ಗುರುವಾರ, ಜನವರಿ 14, 2010

ಕೊನೆಯಲ್ಲಿ ಎಡವಿದ ಕರ್ನಾಟಕ - ೧

ಗೆಳೆಯ ಸುಪ್ರೀತ್ ಮತ್ತು ನನ್ನದು ಯಾವಾಗಲೂ ರಣಜಿ ಟ್ರೋಫಿ ಪಂದ್ಯಗಳ ಬಗ್ಗೆನೇ ಮಾತು. ರಣಜಿ ಟ್ರೋಫಿ ಫೈನಲ್ ಪಂದ್ಯದ ಮುನ್ನಾ ದಿನ ನಾವಿಬ್ಬರು ದೂರವಾಣಿ ಮೂಲಕ ಕೊರೆದೇ ಕೊರೆಯುತ್ತಿದ್ದೆವು. "ರಾಜಾ, ಏನ್ ಚಾನ್ಸ್ ಕೊಡ್ತೀಲೆ ಕರ್ನಾಟಕಕ್ಕೆ" ಎಂದು ಸುಪ್ರೀತ್ ಕೇಳಿದಾಗ ನಾನಂದೆ, "೨೦ ಪರ್ಸೆಂಟ್. ಅಷ್ಟೇಲೇಪ್ಪಾ. ದ್ರಾವಿಡ್ ಇದ್ದಿದ್ರೆ ೮೦ ಪರ್ಸೆಂಟ್ ಚಾನ್ಸ್ ಇತ್ತ್ ನೋಡ" ಅಂದೆ. ಅದೇ ಪ್ರಶ್ನೆಯನ್ನು ಆತನಿಗೆ ನಾನು ಕೇಳಿದಾಗ ಆತನ ಪ್ರಕಾರ ದ್ರಾವಿಡ್ ಇದ್ರೆ ಕರ್ನಾಟಕ ರಣಜಿ ಚಾಂಪ್ಸ್ ಆಗೋದು ನಿಶ್ಚಿತವಾಗಿತ್ತು. ಅಷ್ಟೇ ಅಲ್ಲದೆ ಅಮಿತ್ ವರ್ಮಾ ಮತ್ತು ಗೌತಮ್ ಟೆನ್ಶನ್ ಪಾರ್ಟಿಗಳು. ದ್ರಾವಿಡ್ ಇದ್ರೆ ಮಾತ್ರ ಸರಿಯಾಗಿ ಆಡೋರು ಎಂದ ಸುಪ್ರೀತ್. ಈಗ ದ್ರಾವಿಡ್ ಇಲ್ಲಾ ಅಂದ್ರೆ ನೋ ಚಾನ್ಸ್ ಎಟ್ ಆಲ್. ಆತ ಅಂದಿದ್ದೇ ನಿಜವಾಯ್ತು.

