ಭಾನುವಾರ, ಜನವರಿ 27, 2013

ಚಾರಣ ಚಿತ್ರ - ೨೫


ಆಕಳಗವಿಯ ತುತ್ತತುದಿಯಲ್ಲಿ ಆಕಳ ಮುಖ...

ಶನಿವಾರ, ಜನವರಿ 12, 2013

ಆಳ ಕಣಿವೆಯ ತಳದಲ್ಲಿ...


ಜಲಧಾರೆಗಳಿಗೆ ಭೇಟಿ ನೀಡುವ ಸಂದರ್ಭದಲ್ಲಿ ಯಾವುದೇ ಹಬ್ಬ, ಸಮಾರಂಭಗಳ ಸಂದರ್ಭಗಳನ್ನೂ ಮೀರಿಸುವ ಸಂಭ್ರಮ ನನ್ನ ಮನಸಿನಲ್ಲಿ ಮನೆ ಮಾಡಿರುತ್ತದೆ. ಈ ಬಾರಿಯೂ ಅದೇ ಸಂಭ್ರಮ, ಉಲ್ಲಾಸದಿಂದ ಗೆಳೆಯ ವಿವೇಕ್ ಯೇರಿ ಒಟ್ಟುಗೂಡಿಸಿದ ಚಾರಣಿಗರ ಗುಂಪನ್ನು ಸೇರಿಕೊಂಡೆ. ಈ ಚಾರಣಕ್ಕೆ ತೆರಳುವ ಸರಿಯಾಗಿ ಒಂದು ವರ್ಷದ ಮೊದಲು ಇದೇ ಪರಿಸರದಲ್ಲಿ ಇನ್ನೊಂದು ಚಾರಣ ಕೈಗೊಂಡಿದ್ದೆವು. ಅಂದು ನಮ್ಮೊಂದಿಗೆ ಮಾರ್ಗದರ್ಶಿಯಾಗಿ ಬಂದಿದ್ದ ಹರ್ಷವರ್ಧನನೊಂದಿಗೆ ಮಾತುಕತೆಗಿಳಿದಾಗ ಈ ಜಲಧಾರೆಯ ಅಸ್ತಿತ್ವದ ರಹಸ್ಯ ಬಹಿರಂಗಗೊಂಡಿತ್ತು. ಯಾರೂ ಭೇಟಿ ನೀಡದ ಈ ಅಜ್ಞಾತ ಜಲಧಾರೆಗೆ ನಮ್ಮನ್ನು ಕರೆದೊಯ್ಯಲು ಹರ್ಷವರ್ಧನ ಒಪ್ಪಿದ್ದ. ಮುಂದಿನ ವರ್ಷ ಇದೇ ಸಮಯಕ್ಕೆ ಬರುವಂತೆ ಸೂಚಿಸಿ, ತನ್ನ ದೂರವಾಣಿ ಸಂಖ್ಯೆ ನೀಡಿದ. ವಿವೇಕ್ ಬರೆದುಕೊಂಡಿರಬಹುದು ಎಂದು ನಾನು ಬರೆದುಕೊಳ್ಳುವ ಗೋಜಿಗೆ ಹೋಗಲಿಲ್ಲ. ಒಂದು ವರ್ಷದ ಬಳಿಕ ವಿವೇಕ್ ಫೋನ್ ಮಾಡಿ ಹರ್ಷವರ್ಧನನ ದೂರವಾಣಿ ಸಂಖ್ಯೆ ಕೇಳಿದರು! ನಾನು ಬರೆದುಕೊಂಡಿರುತ್ತೇನೆ ಎಂದು ಅವರು ಕೂಡಾ ಬರೆದುಕೊಂಡಿರಲಿಲ್ಲ!


