ಜಲಧಾರೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಜಲಧಾರೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಭಾನುವಾರ, ಜುಲೈ 03, 2016

ಬೊಳ್ಮನೆ...


ಈ ಹಳ್ಳಿ ನಕ್ಸಲ್ ’ಸ್ಟ್ರಾಂಗ್ ಹೋಲ್ಡ್’. ಹಾಗಿದ್ದರೂ ೨೦೦೫ರ ಜುಲಾಯಿ ತಿಂಗಳಂದು ನಾವು ಹೊರಟದ್ದು ಇಲ್ಲೇ ಸಮೀಪದಲ್ಲಿರುವ ಜಲಧಾರೆಯೊಂದಕ್ಕೆ. ಬೆಟ್ಟ ಶ್ರೇಣಿಗಳಿಂದ ಇಳಿದು ಬರುವ ತೊರೆಯೊಂದರ ಜಾಡನ್ನು ಹಿಡಿದು ಹೊರಟ ನಮಗೆ ಸಿಕ್ಕಿದ್ದು, ಸುಮಾರು ೨೫ ಅಡಿ ಎತ್ತರವಿರುವ ಈ ಸಣ್ಣ ಜಲಪಾತ. ಸೂರ್ಯನ ಕಿರಣಗಳಿಗೂ ಆಸ್ಪದವಿಲ್ಲದ ದಟ್ಟ ಕಾಡಿನ ನಡುವಿನಲ್ಲಿರುವುದರಿಂದ ಈ ಜಲಧಾರೆ ಸುಂದರವಾಗಿದೆ. ಸುತ್ತಮುತ್ತಲಿನ ಪರಿಸರ, ಚಾರಣಗೈಯುವ ಕಠಿಣ ಹಾದಿ, ರವಿಯ ಕಿರಣಗಳಿಗೂ ಭೇಧಿಸಲಸಾಧ್ಯವಾದ ದಟ್ಟ ಕಾಡಿನಲ್ಲಿ ದಾರಿ ಮಾಡಿಕೊಂಡು, ಅಲ್ಲಲ್ಲಿ ಹೆಜ್ಜೇನಿನ ಗೂಡುಗಳು ಸಿಕ್ಕಾಗ ಎಚ್ಚರಿಕೆಯ ಹೆಜ್ಜೆಗಳನ್ನಿಟ್ಟು, ದಟ್ಟ ಕಾಡಿನಲ್ಲಿ ದಿಕ್ಕಿನ ಅರಿವಿಲ್ಲದೆ ಆಗಾಗ ದಾರಿ ತಪ್ಪಿ, ಕೊನೆಗೂ ಜಲಪಾತದ ಸನಿಹ ಬಂದಾಗ ಉಂಟಾದ ಸಂತೋಷ ವರ್ಣಿಸಲಸಾಧ್ಯ. ಚಾರಣದ ಆರಂಭದಲ್ಲಿ, ಸೊಂಟಮಟ್ಟಕ್ಕೆ ಬೆಳೆದು ನಿಂತಿರುವ ಗಿಡಗಳ ನಡುವೆ ದಾರಿ ಮಾಡಿಕೊಂಡು ಸರಿಸುಮಾರು ೪೫ ನಿಮಿಷಗಳಷ್ಟು ಏರುದಾರಿಯನ್ನು ಕ್ರಮಿಸಿದ ಬಳಿಕ ಆರಂಭವಾಗುವುದು ದಟ್ಟ ಕಾಡು. ಕಾಡು ಎಷ್ಟು ದಟ್ಟವಾಗಿದೆಯೆಂದರೆ ಪೂರ್ವಾಹ್ನ ೧೧ರ ಸಮಯವಾಗಿದ್ದರೂ, ಸಂಜೆ ೬ರಂತಹ ವಾತಾವರಣ. ಭೀಮಗಾತ್ರದ ಮರಗಳಿಗಂತೂ ಲೆಕ್ಕವೇ ಇಲ್ಲ.


