ಭಾನುವಾರ, ಡಿಸೆಂಬರ್ 26, 2010

ಕರ್ನಾಟಕ ಕ್ರಿಕೆಟ್ ೧೦ - ಬ್ಯಾರಿಂಗ್ಟನ್ ರೋಲಂಡ್


ತನ್ನ 19ನೇ ವಯಸ್ಸಿನಲ್ಲಿ 1999ರಲ್ಲಿ ಋತುವಿನಲ್ಲಿ ಕರ್ನಾಟಕ ರಣಜಿ ತಂಡಕ್ಕೆ ಆಯ್ಕೆಯಾದ ಬ್ಯಾರಿಂಗ್ಟನ್, ತನ್ನ ಪ್ರಥಮ ಪಂದ್ಯದಲ್ಲೇ ಕೇರಳ ವಿರುದ್ಧ ಶತಕದ ಬಾರಿಯನ್ನು ಆಡಿದರು. ಗಳಿಸಿದ್ದು 106 ಓಟಗಳನ್ನು. ಆರಂಭಿಕ ಆಟಗಾರನಾಗಿ ಕಿರಿಯರ ಪಂದ್ಯಾಟಗಳಲ್ಲಿ ರಾಜ್ಯ ತಂಡದ ನಾಯಕತ್ವ ವಹಿಸಿ ಓಟಗಳನ್ನು ಸೂರೆಗೈದ ಬ್ಯಾರಿಂಗ್ಟನ್, ರಣಜಿ ಪಂದ್ಯಗಳಲ್ಲೂ ತನ್ನ ಉತ್ತಮ ಆಟವನ್ನು ಮುಂದುವರಿಸಿದರು. ಪ್ರಥಮ ಋತುವಿನ 6 ಪಂದ್ಯಗಳಲ್ಲಿ 46.25 ಸರಾಸರಿಯಲ್ಲಿ 370 ಓಟಗಳನ್ನು ಗಳಿಸಿದರು. 19ರ ಹುಡುಗನಿಗೆ ಭರವಸೆಯ ಆರಂಭ ಎನ್ನಬಹುದು. ಬ್ಯಾರಿಂಗ್ಟನ್ ನ ತಂದೆಯವರು, 1960ರ ದಶಕದಲ್ಲಿ ಇಂಗ್ಲಂಡ್ ತಂಡದ ಮಧ್ಯಮ ಕ್ರಮಾಂಕದಲ್ಲಿ ಆಡುತ್ತಿದ್ದ ಕೆನೆತ್ ಫ್ರಾಂಕ್ ಬ್ಯಾರಿಂಗ್ಟನ್ ಇವರ ಅಭಿಮಾನಿಯಾಗಿದ್ದರಿಂದ ತಮ್ಮ ಮಗನಿಗೂ ಅದೇ ಹೆಸರನ್ನಿಟ್ಟರು.

’ಬ್ಯಾರಿ’ ಎಂದು ಸಹ ಆಟಗಾರರಿಂದ ಕರೆಯಲ್ಪಡುವ ಬ್ಯಾರಿಂಗ್ಟನ್, ಮೊದಲೆರಡು ಋತುಗಳಲ್ಲಿ 3ನೇ ಕ್ರಮಾಂಕದಲ್ಲಿ ಆಡಿದರು. 2002-03 ಋತುವಿನಿಂದ 2007-08 ಋತುವಿನವರೆಗೆ ಆರಂಭಕಾರನಾಗಿ ಆಡಿರುವ ಬ್ಯಾರಿ, ರಾಹುಲ್ ದ್ರಾವಿಡ್ ನ ಮಹಾಭಕ್ತ. ಎಡೆಬಿಡದೆ ದ್ರಾವಿಡ್ ರನ್ನು ಕಾಡಿ, ಬೇಡಿ ಬ್ಯಾಟಿಂಗ್ ಸಲಹೆಗಳನ್ನು ಪಡೆದುಕೊಂಡು ತನ್ನ ಬ್ಯಾಟಿಂಗ್ ಸುಧಾರಿಸಿಕೊಂಡು ಭರವಸೆ ಮೂಡಿಸಿದವರು. ಸತತವಾಗಿ 9 ಋತುಗಳಲ್ಲಿ ಬ್ಯಾರಿ ಕರ್ನಾಟಕವನ್ನು ಪ್ರತಿನಿಧಿಸಿದ್ದಾರೆ. ಈ ಒಂಬತ್ತು ಋತುಗಳಲ್ಲಿ ಅವರ ಸರಾಸರಿ ಹೀಗಿದೆ - 46.25, 51.00, 85.00, 65.00, 77.00, 46.23, 19.60, 27.14 ಮತ್ತು 15.66.

