ಬುಧವಾರ, ಡಿಸೆಂಬರ್ 16, 2015

ಲಕ್ಷ್ಮೀನರಸಿಂಹ ದೇವಾಲಯ ಮತ್ತು ಲಕ್ಕರ್ ಕಾಮತಿ ನಾರಾಯಣ ದೇವಾಲಯ - ಭಟ್ಕಳ

 

ಲಕ್ಷ್ಮೀನರಸಿಂಹ ದೇವಾಲಯ

ನರಸಿಂಹ ಕಿಣಿ ಎಂಬವರು ನೀಡಿದ ದೇಣಿಗೆಯಿಂದ ಈ ದೇವಾಲಯವನ್ನು ಇಸವಿ ೧೫೩೮ರಲ್ಲಿ ನಿರ್ಮಿಸಲಾಗಿದೆ (ಕೆಲವೆಡೆ ೧೫೫೫ ಎನ್ನಲಾಗಿದೆ). 
ದೇವಾಲಯದ ದಿನ ನಿತ್ಯ ಪೂಜೆ ನೋಡಿಕೊಳ್ಳುವ ಕುಟುಂಬದವರ ಮನೆ ದೇವಾಲಯವಿರುವ ಪ್ರಾಂಗಣದಲ್ಲಿಯೇ ಇದೆ. ಈ ದೇವಾಲಯದ ಹೊರಗೋಡೆಯಲ್ಲಿ ಏನೂ ವಿಶೇಷತೆಯಿಲ್ಲ.


 
ಮುಖ್ಯದ್ವಾರದ ಲಲಾಟದಲ್ಲಿ ಗಣೇಶನ ಕೆತ್ತನೆಯಿದೆ. ಗಣೇಶ ಲಲಾಟದಲ್ಲಿ ಕಾಣಸಿಗುವುದು ಬಹಳ ಅಪರೂಪ. ನೇರಲಿಗೆಯ ದೇವಾಲಯದಲ್ಲಿ ಗರ್ಭಗುಡಿಯ ಲಲಾಟದಲ್ಲಿ ಗಣೇಶನ ಕೆತ್ತನೆಯಿದೆ.


 
ನವರಂಗ, ಅಂತರಾಳ ಮತ್ತು ಗರ್ಭಗುಡಿ ಇರುವ ದೇವಾಲಯವಿದು. ಮನೆಯವರು ನವರಂಗಕ್ಕೆ ರೆಡ್ ಆಕ್ಸೈಡ್ ಹಾಕಿದ್ದಾರೆ. ನವರಂಗದ ನಾಲ್ಕು ಕಂಬಗಳ ತಳಭಾಗದಲ್ಲಿರುವ ಕೆತ್ತನೆಗಳು ಮಾಸಿವೆ.ನವರಂಗದ ಛಾವಣಿಯಲ್ಲಿ ತಾವರೆಯ ಸುತ್ತಲೂ ಅಷ್ಟದಿಕ್ಪಾಲಕರಿದ್ದರೆ, ನಟ್ಟನಡುವೆ ಬ್ರಹ್ಮನ ಆಕರ್ಷಕ ಕೆತ್ತನೆಯಿದೆ. 
ಅಂತರಾಳದ ಇಕ್ಕೆಲಗಳಲ್ಲಿ ನಾಗನ ಹೆಡೆಮೆಟ್ಟಿ ನಿಂತಿರುವ ದ್ವಾರಪಾಲಕರಿದ್ದಾರೆ. ಲಲಾಟದಲ್ಲಿ ದೇವಿಯೊಬ್ಬಳ ಕೆತ್ತನೆಯಿದೆ. ಗರ್ಭಗುಡಿಯಲ್ಲಿರುವ ಆಕರ್ಷಕ ಮೂರ್ತಿಗೆ ಮನೆಯವರು ಉತ್ತಮ ಅಲಂಕಾರ ಮಾಡಿದ್ದರು. 


ಗರ್ಭಗುಡಿಯ ಸುತ್ತಲೂ ಕಿರಿದಾದ ಪ್ರದಕ್ಷಿಣಾ ಪಥವಿದೆ. ಇಲ್ಲಿ ಸಾಗುತ್ತಾ, ಗರ್ಭಗುಡಿಯ ಹೊರಗೋಡೆಯಲ್ಲಿರುವ ಸಣ್ಣ ಕೆತ್ತನೆಗಳನ್ನು ನೋಡಬಹುದು.

