ಭಾನುವಾರ, ಮೇ 25, 2008

ಮಿರ್ಜಾನ ಕೋಟೆ!


ಮಿರ್ಜಾನ ಕೋಟೆ ನಾನು ಸಣ್ಣಂದಿನಿಂದಲೂ ಭೇಟಿ ನೀಡುತ್ತಿದ್ದ ಸ್ಥಳವಾಗಿರುವುದರಿಂದ ಏನೋ ಸ್ವಲ್ಪ ಹೆಚ್ಚು ಇಷ್ಟವಾಗುವ ಸ್ಥಳ. ಯಾರು ಕಟ್ಟಿಸಿದರು, ಯಾಕೆ ಕಟ್ಟಿಸಿದರು ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿಯಿಲ್ಲ. ಆದರೆ ಕೋಟೆಯಂತೂ ಸಣ್ಣದಾಗಿದ್ದರೂ ವಿಸ್ಮಯಕಾರಿಯಾಗಿದೆ. ನಗರದ ಶಿವಪ್ಪ ನಾಯಕನ ಕೋಟೆಗಿಂತಲೂ ಗಾತ್ರದಲ್ಲಿ ಸಣ್ಣದಿರುವ ಮಿರ್ಜಾನ ಕೋಟೆಯನ್ನು ಈಗ ಪುರಾತತ್ವ ಇಲಾಖೆ ಸ್ವಚ್ಛಗೊಳಿಸಿ, ಶಿಥಿಲಗೊಂಡಿದ್ದ ಕೋಟೆಯ ಗೋಡೆಗಳನ್ನು ಮೊದಲಿನ ರೂಪಕ್ಕೆ ತರುವ ಪ್ರಯತ್ನ ಮಾಡುತ್ತಿದೆ.

ಈ ಕೋಟೆಯಲ್ಲಿ ಹಲವಾರು ಬಾವಿಗಳಿದ್ದ ನೆನಪು. ಈಗ ಕೇವಲ ೩ ಇವೆ. ಉಳಿದವುಗಳು ಏನಾದವು ಎಂದೇ ತಿಳಿಯಲಿಲ್ಲ. ೧೯೯೪ ಮೇ ತಿಂಗಳಲ್ಲಿ ಇಲ್ಲಿಗೆ ಬಂದ ಬಳಿಕ ನಂತರ ಮತ್ತೆ ಭೇಟಿ ನೀಡಿದ್ದು ೧೨ ವರ್ಷಗಳ ಬಳಿಕ ೨೦೦೬ ಮಾರ್ಚ್ ತಿಂಗಳಲ್ಲಿ.


೧೯೯೪ರ ತನಕದ ಹತ್ತಾರು ಭೇಟಿಗಳ ನೆನಪು:

ಕೋಟೆಯ ಸುತ್ತಲೂ ಇರುವ ಕಂದಕ ದಟ್ಟ ಗಿಡಗಂಟಿಗಳಿಂದ ತುಂಬಿಹೋಗಿತ್ತು. ಕೋಟೆಯೊಳಗೆ ತೆರಳಲು ಒಂದೆರಡು ಕಡೆ ಒಬ್ಬರು ನಡೆದುಹೋಗುವಷ್ಟು ಅಗಲದ ಕಾಲುದಾರಿಗಳಿದ್ದವು. ಈ ಕಾಲುದಾರಿಗಳನ್ನು ದನಗಳು ಮತ್ತು ಅವುಗಳನ್ನು ಹುಡುಕಲು ಹಳ್ಳಿಯ ಹುಡುಗರು ಬಳಸುತ್ತಿದ್ದರು. ನಿರ್ಜನ ಪ್ರದೇಶದ ಅವಶ್ಯಕತೆಯಿರುವ ಪ್ರೇಮಿಗಳು, ಅನೈತಿಕ ಚಟುವಟಿಕೆ ನಡೆಸುವವರು ಮುಂತಾದವರ 'ಅಡ್ಡಾ' ಕೂಡಾ ಆಗಿತ್ತು ಮಿರ್ಜಾನ ಕೋಟೆ. ಕೋಟೆಯೊಳಗೆ ಎಲ್ಲೆಲ್ಲೂ ಪೊದೆಗಳು, ಕುರುಚಲು ಗಿಡಗಳು ಮತ್ತು ಸಾರಾಯಿ ಬಾಟ್ಲಿಗಳ ಒಡೆದ ಚೂರುಗಳು.

ಕೋಟೆಯೊಳಗಿನ ಕಾಲುದಾರಿಗಳು ಪೊದೆಗಳ ನಡುವೆ ಅಲ್ಲಲ್ಲಿ ನುಸುಳುತ್ತಿದ್ದರಿಂದ ಕೋಟೆ ಬಹಳ ದೊಡ್ಡದಿದೆ ಎಂಬ ಭಾವನೆಯನ್ನು ಹುಟ್ಟುಹಾಕುತ್ತಿದ್ದವು. ಈಗ ಅಬ್ಬಬ್ಬಾ ಎಂದರೆ ೧೦ ನಿಮಿಷಗಳಲ್ಲಿ ಕೋಟೆಯ ಒಳಗಡೆ ಗೋಡೆಯ ಸುತ್ತಲೂ ಒಂದು ಸುತ್ತು ಹಾಕಿ ಮುಗಿಸಬಹುದು. ಆದರೆ ಆಗ ಪೊದೆ, ವೃಕ್ಷಗಳಿಂದ ತುಂಬಿದ್ದ ಕೋಟೆಯ ಒಳಾಂಗಣ ಸಣ್ಣ ರಕ್ಷಿತಾರಣ್ಯದಂತೆ ತೋರುತ್ತಿತ್ತು. 'ಕೋಟೆಗೆ ಹೋಗ್ತೀರಾ... ಹುಷಾರು' ಎಂದು ಹಿರಿಯರು ಎಚ್ಚರಿಸದೇ ಇರುತ್ತಿರಲಿಲ್ಲ. ಹಾವುಗಳು ಸ್ವೇಚ್ಛೆಯಿಂದ ಹರಿದಾಡುವ ತಾಣವಾಗಿತ್ತು. ಆದರೂ ನಮಗೆ ಕೋಟೆಯಲ್ಲಿ ಅದೇನೋ ಆಕರ್ಷಣೆ. ಕೋಟೆಯ ಶಿಥಿಲ ಬುರುಜುಗಳನ್ನು ಹತ್ತಿ, ಅನತಿ ದೂರದಲ್ಲಿ ಹರಿಯುವ ಅಘನಾಶಿನಿಯ ಸುಂದರ ದೃಶ್ಯವನ್ನು ಆನಂದಿಸಲು ಮನಸ್ಸು ಯಾವಾಗಲೂ ಹಾತೊರೆಯುತ್ತಿತ್ತು.