ಈಗ ಹರ್ಷವರ್ಧನನನ್ನು ಸಂಪರ್ಕಿಸುವುದು ಹೇಗೆ? ಮುಂಚಿತವಾಗಿ ತಿಳಿಸದೇ ನಾವು ಹೋಗುವಂತಿರಲಿಲ್ಲ. ಈ ಹಳ್ಳಿಯ ಜನರು ಸಮೀಪದ ಪಟ್ಟಣಕ್ಕೆ ವಾರಕ್ಕೊಮ್ಮೆ ನಡೆಯುವ ಸಂತೆಗೆ ಬರುತ್ತಾರೆ. ಈ ಪಟ್ಟಣದಲ್ಲಿ ವಿವೇಕ್ ಪರಿಚಯದವರೊಬ್ಬರಿದ್ದಾರೆ. ವಿವೇಕ್ ವಿನಂತಿ ಮೇರೆಗೆ, ಈ ವ್ಯಕ್ತಿ ಸಂತೆಗೆ ತೆರಳಿ, ಆ ಹಳ್ಳಿಯಿಂದ ಬಂದವರನ್ನು ಹುಡುಕಿ, ಅವರಿಂದ ಹರ್ಷವರ್ಧನನ ದೂರವಾಣಿ ಸಂಖ್ಯೆ ಪಡೆದು, ವಿವೇಕ್‍ಗೆ ನೀಡಿದರು. ಈ ’ದೂರವಾಣಿ ಸಂಖ್ಯೆ ಹುಡುಕಿ ತೆಗೆಯುವ’ ಪ್ರಕ್ರಿಯೆ ಪೂರ್ಣಗೊಳ್ಳಲು ಒಂದು ತಿಂಗಳೇ ತಗುಲಿತು. ಆನಂತರ ಎರಡು ವಾರಗಳ ಕಾಲ ಪ್ರತಿ ದಿನ ಹರ್ಷವರ್ಧನನ ನಂಬರಿಗೆ ’ಡಯಲ್’ ಮಾಡಿದ್ದೇ ಮಾಡಿದ್ದು. ಆಸಾಮಿಯ ಫೋನ್ ’ಸ್ವಿಚ್ ಆಫ್’. ಅಂತೂ ಕಡೆಗೆ ವಿವೇಕ್ ಕರೆಗೆ ಸಿಕ್ಕ ಹರ್ಷವರ್ಧನನಿಗೆ ನಾವು ಬರುವ ದಿನಾಂಕವನ್ನು ತಿಳಿಸಲಾಯಿತು. ಸಂತೋಷದಿಂದ ಮಾತನಾಡಿದ ಆತ ಒಂದು ಬಹಳ ಮುಖ್ಯವಾದ ವಿಷಯವನ್ನು ನಮಗೆ ತಿಳಿಸಲೇ ಇಲ್ಲ.


ನಿಗದಿತ ದಿನಾಂಕದಂದು ನಿಗದಿತ ಸಮಯಕ್ಕೆ ಮುಂಚಿತವಾಗಿಯೇ ವಿವೇಕ್ ಮನೆ ತಲುಪಿದೆ. ಅರ್ಧ ಗಂಟೆ ತಡವಾಗಿ ಆಗಮಿಸಿದ ನಮ್ಮ ವಾಹನ ಕೇವಲ ಒಂದು ಕಿಮಿ ದೂರ ಕ್ರಮಿಸುವಷ್ಟರಲ್ಲಿ ನಿಂತುಬಿಟ್ಟಿತು. ’ಕೆಟ್ಟುಹೋಗಿದೆ’ ಎಂದು ಅಧಿಕೃತ ಘೋಷಣೆ ಹೊರಬೀಳಲು ಇನ್ನೊಂದು ೨೦ ನಿಮಿಷ ಬೇಕಾದವು. ಮುಂದೆ ಇನ್ನೂ ನಾಲ್ಕು ಚಾರಣಿಗರು ವಾಹನ ಹತ್ತುವವರಿದ್ದರು. ಇವರಲ್ಲಿ ಇಬ್ಬರು ಮಹೀಂದ್ರಾ ಸ್ಕೊರ್ಪಿಯೋ ವಾಹನದ ಮಾಲೀಕರು. ಜಲಧಾರೆಯಿರುವ ಹಳ್ಳಿ ತಲುಪಲು ನಾಲ್ಕು ತೊರೆಗಳನ್ನು ದಾಟಬೇಕಾಗುವುದರಿಂದ ಸಣ್ಣ ವಾಹನಗಳಲ್ಲಿ ತೆರಳುವುದು ಅಸಾಧ್ಯ. ಅವರಿಬ್ಬರಿಗೆ ಫೋನಾಯಿಸಿದ ವಿವೇಕ್, ಪರಿಸ್ಥಿತಿಯನ್ನು ವಿವರಿಸಿ, ತಮ್ಮ ವಾಹನಗಳನ್ನು ತರುವಂತೆ ವಿನಂತಿಸಿದರು. ಹದಿನೈದು ನಿಮಿಷದಲ್ಲಿ ಡಾ!ಗುತ್ತಲ್ ಮತ್ತು ಪ್ರವೀಣ್ ಥಿಟೆ ತಮ್ಮ ತಮ್ಮ ಸ್ಕೊರ್ಪಿಯೋಗಳೊಂದಿಗೆ ಬಂದೇಬಿಟ್ಟರು. ಇವರಿಬ್ಬರಿಗೆ ಎಷ್ಟು ಧನ್ಯವಾದ ಹೇಳಿದರೂ ಕಡಿಮೆ.


