
ಈ ಹಳ್ಳಿಯ ಜನರು ತಮಗೆ ಸಾಕಾಗುವಷ್ಟು ವಿದ್ಯುತ್ತನ್ನು ಯಾರ ನೆರವಿಲ್ಲದೇ ಉತ್ಪಾದಿಸಿಕೊಳ್ಳುವ ಬಗ್ಗೆ ಲೇಖನವೊಂದು 'ತರಂಗ'ದಲ್ಲಿ ಬಂದಿತ್ತು. ಗೆಳೆಯ ದಿನೇಶ್ ಹೊಳ್ಳರ ಆಫೀಸಿನಲ್ಲಿ ಅವರ ಚಾರಣ ಸಂಬಂಧಿತ ಲೇಖನ ಸಂಗ್ರಹದೆಡೆ ಕಣ್ಣಾಡಿಸುತ್ತಿರುವಾಗ ಈ ಲೇಖನ ಸಿಕ್ಕಿತು. ಆ ಲೇಖನದಲ್ಲಿದ್ದ ಚಿತ್ರವೊಂದರಲ್ಲಿ ನಾಲ್ಕಾರು ಜನರು ನಿಂತಿದ್ದರೆ ಅವರ ಹಿಂದೆ ಅಸ್ಪಷ್ಟವಾಗಿ ಜಲಧಾರೆಯೊಂದು ಗೋಚರಿಸುತ್ತಿತ್ತು. ಜಲಪಾತ ಕಂಡೊಡನೆ ಇನ್ನಷ್ಟು ಆಸಕ್ತಿಯಿಂದ ಕಣ್ಣಾಡಿಸಿದಾಗ ಎಳನೀರು, ಸಂಸೆಯ ಸಮೀಪವಿರುವುದೆಂದು ತಿಳಿಯಿತು.
ಈ ಎಳೆಯನ್ನು ಹಿಡಿದು ೨೦೦೪ರ ಫೆಬ್ರವರಿ ತಿಂಗಳ ಅದೊಂದು ರವಿವಾರ ಯಮಾಹಾವನ್ನು ಈ ಹಳ್ಳಿಯತ್ತ ಓಡಿಸಿದೆ. ಜಲಪಾತದಿಂದ ಹರಿದು ಬರುವ ನೀರನ್ನು ದಾಟಿಹೋಗಲು ಇರುವ ಸಣ್ಣ ಸೇತುವೆಯನ್ನು ದಾಟಿದ ಕೂಡಲೇ ಸಿಗುವ ಮೊದಲ ಮನೆ ಶ್ರೀ ಸತ್ಯೇಂದ್ರ ಹೆಗಡೆಯವರದ್ದು. ಇವರ ಮನೆಯ ಹಿಂಭಾಗದಲ್ಲಿರುವ ತೋಟದಲ್ಲಿ ಒಂದೈದು ನಿಮಿಷ ಮೇಲೇರಿದರೆ ಮಾವಿನಸಸಿ ಹೊಳೆಯಿಂದ ನಿರ್ಮಿತವಾಗುವ ಈ ಜಲಪಾತದೆಡೆ ತಲುಪಬಹುದು. ಜಲಧಾರೆ ಸಂಪೂರ್ಣವಾಗಿ ಒಣಗಿತ್ತು. ಇದೊಂದು ಮಳೆಗಾಲದ ಜಲಧಾರೆ ಎಂಬ ವಿಷಯ ತಿಳಿದಿರಲಿಲ್ಲ. 'ಮಳೆ ಬಿದ್ದ ಮೇಲೆ ಬನ್ನಿ. ಚೆನ್ನಾಗಿರುತ್ತೆ', ಎಂದು ಹೆಗ್ಡೆಯವರು ನನ್ನನ್ನು ಬೀಳ್ಕೊಟ್ಟರು. ಆ ವರ್ಷ ಮಳೆರಾಯ ಬೇಗನೇ ಆಗಮಿಸಿದ್ದರಿಂದ ಮೇ ತಿಂಗಳ ಕೊನೆಗೆ ಮತ್ತೂಮ್ಮೆ ಈ ಹಳ್ಳಿಗೆ ಭೇಟಿ ನೀಡಿದೆ. ಮತ್ತೆ ಹೆಗ್ಡೆಯವರು ಆದರದಿಂದ ಬರಮಾಡಿಕೊಂಡರು. ಆದರೆ ಮಾವಿನಸಸಿಹೊಳೆ ಜಲಪಾತದಲ್ಲಿ ನೀರಿನ ಪ್ರಮಾಣ ಕಡಿಮೆ ಇತ್ತು. 'ಬಹಳ ಬೇಗನೇ ಬಂದ್ಬಿಟ್ರಿ. ಒಂದೆರಡು ತಿಂಗಳು ಬಿಟ್ಟು ಬರ್ಬೇಕಿತ್ತು', ಎನ್ನುತ್ತಾ ಮತ್ತೊಮ್ಮೆ ಹೆಗ್ಡೆಯವರು ಬೀಳ್ಕೊಟ್ಟರು.