ಇಲ್ಲಿ ಗಮನಿಸಬೇಕಾದ ಅಂಶವೆಂದರೆ 2005-06 (19.60 ಸರಾಸರಿ) ಮತ್ತು 2006-07 (27.14 ಸರಾಸರಿ) ಋತುಗಳಲ್ಲಿ ಬ್ಯಾರಿಯ ವೈಫಲ್ಯ. ಈ ಎರಡು ಋತುಗಳ ಮೊದಲು ಅವರ ಸರಾಸರಿಯನ್ನು ಗಮನಿಸಿ. ಉತ್ತಮ ಆಟ ಪ್ರದರ್ಶಿಸುತ್ತಾ ಇದ್ದ ಬ್ಯಾರಿಂಗ್ಟನ್ ದೇವಧರ್, ದುಲೀಪ್ ಮತ್ತು ಇರಾನಿ ಟ್ರೋಫಿ ಪಂದ್ಯಾಟಗಳಿಗೂ ದಕ್ಷಿಣ ವಲಯ ಮತ್ತು ಶೇಷ ಭಾರತ ತಂಡಗಳ ಪರವಾಗಿ ಆಯ್ಕೆಯಾಗಿ ಅಲ್ಲೂ ಉತ್ತಮ ಪ್ರದರ್ಶನ ನೀಡಿದ್ದರು.

ಕಲಾತ್ಮಕ ಶೈಲಿಯ ಆಟಗಾರನಾಗಿದ್ದು, ತನ್ನ ಕ್ರಿಕೆಟ್‍ನ್ನು ಬಹಳ ಗಂಭೀರವಾಗಿ ಪರಿಗಣಿಸುತ್ತಿದ್ದ ಬ್ಯಾರಿಗೆ 2005-06 ಋತು ಮುಗಿದ ನಂತರ ಎಲ್ಲೋ ಕೆಲವು ಮತಾಂಧರ ಸಂಪರ್ಕ ಉಂಟಾಗಿದೆ. ತನ್ನ ಆಟದ ಮೇಲಿರುವ ಗಮನ ಕಳೆದುಕೊಂಡಿದ್ದಾರೆ. 2006-07 ಋತು ಆರಂಭವಾಗುವ ಮೊದಲೇ ’ರಿಲಿಜನ್ ಕಮ್ಸ್ ಫರ್ಸ್ಟ್, ದೆನ್ ಎವ್ರಿಥಿಂಗ್ ಎಲ್ಸ್’ ಎಂಬರ್ಥ ಕೊಡುವ ಬೇಜವಾಬ್ದಾರಿ ಹೇಳಿಕೆಗಳು. 2006ರಲ್ಲಿ ಮೈಸೂರಿನಲ್ಲಿ ನಡೆದ ಹರ್ಯಾನ ವಿರುದ್ಧದ ಪಂದ್ಯದ ಬಳಿಕ ಅವರು ಕೊಟ್ಟ ಹೇಳಿಕೆ - ’ಕ್ರಿಕೆಟ್ ಇಸ್ ನಾಟ್ ಎವ್ರಿಥಿಂಗ್ ಇನ್ ಲೈಫ್’. ರಾಜ್ಯ ತಂಡವನ್ನು ಪ್ರತಿನಿಧಿಸುವುದು ಹೆಮ್ಮೆಯ ವಿಷಯ. ಅದರಲ್ಲೂ ಯಾರ ಬೆಂಬಲವೂ ಇಲ್ಲದೇ ಸ್ವಂತ ಪರಿಶ್ರಮದಿಂದ ಪ್ರತಿಭೆಯಿಂದ ತಂಡದಲ್ಲಿ ಸ್ಥಾನ ಗಳಿಸಿ ಆಡುತ್ತಿರುವಾಗ ಹೆಮ್ಮೆಯಿಂದ ’ಕ್ರಿಕೆಟ್ ಇಸ್ ಎವ್ರಿಥಿಂಗ್’ ಅಂದುಕೊಂಡು ಆಡಬೇಕೆ ವಿನ: ಹೀಗಲ್ಲ.