 
ತಿಂಗಳ ಹಿಂದೆ ಈ ಜಲಪಾತವನ್ನು ಹುಡುಕಿ ಬಂದಿದ್ದ ನಮ್ಮ ತಂಡದ ಕೆಲ ಸದಸ್ಯರು, ಹೆಜ್ಜೇನಿನ ಗೂಡಿಗೆ ನೀಡಬೇಕಾದ ಗೌರವ ನೀಡದಿದ್ದರಿಂದ ಅವುಗಳ ದಾಳಿಯನ್ನು ಎದುರಿಸಬೇಕಾಗಿ ಬಂದಿತ್ತು. ಧರಿಸಿದ್ದ ಜಾಕೆಟ್, ಕ್ಯಾಪ್ ಇತ್ಯಾದಿಗಳನ್ನು ಅಲ್ಲೇ ಬಿಸಾಡಿ ಚೆಲ್ಲಾಪಿಲ್ಲಿಯಾಗಿ ಎಲ್ಲಾ ದಿಕ್ಕುಗಳಲ್ಲಿ ಓಡಿ ಚಾರಣವನ್ನು ಮೊಟಕುಗೊಳಿಸಿ ಹಿಂತಿರುಗಿದವರಿಗೆ, ಈಗ ತಾವು ಬಿಸುಟ ಎಲ್ಲಾ ವಸ್ತುಗಳು ಮತ್ತೆ ಸಿಕ್ಕಾಗ ಉಂಟಾದ ಸಂಭ್ರಮ ನೋಡುವಂತಿತ್ತು. ಅಲ್ಲಲ್ಲಿ ಹತ್ತಿ ಇಳಿದು, ಎದ್ದು ಬಿದ್ದು, ದೈತ್ಯ ಗಾತ್ರದ ವೃಕ್ಷಗಳನ್ನು ಅಚ್ಚರಿಯಿಂದ ವೀಕ್ಷಿಸುತ್ತಾ, ಕಾಡಿನೊಳಗೆ ಸುಮಾರು ೧೦೦ ನಿಮಿಷ ಕ್ರಮಿಸಿದ ಬಳಿಕ ಜಲಪಾತದ ದರ್ಶನ ಆಗುವುದು. ಚಾರಣಗೈದು ಅಭ್ಯಾಸವಿದ್ದವರಿಗೆ ಜಲಪಾತವನ್ನು ಹುಡುಕಿಕೊಳ್ಳುವುದು ಅಸಾಧ್ಯವೇನಲ್ಲ. ಈ ಮಳೆಗಾಲದ ತೊರೆ ಹಾಗೆ ಮುಂದಕ್ಕೆ ಸಾಗಿ ಇನ್ನೂ ಕೆಲವು ಸಣ್ಣ ದೊಡ್ಡ ಜಲಪಾತಗಳನ್ನು ಸೃಷ್ಟಿಸಿದೆ. ಆದರೆ ಈ ಪ್ರಮುಖ ಜಲಪಾತದ ಅಂದಕ್ಕೆ ಉಳಿದವು ಸಾಟಿಯಾಗಲಾರವು. ಸೂರ್ಯನ ಬೆಳಕಿಗೆ ಎಲ್ಲೂ ಆಸ್ಪದವೇ ಇರದಿದ್ದರೂ, ಸರಿಯಾಗಿ ಜಲಪಾತದ ನೆತ್ತಿಯ ಮೇಲೆ ಕಾಡು ಕರುಣೆ ತೋರಿ, ಸೂರ್ಯನ ಬೆಳಕು ತೂರಿ ಬರಲು ಅವಕಾಶ ಮಾಡಿಕೊಟ್ಟಿದ್ದು, ಇದು ಜಲಪಾತದ ಸೌಂದರ್ಯವನ್ನು ಹೆಚ್ಚಿಸಿದೆ. ಜಲಪಾತದ ಮೇಲೆ ಬಲಬದಿಗೆ ಬಂಡೆಯೊಂದು ಹೊರಚಾಚಿ ನಿಂತಿದ್ದು, ಇದರ ಕೆಳಗೆ ನಿಂತು ಜಲಪಾತದ ಸೌಂದರ್ಯವನ್ನು ಬಹಳ ಸನಿಹದಿಂದ ಆಸ್ವಾದಿಸಬಹುದು.

ಭಾನುವಾರ, ಜೂನ್ 19, 2016

ತಿಲ್ಲಾರಿ...!

 

ಅಕ್ಟೋಬರ್ ೧೩, ೨೦೦೭. ಧಾರವಾಡ ಕೋರ್ಟ್ ಬಸ್ಸು ತಂಗುದಾಣದಲ್ಲಿ ನಾನು ಬಸ್ಸಿನಿಂದ ಇಳಿದಾಗ ಸರಿಯಾಗಿ ಮುಂಜಾನೆ ೪ ಗಂಟೆಯಾಗಿತ್ತು. ಅದೇ ಸಮಯಕ್ಕೆ ವಿವೇಕ್, ಗಂಗಾಧರ್ ಕಲ್ಲೂರ್, ಡಾ|ಸಂಜೀವ್ ಕುಲಕರ್ಣಿ, ಕುಮಾರ್ ಮತ್ತು ಮಕ್ಕಳಾದ ಮಿಂಚು ಮತ್ತು ನವೀನ್ ’ತಿಲ್ಲಾರಿ’ಗೆ ಹೊರಡುವವರಿದ್ದರು. ಕಲ್ಲೂರ್ ಯಾವಾಗಲೂ ಸಮಯದ ವಿಷಯದಲ್ಲಿ ಪಕ್ಕಾ. ನಾಲ್ಕು ಅಂದರೆ ನಾಲ್ಕೇ. ಒಂದು ನಿಮಿಷ ಆಚೀಚೆ ಇಲ್ಲ. ಸಮಯಕ್ಕೆ ಸರಿಯಾಗಿ ತಲುಪುತ್ತೇನೋ ಎಂಬ ಡೌಟು ನನಗಿತ್ತು. ರಾತ್ರಿ ೨ ರಿಂದಲೇ ವಿವೇಕ್ ನನಗೆ ಕರೆ ಮಾಡುತ್ತಾ ’ಎಲ್ಲಿದ್ದೀರಿ...ಎಲ್ಲಿದ್ದೀರಿ’ ಎಂದು ವಿಚಾರಿಸುತ್ತಾ ಇದ್ದರು.


ಸರಿಯಾಗಿ ನಾಲ್ಕಕ್ಕೇ ಧಾರವಾಡದಲ್ಲಿಳಿದೆ. ಅಷ್ಟರಲ್ಲಿ ಮತ್ತೆ ವಿವೇಕ್‍ರ ಫೋನ್. ಕೋರ್ಟ್ ಸ್ಟಾಪಿನಲ್ಲಿ ಇಳಿದಿದ್ದೇನೆ ಎಂದು ಹೇಳಿದ ಕೂಡಲೇ ’ಅಲ್ಲೇ ಇರಿ. ನಾವೂ ಹೊಂಟೀವಿ, ಇನ್ನೊಂದ್ ೫ ನಿಮಿಷದೊಳಗ ಅಲ್ಲಿರ್ತೀವಿ’ ಎಂದರು. ಮುಂಜಾನೆಯ ಕೆಲಸಗಳನ್ನು ಮುಗಿಸಲು ಸಮಯವಿರಲಿಲ್ಲ. ಸಮಯಕ್ಕಿಂತಲೂ ಹೆಚ್ಚಾಗಿ ಸರಿಯಾದ ಸ್ಥಳವಿರಲಿಲ್ಲ ಎನ್ನಬಹುದು. ಆದರೆ ಹಲ್ಲನ್ನಾದರೂ ತಿಕ್ಕಿಕೊಳ್ಳಬಹುದಲ್ಲ ಎಂದು ಅಲ್ಲೇ ’ಬ್ಯಾಂಕ್ ಆಫ್ ಇಂಡಿಯಾ’ದ ಮುಂದೆ ಬ್ರಶ್ ಮಾಡಿ ಕುಡಿಯಲು ತಂದಿದ್ದ ನೀರಿನಿಂದ ತೊಳೆದುಕೊಳ್ಳಬೇಕಾದರೆ ಸಂಜೀವ್ ಕುಲಕರ್ಣಿಯವರ ’ಓಮ್ನಿ’ ಬಂದು ನಿಂತಿತು.



