ಭಾನುವಾರ, ಮಾರ್ಚ್ 30, 2014

ಬೆಟ್ಟಗಳ ಮಡಿಲಲ್ಲಿ...


ಮಾರ್ಚ್ ೧೫ ಹಾಗೂ ೧೬ರಂದು ಉಡುಪಿಯ ಯೂತ್ ಹಾಸ್ಟೆಲ್ ಬಳಗ ಎರಡು ದಿನಗಳ ಚಾರಣ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಈ ಚಾರಣಕ್ಕೆ ತೆರಳುವ ಎರಡು ವಾರಗಳ ಮೊದಲಷ್ಟೇ ಉಡುಪಿ ಯೂತ್ ಹಾಸ್ಟೆಲ್ ಅಧ್ಯಕ್ಷರಾಗಿರುವ ರಾಘಣ್ಣ, ನನ್ನನ್ನು ಬಲವಂತವಾಗಿ ಯೂತ್ ಹಾಸ್ಟೆಲ್ ಸದಸ್ಯನನ್ನಾಗಿ ಮಾಡಿದ್ದರು. ಉಡುಪಿ ಯೂತ್ ಹಾಸ್ಟೆಲ್ ಸದಸ್ಯನಾಗಿ ನಾನು ಪಾಲ್ಗೊಂಡ ಮೊದಲ ಚಾರಣವಿದು.


ಕಳೆದ ಹತ್ತು ವರ್ಷಗಳಲ್ಲಿ ಉಡುಪಿ ಯೂತ್ ಹಾಸ್ಟೆಲ್‍ನೊಂದಿಗೆ ಅದೆಷ್ಟೋ ಚಾರಣಗಳಿಗೆ ತೆರಳಿದ್ದೇನೆ. ಸದಸ್ಯರಿಗಿದ್ದ ಸವಲತ್ತುಗಳನ್ನು, ಸದಸ್ಯನಾಗದೆ ಪಡೆದುಕೊಂಡಿದ್ದೇನೆ!! ಕೆಲವು ಚಾರಣ ಸ್ಥಳಗಳನ್ನು ಸೂಚಿಸಿ, ಇನ್ನೂ ಕೆಲವು ಚಾರಣಗಳನ್ನು ನಾನೇ ಆಯೋಜಿಸಿ ಆ ಋಣ ತೀರಿಸಿಕೊಂಡಿದ್ದೇನೆ.


ಮಾರ್ಚ್ ೨೦೧೪ರ ಕಾರ್ಯಕ್ರಮವನ್ನು ಶ್ರೀ ಕೆ ಎಸ್ ಅಡಿಗರು ಅದೆಲ್ಲೋ ಒಂದೆಡೆ ಆಯೋಜಿಸಿದ್ದರು. ಎರಡು ದಿನ ಮೂರ್ನಾಲ್ಕು ಬೆಟ್ಟಗಳನ್ನು ಹತ್ತಿಳಿಯುವುದು ಕಾರ್ಯಕ್ರಮದ ಸಾರಾಂಶ. ಅಡಿಗರು ನಮ್ಮ ಉಡುಪಿ ಯೂತ್ ಹಾಸ್ಟೆಲಿನ ಮುಖ್ಯೋಪಾಧ್ಯಾಯರಿದ್ದಂತೆ. ಅವರು ಹೇಳಿದ್ದೇ ಅಂತಿಮ, ಅವರ ನಿರ್ಧಾರವೇ ಅಂತಿಮ. ಅವರ ಮಾತಿಗೆ ಯಾರ ವಿರೋಧವೂ ಇಲ್ಲ, ಅಪಸ್ವರವೂ ಇಲ್ಲ. ಅವರು ಏನಾದರೂ ಹೇಳುವ ಮೊದಲೇ, ಅದಕ್ಕೆ ನಾವು ಸಮ್ಮತಿ ಸೂಚಿಸಿಯಾಗಿರುತ್ತದೆ! ಕಣ್ಣು ಮುಚ್ಚಿ, ಸೊಲ್ಲೆತ್ತದೆ ಅವರು ಹೇಳಿದ್ದನ್ನೆಲ್ಲಾ ಒಪ್ಪಿಕೊಳ್ಳುವುದಕ್ಕೆ ನಮಗೆ ಅವರ ಮೇಲಿರುವ ಅಪಾರ ಗೌರವ ಹಾಗೂ ಕಾರ್ಯಕ್ರಮವನ್ನು ಅತ್ಯುತ್ತಮವಾಗಿ ಆಯೋಜಿಸುವುದರಲ್ಲಿ ಅವರಿಗಿರುವ ಅನುಭವವೇ ಕಾರಣ.


ಮೊದಲ ದಿನ ಸುಮಾರು ಎರಡೂವರೆ ತಾಸು ನಡೆದು ಅಂದಿನ ಪ್ರಥಮ ಗಮ್ಯ ಸ್ಥಳವನ್ನು ತಲುಪಿದೆವು. ಸೊಗಸಾದ ಚಾರಣವಾಗಿತ್ತು. ಬಿಸಿಲಿನ ಝಳವಿದ್ದರೂ ಆಗಾಗ ತಂಪಾದ ಗಾಳಿ ನಮ್ಮ ಮೇಲೆ ಕರುಣೆ ತೋರುತ್ತಿದ್ದರಿಂದ ಚಾರಣ ಸಂತಸ ನೀಡಿತು.