2005-06 ಋತುವಿನಲ್ಲಿ ಕಳಪೆ ಪ್ರದರ್ಶನ ನೀಡಿದರೂ, ಆಯ್ಕೆಗಾರರು ಬ್ಯಾರಿಯನ್ನು ಕಡೆಗಣಿಸದೆ 2006-07 ಋತುವಿನ ಎಲ್ಲಾ ಪಂದ್ಯಗಳಲ್ಲೂ ಆಡಿಸಿದ್ದಾರೆ. ಋತುವಿನ ಪ್ರಥಮ ಪಂದ್ಯದಲ್ಲಿ ಯೆರೆ ಗೌಡರಿಗೆ ಆಡಲಾಗದಿದ್ದಾಗ, ಆ ಪಂದ್ಯಕ್ಕೆ ಬ್ಯಾರಿಯನ್ನೇ ಆಯ್ಕೆಗಾರರು ನಾಯಕನನ್ನಾಗಿ ಮಾಡಿದ್ದರು. ಇದು ರಾಜ್ಯಕ್ಕೆ ಬ್ಯಾರಿಯಲ್ಲಿ ಎಷ್ಟು ನಂಬಿಕೆ ಮತ್ತು ಭರವಸೆ ಇತ್ತು ಎಂಬುದನ್ನು ತೋರಿಸುತ್ತದೆ. ಆದರೆ ಬ್ಯಾರಿ ಆಡುತ್ತಿದ್ದ ರೀತಿ ಮತ್ತು ಅವರ ವರ್ತನೆ ನೋಡಿದರೆ ಮುಂದೆ ಕರ್ನಾಟಕಕ್ಕಾಗಿ ಇನ್ನೂ ಆಡಬೇಕೆಂಬ ಇರಾದೆ ಅವರಿಗಿರಲಿಲ್ಲ ಎಂಬುದು ಸ್ಪಷ್ಟವಾಗಿತ್ತು. ಜೀವನದಲ್ಲಿ ಅವರ ’ಪ್ರಯಾರಿಟಿ’ ಬದಲಾಗಿತ್ತು. ಕ್ರಿಕೆಟ್ ತೆರೆಯ ಮರೆಗೆ ಸರಿದು ರಿಲೀಜನ್ ತೆರೆಯ ಮುಂದೆ ಬಂದಿತ್ತು. ಆಧ್ಯಾತ್ಮದ ಮುಂದೆ ಕ್ರಿಕೆಟ್‍ಗಾಗಿ ಮಾಡಿದ್ದ ತ್ಯಾಗ, ಪಟ್ಟ ಶ್ರಮ ಇವೆಲ್ಲವೂ ಈಗ ಕುಬ್ಜವೆನಿಸತೊಡಗಿದವು.