ಲೀಗ್ ಪಂದ್ಯಗಳಲ್ಲಿ ಎದುರಾಳಿಗಳನ್ನು ಮನಬಂದಂತೆ ಗೋಳಾಡಿಸಿಕೊಂಡು ಜಯಭೇರಿ ಬಾರಿಸುತ್ತಾ ಬಂದಿದ್ದ ರಾಜ್ಯದ ಯುವ ಬ್ಯಾಟ್ಸ್-ಮನ್ನುಗಳು ನಾಕ್ ಔಟ್ ಹಂತ ಬಂದಾಗ ನರ್ವಸ್ ಆಟ ಆಡಲು ಆರಂಭಿಸಿದರು. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬಹಳ ಕಷ್ಟದಲ್ಲಿ ಪಂಜಾಬನ್ನು ಮೊದಲ ಇನ್ನಿಂಗ್ಸ್ ಮುನ್ನಡೆ ಆಧಾರದಲ್ಲಿ ಹಿಮ್ಮೆಟ್ಟಿಸಿದರು. ಇಲ್ಲಿ ದ್ರಾವಿಡ್ ನಾಯಕತ್ವ ಮಹತ್ವದ ಪಾತ್ರ ವಹಿಸಿತು ಎಂಬುದನ್ನು ಗಮನಿಸಬೇಕು. ನಂತರ ಸೆಮಿಫೈನಲ್ ಪಂದ್ಯದಲ್ಲಿ ಮತ್ತೆ ಪುನ: ದ್ರಾವಿಡ್ ಅತ್ಯುತ್ತಮ ನಾಯಕತ್ವ ಮತ್ತು ಭರ್ಜರಿ ಬ್ಯಾಟಿಂಗ್ ಆಧಾರದ ಮೇಲೆ ಉತ್ತರ ಪ್ರದೇಶದ ಮೇಲೆ ಮೇಲುಗೈ ಸಾಧಿಸಿತು. ಆದರೆ ಫೈನಲ್ ಪಂದ್ಯದಲ್ಲಿ ತಮ್ಮ ರೋಲ್ ಮಾಡೆಲ್ ಮತ್ತು ಇನ್-ಸ್ಪಿರೇಶನಲ್ ನಾಯಕನಿಲ್ಲದೆ, ನಮ್ಮ ಯುವ ಬ್ಯಾಟ್ಸ್-ಮನ್ನುಗಳು ಏಕಾಗ್ರತೆ ಕಳಕೊಂಡು, ಕಂಗಾಲಾಗಿ, ಫುಲ್ ನರ್ವಸ್ ಆಟವನ್ನು ಪ್ರದರ್ಶಿಸಿ ಸೋತುಬಿಟ್ಟರು.

ಫೈನಲ್ ತನಕ ಸಾಗಿಬಂದ ರಾಜ್ಯ ತಂಡದ ಸಾಧನೆಯನ್ನು ಮೆಚ್ಚಲೇಬೇಕು. ತಂಡದ ಎಲ್ಲಾ ದಾಂಡಿಗರು (ಪವನ್ ಮತ್ತು ಉತ್ತಪ್ಪ ಇವರಿಬ್ಬರನ್ನು ಹೊರತುಪಡಿಸಿ) ಮೊದಲ ಬಾರಿಗೆ ನಾಕ್ ಔಟ್ ಪಂದ್ಯಗಳಲ್ಲಿ ಆಡುತ್ತಿದ್ದರು. ನರ್ವಸ್ ಆಗುವುದು ಸಹಜ. ಆದರೂ ಫೈನಲ್ ತನಕ ಸಾಗಿಬಂದ ರಾಜ್ಯದ ತಂಡಕ್ಕೊಂದು ಶಾಭಾಷ್!

ಕರ್ನಾಟಕ ಫೈನಲ್ ಸೋಲಲು ೨ ಕಾರಣಗಳಿವೆ. ಮೊದಲನೇದಾಗಿ ಅಖಿಲ್ ಬದಲು ಸ್ಟುವರ್ಟ್ ಬಿನ್ನಿಯನ್ನು ಆಡಿಸಿದ್ದು. ಯುವಕರನ್ನು ಆಡಿಸಬೇಕು ನಿಜ. ಆದರೆ ಕಳೆದ ಮೂರ್ನಾಲ್ಕು ವರ್ಷಗಳಿಂದ ಕೇವಲ ೧೯ರ ಸರಾಸರಿಯಿಟ್ಟುಕೊಂಡು ಬೇಜವಾಬ್ದಾರಿ ಆಟ ಆಡುತ್ತಾ ಕಾಲ ಕಳೆದ ಸ್ಟುವರ್ಟ್ ಬಿನ್ನಿಯನ್ನು ಆಡಿಸಿದ್ದು ದುರಂತ ಮತ್ತು ನಂಬಲಸಾಧ್ಯ.