ಇನ್ನೊಂದೆರಡು ತಾಸು ನಡೆದು, ಇನ್ನೊಂದು ದಾರಿಯ ಮೂಲಕ ನಮ್ಮ ವಾಹನವಿದ್ದಲ್ಲಿ ಬಂದಾಗ ಮಧಾಹ್ನ ಮೂರುವರೆಯ ಸಮಯವಾಗಿತ್ತು. ಮುಂಜಾನೆ ಉಡುಪಿಯಿಂದ ನಾವು ಆರಕ್ಕೇ ಹೊರಟಿದ್ದೆವು. ಈ ಅಡಿಗ ದಂಪತಿ ಅದ್ಯಾವಾಗ ಎದ್ದು ಚಿತ್ರಾನ್ನ ತಯಾರು ಮಾಡಿದ್ದರೇನೋ? ಅಂತೂ ಅಂದಿನ ಪ್ರಥಮ ಚಾರಣದ ಬಳಿಕ ನಮಗೆ ರುಚಿರುಚಿಯಾದ ಚಿತ್ರಾನ್ನದ ಊಟ!


ಬಳಿಕ ಸುಮಾರು ನಾಲ್ಕೂವರೆಗೆ ಎರಡನೇ ಚಾರಣ ಆರಂಭ. ಉಡುಪಿ ಯೂತ್ ಹಾಸ್ಟೆಲಿನ ಒಂದು ಚಾಳಿಯಿದೆ. ಅದೇನೆಂದರೆ, ವೇಗವಾಗಿ ಮುಂದೆ ಹೋಗಿಬಿಡುವುದು. ಹಿಂದೆ ಉಳಿದವ ಅಲ್ಲೇ ಬಾಕಿ! ಇದನ್ನು ನಾನು ಕಳೆದ ೧೦ ವರ್ಷಗಳಿಂದಲೂ ಗಮನಿಸುತ್ತಿದ್ದೇನೆ. ಆದರೆ ಇದುವರೆಗೆ ನನಗೆ ಅದರಿಂದ ಯಾವುದೇ ತೊಂದರೆಯಾಗಿರಲಿಲ್ಲ. ಆದರೆ ಈ ಚಾರಣದಲ್ಲಿ ನನಗದು ಮೊದಲ ಬಾರಿಗೆ ದುಬಾರಿಯಾಯಿತು. ಸದಸ್ಯನಾದ ಬಳಿಕ ಕೈಗೊಂಡ ಮೊದಲ ಚಾರಣದಲ್ಲೇ ಹೀಗಾದದ್ದು ವಿಪರ್ಯಾಸ!


ಚಿತ್ರಗಳನ್ನು ತೆಗೆಯುತ್ತ ಸ್ವಲ್ಪ ಹಿಂದುಳಿದ ನಾನು, ನನಗರಿವಾಗುವ ಮೊದಲೇ ಉಳಿದವರಿಂದ ಸುಮಾರು ಹಿಂದುಳಿದುಬಿಟ್ಟೆ. ಮೊದಲೇ ನನ್ನದು ಸ್ಲೋ ಗಾಡಿ. ಹಾಗಿರುವಾಗ ಇನ್ನಷ್ಟು ಹಿಂದೆ ಬೀಳಲು ಹೆಚ್ಚು ಸಮಯ ಬೇಕಾಗಲಿಲ್ಲ. ಹೀಗೆ ಅದೆಷ್ಟೋ ಸಲ ನಾನು ಬಹಳ ಹಿಂದೆ ಉಳಿದಿದ್ದರೂ ದಾರಿ ಕಂಡುಕೊಂಡು ಮುಂದೆ ಸಾಗಿದ್ದೇನೆ. ಆದರೆ ಅಂದು ಮಾತ್ರ ದಾರಿ ತಪ್ಪಿಬಿಟ್ಟೆ. ಒಂದೆಡೆ ಬಲಕ್ಕಿದ್ದ ದಾರಿ ಸ್ವಲ್ಪ ಮಸುಕಾಗಿದ್ದರಿಂದ, ದಾರಿ ಅದಿರಲಿಕ್ಕಿಲ್ಲ ಎಂದು ಎಡಕ್ಕಿದ್ದ ದಾರಿಯ ಜಾಡು ಹಿಡಿದೆ.


ನಮ್ಮಲ್ಲೊಬ್ಬ ವುಡ್‍ಲ್ಯಾಂಡ್ ಶೂ ಧರಿಸಿದ್ದ. ಆತನ ಹೆಜ್ಜೆ ಗುರುತು ಹಿಂಬಾಲಿಸಿ ಅಲ್ಲಿವರೆಗೆ ಬಂದಿದ್ದೆ. ಈಗ ಕವಲುದಾರಿ ಬಂದಲ್ಲಿ ಹುಲ್ಲು ಮತ್ತು ತರಗೆಲೆಗಳಿದ್ದರಿಂದ ಹೆಜ್ಜೆ ಗುರುತು ಇರಲಿಲ್ಲ. ಮುಂದೆ ತೆರಳಿದವರ ಸದ್ದು, ಮಾತು ಕೇಳದೆ ಅದಾಗಲೇ ೧೫ ನಿಮಿಷಗಳು ಆಗಿದ್ದವು.