ಲಕ್ಕರ್ ಕಾಮತಿ ನಾರಾಯಣ ದೇವಾಲಯ


ಈ ದೇವಾಲಯವನ್ನು ಲಕ್ಕರಸ ಕಾಮತ್ ಎಂಬವರು ಇಸವಿ ೧೫೬೭ರಲ್ಲಿ ನಿರ್ಮಿಸಿದರು. ತೀರಾ ಸಾಧಾರಣವಾಗಿರುವ ದೇವಾಲಯವು ನವರಂಗ ಮತ್ತು ಗರ್ಭಗುಡಿಯನ್ನು ಹೊಂದಿದೆ.

 

ದೇವಾಲಯವು ಸುಂದರವಾದ ಮುಖಮಂಟಪವನ್ನು ಹೊಂದಿದ್ದ ಕುರುಹುಗಳನ್ನು ಕಾಣಬಹುದು. ಈಗ ಕೇವಲ ಕಂಬಗಳು ಮತ್ತು ನೆಲಗಟ್ಟು ಮಾತ್ರ ಉಳಿದಿವೆ.ಗರ್ಭಗುಡಿಯ ದ್ವಾರವು ಅಲಂಕಾರಿಕಾ ಕೆತ್ತನೆಗಳನ್ನು ಮತ್ತು ದ್ವಾರಪಾಲಕರನ್ನು ಹೊಂದಿದೆ.


ಉಳಿದ ದೇವಾಲಯಗಳಂತೆ ಇಲ್ಲೂ ಇಳಿಜಾರು ಮಾಡನ್ನು ಕಾಣಬಹುದಾದರೂ, ಇದು ಸ್ವಲ್ಪ ಎತ್ತರದಲ್ಲಿದೆ. ಊರಿನ ಹೊರಗೆ ಗದ್ದೆಗಳ ನಡುವೆ ಈ ದೇವಾಲಯವಿದೆ.

ಗುರುವಾರ, ನವೆಂಬರ್ 12, 2015

ಎರಡು ಜಲಧಾರೆಗಳು...


೨೦೧೦ರ ಸೆಪ್ಟೆಂಬರ್ ತಿಂಗಳು. ಗಣೇಶ ಚತುರ್ಥಿಯ ಮರುದಿನ ಗೆಳೆಯರಾದ ರಾಕೇಶ್ ಹೊಳ್ಳ ಹಾಗೂ ಸುಧೀರ್ ಕುಮಾರ್ ಜೊತೆಗೆ ಎರಡು ಜಲಧಾರೆಗಳನ್ನು ನೋಡಿಬರಲು ಹೊರಟೆ.


ಈ ಎರಡೂ ಜಲಧಾರೆಗಳಿಗೆ ಹೆಚ್ಚೇನು ನಡೆಯಬೇಕಾಗಿಲ್ಲ. ೨೦-೩೦ ನಿಮಿಷಗಳಷ್ಟು ನಡೆದರಾಯಿತು.


ಈ ಹಳ್ಳಿಯ ಆಸುಪಾಸಿನಲ್ಲಿಯೇ ಸುಮಾರು ೧೦ಕ್ಕೂ ಅಧಿಕ ಜಲಧಾರೆಗಳಿವೆ. ಹೆಚ್ಚಿನವುದಕ್ಕೆ ಚಾರಣ ಮಾಡಬೇಕಾಗುತ್ತದೆ. ನಮ್ಮ ಅಂದಿನ ಭೇಟಿ ಈ ಎರಡು ಜಲಧಾರೆಗಳಿಗೆ ಸೀಮಿತವಾಗಿತ್ತು.


ಮೊದಲ ಜಲಧಾರೆಗೆ ಭೇಟಿ ನೀಡಲು ಖಾಸಗಿ ತೋಟವೊಂದನ್ನು ದಾಟಿ ಹೋಗಬೇಕಾಗುತ್ತದೆ. ಸದ್ದಿಲ್ಲದೆ ಹೋದರೆ ಮನೆಯವರಿಗೆ ಗೊತ್ತೇ ಆಗುವುದಿಲ್ಲ. ಸದ್ದು ಮಾಡಿ, ಗಲಾಟೆ ಮಾಡುತ್ತಾ ಹೋದರೆ ಅವರು ಆಕ್ಷೇಪಿಸುತ್ತಾರೆ. ಅದು ಅಂದಿನ ಮಾತಾಯಿತು. ೨೦೧೪ ಜುಲಾಯಿ ತಿಂಗಳಲ್ಲಿ ತೆರಳಿದಾಗ, ದಾರಿ ಬದಲಾಗಿತ್ತು. ಈಗ ಜಲಧಾರೆಯ ಸಮೀಪದ ತನಕ ರಸ್ತೆಯಿದ್ದು, ನಂತರ ಒಂದೈದು ನಿಮಿಷ ಅದೇ ಹಳೆ ದಾರಿಯಲ್ಲಿ ನಡೆದರೆ, ತೋಟ ದಾಟಿ ಹಳ್ಳದ ಸಮೀಪ ತಲುಪಬಹುದು. ಆ ಮನೆಯ ಸಮೀಪದಿಂದ ಹಾದುಹೋಗುವ ಪ್ರಮೇಯವೇ ಇಲ್ಲ.