ಎರಡನೇ ಕಾರಣವೇನೆಂದರೆ ಎದುರಾಳಿ ತಂಡದ ಕೊನೆಯ ನಾಲ್ಕೈದು ವಿಕೆಟ್ಟುಗಳನ್ನು ಶೀಘ್ರ ತೆಗೆಯಲು ಆಗದೇ ಇದ್ದದ್ದು. ಕರ್ನಾಟಕ ಫೈನಲ್ ಪಂದ್ಯ ಸೋಲಲು ಈ ವೈಫಲ್ಯವೇ ಮುಖ್ಯ ಕಾರಣ. ಮೊದಲ ೬ ದಾಂಡಿಗರನ್ನು ಬೇಗನೇ ಔಟ್ ಮಾಡಿದರೂ ಬಾಲಂಗೋಚಿಗಳನ್ನು ಬೇಗನೇ ಔಟ್ ಮಾಡಲು ರಾಜ್ಯದ ಬೌಲರುಗಳು ವೈಫಲ್ಯವನ್ನು ಕಂಡರು. ಇದು ಫೈನಲ್ ಪಂದ್ಯಕ್ಕಿಂತ ಮೊದಲು ಕರ್ನಾಟಕಕ್ಕೆ ಅಷ್ಟಾಗಿ ಹಾನಿ ಮಾಡದಿದ್ದರೂ, ಫೈನಲ್ ಪಂದ್ಯದಲ್ಲಿ ಮಾತ್ರ ಬಲೂ ದುಬಾರಿಯಾಗಿ ಪರಿಣಮಿಸಿತು. ಈ ಕೆಳಗಿನ ಅಂಕಿ ಅಂಶಗಳನ್ನು ಗಮನಿಸಿದರೆ ಈ ವೈಫಲ್ಯದ ಬಗ್ಗೆ ಸ್ಪಷ್ಟವಾಗಿ ತಿಳಿದುಬರುತ್ತದೆ. ಕರ್ನಾಟಕದ ವಿರುದ್ಧ ಎದುರಾಳಿ ತಂಡಗಳ ಕೊನೆಯ ೩ ವಿಕೆಟ್ಟುಗಳು ಗಳಿಸಿದ ರನ್ನುಗಳು ಈ ಕೆಳಗಿನಂತಿವೆ.

೧. ಲೀಗ್ ಪಂದ್ಯ - ಉತ್ತರ ಪ್ರದೇಶ
ಮೊದಲ ಇನ್ನಿಂಗ್ಸ್ : ೧೪೯
ದ್ವಿತೀಯ ಇನ್ನಿಂಗ್ಸ್ : ೪೭
೨. ಲೀಗ್ ಪಂದ್ಯ - ದೆಹಲಿ
ಮೊದಲ ಇನ್ನಿಂಗ್ಸ್ : ೪೮
ದ್ವಿತೀಯ ಇನ್ನಿಂಗ್ಸ್ : ೪೪
೩. ಲೀಗ್ ಪಂದ್ಯ - ಪಶ್ಚಿಮ ಬಂಗಾಲ
ಮೊದಲ ಇನ್ನಿಂಗ್ಸ್ : ೬೭
೪. ಲೀಗ್ ಪಂದ್ಯ - ಮಹಾರಾಷ್ಟ್ರ
ಮೊದಲ ಇನ್ನಿಂಗ್ಸ್ : ೩೬
ದ್ವಿತೀಯ ಇನ್ನಿಂಗ್ಸ್ : ೧೫
೫. ಲೀಗ್ ಪಂದ್ಯ - ಬರೋಡಾ
ಮೊದಲ ಇನ್ನಿಂಗ್ಸ್ : ೬೭
ದ್ವಿತೀಯ ಇನ್ನಿಂಗ್ಸ್ : ೭೮
೬. ಲೀಗ್ ಪಂದ್ಯ - ಸೌರಾಷ್ಟ್ರ
ಮೊದಲ ಇನ್ನಿಂಗ್ಸ್ : ೧೨೩
ದ್ವಿತೀಯ ಇನ್ನಿಂಗ್ಸ್ : ೧೦೩
೭. ಕ್ವಾರ್ಟರ್ ಫೈನಲ್ ಪಂದ್ಯ - ಪಂಜಾಬ್
ಮೊದಲ ಇನ್ನಿಂಗ್ಸ್ : ೮೯
೮. ಸೆಮಿ ಫೈನಲ್ ಪಂದ್ಯ - ಉತ್ತರ ಪ್ರದೇಶ
ಮೊದಲ ಇನ್ನಿಂಗ್ಸ್ : ೭೮
೯. ಫೈನಲ್ ಪಂದ್ಯ - ಮುಂಬೈ
ಮೊದಲ ಇನ್ನಿಂಗ್ಸ್ : ೯೦
ದ್ವಿತೀಯ ಇನ್ನಿಂಗ್ಸ್ : ೮೪