ಜೂನ್ ೨೦೦೪ರ ಕೊನೇ ವಾರದಲ್ಲಿ ಗೆಳೆಯ ದಿನೇಶ್ ಹೊಳ್ಳ, 'ನಿಮ್ಮಲ್ಲಿ ಮಾವಿನಸಸಿಹೊಳೆ ಜಲಪಾತದ ಫೋಟೊ ಇದೆಯಾ' ಎಂದು ಕೇಳಿದಾಗ, 'ಇದೆ, ಆದರೆ ಹೆಚ್ಚು ನೀರಿರಲಿಲ್ಲ ಅಲ್ಲಿ. ಬೇಕಿದ್ದರೆ ಮತ್ತೊಮ್ಮೆ ಹೊಗೋಣ' ಎಂದಾಗ ಅವರು ಒಪ್ಪಿದರು. ಶನಿವಾರ ನಮಗೆ 'ಹಾಫ್ ಡೇ' ಆಗಿರುವುದು ಚಾರಣ/ಪ್ರಯಾಣ ಕಾರ್ಯಕ್ರಮಗಳಿಗೆ ಬಹಳ ಉಪಯುಕ್ತವಾಗುತ್ತದೆ. ಜುಲಾಯಿ ೩, ೨೦೦೪ ರಂದು ಮತ್ತೆ ಈ ಹಳ್ಳಿಯೆಡೆ ಹೊರಟೆ. ಈ ಬಾರಿ ಜೊತೆಯಲ್ಲಿ ದಿನೇಶ್ ಇದ್ದರು. ನಾವಿಬ್ಬರೂ ಮಂಗಳೂರಿನಿಂದ ಹೊರಟಾಗಲೇ ಮಧ್ಯಾಹ್ನ ೧.೩೦ ಆಗಿತ್ತು. ಮೂಡಬಿದ್ರೆಯಲ್ಲಿ ಟಯರ್ ಪಂಕ್ಚರ್ ಆಗಿ, ಸರಿ ಮಾಡಿಸಿ ಹೊರಟಾಗ ೩.೩೦. ರಭಸವಾಗಿ ಮಳೆ ಸುರಿಯುತ್ತಿದ್ದರಿಂದ ನಿಧಾನವಾಗಿ ಬೈಕನ್ನು ಚಲಾಯಿಸಬೇಕಾಯಿತು. ಹಳ್ಳಿ ತಲುಪಿದಾಗ ಸಂಜೆ ೬ ಆಗಿತ್ತು.


ಮತ್ತೊಮ್ಮೆ ಸತ್ಯೇಂದ್ರ ಹೆಗ್ಡೆ ನನ್ನನ್ನು ಬರಮಾಡಿಕೊಂಡರು. ಅಂತೂ ನನ್ನ ೩ನೇ ಭೇಟಿಯಲ್ಲಿ ಏನು ನೋಡಬೇಕಿತ್ತೋ ಅದು ಸಾಧ್ಯವಾಯಿತಲ್ಲಾ ಎಂದು ಅವರಿಗೆ ಖುಷಿ. ಮಾವಿನಸಸಿಹೊಳೆ ಜಲಪಾತ ಭೋರ್ಗರೆಯುತ್ತಿತ್ತು. ವಿದ್ಯುತ್ ಉತ್ಪಾದಿಸುವ ಪಂಪ್ ಹೌಸ್ ಬಳಿ ನಿಧಾನವಾಗಿ ಕೆಳಗಿಳಿದು, ರಭಸವಾಗಿ ಹರಿಯುತ್ತಿದ್ದ ಮಾವಿನಸಸಿಹೊಳೆಯಲ್ಲಿ ಕಾಲಿಟ್ಟೆವು. ತಂಪು ತಂಪು ತಂಪು. ಹಾಕಿದ್ದ ರೈನ್ ಕೋಟ್ ನ್ನು ಭೇದಿಸಿ ಚಳಿಗಾಳಿ ಮೈಯನ್ನು ಕೊರೆಯುತ್ತಿತ್ತು. ಈ ನೀರು ಇನ್ನಷ್ಟು ತಂಪಾಗಿದ್ದು, ನೀರಲ್ಲಿ ಹೆಜ್ಜೆಯಿಟ್ಟು ಮುನ್ನಡೆಯಲು ಕಷ್ಟವಾಗುತ್ತಿತ್ತು. ಮೇಲೆ ಸುಮಾರು ೪೦ಅಡಿಯಷ್ಟು ಎತ್ತರದಿಂದ ಧುಮುಕುವ ಮಾವಿನಸಸಿಹೊಳೆ ಜಲಪಾತ ನಂತರ ಇಳಿಜಾರಿನಲ್ಲಿ ರಭಸವಾಗಿ ಕೆಳಗೆ ಹರಿಯುತ್ತದೆ. ಈ ಇಳಿಜಾರನ್ನೂ ಸೇರಿಸಿದರೆ ಒಟ್ಟಾರೆ ಎತ್ತರ ಸುಮಾರು ೭೦ಅಡಿಯಷ್ಟು ಆಗಬಹುದು. ಸರಿಯಾಗಿ ಜಲಪಾತದ ಮುಂದೆ ನಿಂತರೆ ಅದೊಂದು ಮೋಹಕ ದೃಶ್ಯ. ಬೇಕಾದ ಫೋಟೋಗಳನ್ನು ಕ್ಲಿಕ್ಕಿಸಿ, ಅಲ್ಲೊಂದು ೧೫ನಿಮಿಷ ಕಳೆದು ಮರಳಿ ಹೆಗ್ಡೆಯವರ ಮನೆಗೆ ಬಂದೆವು.

