ಭಾನುವಾರ, ಜೂನ್ 26, 2011

ಚಾರಣ ಚಿತ್ರ - ೧೧


ಚಾರಣದ ಹಾದಿಯಲ್ಲಿ ಮಳೆಯನ್ನು ಆನಂದಿಸುತ್ತಾ...

ಭಾನುವಾರ, ಜೂನ್ 19, 2011

ಸೊಗಲ


ಬೆಳಗಾವಿ ಜಿಲ್ಲೆಯಲ್ಲಿರುವ ಈ ಸ್ಥಳಕ್ಕೆ ಸಂಸಾರ ಸಮೇತನಾಗಿ ತೆರಳಿದ್ದೆ. ಆಸುಪಾಸಿನ ಜಿಲ್ಲೆಗಳ ಎಲ್ಲಾ ಶಾಲೆಗಳ ವಾರ್ಷಿಕ ಪ್ರವಾಸದಲ್ಲಿ ಈ ಸ್ಥಳಕ್ಕೆ ಒಂದು ಪ್ರವಾಸ ಇದ್ದೇ ಇದೆ. ಇಲ್ಲೊಂದು ಸುಮಾರು ೧೨೦ ಅಡಿ ಎತ್ತರದ ಜಲಧಾರೆಯಿದೆ. ಮೇಲ್ಭಾಗಕ್ಕೆ ತೆರಳಲು ೧೫೦ ಮೆಟ್ಟಿಲುಗಳು. ಜಲಧಾರೆಯ ನೆತ್ತಿಯ ಬಳಿಯಲ್ಲೇ ಶಿವನ ಸುಮಾರು ೨೫ ಅಡಿ ಎತ್ತರದ ಪ್ರತಿಮೆ. ಅಲ್ಲೊಂದು ಶಿವನ ದೇವಸ್ಥಾನ. ಆಸು ಪಾಸಿನ ಬೆಟ್ಟಗಳ ಮೇಲೆ ವಿಹಾರಕ್ಕೆ ತೆರಳಲು ಮೆಟ್ಟಿಲುಗಳ ಮತ್ತು ಕಾಲುದಾರಿಗಳ ರಚನೆ.


ಇಲ್ಲಿ ದೊರೆತಿರುವ ಚಾಲುಕ್ಯರ ಕಾಲದ ಶಾಸನದ ಪ್ರಕಾರ ರಾವಣನ ಅನುಚರರಾದ ಮಾಲಿ ಮತ್ತು ಸುಮಾಲಿ ಎಂಬ ಶಿವಭಕ್ತರು ಈ ಸ್ಥಳದಲ್ಲಿ ಸೋಮೇಶ್ವರ ದೇವಾಲಯವನ್ನು ಪ್ರತಿಷ್ಠಾಪಿಸಿದರೆಂದು ಮತ್ತು ಆಗ ಈ ಸ್ಥಳವನ್ನು ’ಸುಮಾಲಿ’ ಎಂದು ಕರೆಯಲಾಗುತ್ತಿತ್ತು ಎಂದು ತಿಳಿಸಲಾಗಿದೆ. ನಂತರ ಸುಗೋಲ ಎಂಬ ಮುನಿಯು ಇಲ್ಲಿ ತಪಸ್ಸು ಮಾಡಿದ್ದನೆಂಬ ಕಾರಣದಿಂದ ಈ ಸ್ಥಳಕ್ಕೆ ಈಗ ’ಸೊಗಲ’ ಎಂಬ ಹೆಸರು. ಇಲ್ಲಿರುವ ಬೆಟ್ಟಗಳ ನಡುವಿನಿಂದ ಪ್ರಾಕೃತಿಕವಾಗಿ ಹರಿಯುತ್ತಿರುವ ತೊರೆಯೊಂದೇ ಇಲ್ಲಿಗೆ ನೀರಿನ ಮೂಲ. ದೇವಾಲಯದ ಬಳಿಯೇ ಈ ಜಲಧಾರೆ ಸುಮಾರು ೧೫ ಅಡಿ ಎತ್ತರದಿಂದ ಧುಮುಕಿ ನಂತರ ಸ್ವಲ್ಪ ಮುಂದಕ್ಕೆ ಹರಿದು ದೊಡ್ಡ ಜಲಧಾರೆಯಾಗಿ ೧೨೦ ಅಡಿ ಆಳಕ್ಕೆ ಬೀಳುತ್ತದೆ.


ಆದರೆ ತೊರೆಯ ಪ್ರಾಕೃತಿಕ ಹರಿವನ್ನು ಈಗ ಸಂಪೂರ್ಣವಾಗಿ ಮರೆಮಾಚಲಾಗಿದೆ. ಅಗಲವಾಗಿ ಹರಿಯುತ್ತಿದ್ದ ತೊರೆಯನ್ನು ಇಕ್ಕೆಲಗಳಲ್ಲಿ ಮಣ್ಣು ಮುಚ್ಚಿ ಸಣ್ಣ ಮೋರಿಯ ರೂಪಕ್ಕೆ ತರಲಾಗಿದೆ. ತೊರೆ ಈಗ ಮೋರಿಯಾಗಿ ಬದಲಾಗಿದೆ. ಇಷ್ಟೇ ಅಲ್ಲದೆ, ಮೋರಿಯನ್ನೂ ಮತ್ತು ಮೊದಲು ತೊರೆಯಾಗಿದ್ದ ಜಾಗವನ್ನು ಈಗ ಸಿಮೆಂಟ್ ಹಾಕಿ ಪೂರ್ಣವಾಗಿ ಮುಚ್ಚಲಾಗಿದ್ದು, ಭೂಮಿಯ ಕೆಳಗಿನಿಂದ ನೀರು ಹರಿದುಬರುವಂತೆ ಭ್ರಮೆಯನ್ನು ಸೃಷ್ಟಿಸಲಾಗಿದೆ.