ಹರ್ಷವರ್ಧನನ ಊರಿಗೆ ಯಾವುದೇ ಬಸ್ಸು ಬರುವುದಿಲ್ಲ. ಸಮೀಪದ ಪಟ್ಟಣದಲ್ಲಿ ನಡೆಯುವ ಸಂತೆಗೆ ಹಳ್ಳಿಗರನ್ನು ಕರೆದೊಯ್ಯಲು ತೆರೆದ ಟಾಟಾ ೪೦೭ ವಾಹನವೊಂದು ಹಗ್ಗದ ಮೇಲೆ ಬ್ಯಾಲೆನ್ಸ್ ಮಾಡುವ ವಯ್ಯಾರಿಯಂತೆ ಬಳುಕುತ್ತಾ ಬಹಳ ಕಷ್ಟದಲ್ಲಿ ಈ ದಾರಿಯಲ್ಲಿ ಸಾಗುತ್ತದೆ. ಈ ಊರಿಗೆ ಕೊನೆಯ ೧೫ಕಿಮಿ ಅಂತರ ಕ್ರಮಿಸುವುದೇ ರೋಮಾಂಚನಕಾರಿ ಅನುಭವ. ಕಳೆದ ಬಾರಿ ಬಂದಾಗ ಈ ದಾರಿಯ ಅಂಕು ಡೊಂಕು ಮಣ್ಣಿನ ರಸ್ತೆ, ನಾಲ್ಕು ಹಳ್ಳಗಳು, ಕೆಲವೆಡೆ ಕಿರಿದಾದ ದಾರಿ, ದಟ್ಟ ಕಾಡು, ಇವೆಲ್ಲವನ್ನು ಬಹಳಷ್ಟು ಆನಂದಿಸಿದ್ದೆ. ಈ ದಾರಿಯ ಸೊಬಗು ಇರುವುದು ಇಲ್ಲಿ ಮನೆಮಾಡಿರುವ ನೀರವತೆಯಲ್ಲಿ. ಆ ನೀರವ ಮೌನದಲ್ಲಿ ಕಳೆದುಹೋಗುವೆನೋ ಎಂದು ಅರಿವಿಲ್ಲದೆ ಆವರಿಸುವ ಭಯ. ಎಂದೂ ಕೊನೆಗೊಳ್ಳದ ರಸ್ತೆಯಲ್ಲಿ ಎಂದೂ ಸಿಗದ ಊರಿಗೆ ಸಾಗುವ ವಿಚಿತ್ರ ಅನುಭವ. ಅಲ್ಲಿನ ಪರಿಸರವೇ ಹಾಗಿತ್ತು. ವಿಚಿತ್ರ ಮೌನ. ದಾರಿಯಲ್ಲಿ ಸಿಗುವ ತೊರೆಗಳು ಅಲ್ಲಿನ ಸೌಂದರ್ಯತೆಗೆ ತಮ್ಮದೇ ಆದ ವಿಶಿಷ್ಟ ಮೆರಗನ್ನು ನೀಡಿದ್ದವು. ಅಂದಿನ ಆ ಸುಂದರ ನೆನಪುಗಳನ್ನು ಮೆಲುಕುಹಾಕುತ್ತಾ ಮತ್ತವೇ ಅನುಭವಗಳನ್ನು ಎದುರುನೋಡುತ್ತಾ ಕೊನೆಯ ೧೫ಕಿಮಿ ದಾರಿಯನ್ನು ಪ್ರವೇಶಿಸಿದೆವು. ಅರ್ಧ ಕಿಮಿ ಕ್ರಮಿಸಿದ್ದೇವಷ್ಟೇ ಅಲ್ಲೊಂದು ಅನಿರೀಕ್ಷಿತ ಹೊಸ ಬೆಳವಣಿಗೆ. ಈ ಬಹಳ ಮುಖ್ಯ ವಿಷಯವನ್ನೇ ಹರ್ಷವರ್ಧನ ನಮಗೆ ತಿಳಿಸಿರದ ಕಾರಣ ಒಂದು ಕ್ಷಣ ಅವಕ್ಕಾದೆವು.