ಕೊನೆಯ ೩ ವಿಕೆಟ್ಟುಗಳನ್ನು ಹೆಚ್ಚೆಂದರೆ ೩೫-೪೦ ರನ್ನುಗಳ ಒಳಗೆ ತೆಗೆಯಬೇಕು. ನಾಲ್ಕೈದು ಸಲ ಹಾಗಾಗದೇ ಇರುವುದು ಸಹಜ. ಆದರೆ ೧೩ ಬಾರಿ?! ಈ ಋತುವಿನಲ್ಲಿ ಕರ್ನಾಟಕ ಆಡಿದ ೯ ಪಂದ್ಯಗಳಲ್ಲಿ ೧೩ ಬಾರಿ ಎದುರಾಳಿ ತಂಡಗಳ ಕೊನೆಯ ೩ ವಿಕೆಟ್ಟುಗಳು ೪೦ಕ್ಕೂ ಹೆಚ್ಚು ರನ್ನುಗಳನ್ನು ದೋಚಿವೆ. ಇದನ್ನು ಸರಿಪಡಿಸಲು ಕರ್ನಾಟಕಕ್ಕೆ ಕೊನೆಯವರೆಗೂ ಆಗಲೇ ಇಲ್ಲ.

ತಂಡ ಗೆಲ್ಲುತ್ತಿರುವಾಗ ಇಂತಹ ವೈಫಲ್ಯಗಳು ಕಣ್ಣಿಗೆ ಕಾಣುವುದಿಲ್ಲ. ಆದರೆ ಇವುಗಳ ಬಗ್ಗೆ ಗಮನ ಹರಿಸಬೇಕಾಗುತ್ತದೆ. ಕೊನೆಯ ಕೆಲವು ದಾಂಡಿಗರನ್ನು ಔಟ್ ಮಾಡುವಲ್ಲಿ ಕರ್ನಾಟಕ ಪದೇ ಪದೇ ಎಡವುತ್ತಿರುವುದನ್ನು ಗಮನಿಸಿ ಅದಕ್ಕೊಂದು ಪರಿಹಾರ ಕಂಡುಕೊಂಡಿದ್ದರೆ ರಣಜಿ ಟ್ರೋಫಿ ನಮ್ಮದಾಗುತ್ತಿತ್ತು!

ತಂಡ ಗೆಲ್ಲುತ್ತಿರುವಾಗಲೂ ಅಲ್ಲೊಂದು ಹಿಡನ್ ಪ್ರಾಬ್ಲೆಮ್ ಇದ್ದೆ ಇರುತ್ತದೆ. ಅಂತಹ ತೊಂದರೆಗಳನ್ನು ಗಮನಿಸಿ ಅದಕ್ಕೆ ಪರಿಹಾರ ಕಂಡುಕೊಂಡಿಟ್ಟಿರಬೇಕು. ಆದರೆ ಕರ್ನಾಟಕ ಈ ವಿಷಯದ ಬಗ್ಗೆ ’ಹೇಗೂ ಬ್ಯಾಟಿಂಗ್ ಭರ್ಜರಿಯಾಗಿ ಆಗುತ್ತಿದೆ’ ಎಂದು ನಿರ್ಲಕ್ಷ್ಯ ವಹಿಸಿತೋ ಅಥವಾ ಕಂಡುಕೊಂಡ ಉಪಾಯ ಕೆಲಸ ಮಾಡಲಿಲ್ಲವೋ ತಿಳಿಯದು. ಕೊನೆಗೂ ಈ ಹಿಡನ್ ಪ್ರಾಬ್ಲೆಮ್ ಫೈನಲ್ ಪಂದ್ಯದಲ್ಲಿ ಕರ್ನಾಟಕವನ್ನು ದೊಡ್ಡ ಪ್ರಾಬ್ಲೆಮ್ ಆಗಿ ಕಾಡಿ ಮುಳುವಾದದ್ದು ಮಾತ್ರ ಸತ್ಯ.