ಆಗ ಹೆಗ್ಡೆಯವರು ಅವರ ಮನೆಯ ಮುಂದಿರುವ ಗುಡ್ಡದಲ್ಲಿ, ಕಾಡಿನ ಮರೆಯಲ್ಲಿ ಅಡಗಿರುವ ಮತ್ತೊಂದು ಜಲಪಾತವನ್ನು ತೋರಿಸಿದರು. ಒಂದು ಜಲಧಾರೆ ನೋಡಲು ಬಂದ ನಮಗೆ ಇದೊಂದು ಬೋನಸ್. ಈ ಜಲಪಾತದ ಹೆಸರು ಬಡಮನೆ ಅಬ್ಬಿ ಜಲಪಾತ ಎಂದು. ಬಡಮನೆ ಎಂಬ ಹಳ್ಳಿಯಿಂದ ಹರಿದು ಬರುವ ಹಳ್ಳದಿಂದ ಉಂಟಾಗಿರುವುದರಿಂದ ಈ ಜಲಪಾತಕ್ಕೆ ಆ ಹೆಸರು. ಅವರ ಮನೆಯಿಂದ ೫ನಿಮಿಷ ನಡೆದು, ೧೫ ನಿಮಿಷ ಕಠಿಣ ಏರುದಾರಿಯನ್ನು ಹತ್ತಿ, ಈ ಜಲಪಾತದ ಪಾರ್ಶ್ವಕ್ಕೆ ಬರಬಹುದು. ಸುಮಾರು ೬೦ಅಡಿ ಎತ್ತರವಿರುವ ಒಂದೇ ಜಿಗಿತದ ಜಲಧಾರೆ, ನಂತರ ಮುಂದೆ ೧೦೦ಅಡಿಗಳಷ್ಟು ಕೆಳಗೆ ಅಡ್ಡಾದಿಡ್ದಿಯಾಗಿ ಹರಿದು, ಮಾವಿನಸಸಿಹೊಳೆ ಜಲಪಾತದಿಂದ ಹರಿದು ಬರುವ ನೀರನ್ನು ಸೇರಿಕೊಳ್ಳುತ್ತದೆ. ಹಳ್ಳಿಯಿಂದ ಸುಮಾರು ಒಂದು ತಾಸು ನಡೆದರೆ ಬಂಗ್ರಬಲಿಗೆ ಎಂಬಲ್ಲಿ ಇನ್ನೊಂದು ಸಣ್ಣ ಜಲಪಾತವಿದೆ ಎಂದು ಹೆಗ್ಡೆಯವರು ತಿಳಿಸಿದಾಗ ನನಗಿನ್ನೂ ಸಂತೋಷವಾಯಿತು. ಅಂದು ಅದಾಗಲೇ ಕತ್ತಲಾಗುತ್ತಿದ್ದರಿಂದ 'ಮುಂದಿನ ಸಲ ಬಂದಾಗ ಕರೆದೊಯ್ಯುವೆ' ಎಂದು ನಮ್ಮನ್ನು ಬೀಳ್ಕೊಟ್ಟರು ಹೆಗ್ಡೆಯವರು.
ನಾವು ಹಳ್ಳಿಯಿಂದ ಹೊರಟಾಗ ೭.೧೫ ಆಗಿತ್ತು. ಘಾಟಿಯಲ್ಲಿ ದಟ್ಟವಾದ ಮಂಜು. ಏನೇನೂ ಕಾಣಿಸುತ್ತಿರಲಿಲ್ಲ. ರಸ್ತೆಯ ಅಂಚಿನಲ್ಲಿ ಬೆಳೆದಿರುವ ಹುಲ್ಲು ಮಾತ್ರ 'ಹೆಡ್ ಲೈಟ್' ಬೆಳಕಿನಲ್ಲಿ ಮುಂದಿನ ಚಕ್ರದ ಪಕ್ಕದಲ್ಲಿ ಮಾತ್ರ ಕಾಣಿಸುತ್ತಿತ್ತು. ಅದನ್ನೇ ಆಧಾರವಾಗಿಟ್ಟುಕೊಂಡು ಬಹಳ ನಿಧಾನವಾಗಿ ಬೈಕು ಚಲಾಯಿಸುತ್ತಾ ಬಂದೆವು. ೧೦ಕಿಮಿ ಕ್ರಮಿಸಲು ೪೦ ನಿಮಿಷ ಬೇಕಾದವು. ಹಾಗಿತ್ತು ಮಂಜಿನ ಹಿತವಾದ ಹಾವಳಿ. ಮಂಗಳೂರು ತಲುಪುವಷ್ಟರಲ್ಲಿ ಉಡುಪಿಗೆ ಕೊನೆಯ ಬಸ್ಸು ಹೊರಟಾಗಿರುತ್ತದೆ ಎಂದು, ಪಡುಬಿದ್ರೆ ಎಂಬಲ್ಲಿಗೆ ಬಂದಾಗ ೧೦.೩೦ ಆಗಿತ್ತು. ಇಲ್ಲಿಂದ ನಾನು ಬಸ್ಸಿನಲ್ಲಿ ಉಡುಪಿಗೆ ಬಂದರೆ ದಿನೇಶ್ ನನ್ನ ಬೈಕನ್ನು ಚಲಾಯಿಸಿ ಮಂಗಳೂರಿನೆಡೆ ತೆರಳಿದರು.