ಕೋಟೆಯೊಳಗಿರುವ ದೊಡ್ಡ ಬಾವಿ ಆಗಲೂ ಆಕರ್ಷಕವಾಗಿತ್ತು. ಈ ಬಾವಿ ಎಷ್ಟು ಬಲಿಗಳನ್ನು ಪಡೆದಿದೆಯೋ ಅದಕ್ಕೆ ಗೊತ್ತು. ಕೋಟೆಯೊಳಗೆ ತೆರಳಬೇಡಿ, ದೆವ್ವ, ಭೂತ... ಅತೃಪ್ತ ಆತ್ಮಗಳು ಅಲೆದಾಡುತ್ತಿರುತ್ತವೆ ಎಂದು ನಮ್ಮನ್ನು ಮಿರ್ಜಾನದ ಸಂಬಂಧಿಕರು ಹೆದರಿಸುತ್ತಿದ್ದರು. ಈ ಬಾವಿಯಲ್ಲಿ ಪ್ರಾಣ ಕಳಕೊಂಡವರಲ್ಲಿ ಹೆಣ್ಣು ಮಕ್ಕಳದ್ದೇ ಮೇಲುಗೈ. ಮಿರ್ಜಾನದಲ್ಲಿ ಆತ್ಮಹತ್ಯೆ ಮಾಡಲು ಎಲ್ಲರಿಗೆ ಸಿಗುತ್ತಿದ್ದ ಬಾವಿ ಇದೇ. ಕೋಟೆಯೊಳಗೆ ಬಂದು ಬಾವಿಯೊಳಗೆ ಹಾರಿಬಿಟ್ಟರೆ ಬದುಕುವ ಚಾನ್ಸೇ ಇಲ್ಲ. ಯುವತಿಯರ ಮಾನಭಂಗ ಮಾಡಿ ಕೊಲೆಗೈದು, ಶವವನ್ನು ಈ ಬಾವಿಯೊಳಗೆ ಬಿಸಾಡಿದ ಘಟನೆಗಳೂ ನಡೆದಿವೆ. ಆಗೆಲ್ಲಾ ಕೋಟೆಯೊಳಗೆ ಕಾಲಿಟ್ಟರೆ ಕ್ಷಣಾರ್ಧದಲ್ಲಿ ಕಣ್ಮರೆಯಾಗಿಬಿಡಬಹುದಾಗಿದ್ದ ಪೊದೆಗಳು, ವೃಕ್ಷಗಳು ಇತ್ಯಾದಿಗಳನ್ನೊಳಗೊಂಡ ದಟ್ಟ ಕಾಡಿನ ರಚನೆಯಿತ್ತು. ಆದ್ದರಿಂದ ಆ ಕಡೆ ಹೆಚ್ಚಿನವರು ಸುಳಿಯುತ್ತಿರಲಿಲ್ಲ. ತೀರಾ ಇತ್ತೀಚೆಗೆ ಅಂದರೆ ೨೦೦೫ರಲ್ಲಿ ಹೊನ್ನಾವರದ ಹುಡುಗಿಯೊಬ್ಬಳ ಶವ ಈ ಬಾವಿಯಲ್ಲಿ ತೇಲುತ್ತಿತ್ತು.


೧೯೮೭ರ ಬೇಸಗೆ ರಜೆಯಲ್ಲಿ ಕುಮಟಾದಲ್ಲಿ ಅರುಣಾಚಲನ ಮನೆಗೆ ಬಂದ ನಾವು ಎಂದಿನಂತೆ ಮಿರ್ಜಾನದ ಸಂಬಂಧಿಕರ ಮನೆಗೆ ತೆರಳಿದೆವು. ಆದರೆ ಕೋಟೆಯೊಳಗೆ ಅನೈತಿಕ ಚಟುವಟಿಕೆಗಳು ಮತ್ತು ಕೊಲೆಗಳು ಸ್ವಲ್ಪ ಹೆಚ್ಚೇ ಆಗುತ್ತಿದ್ದರಿಂದ ಮಿರ್ಜಾನದ ಸಂಬಂಧಿಕರು ನಮ್ಮನ್ನು (ನಾನು, ನನ್ನ ತಮ್ಮ ರೋಶನ್ ಮತ್ತು ಸಂಬಂಧಿ ಅರುಣಾಚಲ) ಕೋಟೆಯೆಡೆ ತೆರಳಲು ಬಿಡುತ್ತಿರಲಿಲ್ಲ. ಕೋಟೆಯ ಸಮೀಪದಲ್ಲೇ ಹಳ್ಳವೊಂದು (ಮೇಲಿನ ಚಿತ್ರ) ಹರಿಯುತ್ತದೆ. ಅಲ್ಲಿ ಸ್ನಾನಕ್ಕೆ ಯಾವಾಗಲೂ ಹೋಗುತ್ತಿದ್ದೆವು. ಹಳ್ಳದಲ್ಲಿ ಅಂಗಾತ ಮಲಗಿ ಕೋಟೆಯ ಗೋಡೆಗಳ ಸೌಂದರ್ಯವನ್ನು ವೀಕ್ಷಿಸುತ್ತಾ ಬಹಳ ಆನಂದ ಪಡುತ್ತಿದ್ದೆವು. ಅಂದು ಹಳ್ಳದಲ್ಲಿ ಸ್ನಾನ ಮಾಡುತ್ತಿರುವಾಗ ನಮ್ಮ ಸ್ವಲ್ಪ ಪರಿಚಯವಿದ್ದ ಅಲ್ಲಿನ ಹುಡುಗನೊಬ್ಬ, ಕೋಟೆಯೊಳಗೆ ತೆರಳಲು ಕಳ್ಳ ದಾರಿಯನ್ನು ಕಂಡುಹುಡುಕಿರುವೆನೆಂದು ಹೇಳಿದಾಗ ನೋಡೇ ಬಿಡೋಣವೆಂದು ಹೊರಟೆವು.

ನಾವೆಂದೂ ಭೇಟಿ ನೀಡದ ಕೋಟೆಯ ಯಾವುದೋ ಪಾರ್ಶ್ವದಲ್ಲಿ ಕಂದಕದಲ್ಲಿ ಹುಲುಸಾಗಿ ಬೆಳೆದಿದ್ದ ಗಿಡಗಂಟಿಗಳ ನಡುವೆ ದಾರಿಮಾಡಿಕೊಂಡು ಮುನ್ನಡೆದ ಆತನನ್ನು ಹಿಂಬಾಲಿಸಿದೆವು. ಸ್ವಲ್ಪ ಮುಂದೆ ಕೋಟೆಯ ಹೊರಗೋಡೆಯಲ್ಲಿ ಒಂದು ಸಣ್ಣ ಕಿಂಡಿ. ಕೂತುಕೊಂಡು, ಕುಕ್ಕರಗಾಲಲ್ಲಿ ಒಬ್ಬ ಪ್ರವೇಶಿಸಬಹುದಾದಷ್ಟು ದೊಡ್ಡದಿದ್ದ ಈ ಕಿಂಡಿಯೊಳಗೆ ನಿಧಾನವಾಗಿ ಪ್ರವೇಶಿಸಿದೆವು. ಬಾವಲಿಗಳಿಂದ ತುಂಬಿದ್ದ ಮಂದ ಬೆಳಕಿನ ಸುರಂಗದಂತೆ ಇದ್ದ ದಾರಿ. ಒಳ ಹೊಕ್ಕ ಕೂಡಲೇ ಬಲಕ್ಕೆ ಮೇಲೆ ತೆರಳಲು ಮೆಟ್ಟಿಲುಗಳು. ಮುಂದೆ ನೇರಕ್ಕೆ ಎರಡೇ ಹೆಜ್ಜೆ ಇಟ್ಟರೆ ಬಾವಿ! ೩ನೇ ಹೆಜ್ಜೆ ಇಟ್ಟರೆ ಸೀದಾ ಬಾವಿಯೊಳಗೆ ಬೀಳುವಂತಿತ್ತು ಅಲ್ಲಿನ ದಾರಿ. ಬಾವಿಯ ಮಧ್ಯಕ್ಕೆ ನಾವು ಬಂದಿದ್ದೆವು. ಬಾವಿಯಲ್ಲಿ ನೀರಿನ ಮಟ್ಟವನ್ನು ಈ ಮಟ್ಟಕ್ಕೆ ಕಾಯ್ದಿರಿಸಲು ಈ ಕಿಂಡಿಯನ್ನು ನಿರ್ಮಿಸಿರಬೇಕು. ಹೆಚ್ಚುವರಿ ನೀರು ಈ ಕಿಂಡಿಯಿಂದ ಹೊರಹರಿದು ಕಂದಕಕ್ಕೆ ಸೇರಿಕೊಳ್ಳುತ್ತಿತ್ತು. ಮೆಟ್ಟಿಲುಗಳನ್ನೇರಿ ಮೇಲಕ್ಕೆ ಬಂದು ಬಾವಿಯೊಳಗೆ ಇಣುಕಿ ನೋಡಿದೆವು. ಆದರೆ ಬಾವಿಯ ಗೋಡೆಯಲ್ಲಿ ದಟ್ಟವಾಗಿ ಬೆಳೆದಿದ್ದ ಪೊದೆಗಳಿಂದ ಆ ಕಿಂಡಿ ಕಾಣಿಸುತ್ತಿರಲಿಲ್ಲ.