ಅಲ್ಲಿತ್ತೊಂದು ಅರಣ್ಯ ಇಲಾಖೆಯ ಗೇಟು ಮತ್ತು ಇಬ್ಬರು ಸಿಬ್ಬಂದಿಗಳು. ವಿವೇಕ್, ಮುರಳಿ ಮತ್ತು ನಾನು ಮಾತ್ರ ವಾಹನದಿಂದಿಳಿದು ಅವರೆಡೆ ತೆರಳಿದೆವು. ಅನುಮತಿ ಇಲ್ಲದೆ ಮುಂದೆ ಹೋಗಲು ಸಾಧ್ಯವೇ ಇಲ್ಲ ಎಂದು ಆ ಸಿಬ್ಬಂದಿಗಳಿಬ್ಬರು ಪಟ್ಟುಹಿಡಿದಿದ್ದರು. ವಿವೇಕ್ ಒಬ್ಬ ಅದ್ಭುತ ಮಾತುಗಾರ. ಅವರ ಈ ಪ್ರತಿಭೆ ಇಲ್ಲಿ ನಮಗೆ ಬಹಳ ಪ್ರಯೋಜನಕಾರಿಯಾಯಿತು. ’ಆ ಊರಿನ ಹರ್ಷವರ್ಧನ ನಮ್ಮ ದೂರದ ಸಂಬಂಧಿ. ಅವರ ಮನೆಯಲ್ಲಿ ಪೂಜೆಯಿದೆ. ಆ ಸಂಬಂಧ ನಮ್ಮನ್ನೆಲ್ಲಾ ಊಟಕ್ಕೆ ಕರೆದಿದ್ದಾನೆ’ ಎಂದು ಮೊದಲ ಬಾಣ ಬಿಟ್ಟರು. ಊರಿನವರ ಪರಿಚಯ ನಮಗಿದೆ ಎಂದು ಅರಿವಾದ ಬಳಿಕ ಅವರಿಬ್ಬರು ನಮ್ಮೊಂದಿಗೆ ಸ್ವಲ್ಪ ಸಲುಗೆಯಿಂದ ಮಾತನಾಡತೊಡಗಿದರು. ಸ್ವಲ್ಪ ಹೊತ್ತಿನ ಬಳಿಕ, ’ಅವನ ಮನೆಯವರಿಗೆ ಮತ್ತು ಊರಿನವರಿಗಂತಲೇ ನಾವು ಸಿಹಿತಿಂಡಿಗಳನ್ನು ತಂದಿದ್ದೇವೆ. ಪೂಜೆಗಾಗಿ ನಾವೂ ಊಟದ ವಸ್ತುಗಳನ್ನು ತಂದಿದ್ದೇವೆ’ ಎಂದು ವಿವೇಕ್ ಎರಡನೇ ಬಾಣ ಬಿಟ್ಟರು. ನಮ್ಮಲ್ಲಿದ್ದ ಸಿಹಿತಿಂಡಿಯ ದೊಡ್ಡ ಪ್ಯಾಕೇಟ್‍ಗಳಲ್ಲಿ ಒಂದನ್ನು ಅವರಿಬ್ಬರಿಗೆ ನೀಡಿದೆವು. ಅದರೊಂದಿಗೆ ಬೇರೆ ತಿನಿಸುಗಳನ್ನೂ ನೀಡಿದೆವು.


’ಪೂಜೆಯ ಊಟ ಮುಗಿಸಿ ಬೇಗ ಬರುತ್ತೀರಲ್ವೇ... ಅಪರಾಹ್ನ ೨ ಗಂಟೆಯ ಒಳಗೆ ನೀವು ಇಲ್ಲಿಂದ ಹೊರಗೆ ತೆರಳಬೇಕು’ ಎಂಬ ಕರಾರಿನೊಂದಿಗೆ ನಮಗೆ ಮುಂದೆ ಹೋಗಲು ಗೇಟು ಎತ್ತಿದರು. ’ನಾವು ಹಿಂತಿರುಗುವಾಗ ನೀವೇ ಇರುತ್ತೀರಲ್ವೇ’ ಎಂದು ನಾನು ಕೇಳಿದಾಗ, ಅವರು ಕೊಟ್ಟ ’ಇಲ್ಲ, ೧ ಗಂಟೆಗೆ ಪಾಳಿ ಬದಲಾಗುತ್ತದೆ. ಬೇರೆ ಇಬ್ಬರು ಇರುತ್ತಾರೆ’ ಎಂಬ ಉತ್ತರದಿಂದ, ಮತ್ತೆ ಇವರಿಬ್ಬರನ್ನು ಎದುರಿಸುವ ಪ್ರಮೇಯವಿಲ್ಲ ಎಂದು ಅರಿವಾಗಿ ನಿರಾಳರಾದೆವು. ಅಪರಾಹ್ನ ೨ ಗಂಟೆಯ ಒಳಗಂತೂ ನಾವು ಹಿಂತಿರುಗುವುದು ಅಸಾಧ್ಯವಾಗಿತ್ತು. ನಮ್ಮಿಂದ ಪ್ರಕೃತಿ ದೇವಿಯ ಪೂಜೆ ಬಹಳ ಸಮಯ ನಡೆಯಲಿತ್ತು.