ಇದೊಂದು ಶಾಂತ ಮತ್ತು ಸುಂದರ ಹಳ್ಳಿ. ೨ ಗುಡ್ಡಗಳ ನಡುವೆ ಇರುವ ಈ ಹಳ್ಳಿಗೆ ದಾರಿ ಇರುವುದು ಬಲಬದಿಯ ಗುಡ್ಡದಿಂದ. ನಾಲ್ಕಾರು 'ಯು' ತಿರುವುಗಳನ್ನೊಳಗೊಂಡ ಈ ರಸ್ತೆಯನ್ನು ಹಳ್ಳಿಗರೇ ನಿರ್ಮಿಸಿಕೊಂಡಿದ್ದಾರೆ. ಯಾವಾಗಲೂ ಇರುವ ಮಂಜು, ನೀರಿನ ಸದ್ದು, ತಂಪಾದ ಗಾಳಿ, ೨ ಜಲಪಾತಗಳು, ಅನತಿ ದೂರದಲ್ಲಿ ದಟ್ಟವಾದ ಕಾಡು ಮತ್ತು ಯಾವಾಗಲೂ ನಗುನಗುತ್ತಾ ಸ್ವಾಗತಿಸುವ ಜನರು, ಇಷ್ಟೆಲ್ಲಾ ಇರುವ ಈ ಹಳ್ಳಿಗೆ ಸರಿಯಾದ ಹೆಸರೇ ಸಿಕ್ಕಿದೆ.
ಹಳ್ಳಿಗೆ ವಿದ್ಯುತ್ ಸಂಪರ್ಕ ಇಲ್ಲ. ಅದ್ದರಿಂದ ಹಳ್ಳಿಗರು ಮಾವಿನಸಸಿಹೊಳೆ ಜಲಪಾತ ಧುಮುಕುವಲ್ಲಿ ಸಣ್ಣ ಟರ್ಬೈನ್ ಒಂದನ್ನು ಹಾಕಿ ೩೦ ಮನೆಗಳಿಗಾಗುವಷ್ಟು ವಿದ್ಯುತ್ತನ್ನು ಉತ್ಪಾದಿಸುತ್ತಾರೆ. ಆದರೆ ಈ ವ್ಯವಸ್ಥೆ ನವೆಂಬರ್ ತಿಂಗಳವರೆಗೆ ಮಾತ್ರ ಕಾರ್ಯಮಾಡುತ್ತದೆ. ಆನಂತರ ನೀರಿನ ಹರಿವು ಕಡಿಮೆಯಾಗುವುದರಿಂದ ನಂತರದ ೬-೭ ತಿಂಗಳು ಮತ್ತೆ ಕತ್ತಲೆ.
ಹಳ್ಳಿಗೆ ದಾರಿ ಚಿಕ್ಕಮಗಳೂರು ಜಿಲ್ಲೆಯಿಂದ ಇದ್ದರೂ, ಅದು ಒಳಪಟ್ಟಿರುವುದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿಗೆ. ಘಟ್ಟದ ಕೆಳಗೆ ಬೆಳ್ತಂಗಡಿ ತಾಲೂಕಿನ ಕೊನೆಯ ಗ್ರಾಮವಾದ ದಿಡುಪೆಗೆ ಇಲ್ಲಿಂದ ಕೇವಲ ೯ ಕಿಮಿ ದೂರ. ಆದರೆ ಈ ದಾರಿಯಲ್ಲಿ ವಾಹನ ಓಡಾಡದು. ತಾಲೂಕು ಕೇಂದ್ರವಾದ ಬೆಳ್ತಂಗಡಿಗೆ ಬರಬೇಕಾದ್ದಲ್ಲಿ ಸುತ್ತುಬಳಸಿ, ೧೦೦ಕಿಮಿ ದೂರವನ್ನು ಕ್ರಮಿಸಬೇಕು. ದಿಡುಪೆ ಮೂಲಕವಾದರೆ ಕೇವಲ ೨೮ ಕಿಮಿ. ಈ ರಸ್ತೆಯನ್ನು, ಸರಿಪಡಿಸಬೇಕೆಂದು ಸರ್ಕಾರದ ಮುಂದಿಟ್ಟಿರುವ ಮನವಿ ಹಾಗೇ ಉಳಿದಿದೆ. ಈ ಕಡೆ ರಸ್ತೆ ಮಾಡಬಾರದೆಂದು ಅರಣ್ಯ ಇಲಾಖೆಯ ಕಟ್ಟಪ್ಪಣೆ.