ನಾವು ಕೋಟೆಯೊಳಗೆ ತೆರಳಿದ ವಿಷಯ ನಂತರ ಮನೆಯಲ್ಲಿ ತಿಳಿದು ನಮಗಷ್ಟು ಬೈಗುಳ. ಅದಾದ ನಂತರ ಆ ಸಂಬಂಧಿಕರ ಮನೆಗೇ ಹೋಗಬಾರದೆಂದು ನಾವು ತೀರ್ಮಾನಿಸಿದ್ದೆವು. ಆದರೆ ಕೋಟೆಗೆ ಮತ್ತೆ ಮತ್ತೆ ತೆರಳುವ ತವಕ. ಮುಂದಿನ ವರ್ಷದಿಂದ ಕೋಟೆಗೆ ನಾವು ಕುಮಟಾದಿಂದ ಬೆಳಗ್ಗೆ ತೆರಳಿ ಸಂಜೆ ಹೊತ್ತಿಗೆ ಹಿಂತಿರುಗಿ ಬರತೊಡಗಿದೆವು. ಮಿರ್ಜಾನಕ್ಕೆ ಬೇಕಾದಷ್ಟು ಬಸ್ಸುಗಳಿದ್ದರೂ, ನಾವು ದೋಣಿಯಲ್ಲಿ ಅಘನಾಶಿನಿಯನ್ನು ದಾಟಿ ಆ ಕಡೆ ಮಿರ್ಜಾನ ತಲುಪಿ ಅರ್ಧ ಗಂಟೆ ನಡೆದರೆ ಕೋಟೆ.


ಈಗ:

೧೨ ವರ್ಷಗಳ ನಂತರ ತೆರಳಿದಾಗ ನಂಬಲಿಕ್ಕೆ ಅಸಾಧ್ಯವಾದಷ್ಟು ಮಟ್ಟಿಗೆ ಮಿರ್ಜಾನ ಕೋಟೆ ಬದಲಾಗಿತ್ತು. ಕಂದಕ ಸ್ವಚ್ಛ. ಕೋಟೆಯೂ ಸ್ವಚ್ಛ. ಆಗ ನಾವು ಕಿಂಡಿಯಿಂದ ಒಳಗೆ ನುಗ್ಗಿದ ಬಾವಿಯ ಕುರುಹೇ ಇಲ್ಲ. ಈಗಿರುವ ೩ ಬಾವಿಗಳನ್ನು ಸ್ವಚ್ಛಗೊಳಿಸಲಾಗಿದೆ. ಬಿದ್ದುಹೋಗಿದ್ದ ಕೋಟೆಯ ಗೋಡೆಗಳನ್ನು ಪುನ: ನಿರ್ಮಿಸಲಾಗಿದೆ. ಬುರುಜುಗಳು ಹಾಗೇ ಇದ್ದವು. ಅಘನಾಶಿನಿ ಅನತಿ ದೂರದಲ್ಲಿ ಮೊದಲಿನಂತೇ ಸುಂದರ ದೃಶ್ಯವನ್ನು ಕಣ್ಣಿಗೆ ನೀಡುತ್ತಾ ಹರಿಯುತ್ತಿದ್ದಾಳೆ. ಕೋಟೆಯ ಒಳಗೆ ಈಗ ಒಂದೇ ಮರವಿದೆ. ಉಳಿದೆಲ್ಲವನ್ನು ತೆಗೆದು ಸ್ವಚ್ಛಗೊಳಿಸಲಾಗಿದೆ. ಮೊದಲು ಬುರುಜನ್ನು ಏರಿದರೆ ಮಾತ್ರ ಕಾಣಿಸುತ್ತಿದ್ದ ಅಘನಾಶಿನಿ ಈಗ ಕೋಟೆಯೊಳಗಿನಿಂದಲೇ ಗೋಚರಿಸುತ್ತಾಳೆ. ಪುರಾತತ್ವ ಇಲಾಖೆ ಈಗ ಉತ್ಖನನ ನಡೆಸಿದ್ದು, ಸಿಕ್ಕಿರುವ ಕೆಲವು ದೇವರ ವಿಗ್ರಹಗಳನ್ನು ಕೋಟೆಯೊಳಗಿರುವ ಮರದಡಿ ಇರಿಸಲಾಗಿದೆ. ದರ್ಬಾರ್-ಹಾಲ್-ನ ನೆಲಗಟ್ಟು ಅದರ ಸಂಪೂರ್ಣ ರಚನೆಯನ್ನು ಕಣ್ಣ ಮುಂದಿಡುತ್ತದೆ. ಆಂಗ್ಲ ಅಕ್ಷರ ಮಾಲಿಕೆಯ 'ಯು' ಆಕಾರದಲ್ಲಿರುವ ದರ್ಬಾರ್ ಹಾಲ್, ಇಕ್ಕೆಲಗಳಲ್ಲಿ ಆಸನಗಳ ರಚನೆಯನ್ನು ಹೊಂದಿದ್ದು, ನಡುವಿನಲ್ಲಿ ದರ್ಬಾರ್ ನಡೆಸುವವರು ಕುಳಿತುಕೊಳ್ಳಲು ಯೋಗ್ಯ ಎತ್ತರದ ಮುಂಗಟ್ಟು ಇರುವ ರಚನೆ ಹೊಂದಿದೆ.

ಸ್ನಾನದ ಮನೆಯ ನೆಲವನ್ನು ನೀರು ಹರಿಯಲು ಸುಲಭವಾಗುವಂತೆ ಇಳಿಜಾರಾಗಿ ಮಾಡಲಾಗಿರುವುದು ಗಮನಿಸಬೇಕಾದ್ದು. ಸ್ನಾನದ ಮನೆಯಿಂದ ನೀರು ಹರಿದುಹೋಗಲು ಮಾಡಿರುವ ವ್ಯವಸ್ಥೆಯೂ ಸುಂದರವಾಗಿದೆ. ಅಲ್ಲೊಂದು ನೆಲಮಾಳಿಗೆಯಿತ್ತು. ಒಂದೆರಡು ಹೊಂಡಗಳಿದ್ದವು. ಇರುವ ೩ ಬಾವಿಗಳಲ್ಲಿ ೨ ದೊಡ್ಡದಿದ್ದರೆ ಒಂದು ಸಣ್ಣದಿದೆ. ಬಾವಿಗಳ ರಚನೆ ಮೆಚ್ಚಲೇಬೇಕು. ಇರುವ ಒಂದು ಗೋಪುರದಲ್ಲಿ ಧ್ವಜಸ್ತಂಭವನ್ನು ನಿರ್ಮಿಸಿ ಮಿರ್ಜಾನ ಗ್ರಾಮ ಪಂಚಾಯತ್ ಧ್ವಜ ಗೋಪುರವನ್ನಾಗಿ ಪರಿವರ್ತಿಸಿಕೊಂಡಿದೆ.


