ ಆವರಿಸಿದ್ದರಿಂದ ಸದ್ಯಕ್ಕೆ ನಮಗೆ ದೂರದ ನೋಟವೇನೂ ಕಾಣಿಸುತ್ತಿರಲಿಲ್ಲ. ಸ್ವಲ್ಪ ಮೋಡ ಕವಿದಿದ್ದರಿಂದ ಮಳೆ ಬಿರುಸಾಗಿ ಬೀಳಬಹುದೆಂದು, ಅಡಿಗರು ವೇಗವಾಗಿ ಊಟದ ತಯಾರಿ ನಡೆಸಿದರು. ಭೀಮೇಶ್ವರದಿಂದ ರಾಕೇಶ್ ಹೊಳ್ಳ ಹೊತ್ತುಕೊಂಡು ತಂದಿದ್ದ ಚಿತ್ರಾನ್ನದ ಪಾತ್ರೆಯಿಂದ ಎಲ್ಲರಿಗೂ ರುಚಿರುಚಿಯಾದ ಊಟವನ್ನು ಅಡಿಗರು ಹಂಚಿದರು.


ಈಗ ಮಂಜು ಸರಿದು ಶುಭ್ರ ನೋಟ ಲಭ್ಯವಿತ್ತು. ಆಶ್ಚರ್ಯವೊಂದು ನನಗೆ ಕಾದಿತ್ತು. ಜಲಧಾರೆಯ ಮೇಲೆ ನಿಂತಾಗ ದೂರದಲ್ಲಿ ಕಡಲ ತೀರ ಕಾಣಿಸುತ್ತಿತ್ತು. ಈ ದೃಶ್ಯವನ್ನು ಅದೆಲ್ಲೋ ನೋಡಿದ ನೆನಪು ಬರತೊಡಗಿತು. ದೂರದಲ್ಲಿ ಕಾಣುವ ಊರು 'ಶಿರೂರು' ಎಂದು ಸಂತೋಷ ಹೇಳಿದಾಗ ನನ್ನ ಶಂಕೆ ಮತ್ತಷ್ಟು ಬಲವಾಯಿತು. ಸಮುದ್ರ ತೀರ ಕಾಣಿಸುವ ಜಲಧಾರೆ ಕರ್ನಾಟಕದಲ್ಲಿ ಒಂದೇ ಇರುವುದು ಮತ್ತು ಅದಿರುವುದು ಶಿರೂರಿನ ಸಮೀಪದಲ್ಲೇ ಮತ್ತು ಅದಾಗಲೇ ನಾನದನ್ನು ಭೇಟಿ ನೀಡಿಯಾಗಿತ್ತು ಕೂಡಾ! ಹೊಸ ಜಲಧಾರೆಯಿರಬಹುದು ಎಂದು ಇಲ್ಲಿಗೆ ಬಂದು, ನಾಲ್ಕು ವರ್ಷಗಳ ಹಿಂದೆ ತಳಭಾಗದಿಂದ ನೋಡಿದ್ದ ಜಲಧಾರೆಯ ಮೇಲ್ಭಾಗಕ್ಕೆ ಈಗ ಬಂದು ನಿಂತಿದ್ದೇನೋ ಎಂಬ ವಿಚಾರ ತಲೆಯೊಳಗೆ ಕೊರೆಯಲು ಆರಂಭವಾಯಿತು.

ನೀರು ಇಲ್ಲಿ ಎಂದು ಕರೆಯಲ್ಪಡುವಲ್ಲಿ ಧುಮುಕಿ, ಸುಮಾರು ೧೫೦ ಅಡಿ ನೇರವಾಗಿ ಮುಂದಕ್ಕೆ ಹರಿದು ಮತ್ತೆ ಧುಮುಕುವಂತೆ ತೋರುತ್ತಿತ್ತು. ಸಂತೋಷನಲ್ಲಿ 'ಅಲ್ಲಿ ಮುಂದೆ ನೀರು ಮತ್ತೆ ಕೆಳಗೆ ಬೀಳುತ್ತಾ' ಎಂದು ಕೇಳಿದಾಗ ಆತ 'ಹೌದು, ಬಹಳ ಆಳಕ್ಕೆ ಬೀಳುತ್ತೆ ಮತ್ತೆ ಮುಂದೆ ಇನ್ನೂ ಕೆಳಕೆಳಗೆ ಬೀಳುತ್ತಾ ಹರಿಯುತ್ತೆ' ಎಂದ.