ತೋಟವನ್ನು ದಾಟಿದ ಬಳಿಕ, ಸಣ್ಣ ಕಾಲು ಸೇತುವೆಯನ್ನು ದಾಟಿ ಹಳ್ಳದ ಬದಿಯಲ್ಲೇ ಸ್ವಲ್ಪ ಮುಂದೆ ನಡೆದರೆ, ದಾರಿ ಜಲಧಾರೆಯ ಮೇಲ್ಭಾಗಕ್ಕೆ ಬಂದು ತಲುಪುತ್ತದೆ. ಹಾಗೇ ನಿಧಾನವಾಗಿ ಕೆಳಗಿಳಿದು ಹೋದರೆ ಜಲಧಾರೆಯ ಬುಡಕ್ಕೆ ತಲುಪಬಹುದು.


ಈಗ ಮೂರ್ನಾಲ್ಕು ಕವಲುಗಳಲ್ಲಿ ಧುಮುಕುತ್ತಿದ್ದ ಜಲಧಾರೆ, ಮಳೆಗಾಲದಲ್ಲಿ ಬಂಡೆಯುದ್ದಕ್ಕೂ ಒಂದೇ ಕವಲಿನ ರೂಪ ತಳೆದಿರುತ್ತದೆ. ಸುಮಾರು ೨೫ ಅಡಿ ಉದ್ದ ಮತ್ತು ೫೦ ಅಡಿ ಅಗಲವಿರುವ ಜಲಧಾರೆ.


ಹಳ್ಳಗುಂಟ ಇನ್ನೂ ಸ್ವಲ್ಪ ಮುನ್ನಡೆದರೆ, ಅಲ್ಲಿ ಮುಂದೆ ಇನ್ನಷ್ಟು ಸುಂದರ ದೃಶ್ಯಗಳನ್ನು ಕಾಣಬಹುದು.


ಹಳ್ಳ ಇನ್ನಷ್ಟು ಕೆಳಕ್ಕೆ ಧುಮುಕಿ ಅಲ್ಲಿ ಒಂದು ಸುಂದರ ಗುಂಡಿಯನ್ನು ನಿರ್ಮಿಸಿದೆ. ನೀರಿನ ಹರಿವು ಕಡಿಮೆಯಾದಾಗ ಇಲ್ಲಿಗೆ ಸಂದರ್ಶಿಸುವವರು ಅಲ್ಲಿ ತನಕ ಇಳಿದು ಆ ಗುಂಡಿಯಲ್ಲಿ ಜಲಕ್ರೀಡೆಯಾಡುತ್ತಾರೆ.


ಅಂದಿನ ನಮ್ಮ ಎರಡನೇ ಜಲಧಾರೆ ಸಾಧಾರಣವಾಗಿರುವಂಥದ್ದು. ಇದು ಸುಮಾರು ೩೦ ಅಡಿ ಎತ್ತರವಿದ್ದರೂ ನೇರವಾಗಿ ಧುಮುಕುವುದಿಲ್ಲ.


ಪ್ರಮುಖ ರಸ್ತೆಯ ಸಮೀಪವೇ ಇರುವುದರಿಂದ ಇಲ್ಲಿಗೆ ಆಸುಪಾಸಿನ ಊರಿನವರು ಬರುತ್ತಿರುತ್ತಾರೆ.


ರಸ್ತೆಯಲ್ಲಿ ವಾಹನ ನಿಲ್ಲಿಸಿ ಹತ್ತು ನಿಮಿಷ ನಡೆದರೆ ಈ ಸ್ಥಳವನ್ನು ತಲುಪಬಹುದು. ಯಾವುದೇ ಮಾರ್ಗಸೂಚಿ ಇಲ್ಲದಿರುವುದರಿಂದ ಪ್ರವಾಸಿಗರು ಯಾರೂ ಇತ್ತ ಸುಳಿಯುವುದಿಲ್ಲ.