ಪುರಾತತ್ವ ಇಲಾಖೆಯ ಅಂತರ್ಜಾಲ ತಾಣದಿಂದ ತಿಳಿದುಬಂದದ್ದು:

ಮಿರ್ಜಾನ ಕೋಟೆಯನ್ನು ಇಸವಿ ೧೬೦೮ - ೧೬೪೦ ರ ನಡುವೆ ನಿರ್ಮಿಸಲಾಗಿದೆ. ಇಸವಿ ೨೦೦೦ದಿಂದ ಇಲ್ಲಿ ಉತ್ಖನನವನ್ನು ಆರಂಭಿಸಲಾಗಿದೆ. ದರ್ಬಾರ್ ಹಾಲ್ ಕೋಟೆಯ ನಡುವೆ ಕಂಡುಬಂತು. ದರ್ಬಾರ್ ಹಾಲ್-ನ ಪಕ್ಕದಲ್ಲೇ ವೃತ್ತಾಕಾರದ ನೀರು ಶೇಖರಿಸುವ ಹೊಂಡವೊಂದು ಕಂಡುಬಂದಿದೆ. ಇದರ ಬಳಿಯಲ್ಲೇ ಇನ್ನೊಂದು ನೀರು ಶೇಖರಿಸುವ ಹೊಂಡ ಸಿಕ್ಕಿದ್ದು ಮತ್ತು ಇಲ್ಲಿಂದ ನೀರನ್ನು ಸಾಗಿಸಲು ಮಾಡಿರುವ ಸಣ್ಣ ಸಣ್ಣ ಮೋರಿಗಳ ರಚನೆಯೂ ಸಿಕ್ಕಿದೆ. ಪೋರ್ಚುಗೀಸ್ ವೈಸ್-ರಾಯ್ ೧೬೫೨ರಲ್ಲಿ ಬಿಡುಗಡೆ ಮಾಡಿರುವ ಚಿನ್ನದ ನಾಣ್ಯವೊಂದು ಇಲ್ಲಿ ದೊರಕಿದೆ. ಉತ್ಖನನ ಮಾಡುವಾಗ ದೊರಕಿರುವ ಉಳಿದ ವಸ್ತುಗಳೆಂದರೆ ತುಪಾಕಿಗೆ ಬಳಸುವ ಸಿಡಿಗುಂಡು, ಚೈನಾ ಶೈಲಿಯ ಪಾತ್ರೆಗಳು ಮತ್ತು ಮುಸ್ಲಿಮ್ ಬರಹಗಳು.

ಮಂಗಳವಾರ, ಮೇ 20, 2008

ಉದ್ರಿಯ ದೇವಾಲಯಗಳು ಮತ್ತು ತಾಳಗುಂದದ ಪ್ರಾಣೇಶ್ವರ


ಉದ್ರಿಯಲ್ಲಿ ಹೊಯ್ಸಳರು ನಿರ್ಮಿಸಿರುವ ೩ ಹಳೇ ದೇವಾಲಯಗಳಿವೆ - ಈಶ್ವರ ದೇವಾಲಯ, ನಾರಾಯಣ ದೇವಾಲಯ (ಮೇಲಿನ ಚಿತ್ರ) ಮತ್ತು ಲಕ್ಷ್ಮೀನಾರಾಯಣ ದೇವಾಲಯ.


ಈಶ್ವರ ದೇವಾಲಯ ಊರಿನ ನಡುವಲ್ಲೇ ಇದೆ. ಸಣ್ಣ ದಿಬ್ಬವೊಂದರ ಮೇಲಿರುವ ಈ ದೇವಾಲಯ ಶಿಥಿಲಗೊಳ್ಳುತ್ತಿದೆ. ಗರ್ಭಗೃಹ ಮತ್ತು ಸುಖನಾಸಿ ಮಾತ್ರ ಇದ್ದು, ನವರಂಗ ಸಂಪೂರ್ಣವಾಗಿ ಬಿದ್ದುಹೋಗಿದೆ.

ಊರಿನ ಕೊನೆಯಲ್ಲಿ ನಾರಾಯಣ ದೇವಾಲಯವಿದೆ. ವಿಶಾಲ ಪ್ರಾಂಗಣ ಹೊಂದಿರುವ ದೇವಾಲಯದ ಮುಂದೆ ದೊಡ್ಡ ಉದ್ದನೆಯ ಶಿಲಾಶಾಸನವೊಂದಿದೆ. ದೇವಾಲಯದ ಬದಿಯಲ್ಲಿ, ಶಿಲಾಬಾಲಿಕೆಯರ ಹಾನಿಗೊಳಗಾದ ಮೂರ್ತಿಗಳನ್ನು ಇರಿಸಲಾಗಿದೆ.


ದೇವಾಲಯದ ಗೋಪುರ ಸಣ್ಣದಾದರೂ ಸುಂದರವಾಗಿದೆ. ನವರಂಗದಲ್ಲಿ ಶಿಲಾಬಾಲಿಕೆಯೊಬ್ಬಳ ಸುಂದರ ಮೂರ್ತಿಯನ್ನಿರಿಸಲಾಗಿದೆ.


ತಾಳಗುಂದದಿಂದ ಒಂದು ಕಿಮಿ ಚಲಿಸಿದರೆ ಕೆರೆಯೊಂದರ ತಟದಲ್ಲಿ ಸಣ್ಣದೊಂದು ದೇವಾಲಯ. ಇದೇ ತಾಳಗುಂದ ಪ್ರಾಣೇಶ್ವರ ದೇವಾಲಯ. ಗರ್ಭಗೃಹ ಮತ್ತು ಸುಖನಾಸಿ ಬಿಟ್ಟರೆ ಬೇರೇನೂ ಇಲ್ಲ. ದೇವಾಲಯದ ಮುಂದೆ ಒಂದು ಧ್ವಜಸ್ತಂಭ ಇದೆ. ಇದನ್ನು ಹೊಸದಾಗಿ ನಿರ್ಮಿಸಿರುವಂತೆ ತೋರುತ್ತದೆ. ಎಲ್ಲಿಂದಲೋ ತಂದು ೨ ನಂದಿಗಳನ್ನು ದೇವಲಯದ ಮುಂದೆ ಇರಿಸಲಾಗಿದೆ ಅಥವಾ ಸಮೀಪದಲ್ಲೆಲ್ಲೋ ಉತ್ಖನನ ಮಾಡುವಾಗ ಸಿಕ್ಕಿದ್ದೂ ಇರಬಹುದು. ಕೆರೆಯ ತಟದಲ್ಲಿರುವುದರಿಂದ ಈ ಜಾಗಕ್ಕೆ ಹೆಚ್ಚಿನ ಸೌಂದರ್ಯ.


ಶಿವಲಿಂಗ ಮಾತ್ರ ಸುಮಾರು ೩ ಅಡಿ ಎತ್ತರವಿದೆ. ಪೀಠವನ್ನು ಹೊಸದಾಗಿ ನಿರ್ಮಿಸಲಾಗಿದ್ದು, ಅದರ ಮೇಲೆ ಹಳೇ ಕಾಲದ ಮೂಲ ಶಿವಲಿಂಗವನ್ನು ಏರಿಸಲಾಗಿದೆ. ಪೀಠವೇ ಸುಮಾರು ೩.೫ ಅಡಿ ಎತ್ತರವಿದೆ. ದೇವಾಲಯ ಹೊಯ್ಸಳ ಕಾಲಕ್ಕೆ ಸೇರಿದ್ದಿರಬಹುದು. ದೇವಾಲಯದ ಪ್ರಾಂಗಣ ವಿಶ್ರಾಂತಿ ಪಡೆಯಲು ಸೂಕ್ತ ಸ್ಥಳ.