ಮುಂಜಾನೆ ೫.೩೦ಕ್ಕೆ ಬೆಳಗಾವಿ. ಹಳೇದೆಲ್ಲಾ ನೆನಪು ಬರತೊಡಗಿತು. ಎರಡು ವರ್ಷ ಬೆಳಗಾವಿಯಲ್ಲಿ ವ್ಯಾಸಂಗ ಮಾಡುವ ನೆವದಲ್ಲಿ ಮಜಾ ಉಡಾಯಿಸಿದ್ದು ನೆನಪಾಗತೊಡಗಿತು. ಇಲ್ಲಿ ಉಪಹಾರ ಮುಗಿಸಿ ಅಂಬೋಲಿ ದಾರಿಯಲ್ಲಿ ಓಮ್ನಿ ಓಡಿತು. ಅಂಬೋಲಿ ದಾರಿಯಲ್ಲಿ ತೆರಳುವಾಗ ೧೯೯೬ರಲ್ಲಿ ನಾವು ೨೦ ಗೆಳೆಯರು ಸೇರಿ ೧೦ ಬೈಕಿನಲ್ಲಿ ಅಂಬೋಲಿಗೆ ಹೋಗಿದ್ದೆಲ್ಲಾ ಮತ್ತೆ ಮತ್ತೆ ನೆನಪಾಗತೊಡಗಿತು.



ರಾಜ್ಯದ ಗಡಿ ದಾಟಿ ಮಹಾರಾಷ್ಟ್ರ ಪ್ರವೇಶಿಸಿದೊಡನೆ ಸಿಗುವುದು ಮಹಿಪಾಲ್ ಘಡ್ ಎಂಬ ಕೋಟೆ. ಭೀಮಸೇನ ಜೋಶಿಯ ’ಆರಂಭೀ ವಂದೀನ...ಅಯೋಧ್ಯೇಚಾ ರಾಜಾ...’ ಹಾಡು ಮಹಿಪಾಲ್ ಘಡದ ಒಳಗಿನಿಂದ ತೇಲಿಬರುತ್ತಿತ್ತು. ಈಗ ಕೋಟೆಯಲ್ಲಿ ಏನೂ ಉಳಿದಿಲ್ಲ. ಬೆಳಗಾವಿಯ ವಿಹಂಗಮ ನೋಟ ಇಲ್ಲಿಂದ ಲಭ್ಯ. ’ಘಡ್’ ಎಂಬ ಹೆಸರು ಮಾತ್ರ ಆದರೆ ಅಲ್ಲಿ ಏನೂ ಇಲ್ಲ. ಸುಂದರ ದೃಶ್ಯ ಅಸ್ವಾದಿಸಲು ಹೋಗಬಹುದಷ್ಟೇ. ಕೋಟೆಯ ಗೋಡೆಗಳ ಕುರುಹು ಒಂದೆರಡು ಕಡೆ ಕಾಣಸಿಗುತ್ತವೆ. ಎಲ್ಲ ಕಡೆ ಮನೆಗಳು ಎದ್ದಿವೆ. ಮಹಿಪಾಲ್ ಘಡ್ ಮಹಾರಾಷ್ಟ್ರದಲ್ಲಿದ್ದರೂ ಇಲ್ಲಿಗೆ ದಿನಕ್ಕೆ ಆರೇಳು ಬಾರಿ ಬರುವ ಬಸ್ಸು ಮಾತ್ರ ಕರ್ನಾಟಕದ್ದು! ಅಲ್ಲಿಂದ ಹೊರಡುವಾಗ ಜೋಶಿಯವರ ’ಪಾವಲೊ.. ಪಾವಲೊ.. ಪಾವಲೊ ಪಂಢರಿ... ವೈಕುಂಠ ಭುವನ..’ ಹಾಡು ಮುಂಜಾನೆಯ ಆ ಹಿತವಾದ ವಾತಾವರಣದಲ್ಲಿ ಬಹಳ ಇಂಪಾಗಿ ಮಹಿಪಾಲ್ ಘಡದಿಂದ ಕೇಳಿಸುತ್ತಿತ್ತು. ದಾರಿಯಲ್ಲಿ ಸಿಗುವ ದೇವಸ್ಥಾನವೊಂದರ ಸಣ್ಣ ಕೊಳದಲ್ಲಿ ಎಲ್ಲರೂ ಸ್ನಾನ ಮಾಡಿದರು.