ರನ್ನರ್ಸ್ ಅಪ್ ಆಗಿ ೨೦೦೯-೧೦ ಋತುವಿನ ರಣಜಿ ಅಭಿಯಾನ ಕೊನೆಗೊಳಿಸಿದ ರಾಜ್ಯ ತಂಡಕ್ಕೆ ಶುಭಾಶಯಗಳು.

ಇದೊಂದು ಯುವ ತಂಡ. ೨೦೦೯-೧೦ ಋತುವಿನಲ್ಲಿ ರಾಜ್ಯ ತಂಡ ಅನಿರೀಕ್ಷಿತವಾಗಿ ಉತ್ತಮ ನಿರ್ವಹಣೆ ತೋರಿದೆ. ಈ ಅದ್ಭುತ ನಿರ್ವಹಣೆಗೆ ಕಾರಣವೇನು ಮತ್ತು ಕಾರಣಕರ್ತರು ಯಾರು ಈ ವಿಷಯಗಳು ಮುಂದಿನ ಭಾಗದಲ್ಲಿ...

4 ಕಾಮೆಂಟ್‌ಗಳು:

ಸಾಗರದಾಚೆಯ ಇಂಚರ ಹೇಳಿದರು...

ಆದರೂ ಕೇವಲ ೬ ರನ್ ಗಳಿಂದ ಸೋತಿದ್ದು
ನಂಗೆ ತುಂಬಾ ಬೇಸರವಾಯಿತು.
ಇಷ್ಟೆಲ್ಲಾ ಕಷ್ಟ ಪಟ್ಟು ಮುಂದೆ ಬಂದು ಕೊನೆಯ ಹಂತದಲ್ಲಿ ಮುಗ್ಗರಿಸಿದ್ದು
ನಾಯಕತ್ವದ ಕೊರತೆಯಿಂದಲೇ ಎಂದರೂ ಅಡ್ಡಿಯಿಲ್ಲ
ಆದರೂ ಕರ್ನಾಟಕದ ಸಾಧನೆಗೆ ಒಂದು ನಮನ

ದಿನಕರ ಮೊಗೇರ.. ಹೇಳಿದರು...