ಕೊನೆಗೂ ಬೇಸತ್ತ ಜನರು, ಹಾರೆ, ಗುದ್ದಲಿ ಇತ್ಯಾದಿ ಸಲಕರಣೆಗಳನ್ನು ಹಿಡಿದು, ಗುಪ್ತ ಕಾರ್ಯಾಚರಣೆಯೊಂದರಲ್ಲಿ ೨-೩ ವಾರ, ಪ್ರತಿ ದಿನ ರಾತ್ರಿ ಈ ರಸ್ತೆಯನ್ನು ಸರಿ ಮಾಡುವ ಕಾಯಕಕ್ಕಿಳಿದರು. ಇದು ನಡೆದದ್ದು ಸುಮಾರು ಒಂದು ವರ್ಷದ ಹಿಂದೆ. ಈ ವಿಷಯವನ್ನು ಬಲೂ ಗುಪ್ತವಾಗಿರಿಸಲಾಗಿತ್ತು. ೩-೪ ವಾರಗಳಲ್ಲಿ ರಸ್ತೆ ರೆಡಿಯಾಯಿತು. ಅರಣ್ಯ ಇಲಾಖೆಗೆ ತಿಳಿದು ಅವರು ಓಡೋಡಿ ಬಂದು, ರಸ್ತೆ ನೋಡಿ ಗುಟುರು ಹಾಕಿದರಷ್ಟೇ ವಿನ: ಮತ್ತೇನೂ ಮಾಡಲಾಗಲಿಲ್ಲ ಅವರಿಂದ. ಹಳ್ಳಿಗರಲ್ಲಿ ಕೇಳಿದರೆ, 'ನಮಗೆ ಗೊತ್ತಿಲ್ಲ ರಸ್ತೆ ಯಾರು ಮಾಡಿದರೆಂದು' ಎಂಬ ನಿರ್ಲಿಪ್ತ ಉತ್ತರ. ಕೇಸು ಹಾಕೋಣವೆಂದರೆ ಯಾರ ಮೇಲೆ? ಮತ್ತು, '೮-೯ ಕಿಮಿ ರಸ್ತೆ ಮಾಡುತ್ತಿರಬೇಕಾದರೆ, ಈ ಅರಣ್ಯ ಇಲಾಖೆ ಏನು ಮಾಡುತ್ತಿತ್ತು? ಗಾಢ ನಿದ್ರೆಯಲ್ಲಿತ್ತೇ' ಎಂಬ ಪ್ರಶ್ನೆಗಳಿಗೆ ಉತ್ತರ ನೀಡಿ ಮುಜುಗರಕ್ಕೊಳಬೇಕಾಗುವ ಸಂಧಿಗ್ದ ಪರಿಸ್ಥಿತಿ! ಈಗ ಈ ರಸ್ತೆಯಿಂದ ಹಳ್ಳಿಗರು ಜೀಪ್, ಬೈಕುಗಳನ್ನು ಸಲೀಸಾಗಿ ಓಡಿಸಿ ದಿಡುಪೆ ಮೂಲಕ ಸುಲಭದಲ್ಲಿ ತಾಲೂಕು ಕೇಂದ್ರ ಬೆಳ್ತಂಗಡಿಗೆ ತೆರಳುತ್ತಾರೆ.
ಈ ಹಳ್ಳಿಗೆ ಮೊದಲು ಹೆಚ್ಚಿನವರು ಚಾರಣಕ್ಕೆಂದು ಬರುತ್ತಿರಲಿಲ್ಲ. ನಾನು ತೆರಳಿದ ನಂತರ, ಮಂಗಳೂರು ಯೂತ್ ಹಾಸ್ಟೆಲಿನ ೩ ಚಾರಣ ಕಾರ್ಯಕ್ರಮಗಳನ್ನು ಈ ಹಳ್ಳಿಗೆ, ಬಂಗ್ರಬಲಿಗೆ ಮತ್ತು ಹಿರಿಮರಿಗುಪ್ಪೆಗೆ ಆಯೋಜಿಸಲಾಗಿತ್ತು. ಈ ಚಾರಣಗಳಿಗೆ ಬಂದವರು ನಂತರ ಅವರಾಗಿಯೇ ಗುಂಪು ಕಟ್ಟಿಕೊಂಡು ಈ ಸ್ಥಳಗಳಿಗೆ ಹೋಗಿ ಬರಲು ಆರಂಭಿಸಿದರು. ಹಳ್ಳಿಯಿಂದ ಬಂಗ್ರಬಲಿಗೆ ದಾರಿಯಲ್ಲಿ ಸ್ವಲ್ಪ ದೂರ ಕಾಲಿಟ್ಟರೆ, ಅದು ಕುದುರೆಮುಖ ರಕ್ಷಿತಾರಣ್ಯಕ್ಕೆ ಒಳಪಟ್ಟಿರುವ ಜಾಗ. ಅದಲ್ಲದೇ ಹಳ್ಳಿಗೆ ಇಳಿಯುವಾಗ ಸಿಗುವ 'ಯು' ತಿರುವುಗಳಲ್ಲಿ ೨ ತಿರುವುಗಳು ಕುದುರೆಮುಖ ರಕ್ಷಿತಾರಣ್ಯದೊಳಗೇ ಇವೆ! ಎಲ್ಲಾಕಡೆ ಗೇಟುಗಳನ್ನು ಹಾಕಿ ರಕ್ಷಿತಾರಣ್ಯದೊಳಗೆ ಅಪ್ಪಣೆಯಿಲ್ಲದೆ ಯಾರಿಗೂ ಪ್ರವೇಶವಿಲ್ಲದಂತೆ ಮಾಡಿದ್ದ ಅರಣ್ಯ ಇಲಾಖೆಗೆ, ಈ ಹಳ್ಳಿಯ ಮುಖಾಂತರ ಇತ್ತೀಚೆಗೆ ಬಹಳಷ್ಟು ಚಾರಣ ಕುದುರೆಮುಖ ರಕ್ಷಿತಾರಣ್ಯದೊಳಗೆ ನಡೆಯುತ್ತಿದೆ ಎಂಬ ಮಾಹಿತಿ ದೊರಕಿತು.