ನಂತರ ತಿಲ್ಲಾರಿ ನದಿಗೆ ನಿರ್ಮಿಸಲಾಗಿರುವ ಅಣೆಕಟ್ಟಿನೆಡೆ ತೆರಳಿದೆವು. ನದಿ ಮಹಾರಾಷ್ಟ್ರದಲ್ಲಿದ್ದರೂ, ಅಣೆಕಟ್ಟು ಕರ್ನಾಟಕದಲ್ಲಿದೆ! ಆದರೆ ಅಣೆಕಟ್ಟನ್ನು ನೋಡಿಕೊಳ್ಳುವುದು ಮಾತ್ರ ಮಹಾರಾಷ್ಟ್ರ ಸರಕಾರ! ಅಲ್ಲಿನ ಜನರಿಂದ ನಮಗೆ ತಿಳಿದ ವಿಷಯವಿದು. ’ಹೋ ಸಾವ್ಕಾರ್. ಡ್ಯಾಮ್ ತುಮ್ಚಾ ಕರ್ನಾಟಕ್ ಮದೀ ಆಹೆ, ಪಣ್ ಅಮ್ಚಾ ಮಹಾರಾಷ್ಟ್ರಾ ಸರ್ಕಾರ್ಚಾ ಆಧೀನ್ ಮದೀ ಅಹೆ’ ಎಂದು ಅಲ್ಲಿದ್ದ ಇಬ್ಬರು ಸ್ಥಳೀಯರು ತಿಳಿಸಿದಾಗ ನಾನು ಕಕ್ಕಾಬಿಕ್ಕಿ. ಇದು ಹೇಗೆ ಸಾಧ್ಯ ಎಂದು ಕಲ್ಲೂರ ಅವರಲ್ಲಿ ಕೇಳಿದಾಗ ಅವರೂ ಆ ಸ್ಥಳೀಯರು ಹೇಳಿದ ಮಾತಿಗೆ ಸಮ್ಮತಿ ಸೂಚಿಸಿದರು. ಈ ಮಾತನ್ನು ನಾನು ಈಗಲೂ ನಂಬುತ್ತಿಲ್ಲ.


ಇಲ್ಲಿ ಕರ್ನಾಟಕಕ್ಕೆ ಸೇರಿದ ಕೆಲವೊಂದು ಭಾಗಗಳಿಗೆ ರಸ್ತೆ ಇರುವುದು ಮಹಾರಾಷ್ಟ್ರದಲ್ಲಿ! ಮಹಾರಾಷ್ಟ್ರದೊಳಗೇ ನಮ್ಮ ರಾಜ್ಯದ ನೆಲ ತೂರಿಕೊಂಡಿದೆ. ಹಾಗಿರುವಲ್ಲೆಲ್ಲಾ ನಮ್ಮ ರಾಜ್ಯ ಸರಕಾರ ಬೇಲಿ ಹಾಕಿ ಕಾಯ್ದುಕೊಂಡಿದೆ. ತಿಲ್ಲಾರಿ ಅಣೆಕಟ್ಟಿನಿಂದ ಹೊರಗೆ ಹರಿಯುವ ನೀರು ಜಲಧಾರೆಯನ್ನೊಂದನ್ನು ನಿರ್ಮಿಸಿದೆ. ಇದಕ್ಕೆ ತಿಲ್ಲಾರಿ ಜಲಧಾರೆ ಎಂದು ಹೆಸರು.



ತಿಲ್ಲಾರಿ ಅಣೆಕಟ್ಟಿನಿಂದ ಸಮೀಪವೇ ಇದೆ ಸುಮಾರು ೪೦ ಅಡಿ ಎತ್ತರವಿರುವ ಸುಂದರ ತಿಲ್ಲಾರಿ ಜಲಧಾರೆ. ಜಲಧಾರೆಯ ಮುಂದಿರುವ ವಿಶಾಲ ಕೊಳದಿಂದ ಈ ಸ್ಥಳದ ಸೌಂದರ್ಯ ಇಮ್ಮಡಿಯಾಗಿದೆ ಎಂದು ಹೇಳಬಹುದು. ಜಲಧಾರೆಯ ನೀರು ಸೂರ್ಯನ ಮುಂಜಾನೆಯ ಕಿರಣಗಳಲ್ಲಿ ನೃತ್ಯ ಮಾಡುವಂತೆ ಹೊಳೆಯುತ್ತಿತ್ತು. ಈಜಾಡಲು ಬಹಳ ಪ್ರಶಸ್ತವಾದ ಸ್ಥಳ. ಒಂದೇ ತಾಸಿಗೆ ಮೊದಲು ಮಹಿಪಾಲ್ ಘಡದ ದೇವಸ್ಥಾನದ ಕೊಳದಲ್ಲಿ ಸ್ನಾನ ಮಾಡಿದರೂ, ಈ ಜಲಧಾರೆಯ ಅಂದಕ್ಕೆ ಮನಸೋತು ಎಲ್ಲರೂ ಮತ್ತೆ ನೀರಿಗಿಳಿದರು. ವಿಶಾಲ ಕೊಳಕ್ಕೆ ಹೊಳೆಯುತ್ತಾ ಧುಮುಕುತ್ತಿರುವ ಜಲಧಾರೆ. ಈ ಜಲರಾಶಿಯನ್ನು ಸುತ್ತುವರಿದ ಮರಗಿಡಗಳು. ನಾನು ಕಂಡ ಸುಂದರ ಜಲಧಾರೆಗಳಲ್ಲಿ ಇದೂ ಒಂದು.