ಭಾನುವಾರ, ಅಕ್ಟೋಬರ್ 25, 2015

ಸಿದ್ಧೇಶ್ವರ - ಮಳೆ - ಜಲಧಾರೆ


ಅದು ಅಗಸ್ಟ್ ತಿಂಗಳು, ೨೦೧೩. ಮಳೆಯಲ್ಲೇ ಚಾರಣ ಮಾಡುವ ಇರಾದೆ ಬಹಳ ದಿನಗಳಿಂದ ಇದ್ದರೂ, ನಾವು ಚಾರಣ ಮಾಡುವಾಗ ಎಡೆಬಿಡದೆ ಮಳೆ ಸುರಿಯಬೇಕಲ್ಲವೆ? ಆದರೆ ಈ ಚಾರಣದಲ್ಲಿ ಮಳೆ ನಮ್ಮ ಬೆನ್ನು ಬಿಡಲೇ ಇಲ್ಲ. ಮೂರು ಸಲ ಐದು ಹತ್ತು ನಿಮಿಷದ ಬಿಡುವು ಪಡೆದ ಮಳೆ ದಿನವಿಡೀ ಎಡೆಬಿಡದೆ ಸುರಿಯುತ್ತಿತ್ತು. ಅದು ಸಾಧಾರಣ ಮಳೆಯಾಗಿರಲಿಲ್ಲ. ಭರ್ಜರಿ ಮಳೆಯಾಗಿತ್ತು. ಜೊತೆಗೆ ಚಳಿಗಾಳಿಯ ಲೇಪನ. ಮೂರು ತಾಸಿನ ಚಾರಣದ ಬಳಿಕ ನಾವೆಲ್ಲಾ ತೊಯ್ದು ಗಡಗಡನೆ ನಡುಗುತ್ತಿದ್ದವು.


ಅಂದಿನ ಚಾರಣದಲ್ಲಿ ಮೊದಲ ಗುರಿ ಸಿದ್ಧೇಶ್ವರ ದೇವಸ್ಥಾನ. ಕರ್ನಾಟಕದ ತುತ್ತತುದಿ ಎಂದು ಈ ಸ್ಥಳವನ್ನು ನಕ್ಷೆಯಲ್ಲಿ ಗುರುತಿಸಲಾಗಿದೆ. ಆದರೆ ನನಗೆ ಈ ವಿಷಯದಲ್ಲಿ ಸ್ವಲ್ಪ ಸಂದೇಹವಿದೆ. ನನ್ನ ಪ್ರಕಾರ ಆ ಶ್ರೇಯ ಮುಳ್ಳಯ್ಯನಗಿರಿಗೆ ಸಲ್ಲುತ್ತದೆ. ಬಲ್ಲವರು ತಿಳಿಸಿದರೆ ಒಳ್ಳೆಯದು.


ಬೆಟ್ಟದ ತುದಿಯಲ್ಲಿ ನೆಲೆಗೊಂಡಿರುವ ಸಿದ್ಧೇಶ್ವರನ ಸುತ್ತಮುತ್ತಲಿನ ಪರಿಸರ ಸುಂದರವಾಗಿದೆ. ನಾವು ಸಿದ್ಧೇಶ್ವರ ದೇವಸ್ಥಾನ ಸಮೀಪಿಸಿದಂತೆ ಮಳೆ ತನ್ನ ಮೊದಲ ಬಿಡುವು ಪಡೆದಿತ್ತು. ಮಂಜು ಪಸರಿಸಿದ್ದ ವಾತಾವರಣದಲ್ಲಿ ಸುಮಾರು ಸಮಯ ಕಳೆದೆವು. ವಾತಾವರಣ ಎಷ್ಟು ಹಿತವಾಗಿತ್ತೆಂದರೆ ಅಲ್ಲಿಂದ ಕದಲಲು ಮನಸಾಗುತ್ತಿರಲಿಲ್ಲ.


ನಂತರ ಹಾಗೇ ಕಾಡಿನಲ್ಲಿ ಮುಂದೆ ಸಾಗಿದೆವು. ಮತ್ತೆ ಮಳೆ ತನ್ನ ಆರ್ಭಟ ಮುಂದುವರೆಸಿತು. ಕಾಡಿನ ನಡುವೆ ಸದ್ದುಮಾಡುತ್ತಾ ತೊರೆಯೊಂದು ಹರಿದು ಬರುತ್ತಿತ್ತು.