ನಮ್ಮೊಲ್ಲೊಬ್ಬರಾದ ಗಣಪತಿ ಭಟ್ಟರು ತನ್ನ ಕಾಲೇಜಿನ ಮಕ್ಕಳನ್ನು ಕರಕೊಂಡು ಒಂದು ದಿನದ ಚಾರಣಕ್ಕೆ ಇಲ್ಲಿಗೆ ತೆರಳಿದರೆ, ಇಳಿಜಾರಿನ ದಾರಿ ಶುರುವಾಗುವಲ್ಲೇ ಅರಣ್ಯ ಇಲಾಖೆಯ ಗೇಟು ಮತ್ತು ಆ ಗೇಟನ್ನು ಕಾಯಲು ಇಬ್ಬರು ಸಿಬ್ಬಂದಿಗಳು! ಅಪ್ಪಣೆಯಿಲ್ಲದೆ ಒಳಗೆ ಪ್ರವೇಶವಿಲ್ಲ ಎಂಬ ನಾಟಕ ಬೇರೆ. ಮೊನ್ನೆ ಎಪ್ರಿಲ್ ೨೦೦೭ರ ಅದೊಂದು ರವಿವಾರ ಗೆಳೆಯರಾದ ರಮೇಶ್ ಕಾಮತ್ ಮತ್ತು ಸುಧೀರ್ ಕುಮಾರ್ ಸಂಸಾರ ಸಮೇತ ಆದಿತ್ಯವಾರ ಕಳೆಯಲೆಂದು ಕುದುರೆಮುಖಕ್ಕೆ ತೆರಳಿದ್ದರು. ಪರಿಚಯವಿದ್ದುದರಿಂದ ಹಳ್ಳಿಗೆ ತೆರಳಿ ಹೆಗಡೆಯವರನ್ನು ಭೇಟಿ ಮಾಡಿ ಬರೋಣ ಎಂದು ಸಿಹಿತಿಂಡಿ ಇತ್ಯಾದಿಗಳನ್ನು ಮಂಗಳೂರಿನಿಂದಲೇ ಖರೀದಿಸಿ ತೆರಳಿದ್ದರು. ಆಗ ಅಲ್ಲಿ ಗೇಟ್ ಇರಲಿಲ್ಲ! ಅಲ್ಲೇ ವಾಹನ ನಿಲ್ಲಿಸಿ ಇಳಿಜಾರಿನ ಹಾದಿಯಲ್ಲಿ ನಡೆಯುತ್ತಾ ಸಾಗುತ್ತಿರುವಾಗ, ಕೆಳಗೆ ಸತ್ಯೇಂದ್ರ ಹೆಗಡೆಯವರು ತಮ್ಮ ಮನೆಯ ಮೇಲೇರಿ ಹೆಂಚುಗಳನ್ನು ಸರಿಪಡಿಸುತ್ತಿರುವುದನ್ನು ಇವರು ನೋಡಿದ್ದಾರೆ. ಇವರು ಬರುತ್ತಿರುವುದನ್ನು ಕಂಡ ಹೆಗಡೆಯವರು ಅವಸರದಿಂದ ಕೆಳಗಿಳಿದು ಮನೆಯೊಳಗೆ ತೆರಳಿದ್ದನ್ನೂ ಇವರು ನೋಡಿದ್ದಾರೆ. ಮನೆಗೆ ತೆರಳಿದರೆ ಹೆಗಡೆಯವರ ಮಕ್ಕಳಿಬ್ಬರು 'ಅಪ್ಪ ಅಮ್ಮ ಇಬ್ಬರೂ ಇಲ್ಲ' ಎಂದು ಇವರು ಕೇಳುವ ಮೊದಲೇ ಹೇಳಿದ್ದಾರೆ.