ತದನಂತರ ಸಲಹೆಗಳಿಗೆ ದ್ರಾವಿಡ್ ಬಳಿ ತೆರಳುವುದು ನಿಂತುಹೋಯಿತು. ತಾನು ರನ್ನುಗಳನ್ನು ಗಳಿಸಿದರೆ ಅದು ದೇವರ ಇಚ್ಛೆ. ತಾನು ರನ್ನುಗಳನ್ನು ಗಳಿಸದಿದ್ದರೆ ಅದೂ ದೇವರ ಇಚ್ಛೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಸಯೀದ್ ಅನ್ವರ್ ಮತ್ತು ಸಕ್ಲೇನ್ ಮುಶ್ತಾಕ್ ರಂತಹ ಆಟಗಾರರು ಇದೇ ರೀತಿ ’ರಿಲಿಜನ್’ ಹಿಂದೆ ಓಡಿ ಆಟದ ಮೇಲೆ ಗಮನ ಕಳಕೊಂಡು ಕ್ರಿಕೆಟ್ ಜೀವನವನ್ನು ಕೆಡಿಸಿಕೊಂಡಿರುವ ಉದಾಹರಣೆ ಇರುವಾಗ ಬ್ಯಾರಿ ಹಾಗಾಗದಿರಲಿ ಎಂದು ಕನ್ನಡಿಗರ ಮತ್ತು ಅದಕ್ಕಿಂತಲೂ ಹೆಚ್ಚಾಗಿ ಕರ್ನಾಟಕ ರಾಜ್ಯ ಕ್ರಿಕೆಟ್ ಮಂಡಳಿಯ ಆಶಯವಿತ್ತು. ಆದರೆ ಬ್ಯಾರಿ ಅದ್ಯಾವ ಪರಿ ಚರ್ಚ್ ಮತ್ತು ರಿಲೀಜನ್ ಇವೆರಡರ ವ್ಯಾಮೋಹ ಮತ್ತು ಮೋಡಿಗೆ ಒಳಗಾದರೆಂದರೆ, ಅವರಿಗೆ ಸರ್ವಸ್ವವಾಗಿದ್ದ ಕ್ರಿಕೆಟ್ ಈಗ ನೀರಸವೆನಿಸತೊಡಗಿತು. ಇಷ್ಟು ಸಾಲದೆಂಬಂತೆ ತುಂಬಾ ಜೀವನ ನೋಡಿರುವವರಂತೆ ಇಂಟಲೆಕ್ಚುವಲ್ ಸ್ಟೇಟ್‍ಮೆಂಟುಗಳು! ಬ್ಯಾರಿಯ ಕ್ರಿಕೆಟ್ ಜೀವನ ಹಳಿ ತಪ್ಪುತ್ತಿರುವುದು ಎಲ್ಲರಿಗೂ ಮನವರಿಕೆಯಾಗತೊಡಗಿತ್ತು.

ಮೇಲೆ ಹೇಳಿದಂತೆ ಹಿಂದಿನ ಋತುವಿನಲ್ಲಿ ದಯನೀಯ ವೈಫಲ್ಯ ಕಂಡರೂ 2006-07ರ ಎಲ್ಲಾ ಪಂದ್ಯಗಳಲ್ಲೂ ಬ್ಯಾರಿಯನ್ನು ಆಡಿಸಲಾಯಿತು. ಆದರೂ ಬ್ಯಾರಿ ಮತ್ತೆ ವೈಫಲ್ಯ ಕಂಡರು. ರೋಲಂಡ್ ಬ್ಯಾರಿಂಗ್ಟನ್ ಒಬ್ಬ ಕಲಾತ್ಮಕ ಆರಂಭಿಕ ಆಟಗಾರ. ತನ್ನಲ್ಲಿರುವ ಪ್ರತಿಭೆಗೆ ತಕ್ಕಂತೆ ಆಡಿದರೆ ಈತನನ್ನು ಔಟ್ ಮಾಡಲು ಎದುರಾಳಿ ಬೌಲರ್ ಗಳು ಹೆಣಗಾಡಬೇಕಾಗುತ್ತದೆ. ಇದೇ ಕಾರಣಕ್ಕಾಗಿ, ಆತ ಕಳೆದೆರಡು ಋತುಗಳಲ್ಲಿ ಕ್ರಿಕೆಟ್ ಗಡೆ ಗಮನ ಕಳೆದುಕೊಂಡಿರುವುದನ್ನು ಅರಿತೂ ಆಯ್ಕೆಗಾರರು ಅವರಿಗೊಂದು ಕೊನೆಯ ಅವಕಾಶವನ್ನು (2007-08) ನೀಡಿದರು. ಇದಕ್ಕಾಗಿ ಆಯ್ಕೆ ಸಮಿತಿಯ ಅಧ್ಯಕ್ಷ ಅಶೋಕಾನಂದ್ ಅವರನ್ನು ಅಭಿನಂದಿಸಬೇಕು.