ಅಲ್ಲಿಂದ ಸುಮಾರು ೧೦-೧೨ ಕಿಮಿ ದೂರವಿರುವ ಖಾಸಗಿ ಸ್ಥಳವೊಂದಕ್ಕೆ ಭೇಟಿ ನೀಡಿದೆವು. ಅಕ್ಕ ಪಕ್ಕದಲ್ಲಿ ೫೦ ಮೀಟರ್ ನಷ್ಟು ಅಂತರದಲ್ಲಿ ಸರಿಸುಮಾರು ೧೦೦ ಅಡಿಯಷ್ಟು ಆಳಕ್ಕೆ ಅವಳಿ ಜಲಧಾರೆಗಳು ಧುಮುಕಿ ಹಾಗೆ ಕೆಳಗೆ ಹರಿದು ತಿಲ್ಲಾರಿ ನದಿಯನ್ನು ಸೇರಿಕೊಳ್ಳುತ್ತವೆ. ಇಲ್ಲಿಂದ ತಿಲ್ಲಾರಿ ಕಣಿವೆಯ ಅದ್ಭುತ ದೃಶ್ಯ ಲಭ್ಯ. ದೂರದಲ್ಲೆರಡು ಜಲಧಾರೆಗಳು ಗೋಚರಿಸುತ್ತಿತ್ತು. ಕಲ್ಲೂರ್‌ರವರ ಬೈನಾಕ್ಯುಲರ್‌ನಲ್ಲಿ ವೀಕ್ಷಿಸಿದಾಗ ಅದ್ಭುತವಾಗಿ ಕಂಡವು ಈ ಜಲಧಾರೆಗಳು. ’ಅಲ್ಲಿಗೂ ಹೋಗೋಣ್ರೀ’ ಎಂದು ಅದಾಗಲೇ ಅಲ್ಲಿಗೆ ಭೇಟಿ ನೀಡಿದ್ದ ಕಲ್ಲೂರ್ ಹೇಳಿದಾಗ ಸುಮ್ಮನೆ ತಲೆಯಾಡಿಸಿದೆ.



ಅಲ್ಲಿಂದ ಮುಂದೆ ನಾವು ತೆರಳಿದ್ದು ತಿಲ್ಲಾರಿನಗರಕ್ಕೆ. ಇದು ಮಹಾರಾಷ್ಟ್ರದಲ್ಲಿದೆ. ತಿಲ್ಲಾರಿ ಅಣೆಕಟ್ಟು ನಿರ್ಮಿಸುವಾಗ ಉತ್ತುಂಗದಲ್ಲಿದ್ದ ತಿಲ್ಲಾರಿನಗರ ಈಗ ಪಾಳುಬಿದ್ದಿದೆ. ಸಾವೆಹಕ್ಲು ಮತ್ತು ಚಕ್ರಾ ಅಣೆಕಟ್ಟುಗಳನ್ನು ನೋಡಲು ತೆರಳುವಾಗ ನೋಡಿದ ’ಚಕ್ರಾನಗರ’ದ ನೆನಪಾಗತೊಡಗಿತು.


ಹಾಳಾದ ಸರಕಾರಿ ಕಟ್ಟಡಗಳು, ಹಾಳಾದ ಸರಕಾರಿ ವಾಹನಗಳು, ಮುರಿದುಬಿದ್ದ ಕುಸಿಯುತ್ತಿರುವ ಮನೆಗಳು, ಕುರುಚಲು ಸಸ್ಯಗಳಿಂದ ತುಂಬಿಹೋಗಿದ್ದ ಉದ್ಯಾನವನ. ಸರಕಾರಿ ವಾಹನಗಳಂತೂ ಅವುಗಳನ್ನು ಕೊನೆಯ ಬಾರಿ ಓಡಿಸಿದ ನಂತರ ತಂದು ಎಲ್ಲಿ ಹೇಗೆ ನಿಲ್ಲಿಸಲಾಗಿತ್ತೋ ಹಾಗೇ ನಿಂತುಕೊಂಡು ಮಳೆ ಗಾಳಿಗೆ ಸಂಪೂರ್ಣವಾಗಿ ಹಾಳಾಗಿಹೋಗಿವೆ.


ತಿಲ್ಲಾರಿನಗರದಲ್ಲಿ ಈಗಿರುವುದು ಒಂದು ವೃತ್ತ. ಒಂದು ರಸ್ತೆ ಪಟ್ನಿ ಕ್ರಾಸ್ ಮೂಲಕ ಬೆಳಗಾವಿಗೆ, ಇನ್ನೊಂದು ರಸ್ತೆ ಕೊಲ್ಲಾಪುರಕ್ಕೆ, ೩ನೇ ರಸ್ತೆ ತಿಲ್ಲಾರಿ ಅಣೆಕಟ್ಟಿಗೆ ಮತ್ತು ನಾಲ್ಕನೇ ರಸ್ತೆ ಗೋವಾಕ್ಕೆ.


ಗೋವಾದ ರಸ್ತೆಯಲ್ಲಿ ಒಂದು ಕಿಮಿ ಚಲಿಸಿದರೆ ಕಾಲುವೆಯೊಂದು ಸಿಗುತ್ತದೆ. ಈ ಕಾಲುವೆಯಲ್ಲಿ ತಿಲ್ಲಾರಿ ಅಣೆಕಟ್ಟಿನಿಂದ ನೀರು ಹರಿದು ಬರುತ್ತದೆ. ಇಲ್ಲಿ ಮತ್ತೊಮ್ಮೆ ಜಲಕ್ರೀಡೆ. ಕಾಲುವೆಯಲ್ಲಿ ಜಿಗಿಯುವುದು ಮತ್ತು ಶವಾಸನ, ಆ ಅಸನ, ಈ ಆಸನ ಎಂದು ಮಲ್ಕೊಂಡು ಬಿಟ್ಟರೆ ನೀರಿನ ಹರಿವು ದೇಹವನ್ನು ತಂತಾನೇ ಮುಂದಕ್ಕೆ ಒಯ್ಯುತ್ತಿತ್ತು. ಕಾಲುವೆಯಿಂದ ಮೇಲೆ ಬರುವುದು, ಮತ್ತೆ ಒಂದು ಕಿಮಿನಷ್ಟು ದೂರ ನಡೆದುಕೊಂಡು ಹೋಗಿ, ಪುನ: ಕಾಲುವೆಯಲ್ಲಿ ಜಿಗಿಯುವುದು, ನೀರಿನ ಹರಿವಿನೊಂದಿಗೆ ಸಲೀಸಾಗಿ ಬರುವುದು. ನಾಲ್ಕೈದು ಬಾರಿ ಈ ಕ್ರಿಯೆಯನ್ನು ಪುನರಾವರ್ತಿಸಲಾಯಿತು. 