ಆದರೂ ಕೆಳಗಿಳಿದು ಮುಂದೆ ನೀರು ಆಳಕ್ಕೆ ಧುಮುಕುವಲ್ಲಿ ಕೆಳಗಿನ ನೋಟವನ್ನೊಮ್ಮೆ ನೋಡಿದರೆ ನಿಸ್ಸಂದೇಹವಾಗಿ ಇದೇ ನಾನು ಈ ಮೊದಲೇ ಭೇಟಿ ನೀಡಿರುವ ಜಲಧಾರೆ ಎನ್ನಬಹುದು. ಕೆಳಗಿಳಿಯುವ ಹುಚ್ಚು ಸಾಹಸ ಮಾಡಲಿಲ್ಲ.

ಈ ಚಾರಣ/ಪ್ರಯಾಣದ ಕಾರ್ಯಕ್ರಮ ಬಹಳ ಸೊಗಸಾಗಿತ್ತು. ಒಂದೇ ದಿನದಲ್ಲಿ ಎರಡು ಚಂದದ ಜಲಧಾರೆಗಳಿಗೆ ಪೈಲಟ್ ಟ್ರೆಕ್ಕಿಂಗ್ ಇಲ್ಲದೆ ಚಾರಣ ಮಾಡಿದ್ದು ವಿಶೇಷ. ಕಲ್ಲುಶಂಖ ಜಲಧಾರೆಗೆ ತೆರಳುವ ಇಳಿಜಾರಿನ ಹಾದಿಯಲ್ಲಿ ಮತ್ತು ಎರಡನೇ ಜಲಧಾರೆಯ ಹಾದಿಯಲ್ಲಿ ಮೊದಲ ಬಾರಿ ಹಳ್ಳ ದಾಟುವಾಗ ರಿಸ್ಕ್ ಇತ್ತು. ಆದರೆ ಏನೂ ಆಗದೇ ಸುರಕ್ಷಿತವಾಗಿ ಎಲ್ಲರೂ ಹಿಂತಿರುಗಿದ್ದು ನನಗೆ ಬಹಳ ಸಮಾಧಾನ ತಂದಿತು. ಸೊಗಸಾದ ನೆನಪುಗಳು.

ಬುಧವಾರ, ಅಕ್ಟೋಬರ್ 10, 2007

ನಾಮದ ಜಲಧಾರೆ


೨೦೦೩ರ ಜೂನ್ ತಿಂಗಳ ಅದೊಂದು ಆದಿತ್ಯವಾರ ನಾನು, ನನ್ನ ಸಂಬಂಧಿ ಅರುಣಾಚಲ ಹಾಗೂ ಆತನ ಗೆಳೆಯ ಅನಿಲ್ ಕಡ್ಲೆ ವಿಭೂತಿ ಜಲಧಾರೆಯತ್ತ ತೆರಳಿದ್ದೆವು. ಮುನ್ನಾ ದಿನ ಸಂಜೆಯೇ ನಾನು ಕುಮಟಾಗೆ ಬಂದಿದ್ದೆ.