ಬಹುಶ: ಅರಣ್ಯ ಇಲಾಖೆಯ ಗತ್ತಿನ ಅಧಿಕಾರಿಗಳು ಹೆಗಡೆಯವರಿಗೆ ಬಹಳ ಕಿರುಕುಳ ಕೊಟ್ಟಿರಬೇಕು. ಯಾರು ಬಂದಿರುವುದು, ಯಾಕೆ ಬಂದಿದ್ದರು, ನೀವ್ಯಾಕೆ ಅವರನ್ನು ಅಲ್ಲಿಲ್ಲಿ ಕರಕೊಂಡು ಜಾಗಗಳನ್ನು ತೋರಿಸುತ್ತಿದ್ದೀರಿ ...ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿ ಬಹಳ ಕಾಟ ಕೊಟ್ಟಿರಬೇಕು. ದೂರದಲ್ಲಿ ನನ್ನ ಬೈಕ್ ಕಂಡೊಡನೆ ಮನೆಯಿಂದ ಹೊರಬಂದು ಮಂದಹಾಸ ಬೀರುತ್ತಾ ಸ್ವಾಗತಿಸುತ್ತಿದ್ದ ಸತ್ಯೇಂದ್ರ ಹೆಗಡೆಯವರು, ತಾನು ಮನೆಯೊಳಗಿದ್ದೂ, ಮಕ್ಕಳಿಂದ 'ಇಲ್ಲ' ಎಂದು ಹೇಳಿಸಬೇಕಾದರೆ ಈ ಅರಣ್ಯ ಇಲಾಖೆಯ ದರಿದ್ರ ಸಿಬ್ಬಂದಿಗಳು ಅವರನ್ನು ಯಾವ ಪರಿ ಕಾಡಿರಬೇಡ.
ಈಗ ನಮ್ಮಲ್ಲಿ ಯಾರೂ ಈ ಹಳ್ಳಿಯೆಡೆ ಹೋಗುವ ಮಾತನ್ನಾಡುತ್ತಿಲ್ಲ. ನಮ್ಮಿಂದ ಹಳ್ಳಿಗರಿಗೆ ತೊಂದರೆಯುಂಟಾಗುವುದಾದರೆ ನಾವು ಅಲ್ಲಿಂದ ದೂರ ಉಳಿಯುವುದೇ ಒಳಿತು.
ಮಾಹಿತಿ: ಯು.ಬಿ.ರಾಜಲಕ್ಷ್ಮೀ
6 ಕಾಮೆಂಟ್ಗಳು:
ಪ್ರಿಯ ರಾಜೇಶ್,
ತುಂಬ ಉತ್ತಮ ಒಳನೋಟದ ಬರಹ.
ಹೊರನೋಟದ ಚಂದ ಹೇಳಲು ನನ್ನ ಮಾತು ಬೇಡ, ನಿಮ್ಮ ಬ್ಲಾಗಿಗೆ ನಿಂ ಬ್ಲಾಗೇ ಸಾಟಿ.
ಪ್ರೀತಿಯಿಂದ
ಸಿಂಧು
ರಾಜೇಶ್ ...
ಮಣಿಪಾಲದ ಹತ್ತಿರ ಇದ್ದ ಮಂಚಿ ಫಾಲ್ಸ್ ಈಗ ಇದ್ಯ .....
ಸೂರಜ್
ಸಿಂಧು,
ಧನ್ಯವಾದಗಳು.
ಸೂರಜ್,
ನಾನು ಮಂಚಿ ಜಲಧಾರೆ ನೋಡಿಲ್ಲ. ನೋಡಿದವರ ಪ್ರಕಾರ,ವೇಗವಾಗಿ ಬೆಳೆಯುತ್ತಿರುವ ಮಣಿಪಾಲ ಈ ಜಲಧಾರೆಯನ್ನು ಬಲಿ ಪಡೆದಿದೆ. ಈಗ ಆ ಜಲಧಾರೆ ಇಲ್ಲ. ಹೆಚ್ಚಿನ ಮಾಹಿತಿ ನನ್ನಲ್ಲಿಲ್ಲ.
ರಾಜೇಶ್...
ನಿಮ್ಮ ಚಾರಣ ಪ್ರೀತಿಯನ್ನು ಯಾರಾದರೂ ಮೆಚ್ಚಲೇಬೇಕು. ನಿಮ್ಮ ಅನುಭವಗಳನ್ನು ಹೀಗೆ ತಪ್ಪದೆ ದಾಖಲಿಸುತ್ತಿರಿ.