ಮೊದಲ ಜಲಧಾರೆಯ ಮೇಲ್ಭಾಗಕ್ಕೆ ತೆರಳಿದರೆ ತೊರೆಯ ಜಾಡೇ ಕಾಣಬರುವುದಿಲ್ಲ. ಎಲ್ಲೆಡೆ ಕಾಂಕ್ರೀಟ್ ಹಾಕಲಾಗಿದೆ. ಈ ಕಾಂಕ್ರೀಟ್-ನ ಅಡಿಯಲ್ಲಿರುವ ಮೋರಿಯಲ್ಲೇ ನೀರು ಹರಿದುಬರುತ್ತದೆ. ನೀರು ಬೀಳುವಲ್ಲಿ ಭಕ್ತಾದಿಗಳಿಗೆ ಸ್ನಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕ ಏರ್ಪಾಟು ಮಾಡುವ ಸಲುವಾಗಿ, ಮೋರಿಯನ್ನು ಪೈಪಿನ ಮೂಲಕ ಎರಡು ಕವಲುಗಳಲ್ಲಿ ಹರಿಯುವಂತೆ ಮಾಡಲಾಗಿದೆ, ಇದ್ಯಾವುದೂ ಕಣ್ಣಿಗೆ ಕಾಣುವುದಿಲ್ಲ. ಎಲ್ಲವೂ ಕಾಂಕ್ರೀಟ್ ಮೇಲ್ಮೈಯ ಕೆಳಗೆ ಅಡಗಿಕೊಂಡಿವೆ. ಮೂಲ ಸ್ವರೂಪವನ್ನು ಮಾನವ ಯಾವ ಮಟ್ಟಕ್ಕೆ ಹಾಳು ಮಾಡುತ್ತಾನೆ ಎಂಬುದಕ್ಕೆ ಇದೊಂದು ಉದಾಹರಣೆ.


ಅಕ್ಕಪಕ್ಕದಲ್ಲಿರುವ ಬೆಟ್ಟಗಳ ರಚೆನೆ ಆಕರ್ಷಣೀಯ. ವಿಹಾರಕ್ಕೆ ಯೋಗ್ಯ ಸ್ಥಳ. ಈ ಬೆಟ್ಟಗಳ ಮೇಲೆ ಪಾಳುಬಿದ್ದ ಕೋಟೆಯೊಂದಿದ್ದು ಅದನ್ನು ಕದಂಬರಾಯನ ಕೋಟೆ ಎಂದು ಕರೆಯಲಾಗುತ್ತದೆ. ಮುಸ್ಸಂಜೆಯಾಗಿದ್ದರಿಂದ ಕೋಟೆಯನ್ನು ಹುಡುಕಲು ನಾನು ತೆರಳಲಿಲ್ಲ.


ಎರಡನೇ ಜಲಧಾರೆ ಧುಮುಕುವಲ್ಲಿ ಈಗ ವಿಶಾಲ ಕೆರೆಯ ರಚನೆಯನ್ನು ಮಾಡಲಾಗಿದೆ. ಮೊದಲು ನೀರು ಹಾಗೆ ಕೆಳಗೆ ಹರಿದುಹೋಗುತ್ತಿತ್ತು. ಪ್ರವಾಸಿಗರಿಗೆ ಜಲಧಾರೆಯ ನೀರಿಗೆ ತಲೆಕೊಡಲು ಉತ್ತಮ ತಾಣವಾಗಿತ್ತು. ಆದರೆ ಈಗ ಮೊದಲ ಜಲಧಾರೆಯಲ್ಲಿ ಸ್ನಾನಕ್ಕೆ ಏರ್ಪಾಟು ಮಾಡಿರುವುದರಿಂದ, ಈ ಆಕರ್ಷಕ ಎರಡನೇ ಜಲಧಾರೆಯ ಮುಂದೆ ವಿಶಾಲ ಕೃತಕ ಕೆರೆಯನ್ನು ಸೃಷ್ಟಿಸಲಾಗಿದೆ.


ಇಲ್ಲಿ ರಜಾದಿನಗಳಲ್ಲಿ ಯಾವಗಲೂ ಜನಜಂಗುಳಿ. ವಾರದ ದಿನಗಳಲ್ಲಿ ತೆರಳಿದರೆ ಶಾಂತ ಪರಿಸರದಲ್ಲಿ ನೆಮ್ಮದಿಯಾಗಿ ಸಮಯ ಕಳೆಯಬಹುದು.