ಆದರೆ ಬ್ಯಾರಿ ಅದಾಗಲೇ ಮಾನಸಿಕವಾಗಿ ಕ್ರಿಕೆಟ್-ನಿಂದ ಬಲು ದೂರ ಹೋಗಿಬಿಟ್ಟಿದ್ದರು. 2007-08 ಋತುವಿನ ಮೊದಲೆರಡು ಪಂದ್ಯಗಳ 3 ಇನ್ನಿಂಗ್ಸ್-ಗಳಲ್ಲಿ ಅವರು ಗಳಿಸಿದ್ದು ಕೇವಲ ೪೭ ರನ್ನುಗಳನ್ನು. ಆ ಬಳಿಕ ಅವರನ್ನು ತಂಡದಿಂದ ಕೈಬಿಡಲಾಯಿತು. ಆ ನಂತರ ಅವರ ಪತ್ತೆನೇ ಇಲ್ಲ. ಅವರ ವಯಸ್ಸಾದರೂ ಎಷ್ಟಿತ್ತು? ಕೇವಲ 27! ಅವರೊಳಗಿನ ಕ್ರಿಕಿಟಿಗ ಆ ಯುವ ವಯಸ್ಸಿಗೆ ಸತ್ತುಹೋಗಿದ್ದ.

ಭಾನುವಾರ, ಡಿಸೆಂಬರ್ 05, 2010

ತಾರಕೇಶ್ವರ ದೇವಾಲಯ - ಹಾನಗಲ್


ತಾರಕೇಶ್ವರ ದೇವಾಲಯದಲ್ಲಿ ತಾವರೆಯ ಅಭೂತಪೂರ್ವ ಕೆತ್ತನೆಯಿದೆ ಎಂದು ಕೇಳಿದ್ದೆ. ಈಗ ಅದನ್ನು ನೋಡಿದ ಬಳಿಕ ತಾವರೆಯನ್ನು ಈ ರೀತಿಯಲ್ಲೂ ಅತ್ಯದ್ಭುತವಾಗಿ ಕೆತ್ತಬಹುದೇ ಎಂದು ಮತ್ತೆ ಮತ್ತೆ ನನ್ನನ್ನೇ ಕೇಳಿಕೊಳ್ಳುತ್ತಿದ್ದೇನೆ. ದೇವಾಲಯದ ಸಮೀಪ ತೆರಳಿದಂತೆ ಇದೊಂದು ಸಾಧಾರಣ ದೇವಾಲಯವಿರಬಹುದು ಎಂಬ ಕಲ್ಪನೆ ಮೂಡತೊಡಗಿತು. ಆದರೆ ಅಗಲ ಸಣ್ಣದಾಗಿದ್ದರೂ ಬಹಳ ಉದ್ದವಿರುವ ಭವ್ಯ ದೇಗುಲವಿದು.


