ಭಾನುವಾರ, ಜನವರಿ 31, 2010

ಚಾರಣ ಚಿತ್ರ - ೪


ಜಲಧಾರೆಯೊಂದರ ತುದಿಯಿಂದ ನೋಟ - ಬೆಟ್ಟ, ಕಣಿವೆ, ನದಿ, ಮೋಡ, ಕಾಡು, ಗದ್ದೆ.

ಮಂಗಳವಾರ, ಜನವರಿ 26, 2010

ಸಂಗೊಳ್ಳಿ ರಾಯಣ್ಣನ ಸ್ಮರಣೆಯಲ್ಲಿ...


ಸಂಗೊಳ್ಳಿ ರಾಯಣ್ಣ ಅಮರನಾಗಿ ಇಂದಿಗೆ ಸರಿಯಾಗಿ ೧೭೯ ವರ್ಷಗಳಾದವು. ಕಿತ್ತೂರು ಚೆನ್ನಮ್ಮನ ನೆಚ್ಚಿನ ಬಂಟನಾಗಿದ್ದ ರಾಯಣ್ಣ ತೋರಿದ ಧೈರ್ಯ ಮತ್ತು ಶೌರ್ಯ ಬ್ರಿಟಿಷರ ನಿದ್ದೆಗೆಡಿಸಿತ್ತು. ಆತನನ್ನು ಹೇಗಾದರೂ ಮಾಡಿ ಸೆರೆ ಹಿಡಿಯಬೇಕೆಂದು ಬ್ರಿಟಿಷರು ಹರಸಾಹಸ ಪಡುತ್ತಿದ್ದರು. ಆದರೆ ಚಾಣಾಕ್ಷ ರಾಯಣ್ಣ ಅವರ ಕೈಗೆ ಸಿಗದೆ ತಪ್ಪಿಸಿಕೊಳ್ಳುತ್ತಿದ್ದ. ಕಡೆಗೂ ತನ್ನ ಜೊತೆಗಾರರ ಮೋಸದಿಂದ ರಾಯಣ್ಣ ಬ್ರಿಟಿಷರಿಗೆ ಸೆರೆಸಿಕ್ಕ. ದಿನಾಂಕ ೨೬-೦೧-೧೮೩೧ರಂದು ರಾಯಣ್ಣನನ್ನು ನಂದಗಡದಲ್ಲಿ ಗಲ್ಲಿಗೇರಿಸಲಾಯಿತು. ಸಂಗೊಳ್ಳಿ ರಾಯಣ್ಣನ ಬಗ್ಗೆ ನಾನು ಏನು ಬರೆಯುವುದು? ರಾಯಣ್ಣನ ಬಗ್ಗೆ ಎಲ್ಲವನ್ನೂ ರಾಜ್ಯದ ಉತ್ತಮ ಬರಹಗಾರರು ಕಥೆಗಾರರು ಬರೆದಾಗಿದೆ. ನನ್ನದೇನಿದ್ದರೂ ಕನ್ನಡ ನಾಡಿನ ಹೆಮ್ಮೆಯ ಧೀರ ಪುತ್ರನಿಗೆ ಒಂದು ಸಣ್ಣ ನಮನ.

ಉತ್ತರ ಕರ್ನಾಟಕದಲ್ಲಿ ರಾಯಣ್ಣನಿಗೆ ಒಂದು ’ಕಲ್ಟ್’ ಇಮೇಜ್ ಇದೆ. ರಾಯಣ್ಣನ ಬಗ್ಗೆ ಕಥೆಗಳನ್ನು ಓದಿದ್ದೆ. ರಾಯಣ್ಣನ ಬಗ್ಗೆ ನಾಟಕಗಳನ್ನೂ ನೋಡಿದ್ದೆ(ರಾಯಣ್ಣನ ಬಗ್ಗೆ ಕಾದಂಬರಿಯೂ ಇದೆ). ಇಷ್ಟೆಲ್ಲಾ ಆದ ಬಳಿಕ ಬಾಕಿ ಉಳಿದದ್ದು ಆತನ ಸಮಾಧಿಗೆ ಭೇಟಿ ನೀಡಿ ನಮಸ್ಕರಿಸುವುದು.


ನಂದಗಡದ ಮೂಲಕ ಈ ಮೊದಲು ೩ ಬಾರಿ ಹಾದುಹೋಗಿದ್ದರೂ ರಾಯಣ್ಣನ ಸಮಾಧಿ ವೀಕ್ಷಿಸಲು ಸಮಯವಿರಲಿಲ್ಲ. ಈ ಬಾರಿ ಅಲ್ಲಿಗೇ ತೆರಳಬೇಕೆಂದು ಪ್ಲ್ಯಾನ್ ಮಾಡಿ ನಂದಗಡ ತಲುಪಿದಾಗ ಸರಿಯಾಗಿ ೧೨ ಗಂಟೆ. ಊರೊಳಗಿನ ರಸ್ತೆಯಲ್ಲಿ ಸ್ವಲ್ಪ ದೂರ ಕ್ರಮಿಸಿದ ಕೂಡಲೇ ರಾಯಣ್ಣನ ಸಮಾಧಿ ಇರುವ ಪ್ರಾಂಗಣ ಸಿಗುತ್ತದೆ. ಪ್ರಾಂಗಣದ ಒಂದು ತುದಿಯಲ್ಲಿ ರಾಯಣ್ಣನ ಸಮಾಧಿ ಇರುವ ಕಟ್ಟೆ ಇದೆ. ಇದರ ಮಗ್ಗುಲಲ್ಲೇ ಒಂದು ದೇವಸ್ಥಾನ. ಸಮಾಧಿಯ ಎದುರೇ ಒಂದು ಸ್ತಂಭವನ್ನು ನಿರ್ಮಿಸಲಾಗಿದೆ. ನಂದಗಡದ (ಅ)ನಾಗರೀಕರಿಗೆ ಈ ಸ್ಥಳದ ಮಹತ್ವದ ಬಗ್ಗೆ ಅಷ್ಟಾಗಿ ಗೊತ್ತಿಲ್ಲವೇನೋ. ಆಡೊಂದನ್ನು ಅಲ್ಲೇ ಕಟ್ಟಿ ಹಾಕಲಾಗಿತ್ತು. ಮಕ್ಕಳು ಸಮೀಪದಲ್ಲೇ ’ಗಿಲ್ಲಿ ದಂಡಾ’ ಆಡುತ್ತಿದ್ದರು. ಸಮಾಧಿಯ ಕಟ್ಟೆ ಮೇಲೆ ಕುಳಿತೇ ಇಸ್ಪೀಟ್ ಆಡುತ್ತಾರೆ ಎಂದು ಇಲ್ಲಿಗೆ ಮೊದಲೇ ಭೇಟಿ ನೀಡಿದ್ದ ಗೆಳೆಯ ವಿವೇಕ್ ಯೇರಿ ತಿಳಿಸಿದ್ದರು.


ನಂದಗಡದಂತಹ ಊರಿನಲ್ಲಿ ನಮಗೆ ನೋಡಲು ಏನಿದೆ ಎಂದು ನಮ್ಮ ವಾಹನ ಚಾಲಕ ಪ್ರವೀಣನ ಪ್ರಶ್ನೆ. ’ರಾಯಣ್ಣನ ಸಮಾಧಿ’ ಎಂದ ಕೂಡಲೇ ಅತ ಪುಳಕಿತನಾದ. ರಾಯಣ್ಣನ ಮಹಾಭಕ್ತನಾದ ಪ್ರವೀಣನಿಗೆ ಈಗ ಸಮಾಧಿ ನೋಡಲು ನನಗಿಂತ ಹೆಚ್ಚು ಆಸಕ್ತಿ! ಪ್ರಾಂಗಣದಲ್ಲಿ ೩ ಆಲದಮರಗಳಿವೆ. ಇವುಗಳಲ್ಲಿ ಒಂದು ರಾಯಣ್ಣನ ಸಮಾಧಿ ಇರುವ ಕಟ್ಟೆಯ ಮೇಲೇ ಇದ್ದರೆ, ಉಳಿದೆರಡು ಪ್ರಾಂಗಣದ ಇನ್ನೆರಡು ಮೂಲೆಗಳಲ್ಲಿದ್ದವು. ಕಟ್ಟೆಯ ಮೇಲೆ ಇರುವ ಆಲದಮರಕ್ಕೇ ರಾಯಣ್ಣನನ್ನು ನೇಣಿಗೆ ಹಾಕಿರಬೇಕು ಎಂದು ನಾನು ಊಹಿಸಿದಾಗ, ’ಯಾವ ಗೆಲ್ಲಿಗೆ’ ಎಂಬ ಪ್ರಶ್ನೆ ಪ್ರವೀಣನಿಂದ.