ನಾನು ಎಡಕ್ಕೆ ತಿರುಗಿದ ದಾರಿ ನೇರವಾಗಿ ಕಾಡೊಳಗೆ ನುಗ್ಗಿ ಒಂದೈದು ನಿಮಿಷದ ಬಳಿಕ ಹೊರಬಂತು. ಈಗ ಮತ್ತೆ ಮಣ್ಣು ಮಿಶ್ರಿತ ದಾರಿ ಬೆಟ್ಟದ ಮೇಲೆ ಸಾಗುತ್ತಿತ್ತು. ವುಡ್‍ಲ್ಯಾಂಡ್ ಶೂ ಗುರುತು ಎಲ್ಲೂ ಕಾಣಬರುತ್ತಿರಲಿಲ್ಲ. ದಾರಿ ತಪ್ಪಿದ್ದು ಅರಿವಾಯಿತು. ಸ್ವಲ್ಪ ಮೇಲೆ ಸಾಗಿದ ಬಳಿಕ ನನ್ನ ಬಲಕ್ಕಿದ್ದ ಬೆಟ್ಟದ ಶೋಲಾ ಕಾಡಿನೊಳಗಿನಿಂದ ಮಾತುಗಳು ಕೇಳಿಬರಲಾರಂಭಿಸಿದವು. ಇನ್ನೂ ಸ್ವಲ್ಪ ಹೊತ್ತಿನ ಬಳಿಕ ಒಂದೊಂದೇ ಆಕೃತಿಗಳು ಶೋಲಾ ಕಾಡಿನಿಂದ ಹೊರಬಂದು ಮೇಲೆ ತೆರಳುತ್ತಿರುವುದು ಕಾಣಬಂತು. ನಿರಾಸೆಯಿಂದ ನೇರವಾಗಿ ನಮ್ಮ ವಾಹನವಿದ್ದಲ್ಲಿ ಬಂದು, ಅಲ್ಲಿದ್ದ ಬಂಡೆಯ ಮೇಲೆ ಅಂಗಾತ ಮಲಗಿ ನಿದ್ರೆ ಮಾಡಿದೆ. ಚಾರಣ ಮುಗಿಸಿ ಉಳಿದವರು ಬಂದಾಗ ಕತ್ತಲು ಕವಿಯಲಾರಂಭಿಸಿತ್ತು.


ತದನಂತರ ನಮ್ಮ ವಾಹನ ದಿನದ ಮೂರನೇ ಸ್ಥಳದತ್ತ ದೌಡಾಯಿಸಿತು. ಬೆಟ್ಟವೊಂದರ ಕಮರಿಯ ತುದಿಯಲ್ಲಿರುವ ಬಹಳ ಸುಂದರವಾಗಿರುವ ದೈವಿಕ ಸ್ಥಳವಿದು. ಬೆಳದಿಂಗಳ ರಾತ್ರಿಯಲ್ಲಿ ಅಲ್ಲಿ ಕಳೆದ ೨೦ ನಿಮಿಷಗಳು ಬಹಳ ಆನಂದ ನೀಡಿದವು. ಅಡಿಗರು ಈ ಕಾರ್ಯಕ್ರಮವನ್ನು ತಮ್ಮ ಸ್ನೇಹಿತರ ಮೂಲಕ ಆಯೋಜಿಸಿದ್ದರು. ನಾವು ಈ ಸ್ಥಳ ತಲುಪುವಾಗಲೇ ಅಡಿಗರ ಈ ಸ್ನೇಹಿತರು ಮತ್ತು ಅವರ ಪತ್ನಿ, ದಪ್ಪ ಕೆನೆಯುಕ್ತ ಹಾಲಿನಿಂದ ತಯಾರಿಸಿದ ರಾಗಿ ಜ್ಯೂಸ್, ನಿಪ್ಪಟ್ಟು ಮತ್ತು ಬಹಳ ಉತ್ತಮವಾಗಿದ್ದ ಸಿಹಿತಿಂಡಿ (ಜಾಮೂನ್ ಹಿಟ್ಟಿನಿಂದ ತಯಾರಿಸಿದ ಬರ್ಫಿ!) ಇವಿಷ್ಟರೊಂದಿಗೆ ರೆಡಿಯಾಗಿ ನಮ್ಮ ದಾರಿಕಾಯುತ್ತಿದ್ದರು. ಬೆಳಗ್ಗಿನಿಂದ ಚಾರಣ ಮಾಡಿ, ಅಲೆದಾಡಿ ದಣಿದಿದ್ದ ನಮಗೆ ಆ ವಿಶಿಷ್ಟ ರಾಗಿ ಜ್ಯೂಸ್ ನೀಡಿದ ಪರಮಾನಂದ ವರ್ಣಿಸಲಸಾಧ್ಯ. ಮನೆಯಲ್ಲೇ ಮಾಡಿದ ನಿಪ್ಪಟ್ಟು ಹಾಗೂ ಬರ್ಫಿಯಂತೂ ಟಾಪ್ ಕ್ಲಾಸ್!


ನಂತರ ಅಡಿಗರ ಎರಡನೇ ಸ್ನೇಹಿತರ ಮನೆಯತ್ತ ನಮ್ಮ ವಾಹನ ಓಡಿತು. ಇಲ್ಲಿ ನಮ್ಮ ಮೊದಲ ದಿನದ ಹಾಲ್ಟ್. ಈ ಮನೆಯ ಯಜಮಾನ ಹಾಗೂ ಅವರ ಮಗಳನ್ನು ಮುಂಜಾನೆಯೇ ನಾವು ಪಿಕ್ ಮಾಡಿದ್ದೆವು. ಏಕೆಂದರೆ ಅಂದಿನ ನಮ್ಮ ಮಾರ್ಗದರ್ಶಿಗಳೇ ಅವರಾಗಿದ್ದರು. ಈಗ ಅವರ ಮನೆಯ ಆಸುಪಾಸಿನ ಪರಿಸರ ನೋಡಿ ನಾವೆಲ್ಲ ಹುಚ್ಚೆದ್ದು ಕುಣಿಯುವುದೊಂದು ಬಾಕಿ. ಶ್ರೀ ಅಡಿಗರು ತಯಾರಿಸಿದ ಸೂಪರ್ ಸಾರು ಹಾಗೂ ಅನ್ನದೊಂದಿಗೆ, ಉಪ್ಪಿನಕಾಯಿ, ಚಟ್ನಿ, ಹಪ್ಪಳವನ್ನು ಹೊಟ್ಟೆ ತುಂಬಾ ಉಂಡೆವು. ಮನೆಯ ಹೊರಗೆ ವಿಶಾಲವಾದ ಅಂಗಣದಲ್ಲಿ ಕುಳಿತು ಬೆಳದಿಂಗಳ ಊಟ ಮಾಡಿದ ಸುಖ, ಉಣ್ಣವನೇ ಬಲ್ಲ. ಊಟದ ಬಳಿಕ ಮನೆಯವರಿಂದ ನಮಗೆಲ್ಲ ಅನಿಯಮಿತ ಸವಿಯಾದ ಬಾಳೆಹಣ್ಣು ಸರಬರಾಜು.