ಈ ತೊರೆಗೆ ಅಲ್ಲೊಂದು ಒಡ್ಡು ನಿರ್ಮಿಸಿ ನೀರನ್ನು ತಡೆಹಿಡಿಯಲಾಗಿತ್ತು. ಅಲ್ಲೊಂದಷ್ಟು ಸಮಯ ಕಳೆದೆವು.


ನಂತರ ಮುಂದೆ ಸಾಗಿದ ಚಾರಣ ಸುಂದರ ಸ್ಥಳಗಳ ಮೂಲಕ ಹಾದುಹೋದರೂ, ಮಳೆ ನಮ್ಮ ಕ್ಯಾಮರಾಗಳನ್ನು ಹೊರಗೆ ತೆಗೆಯಲು ಬಿಡಲೇ ಇಲ್ಲ. ಒಂದೆಡೆ ವಿಶಾಲವಾದ ಬಯಲು ಪ್ರದೇಶದ ಮೂಲಕ ಹಾದುಹೋದೆವು. ಇಲ್ಲಿ ಮಳೆಯ ನಿಜವಾದ ಶಕ್ತಿ ಮತ್ತು ತಾಕತ್ತಿನ ಬಗ್ಗೆ ನಮಗೆ ಅರಿವಾಯಿತು. ಒಂದು ಹೆಜ್ಜೆ ಇಡಲೂ ಪರದಾಡಬೇಕಾಯಿತು. ಹತ್ತಡಿ ಮುಂದೆ ಏನಿದೆ ಎಂದು ಕಾಣುತ್ತಿರಲಿಲ್ಲ. ಬಾಣದಂತೆ ಮಳೆಯ ದೊಡ್ಡ ಹನಿಗಳು ನಮ್ಮನ್ನು ಎಲ್ಲೆಂದರಂತೆ ಚುಚ್ಚುತ್ತಿದ್ದವು. ಅಂದು ಆಕಾಶವೇ ಬಾಣಭರಿತ ಬತ್ತಳಿಕೆಯಾಗಿತ್ತು. ಆ ಬಯಲು ಪ್ರದೇಶ ದಾಟಲು ನಮಗೆ ೨೦ ನಿಮಿಷಗಳು ಬೇಕಾದವು. ಮತ್ತೆ ಕಾಡನ್ನು ಹೊಕ್ಕಾಗ ನಿಟ್ಟುಸಿರುಬಿಟ್ಟೆವು.


ನಮ್ಮಲ್ಲಿ ಯಾರಿಗೂ ಅಂತಹ ಅನುಭವ ಆಗಿರಲಿಲ್ಲ. ಬಿರುಬಿಸಿಲಿನಲ್ಲಿ ನಡೆದು ದಣಿದಂತೆ, ಆ ಬಯಲುಪ್ರದೇಶ ದಾಟುವಾಗ ದಣಿದಿದ್ದೆವು. ಕಾಡು ಮತ್ತೆ ಆರಂಭವಾದಲ್ಲಿ, ಮಳೆ ಆ ಬಯಲುಪ್ರದೇಶವನ್ನು ಚಿಂದಿ ಮಾಡುವುದನ್ನು ನೋಡುತ್ತಾ ಒಂದೈದು ನಿಮಿಷ ವಿಶ್ರಮಿಸಿದೆವು.


ತದನಂತರ ಬೆಟ್ಟವನ್ನು ಇಳಿದು ಒಂದು ಊರನ್ನು ಹೊಕ್ಕೆವು. ಊರನ್ನು ದಾಟಿ, ಊರಿನ ಹೊರವಲಯದ ಮೂಲಕ ಹಾದುಹೋಗುವಾಗ ಅಲ್ಲಿ ಮತ್ತೆ ಸುಂದರ ದೃಶ್ಯಾವಳಿ. ಆದರೆ ಮಳೆ ಮತ್ತೆ ನಮಗೆ ಚಿತ್ರಗಳನ್ನು ತೆಗೆಯಲು ಅವಕಾಶ ನೀಡಲೇ ಇಲ್ಲ.