ಅಲ್ಲೇ ಆಡುತ್ತಿದ್ದ ಮಕ್ಕಳಲ್ಲಿ ಪ್ರವೀಣ, ’ಯಾವ ಗೆಲ್ಲಿಗೆ ರಾಯಣ್ಣನನ್ನು ನೇಣು ಹಾಕಿದ್ದರು’ ಎಂದು ಕೇಳಿದಾಗಲೇ ನಮಗೆ ತಿಳಿದುಬಂದದ್ದು - ಊರಿನ ಹೊರಗೆ ಇರುವ ಆಲದಮರವೊಂದಕ್ಕೆ ರಾಯಣ್ಣನನ್ನು ನೇಣು ಹಾಕಿದ ಬಳಿಕ ದೇಹವನ್ನು ಇಲ್ಲಿ ಹೂಳಲಾಗಿದ್ದು ಮತ್ತು ಕಟ್ಟೆಯ ಮೇಲಿರುವ ಆಲದಮರವನ್ನು ನಂತರ ನೆಡಲಾಗಿತ್ತು ಎಂದು. ಅಲ್ಲೇ ಇರುವ ಮಾಹಿತಿ ಫಲಕದಲ್ಲಿ ರಾಯಣ್ಣನ ಬಗ್ಗೆ ಸಂಕ್ಷಿಪ್ತವಾಗಿ ವಿವರ ನೀಡಲಾಗಿದೆ. ಇಲ್ಲಿ ಬರೆಯಲಾಗಿರುವ ಪ್ರಕಾರ ರಾಯಣ್ಣನ ಆತ್ಮೀಯ ಗೆಳೆಯನಾಗಿದ್ದ ’ಬಿಚ್ಚುಗತ್ತಿ ಚನ್ನಬಸಪ್ಪ’ ಎಂಬವನು ಮಾರುವೇಷದಲ್ಲಿ ಬಂದು ರಾಯಣ್ಣನ ಸಮಾಧಿಯ ಮೇಲೆ ಒಂದು ಅಲದ ಸಸಿಯನ್ನು ನೆಟ್ಟ. ಆ ಸಸಿಯೇ ಇಂದು ಬೃಹತ್ ಆಲದ ಮರವಾಗಿ ಬೆಳೆದು ರಾಯಣ್ಣನ ಸಮಾಧಿಗೆ ನೆರಳು ನೀಡುತ್ತಿದೆ. ಈ ಆಲದ ಮರಕ್ಕೆ ಈಗ ೧೭೯ ವರ್ಷ ವಯಸ್ಸು.


ಊರ ಹೊರಗಿರುವ ಆಲದಮರದೆಡೆ ತೆರಳಿದೆವು. ಮೂಲ ಆಲದಮರ ಎಂದೋ ಅವಸಾನ ಕಂಡಿದೆ. ಈಗ ಇರುವುದು ಅದರ ಮಕ್ಕಳು ಮತ್ತು ಮೊಮ್ಮಕ್ಕಳು. ಇಲ್ಲೂ ಪ್ರವೀಣನಿಗೆ ರಾಯಣ್ಣನನ್ನು ನೇಣು ಹಾಕಿದ ಗೆಲ್ಲು ಯಾವುದು ಎಂದು ಹುಡುಕುವ ತವಕ! ಸಮಾಧಿಯ ಬಳಿ ಇರುವ ಫಲಕವನ್ನೂ ಇಲ್ಲೂ ಹಾಕಲಾಗಿದೆ. ತುಂಬಾ ಶಾಂತ ಪರಿಸರ. ಆಲದಮರವೊಂದನ್ನು ಬಿಟ್ಟು ಬೇರೆ ಯಾವ ಮರವೂ ಸನಿಹದಲ್ಲಿಲ್ಲ. ಆಲದಮರದ ಬುಡಕ್ಕೇ ಒಂದು ಅತಿ ಸಣ್ಣ ಗುಡಿಯಿದೆ. ಊರಿನವರು ಪ್ರತಿ ದಿನ ಇಲ್ಲೊಂದು ದೀಪ ಹಚ್ಚುತ್ತಾರೆ. ನಾವು ತೆರಳಿದಾಗ ಯುವಕನೊಬ್ಬ ದೀಪ ಹಚ್ಚಲು ಬಂದಿದ್ದ. ದೀಪ ಹಚ್ಚಿ, ತೆಂಗಿನಕಾಯಿ ಒಡೆದು, ಅರ್ಧ ತೆಂಗಿನಕಾಯಿ ನಮಗೆ ನೀಡಿದ. ಆ ಶಾಂತ ಪರಿಸರದಲ್ಲಿ ಸ್ವಲ್ಪ ಹೊತ್ತು ಕಳೆದೆವು. ಪ್ರವೀಣನಂತೂ ರಾಯಣ್ಣನ ಗುಣಗಾನ ಮಾಡುವುದರಲ್ಲೇ ಮಗ್ನನಾಗಿದ್ದ.


೧೯೬೯ರಲ್ಲಿ ರಾಯಣ್ಣನ ಬಗ್ಗೆ ಚಲನಚಿತ್ರವೊಂದನ್ನು ನಿರ್ಮಿಸಲಾಗಿತ್ತು. ಈ ವರ್ಷದ ಕೊನೆಯಲ್ಲಿ ತೆರೆ ಕಾಣುವಂತೆ ಇನ್ನೊಂದು ಚಲನಚಿತ್ರವನ್ನು ನಿರ್ಮಿಸಲಾಗುತ್ತಿದೆ. ಕರ್ನಾಟಕ ಸರಕಾರ ರಾಯಣ್ಣನ ಸಮಾಧಿ, ನೇಣಿಗೇರಿಸಿದ ಆಲದಮರ, ಆತನನ್ನು ಸೆರೆ ಹಿಡಿದ ಸ್ಥಳವಾದ ಡೋರಿಹಳ್ಳ (ಅಳ್ನಾವರ ಸಮೀಪದಲ್ಲಿದೆ) ಮತ್ತು ಸಂಗೊಳ್ಳಿಯಲ್ಲಿರುವ (ಕಿತ್ತೂರಿನಿಂದ ೧೮ ಕಿ.ಮಿ. ದೂರದಲ್ಲಿದೆ) ರಾಯಣ್ಣನ ಸ್ಮಾರಕ ಉದ್ಯಾನಗಳನ್ನು ಉತ್ತಮ ಪ್ರವಾಸ ತಾಣಗಳನ್ನಾಗಿ ಮಾಡುವುದರಲ್ಲಿ ಯಾವುದೇ ಆಸಕ್ತಿಯನ್ನು ತೋರಿಸಿಲ್ಲ. ರಾಯಣ್ಣನ ಬಗ್ಗೆ ರಾಜ್ಯದ ಎಷ್ಟು ಜನರಿಗೆ ಗೊತ್ತಿದೆ? ಪಠ್ಯ ಪುಸ್ತಕಗಳಲ್ಲಿ ಆತನ ಬಗ್ಗೆ ಪಾಠಗಳಿವೆಯೇ? ಬೆಂಗಳೂರಿನಲ್ಲಿ ರಾಯಣ್ಣನ ಪ್ರತಿಮೆಯೊಂದನ್ನು ನಿರ್ಮಿಸಬೇಕೆಂಬ ಉತ್ತರ ಕರ್ನಾಟಕದ ಜನರ ಆಸೆ ಇನ್ನೂ ಈಡೇರಿಲ್ಲ. ನಂದಗಡದಲ್ಲಿ ಮುಖ್ಯ ರಸ್ತೆಯಿಂದ ಸುಮಾರು ಒಂದು ಕಿಮಿ ಒಳಗೆ ರಾಯಣ್ಣನ ಸಮಾಧಿ ಇದೆ. ಇಲ್ಲಿ ಯಾವುದೇ ಫಲಕಗಳಿಲ್ಲ. ನಂದಗಡದಲ್ಲಿ ಇತ್ತೀಚೆಗೆ ರಾಯಣ್ಣನ ಸುಂದರ ಪ್ರತಿಮೆಯೊಂದನ್ನು ಅನಾವರಣ ಮಾಡಲಾಗಿದೆ. ರಾಯಣ್ಣನನ್ನು ನೇಣಿಗೇರಿಸಿದ ಆಲದಮರದೆಡೆ ತೆರಳಲು ಇರುವ ರಸ್ತೆಯಲ್ಲಿರುವ ಕಮಾನಿಗೆ ತುಕ್ಕು ಹಿಡಿದು ಅದರಲ್ಲಿ ಬರೆಯಲಾಗಿರುವುದನ್ನು ಓದಲು ಸಾಧ್ಯವಿಲ್ಲ.


ಸಂಗೊಳ್ಳಿ ರಾಯಣ್ಣ ೩೫ರ ಯುವ ಹರೆಯದಲ್ಲೇ ಅಮರನಾದ. ಕನ್ನಡ ನಾಡು ಕಂಡ ಅಪ್ರತಿಮ ಧೀರರಲ್ಲಿ ರಾಯಣ್ಣನೂ ಒಬ್ಬ. ರಾಯಣ್ಣ ಹುಟ್ಟಿದ ದಿನ ಮತ್ತು ಅಮರನಾದ ದಿನ ನಮಗೆ ರಜೆ ಸಿಗಬೇಕೆಂದು ಅದಾಗಲೇ ವಿಧಿಯು ನಿರ್ಧರಿಸಿಯಾಗಿತ್ತೇನೋ. ಬ್ರಿಟಿಷರು ರಾಯಣ್ಣನನ್ನು ಜನವರಿ ೨೬ರಂದು ನೇಣಿಗೇರಿಸಿದರು. ೧೧೯ ವರ್ಷಗಳ ಬಳಿಕ ಅದೇ ದಿನದಂದು ಭಾರತ ಗಣರಾಜ್ಯವಾಯಿತು. ರಾಯಣ್ಣನನ್ನು ನೇಣು ಹಾಕಿದ ಬ್ರಿಟಿಷರು ಭಾರತ ಬಿಟ್ಟು ತೊಲಗಿದ್ದು ಅಗೋಸ್ಟ್ ೧೫ ರಂದು. ರಾಯಣ್ಣ ಹುಟ್ಟಿದ್ದೂ ಅದೇ ದಿನದಂದು, ೧೫೧ ವರ್ಷಗಳ ಮೊದಲು! ಯಾರೂ ನೀಡದ ಗೌರವವನ್ನು ಕೆಲವೊಮ್ಮೆ ವಿಧಿ ನೀಡುತ್ತದೆಯಂತೆ.

ರಾಯಣ್ಣನ ಬಗ್ಗೆ ಲೇಖನವನ್ನು ಇಲ್ಲಿ ಓದಬಹುದು.