ಮರುದಿನ ಮುಂಜಾನೆ ಸುಮಾರು ಒಂದು ತಾಸು ನಾವು ನಮಗೆ ಆತಿಥ್ಯ ನೀಡಿದವರ ಎಸ್ಟೇಟ್‍ಗೆ ಒಂದು ಸುತ್ತು ಹಾಕಿದೆವು. ಬಹಳ ಆಸಕ್ತಿಯಿಂದ ಅವರು ನಮಗೆ ಬಹಳಷ್ಟು ವಿಷಯಗಳನ್ನು ತಿಳಿಸಿದರು. ಈ ವಾಕ್ ನಮಗೆ ಆ ದಿನ ಮಾಡಲಿದ್ದ ಕಠಿಣ ಚಾರಣಕ್ಕೆ ವಾರ್ಮ್ ಅಪ್ ಮಾಡಿತು ಎನ್ನಬಹುದು.


ಅಂದಿನ ಕಾರ್ಯಕ್ರಮ ಇನ್ನೊಂದು ಬೆಟ್ಟವನ್ನು ಹತ್ತುವುದಾಗಿತ್ತು. ಈ ಬೆಟ್ಟ ನಾವು ರಾತ್ರಿ ಉಳಿದುಕೊಂಡ ಮನೆಯಿಂದ ಕಾಣುತ್ತಿತ್ತು. ಮುಂಜಾನೆ ನಮ್ಮ ವಾಹನದಲ್ಲಿ ಒಂದು ಕಡೆ ತೆರಳಿ ಅಲ್ಲಿಂದ ನಡೆಯಲಾರಂಭಿಸಿದೆವು. ಸರಿ ಸುಮಾರು ಮೂರು ತಾಸುಗಳ ಚಾರಣವಾಗಿತ್ತು ಇದು. ಮೊದಲು ಕಾಡಿನ ಮರೆಯಲ್ಲೇ ಸಾಗಿತು ಚಾರಣ. ಮುಂದೆ ಇದ್ದವರಿಗೆ ಎಂಟು ಕಾಡುಕೋಣಗಳ ಒಂದು ಹಿಂಡನ್ನು ಅತೀ ಸಮೀಪದಿಂದ ಕಾಣುವ ಭಾಗ್ಯ.


ಕಾಡಿನ ಮರೆಯಿಂದ ಹೊರಬಂದ ಕೂಡಲೇ ಹಸಿರು ಸಾಮ್ರಾಜ್ಯದ ವಿರಾಟ ದರ್ಶನ. ಈಗ ಬಿಸಿಲು ನಿಜವಾಗಿಯೂ ಕಿರುಕುಳ ನೀಡಲಾರಂಭಿಸಿತು. ಆದರೂ ಹಟದಿಂದ ಮುಂದೆ ಸಾಗಿದೆ. ಬೆಟ್ಟದ ಕೊನೆಯ ಏರಿನ ಬುಡಕ್ಕೆ ಬಂದಾಗ ಅಲ್ಲಿ ಅಡಿಗರ ಸಮಾಲೋಚನೆ ಸಾಗಿತ್ತು. ರಾತ್ರಿ ನಾವು ಉಳಿದುಕೊಂಡ ಮೆನೆಗೆ ಈಗ ನೇರವಾಗಿ ಇಳಿಯುವ ಬಗ್ಗೆ ಮಾತುಕತೆ ನಡೆದಿತ್ತು. ನಂತರ ಅದೇ ನಿರ್ಧಾರ ಮಾಡಿ, ನಮ್ಮ ವಾಹನದ ಚಾಲಕನಿಗೆ ಫೋನಾಯಿಸಿ, ಆತನಿಗೆ ಮನೆಗೆ ಹಿಂತಿರುಗುವಂತೆ ತಿಳಿಸಲಾಯಿತು.


ಈ ಚಾರಣ ಅದ್ಭುತವಾಗಿತ್ತು. ಕೊನೆಕೊನೆಗೆ, ಬೆಟ್ಟದ ತುದಿ ಸಮೀಪಿಸುತ್ತಿದ್ದಂತೆ ಅದು ಇನ್ನಷ್ಟು ದೂರವಿರುವಂತೆ ಭಾಸವಾಗುತ್ತಿತ್ತು. ಸುಮಾರು ೨೦೦ ನಿಮಿಷಗಳ ಬಳಿಕ ಕೊನೆಯವನಾಗಿ ನಾನು ಶಿಖರದ ತುದಿಯನ್ನು ಸಹಚಾರಣಿಗರ ಕರತಾಡನದ ನಡುವೆ ತಲುಪಿದೆ.