ಮಾಬಗೆಯಿಂದ ಮಣ್ಣಿನ ರಸ್ತೆಯಲ್ಲಿ ೧ಕಿಮಿ ಚಲಿಸಿದ್ದೇವಷ್ಟೇ, ನಾನು ಚಲಾಯಿಸುತ್ತಿದ್ದ ಅನಿಲನ ಬೈಕು ಆಚೀಚೆ ಓಲಾಡಲು ಶುರುವಾಯಿತು. ಪಂಕ್ಚರ್ ಆಗಿರಬಹುದು ಎಂದು ನಿಲ್ಲಿಸಿದರೆ, ಊಹೆ ಸರಿಯಾಗಿತ್ತು. ಮುಂದಿನ ಚಕ್ರದೊಳಗೆ ದೈತ್ಯಾಕಾರದ ಮುಳ್ಳೊಂದು ನುಗ್ಗಿತ್ತು. ಕೂಡಲೇ ಗಾಲಿಯನ್ನು ಕಳಚಿ, ಅರುಣಾಚಲನ ಬೈಕಿನಲ್ಲಿ ಆತ ಮತ್ತು ಅನಿಲ, ೩ಕಿಮಿ ದೂರವಿರುವ ಚನ್ನಗಾರಕ್ಕೆ ತೆರಳಿದರು. ಆದಿತ್ಯವಾರವಾಗಿದ್ದರಿಂದ ಪಂಕ್ಚರ್ ರಿಪೇರಿ ಮಾಡುವ ಅಂಗಡಿಯವನಿಗೆ ರಜೆ. ಆತನ ಮನೆ ಹುಡುಕಿಕೊಂಡು ಹೋದರೆ, ಆತ ಹಿಲ್ಲೂರಿಗೆ ಮದುವೆಯೊಂದಕ್ಕೆ ತೆರಳಿದ್ದಾನೆಂದು ತಿಳಿದುಬಂತು. ಇವರಿಬ್ಬರು ಪಂಕ್ಚರ್ ಆದ ಗಾಲಿ ಸಮೇತ ಅಲ್ಲಿಂದ ೧೧ಕಿಮಿ ದೂರದ ಹಿಲ್ಲೂರಿಗೆ ದೌಡಾಯಿಸಿದರು. ಅಲ್ಲಿ ಮದುವೆ ಮಂಟಪದೊಳಗೆ ಆ ಗಾಲಿ ಸಮೇತ ನುಗ್ಗಿ, ಆತನನ್ನು ಹುಡುಕಿ ತೆಗೆದರು. ನಂತರ ಆತನಿಗೆ 'ಡಬ್ಬಲ್ ಚಾರ್ಜ್' ಕೊಡುವುದಾಗಿ ಪುಸಲಾಯಿಸಿ, ಆತನನ್ನು ಮರಳಿ ಚನ್ನಗಾರಕ್ಕೆ ಕರೆಸಿ, ಅಂಗಡಿ ತೆರೆಸಿ, ಪಂಕ್ಚರ್ ರೆಪೇರಿ ಮಾಡಿ, ಮರಳಿ ನಾನು ಒಂಟಿ ಗಾಲಿಯ ಬೈಕಿನೊಂದಿಗೆ ಕಾಯುತ್ತಿದ್ದಲ್ಲಿಗೆ ಬಂದು, ರಿಪೇರಿಯಾದ ಗಾಲಿಯನ್ನು 'ಫಿಕ್ಸ್' ಮಾಡುವಷ್ಟರಲ್ಲಿ ೧೧೦ನಿಮಿಷ ಕಳೆದುಹೋಗಿತ್ತು.


ಮತ್ತೊಂದು ಕಿಮಿ ಚಲಿಸಿದ ಬಳಿಕ ರಸ್ತೆ ಅಂತ್ಯ. ಅಲ್ಲೊಂದು ಮನೆ. ಬಳಿಯಲ್ಲೇ ಹರಿಯುತ್ತಿದ್ದ ಸಣ್ಣ ಪ್ರಮಾಣದ ನೀರು. ಇಲ್ಲಿಂದ ೨೦ ನಿಮಿಷ ನಡೆದ ಬಳಿಕ ಜಲಧಾರೆಯತ್ತ ಬಂದೆವು. ವರ್ಷಪೂರ್ತಿ ನೀರಿರುವ ವಿಭೂತಿ ಜಲಧಾರೆ ಈಗ ಮೈದುಂಬಿ ಭೋರ್ಗರೆಯುತ್ತಿತ್ತು. ಜಲಧಾರೆ ಕಂಡ ಕೂಡಲೇ ಬಟ್ಟೆ ಕಳಚುವ ಅನಿಲ, ಕ್ಷಣಾರ್ಧದಲ್ಲಿ ನೀರಿನಲ್ಲಿದ್ದ. ಅರುಣಾಚಲನಿಗೆ ನೀರಿಗಿಳಿದು ಜಲಕ್ರೀಡೆಯಾಡುವ ಆಸೆ ಆದರೆ ಅಷ್ಟೇ ಹೆದರಿಕೆ, ಯಾವುದಾದರೂ ಜಂತು ಕಚ್ಚಬಹುದೆಂದು!