ಶುಕ್ರವಾರ, ಜನವರಿ 15, 2010

ಕೊನೆಯಲ್ಲಿ ಎಡವಿದ ಕರ್ನಾಟಕ - ೨

ಮೊದಲನೇ ಭಾಗ ಇಲ್ಲಿದೆ.

ಈ ಋತುವಿನ (೨೦೦೯-೧೦) ಆರಂಭದಲ್ಲಿ ಕರ್ನಾಟಕ ರಣಜಿ ತಂಡದ ಆಯ್ಕೆಗಾರರು ಕೆಲವು ದಿಟ್ಟ ನಿರ್ಧಾರಗಳನ್ನು ತೆಗೆದುಕೊಂಡರು. ಯಾವುದೇ ಶಿಫಾರಸುಗಳಿಗೆ ಕಿವಿಗೊಡದಿರುವುದು (ಆದರೂ ಅಖಿಲ್ ಬದಲು ಸ್ಟುವರ್ಟ್ ಬಿನ್ನಿ ಮತ್ತು ಉದಿತ್ ಪಟೇಲ್ ಆಯ್ಕೆಗೊಂಡದ್ದು ಆಶ್ಚರ್ಯ), ತಳವಾಗಿ ಬೇರೂರಿದ ಕೆಲವು ಆಟಗಾರರನ್ನು ಕೈಬಿಡುವುದು, ಯುವಕರಿಗೆ ಮನ್ನಣೆ ನೀಡುವುದು, ಹೊಸ ಕೋಚ್ ಮತ್ತು ಸಹಾಯಕ ಕೋಚ್ ನೇಮಿಸುವುದು ಮತ್ತು ರಾಜ್ಯ ತಂಡದ ಚುಕ್ಕಾಣಿಯನ್ನು ರಾಹುಲ್ ದ್ರಾವಿಡ್-ಗೆ ನೀಡುವುದು.

ಅಶೋಕಾನಂದ್, ಸಯ್ಯದ್ ಕಿರ್ಮಾನಿ, ರಘುರಾಮ್ ಭಟ್ ಮತ್ತು ರಂಗರಾವ್ ಅನಂತ್ ಇವರೇ ನಾಲ್ಕು ಆಯ್ಕೆಗಾರರು. ನಾಲ್ವರೂ ಕರ್ನಾಟಕಕ್ಕೆ ಆಡಿ ಅನುಭವವುಳ್ಳವರು. ಕಳೆದ ಏಳೆಂಟು ವರ್ಷಗಳಲ್ಲಿ ರಾಜ್ಯ ತಂಡದಲ್ಲಿ ಹೆಚ್ಚೇನು ಬದಲಾವಣೆಯಿರಲಿಲ್ಲ. ಒಂದೆರಡು ಆಟಗಾರರನ್ನು ಹೊರತುಪಡಿಸಿದರೆ ಉಳಿದವರೆಲ್ಲಾ ಮೊದಲಿದ್ದವರೇ. ಹೀಗಾಗಿ ಕರ್ನಾಟಕ ಆರಕ್ಕೇರದೆ ಮೂರಕ್ಕಿಳಿಯದೇ ಅಲ್ಲೇ ನಡುವಿನಲ್ಲಿ ತೂಗುಯ್ಯಾಲೆ ಆಡುತ್ತಾ ಉಳಿದುಬಿಟ್ಟಿತು. ಇದನ್ನು ಬದಲಾಯಿಸಲು ಸ್ವಲ್ಪ ಹೆಚ್ಚೇ ರಿಸ್ಕ್ ತಗೊಂಡ ಆಯ್ಕೆಗಾರರು ಕೆಲವರನ್ನು ಕೈಬಿಟ್ಟು ಯುವಕರಿಂದಲೇ ತಂಡವನ್ನು ತುಂಬಿಬಿಟ್ಟರು. ಇದೊಂದು ಮಾಸ್ಟರ್ ಸ್ಟ್ರೋಕ್ ನಿರ್ಣಯವಾಗುತ್ತೆಂದು ಯಾರಿಗೂ ಅರಿವಿರಲಿಲ್ಲ. ಆದರೆ ಆಯ್ಕೆಗಾರರು ರಿಸ್ಕ್ ತಗೊಂಡದ್ದನ್ನು ಮೆಚ್ಚಬೇಕು. ಏನಾದರೂ ಅದ್ಭುತ ಘಟಿಸಬೆಕಾದರೆ ಅಷ್ಟೇ ಮಹತ್ವದ ನಿರ್ಣಯ ಆ ಅದ್ಭುತದ ಹಿಂದೆ ಇರುತ್ತೆ. ಕರ್ನಾಟಕ ಫೈನಲ್ ತನಕ ಧಾವಿಸಿ ಬಂದುದರ ಹಿಂದೆ ಇರುವ ಪ್ರಮುಖ ಕಾರಣವೂ ಇದೇ - ಯುವಕರಿಗೆ ಮನ್ನಣೆ.

ತಿಲಕ್ ನಾಯ್ಡುವನ್ನು ಕೈಬಿಡಬೆಕಾಗಿದ್ದು ಸಹಜವೇ. ಆದರೂ ಕೈ ಬಿಟ್ಟ ರೀತಿ ಸರಿಯಾಗಿರಲಿಲ್ಲ. ಕಳೆದ ೬ ವರ್ಷಗಳಿಂದ ರಾಜ್ಯಕ್ಕಾಗಿ ಆಡುತ್ತಿದ್ದ ತಿಲಕ್ ಗೆ ಒಂದು ಕರೆ ಮಾಡಿ ಆಯ್ಕೆಗಾರರು ವಿಷಯ ತಿಳಿಸಬಹುದಿತ್ತು. ಋತುವಿನ ಮೊದಲೆರಡು ಪಂದ್ಯಗಳಲ್ಲಿ ಆಡಿದ್ದ ತಿಲಕ್, ೩ನೇ ಪಂದ್ಯದಿಂದ ತಂಡದಿಂದ ಹೊರಗೆ. ಆದರೆ ಅದಕ್ಕೊಂದು ರೀತಿ ನೀತಿ ಇರುತ್ತಲ್ಲವೇ? ರಾಜ್ಯಕ್ಕಾಗಿ ಆಡಿದವರಿಗೆ ಆಯ್ಕೆಗಾರರೇ ಗೌರವ ನೀಡದಿದ್ದರೆ ಇನ್ನು ಯಾರು ನೀಡಿಯಾರು? ಕೊನೆಗೆ ಕೋಚ್ ಸನತ್ ಕುಮಾರ್, ನಾಯ್ಡುಗೆ ವಿಷಯ ತಿಳಿಸಬೇಕಾಯಿತು.

ಲೀಗ್ ಹಂತದ ಕೊನೆಯ ಕೆಲವು ಪಂದ್ಯಗಳಲ್ಲಿ ಅಖಿಲ್ ಬದಲು ಸ್ಟುವರ್ಟ್ ಬಿನ್ನಿಯನ್ನು ಆಡಿಸಲಾಯಿತು. ಇದನ್ನು ಮಾತ್ರ ನನಗೆ ಈಗಲೂ ನಂಬಲಾಗುತ್ತಿಲ್ಲ. ಯಾವುದೇ ಸಮಯದಲ್ಲಿ ಕಣ್ಣುಮುಚ್ಚಿ ಅಖಿಲ್-ನನ್ನು ಕರ್ನಾಟಕ ತಂಡಕ್ಕೆ ಆಯ್ಕೆ ಮಾಡಬಹುದು. ಹಾಗೇನೆ ಕಣ್ಣು ಮುಚ್ಚಿ ಬಿನ್ನಿಯನ್ನು ಹೊರಗಿಡಬಹುದು. ಈ ಋತುವಿನಲ್ಲಿ ಹಲವು ಉತ್ತಮ ಆಯ್ಕೆಗಳನ್ನು ಮಾಡಿದ ಆಯ್ಕೆಗಾರರು ಇಲ್ಲೇಕೆ ಎಡವಿದರು ಎಂದು ತಿಳಿಯದು. ಯಾವುದೋ ಕಾಣದ ಕೈ ಕೆಲಸ ಮಾಡಿದೆ. ಬಿನ್ನಿ ಎಂದಿಗೂ ಪಂದ್ಯದ ಸನ್ನಿವೇಶಕ್ಕೆ ತಕ್ಕ ಹಾಗೆ ಆಡಿದವನೇ ಅಲ್ಲ. ಆತನ ಆಟ ಬರೀ ಹೊಡಿ ಬಡಿ. ೨೦-೨೦ಗೆ ಆತ ಸೂಕ್ತ. ಆದರೆ ರಣಜಿ ಪಂದ್ಯಗಳಿಗೆ ಆತನ ಆಟ ಹೇಳಿ ಮಾಡಿಸಿದ್ದೇ ಅಲ್ಲ. ಅಖಿಲ್ ಕೈ ಬಿಟ್ಟದ್ದು ಮಾತ್ರ ಕರ್ನಾಟಕಕ್ಕೆ ದುಬಾರಿಯೇ ಆಯಿತು. ಪ್ರಖ್ಯಾತ ಅಂಕಣಕಾರ ರಾಮಚಂದ್ರ ಗುಹಾ ಕೂಡಾ ಈ ವಿಷಯದ ಬಗ್ಗೆ ಇಲ್ಲಿ ಬರೆದಿದ್ದಾರೆ.