ಈಗ ನಮಗೆ ಕೆಳಗಿಳಿಯುವ ದಾರಿ ಗೊತ್ತಿರಲಿಲ್ಲ. ಮನೆಯೇನೋ ಬಹಳ ದೂರದಲ್ಲಿ ಕಾಣಿಸುತ್ತಿತ್ತು. ಆದರೆ ಮೊದಲು ಈಗ ಬೆಟ್ಟದ ಕಡಿದಾದ ಪಾರ್ಶ್ವವನ್ನು ನಾವು ದಾಟಿ ಇಳಿಯಬೇಕಾಗಿತ್ತು. ದಾರಿ ಕಂಡುಹಿಡಿಯುವುದರಲ್ಲಿ ನಿಸ್ಸೀಮರಾಗಿರುವ ಸುಧೀರ್ ಕುಮಾರ್‌ರನ್ನು ಮುಂದೆ ಕಳುಹಿಸಲಾಯಿತು. ಹದಿನೈದು ನಿಮಿಷಗಳಾದರೂ ಅವರಿಂದ ಯಾವ ರೀತಿಯ ಮಾಹಿತಿಯೂ ಇಲ್ಲ. ಅಂತೂ ಕಡೆಗೆ ನಮ್ಮಲ್ಲೊಬ್ಬರ ಮೊಬೈಲ್ ರಿಂಗಿಣಿಸಿತು. ದಾರಿ ಕಡಿದಾಗಿದೆ, ಆದರೆ ಬರಬಹುದು ಎಂದು ಸುಧೀರ್ ಮಾಹಿತಿ ರವಾನಿಸಿದಾಗ, ಅವರು ಸಾಗಿ ಇಳಿದ ದಾರಿಯಲ್ಲಿ ಕೆಳಗಿಳಿಯುವ ನಿರ್ಧಾರ ಮಾಡಿದೆವು


ಅಬ್ಬಾ! ಅದೆಂಥಾ ದಾರಿ! ಕೆಲವರು ತಮ್ಮ ಹಿಂಭಾಗವನ್ನು ನೆಲದಿಂದ ಮೇಲೆ ಎತ್ತಲೇ ಇಲ್ಲ. ಹುಲ್ಲನ್ನು ಹಿಡಿದು ಜಾರಿಕೊಂಡೇ ಸಾಗಿದರು. ಕೆಲವರ ಬಟ್ಟೆ ಹರಿದೇ ಹೋಯ್ತು. ಇನ್ನು ಕೆಲವರ ಮೈಕೈಯೆಲ್ಲಾ ಗಿಡಗಂಟಿಗಳಿಗೆ ಸವರಿ ಪರಚಿದ ಗಾಯ ಮಾಡಿಕೊಂಡರು. ನಾನೂ ಎರಡು ಮುಳ್ಳುಗಳನ್ನು ಬೆರಳೊಳಗೇ ಚುಚ್ಚಿಸಿಕೊಂಡೇ ಬಂದೆ. ಆ ದಾರಿ ದಾಟಿ ಬರಬೇಕಾದರೆ ನಮಗೆಲ್ಲ ೩೦-೪೫ ನಿಮಿಷಗಳು ಬೇಕಾದವು. ಆನಂತರ ಇನ್ನೂ ಎರಡು ತಾಸು ನಡೆದು ಅಡಿಗರ ಸ್ನೇಹಿತರ ಮನೆ ತಲುಪಿದೆವು. ಅಲ್ಲಿಗೆ ನಾವು ಮುಂಜಾನೆ ಚಾರಣ ಆರಂಭಿಸಿ ೭ ತಾಸುಗಳು ಆಗಿದ್ದವು.


ಸ್ವಲ್ಪ ಹೊತ್ತಿನ ಬಳಿಕ ಅಡಿಗರು ಮುಂಜಾನೆಯೇ ತಯಾರಿಸಿದ್ದ ರುಚಿಯಾದ ಪೊಂಗಲ್ ಎಲ್ಲರ ಪ್ಲೇಟ್ ಮೇಲೆ ಬಿತ್ತು. ಹಸಿದ ಹೆಬ್ಬುಲಿಗಳಂತೆ ಎಲ್ಲರೂ ಮತ್ತೆ ಮತ್ತೆ ಹಾಕಿಸಿಕೊಂಡು ಕಟಿದರು. ಅದಕ್ಕೆ ಚಟ್ನಿ ಮತ್ತು ಉಪ್ಪಿನಕಾಯಿಯ ಸಾಥ್. ಜೊತೆಗೆ ಮನೆಯವರಿಂದ ಅನಿಯಮಿತ ದಪ್ಪ ಮಜ್ಜಿಗೆಯ ಸರಬರಾಜು. ಊಟದ ಜೊತೆಗೆ ಮನೆಯವರಿಂದ ರುಚಿಯಾದ ಸಿಹಿತಿಂಡಿ ಮತ್ತು ಮೆದುವಾದ ಚಕ್ಕುಲಿಯ ಸರಬರಾಜು ಕೂಡಾ. ಊಟದ ಬಳಿಕ ಮತ್ತೆ ಬಾಳೆಹಣ್ಣು.