ಮಲೆನಾಡಿನಲ್ಲಿ ಆರು ತಿಂಗಳ ಪೂರ್ಣ ಮಳೆಗಾಲದ ಕಾಲದಲ್ಲಿ (ಅಂದರೆ, ನಾವೆಲ್ಲಾ ಚಿಕ್ಕವರಿದ್ದಾಗ)'ಅಬ್ಬಿ ಬಚ್ಚಲು' ಮಾಡುತ್ತಿದ್ದರು. ಮನೆಯ ಹಿಂದಿನ ಕಡಿದಾದ ದರೆಯಲ್ಲಿ ಮಳೆಗಾಲದಲ್ಲಿ ಒರತೆ ಎದ್ದು, ಸಣ್ಣ ಜಲಪಾತವೇ ಸೃಷ್ಟಿಯಾಗುತ್ತಿತ್ತು! ನಿಸರ್ಗವೇ ಒದಗಿಸಿಕೊಡುತ್ತಿದ್ದ ಈ ಜಲಧಾರೆಯನ್ನು ಹರಿಣಿಯ ಮೂಲಕ ಹಂಡೆಗೆ ತುಂಬಿಸಿ ಕಾಯಿಸುತ್ತಿದ್ದರು. ನೀರು ಸಮೃದ್ಧವಾಗಿದ್ದ ಕೆಲವು ಪ್ರದೇಶಗಳಲ್ಲಿ ಚಳಿಗಾಲದಲ್ಲೂ ಈ ಒರತೆ ಬತ್ತುತ್ತಿರಲಿಲ್ಲ. ಆದರೆ ಇತ್ತೀಚೆಗೆ ಯಾರ ಮನೆಯಲ್ಲೂ ಅಬ್ಬಿ ಬಚ್ಚಲು ನಿರ್ಮಿಸಿರುವ ಬಗ್ಗೆ ಕೇಳಿಲ್ಲ.
ಅಲಕಾ,
ಮೆಚ್ಚುಗೆಗೆ ಧನ್ಯವಾದಗಳು.
ಇತ್ತೀಚೆಗೆ ಅಬ್ಬಿ ಬಚ್ಚಲು ನಿರ್ನಿಸದಿರುವ ಬಗ್ಗೆ ಒಂದೆರಡು ಕಾರಣಗಳಿವೆ. ೬ ತಿಂಗಳ ಮಳೆಗಾಲ ೩ ತಿಂಗಳಿಗೆ ಇಳಿದಿರುವುದು. ಮಲೆನಾಡಿನಲ್ಲೂ ಅಂತರ್ಜಲ ಮಟ್ಟ ಕಡಿಮೆಯಾಗಿ ಒರತೆಗಳೆಲ್ಲಾ ಮಾಯವಾಗಿರುವುದು. ಕಾಡನ್ನು ಕಡಿದು ತೋಟ ಮಾಡಿರುವುದು. ಒರತೆ ಒಂದು ಸಲ ಮಾಯವಾದರೆ ನಂತರ ಏನೇ ಮಾಡಿದರೂ ಮತ್ತದು ಸೃಷ್ಟಿಯಾಗಲಾರದು. ನಾನು ದೇವಕಾರದಲ್ಲಿ ಆತಿಥ್ಯ ಸ್ವೀಕರಿಸಿದ ಮನೆಯಲ್ಲಿದ್ದದ್ದು 'ಅಬ್ಬಿ ಬಚ್ಚಲು'. ಯಲ್ಲಾಪುರದ ಸಮೀಪವಿರುವ ಶಿರಲೆ ಜಲಧಾರೆಗೆ ತೆರಳಿದಾಗ ಅಲ್ಲಿನ ಸಮೀಪದ ಮನೆಯಲ್ಲಿದ್ದದ್ದು 'ಅಬ್ಬಿ ಬಚ್ಚಲು'.
ಕಳೆದ ಭಾನುವಾರ ಕಳಸದ ಹತ್ತಿರ ಇರುವ ಬೈನೆಕಾಡು(ಅಬ್ಬುಗುಡಿಗೆ) ಜಲಪಾತ ನೋಡಿಕೊಂಡು ವಾಪಾಸ್ ಮಂಗಳೂರಿಗೆ ಬರುವಾಗ, ಪ್ರಯಾಣವನ್ನು ಸಣ್ಣ ಮಾಡಲು ನೀವು ಈ ಬ್ಲಾಗಿನಲ್ಲಿ ವಿವರಿಸಿದ ದಾರಿಯಲ್ಲಿ ಪ್ರಯಣಿಸ್ಸಿದ್ದೆ. ಸುರಕ್ಷಿತವಾಗಿ ದಿಡುಪೆ ಸೇರಿಕೊಂಡ ಮೇಲೇನೆ ಸರಿಯಾಗಿ ಉಸಿರಾಡಿದ್ದು. ದಾರಿ ಉದ್ದಕ್ಕೂ ಆನೆ ಲದ್ದಿ ನೋಡಿ ದಿಗಿಲಾಗಿತ್ತು , ಜೊತೆಗೆ ದಟ್ಟಕಾಡು . ಜೀಪ್ ಇದ್ದವರು ಆ ದಾರಿಯಲ್ಲಿ ಆರಾಮವಾಗಿ ಓಡಾಡಬಹುದು. ಬೈಕ್ನಲ್ಲಿ ಹೋದ ನಮ್ಮಂತವರನ್ನು ದೇವರೇ ಕಾಪಾಡಬೇಕು .
ಕಾಮೆಂಟ್ ಪೋಸ್ಟ್ ಮಾಡಿ