ತಿಲಕ್ ನಾಯ್ಡು, ಅಯ್ಯಪ್ಪ, ರಘು ಇವರನ್ನೆಲ್ಲಾ ಬದಿಗಿಟ್ಟು ಮಿಥುನ್, ಗಣೇಶ್ ಸತೀಶ್, ಮನೀಷ್ ಪಾಂಡೆ, ಗೌತಮ್, ಅಮಿತ್ ವರ್ಮ ಇವರನ್ನು ಆಡಿಸುವ ನಿರ್ಧಾರ ತಗೊಂಡದ್ದು ಯಾವ ಧೈರ್ಯದಲ್ಲೋ ಏನೋ. ಆದರೆ ಆಯ್ಕೆಗಾರರು ತಮ್ಮ ಮೂಲಗಳಿಂದ ಸರಿಯಾದ ಮಾಹಿತಿ ಪಡೆದುಕೊಂಡೇ ಯುವ ಪ್ರತಿಭಾವಂತ ಆಟಗಾರರಿಗೆ ಮನ್ನಣೆ ನೀಡಿದ್ದು. ಹೆಚ್ಚಿನ ಆಟಗಾರರು ತಮ್ಮ ಮೊದಲ ಫುಲ್ ಸೀಸನ್ ಆಡುತ್ತಿದ್ದರಿಂದ ಒಬ್ಬ ಸಮರ್ಥ ನಾಯಕನ ಅವಶ್ಯವಿತ್ತು. ನಾಯಕ ಅನುಭವಿಯಾಗಿದ್ದು, ಸಹ ಆಟಗಾರರ ಗೌರವ ಪಡೆಯುವ ವ್ಯಕ್ತಿತ್ವ ಉಳ್ಳವನಾಗಿದ್ದು, ಉತ್ತಮ ಮಾರ್ಗದರ್ಶನ ನೀಡುವವನಾಗಿರಬೇಕು. ರಾಹುಲ್ ದ್ರಾವಿಡ್ ಗೆ ಕರೆ ಹೋದದ್ದೇ ಆಗ. ತಂಡದ ಆಯ್ಕೆ ವಿಷಯದಲ್ಲಿ ತನ್ನ ಮಾತಿಗೆ ಮಹತ್ವವಿರಬೇಕು ಎಂಬ ಒಂದೇ ಷರತ್ತಿನೊಂದಿಗೆ ದ್ರಾವಿಡ್ ನಾಯಕತ್ವ ಒಪ್ಪಿಕೊಂಡರು. ಮೊದಲ ಸೀಸನ್-ನಲ್ಲಿ ಯುವಕರಿಗೆ ಉತ್ತಮ ಮಾರ್ಗದರ್ಶನ ದ್ರಾವಿಡ್-ನಂತಹ ಮಹಾನ್ ಆಟಗಾರನಿಂದ ಸಿಕ್ಕರೆ ಮುಂದಿನ ಋತುಗಳಲ್ಲಿ ಕರ್ನಾಟಕ ಉತ್ತಮ ತಂಡವಾಗಬಹುದು ಎಂಬ ದೂರಾಲೋಚನೆಯಿಂದ ಆಯ್ಕೆಗಾರರು ಯುವ ತಂಡವನ್ನು ದ್ರಾವಿಡ್ ಕೈಗಿತ್ತರು. ಆದರೆ ತಂಡ ಫೈನಲ್-ವರೆಗೆ ದಾಪುಗಾಲಿಟ್ಟು ಬರಬಹುದೆಂದು ಯಾರೂ ನಿರೀಕ್ಷಿಸಿರಲಿಲ್ಲ.

ದ್ರಾವಿಡ್-ನೊಂದಿಗೆ ಆಡುವುದೇ ಕ್ರಿಕೆಟ್ ಎಜುಕೇಶನ್. ಪ್ರತಿ ಆಟಗಾರನಿಗೂ ಆತನ ಸಾಮರ್ಥ್ಯದ ಪ್ರಕಾರ ಆಡುವಂತೆ ಪ್ರೇರೇಪಿಸಿದ ದ್ರಾವಿಡ್ ತಾನೂ ಉತ್ತಮವಾಗಿ ಆಡುತ್ತಾ ಬಂಡೆಯಂತೆ ರಾಜ್ಯದ ಮತ್ತು ರಾಜ್ಯದ ಯುವ ಆಟಗಾರರ ರಕ್ಷಣೆಗೆ ನಿಂತುಬಿಟ್ಟರು. ದ್ರಾವಿಡ್ ಫೈನಲ್ ಆಡಿದ್ದಿದ್ದರೆ ರಾಜ್ಯದ ಯುವ ಆಟಗಾರರು ನರ್ವಸ್ ಆಗುತ್ತಿರಲಿಲ್ಲ. ಮೊದಲ ಫುಲ್ ಸೀಸನ್ ಆಡುವ ಯುವಕರು ಫೈನಲ್ ಆಡುವಾಗ ತಮ್ಮ ನಾಯಕನ ಸಪೋರ್ಟ್-ಗಾಗಿ ನೋಡುತ್ತಿರುತ್ತಾರೆ. ಆತನ ಮಾರ್ಗದರ್ಶನಕ್ಕಾಗಿ ಹಾತೊರೆಯಿತ್ತಿರುತ್ತಾರೆ. ಆದರೆ ಫೈನಲ್ ಪಂದ್ಯದಲ್ಲಿ ಕರ್ನಾಟಕದ ನಾಯಕನಾದವನಿಗೇ ಮಾರ್ಗದರ್ಶನದ ಅಗತ್ಯವಿದ್ದಾಗ ಇನ್ನು ಆತ ಸಹ ಆಟಗಾರರಿಗೆ ಏನು ಮಾರ್ಗದರ್ಶನ ನೀಡಬಲ್ಲ!?

ಕರ್ನಾಟಕದ ಕೋಚ್ ಆಗಿ ನರಸಿಂಹ ಸನತ್ ಕುಮಾರ್ ಐತಾಳ್ ಮತ್ತು ಸಹಾಯಕ ಕೋಚ್ ಆಗಿ ಸೋಮಶೇಖರ್ ಶಿರಗುಪ್ಪಿ ಇವರ ನೇಮಕವೂ ಅಚ್ಚರಿ ಮೂಡಿಸಿತು. ಮಂಗಳೂರಿನ ಸನತ್ ಕುಮಾರ್ ಒಬ್ಬ ಮಾಜಿ ಮೀಡಿಯಮ್ ಪೇಸರ್. ಕರ್ನಾಟಕಕ್ಕೆ ೧೧ ಪಂದ್ಯಗಳನ್ನು ೧೯೮೬ ಮತ್ತು ೧೯೮೯ ನಡುವೆ ಆಡಿದ್ದರು. ಕಿರ್ಮಾನಿ, ಗುಂಡಪ್ಪ ವಿಶ್ವನಾಥ್, ಸದಾನಂದ್ ವಿಶ್ವನಾಥ್, ರಘುರಾಮ್ ಭಟ್, ಬೃಜೇಶ್ ಪಟೇಲ್, ಕಾರ್ತಿಕ್ ಜೆಶ್ವಂತ್, ಕಾರ್ಲ್ಟನ್ ಸಲ್ಡಾನಾ ಮತ್ತು ರೋಜರ್ ಬಿನ್ನಿ ಇಂತಹ ಘಟಾನುಘಟಿಗಳ ಜೊತೆಯಲ್ಲೇ ಕರ್ನಾಟಕಕ್ಕೆ ಸನತ್ ಕುಮಾರ್ ಆಡಿದ್ದಾರೆ. ಈಗ ಆಯ್ಕೆಗಾರರಗಿರುವ ಆರ್.ಅನಂತ್ ಮತ್ತು ಉತ್ತಮ ಅಂಪಾಯರ್ ಆಗಿ ಹೆಸರು ಮಾಡುತ್ತಿರುವ ಶವೀರ್ ತಾರಾಪೂರ್ ಜೊತೆಗೂ ಸನತ್ ಕರ್ನಾಟಕಕ್ಕೆ ಆಡಿದ್ದಾರೆ. ೧೯೮೬-೮೭ ಋತುವಿನಲ್ಲಿ ಗೋವಾ ವಿರುದ್ಧ ಪಣಜಿಯಲ್ಲಿ ತನ್ನ ಚೊಚ್ಚಲ ರಣಜಿ ಪಂದ್ಯವನ್ನು ಸನತ್ ಆಡಿದರು. ಒಟ್ಟು ೧೧ ಪಂದ್ಯಗಳಲ್ಲಿ ೨೮.೦೮ರ ಸರಾಸರಿಯಂತೆ ೨೩ ವಿಕೆಟ್ ಗಳಿಸಿದರು. ಗೋವಾ ವಿರುದ್ಧ ಗುಲ್ಬರ್ಗಾದಲ್ಲಿ ೮೧ ರನ್ನುಗಳಿಗೆ ೭ ವಿಕೆಟ್ ಗಳಿಸಿದ್ದು ಅವರ ಉತ್ತಮ ಸಾಧನೆ. ಈ ಪಂದ್ಯದಲ್ಲಿ ಸನತ್ ಒಟ್ಟು ೧೧ ವಿಕೆಟ್ ಗಳಿಸಿದ್ದರು. ಕೋಚ್ ಆಗಿ ಜೂನಿಯರ್ ಲೆವೆಲ್-ನಿಂದಲೂ ಸನತ್ ಉತ್ತಮ ಹೆಸರು ಗಳಿಸಿದ್ದಾರೆ. ನಂತರ ಅಸ್ಸಾಮ್ ರಣಜಿ ತಂಡವನ್ನು ೨ ಋತುಗಳಲ್ಲಿ ಕೋಚ್ ಮಾಡಿ ಪ್ಲೇಟ್ ಲೀಗ್-ನ ಸೆಮಿ ಫೈನಲ್ ತನಕ ಕೊಂಡೊಯ್ದದ್ದು ಸನತ್ ಸಾಧನೆ. ಈಗ ರಾಜ್ಯ ತಂಡದಲ್ಲಿ ಆಡುತ್ತಿರುವ ಎಲ್ಲಾ ಯುವ ಆಟಗಾರರನ್ನು ಜೂನಿಯರ್ ಲೆವಲ್ಲಿನಲ್ಲಿ ಕೋಚ್ ಮಾಡಿದ್ದೇ ಸನತ್. ಹಾಗಾಗಿ ಆಟಗಾರರೊಂದಿಗೆ ಉತ್ತಮ ಸಂಬಂಧ ಮತ್ತು ಹೊಂದಾಣಿಕೆ ಇದೆ. ಆಟಗಾರನಾಗಿ ಸನತ್ ಹೆಚ್ಚೇನು ಸಾಧಿಸದಿದ್ದರೂ ಕೋಚ್ ಆಗಿ ಉತ್ತಮ ಸಾಧನೆ ಮಾಡಿದ್ದಾರೆ. ಈ ಋತುವಿನಲ್ಲಿ ಕರ್ನಾಟಕದ ಸಾಧನೆಯ ಬಹು ಪಾಲು ಶ್ರೇಯ ಸನತ್ ಕುಮಾರ್-ಗೆ ಸಲ್ಲಬೇಕು.