ಮಾಹಿತಿ: ಬಿ.ಪಿ.ಪ್ರೇಮಕುಮಾರ್

ಶನಿವಾರ, ಮೇ 10, 2008

ವೆಂಕಟಗಿರಿಯ ತುದಿಗೆ...


ಮಾರ್ಚ್ ೨೦೦೮ರ ಮಂಗಳೂರು ಯೂತ್ ಹಾಸ್ಟೆಲ್ ಚಾರಣ ಶಿರಾಡಿ ಶ್ರೇಣಿಯಲ್ಲಿರುವ ವೆಂಕಟಗಿರಿ ಬೆಟ್ಟಕ್ಕೆ. ದಿನೇಶ್ ಹೊಳ್ಳರ ನೇತೃತ್ವದಲ್ಲಿ ಬೆಟ್ಟದ ತಪ್ಪಲಲ್ಲಿರುವ ಹಳ್ಳಿ ತಲುಪಿ ಅಲ್ಲಿನ ನಿವಾಸಿ ರಾಜಣ್ಣರ ಮಾರ್ಗದರ್ಶನದಲ್ಲಿ ಚಾರಣ ಆರಂಭಿಸಿದಾಗ ಸಮಯ ೧೧ ಆಗಿತ್ತು. ಹಳ್ಳಿಯ ಪರಿಧಿ ದಾಟಿದ ಕೂಡಲೇ ಪ್ರಕೃತಿಯ ಸಿರಿ ಕಣ್ಣ ಮುಂದೆ ಬಿಚ್ಚಿಕೊಳ್ಳುತ್ತದೆ.

ಸಕಲೇಶಪುರ - ಮಂಗಳೂರು ರೈಲು ಮಾರ್ಗವನ್ನು ನಿರ್ಮಿಸುವ ಸಮಯದಲ್ಲಿ ಕಾಡಿನ ನಡುವೆ ಮಾಡಿದ್ದ ರಸ್ತೆಯಲ್ಲಿ ೪೫ ನಿಮಿಷ ಕ್ರಮಿಸಿದ ಬಳಿಕ ರೈಲು ಹಳಿಯನ್ನು ತಲುಪಿದೆವು. ಸುರಂಗವೊಂದರಿಂದ ಹೊರಬಂದ ರೈಲು ಹಳಿ ಕೂಡಲೇ ಸೇತುವೆಯೊಂದರ ಮೂಲಕ ಹಾದುಹೋಗುವ ಸ್ಥಳ. ಸ್ವಲ್ಪ ಹೊತ್ತಿನ ಬಳಿಕ ಗೂಡ್ಸ್ ರೈಲೊಂದು ಹಾದುಹೋಯಿತು. ಸುರಂಗದ ಬಳಿಯೇ ಎಡಕ್ಕಿರುವ ರಸ್ತೆಯಲ್ಲಿ ೧೫ ನಿಮಿಷ ನಡೆದ ಬಳಿಕ ವೆಂಕಟಗಿರಿಯನ್ನೇರಲು ಆರಂಭಿಸಿದೆವು. ನಂತರ ಮುಂದಿನ ೧೦೦ ನಿಮಿಷಗಳ ಕಾಲ ಬೆಟ್ಟ ಏರಿದ್ದೇ. ಆರಂಭದ ೨೦ ನಿಮಿಷಗಳಷ್ಟು ಸಮಯ ಕಾಡಿನ ನೆರಳಿತ್ತು. ನಂತರ ಬಿಸಿಲಿನಲ್ಲೇ ಚಾರಣ. ಆದರೆ ಮಳೆ ಬೀಳುವ ವಾತಾವರಣವಿದ್ದಿದ್ದರಿಂದ ತಂಪಾದ ಗಾಳಿ ಬೀಸುತ್ತಿತ್ತು.


ಸ್ವಲ್ಪ ಮೇಲಕ್ಕೇರಿದ ಬಳಿಕ ಎಡ ಪಾರ್ಶ್ವದಲ್ಲಿ ಮುಗಿಲಗಿರಿ ಪರ್ವತದ ಅದ್ಭುತ ನೋಟ. ಮುಗಿಲೆತ್ತರಕ್ಕೆ ಎದ್ದು ನಿಂತಿರುವ ಅಭೇದ್ಯ ಗೋಡೆಯಂತೆ ಕಾಣುವುದರಿಂದ ಮುಗಿಲಗಿರಿ ಎಂಬ ಹೆಸರು. ಮುಗಿಲಗಿರಿಯ ಎದುರುಗೆ ಯಾವಾಗಲು ಮೇಘಗಳ ಸಾಲೊಂದು ಮುಂದಕ್ಕೆ ಹೋಗಲಾಗದೆ ಎತ್ತ ಹೋಗುವುದೆಂದು ತೋಚದೆ ನಿಲ್ಲುವ ದೃಶ್ಯ ಸಾಮಾನ್ಯ. ಎಲ್ಲಾ ಬೆಟ್ಟಗಳು ಸ್ವಲ್ಪವಾದರೂ ಇಳಿಜಾರಾದ ಮೇಲ್ಮೈಯನ್ನು ಹೊಂದಿರುವುದರಿಂದ ಮೋಡಗಳು ನಿಧಾನವಾಗಿಯಾದರೂ ಸರಿ ಬೆಟ್ಟಗಳ ಮೇಲ್ಮೈಯನ್ನು ಸವರಿ ದಾಟಿ ಹೋಗುತ್ತವೆ. ಆದರೆ ಮುಗಿಲಗಿರಿಯ ಮೇಲ್ಮೈ ಇಳಿಜಾರಾಗಿರದೆ ನೇರವಾಗಿದೆ. ಹಾಗಾಗಿ ಇಲ್ಲಿ ಮೋಡಗಳ ಸಾಲೊಂದು ಅಡ್ಡಕ್ಕೆ ನಿಂತಿರುವ ದೃಶ್ಯ ಪ್ರಕೃತಿ ಪ್ರಿಯರಿಗೆ ಯಾವಾಗಲೂ ಲಭ್ಯ.


ವೆಂಕಟಗಿರಿಯನ್ನು ಏರುತ್ತಾ ಹೋದಂತೆ ಕೆಳಗಡೆ ಒಂದು ಬದಿಯಲ್ಲಿ ಶಿರಾಡಿ ಘಟ್ಟದ ರಸ್ತೆ ಹಾಗೂ ಕೆಂಪು ಹೊಳೆಯ ಹರಿವಿನ ಪಾತ್ರ ಮತ್ತು ಇನ್ನೊಂದು ಬದಿಯಲ್ಲಿ ದಟ್ಟ ಕಾಡಿನ ನಡುವೆ ಅಲ್ಲಲ್ಲಿ ದರ್ಶನ ನೀಡುವ ರೈಲು ಹಳಿ. ದೂರದಲ್ಲಿ ಅಮೇದಿಕಲ್ಲು ಮತ್ತು ಎತ್ತಿನಭುಜ ಶಿಖರಗಳ ನೋಟ. ಕೆಳಗಡೆ ದೂರದವರೆಗೂ ಕೆಂಪುಹೊಳೆಯ ಹರಿವು ಕಾಣಿಸುತ್ತಿತ್ತು. ಈ ಎಲ್ಲಾ ದೃಶ್ಯಗಳನ್ನು ಆಸ್ವಾದಿಸುತ್ತಾ ವೆಂಕಟಗಿರಿ ಶಿಖರದ ಸನಿಹಕ್ಕೆ ಬಂದಿದ್ದೆವು. ಇನ್ನೇನು ಶಿಖರ ತುದಿ ಸಮೀಪದಲ್ಲೇ ಇದೆ ಎಂದೆನಿಸುತ್ತಿದ್ದರೂ, ಆದಷ್ಟು ದೂರವಿದ್ದಂತೆ ಮಾಡುತ್ತಿತ್ತು ಈ ಕೊನೆಯ ಏರುಹಾದಿ. ಅಲ್ಲಿವರೆಗೂ ನಿರಾಯಾಸವಾಗಿ ಬಂದಿದ್ದ ನಮಗೆ ಈ ಕೊನೆಯ ಏರುಹಾದಿ ಬಹಳ ಬೆವರನ್ನಿಳಿಸಿತು.