ಗೋವಾ ರಸ್ತೆಯಲ್ಲಿ ೮ ಕಿಮಿ ಚಲಿಸಿದರೆ ದೋಣಗಾಂವ ಘಟ್ಟ ಸಿಗುವುದು. ಬಹಳ ಕಡಿದಾದ ಘಟ್ಟ. ಈ ದಾರಿಯಿಂದ ಚಲಿಸುವ ವಾಹನಗಳಿಗೆ ವಿಮೆ ಅನ್ವಯ ಆಗುವುದಿಲ್ಲ ಎಂಬ ಮಾತೇ ಈ ಘಟ್ಟದ ಅಪಾಯವನ್ನು ಎತ್ತಿ ಹೇಳುತ್ತದೆ. ಅಕ್ಟೋಬರ್ ೨ನೇ ವಾರದ ಮೊದಲು ಈ ಜಾಗಕ್ಕೆ ತೆರಳಿದರೆ ನೆಲದ ತುಂಬಾ ಹಳದಿ ಹೂವಿನ ಹಾಸಿಗೆ.


ಅಲ್ಲಿಂದ ನಂತರ ಕಾಳಿನಂದಿ ಎಂಬ ಹಳ್ಳಿಗೆ ತೆರಳಿದೆವು. ಈ ಊರಿಗೆ ಸಮೀಪವಿರುವ ಬೆಟ್ಟದ ಮೇಲೆ ಶಿವಾಜಿ ಕಟ್ಟಿಸಿದ ಕೋಟೆಯೊಂದಿದೆ. ಈ ಕೋಟೆಗೆ ಕಾಳಿನಂದಿಘಡ್ ಎನ್ನುತ್ತಾರೆ. ಇಲ್ಲಿ ಚಾರಣ ಆರಂಭಿಸಿದಾಗಲೇ ಸಂಜೆ ನಾಲ್ಕರ ಸಮಯ. ಕೇವಲ ೪೫ ನಿಮಿಷದ ಚಾರಣ. ದಾರಿ ಬಹಳ ಸುಂದರವಾಗಿತ್ತು. ಕೋಟೆಯಿಂದ ೩೬೦ ಕೋನದ ಅದ್ಭುತ ದೃಶ್ಯ. ಮತ್ತೆ ಕೆಳಗೆ ಹಳ್ಳಿ ತಲುಪಿದಾಗ ಸಮಯ ೬.೩೦. ಅಲ್ಲಿಂದ ನೇರವಾಗಿ ಧಾರವಾಡಕ್ಕೆ ಓಡಿತು ಓಮ್ನಿ.

ಗುರುವಾರ, ನವೆಂಬರ್ 12, 2015

ಎರಡು ಜಲಧಾರೆಗಳು...


೨೦೧೦ರ ಸೆಪ್ಟೆಂಬರ್ ತಿಂಗಳು. ಗಣೇಶ ಚತುರ್ಥಿಯ ಮರುದಿನ ಗೆಳೆಯರಾದ ರಾಕೇಶ್ ಹೊಳ್ಳ ಹಾಗೂ ಸುಧೀರ್ ಕುಮಾರ್ ಜೊತೆಗೆ ಎರಡು ಜಲಧಾರೆಗಳನ್ನು ನೋಡಿಬರಲು ಹೊರಟೆ.


ಈ ಎರಡೂ ಜಲಧಾರೆಗಳಿಗೆ ಹೆಚ್ಚೇನು ನಡೆಯಬೇಕಾಗಿಲ್ಲ. ೨೦-೩೦ ನಿಮಿಷಗಳಷ್ಟು ನಡೆದರಾಯಿತು.


ಈ ಹಳ್ಳಿಯ ಆಸುಪಾಸಿನಲ್ಲಿಯೇ ಸುಮಾರು ೧೦ಕ್ಕೂ ಅಧಿಕ ಜಲಧಾರೆಗಳಿವೆ. ಹೆಚ್ಚಿನವುದಕ್ಕೆ ಚಾರಣ ಮಾಡಬೇಕಾಗುತ್ತದೆ. ನಮ್ಮ ಅಂದಿನ ಭೇಟಿ ಈ ಎರಡು ಜಲಧಾರೆಗಳಿಗೆ ಸೀಮಿತವಾಗಿತ್ತು.


ಮೊದಲ ಜಲಧಾರೆಗೆ ಭೇಟಿ ನೀಡಲು ಖಾಸಗಿ ತೋಟವೊಂದನ್ನು ದಾಟಿ ಹೋಗಬೇಕಾಗುತ್ತದೆ. ಸದ್ದಿಲ್ಲದೆ ಹೋದರೆ ಮನೆಯವರಿಗೆ ಗೊತ್ತೇ ಆಗುವುದಿಲ್ಲ. ಸದ್ದು ಮಾಡಿ, ಗಲಾಟೆ ಮಾಡುತ್ತಾ ಹೋದರೆ ಅವರು ಆಕ್ಷೇಪಿಸುತ್ತಾರೆ. ಅದು ಅಂದಿನ ಮಾತಾಯಿತು. ೨೦೧೪ ಜುಲಾಯಿ ತಿಂಗಳಲ್ಲಿ ತೆರಳಿದಾಗ, ದಾರಿ ಬದಲಾಗಿತ್ತು. ಈಗ ಜಲಧಾರೆಯ ಸಮೀಪದ ತನಕ ರಸ್ತೆಯಿದ್ದು, ನಂತರ ಒಂದೈದು ನಿಮಿಷ ಅದೇ ಹಳೆ ದಾರಿಯಲ್ಲಿ ನಡೆದರೆ, ತೋಟ ದಾಟಿ ಹಳ್ಳದ ಸಮೀಪ ತಲುಪಬಹುದು. ಆ ಮನೆಯ ಸಮೀಪದಿಂದ ಹಾದುಹೋಗುವ ಪ್ರಮೇಯವೇ ಇಲ್ಲ.