ಅಲ್ಲಿಂದ ನಂತರದ ೧೫ಕಿಮಿ ಎಲ್ಲೂ ನಿಲ್ಲದೆ ಎರಡೂ ಸ್ಕೊರ್ಪಿಯೋಗಳು ಧೂಳೆಬ್ಬಿಸುತ್ತಾ ಹರ್ಷವರ್ಧನನ ಹಳ್ಳಿಯತ್ತ ದೌಡಾಯಿಸಿದವು. ಆತ ನಮಗಾಗಿಯೇ ಕಾಯುತ್ತಿದ್ದ. ಅರಣ್ಯ ಇಲಾಖೆಯ ಗೇಟನ್ನು ದಾಟಿ ನಾವು ಮುಂದೆ ಬರಲಾರೆವು ಎಂಬ ಆತಂಕ ಆತನಿಗಿತ್ತು. ಒಂದು ವರ್ಷದ ಬಳಿಕ ಮತ್ತೆ ನಮ್ಮನ್ನೆಲ್ಲಾ ಕಂಡು ಆತನಿಗೆ ಬಹಳ ಆನಂದ. ಅದಾಗಲೇ ಸಮಯ ೧೦ ಆಗಿದ್ದರಿಂದ ಮತ್ತೆ ತಡಮಾಡದೇ ಚಾರಣ ಆರಂಭಿಸಿದೆವು. ಕಾಡು, ನಂತರ ಹುಲ್ಲುಗಾವಲು ಪ್ರದೇಶ, ತದನಂತರ ವಿಶಾಲ ಬಯಲು, ಬಳಿಕ ಕುರುಚಲು ಕಾಡಿನ ಪ್ರದೇಶ ಹೀಗೆ ವೈವಿಧ್ಯತೆಯ ಸರಮಾಲೆಯನ್ನೇ ನಮ್ಮ ಮುಂದಿಡುತ್ತಾ ಚಾರಣದ ಹಾದಿ ಸಾಗುತ್ತಿತ್ತು.


ಕಣಿವೆಯ ಅಂಚು ತಲುಪಿದ ಬಳಿಕ ಮುಂದೆ ದಟ್ಟ ಕಾಡು. ಜಲಧಾರೆ ಎಷ್ಟು ದೂರವಿದೆ ಎಂದು ನಮಗ್ಯಾರಿಗೂ ಗೊತ್ತಿರಲಿಲ್ಲ. ಚಾರಣ ಆರಂಭಿಸಿದ ಒಂದೂವರೆ ತಾಸಿನ ಬಳಿಕ ಕಣಿವೆಯ ತುದಿ ತಲುಪಿದ ನಮಗೆ, ಆ ಕಣಿವೆಯ ತಳ ತಲುಪಿ ನಂತರ ಜಲಧಾರೆ ತಲುಪಲು ಇನ್ನೂ ೧೫೦ ನಿಮಿಷಗಳೂ ತಗುಲಲಿವೆ ಎಂಬ ಕಲ್ಪನೆಯೇ ಇರಲಿಲ್ಲ. ಹೆಚ್ಚೆಂದರೆ ಇನ್ನೊಂದು ತಾಸು ಎಂದು ಹುರುಪಿನಿಂದಲೇ ಕೆಳಗಿಳಿಯಲಾರಂಭಿಸಿದೆವು.


ಸ್ವಲ್ಪ ಸಮಯದ ಬಳಿಕ ಒಂದು ಕಡೆ ದೂರದಲ್ಲಿ ನಾವು ತೆರಳಬೇಕಾದ ಜಲಧಾರೆ ಅಸ್ಪಷ್ಟವಾಗಿ ಗೋಚರಿಸುತ್ತಿತ್ತು. ಆ ಅಂತರ ನೋಡಿಯೇ ಇದು ಸುಲಭದಲ್ಲಿ ದರ್ಶನ ನೀಡುವ ಜಲಧಾರೆಯಲ್ಲ ಎಂದು ಅರಿವಾಯಿತು. ನೋಡಲು ಬಹಳ ಸಮೀಪವಿದ್ದಂತೆ ಭಾಸವಾಗುತ್ತಿದ್ದರೂ ಕನಿಷ್ಠ ಎರಡು ತಾಸಿನ ಚಾರಣವಿದೆ ಎಂದು ನಿಟ್ಟುಸಿರುಬಿಟ್ಟೆ. ಪೂರ್ತಿ ಈಳಿಜಾರಿನ ದಾರಿಯಾಗಿದ್ದು ಕೆಲವೆಡೆ ಬೇರು, ಬೀಳುಗಳನ್ನು ಆಧಾರವಾಗಿ ಹಿಡಿದು ಇನ್ನು ಕೆಲವೆಡೆ ಕುಳಿತುಕೊಂಡು ಮತ್ತೆ ಕೆಲವೆಡೆ ಬಂಡೆಗಳನ್ನು ಕಲ್ಲುಗಳನ್ನು ಆಸರೆಯಾಗಿ ಬಳಸಿ ಮುಂದೆ ಮುಂದೆ ಮತ್ತಷ್ಟು ಇನ್ನಷ್ಟು ಕೆಳಗೆ ಸಾಗಿದೆವು.