ಕಾಡಿನ ದಾರಿಯಂಚಿನಲ್ಲಿ ಸಿಕ್ಕಿದ್ದ ನೆಲ್ಲಿಕಾಯಿ ಮರವನ್ನು ಸಂಪೂರ್ಣವಾಗಿ ಬೋಳಿಸಿದ್ದರು ನಮ್ಮವರು. ಈ ನೆಲ್ಲಿಕಾಯಿಗಳು ಈ ಕೊನೆಯ ಏರುಹಾದಿಯಲ್ಲಿ ನನಗಂತೂ ಬಹಳ ಪ್ರಯೋಜನಕಾರಿಯಾದವು. ನೆಲ್ಲಿಯನ್ನು ತಿನ್ನುತ್ತಾ, ನೀರು ಕುಡಿದು ಸವಿಯನ್ನು ಅನುಭವಿಸುತ್ತಾ, ಫ್ರೆಶ್ ಆಗುತ್ತಾ ನಿಧಾನವಾಗಿ ಶಿಖರದ ತುದಿಯನ್ನು ಸಮೀಪಿಸತೊಡಗಿದೆ. ಕಾಡಿನ ಅಂಚನ್ನು ದಾಟಿದ ಸಮಯದಿಂದಲೇ ಸುಂದರವಾಗಿ ಕಾಣುತ್ತಿದ್ದ ವೆಂಕಟಗಿರಿಯ ತುದಿಯನ್ನು ತಲುಪಿದಾಗ ಸಮಯ ೧.೩೦ ಆಗಿತ್ತು.


ವೆಂಕಟಗಿರಿಯ ತುದಿಯಲ್ಲಿ ವಿಶಾಲ ಜಾಗವಿದೆ. ಅಗಲ ಕಡಿಮೆಯಾದರೂ ಉದ್ದಕ್ಕೆ ಬಹಳಷ್ಟು ಮುಂದಿನವರೆಗೆ ಸ್ಥಳವಿದೆ. ಈಗ ನಾವು ತಲುಪಿದ್ದು ಶಿಖರದ ಒಂದು ತುದಿಗೆ. ಮತ್ತೊಂದು ತುದಿಯಿಂದ ಕಾಣುವ ದೃಶ್ಯವನ್ನು ನೋಡೋಣವೆಂದು ಅತ್ತ ತೆರಳಿದೆ. ಕಣ್ಣಿಗೆ ಕಾಣುವಷ್ಟು ದೂರದಿಂದ ಕಣಿವೆಯ ನಡುವಿನಿಂದ ಬಳುಕುತ್ತಾ ಹರಿದು ಬರುವ ಕೆಂಪುಹೊಳೆಯ ದೃಶ್ಯ ವೈಭವ ಈ ಚಾರಣವನ್ನು ಸಾರ್ಥಕ ಮಾಡಿತ್ತು.

ಇದೇ ಚಾರಣದ ಇನ್ನೊಂದು ಲೇಖನವನ್ನು ಇಲ್ಲಿ ಓದಬಹುದು.

ಬುಧವಾರ, ಮೇ 07, 2008

ರಾಯಲ್ ಚಾಲೆಂಜರ್ಸ್ ಬೆಂಗಳೂರು...

ರಾಯಲ್ ಚಾಲೆಂಜರ್ಸ್, ಬೆಂಗಳೂರು. ೭ ಪಂದ್ಯಗಳಲ್ಲಿ ೫ನ್ನು ಸೋತ ಬಳಿಕ ಸಿ.ಇ.ಓ ಚಾರು ಶರ್ಮನನ್ನು ಮನೆಗೆ ಕಳಿಸಲಾಗಿದೆ. ಈ ಲೇಖನವನ್ನು ಬೆಂಗಳೂರು ತಂಡ ತನ್ನೆಲ್ಲಾ ಪಂದ್ಯಗಳನ್ನು ಆಡಿದ ಬಳಿಕ ಬರೆಯಬೇಕೆಂದಿದ್ದೆ. ಆದರೆ ಇದುವರೆಗೆ ಈ ತಂಡ ನೀಡಿದ ಹೀನಾಯ ಪ್ರದರ್ಶನದಿಂದ ಬೇಸತ್ತು ಈಗಲೇ ಗೀಚುತ್ತಿದ್ದೇನೆ.

ಅರುಣ್ ಕುಮಾರ್ ಹೇಗೆ ಆಡುತ್ತಾರೆ ನೋಡೋಣವೆಂದು ಬಹಳ ನಿರೀಕ್ಷೆಯೊಂದಿಗೆ ಕೊಲ್ಕತ್ತಾ ತಂಡದ ವಿರುದ್ಧದ ಮೊದಲ ಪಂದ್ಯ ನೋಡಲು ಕುಳಿತೆ. ಅರುಣ್ ತಂಡದಲ್ಲಿ ಇರಲೇ ಇಲ್ಲ! ಅರಂಭಿಕನಾಗಿ ಬಂದದ್ದು ವಾಸಿಮ್ ಜಾಫರ್!!!! ರಾಹುಲ್ ದ್ರಾವಿಡ್-ಗೆ ತಲೆ ಕೆಟ್ಟಿರಬೇಕೆಂದು ಊಹಿಸಿದೆ. ಅಂದು ಕೆಟ್ಟ ರಾಹುಲ್ ತಲೆ ಇದುವರೆಗೂ ಸರಿಯಾಗಿಲ್ಲ. ಅರುಣ್ ನಂತರದ ಯಾವ ಪಂದ್ಯದಲ್ಲೂ ಆಡಲಿಲ್ಲ. ಎಲ್ಲಾ ೭ ಪಂದ್ಯಗಳಲ್ಲೂ ಅರುಣ್ ಕುರ್ಚಿ ಬಿಸಿ ಮಾಡುತ್ತಾ ’ಡಗ್ ಔಟ್’ನಲ್ಲಿ ಕೂತಿದ್ದರು. ಅರುಣ್ ಹೊಡೆಬಡಿಯ ಆರಂಭಿಕ ಆಟಗಾರ. ೨೦-೨೦ ಇವರ ಆಟದ ಶೈಲಿಗೆ ಹೇಳಿ ಮಾಡಿಸಿದ್ದು. ಅರುಣ್ ಸಫಲರಾಗುತ್ತಾರೋ ಇಲ್ಲವೋ ಅರಿಯೆ ಆದರೆ ಒಂದೆರಡು ಅವಕಾಶವನ್ನಾದರೂ ಕೊಟ್ಟು ನೋಡಬಹುದಿತ್ತಲ್ವೇ...