ಕಾರ್ಯಕ್ರಮ ಇನ್ನೂ ಮುಗಿದಿರಲಿಲ್ಲ. ನಂತರ ಅಲ್ಲಿಂದ ಹೊರಟ ನಾವು ಸೀತಾವನ ಎಂಬಲ್ಲಿ ತೆರಳಿ ಸುಂದರ ಸ್ಥಳವೊಂದನ್ನು ನೋಡಿದ ಬಳಿಕ ನಮ್ಮ ವಾಹನ ಉಡುಪಿಯತ್ತ ಓಡಿತು. ಬಹಳ ವರ್ಷಗಳಿಂದ ಬಿ ವಿ ಪ್ರಕಾಶ್ ಎನ್ನುವವರು ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ಬರೆಯುತ್ತಿದ್ದ (ಈಗಲೂ ಬರೆಯುತ್ತಾರೆ) ಚಾರಣ ಸಂಬಂಧಿತ ಲೇಖನಗಳನ್ನು ಓದುತ್ತಿದ್ದೆ. ಉಡುಪಿ ಯೂತ್ ಹಾಸ್ಟೆಲಿನ ಈ ಚಾರಣ ಕಾರ್ಯಕ್ರಮಕ್ಕೆ ಪ್ರಕಾಶ್ ಬಂದಿದ್ದರು! ಈ ಹಿರಿಯ ಅನುಭವಿ ಚಾರಣಿಗರ ಭೇಟಿಯಾದದ್ದು ಸಂತಸದ ಕ್ಷಣ.


ಅಡಿಗರು ಊಟ ತಯಾರಿಸಿ, ಬಡಿಸಿ, ನಮ್ಮ ಚಾರಣದ ದಣಿವನ್ನು ತಣಿಸಿದರು. ಅವರ ಋಣ ತೀರಿಸುವುದು ಅಸಾಧ್ಯದ ಮಾತು. ಅಡಿಗರ ಸ್ನೇಹಿತರು ತಮ್ಮ ಆತಿಥ್ಯದಿಂದ ನಮ್ಮನ್ನೆಲ್ಲ ಗೆದ್ದುಬಿಟ್ಟರು. ಇನ್ನೆಂದು ಇಂತಹ ಇನ್ನೊಂದು ಕಾರ್ಯಕ್ರಮ ಬರುವುದೋ? ಅಡಿಗರು ನಿರಾಸೆ ಮಾಡೋದಿಲ್ಲ ಎಂದು ನಮಗೆ ಗೊತ್ತು!

ಭಾನುವಾರ, ಮಾರ್ಚ್ 23, 2014

ನಾರಾಯಣ ದೇವಾಲಯ - ಹುಬ್ಬಳ್ಳಿ


ಜೀರ್ಣಾವಸ್ಥೆಯಲ್ಲಿದ್ದ ಈ ದೇವಾಲಯವನ್ನು ಪುರಾತತ್ವ ಇಲಾಖೆ ದುರಸ್ತಿ ಮಾಡಿದೆ. ಸಂಪೂರ್ಣವಾಗಿ ಕುಸಿದುಬಿದ್ದಿದ್ದ ವಿಜಯನಗರ ಶೈಲಿಯ ಮುಖಮಂಟಪವನ್ನು ಪುನ: ಮೂಲ ರೂಪಕ್ಕೆ ತಕ್ಕಂತೆ ನಿರ್ಮಿಸಲಾಗಿದೆ. ಈ ದೇವಾಲಯದ ಬಗ್ಗೆ ಚಾಲುಕ್ಯರ ಸಮಯದಲ್ಲಿ ನಿರ್ಮಿಸಲಾಗಿರುವ ದೇವಾಲಯ ಎಂಬ ಮಾಹಿತಿಯಷ್ಟೇ ಲಭ್ಯವಿದೆ.


ಈ ತ್ರಿಕೂಟ ದೇವಾಲಯದ ಎಲ್ಲಾ ಶಿಖರಗಳ ತುದಿ ಕಣ್ಮರೆಯಾಗಿದ್ದು, ಈಗಿನ ಕಾಲದ ಶೈಲಿಗೆ ತಕ್ಕಂತೆ ತೇಪೆ ಹಾಕಲಾಗಿದೆ. ದೇವಾಲಯದ ಹೊರಭಾಗದಲ್ಲಿ ಭಿತ್ತಿಗಳಿಲ್ಲ.


ನವರಂಗದ ದ್ವಾರವು ಐದು ತೋಳುಗಳನ್ನು ಹೊಂದಿದೆ. ಲಲಾಟದಲ್ಲಿ ಗಜಲಕ್ಷ್ಮೀಯಿದ್ದಾಳೆ. ದ್ವಾರದ ತೋಳುಗಳಲ್ಲಿ ಕ್ರಮವಾಗಿ ವಜ್ರತೋರಣ, ವಾದ್ಯಗಾರರು, ಜೋಡಿ ನೃತ್ಯಗಾರರು, ಸ್ತಂಭ ಹಾಗೂ ಬಳ್ಳಿತೋರಣ ಕೆತ್ತನೆಗಳನ್ನು ಕಾಣಬಹುದು.


ನಾಲ್ಕನೇ ತೋಳಿನಲ್ಲಿರುವ ಪೂರ್ಣಕುಂಭ ಕಲಶವನ್ನು ಆಕರ್ಷಕವಾಗಿ ಕೆತ್ತಲಾಗಿದೆ. ಈ ಹೊರಚಾಚು ಕಲಶದ ಅಲಂಕಾರದ ಸುತ್ತ ಕೈಯಾಡಿಸಲು ಅನುಕೂಲವಾಗುವಂತೆ ಕೆತ್ತಲಾಗಿದೆ.