ದಾರಿಯಲ್ಲೊಂದೆಡೆ ಕಾಡುಕೋಳಿಯೊಂದು ’ಫುರ್ರನೆ’ ತಾನು ಕುಳಿತಲ್ಲಿಂದ ಹಾರಿಹೋಯಿತು. ಅಲ್ಲಿದ್ದವು ೩ ಸಣ್ಣ ಸಣ್ಣ ಮೊಟ್ಟೆಗಳು. ನಾವು ಎಷ್ಟೇ ವಿನಂತಿಸಿಕೊಂಡರೂ ನಮ್ಮ ಮಾತನ್ನು ಕೇಳದೆ ಹರ್ಷವರ್ಧನ ಆ ಮೊಟ್ಟೆಗಳನ್ನು ಚೀಲದಲ್ಲಿ ಹಾಕಿಕೊಂಡ! ಅದೆಷ್ಟು ಪಾಪಿಗಳು ನೋಡಿ ನಾವು. ನಮ್ಮ ಚಾರಣದಿಂದ ಆ ತಾಯಿ ಕಾಡುಕೋಳಿ ತನ್ನ ಮೊಟ್ಟೆಗಳನ್ನು ಕಳಕೊಳ್ಳಬೇಕಾಯಿತು. ನಿರ್ದಾಕ್ಷಿಣ್ಯವಾಗಿ ಆತ ಮೊಟ್ಟೆಗಳನ್ನು ತೆಗೆದು ’ಸಂತೋಷ’ದಿಂದ ತನ್ನ ಚೀಲದಲ್ಲಿ ಹಾಕಿಕೊಳ್ಳಬೇಕಾದರೆ ಬಹಳ ನೋವುಂಟಾಯಿತು. ಆ ಮೊಟ್ಟೆಗಳು ಹಾವು ಅಥವಾ ನರಿ ಇತ್ಯಾದಿಗಳ ಪಾಲಾಗುವ ಬದಲು ತನ್ನ ಪಾಲಾಗುವುದೇ ಲೇಸಲ್ಲವೇ ಎಂಬ ಪ್ರಶ್ನೆ ಆತ ನಮ್ಮೆಡೆ ಎಸೆದಾಗ ನಮ್ಮಲ್ಲಿ ಉತ್ತರವಿರಲಿಲ್ಲ.


ಅಂತೂ ಕಣಿವೆಯ ತಳ ತಲುಪಿದಾಗ ಇನ್ನೊಂದು ನಿಟ್ಟುಸಿರುಬಿಟ್ಟೆ. ನಂತರದ ಅರ್ಧ ಗಂಟೆ ಏರು ತಗ್ಗುಗಳಿಂದ ಕೂಡಿದ ಸುಲಭದ ಚಾರಣ. ನಾವಿನ್ನೂ ಕಾಡಿನ ನಡುವೆಯೇ ಇದ್ದಿದ್ದರಿಂದ ಕಣಿವೆಯ ಅಗಾಧತೆಯ ಬಗ್ಗೆ ನಮಗರಿವಿರಲಿಲ್ಲ. ನದಿಯ ತಟ ತಲುಪಿದ ಬಳಿಕ ಕಣಿವೆಯ ಸಂಪೂರ್ಣ ನೋಟ ಲಭಿಸಿ ನಾವದೆಷ್ಟು ಕೆಳಗೆ ಇಳಿದು ಬಂದಿದ್ದೇವೆಂದು ಕಂಡು ದಂಗಾದೆವು. ಸ್ವಲ್ಪ ಮುಂದೆ ಸಾಗಿದ ಬಳಿಕ ಜಲಧಾರೆ ದರ್ಶನ ನೀಡಿತು.


ಈ ಅದ್ಭುತ ಕಣಿವೆಯ ಅಪ್ರತಿಮ ಪರಿಸರಕ್ಕೆ ತಿಲಕವಿಟ್ಟಂತೆ ಧುಮುಕುತ್ತಿತ್ತು ಈ ಜಲಧಾರೆ. ಅಲ್ಲಿನ ಸೌಂದರ್ಯ ಅವರ್ಣನೀಯ. ಕಣಿವೆಯ ಅಗಾಧ ಎತ್ತರದ ಮುಂದೆ ಜಲಧಾರೆ ಬಹಳ ಕುಬ್ಜವೆನಿಸುತ್ತಿತ್ತು. ಜಲಧಾರೆಗಿಂತಲೂ ಕಣಿವೆಯ ನೋಟವೇ ಮನಸೂರೆಗೊಂಡಿತು.