ದೇವನಳ್ಳಿ ಸಮೀಪದ ಕಾಡಿನಿಂದ ಮತ್ತು ಮಂಜುಗುಣಿ ಹಿಂಭಾಗದ ಕಾಡಿನಿಂದ ಹರಿದು ಬರುವ ಕೆಲವು ತೊರೆಗಳು ಯಾಣದ ಸಮೀಪ ಜೊತೆಗೂಡಿ ಉಂಟಾಗುವ ಹಳ್ಳ, ವಡ್ಡಿ ಹಳ್ಳಿಯ ಮೂಲಕ ಹರಿದು, ಘಟ್ಟದ ಕೆಳಗೆ ಬರುವಾಗ ಮಾಬಗೆ ಸಮೀಪ ಜಿಗಿದು ವಿಭೂತಿ ಜಲಧಾರೆಯನ್ನು ನಿರ್ಮಿಸುತ್ತದೆ. ಈ ಜಲಧಾರೆಗೆ ಮಾಬಗೆ ಜಲಧಾರೆಯೆಂದೂ ಕರೆಯುತ್ತಾರೆ. ನಂತರ ಈ ಹಳ್ಳವು ಹಾಗೆ ಮುಂದೆ ಚನ್ನಗಾರದ ಮೂಲಕ ಹರಿದು, ಹೊಸಕಂಬಿಯ ಬಳಿ, ಮಾಗೋಡಿನಲ್ಲಿ ಜಲಧಾರೆಯನ್ನು ನಿರ್ಮಿಸಿ ಹರಿದುಬರುವ ಗಂಗಾವಳಿ ನದಿಯನ್ನು ಸೇರುತ್ತದೆ.


ಒಂದೆರಡು ಚಿತ್ರಗಳನ್ನು ತೆಗೆದು ಅಲ್ಲೇ ಬಂಡೆಯೊಂದರ ಮೇಲೆ ಕುಳಿತೆ. ಅನಿಲ ಉತ್ಸಾಹದಿಂದ ಜಲಕ್ರೀಡೆಯಾಡುತ್ತಿದ್ದರೆ, ಅರುಣಾಚಲ ನೀರಿಗಿಳಿಯಲೋ ಬೇಡವೋ ಎಂಬ ನಿರ್ಧಾರ ಮಾಡುವುದರಲ್ಲೇ ಕಾಲಹರಣ ಮಾಡುತ್ತಿದ್ದ. ಕಡೆಗೂ ಆತ ನೀರಿಗಿಳಿಯಲಿಲ್ಲ. ಸುಮಾರು ೧೦೦ ಅಡಿ ಎತ್ತರವಿರುವ ಜಲಧಾರೆ ಸಮೀಪ ತೆರಳುವುದು ಮಳೆಗಾಲದಲ್ಲಿ ಕಷ್ಟ. ಸ್ವಲ್ಪ ದೂರ ನಿಂತೇ ನೋಡಬೇಕಾಗಬಹುದು. ನೀರು ಧುಮುಕುವಲ್ಲಿ ನೀರಿಗಿಳಿಯುವುದು ಅಪಾಯ. ಸ್ವಲ್ಪ ಮುಂದೆ ಗುಂಡಿಯೊಂದಿರುವುದು. ಇಲ್ಲಿ ಮನಸಾರೆ ಮೀಯಬಹುದು. ಜಲಧಾರೆಯ ಸದ್ದು ಮತ್ತು ಕಾಡಿನ ವಿಚಿತ್ರ ಮೌನ ಸದ್ದು. ಇವೆರಡರ ಮಧ್ಯೆ ನಾವು ಮೂವ್ವರು. ಸ್ವಲ್ಪ ಸಮಯ ಕಾಲ ಕಳೆದು ಮರಳಿದೆವು ಆ ಮನೆಯ ಬಳಿ. ಜಲಪಾತದಲ್ಲಿ ಜಳಕ ಮಾಡದ ಅರುಣಾಚಲ, ಇಲ್ಲಿ ಮನೆಯ ಬಳಿ ಹರಿಯುತ್ತಿದ್ದ ಸಣ್ಣ ಪ್ರಮಾಣದ ನೀರಿನಲ್ಲಿ, ಆ ಮನೆಯವರಿಂದ ಬಕೆಟೊಂದನ್ನು ಎರವಲು ಪಡೆದು, ನೀರನ್ನು ಪದೇ ಪದೇ ಆ ಬಕೆಟಿನಲ್ಲಿ ತುಂಬಿಸಿ ಸ್ನಾನ ಮಾಡಿದ! ನಂತರ ಸಮಯವಿದ್ದುದರಿಂದ ಮತ್ತಿಘಟ್ಟ ಮತ್ತು ಮಂಜುಗುಣಿಗೆ ಭೇಟಿ ನೀಡಿ, ರಾಗಿಹೊಸಳ್ಳಿಯ ಮೂಲಕ ಕುಮಟಾ ತಲುಪಿದೆವು.