೧೯೯೬. ನಾನು ಬೆಳಗಾವಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದೆ. ಗೆಳೆಯ ಸುಪ್ರೀತ್ ವಾಸವಾಗಿದ್ದ ಮನೆಯಲ್ಲಿ ಸಂಜೆ ಗೆಳೆಯರೆಲ್ಲಾ ಒಟ್ಟುಗೂಡುತ್ತಿದ್ದರು. ಹಾಗಾಗಿ ಕೆಲವು ಸಂಜೆಗಳಲ್ಲಿ ನಾನೂ ಅಲ್ಲಿಗೆ ತೆರಳುತ್ತಿದ್ದೆ. ಅದೊಂದು ದಿನ ನಾನು ಒಳಗೆ ತೆರಳುತ್ತಿದ್ದಂತೆ ಕುಳ್ಳನೆಯ ವ್ಯಕ್ತಿಯೊಬ್ಬ ಹೊರನಡೆದ. ಪರಿಚಯವಿಲ್ಲವಾಗಿದ್ದರಿಂದ ಮಾತು ನಡೆಯಲಿಲ್ಲ. ಒಬ್ಬರಿಗೊಬ್ಬರು ಸ್ಮೈಲ್ ಕೊಟ್ಟೆವು. ಆತ ಬೈಕನ್ನೇರಿ ತೆರಳಿದರೆ ನಾನು ಮನೆಯೊಳಗೆ ಕಾಲಿಟ್ಟೆ. ಒಳಗೆ ಹೋದೊಡನೆ ಸುಪ್ರೀತ್, ’ಅರೆ ರಾಜ, ಸೋಮ್ಯಾ ಈಗಷ್ಟೇ ಹೋದ್ನಲ್ಲೇ’ ಎಂದ. ಆ ಕುಳ್ಳನೆಯ ವ್ಯಕ್ತಿ ಆಗ ಕರ್ನಾಟಕ ರಣಜಿ ತಂಡದ ವಿಕೆಟ್ ಕೀಪರ್ ಆಗಿದ್ದ ಸೋಮಶೇಖರ್ ಶಿರಗುಪ್ಪಿ. ಈಗ ಶಿರಗುಪ್ಪಿ ರಾಜ್ಯ ತಂಡದ ಅಸಿಸ್ಟಂಟ್ ಕೋಚ್. ೨೧ನೇ ವಯಸ್ಸಿನಲ್ಲೇ ರಾಜ್ಯ ತಂಡಕ್ಕೆ ಆಯ್ಕೆಯಾದ ಧಾರವಾಡದ ಸೋಮಶೇಖರ್ ಶಿರಗುಪ್ಪಿ ತನ್ನ ಚೊಚ್ಚಲ ರಣಜಿ ಪಂದ್ಯವನ್ನು ೧೯೯೪-೯೫ ಋತುವಿನಲ್ಲಿ ಹೈದರಾಬಾದ್ ವಿರುದ್ಧ ಬಿಜಾಪುರದಲ್ಲಿ ಆಡಿದರು. ಮೊದಲ ೨ ಋತುಗಳಲ್ಲಿ ಶಿರಗುಪ್ಪಿ ಆಡಿದ್ದು ೨-೩ ಪಂದ್ಯಗಳಲ್ಲಿ ಅಷ್ಟೇ. ಆದರೆ ೧೯೯೬-೯೭ ಋತುವಿನಿಂದ ೨೦೦೩-೦೪ ಋತುವಿನವರೆಗೆ ಶಿರಗುಪ್ಪಿ ರಾಜ್ಯದ ನಂಬರ್ ಒನ್ ಕೀಪರ್ ಆಗಿ ಒಟ್ಟು ೪೧ ಪಂದ್ಯಗಳಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದರು. ವಿಕೆಟ್ ಹಿಂದೆ ಪಡೆದ ಬಲಿಗಳ ಸಂಖ್ಯೆ ೧೧೧. ವೈಯುಕ್ತಿಕ ಅತ್ಯಧಿಕ ಸ್ಕೋರ್ ೧೨೫. ಗಳಿಸಿದ್ದು ಒಂದೇ ಶತಕ. ಆದರೆ ಆ ಪಂದ್ಯದಲ್ಲಿ ಕರ್ನಾಟಕ ಅತಿ ಕಡಿಮೆ ರನ್ನುಗಳಿಗೆ ೫ ವಿಕೆಟ್ ಕಳಕೊಂಡು ಸಂಕಷ್ಟದಲ್ಲಿದ್ದಾಗ ಆಡಲು ಬಂದ ಶಿರಗುಪ್ಪಿ, ರಾಹುಲ್ ದ್ರಾವಿಡ್ ಜೊತೆ ಸೇರಿ ಆರನೇ ವಿಕೆಟ್ಟಿಗೆ ೨೦೦ಕ್ಕೂ ಅಧಿಕ ರನ್ನುಗಳ ಜೊತೆಯಾಟ ನಡೆಸಿ ಕರ್ನಾಟಕವನ್ನು ಪಾರು ಮಾಡಿದರು. ಶಿರಗುಪ್ಪಿ ಒಬ್ಬ ಅತ್ಯುತ್ತಮ ವಿಕೆಟ್ ಕೀಪರ್ ಆದರೆ ಬ್ಯಾಟಿಂಗ್ ಮಾತ್ರ ಸಾಧಾರಣವಾಗಿತ್ತು. ರಾಜ್ಯ ತಂಡದಿಂದ ಹೊರಬಿದ್ದ ಬಳಿಕ ಕೋಚಿಂಗ್ ಪರೀಕ್ಷೆ ಪಾಸು ಮಾಡಿ ಸಣ್ಣ ಪುಟ್ಟ ಕೋಚಿಂಗ್ ಅಸೈನ್-ಮೆಂಟುಗಳನ್ನು ಚೊಕ್ಕವಾಗಿ ನಿರ್ವಹಿಸಿ ಜೂನಿಯರ್ ಮಟ್ಟದಲ್ಲಿ ಉತ್ತಮ ನಿರ್ವಹಣೆ ತೋರಿದರು. ರಾಜ್ಯ ತಂಡದಲ್ಲಿರುವ ಎಲ್ಲಾ ಯುವ ಆಟಗಾರರನ್ನೂ ಚೆನ್ನಾಗಿ ಬಲ್ಲ ಶಿರಗುಪ್ಪಿ ಬೆಂಗಳೂರು ಲೀಗಿನಲ್ಲಿ ಆಡುತ್ತಾ ಕೋಚಿಂಗ್ ಮಾಡುತ್ತಾ ಇದ್ದರು. ಹಿರಿಯ ಕೋಚ್ ಒಬ್ಬನಿಗೆ ಯುವ, ಸಮರ್ಥ ಮತ್ತು ಆಟಗಾರರನ್ನು ಬಲ್ಲ ಒಬ್ಬ ಸಹಾಯಕ ಕೋಚ್ ಬೇಕಿದ್ದಾಗ ಆಯ್ಕೆಯಾದದ್ದು ಶಿರಗುಪ್ಪಿ. ತೆರೆಮರೆಯಲ್ಲೇ ಉಳಿದು ತನ್ನ ಜವಾಬ್ದಾರಿಯನ್ನು ಶಿರಗುಪ್ಪಿ ಚೆನ್ನಾಗಿ ನಿರ್ವಹಿಸಿದ್ದಾರೆ.

ತಂಡದ ಮ್ಯಾನೇಜರ್ ಆಗಿ ರಂಗರಾವ್ ಅನಂತ್ (ಆಯ್ಕೆಗಾರನೂ ಹೌದು), ಫಿಸಿಯೋ ಆಗಿ ಮುತ್ತು ಕುಮಾರ್, ಟ್ರೈನರ್ ಆಗಿ ರಮಾಕಾಂತ್ ಮತ್ತು ವಿಡಿಯೋ ಅನಾಲಿಸ್ಟ್ ಆಗಿ ಪ್ರಸನ್ನ ಇವರುಗಳು ಕೂಡಾ ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿ ತಂಡ ಫೈನಲ್ ತಲುಪುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಮಧ್ಯಮ ವೇಗಿ ಶ್ರೀನಾಥ್ ಅರವಿಂದ್ ಲಿಗಾಮೆಂಟ್ ತೊಂದರೆಯಿಂದ ಬಳಲುತ್ತಿದ್ದಾಗ ಅವರನ್ನು ಆಡಲು ಫಿಟ್ ಮಾಡಿದ್ದು ಮುತ್ತು ಕುಮಾರ್. ಸತತವಾಗಿ ಆರೇಳು ಪಂದ್ಯಗಳಲ್ಲಿ ಆಡಿದರೂ ಮತ್ತೊಮ್ಮೆ ಅರವಿಂದ್ ಲಿಗಾಮೆಂಟ್ ತೊಂದರೆಗೆ ಒಳಗಾಗಲಿಲ್ಲ. ಕರ್ನಾಟಕ ಫೈನಲ್ ತಲುಪುವಲ್ಲಿ ಅರವಿಂದ್ ಬೌಲಿಂಗ್ ಕೂಡಾ ಮುಖ್ಯ ಪಾತ್ರ ವಹಿಸಿದ್ದು, ಮುತ್ತು ಕುಮಾರ್ ಕೆಲಸಕ್ಕೆ ಇನ್ನಷ್ಟು ಮಹತ್ವವನ್ನು ನೀಡುತ್ತದೆ.