ಮುಖಮಂಟಪ ೨ ಹಂತಗಳಲ್ಲಿದೆ. ಮೊದಲ ಹಂತದಲ್ಲಿ ೧೬ ಕಂಬಗಳಿವೆ ಮತ್ತು ಒಂದೇ ದ್ವಾರವಿದೆ, ಈ ದ್ವಾರ ದೇವಾಲಯದ ಪ್ರಮುಖ ದ್ವಾರವೂ ಹೌದು. ದೊರೆತಿರುವ ಶಾಸನಗಳನ್ನು ಇಲ್ಲೇ ಇರಿಸಲಾಗಿದೆ. ಎರಡನೇ ಹಂತದಲ್ಲಿ ೩ ದ್ವಾರಗಳಿವೆ ಮತ್ತು ೬೪ ಕಂಬಗಳಿವೆ. ನಟ್ಟನಡುವೆ ಛಾವಣಿಯಲ್ಲಿ ತಾವರೆಯ ಅದ್ಭುತ ಮತ್ತು ರಮಣೀಯ ಕೆತ್ತನೆಯಿದೆ. ತಾವರೆಯನ್ನು ಇಷ್ಟು ಸುಂದರವಾಗಿ ಮತ್ತು ಕಲಾತ್ಮಕವಾಗಿ ಕೆತ್ತಿರುವ ಪರಿಯನ್ನು ಪ್ರಶಂಸಿಸದೇ ಇರಲು ಅಸಾಧ್ಯ.


ಈ ಅದ್ಭುತ ತಾವರೆಯ ಮೊದಲ ಎಸಳಿನ ಅರ್ಧಭಾಗ ಬಿದ್ದುಹೋಗಿದೆ. ಈ ಕೆತ್ತನೆಯ ಸಂಪೂರ್ಣ ಸೌಂದರ್ಯವನ್ನು ಸವಿಯಬೇಕಾದರೆ ಅಲ್ಲೇ ನೆಲದಲ್ಲಿ ಕೂತುಕೊಳ್ಳಬೇಕು ಅಥವಾ ಅಂಗಾತ ಮಲಗಿ ಮೇಲೆಯೇ ದಿಟ್ಟಿಸಿ ನೋಡುತ್ತಾ ಕೂಲಂಕೂಷವಾಗಿ ಕೆತ್ತಲಾಗಿರುವ ತಾವರೆಯ ಪ್ರತಿ ಭಾಗದ ಕೆತ್ತನೆಯನ್ನು ಆನಂದಿಸಬೇಕು. ನಾನಂತೂ ಸುಮಾರು ಐದಾರು ನಿಮಿಷ ಅಲ್ಲೇ ಅಂಗಾತ ಬಿದ್ದುಕೊಂಡಿದ್ದೆ. ಅರಳುವ ಕಮಲವನ್ನು ಕಲ್ಪಿಸಿ ಅದನ್ನು ತೆಲೆಕೆಳಗಾಗಿ ಕೆತ್ತನೆ ಮಾಡಿರುವ ನೈಪುಣ್ಯತೆ..ವಾಹ್!


ಕಮಲವನ್ನು ಇಷ್ಟು ಸುಂದರವಾಗಿ ಗುಮ್ಮಟದಂತಹ ರಚನೆಯ ಒಳಮೇಲ್ಮೈಯಲ್ಲಿ ಕೆತ್ತಿರುವಾಗ ಆ ಗುಮ್ಮಟದ ಹೊರಮೇಲ್ಮೈಯೂ ವಿಶಿಷ್ಟವಾಗಿರಬೇಕಲ್ಲವೇ? ಹಾಗಾಗಿ ಮುಖಮಂಟಪದ ಮೇಲೆ ವಿಶಿಷ್ಟ ಮಾದರಿಯ ಗೋಪುರವೊಂದಿದೆ. ಒಳಮೇಲ್ಮೈಯಲ್ಲಿ ಕಮಲವನ್ನು ಹಂತಹಂತವಾಗಿ ಕೆತ್ತುತ್ತಿರಬೇಕಾದರೆ ಈ ಗೋಪುರವನ್ನೂ ಹೊರಗಿನಿಂದ ಹಂತಹಂತವಾಗಿ ಮೆಟ್ಟಿಲುಗಳ ಆಕೃತಿಯಲ್ಲಿ ರಚಿಸಲಾಗಿದೆ.