ದ್ವಾರದ ತಳಭಾಗದಲ್ಲಿ ತೋಳಿಗೊಂದರಂತೆ ಐದು ಮಾನವ ರೂಪದ ಕೆತ್ತನೆಗಳನ್ನು ಕಾಣಬಹುದು. ದ್ವಾರದ ಮೇಲ್ಭಾಗದಲ್ಲಿ ಗಜಲಕ್ಷ್ಮೀಯ ಇಕ್ಕೆಲಗಳಲ್ಲಿ ತಲಾ ನಾಲ್ಕರಂತೆ ಅಷ್ಟದಿಕ್ಪಾಲಕರನ್ನು ತೋರಿಸಲಾಗಿದೆ.


ನವರಂಗದಲ್ಲಿ ನಾಲ್ಕು ಕಂಬಗಳಿವೆ ಹಾಗೂ ಎಲ್ಲಾ ಗರ್ಭಗುಡಿಗಳು ತೆರೆದ ಅಂತರಾಳವನ್ನು ಹೊಂದಿವೆ. ಪ್ರಮುಖ ಗರ್ಭಗುಡಿಯಲ್ಲಿ ಸಾಮಾನ್ಯ ಪೀಠದ ಮೇಲೆ, ಮೂರ್ನಾಲ್ಕು ಅಡಿ ಎತ್ತರವಿರುವ ನಾರಾಯಣನ ಸುಂದರ ವಿಗ್ರಹವಿದೆ. ಮೇಲ್ಛಾವಣಿಯಲ್ಲಿ ಕಮಲದ ಕೆತ್ತನೆಯಿದೆ. ಗರ್ಭಗುಡಿಯ ದ್ವಾರವು ಅಲಂಕಾರರಹಿತ ಐದು ತೋಳುಗಳನ್ನು ಹೊಂದಿದೆ. ಲಲಾಟದಲ್ಲಿರುವ ಕೆತ್ತನೆ ನಶಿಸಿದೆ.

 

ನಾರಾಯಣನ ಇಕ್ಕೆಲಗಳಲ್ಲಿ ಶ್ರೀದೇವಿ ಹಾಗೂ ಭೂದೇವಿಯರಿದ್ದಾರೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ನಾರಾಯಣನ ಮೂರ್ತಿಯಿರುವ ಪೀಠ ಗರುಡ ಪೀಠವಾಗಿರದೆ, ಸಾಮಾನ್ಯ ಪೀಠವಾಗಿರುವುದು. ಹೆಚ್ಚಿನ ವಿಷ್ಣು ದೇವಾಲಯಗಳಲ್ಲಿ ಗರುಡನನ್ನು, ಪೀಠದ ಮುಂಭಾಗದಲ್ಲಿ ಕಾಣಬಹುದು. ಈ ದೇವಾಲಯದಲ್ಲಿ, ಗರುಡನನ್ನು ನಾರಾಯಣನ ಪಾದಗಳ ಬಳಿ, ಬಲಭಾಗದಲ್ಲಿ, ಕೈ ಮುಗಿದು ಕುಳಿತಿರುವ ಭಂಗಿಯಲ್ಲಿ ಕಾಣಬಹುದು.


ನವರಂಗದ ಎಡಭಾಗದಲ್ಲಿರುವ ಗರ್ಭಗುಡಿಯಲ್ಲಿ ಶಿವಲಿಂಗವಿದೆ. ಅಂತರಾಳದಲ್ಲಿ ನಂದಿಯ ಮೂರ್ತಿಯಿದೆ.


ನವರಂಗದ ಬಲಭಾಗದಲ್ಲಿರುವ ಗರ್ಭಗುಡಿಯಲ್ಲಿ ಗಣೇಶನ ಮೂರ್ತಿಯಿದೆ. ಉಳಿದಂತೆ ದೇವಾಲಯದಲ್ಲಿ ಸಪ್ತಮಾತೃಕೆಯರು, ಶಿವ ಪಾರ್ವತಿ (ಗಣೇಶ ಹಾಗೂ ಕಾರ್ತಿಕೇಯರೊಂದಿಗೆ), ಐದು ಕುದುರೆಗಳಿರುವ ಪೀಠದ ಮೇಲೆ ಆಸೀನನಾಗಿರುವ ದೇವ (ಯಾರೆಂದು ತಿಳಿಯಲಿಲ್ಲ) ಮತ್ತು ದೇವಿಯೊಬ್ಬಳ (ದೊರಕಿರುವ ಮಾಹಿತಿಯ ಪ್ರಕಾರ ಅದಿಶಕ್ತಿ) ಮೂರ್ತಿಗಳನ್ನು ಕಾಣಬಹುದು.


ಈ ದೇವಾಲಯದ ಎಲ್ಲಾ ವಿಗ್ರಹಗಳು ಇತ್ತೀಚಿನದಾಗಿರಬಹುದಾದ (೧೦೦ ವರ್ಷಗಳಷ್ಟು) ಸಾಧ್ಯತೆಗಳಿವೆ. ೮೦೦-೧೦೦೦ ವರ್ಷಗಳಷ್ಟು ಹಳೆಯ ವಿಗ್ರಹಗಳಲ್ಲಿ, ಗರುಡನನ್ನು ವಿಷ್ಣುವಿನ ಪಾದದ ಬಳಿ ತೋರಿಸಿರುವ ನಿದರ್ಶನ ಕಂಡುಬರುವುದಿಲ್ಲ. ಅಷ್ಟೇ ಅಲ್ಲದೆ, ಶಿವಲಿಂಗವನ್ನು ಹೊರತುಪಡಿಸಿ, ಉಳಿದವುಗಳನ್ನು ಬೇರೆಡೆಯಿಂದ ತಂದು ಇಲ್ಲಿ ಇಟ್ಟಿರಬಹುದು. ದೇವಾಲಯ ಹಳೆಯದಾದರೂ ಇಲ್ಲಿರುವ ಮೂರ್ತಿಗಳ ಬಗ್ಗೆ ಅದೇ ಮಾತನ್ನು ನಿಖರವಾಗಿ ಹೇಳುವಂತಿಲ್ಲ. ಈ ದೇವಾಲಯದ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಲಿಲ್ಲ.