ಜಲಧಾರೆಯ ತಳದಲ್ಲಿ ವಿಶಾಲವಾದ ಸುಂದರ ಕೊಳ. ನಾಲ್ಕು ತಾಸುಗಳ ಚಾರಣದ ಬಳಿಕ ಜಲಕ್ರೀಡೆಯನ್ನು ಎದುರುನೋಡುತ್ತಿದ್ದ ನನ್ನ ಸಹಚಾರಣಿಗರಿಗೆ ಹುಚ್ಚೆಬ್ಬಿಸುವಂತ್ತಿತ್ತು ಈ ಕೊಳದ ನೋಟ. ತಡಮಾಡದೇ ಎಲ್ಲರೂ (ನನ್ನನ್ನು ಹೊರತುಪಡಿಸಿ) ಸ್ನಾನಕ್ಕಿಳಿದರು. ಅರ್ಧ ಗಂಟೆ ದಾಟಿದರೂ ಯಾರೂ ಮೇಲೆ ಬರಲು ಕೇಳರು. ನೀರಿನಲ್ಲಿ ಅಂಗಾತ ಬಿದ್ದು ಕಣಿವೆಯ ಎತ್ತರಕ್ಕೆ ದೃಷ್ಟಿ ಹಾಯಿಸುತ್ತಾ, ಕೊಳದ ಉದ್ದಗಲಕ್ಕೆ ಈಜು ಹೊಡೆಯುತ್ತಾ, ಸಂಪೂರ್ಣ ಆನಂದ ಪಡೆಯುವುದರಲ್ಲೇ ಎಲ್ಲರೂ ಮಗ್ನರಾಗಿದ್ದರು.


ಅತ್ತ ಎಲ್ಲರೂ ಜಲಕ್ರೀಡೆಯಾಡುತ್ತಿದ್ದರೆ, ನಾನು ಆ ಸ್ಥಳದ ಸೌಂದರ್ಯವನ್ನು ಕಣ್ಣುಗಳಲ್ಲಿ ಲೂಟಿ ಮಾಡುತ್ತಿದ್ದೆ. ನಾನು ಎಂದಿಗೂ ಒಂದೇ ಸ್ಥಳಕ್ಕೆ ಎರಡು ಸಲ ಹೋಗುವುದಿಲ್ಲವಾದರೂ, ಹೋಗಬೇಕು ಎಂದು ಅನಿಸಿದರೆ ಎಂದೂ ತೆರಳಬಹುದು. ಆದರೆ ಈ ಸ್ಥಳಕ್ಕೆ ಮಾತ್ರ ’ಇನ್ನೊಮ್ಮೆ ತೆರಳಬೇಕು ಎಂದರೂ ಸಾಧ್ಯವಾಗದು’ ಎಂದು ಅರಿವಿದ್ದರಿಂದ ಸಾಧ್ಯವಾದಷ್ಟು ಸೌಂದರ್ಯ ಲೂಟಿ ಮಾಡಿದೆ, ಕಣ್ಮನಗಳಲ್ಲಿ ತುಂಬಿಕೊಂಡೆ. ಪ್ರಕೃತಿಯ ಈ ಅದ್ಭುತ ದೇಗುಲಕ್ಕೆ ಬರುವವರ ಸಂಖ್ಯೆ ಅತಿ ವಿರಳ ಆಂದರೆ ಬೆರಳೆಣಿಕೆಯಷ್ಟು. ಕಾಡುತ್ಪತ್ತಿ ಸಂಗ್ರಹಿಸುವ ಕೆಲವು ಹಳ್ಳಿಗರು ಮಾತ್ರ ಇಲ್ಲಿ ಸುಳಿದಾಡುತ್ತಾರೆ. ಈ ಸ್ಥಳ ಇನ್ನಷ್ಟು ದಿನ ಹೀಗೆ ಪವಿತ್ರವಾಗಿ ಉಳಿಯಲಿ.


ಸುಮಾರು ೩.೧೫ಕ್ಕೆ ಜಲಧಾರೆಗೆ ವಿದಾಯ ಹೇಳಿದ ನಾವು ಹರ್ಷವರ್ಧನನ ಹಳ್ಳಿ ತಲುಪುವಾಗ ೭.೩೦ ಆಗಿತ್ತು. ನನ್ನಿಂದಲೇ ಸುಮಾರು ೩೦ ನಿಮಿಷಗಳಷ್ಟು ತಡವಾಯಿತು. ಸ್ನಾಯು ಸೆಳೆತದಿಂದ ಬಹಳ ಕಷ್ಟಪಡಬೇಕಾಯಿತು. ವಿವೇಕ್‍ರ ಅಕ್ಕನ ಮಗ ರಿಷಿ ಅಂದು ಚಾರಣಕ್ಕೆ ಬಂದಿದ್ದರು. ಅವರು, ಎಲ್ಲರಿಗಿಂತ ಹಿಂದೆ ಇದ್ದ ನನ್ನ ಜೊತೆಗೇ ಇದ್ದು, ಅಗಾಗ ನನ್ನ ಸ್ನಾಯುಗಳಿಗೆ ’ವೊಲಿನಿ’ ಚಿಮ್ಮಿಸುತ್ತಾ, ನನ್ನನ್ನು ಹುರಿದುಂಬಿಸದೇ ಇದ್ದಲ್ಲಿ ನಾನು ಬರುವುದು ಇನ್ನಷ್ಟು ತಡವಾಗುತ್ತಿತ್ತು. ಅಂದು ಡಾ|ಗುತ್ತಲ್ ’ವೊಲಿನಿ’ ತರದೇ ಇದ್ದಿದ್ದರೆ ನಾನು ಹಿಂತಿರುಗಿ ಬರುವುದೇ ಅಸಾಧ್ಯವಾಗಿತ್ತೇನೋ!