ಎಪ್ರಿಲ್ ೨೦೦೬ರ ಉಡುಪಿ ಯೂತ್ ಹಾಸ್ಟೆಲ್ ಕಾರ್ಯಕ್ರಮವನ್ನು ಮರ್ಕಾಲ್ ಗುಡ್ಡ ಜಲಧಾರೆಗೆ ಎಂದು ನಿಗದಿಸಲಾಗಿತ್ತು. ಅಂತೆಯೇ ಎಪ್ರಿಲ್ ೨೩ರಂದು ಬೆಳಗ್ಗೆ ೭ ಗಂಟೆಗೆ ಉಡುಪಿ ಬಸ್ಸು ನಿಲ್ದಾಣದ ಸಮೀಪವಿರುವ ಯೂತ್ ಹಾಸ್ಟೆಲ್ ಕಚೇರಿಗೆ ಬಂದರೆ ಮಾಧವ್ ಮಾತ್ರ ಅಲ್ಲಿ ಇದ್ದರು. ಉಳಿದವರದ್ದು ಪತ್ತೆನೇ ಇಲ್ಲ. ಸ್ವಲ್ಪ ಸಮಯದ ಬಳಿಕ ಅನಂತ ಮತ್ತು ಸಂದೀಪ ಬಂದರು. ಗಂಟೆ ೮ ಆದರೂ ಇನ್ನೂ ಆಯೋಜಕರದ್ದು ಸುಳಿವಿಲ್ಲ. ಯೂತ್ ಹಾಸ್ಟೆಲ್ ಪದಾಧಿಕಾರಿಗಳ ಮತ್ತು ಸಂಬಂಧಪಟ್ಟವರ ಮೊಬೈಲ್ ಫೋನ್ ಎಲ್ಲಾ ಸ್ವಿಚ್ ಆಫ್. ನಾವ್ಯಾರೂ ಮರ್ಕಾಲ್ ಗುಡ್ಡಕ್ಕೆ ಹೋದವರಲ್ಲ. ಈ ಮೊದಲು ಹೋಗಿದ್ದ ಯೂತ್ ಹಾಸ್ಟೇಲಿನ ಆರೇಳು ಸದಸ್ಯರಲ್ಲಿ ಒಬ್ಬನಾದರೂ ಬಂದಿದ್ದರೆ ಸಾಕಿತ್ತು. ಆದರೆ ಒಬ್ಬನ ಸುಳಿವೂ ಇಲ್ಲ. ಕನಿಷ್ಟ ಪಕ್ಷ ಒಂದು ಫೋನಾದರೂ ಮಾಡಿ ಕಾರ್ಯಕ್ರಮ ರದ್ದಾಗಿದೆ ಎಂದು ತಿಳಿಸುವ ಸೌಜನ್ಯ/ ಜವಾಬ್ದಾರಿ ಕೂಡಾ ಇರಲಿಲ್ಲ. ಉಡುಪಿ ಯೂತ್ ಹಾಸ್ಟೆಲಿನ ಪ್ರಮುಖ ಸದಸ್ಯರಾಗಿರುವ ಶ್ರೀ ಸೂರ್ಯನಾರಾಯಣ ಅಡಿಗರು ಆ ಸಮಯದಲ್ಲಿ ಅಲ್ಲೆಲ್ಲೋ ಉತ್ತರ ಭಾರತದಲ್ಲಿ ಚಾರಣ ಮಾಡುತ್ತಿದ್ದರು. 'ಅವರಾದರೂ ಇದ್ದಿದ್ದರೆ' ಎಂದು ಮನಸ್ಸು ಪದೇ ಪದೇ ಹೇಳುತ್ತಿತ್ತು. ಇಂತಹ ಸನ್ನಿವೇಶ ಬಂದಾಗ ಅಡಿಗರು ಪರಿಚಯದವರ ತಂಡವೊಂದನ್ನು ಸಿದ್ಧಪಡಿಸಿ ಹೊರಟೇಬಿಡುತ್ತಿದ್ದರು. ಕಡೆಗೆ ಬೇರೆ ದಾರಿ ಕಾಣದೆ ನಾವು ನಾಲ್ಕು ಮಂದಿ ಸಮಾಲೋಚಿಸಿ ವಿಭೂತಿ ಜಲಧಾರೆಗೆ ಹೋಗುವ ನಿರ್ಧಾರ ಮಾಡಿದೆವು.