ಹೆಚ್ಚಾಗಿ ತಂಡ ಉತ್ತಮ ನಿರ್ವಹಣೆ ತೋರಿದರೆ ಎಲ್ಲಾ ಶ್ರೇಯವನ್ನು ಆಟಗಾರರಿಗೆ ನೀಡಲಾಗುತ್ತದೆ. ಆಟಗಾರರಷ್ಟೇ ಕಷ್ಟಪಟ್ಟು ಆದರೆ ತೆರೆಮರೆಯಲ್ಲಿ ಕೆಲಸ ಮಾಡುವ ಕೋಚಿಂಗ್ ಮತ್ತು ಟ್ರೈನಿಂಗ್ ಸ್ಟಾಫನ್ನು ನಾವು ಮರೆಯಬಾರದು. ಕರ್ನಾಟಕದ ಯಶಸ್ಸಿಗೆ ಇವರ ಕೊಡುಗೆಯೂ ಕಡಿಮೆಯೇನಲ್ಲ.

ಯಶಸ್ಸು ಸುಲಭದಲ್ಲಿ ಸಿಗುವುದಿಲ್ಲ. ಫೈನಲ್ ಪಂದ್ಯ ಸೋತ ರಾಜ್ಯ ತಂಡದ ಯುವಕರಿಗೆ ಇದೊಂದು ಉತ್ತಮ ಅನುಭವ. ಹೆಚ್ಚಿನ ಪರಿಶ್ರಮ ಮತ್ತು ಏಕಾಗ್ರತೆ ಬೇಕೇ ಬೇಕು. ಈ ಅನುಭವದಿಂದ ರಾಜ್ಯ ತಂಡಕ್ಕೆ ಮುಂದೆ ಒಳ್ಳೆಯದೇ ಆಗಲಿದೆ. ಈ ವರ್ಷದ ನಿರ್ವಹಣೆಯಿಂದ ಮುಂದಿನ ವರ್ಷ ರಾಜ್ಯ ತಂಡದ ಮೇಲೆ ತುಂಬಾ ನಿರೀಕ್ಷೆ ಇರುತ್ತದೆ. ನಿರೀಕ್ಷೆ ಇದ್ದಾಗ ಚೆನ್ನಾಗಿ ಆಡುವುದು ಕೂಡಾ ಒಂದು ಕಲೆ.

ಫೈನಲ್ ತಲುಪಿದ್ದೇ ದೊಡ್ಡ ಸಾಧನೆ. ಯುವ ಆಟಗಾರರಿಗೆ (ಪ್ರಮುಖವಾಗಿ ಮಣಿ ಅಲಿಯಾಸ್ ಮನೀಷ್ ಪಾಂಡೆ, ಗಣ್ಸಾ ಅಲಿಯಾಸ್ ಗಣೇಶ್ ಸತೀಶ್, ರಂಗನಾಥ್ ವಿನಯ್ ಕುಮಾರ್ ಹಾಗೂ ಅಭಿಮನ್ಯು ಮಿಥುನ್) ಮತ್ತು ಕೋಚಿಂಗ್ ಸ್ಟಾಫಿಗೆ ಮತ್ತೊಮ್ಮೆ ಶುಭಾಶಯಗಳು.

ಗುರುವಾರ, ಜನವರಿ 14, 2010

ಕೊನೆಯಲ್ಲಿ ಎಡವಿದ ಕರ್ನಾಟಕ - ೧

ಗೆಳೆಯ ಸುಪ್ರೀತ್ ಮತ್ತು ನನ್ನದು ಯಾವಾಗಲೂ ರಣಜಿ ಟ್ರೋಫಿ ಪಂದ್ಯಗಳ ಬಗ್ಗೆನೇ ಮಾತು. ರಣಜಿ ಟ್ರೋಫಿ ಫೈನಲ್ ಪಂದ್ಯದ ಮುನ್ನಾ ದಿನ ನಾವಿಬ್ಬರು ದೂರವಾಣಿ ಮೂಲಕ ಕೊರೆದೇ ಕೊರೆಯುತ್ತಿದ್ದೆವು. "ರಾಜಾ, ಏನ್ ಚಾನ್ಸ್ ಕೊಡ್ತೀಲೆ ಕರ್ನಾಟಕಕ್ಕೆ" ಎಂದು ಸುಪ್ರೀತ್ ಕೇಳಿದಾಗ ನಾನಂದೆ, "೨೦ ಪರ್ಸೆಂಟ್. ಅಷ್ಟೇಲೇಪ್ಪಾ. ದ್ರಾವಿಡ್ ಇದ್ದಿದ್ರೆ ೮೦ ಪರ್ಸೆಂಟ್ ಚಾನ್ಸ್ ಇತ್ತ್ ನೋಡ" ಅಂದೆ. ಅದೇ ಪ್ರಶ್ನೆಯನ್ನು ಆತನಿಗೆ ನಾನು ಕೇಳಿದಾಗ ಆತನ ಪ್ರಕಾರ ದ್ರಾವಿಡ್ ಇದ್ರೆ ಕರ್ನಾಟಕ ರಣಜಿ ಚಾಂಪ್ಸ್ ಆಗೋದು ನಿಶ್ಚಿತವಾಗಿತ್ತು. ಅಷ್ಟೇ ಅಲ್ಲದೆ ಅಮಿತ್ ವರ್ಮಾ ಮತ್ತು ಗೌತಮ್ ಟೆನ್ಶನ್ ಪಾರ್ಟಿಗಳು. ದ್ರಾವಿಡ್ ಇದ್ರೆ ಮಾತ್ರ ಸರಿಯಾಗಿ ಆಡೋರು ಎಂದ ಸುಪ್ರೀತ್. ಈಗ ದ್ರಾವಿಡ್ ಇಲ್ಲಾ ಅಂದ್ರೆ ನೋ ಚಾನ್ಸ್ ಎಟ್ ಆಲ್. ಆತ ಅಂದಿದ್ದೇ ನಿಜವಾಯ್ತು.

ಲೀಗ್ ಪಂದ್ಯಗಳಲ್ಲಿ ಎದುರಾಳಿಗಳನ್ನು ಮನಬಂದಂತೆ ಗೋಳಾಡಿಸಿಕೊಂಡು ಜಯಭೇರಿ ಬಾರಿಸುತ್ತಾ ಬಂದಿದ್ದ ರಾಜ್ಯದ ಯುವ ಬ್ಯಾಟ್ಸ್-ಮನ್ನುಗಳು ನಾಕ್ ಔಟ್ ಹಂತ ಬಂದಾಗ ನರ್ವಸ್ ಆಟ ಆಡಲು ಆರಂಭಿಸಿದರು. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬಹಳ ಕಷ್ಟದಲ್ಲಿ ಪಂಜಾಬನ್ನು ಮೊದಲ ಇನ್ನಿಂಗ್ಸ್ ಮುನ್ನಡೆ ಆಧಾರದಲ್ಲಿ ಹಿಮ್ಮೆಟ್ಟಿಸಿದರು. ಇಲ್ಲಿ ದ್ರಾವಿಡ್ ನಾಯಕತ್ವ ಮಹತ್ವದ ಪಾತ್ರ ವಹಿಸಿತು ಎಂಬುದನ್ನು ಗಮನಿಸಬೇಕು. ನಂತರ ಸೆಮಿಫೈನಲ್ ಪಂದ್ಯದಲ್ಲಿ ಮತ್ತೆ ಪುನ: ದ್ರಾವಿಡ್ ಅತ್ಯುತ್ತಮ ನಾಯಕತ್ವ ಮತ್ತು ಭರ್ಜರಿ ಬ್ಯಾಟಿಂಗ್ ಆಧಾರದ ಮೇಲೆ ಉತ್ತರ ಪ್ರದೇಶದ ಮೇಲೆ ಮೇಲುಗೈ ಸಾಧಿಸಿತು. ಆದರೆ ಫೈನಲ್ ಪಂದ್ಯದಲ್ಲಿ ತಮ್ಮ ರೋಲ್ ಮಾಡೆಲ್ ಮತ್ತು ಇನ್-ಸ್ಪಿರೇಶನಲ್ ನಾಯಕನಿಲ್ಲದೆ, ನಮ್ಮ ಯುವ ಬ್ಯಾಟ್ಸ್-ಮನ್ನುಗಳು ಏಕಾಗ್ರತೆ ಕಳಕೊಂಡು, ಕಂಗಾಲಾಗಿ, ಫುಲ್ ನರ್ವಸ್ ಆಟವನ್ನು ಪ್ರದರ್ಶಿಸಿ ಸೋತುಬಿಟ್ಟರು.

ಫೈನಲ್ ತನಕ ಸಾಗಿಬಂದ ರಾಜ್ಯ ತಂಡದ ಸಾಧನೆಯನ್ನು ಮೆಚ್ಚಲೇಬೇಕು. ತಂಡದ ಎಲ್ಲಾ ದಾಂಡಿಗರು (ಪವನ್ ಮತ್ತು ಉತ್ತಪ್ಪ ಇವರಿಬ್ಬರನ್ನು ಹೊರತುಪಡಿಸಿ) ಮೊದಲ ಬಾರಿಗೆ ನಾಕ್ ಔಟ್ ಪಂದ್ಯಗಳಲ್ಲಿ ಆಡುತ್ತಿದ್ದರು. ನರ್ವಸ್ ಆಗುವುದು ಸಹಜ. ಆದರೂ ಫೈನಲ್ ತನಕ ಸಾಗಿಬಂದ ರಾಜ್ಯದ ತಂಡಕ್ಕೊಂದು ಶಾಭಾಷ್!