ಸುಮಾರು ದೂರ ಕ್ರಮಿಸಿದ ಬಳಿಕ ಕಣಿವೆಯೊಂದರ ಅಂಚಿಗೆ ಬಂದೆವು. ಬಲಭಾಗದಲ್ಲಿ ಜಲಧಾರೆ ನಿರ್ಮಿಸುವ ಹಳ್ಳವು ಧುಮುಕುತ್ತಿತ್ತು. ಮರ, ಗಿಡ, ಬೇರು ಇತ್ಯಾದಿಗಳನ್ನು ಹಿಡಿದು ಕೆಳಗಿಳಿಯಲಾರಂಭಿಸಿದೆವು. ಮಳೆಯ ಇರುವಿಕೆ, ಕೆಳಗಿಳಿಯುವುದನ್ನು ಇನ್ನಷ್ಟು ತ್ರಾಸದಾಯಕವನ್ನಾಗಿ ಮಾಡಿತ್ತು. ಸುಮಾರು ಇಪ್ಪತ್ತು ನಿಮಿಷಗಳ ಬಳಿಕ ಮತ್ತದೇ ಹಳ್ಳ ಎದುರಾಯಿತು. ಹಳ್ಳವನ್ನು ದಾಟಿ ಆ ದಟ್ಟ ಕಾಡಿನ ನಡುವೆ ನಡೆದು ಜಲಧಾರೆಯ ಬುಡಕ್ಕೆ ತಲುಪಿದೆವು.


ಸುಮಾರು ೪೦ ಅಡಿ ಎತ್ತರವಿರುವ ಜಲಧಾರೆ ಎರಡು ಕವಲುಗಳಲ್ಲಿ ಧುಮುಕುತ್ತಿತ್ತು. ಒಂದು ಕವಲು ರೌದ್ರವಾಗಿದ್ದರೆ ಇನ್ನೊಂದು ಸೌಮ್ಯವಾಗಿತ್ತು.


ಜಲಧಾರೆಯ ತಳದಲ್ಲಿ ಹೆಚ್ಚು ಸ್ಥಳವಿಲ್ಲ. ಆದರೆ ಕಾಡಿನ ಪ್ರಾಕೃತಿಕ ಛಾವಣಿ ನಮಗೆ ಮಳೆಯಿಂದ ಸುಮಾರಾಗಿ ರಕ್ಷಣೆಯನ್ನು ನೀಡಿತ್ತು. ಮುಖ್ಯವಾಗಿ ಚಿತ್ರಗಳನ್ನು ತೆಗೆಯಲು ನಮಗೆ ಸ್ವಲ್ಪ ಆಸ್ಪದ ನೀಡಿತ್ತು.


ನೆಲಕ್ಕಪಳಿಸಿದ ಕೂಡಲೇ ಹಳ್ಳವು ಎಡಕ್ಕೆ ತಿರುವು ಪಡೆದು ನಂತರ ಮತ್ತೆ ಬಲಕ್ಕೆ ತಿರುವು ಪಡೆದು ಹಾಗೇ ಕಾಡಿನಲ್ಲಿ ಮುಂದಕ್ಕೆ ಸಾಗುತ್ತದೆ.


ಕಣಿವೆಯನ್ನೇರಿ ಹಳ್ಳಿಯ ಹೊರವಲಯ ಪ್ರವೇಶಿಸುವಷ್ಟರಲ್ಲಿ ಮಳೆ ಸಂಪೂರ್ಣವಾಗಿ ನಿಂತುಬಿಟ್ಟಿತು. ಜಲಧಾರೆಯೆಡೆ ಸಾಗುವಾಗ ಮಳೆಯ ಕಾರಣ ಚಿತ್ರಗಳನ್ನು ತೆಗೆಯಲಾಗದ ನಮಗೆ ಈಗ ಚಿತ್ರಗಳನ್ನು ತೆಗೆಯಲು ಫುಲ್ ಟೈಮ್. ಮಳೆ ನಿಂತ ಕೂಡಲೇ ಇರುವ ವಾತಾವರಣವೇ ವಿಶಿಷ್ಟವಾದದ್ದು. ಕೆಲವು ಚಿತ್ರಗಳನ್ನು ತೆಗೆದು ಮುನ್ನಡೆದೆವು.


ನಮ್ಮ ವಾಹನ ಇರುವಲ್ಲಿ ತಲುಪಿದಾಗ ಚಾರಣ ಆರಂಭಿಸಿ ಮೂರುವರೆ ತಾಸುಗಳಾಗಿದ್ದವು. ಅಲ್ಲಿ ರಸ್ತೆಯ ಬದಿಯಲ್ಲಿದ್ದ ದೇವಾಲಯದ ಆವರಣದಲ್ಲಿ ಉದರ ಪೋಷಣೆ ಮುಗಿಸಿ ಹಿಂತಿರುಗಿದೆವು.