ತೋಟವನ್ನು ದಾಟಿದ ಬಳಿಕ, ಸಣ್ಣ ಕಾಲು ಸೇತುವೆಯನ್ನು ದಾಟಿ ಹಳ್ಳದ ಬದಿಯಲ್ಲೇ ಸ್ವಲ್ಪ ಮುಂದೆ ನಡೆದರೆ, ದಾರಿ ಜಲಧಾರೆಯ ಮೇಲ್ಭಾಗಕ್ಕೆ ಬಂದು ತಲುಪುತ್ತದೆ. ಹಾಗೇ ನಿಧಾನವಾಗಿ ಕೆಳಗಿಳಿದು ಹೋದರೆ ಜಲಧಾರೆಯ ಬುಡಕ್ಕೆ ತಲುಪಬಹುದು.


ಈಗ ಮೂರ್ನಾಲ್ಕು ಕವಲುಗಳಲ್ಲಿ ಧುಮುಕುತ್ತಿದ್ದ ಜಲಧಾರೆ, ಮಳೆಗಾಲದಲ್ಲಿ ಬಂಡೆಯುದ್ದಕ್ಕೂ ಒಂದೇ ಕವಲಿನ ರೂಪ ತಳೆದಿರುತ್ತದೆ. ಸುಮಾರು ೨೫ ಅಡಿ ಉದ್ದ ಮತ್ತು ೫೦ ಅಡಿ ಅಗಲವಿರುವ ಜಲಧಾರೆ.


ಹಳ್ಳಗುಂಟ ಇನ್ನೂ ಸ್ವಲ್ಪ ಮುನ್ನಡೆದರೆ, ಅಲ್ಲಿ ಮುಂದೆ ಇನ್ನಷ್ಟು ಸುಂದರ ದೃಶ್ಯಗಳನ್ನು ಕಾಣಬಹುದು.


ಹಳ್ಳ ಇನ್ನಷ್ಟು ಕೆಳಕ್ಕೆ ಧುಮುಕಿ ಅಲ್ಲಿ ಒಂದು ಸುಂದರ ಗುಂಡಿಯನ್ನು ನಿರ್ಮಿಸಿದೆ. ನೀರಿನ ಹರಿವು ಕಡಿಮೆಯಾದಾಗ ಇಲ್ಲಿಗೆ ಸಂದರ್ಶಿಸುವವರು ಅಲ್ಲಿ ತನಕ ಇಳಿದು ಆ ಗುಂಡಿಯಲ್ಲಿ ಜಲಕ್ರೀಡೆಯಾಡುತ್ತಾರೆ.


ಅಂದಿನ ನಮ್ಮ ಎರಡನೇ ಜಲಧಾರೆ ಸಾಧಾರಣವಾಗಿರುವಂಥದ್ದು. ಇದು ಸುಮಾರು ೩೦ ಅಡಿ ಎತ್ತರವಿದ್ದರೂ ನೇರವಾಗಿ ಧುಮುಕುವುದಿಲ್ಲ.


ಪ್ರಮುಖ ರಸ್ತೆಯ ಸಮೀಪವೇ ಇರುವುದರಿಂದ ಇಲ್ಲಿಗೆ ಆಸುಪಾಸಿನ ಊರಿನವರು ಬರುತ್ತಿರುತ್ತಾರೆ.


ರಸ್ತೆಯಲ್ಲಿ ವಾಹನ ನಿಲ್ಲಿಸಿ ಹತ್ತು ನಿಮಿಷ ನಡೆದರೆ ಈ ಸ್ಥಳವನ್ನು ತಲುಪಬಹುದು. ಯಾವುದೇ ಮಾರ್ಗಸೂಚಿ ಇಲ್ಲದಿರುವುದರಿಂದ ಪ್ರವಾಸಿಗರು ಯಾರೂ ಇತ್ತ ಸುಳಿಯುವುದಿಲ್ಲ.

ಭಾನುವಾರ, ಅಕ್ಟೋಬರ್ 25, 2015

ಸಿದ್ಧೇಶ್ವರ - ಮಳೆ - ಜಲಧಾರೆ


ಅದು ಅಗಸ್ಟ್ ತಿಂಗಳು, ೨೦೧೩. ಮಳೆಯಲ್ಲೇ ಚಾರಣ ಮಾಡುವ ಇರಾದೆ ಬಹಳ ದಿನಗಳಿಂದ ಇದ್ದರೂ, ನಾವು ಚಾರಣ ಮಾಡುವಾಗ ಎಡೆಬಿಡದೆ ಮಳೆ ಸುರಿಯಬೇಕಲ್ಲವೆ? ಆದರೆ ಈ ಚಾರಣದಲ್ಲಿ ಮಳೆ ನಮ್ಮ ಬೆನ್ನು ಬಿಡಲೇ ಇಲ್ಲ. ಮೂರು ಸಲ ಐದು ಹತ್ತು ನಿಮಿಷದ ಬಿಡುವು ಪಡೆದ ಮಳೆ ದಿನವಿಡೀ ಎಡೆಬಿಡದೆ ಸುರಿಯುತ್ತಿತ್ತು. ಅದು ಸಾಧಾರಣ ಮಳೆಯಾಗಿರಲಿಲ್ಲ. ಭರ್ಜರಿ ಮಳೆಯಾಗಿತ್ತು. ಜೊತೆಗೆ ಚಳಿಗಾಳಿಯ ಲೇಪನ. ಮೂರು ತಾಸಿನ ಚಾರಣದ ಬಳಿಕ ನಾವೆಲ್ಲಾ ತೊಯ್ದು ಗಡಗಡನೆ ನಡುಗುತ್ತಿದ್ದವು.