ಇನ್ನು ವಾಸಿಮ್ ಜಾಫರ್. ಈತನನ್ನು ಬೆಂಗಳೂರು ತಂಡ ಖರೀದಿಸಿದಾಗ ನಾನು ಬಿದ್ದು ಬಿದ್ದು ನಕ್ಕಿದ್ದೆ. ಎಲ್ಲೋ ಕಟ್ಟುಪಾಡಿಗೆ ಬಿದ್ದು ಖರೀದಿಸಿರಬೇಕು (ಅನಿಲ್ ಕುಂಬ್ಳೆಯನ್ನು ಖರೀದಿಸಿದಂತೆ) ಎಂದು ತಿಳಿದುಕೊಂಡಿದ್ದೆ. ಆದರೆ ರಾಹುಲ್-ಗೆ ತಲೆ ಅಂದೇ ಕೆಟ್ಟಿತ್ತು ಅಂತ ಈಗ ತಿಳಿಯುತ್ತಿದೆ. ಎಲ್ಲಾ ಬಿಟ್ಟು ವಾಸಿಮ್ ಜಾಫರ್??!! ಈಗ ಬಂದಿರುವ ಸಿಹಿ ಸುದ್ದಿಯೆಂದರೆ ಜಾಫರ್ ಗಾಯಾಳಾಗಿ ಇನ್ನು ೩ ವಾರ ಆಡುವಂತಿಲ್ಲ.

ವಾಸಿಂ ಜಾಫರ್ ಮತ್ತು ಅನಿಲ್ ಕುಂಬ್ಳೆ ಮೇಲೆ ಖರೀದಿಯ ಸಮಯದಲ್ಲಿ ವ್ಯಯಿಸಿದ ಹಣ ವ್ಯರ್ಥ. ಸುನಿಲ್ ಜೋಶಿ ಆಡಿದ ಪಂದ್ಯಗಳಲ್ಲಿ (ದೆಹಲಿ ತಂಡದ ವಿರುದ್ಧದ ಪಂದ್ಯ ಬಿಟ್ಟು) ಚೆನ್ನಾಗಿ ಬೌಲಿಂಗ್ ಮಾಡಿದರೂ, ರಾಹುಲ್ ಅವರಿಗೆ ಎಲ್ಲಾ ೪ ಓವರ್ ಎಸೆಯಲು ಅವಕಾಶ ಒಂದು ಪಂದ್ಯದಲ್ಲೂ ನೀಡಲಿಲ್ಲ. ಉಳಿದೆಲ್ಲಾ ತಂಡಗಳು ಯುವ ಆಟಗಾರರಿಗೆ ಅವಕಾಶ ನೀಡುತ್ತಿರುವಾಗ, ಬೆಂಗಳೂರು ತಂಡ ಅಪ್ಪಣ್ಣನಿಗೆ ಅವಕಾಶ ನೀಡಲೇ ಇಲ್ಲ. ಆಡಿದ ೨ ಪಂದ್ಯಗಳಲ್ಲಿ ಭರವಸೆಯ ಆಟಗಾರ ಭರತ್ ಚಿಪ್ಲಿ ನಿರಾಸೆ ಮಾಡಿದರು. ಮಿಸ್ಬಾ ಉಲ್ ಹಕ್ ೩ ಪಂದ್ಯಗಳಿಗೆ ಲಭ್ಯವಿದ್ದರೂ ಅವರನ್ನು ಆಡಿಸಲೇ ಇಲ್ಲ! ಅವರ ಬದಲಿಗೆ ಆಸಕ್ತಿ ಇಲ್ಲದಂತೆ ಆಡುತ್ತಿದ್ದ ಕ್ಯಾಲ್ಲಿಸ್-ಗೆ ಮಣೆ. ಮಾರ್ಕ್ ಬೌಚರ್ ಮುಂಬೈ ವಿರುದ್ಧ ಪಂದ್ಯದಲ್ಲಿ ಆಡಿದ್ದು ಬಿಟ್ಟರೆ ನಂತರ ಸದ್ದೇ ಇಲ್ಲ.

ಬೌಲಿಂಗ್ ಪಡೆ ಚೆನ್ನಾಗಿದೆ. ಬ್ಯಾಟಿಂಗ್ ಪಡೆಯೂ ಚೆನ್ನಾಗಿದೆ. ಹಾಗಿದ್ದರೆ ಪ್ರಾಬ್ಲೆಮ್ ಎಲ್ಲಿ?

ಪ್ರಾಬ್ಲೆಮ್ ಇರುವುದು ಅಂತಿಮ ಹನ್ನೊಂದರ ಆಯ್ಕೆಯಲ್ಲಿ. ಜಾಫರ್-ರನ್ನು ಆಡಿಸಿದ್ದೇ ’ಜೋಕ್ ಆಫ್ ದಿ ಐಪಿಎಲ್’. ಕುಂಬ್ಳೆಯನ್ನು ಆಡಿಸಲೇಬಾರದು. ಕಟ್ಟುಪಾಡಿಗೆ ಬಿದ್ದು ಕುಂಬ್ಳೆಯನ್ನು ಆಡಿಸಿ ಹೈದರಾಬಾದ್ ವಿರುದ್ಧದ ಪಂದ್ಯ ಕೈಜಾರುತ್ತೇನೋ ಎಂಬಂತಾಗಿತ್ತು. ಇದೇ ಕುಂಬ್ಳೆ ಮೊಹಾಲಿ ತಂಡದ ವಿರುದ್ಧ ಕೆಟ್ಟದಾಗಿ ಬೌಲಿಂಗ್ ಮಾಡಿ ಗೆಲುವಿಗೆ ಇದ್ದ ಸಣ್ಣ ಅವಕಾಶವನ್ನೂ ತಂಡ ಕಳೆದುಕೊಂಡಿತು. ಕ್ಯಾಲ್ಲಿಸ್ ಆಡಿದ್ದು ಸಾಕೆನಿಸುತ್ತದೆ. ಮಿಸ್ಬಾ ಉಲ್ ಹಕ್ ಲಭ್ಯರಾದೊಡನೇ ಕ್ಯಾಲ್ಲಿಸ್ ಜಾಗದಲ್ಲಿ ಮಿಸ್ಬಾರನ್ನು ಆಡಿಸಬೇಕಿತ್ತು. ಬೌಚರ್ ಕೂಡ ಇನ್ನು ತಂಡದಿಂದ ಹೊರಗಿದ್ದರೇ ಚೆನ್ನ. ದೇವರಾಜ್ ಪಾಟೀಲ್ ಚೆನ್ನಾಗಿ ವಿಕೆಟ್ ಕೀಪ್ ಮಾಡುತ್ತಾರೆ ಮತ್ತು ಅಷ್ಟಿಷ್ಟು ಆಡುತ್ತಾರೆ ಕೂಡಾ. ಇನ್ನು ವಿನಯ್ ಕುಮಾರ್ ತುಂಬಾನೇ ನಿರಾಸೆ ಮಾಡಿದರು. ರಣಜಿ ಪಂದ್ಯಗಳಲ್ಲಿ ಕರ್ನಾಟಕದ ಪ್ರಮುಖ ಬೌಲರ್ ಆಗಿರುವ ವಿನಯ್, ಸ್ವಲ್ಪವೂ ತಲೆ ಖರ್ಚು ಮಾಡದೇ ಎರ್ರಾಬಿರ್ರಿ ಬೌಲಿಂಗ್ ಮಾಡಿದರು.