ಕರ್ನಾಟಕ ಫೈನಲ್ ಸೋಲಲು ೨ ಕಾರಣಗಳಿವೆ. ಮೊದಲನೇದಾಗಿ ಅಖಿಲ್ ಬದಲು ಸ್ಟುವರ್ಟ್ ಬಿನ್ನಿಯನ್ನು ಆಡಿಸಿದ್ದು. ಯುವಕರನ್ನು ಆಡಿಸಬೇಕು ನಿಜ. ಆದರೆ ಕಳೆದ ಮೂರ್ನಾಲ್ಕು ವರ್ಷಗಳಿಂದ ಕೇವಲ ೧೯ರ ಸರಾಸರಿಯಿಟ್ಟುಕೊಂಡು ಬೇಜವಾಬ್ದಾರಿ ಆಟ ಆಡುತ್ತಾ ಕಾಲ ಕಳೆದ ಸ್ಟುವರ್ಟ್ ಬಿನ್ನಿಯನ್ನು ಆಡಿಸಿದ್ದು ದುರಂತ ಮತ್ತು ನಂಬಲಸಾಧ್ಯ.

ಎರಡನೇ ಕಾರಣವೇನೆಂದರೆ ಎದುರಾಳಿ ತಂಡದ ಕೊನೆಯ ನಾಲ್ಕೈದು ವಿಕೆಟ್ಟುಗಳನ್ನು ಶೀಘ್ರ ತೆಗೆಯಲು ಆಗದೇ ಇದ್ದದ್ದು. ಕರ್ನಾಟಕ ಫೈನಲ್ ಪಂದ್ಯ ಸೋಲಲು ಈ ವೈಫಲ್ಯವೇ ಮುಖ್ಯ ಕಾರಣ. ಮೊದಲ ೬ ದಾಂಡಿಗರನ್ನು ಬೇಗನೇ ಔಟ್ ಮಾಡಿದರೂ ಬಾಲಂಗೋಚಿಗಳನ್ನು ಬೇಗನೇ ಔಟ್ ಮಾಡಲು ರಾಜ್ಯದ ಬೌಲರುಗಳು ವೈಫಲ್ಯವನ್ನು ಕಂಡರು. ಇದು ಫೈನಲ್ ಪಂದ್ಯಕ್ಕಿಂತ ಮೊದಲು ಕರ್ನಾಟಕಕ್ಕೆ ಅಷ್ಟಾಗಿ ಹಾನಿ ಮಾಡದಿದ್ದರೂ, ಫೈನಲ್ ಪಂದ್ಯದಲ್ಲಿ ಮಾತ್ರ ಬಲೂ ದುಬಾರಿಯಾಗಿ ಪರಿಣಮಿಸಿತು. ಈ ಕೆಳಗಿನ ಅಂಕಿ ಅಂಶಗಳನ್ನು ಗಮನಿಸಿದರೆ ಈ ವೈಫಲ್ಯದ ಬಗ್ಗೆ ಸ್ಪಷ್ಟವಾಗಿ ತಿಳಿದುಬರುತ್ತದೆ. ಕರ್ನಾಟಕದ ವಿರುದ್ಧ ಎದುರಾಳಿ ತಂಡಗಳ ಕೊನೆಯ ೩ ವಿಕೆಟ್ಟುಗಳು ಗಳಿಸಿದ ರನ್ನುಗಳು ಈ ಕೆಳಗಿನಂತಿವೆ.

೧. ಲೀಗ್ ಪಂದ್ಯ - ಉತ್ತರ ಪ್ರದೇಶ
ಮೊದಲ ಇನ್ನಿಂಗ್ಸ್ : ೧೪೯
ದ್ವಿತೀಯ ಇನ್ನಿಂಗ್ಸ್ : ೪೭
೨. ಲೀಗ್ ಪಂದ್ಯ - ದೆಹಲಿ
ಮೊದಲ ಇನ್ನಿಂಗ್ಸ್ : ೪೮
ದ್ವಿತೀಯ ಇನ್ನಿಂಗ್ಸ್ : ೪೪
೩. ಲೀಗ್ ಪಂದ್ಯ - ಪಶ್ಚಿಮ ಬಂಗಾಲ
ಮೊದಲ ಇನ್ನಿಂಗ್ಸ್ : ೬೭
೪. ಲೀಗ್ ಪಂದ್ಯ - ಮಹಾರಾಷ್ಟ್ರ
ಮೊದಲ ಇನ್ನಿಂಗ್ಸ್ : ೩೬
ದ್ವಿತೀಯ ಇನ್ನಿಂಗ್ಸ್ : ೧೫
೫. ಲೀಗ್ ಪಂದ್ಯ - ಬರೋಡಾ
ಮೊದಲ ಇನ್ನಿಂಗ್ಸ್ : ೬೭
ದ್ವಿತೀಯ ಇನ್ನಿಂಗ್ಸ್ : ೭೮
೬. ಲೀಗ್ ಪಂದ್ಯ - ಸೌರಾಷ್ಟ್ರ
ಮೊದಲ ಇನ್ನಿಂಗ್ಸ್ : ೧೨೩
ದ್ವಿತೀಯ ಇನ್ನಿಂಗ್ಸ್ : ೧೦೩
೭. ಕ್ವಾರ್ಟರ್ ಫೈನಲ್ ಪಂದ್ಯ - ಪಂಜಾಬ್
ಮೊದಲ ಇನ್ನಿಂಗ್ಸ್ : ೮೯
೮. ಸೆಮಿ ಫೈನಲ್ ಪಂದ್ಯ - ಉತ್ತರ ಪ್ರದೇಶ
ಮೊದಲ ಇನ್ನಿಂಗ್ಸ್ : ೭೮
೯. ಫೈನಲ್ ಪಂದ್ಯ - ಮುಂಬೈ
ಮೊದಲ ಇನ್ನಿಂಗ್ಸ್ : ೯೦
ದ್ವಿತೀಯ ಇನ್ನಿಂಗ್ಸ್ : ೮೪

ಕೊನೆಯ ೩ ವಿಕೆಟ್ಟುಗಳನ್ನು ಹೆಚ್ಚೆಂದರೆ ೩೫-೪೦ ರನ್ನುಗಳ ಒಳಗೆ ತೆಗೆಯಬೇಕು. ನಾಲ್ಕೈದು ಸಲ ಹಾಗಾಗದೇ ಇರುವುದು ಸಹಜ. ಆದರೆ ೧೩ ಬಾರಿ?! ಈ ಋತುವಿನಲ್ಲಿ ಕರ್ನಾಟಕ ಆಡಿದ ೯ ಪಂದ್ಯಗಳಲ್ಲಿ ೧೩ ಬಾರಿ ಎದುರಾಳಿ ತಂಡಗಳ ಕೊನೆಯ ೩ ವಿಕೆಟ್ಟುಗಳು ೪೦ಕ್ಕೂ ಹೆಚ್ಚು ರನ್ನುಗಳನ್ನು ದೋಚಿವೆ. ಇದನ್ನು ಸರಿಪಡಿಸಲು ಕರ್ನಾಟಕಕ್ಕೆ ಕೊನೆಯವರೆಗೂ ಆಗಲೇ ಇಲ್ಲ.

ತಂಡ ಗೆಲ್ಲುತ್ತಿರುವಾಗ ಇಂತಹ ವೈಫಲ್ಯಗಳು ಕಣ್ಣಿಗೆ ಕಾಣುವುದಿಲ್ಲ. ಆದರೆ ಇವುಗಳ ಬಗ್ಗೆ ಗಮನ ಹರಿಸಬೇಕಾಗುತ್ತದೆ. ಕೊನೆಯ ಕೆಲವು ದಾಂಡಿಗರನ್ನು ಔಟ್ ಮಾಡುವಲ್ಲಿ ಕರ್ನಾಟಕ ಪದೇ ಪದೇ ಎಡವುತ್ತಿರುವುದನ್ನು ಗಮನಿಸಿ ಅದಕ್ಕೊಂದು ಪರಿಹಾರ ಕಂಡುಕೊಂಡಿದ್ದರೆ ರಣಜಿ ಟ್ರೋಫಿ ನಮ್ಮದಾಗುತ್ತಿತ್ತು!

ತಂಡ ಗೆಲ್ಲುತ್ತಿರುವಾಗಲೂ ಅಲ್ಲೊಂದು ಹಿಡನ್ ಪ್ರಾಬ್ಲೆಮ್ ಇದ್ದೆ ಇರುತ್ತದೆ. ಅಂತಹ ತೊಂದರೆಗಳನ್ನು ಗಮನಿಸಿ ಅದಕ್ಕೆ ಪರಿಹಾರ ಕಂಡುಕೊಂಡಿಟ್ಟಿರಬೇಕು. ಆದರೆ ಕರ್ನಾಟಕ ಈ ವಿಷಯದ ಬಗ್ಗೆ ’ಹೇಗೂ ಬ್ಯಾಟಿಂಗ್ ಭರ್ಜರಿಯಾಗಿ ಆಗುತ್ತಿದೆ’ ಎಂದು ನಿರ್ಲಕ್ಷ್ಯ ವಹಿಸಿತೋ ಅಥವಾ ಕಂಡುಕೊಂಡ ಉಪಾಯ ಕೆಲಸ ಮಾಡಲಿಲ್ಲವೋ ತಿಳಿಯದು. ಕೊನೆಗೂ ಈ ಹಿಡನ್ ಪ್ರಾಬ್ಲೆಮ್ ಫೈನಲ್ ಪಂದ್ಯದಲ್ಲಿ ಕರ್ನಾಟಕವನ್ನು ದೊಡ್ಡ ಪ್ರಾಬ್ಲೆಮ್ ಆಗಿ ಕಾಡಿ ಮುಳುವಾದದ್ದು ಮಾತ್ರ ಸತ್ಯ.