ರಾಜೇಶ್ ಸರ್,
ಈ ಸಾರಿ ರಣಜಿ ತಂಡವನ್ನು ಮೊದಲಿನಿಂದಲೂ ಗಮನಿಸುತ್ತಾ ಬಂದಿದ್ದೆ.... ಪ್ರಶಸ್ತಿ ಗಳಿಸುವ ಆಶೆ ಹುಟ್ಟಿಸಿದ್ದು ಸೆಮಿಫೈನಲ್ ಗೆ ಬಂದಾಗಲೇ..... ಫೈನಲ್ ನಲ್ಲೂ ಗೆಲ್ಲುತ್ತಾರೆ ಎಣಿಸಿದ್ದೆ..... ಆದರೆ ದ್ರಾವಿಡ್ ಫೈನಲ್ನಲ್ಲಿ ಆಡಲು ಮುಂಬೈ ನಲ್ಲಿ ಕುಂತಿರೋ b . c .c .i ಅಧಿಕಾರಿಗಳು ಕೊಡಲೇ ಇಲ್ಲ.... ಇದರಲ್ಲಿ ಅವರ ಮುಂಬೈ ಚಾಂಪಿಯನ್ ಮಾಡುವ ರಾಜಕೀಯವೂ ಕಾರಣವಾಗಿರಬೇಕು..... ಯಾಕಂದ್ರೆ ದ್ರಾವಿಡ್ ಇಲ್ಲೇ ಆಡಿದ್ರೆ ಮ್ಯಾಚ್ ಪ್ರಾಕ್ಟೀಸ್ ಆಗುತ್ತಿತ್ತು ಆಲ್ವಾ.... ಅದನ್ನು ಬಿಟ್ಟು..... ಬಾಂಗ್ಲಾ ದೇಶಕ್ಕೆ ಕಳಿಸಿ ಬಿಟ್ರು..... ಫೈನಲ್ ನೋಡಲು ಆಫೀಸ್ ಗೆ ಚಕ್ಕರ್ ಹಾಕಿ ಟಿವಿ ಮುಂದೆ ಕೂತಿರುತ್ತಿದ್ದೆ...... ಮೊಬೈಲ್ ಆಫ ಮಾಡಿ, ನೋಡುತ್ತಿದ್ದೆ.... ಮೊದಲ ಇನ್ನಿಂಗ್ಸ್ ಅಲ್ಪ ಮೊತ್ತಕ್ಕೆ ಔಟ್ ಆದಾಗಲೋ ನನಗೆ ಅವರ ಮೇಲೆ ಗೆಲ್ಲುವ ಆಶೆ ಇದ್ದೆ ಇತ್ತು...... ಎರಡನೇ ಇನ್ನಿಂಗ್ಸ್ ವಿಕೆಟ್ ಪಟಪಟನೆ ಬೀಳಿಸಿದಾಗ ನಾನು ದಂಚಾ ಮಾಡಿ ಕೂಗಾದಿದ್ದೆ...... ಆದರೂ ಮನೀಶ್ ಪಾಂಡೆ , ಗಣೇಶ್ ಸತೀಶ್ ಆಟ ರಾಜ್ಯದ ಮಾನ ಕಾಪಾಡಿದೆ...... ಹುಡುಗರ ಆಟಕ್ಕೆ ತಲೆಬಾಗಿದೆ..... ಮನೀಶ್ ಪಾಂಡೆಯನ್ನ ಆದಷ್ಟು ಬೇಗ ದೇಶದ ತಂಡಕ್ಕೆ ಸೇರಿಸಿಕೊಂಡರೆ, ತಂಡಕ್ಕೆ ಒಬ್ಬ ಹೊಸ ಬರವಸೆಯ ಆಟಗಾರ ಸಿಗುತ್ತಾನೆ...... ನಮ್ಮ ರಾಜ್ಯದಿಂದ ಯಾರೂ ದೇಶದ ತಂದವನ್ನ ಪ್ರತಿನಿಧಿಸುತ್ತಿಲ್ಲ ಎನ್ನುವ ಕೊರಗನ್ನಾದರೂ ತೀರಲಿ....... ನಿಮ್ಮ ಸುಧೀರ್ಗ ವಿವರಣೆ ತುಂಬಾಚೆನ್ನಾಗಿದೆ......

ಗೌತಮ್ ಹೆಗಡೆ ಹೇಳಿದರು...

"ಜೈ ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ." ಅಲ್ಲಿ ಟೀಂ ಇಂಡಿಯಾ ಸೋಅತು ಹೋಯ್ತು.ಇಲ್ಲಿ ರಣಜೀಲಿ ಕರ್ನಾಟಕ ಪಲ್ಟಿ.ತಾಯಿಯಂತೆ ಮಗಳು:):)

ರಾಜೇಶ್ ನಾಯ್ಕ ಹೇಳಿದರು...

ಗುರು, ದಿನಕರ್, ಗೌತಮ್,
ಹೋರಾಡಿ ಸೋತರೆಂಬುದು ಸಮಾಧಾನದ ಸಂಗತಿ. ಆದರೆ ಪಂದ್ಯ ಸೋಲಲಾರದಂತೆ ಮುನ್ನೆಚ್ಚರಿಕೆ ವಹಿಸಿಕೊಂಡರೆ ಯಾವಾಗಲೂ ಒಳಿತು. ಬಿನ್ನಿಯನ್ನು ಆಡಿಸಿದ್ದು ಇನ್ನು ನಂಬಲಾಗುತ್ತಿಲ್ಲ. ಅಂತಿಮ ಹನ್ನೊಂದರಲ್ಲಿ ಬಿನ್ನಿಯ ಹೆಸರು ನೋಡಿದ ಕೂಡಲೇ ಆಘಾತವಾಯಿತು.

ಪ್ರಖ್ಯಾತ ಅಂಕಣಕಾರ ರಾಮಚಂದ್ರ ಗುಹಾ ಕೂಡಾ ಇದೇ ವಿಷಯದ ಬಗ್ಗೆ ಇಲ್ಲಿಬರೆದಿದ್ದಾರೆ.