ಈ ಅತ್ಯಂತ ವಿಶಾಲ ಎರಡು ಹಂತಗಳ ಮತ್ತು ೮೦ ಕಂಬಗಳ ಮುಖಮಂಟಪವನ್ನು ದಾಟಿದರೆ ಸಣ್ಣ ಸುಖನಾಸಿ. ಇಲ್ಲಿರುವ ೨ ಕಂಬಗಳ ಮೇಲೆ ಸುಂದರ ಕೆತ್ತನೆ. ನಂತರ ೭ ತೋಳುಗಳುಳ್ಳ ನವರಂಗದ ದ್ವಾರ. ಪ್ರತಿ ತೋಳಿನಲ್ಲೂ ಸುಂದರ ಕೆತ್ತನೆಯಿದೆ. ಮೇಲೆ ಗಜಲಕ್ಷ್ಮೀಯ ಸುಂದರ ಕೆತ್ತನೆಯಿದೆ. ನವರಂಗದಲ್ಲಿ ನಂದಿ ಆಸೀನನಾಗಿದ್ದು ಪ್ರಭಾವಳಿ ಕೆತ್ತನೆಯಿರುವ ೪ ಸುಂದರ ಕಂಬಗಳಿವೆ. ಈ ಕೆತ್ತನೆಗಳು ಏನನ್ನು ಬಿಂಬಿಸುತ್ತಿವೆ ಎಂದು ತಿಳಿದುಕೊಳ್ಳೋಣವೆಂದರೆ ಅಲ್ಲಿ ಯಾರೂ ಇರಲಿಲ್ಲ.


ಇದೊಂದು ತ್ರಿಕೂಟಾಚಲ ದೇವಾಲಯ. ೩ ಗರ್ಭಗುಡಿಗಳಿದ್ದು ಪ್ರಮುಖ ಗರ್ಭಗುಡಿಗೆ ಮಾತ್ರ ಅಂತರಾಳವಿದೆ. ಎಲ್ಲಾ ಗರ್ಭಗುಡಿಗಳಿಗೆ ಸಾಮಾನ್ಯ ನವರಂಗವಿದೆ. ಎಡಭಾಗದಲ್ಲಿರುವ ಗರ್ಭಗುಡಿಯಲ್ಲಿ ಶಿವಲಿಂಗವನ್ನಿರಿಸಲಾಗಿದೆ ಮತ್ತು ಈ ಗರ್ಭಗುಡಿಗೆ ಸುಂದರ ಮುಖಮಂಟಪವಿದೆ. ಬಲಭಾಗದಲ್ಲಿರುವ ಗರ್ಭಗುಡಿಯಲ್ಲಿರುವ ವಿಗ್ರಹ ಯಾವುದೆಂದು ತಿಳಿಯಲಿಲ್ಲ. ಈ ಗರ್ಭಗುಡಿಯ ಮುಖಮಂಟಪ ಸಂಪೂರ್ಣವಾಗಿ ಕುಸಿದುಬಿದ್ದಿದ್ದು, ಈಗ ಗೋಡೆಯನ್ನು ರಚಿಸಿ ಮುಚ್ಚಲಾಗಿದೆ. ಈ ದೇವಾಲಯದ ಮತ್ತೊಂದು ವೈಶಿಷ್ಟ್ಯವೆಂದರೆ ನವರಂಗದ ಮೆಲೆ ಸಣ್ಣದೊಂದು ಗೋಪುರವಿದೆ. ಈ ಗೋಪುರದ ಹಿಂದೆಯೇ ಪ್ರಮುಖ ಗರ್ಭಗುಡಿಯ ಮೇಲಿರುವ ಸುಂದರ ಕೆತ್ತನೆಗಳನ್ನೊಳಗೊಂಡಿರುವ ದೊಡ್ಡ ಗೋಪುರವಿದೆ.