ಎರಡು ಬೈಕುಗಳಲ್ಲಿ ೯ಕ್ಕೆ ಉಡುಪಿ ಬಿಟ್ಟ ನಾವು ಮಧ್ಯಾಹ್ನ ೩ ಗಂಟೆಗೆ ಮಾಬಗೆ ತೆಲುಪಿದೆವು. ಮಳೆಗಾಲದಲ್ಲಿ ವಿಶಾಲವಾಗಿ ನಾಲ್ಕೈದು ಕವಲುಗಳಲ್ಲಿ ಧುಮ್ಮಿಕ್ಕುವ ಜಲಧಾರೆ ಈಗ ಒಂದೇ ಕವಲಲ್ಲಿ ಕೆಳಗಿಳಿಯುತ್ತಿತ್ತು. ಈಗಿನ ಅಂದವೇ ಬೇರೆ. ಜಲಧಾರೆಯ ಸನಿಹಕ್ಕೆ ತೆರಳಿದೆವು. ಅಲ್ಲಿ ನೀರಿಗಿಳಿಯಲು ಯಾರಿಗೂ ಧೈರ್ಯ ಸಾಲಲಿಲ್ಲ. ಆ ಗುಂಡಿಯ ತಳ ಕಾಣುತ್ತಿರಲಿಲ್ಲ ಮತ್ತು ಅಲ್ಲಿ ಹಿಡಿದುಕೊಳ್ಳಲು ಯಾವುದೇ ಆಧಾರವಿರಲಿಲ್ಲ. ಮೆಲ್ಲಗೆ ಮೇಲೆ ಏರಿ ಜಲಧಾರೆಯ ನಡುವಿಗೆ ತೆರಳಿ ಅಲ್ಲಿ ಒಂದು ಸಣ್ಣ 'ಪ್ಲ್ಯಾಟ್-ಫಾರ್ಮ್'ನ ಮೇಲೆ ನಿಂತು ಸ್ನಾನ ಮುಗಿಸಿದರು. ಸಂಜೆ ೫ಕ್ಕೆ ಅಲ್ಲಿಂದ ಹೊರಟ ನಾವು, ದಾರಿಯಲ್ಲಿ ಸಿಗುವ ಮಿರ್ಜಾನ ಕೋಟೆಗೆ ಭೇಟಿ ನೀಡಿ ಉಡುಪಿ ತಲುಪಿದಾಗ ಮಧ್ಯರಾತ್ರಿ ೧೨. ಆ ತಿಂಗಳ ಉಡುಪಿ ಯೂತ್ ಹಾಸ್ಟೆಲ್ ಕಾರ್ಯಕ್ರಮ ಅಂತೂ ರದ್ದಾಗಲಿಲ್ಲ!

ಮಾಹಿತಿ: ರಾಘವೇಂದ್ರ ಬೆಟ್ಟಕೊಪ್ಪ

ಸೋಮವಾರ, ಅಕ್ಟೋಬರ್ 01, 2007

ಒಂದು ವರ್ಷ


ಗೆಳೆಯರೆ,

ಇಂದಿಗೆ ನಾನು 'ಅಲೆಮಾರಿಯ ಅನುಭವಗಳ'ನ್ನು ತಮಗೆಲ್ಲರಿಗೂ ಹೇಳಿಕೊಳ್ಳಲು ಆರಂಭಿಸಿ ಒಂದು ವರ್ಷವಾಯಿತು. ಈ ಒಂದು ವರ್ಷದಲ್ಲಿ ಚಾರಣ/ಪ್ರಯಾಣದ ಬಗ್ಗೆ ಬರೆದಷ್ಟನ್ನು ಕಳೆದ ೩೪ ವರ್ಷಗಳಲ್ಲಿ ಬರೆದಿರಲಿಲ್ಲ. ಅನೇಕ ಪ್ರಕೃತಿ ಪ್ರಿಯ ಗೆಳೆಯರ ಪರಿಚಯವಾಗಿದೆ. ಇಲ್ಲಿಗೆ ಭೇಟಿ ನೀಡಿ, ಏನೇ ಬರೆದರೂ ಓದಿ, ಚೆನ್ನಾಗಿದ್ದಲ್ಲಿ ಟಿಪ್ಪಣಿ ಬರೆದು ಪ್ರೋತ್ಸಾಹ ನೀಡಿದ್ದೀರಿ. ನನ್ನ ಪ್ರಮುಖ ಉದ್ದೇಶ ಚೆನ್ನಾಗಿ ಬರೆಯುವುದಕ್ಕಿಂತ, ನಮ್ಮ ಕರ್ನಾಟಕದಲ್ಲಿ ನಾನು ಭೇಟಿ ನೀಡಿದ ಸ್ಥಳಗಳ ಬಗ್ಗೆ ಪ್ರಕೃತಿ ಪ್ರಿಯರಿಗೆ ತಿಳಿಸುವುದು. ಆ ನಿಟ್ಟಿನಲ್ಲಿ ಸಾಕಷ್ಟು ಮಟ್ಟಿಗೆ ಸಫಲನಾಗಿದ್ದೇನೆ ಎಂದು ನಾನು ಭಾವಿಸಿದ್ದೇನೆ.