ಎಲ್ಲಾ ತಂಡಗಳಲ್ಲಿಯೂ ಬೌಲಿಂಗ್ ಮಾಡುವಾಗ ನಾಯಕನಿಗೆ ಆರೇಳು ಬೌಲರ್-ಗಳ ಆಯ್ಕೆಯಿರುವಂತೆ ತಂಡವನ್ನು ರಚಿಸಲಾಗಿದೆ. ಆದರೆ ಬೆಂಗಳೂರು ತಂಡದಲ್ಲಿ ತಿಪ್ಪರಲಾಗ ಹಾಕಿದರೂ ಐದಕ್ಕಿಂತ ಹೆಚ್ಚು ಬೌಲರ್-ಗಳು ಸಿಗಲಾರರು. ಇದೇ ಕಾರಣಕ್ಕಾಗಿ ಕ್ಯಾಲ್ಲಿಸ್-ನನ್ನು ಎಲ್ಲಾ ಪಂದ್ಯಗಳಲ್ಲೂ ಆಡಿಸಬೇಕಾಯಿತು. ಆಟಗಾರರನ್ನು ಖರೀದಿಸುವಾಗ ಸ್ವಲ್ಪವಾದರೂ ವಿವೇಚನೆ ಇದ್ದಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ.

ಇದ್ದುದರಲ್ಲಿ ಪ್ರವೀಣ್ ಕುಮಾರ್, ರಾಸ್ ಟೇಲರ್, ಬಾಲಚಂದ್ರ ಅಖಿಲ್, ಡೇಲ್ ಸ್ಟೇಯ್ನ್ ಮತ್ತು ವಿರಾಟ್ ಕೊಹ್ಲಿ ಸ್ವಲ್ಪ ಮಾರ್ಯಾದೆ ಉಳಿಸಿದರು ಎನ್ನಬಹುದು.

ಅರುಣ್ ಕುಮಾರ್, ಚಂದರ್ ಪಾಲ್, ಕ್ಯಾಮರೊನ್ ವೈಟ್, ವಿರಾಟ್ ಕೊಹ್ಲಿ, ಮಿಸ್ಬಾ ಉಲ್ ಹಕ್, ರಾಹುಲ್ ದ್ರಾವಿಡ್, ದೇವರಾಜ್ ಪಾಟೀಲ್, ಬಾಲಚಂದ್ರ ಅಖಿಲ್, ಪ್ರವೀಣ್ ಕುಮಾರ್, ಝಹೀರ್ ಖಾನ್, ಡೇಲ್ ಸ್ಟೇಯ್ನ್ - ಈಗ ಸದ್ಯಕ್ಕೆ ಈ ಹನ್ನೊಂದು ಮಂದಿಯ ತಂಡ ಸರಿ ಎಂದೆನಿಸುತ್ತಿದೆ.

ಇದೇ ರೀತಿ ಆಡಿದರೆ ವಿಜಯ್ ಮಲ್ಯ ಖರೀದಿಸಿದ ಎಲ್ಲಾ ಆಟಗಾರರನ್ನು ಮುಂದಿನ ವರ್ಷ ಮಾರಾಟಕ್ಕೆ ಇಟ್ಟುಬಿಟ್ಟು, ರಾಹುಲ್-ನನ್ನು ’ಐಕಾನ್’ ಪಟ್ಟದಿಂದ ಕೆಳಗಿಳಿಸಿ (ಹೈದರಾಬಾದ್ ತಂಡದ ಮಾಲೀಕರಾದ ಡೆಕ್ಕನ್ ಕ್ರೋನಿಕಲ್ ಸಂಸ್ಥೆ ಲಕ್ಷ್ಮಣ್-ನೊಂದಿಗೆ ಮಾಡಿದಂತೆ), ತಂಡದ ಆಯ್ಕೆಯಲ್ಲಿ ತಾನೇ ಸಕ್ರಿಯವಾಗಿ ಪಾಲ್ಗೊಳ್ಳಬಹುದು. ಈ ಸಲ, ತಂಡದ ಆಯ್ಕೆಯನ್ನು ಸಂಪೂರ್ಣವಾಗಿ ರಾಹುಲ್ ಮತ್ತು ಚಾರುಗೆ ವಹಿಸಿಕೊಟ್ಟು, ತನ್ನ ’ರಾಯಲ್ ಚಾಲೆಂಜರ್ಸ್’ ಬ್ರಾಂಡ್ ಅನ್ನು ಪ್ರಮೋಟ್ ಮಾಡುವುದರಲ್ಲೇ ಮಲ್ಯ ಆಸಕ್ತಿ ವಹಿಸಿದ್ದರು. ಅತ್ತ ಫಾರ್ಮುಲಾ ಒನ್ ನಲ್ಲಿ ತನ್ನ ಫೋರ್ಸ್ ಇಂಡಿಯಾ ತಂಡವನ್ನು ಹುರಿದುಂಬಿಸುತ್ತಾ ಸ್ಪೇನ್-ನಲ್ಲಿ ಇದ್ದ ಮಲ್ಯ ೩ ದಿನಗಳ ನಂತರ ಬೆಂಗಳೂರಿನಲ್ಲಿ ರಾಯಲ್ ಚಾಲೆಂಜರ್ಸ್ ತಂಡ ಮೊಹಾಲಿ ತಂಡಕ್ಕೆ ಹೀನಾಯವಾಗಿ ಸೋಲುವುದನ್ನು ಕಾಣಲು ಬೆಂಗಳೂರಿಗೆ ಬಂದಿದ್ದ. ತನ್ನ ವ್ಯವಹಾರದಲ್ಲಿ ’ಸೋಲು’ ಎಂಬ ಶಬ್ದ ಇರದಂತೆ ವ್ಯವಹರಿಸುವ ಮಲ್ಯ ಸಹಜವಾಗಿಯೇ ಸಿಟ್ಟಿಗೆದ್ದಿರಬೇಕು. ಈ ಸಿಟ್ಟು ತನ್ನ ಮೊದಲ ಬಲಿಯನ್ನು ಚಾರು ಶರ್ಮನ ರೂಪದಲ್ಲಿ ಪಡೆದಿದೆ. ಆದರೆ ಚಾರು ಶರ್ಮನ ಜಾಗಕ್ಕೆ ಬಂದವರು ಬೃಜೇಶ್ ಪಟೇಲ್ ಎನ್ನುವುದು ಮತ್ತೊಂದು ಜೋಕು.

ಪಾಪ ಕಟ್ರಿನಾ ಕೈಫ್ ಮುಖ ಸಪ್ಪಗೆ ಮಾಡಿ ಕುಳಿತಿರುವುದು ನೋಡಿಯೇ ಬೇಜಾರಾಗತೊಡಗಿದೆ. ಸುಂದರ ನಗು ಇರುವ ಈ ಚೆಲುವೆಯ ನಗುವನ್ನು ನೋಡುವ ಅವಕಾಶ ನಮಗೆ ಇನ್ನಷ್ಟು ಸಿಗಲಿ. ರಾಯಲ್ ಚಾಲೆಂಜರ್ಸ್ ಇನ್ನು ಮುಂದಿನ ೭ ಪಂದ್ಯಗಳಿಗಾದರೂ ತನ್ನ ಅಂತಿಮ ಹನ್ನೊಂದರ ಆಯ್ಕೆ ಸರಿಯಾಗಿ ಮಾಡಿ ಉತ್ತಮ ಪ್ರದರ್ಶನ ನೀಡಿ ನಗೆಪಾಟಲಾಗಿರುವ ತನ್ನ ಘನತೆಯನ್ನು ಸ್ವಲ್ಪವಾದರೂ ಮರಳಿ ಪಡೆಯಲಿ.