ಈಗ ಆ ೧೫ಕಿಮಿ ದಾರಿ! ನಮ್ಮ ವಾಹನಗಳ ಹೆಡ್‍ಲೈಟ್‍ಗಳ ಬೆಳಕು ಮಾತ್ರ. ಹಗಲಿರಲಿ ಇರುಳಿರಲಿ ಆ ಮೌನದಲ್ಲಿ ಬದಲಾವಣೆಯೇ ಇಲ್ಲ. ಮುಂದೆ ಸಿಗಲಿರುವ ಅರಣ್ಯ ಇಲಾಖೆಯ ಗೇಟಿನ ಸಿಬ್ಬಂದಿಗಳಿಗೆ ಏನು ಉತ್ತರ ನೀಡುವುದು ಎಂಬ ಚಿಂತೆಯೇ ನಮ್ಮನ್ನು ಕಾಡುತ್ತಿತ್ತು. ಪಾಳಿ ಬದಲಾಗಿದ್ದರಿಂದ ಈಗ ಬೇರೆ ಇಬ್ಬರು ಸಿಬ್ಬಂದಿಗಳಿರುತ್ತಾರೆ. ಅವರಿಗೆ ನೀಡಲು ಒಂದು ಸಿಹಿತಿಂಡಿ ಪೊಟ್ಟಣವನ್ನು ಹಾಗೇ ತೆಗೆದಿರಿಸಿದ್ದೆವು. ನಾವು ನಿಗದಿತ ಸಮಯದೊಳಗೆ ಹಿಂತಿರುಗಿ ಬರದಿದ್ದುದರಿಂದ, ಆ ಸಿಬ್ಬಂದಿಗಳು ಅಲ್ಲೇ ಸಮೀಪದ ಪಟ್ಟಣದಲ್ಲಿರುವ ತಮ್ಮ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿ, ಅವರೆಲ್ಲಾ ಈಗ ಅಲ್ಲಿ ಬಂದು ನಾವು ಬರುವುದನ್ನೇ ಕಾಯುತ್ತಾ ಇದ್ದರೆ ಏನು ಮಾಡುವುದು ಎಂಬ ಚಿಂತೆ ನಮ್ಮನ್ನು ಕಾಡುತ್ತಿತ್ತು. ಈ ೧೫ಕಿಮಿ ಬಹಳ ದೂರವೆನಿಸತೊಡಗಿತು.


ಅರಣ್ಯ ಇಲಾಖೆಯ ಗೇಟಿನ ಬಳಿ ತಲುಪಿದಾಗ ಪರಮಾಶ್ಚರ್ಯ, ಆನಂದ! ಅಲ್ಲಿ ಯಾರೂ ಇರಲಿಲ್ಲ! ಗೇಟು ತೆರೆದಿತ್ತು! ನಂಬಲಾಗದೇ ವಿವೇಕ್ ಒಂದು ಕ್ಷಣ ವಾಹನ ನಿಲ್ಲಿಸಿದರು. ’ಯಾಕ್ರೀ, ಯಾಕ್ ನಿಲ್ಸಿದ್ರೀ’ ಎಂದು ನಾನು ಕೇಳಿದರೆ, ’ಏ ಯಾರೂ ಇಲ್ಲಲ್ರಿ, ಗೇಟ್ ಬ್ಯಾರೆ ಓಪನ್ ಇಟ್ಟಾರ....’ ಎಂದು ಗಹಗಹಿಸಿ ನಗತೊಡಗಿದರು. ’ನಡ್ರಿ ಮತ್ತ, ಚಲೋನೆ ಆತಲ್ರೀ, ಯಾರಾದ್ರೂ ಇರ್ಬೇಕಿತ್ತೇನ ಇಲ್ಲಿ...’ ಎಂದಾಗ, ’ಏ ಬಿಡ್ರಿಯಪ್ಪಾ...’ ಎಂದು ಮತ್ತೆ ಗಹಗಹಿಸಿ ನಗುತ್ತಾ ವಾಹನವನ್ನು ಮುಂದೆ ದೌಡಾಯಿಸಿದರು.