ಕೆಲವೊಮ್ಮೆ ಹೊಸ 'ಪೋಸ್ಟ್' ಹಾಕುವಲ್ಲಿ ತಡವಾದರೂ ತಾಳ್ಮೆಯಿಂದ ಕಾದಿದ್ದೀರಿ. ಟಿಪ್ಪಣಿ ಬರೆಯಲೂ ಏನೂ ಇಲ್ಲದಿದ್ದರೂ ಬರೆದು ಪ್ರೋತ್ಸಾಹ ನೀಡಿದವರು ಹಲವರು. ತಮ್ಮ ಬ್ಲಾಗಿನಿಂದ ಲಿಂಕ್ ಕೊಟ್ಟು ಸಹಕರಿಸಿದ್ದೀರಿ.

ಸೆಪ್ಟೆಂಬರ್ ೨೦೦೬ರಲ್ಲಿ ಗೆಳೆಯ ವೇಣು ವಿನೋದ್ ತನ್ನ ಬ್ಲಾಗ್ ಬಗ್ಗೆ ಹೇಳಿದಾಗ, ನಾನೂ ಯಾಕೆ ನನ್ನ ತಿರುಗಾಟದ ಬಗ್ಗೆ ಬರೆಯಬಾರದು ಎಂದೆನಿಸಿತು. ಕೂಸಳ್ಳಿ ಘಟನೆಯ ಬಗ್ಗೆ ಯೋಚಿಸಿದಾಗ 'ಬೇಡ'ವೆಂದೆನಿಸತೊಡಗಿತು. ಸುಮಾರು ಯೋಚಿಸಿ ಕಡೆಗೂ ಬರೆಯೋಣ ಎಂದು ನಿರ್ಧರಿಸಿ 'ಅಲೆಮಾರಿಯ ಅನುಭವಗಳು' ಶುರುಮಾಡಿದೆ. ಒಂದು ವರ್ಷ ಬ್ಲಾಗ್ ಲೋಕದಲ್ಲಿ ಉತ್ತಮ ಪ್ರಯಾಣವಾಗಿದೆ. ಹಿತೈಷಿಗಳ ಪರಿಚಯವಾಗಿದೆ. ವೇಣುಗೆ ಧನ್ಯವಾದಗಳು.

ಆಗುಂಬೆಯ ಸಂಜೆಯೂ ...... 'ಹ್ಹಿ ಹ್ಹಿ'ಯು ನಿಂದ ಆರಂಭಿಸಿ ಹೀಗೊಂದು ಊರಿನವರೆಗೆ ಪ್ರತಿಯೊಂದನ್ನೂ ಓದಿದವರು ಹಲವರು. ಆಯ್ದು ಓದಿದವರು ಕೆಲವರು. ಎಲ್ಲರ ಪ್ರೋತ್ಸಾಹಕ್ಕೆ ನಾನು ಋಣಿ.