ರನ್ನರ್ಸ್ ಅಪ್ ಆಗಿ ೨೦೦೯-೧೦ ಋತುವಿನ ರಣಜಿ ಅಭಿಯಾನ ಕೊನೆಗೊಳಿಸಿದ ರಾಜ್ಯ ತಂಡಕ್ಕೆ ಶುಭಾಶಯಗಳು.

ಇದೊಂದು ಯುವ ತಂಡ. ೨೦೦೯-೧೦ ಋತುವಿನಲ್ಲಿ ರಾಜ್ಯ ತಂಡ ಅನಿರೀಕ್ಷಿತವಾಗಿ ಉತ್ತಮ ನಿರ್ವಹಣೆ ತೋರಿದೆ. ಈ ಅದ್ಭುತ ನಿರ್ವಹಣೆಗೆ ಕಾರಣವೇನು ಮತ್ತು ಕಾರಣಕರ್ತರು ಯಾರು ಈ ವಿಷಯಗಳು ಮುಂದಿನ ಭಾಗದಲ್ಲಿ...

ಮಂಗಳವಾರ, ಜನವರಿ 05, 2010

'ನದಿಯಾ ಕಿನಾರೆ’ಗೊಂದು ಭೇಟಿ


ಮಲಪ್ರಭಾ ನದಿ ತಟದಲ್ಲಿರುವ ಸಣ್ಣ ಹಳ್ಳಿ ಅಸೋಗಾ. ಇಲ್ಲೊಂದು ಶಿವನ ದೇವಾಲಯವಿದೆ. ಸುತ್ತಮುತ್ತಲಿನ ಹಳ್ಳಿಗಳ ಜನರಿಗೆ ಇದೊಂದು ಶ್ರೀ ಕ್ಷೇತ್ರ. ದೇವಾಲಯದ ಪ್ರಾಂಗಣ ವಿಶಾಲವಾಗಿದ್ದು ಮರಗಿಡಗಳಿಂದ ಕೂಡಿದೆ ಮತ್ತು ಪ್ರಶಾಂತವಾಗಿದೆ. ವಾರಾಂತ್ಯದಲ್ಲಿ ಇಲ್ಲಿಗೆ ತುಂಬಾ ಜನರು ಬರುತ್ತಾರೆ. ಆಸುಪಾಸಿನ ಊರಿನವರಿಗೆ ಅಸೋಗಾ ಒಂದು ಪಿಕ್ನಿಕ್ ಸ್ಪಾಟ್.


ದೇವಾಲಯದ ಹಿಂದೆ ಒಂದಷ್ಟು ಕೆಳಗಿಳಿದರೆ ಮಲಪ್ರಭಾ ನದಿ. ಕಲ್ಲು ಬಂಡೆಗಳು ಅಲ್ಲಲ್ಲಿ ಹೊರಚಾಚಿ ನಿಂತಿವೆ. ಆದಿತ್ಯವಾರವಾಗಿದ್ದರಿಂದ ವಿಪರೀತ ಜನಸಂತೆ. ವಿಶಾಲವಾದ ಜಾಗವಾಗಿದ್ದರಿಂದ ಜನರೆಲ್ಲಾ ಅಲ್ಲಲ್ಲಿ ಹರಡಿಹೋಗಿದ್ದರು. ಈ ದಂಡೆಯಿಂದ ನದಿಯನ್ನು ದಾಟಿ ಆ ದಂಡೆಯಲ್ಲೂ ಜನರು ಸೇರಿದ್ದರು. ನಾವೂ ಇಲ್ಲಿಯೇ ಮಧ್ಯಾಹ್ನದ ಊಟ ಮುಗಿಸಿದೆವು. ಜನರಿಂದ ತುಂಬಿದ್ದರಿಂದ ನನಗಂತೂ ಈ ಸ್ಥಳ ಸ್ವಲ್ಪನೂ ಇಷ್ಟವಾಗಲಿಲ್ಲ. ಇಲ್ಲಿರುವ ಸಣ್ಣ ದೇವಾಲಯ ಕದಂಬರ ಕಾಲದ್ದು ಎಂದು ಕೇಳಿದ್ದೆ. ಆದರೆ ದೇವಾಲಯದ ಬದಿಯಿಂದಲೇ ನಡೆದುಕೊಂಡು ನದಿಯ ಬಳಿ ತೆರಳಿದರೂ ಹಳೇ ದೇವಾಲಯವನ್ನು ಸುತ್ತುವರೆದಿದ್ದ ಕಾಂಕ್ರೀಟ್ ಆಧುನಿಕತೆಯನ್ನು ಕಂಡು ದೇವಾಲಯವನ್ನು ನೋಡಲು ಮನಸಾಗಲಿಲ್ಲ.


ತಿರುವೊಂದನ್ನು ಪಡೆದ ಕೂಡಲೇ ಮಲಪ್ರಭೆ ಈ ಸ್ಠಳವನ್ನು ಪ್ರವೇಶಿಸುತ್ತಾಳೆ. ಅದುವರೆಗೆ ಪ್ರಶಾಂತವಾಗಿದ್ದ ನದಿಯ ಹರಿವು ಒಮ್ಮೆಲೇ ವೇಗವನ್ನು ಪಡೆದು ಕಲ್ಲುಬಂಡೆಗಳ ನಡುವೆ ನುಸುಳಿ ಹದವಾದ ಇಳಿಜಾರಿನಲ್ಲಿ ರಭಸವಾಗಿ ಹರಿಯುತ್ತಾ ಸುಮಾರು ೭೫ಮೀಟರ್ ಮುಂದೆ ಸಾಗಿದ ಬಳಿಕ ಮತ್ತೆ ಪ್ರಶಾಂತವಾಗುತ್ತದೆ. ನದಿ ರಭಸವಾಗಿ ಹರಿದರೂ ಅಷ್ಟೊಂದು ಆಳವಿಲ್ಲದ ಜಾಗವಾಗಿರುವುದರಿಂದ ಈ ಸ್ಠಳ ಪಿಕ್ನಿಕ್ ಸ್ಠಳವಾಗಿ ಪ್ರಸಿದ್ಧಿ ಪಡೆದಿದೆ.


ಅಮಿತಾಭ್ ಬಚ್ಚನ್ ಮತ್ತು ಜಯಾ ಬಾಧುರಿ ನಟನೆಯ ಅಭಿಮಾನ್ ಚಿತ್ರದ ಹಾಡು ’ನದಿಯಾ ಕಿನಾರೆ’ ನ್ನು ಸಂಪೂರ್ಣವಾಗಿ ಇಲ್ಲೇ ಚಿತ್ರೀಕರಿಸಲಾಗಿತ್ತು. ಮುಖ್ಯ ದೇವಸ್ಥಾನದಿಂದ ಸ್ವಲ್ಪ ಕೆಳಗೆ ಇನ್ನೊಂದು ದೇವಾಲಯವನ್ನು ನಿರ್ಮಿಸಿರುವುದು, ಮುಖ್ಯ ದೇವಸ್ಥಾನದ ಸುತ್ತಲೂ ಸ್ವಲ್ಪ ಆಧುನೀಕರಣ ಮತ್ತು ನದಿಯ ಸಮೀಪ ಅಲ್ಲಲ್ಲಿ ಒಂದಷ್ಟು ಗಿಡಗಂಟಿಗಳು ಬೆಳೆದುಕೊಂಡಿರುವುದು ಬಿಟ್ಟರೆ ಈ ಸ್ಠಳ ಆಗ ಚಿತ್ರೀಕರಿಸಿದಂತೆ ಇದೆ.


ಇಲ್ಲೊಂದು ಸೇತುವೆಯನ್ನು ನಿರ್ಮಿಸುವ ಪ್ರಯತ್ನ ಮಾಡಲಾಗಿತ್ತೋ ಅಥವಾ ಇನ್ನೂ ನಿರ್ಮಿಸುತ್ತಾ ಇದ್ದಾರೋ! ಈ ಅರ್ಧಕ್ಕೆ ಕೈಬಿಟ್ಟ ನಿರ್ಮಾಣದ ಅವಶೇಷಗಳು ಮಲಪ್ರಭೆಯ ಹರಿವಿನ ದೃಶ್ಯವನ್ನು ಸ್ವಲ್ಪ ಮಟ್ಟಿಗೆ ಅಂದಗೆಡಿಸುತ್ತವೆ. ನದಿಯಾ ಕಿನಾರೆ ಹಾಡಿನಲ್ಲಿ ಈ ಕಾಂಕ್ರೀಟ್ ಅವಶೇಷಗಳು ಇಲ್ಲದಿರುವುದನ್ನು ಗಮನಿಸಬಹುದು.


ಟೈಮ್ ಪಾಸ್ ಮಾಡುವುದಿದ್ದರೆ ಒಳ್ಳೆಯ ಸ್ಥಳ. ಆ ದಿನ ನಾವು ಭೇಟಿ ನೀಡಿದ ಎಲ್ಲಾ ಸ್ಥಳಗಳ ಪೈಕಿ ನಾನು ಕಡಿಮೆ ಇಷ್ಟಪಟ್ಟದ್ದು ಅಸೋಗಾವನ್ನು. ಆದರೆ ಇತರರು - ಲೀನಾ, ಆಕೆಯ ಇಬ್ಬರು ತಂಗಿಯರು, ಆಕೆಯ ಅಪ್ಪ - ಹೆಚ್ಚು ಇಷ್ಟಪಟ್ಟದ್ದೂ ಅಸೋಗಾವನ್ನು!