ಭಾನುವಾರ, ಮಾರ್ಚ್ 16, 2014

ಸಣ್ಣ ಕಣಿವೆಯಲ್ಲಿ ಸಣ್ಣ ಜಲಧಾರೆ


ಈ ಜಲಧಾರೆಗೆ ಉಡುಪಿ ಯೂತ್ ಹಾಸ್ಟೆಲ್ ಕಾರ್ಯಕ್ರಮವನ್ನು ಆಯೋಜಿಸಲು ನಾನು ಸೂಚಿಸಿದ ಹಿಂದೆ ನನ್ನ ಸ್ವಾರ್ಥವೂ ಅಡಗಿತ್ತು. ನಾನು ಈ ಜಲಧಾರೆಯನ್ನು ನೋಡಿರಲಿಲ್ಲ!
 

ಸುಮಾರು ೪೦ ಜನರ ನಮ್ಮ ತಂಡಕ್ಕೆ, ಉಡುಪಿ ಯೂತ್ ಹಾಸ್ಟೆಲ್ ಲೀಡರ್ ಆಗಿರುವ ಶ್ರೀ ಅಡಿಗ ಸರ್ ಅವರು, ಪಂಚಧಾನ್ಯಗಳ ’ಸಲಡ್’ ಮಾಡಿ ತಂದಿದ್ದರು! ಜಲಧಾರೆಗೆ ನಡಿಗೆ ಆರಂಭವಾಗುವ ಮೊದಲು ಅಡಿಗರು ಎಲ್ಲರಿಗೂ ಸಲಡ್ ಹಂಚಿದರು.


ತದನಂತರ ನಮ್ಮ ದೊಡ್ಡ ತಂಡ ಜಲಧಾರೆಯತ್ತ ಹೊರಟಿತು. ಚಂದ್ರ ಎಂಬವರ ಮನೆಯವರೆಗೆ ರಸ್ತೆ ಸಾಗುತ್ತದೆ. ಆದರೆ ನಡೆದು ಸಾಗುವ ಸೊಬಗೇ ಬೇರೆಯಾಗಿರುವುದರಿಂದ, ನಾವು ಅವರ ಮನೆಯವರೆಗಿನ ೨-೩ ಕಿಮಿ ನಡೆದೇ ಸಾಗಿದೆವು.


ಈ ಮನೆಯ ಬಳಿಕ ಕಾಲುದಾರಿ ಆರಂಭ. ಬಯಲಿನಲ್ಲಿ ಸಾಗಿದ ಕಾಲುದಾರಿ ಒಂದೈದು ನಿಮಿಷಗಳ ಕಾಡನ್ನು ಪ್ರವೇಶಿಸುತ್ತದೆ. ನಂತರ ಇನ್ನೊಂದು ೧೦-೧೫ ನಿಮಿಷಗಳ ಬಳಿಕ ಜಲಧಾರೆಯ ದರ್ಶನ. ಇನ್ನೊಂದು ೫ ನಿಮಿಷ ಜಾಗರೂಕರಾಗಿ ಮುಂದೆ ಸಾಗಿದರೆ ಜಲಧಾರೆಯ ಬುಡಕ್ಕೆ ದಾಂಗುಡಿಯಿಡಬಹುದು.


ಸುಂದರ ಸಣ್ಣ ಕಣಿವೆಯ ನಡುವೆ ಇರುವ ಸುಮಾರು ೩೦-೪೦ ಅಡಿ ಎತ್ತರದ ಜಲಧಾರೆಯಿದು. ಸರಿಯಾದ ಸಮಯಕ್ಕೆ ಭೇಟಿ ನೀಡಿದರೆ, ಜಲಧಾರೆಯ ಸುಂದರ ನೋಟ ಹಾಗೂ ಕಣಿವೆಯ ನೋಟ ಆಕರ್ಷಿಸದೆ ಇರದು.

 

ಶ್ರೀ ಅಡಿಗರು ಭಾಗವಹಿಸುವ ಉಡುಪಿ ಯೂತ್ ಹಾಸ್ಟೆಲ್ ಕಾರ್ಯಕ್ರಮ, ಅವರೇ ಸಿದ್ಧಪಡಿಸುವ ಸವಿಯಾದ ಶರಬತ್ತು ಇರದೇ ಕೊನೆಗೊಳ್ಳುವುದಿಲ್ಲ. ಇಲ್ಲೂ ಅದೇ ಅದ್ಭುತ ರುಚಿಯ ಶರಬತ್ತನ್ನು ಎಲ್ಲರೂ ಬಾಯಿ ಚಪ್ಪರಿಸಿ ಮತ್ತೆ ಮತ್ತೆ ಕುಡಿದರು.


ಈ ಕಾರ್ಯಕ್ರಮದಲ್ಲಿ ಪ್ರವಾಸವೇ ಹೆಚ್ಚು. ನಡಿಗೆ ಕಡಿಮೆ. ಚಾರಣ ಇಲ್ಲ. ಆದರೆ ಜಲಧಾರೆ ಸುಂದರವಾಗಿದೆ. ಸ್ಥಳ ಆಕರ್ಷಕವಾಗಿದೆ.