ಜೂನ್ ೧, ೨೦೦೩ರ ಮಡೆನೂರು ಪ್ರಯಾಣದಿಂದ ಶುರುಮಾಡಿ ಮೊನ್ನೆ ಸೆಪ್ಟೆಂಬರ್ ೮, ೨೦೦೭ರ ನಾಗಝರಿ ಜಲಪಾತಕ್ಕೆ ಚಾರಣದವರೆಗೆ ಭೇಟಿ ನೀಡಿದ ತಾಣಗಳು ಅದೆಷ್ಟೋ. ಇನ್ನೂ ಎಷ್ಟೋ ನೋಡಬೇಕಿದೆ. ಈ ನಾಲ್ಕು ವರ್ಷಗಳು ನಿಸ್ಸಂದೇಹವಾಗಿ ನನ್ನ ಜೀವನದ ಉತ್ತಮ ವರ್ಷಗಳು. ಸತತ ೭ ವಾರ ಪ್ರತಿ ವಾರಾಂತ್ಯದಲ್ಲಿ ಅಲೆದಾಡಿದ್ದಿದೆ. ಸತತ ೪ ವಾರಾಂತ್ಯ ಎಲ್ಲೂ ಹೋಗದೇ ನಿಷ್ಕ್ರಿಯವಾಗಿದ್ದೂ ಇದೆ. ಆದರೆ ಪ್ರಕೃತಿಯೊಂದಿಗೆ ಈ ನಾಲ್ಕು ವರ್ಷಗಳಲ್ಲಿ ನಾನು ಕಳೆದ ಸಮಯವಿದೆಯಲ್ಲಾ, ಅಪರಿಚಿತ ಸ್ಥಳಗಳಿಗೆ ತೆರಳಿದಾಗ ಪರಿಚಯವಾದ ಜನರ ಸ್ನೇಹವಿದೆಯಲ್ಲಾ, ಇವು ಮಾತ್ರ ಅವಿಸ್ಮರಣೀಯ. ಇನ್ನೂ ಹೆಚ್ಚು ಅವಿಸ್ಮರಣೀಯ ಸಮಯವನ್ನು ಪ್ರಕೃತಿಯೊಂದಿಗೆ ಕಳೆಯಲು ಕಾತುರನಾಗಿದ್ದೇನೆ.

ಕರ್ನಾಟಕ ಕ್ರಿಕೆಟ್ ನನಗೆ ಪ್ರಿಯವಾದ ವಿಷಯವಾಗಿರುವುದರಿಂದ ಆಗಾಗ 'ಚಾರಣ/ಪ್ರಯಾಣ'ದ ಹೊರತಾಗಿ ಕ್ರಿಕೆಟ್ ವಿಷಯದ ಬಗ್ಗೆಯೂ ಬರೆದಿದ್ದೇನೆ. ಬರೆಯುತ್ತೇನೆ ಕೂಡಾ. 'ಅಲೆಮಾರಿಯ ಅನುಭವಗಳು' ಇಲ್ಲಿಗೆ ಚಾರಣದ ಬಗ್ಗೆ ಮಾತ್ರ ಓದಲು ಬರುವವರಿಗೆ ಕ್ರಿಕೆಟ್ ಲೇಖನ ನೋಡಿ ನಿರಾಸೆಯಾಗಬಹುದು. ಕ್ಷಮೆಯಿರಲಿ.

ಮೇಲೆ ಹಾಕಿದ ಚಿತ್ರ ಶರಾವತಿ ಕಣಿವೆಯದ್ದು. ಜೋಗದಿಂದ ಹೊನ್ನಾವರದೆಡೆ ತೆರಳುವಾಗ ಈ ದೃಶ್ಯ ಸಿಗುವುದು. ೧೯೯೫ರಲ್ಲಿ ಜೋಗಕ್ಕೆ ಮೊದಲ ಬಾರಿಗೆ ಹೋದಾಗ, ಆಗಿನ್ನೂ ಗೇರುಸೊಪ್ಪಾದಲ್ಲಿ ಆಣೆಕಟ್ಟು ನಿರ್ಮಾಣಗೊಂಡಿರಲಿಲ್ಲ. ಆಗ ಇಲ್ಲಿ ಕಾಣುವ ದೃಶ್ಯ ಬೇರೇನೇ ಇತ್ತು. ಅತಿ ಆಳದಲ್ಲಿ, ಎರಡು ಗುಡ್ಡಗಳ ತಳದಲ್ಲಿ ಸಣ್ಣ ಗೆರೆಯಂತೆ ಶರಾವತಿ ಹರಿಯುತ್ತಿದ್ದಳು. ಆಗ ನನ್ನ ಬಳಿ ಕ್ಯಾಮರಾ ಇರಲಿಲ್ಲವಾದ್ದರಿಂದ, ಆ ದೃಶ್ಯದ ನೆನಪು ಮಾತ್ರ ಉಳಿದಿದೆ. ಅಣೆಕಟ್ಟು ನಿರ್ಮಾಣದ ಬಳಿಕ, ಈಗ ಶರಾವತಿ ಎರಡೂ ಗುಡ್ಡಗಳ ಅರ್ಧಕ್ಕಿಂತಲೂ ಮೇಲಕ್ಕೆ ಏರಿ ವಿಶಾಲವಾದ ಜಲಸಾಗರದಂತೆ ನಿಂತಿದ್ದಾಳೆ.