ದೇವಾಲಯದ ಗರ್ಭಗುಡಿ ಮತ್ತು ನವರಂಗದ ಹೊರಗೋಡೆಯಲ್ಲಿ ಸುಂದರ ಕೆತ್ತನೆಗಳಿವೆ. ಇವೆಲ್ಲಾ ನಿಧಾನವಾಗಿ ನಶಿಸಿಹೋಗುತ್ತಿವೆ. ಪುರಾತತ್ವ ಇಲಾಖೆ ಈ ದೇವಾಲಯವನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳುವುದರಲ್ಲಿ ಸ್ವಲ್ಪ ತಡಮಾಡಿತೇನೋ. ದೇವಾಲಯದ ಜಾಗಗಳೆಲ್ಲಾ ಒತ್ತುವರಿಗೆ ಬಲಿಯಾಗಿ ಅಲ್ಲೆಲ್ಲ ಮನೆಗಳೆದ್ದಿವೆ. ಸರಿಯಾಗಿ ಪ್ರಾಂಗಣ ಕಟ್ಟಲೂ ಆಗದ ಪರಿಸ್ಥಿತಿ. ಈಗ ಸದ್ಯಕ್ಕೆ ದೇವಾಲಯ, ಸುತ್ತಲಿನ ಮನೆಯ ಮಕ್ಕಳಿಗೆ ಕಣ್ಣಾಮುಚ್ಚಾಲೆ ಆಡುವ ಸ್ಥಳ, ಅಮ್ಮಂದಿರಿಗೆ ಮಕ್ಕಳಿಗೆ ಹಾಲುಣಿಸುವ ಸ್ಥಳ, ಹಿರಿಯರಿಗೆ ದಿನಪತ್ರಿಕೆ ಓದುವ ಸ್ಥಳ...ಇತ್ಯಾದಿ. ಪುರಾತತ್ವ ಇಲಾಖೆಯ ಸಿಬ್ಬಂದಿ ಇಲ್ಲಿ ಇದ್ದೂ ಇಲ್ಲದಂತೆ. ಆತನ ಸುಳಿವೇ ಇರುವುದಿಲ್ಲವಂತೆ.


ಇಷ್ಟೆಲ್ಲಾ ವಿಘ್ನಗಳಿದ್ದರೂ ತಾರಕೇಶ್ವರ ದೇವಾಲಯ ಅವನ್ನೆಲ್ಲಾ ಮೆಟ್ಟಿ ನಿಂತು ವಿಜೃಂಭಿಸುತ್ತಿರುವುದು ಹೆಮ್ಮೆಯ ಸಂಗತಿ. ಹಾನಗಲ್‍ನಲ್ಲಿ ಬಿಲ್ಲೇಶ್ವರ ದೇವಾಲಯ ಮತ್ತು ಒಂದು ಜೈನ ಬಸದಿ ಇರುವ ವಿಷಯ ಚಾರಣ/ಪ್ರಯಾಣ ಆಸಕ್ತ ಭರತ್ ಅವರ ಬ್ಲಾಗಿನಲ್ಲಿ ಓದಿದ ಬಳಿಕವೇ ತಿಳಿದುಬಂತು. ಮೊದಲೇ ಗೊತ್ತಿದ್ದರೆ ತಾರಕೇಶ್ವರನೊಂದಿಗೆ ಇವೆರಡನ್ನೂ ಸಂದರ್ಶಿಸುತ್ತಿದ್ದೆ.