ಅಂದಿನ ಚಾರಣದಲ್ಲಿ ಮೊದಲ ಗುರಿ ಸಿದ್ಧೇಶ್ವರ ದೇವಸ್ಥಾನ. ಕರ್ನಾಟಕದ ತುತ್ತತುದಿ ಎಂದು ಈ ಸ್ಥಳವನ್ನು ನಕ್ಷೆಯಲ್ಲಿ ಗುರುತಿಸಲಾಗಿದೆ. ಆದರೆ ನನಗೆ ಈ ವಿಷಯದಲ್ಲಿ ಸ್ವಲ್ಪ ಸಂದೇಹವಿದೆ. ನನ್ನ ಪ್ರಕಾರ ಆ ಶ್ರೇಯ ಮುಳ್ಳಯ್ಯನಗಿರಿಗೆ ಸಲ್ಲುತ್ತದೆ. ಬಲ್ಲವರು ತಿಳಿಸಿದರೆ ಒಳ್ಳೆಯದು.


ಬೆಟ್ಟದ ತುದಿಯಲ್ಲಿ ನೆಲೆಗೊಂಡಿರುವ ಸಿದ್ಧೇಶ್ವರನ ಸುತ್ತಮುತ್ತಲಿನ ಪರಿಸರ ಸುಂದರವಾಗಿದೆ. ನಾವು ಸಿದ್ಧೇಶ್ವರ ದೇವಸ್ಥಾನ ಸಮೀಪಿಸಿದಂತೆ ಮಳೆ ತನ್ನ ಮೊದಲ ಬಿಡುವು ಪಡೆದಿತ್ತು. ಮಂಜು ಪಸರಿಸಿದ್ದ ವಾತಾವರಣದಲ್ಲಿ ಸುಮಾರು ಸಮಯ ಕಳೆದೆವು. ವಾತಾವರಣ ಎಷ್ಟು ಹಿತವಾಗಿತ್ತೆಂದರೆ ಅಲ್ಲಿಂದ ಕದಲಲು ಮನಸಾಗುತ್ತಿರಲಿಲ್ಲ.


ನಂತರ ಹಾಗೇ ಕಾಡಿನಲ್ಲಿ ಮುಂದೆ ಸಾಗಿದೆವು. ಮತ್ತೆ ಮಳೆ ತನ್ನ ಆರ್ಭಟ ಮುಂದುವರೆಸಿತು. ಕಾಡಿನ ನಡುವೆ ಸದ್ದುಮಾಡುತ್ತಾ ತೊರೆಯೊಂದು ಹರಿದು ಬರುತ್ತಿತ್ತು.


ಈ ತೊರೆಗೆ ಅಲ್ಲೊಂದು ಒಡ್ಡು ನಿರ್ಮಿಸಿ ನೀರನ್ನು ತಡೆಹಿಡಿಯಲಾಗಿತ್ತು. ಅಲ್ಲೊಂದಷ್ಟು ಸಮಯ ಕಳೆದೆವು.


ನಂತರ ಮುಂದೆ ಸಾಗಿದ ಚಾರಣ ಸುಂದರ ಸ್ಥಳಗಳ ಮೂಲಕ ಹಾದುಹೋದರೂ, ಮಳೆ ನಮ್ಮ ಕ್ಯಾಮರಾಗಳನ್ನು ಹೊರಗೆ ತೆಗೆಯಲು ಬಿಡಲೇ ಇಲ್ಲ. ಒಂದೆಡೆ ವಿಶಾಲವಾದ ಬಯಲು ಪ್ರದೇಶದ ಮೂಲಕ ಹಾದುಹೋದೆವು. ಇಲ್ಲಿ ಮಳೆಯ ನಿಜವಾದ ಶಕ್ತಿ ಮತ್ತು ತಾಕತ್ತಿನ ಬಗ್ಗೆ ನಮಗೆ ಅರಿವಾಯಿತು. ಒಂದು ಹೆಜ್ಜೆ ಇಡಲೂ ಪರದಾಡಬೇಕಾಯಿತು. ಹತ್ತಡಿ ಮುಂದೆ ಏನಿದೆ ಎಂದು ಕಾಣುತ್ತಿರಲಿಲ್ಲ. ಬಾಣದಂತೆ ಮಳೆಯ ದೊಡ್ಡ ಹನಿಗಳು ನಮ್ಮನ್ನು ಎಲ್ಲೆಂದರಂತೆ ಚುಚ್ಚುತ್ತಿದ್ದವು. ಅಂದು ಆಕಾಶವೇ ಬಾಣಭರಿತ ಬತ್ತಳಿಕೆಯಾಗಿತ್ತು. ಆ ಬಯಲು ಪ್ರದೇಶ ದಾಟಲು ನಮಗೆ ೨೦ ನಿಮಿಷಗಳು ಬೇಕಾದವು. ಮತ್ತೆ ಕಾಡನ್ನು ಹೊಕ್ಕಾಗ ನಿಟ್ಟುಸಿರುಬಿಟ್ಟೆವು.


ನಮ್ಮಲ್ಲಿ ಯಾರಿಗೂ ಅಂತಹ ಅನುಭವ ಆಗಿರಲಿಲ್ಲ. ಬಿರುಬಿಸಿಲಿನಲ್ಲಿ ನಡೆದು ದಣಿದಂತೆ, ಆ ಬಯಲುಪ್ರದೇಶ ದಾಟುವಾಗ ದಣಿದಿದ್ದೆವು. ಕಾಡು ಮತ್ತೆ ಆರಂಭವಾದಲ್ಲಿ, ಮಳೆ ಆ ಬಯಲುಪ್ರದೇಶವನ್ನು ಚಿಂದಿ ಮಾಡುವುದನ್ನು ನೋಡುತ್ತಾ ಒಂದೈದು ನಿಮಿಷ ವಿಶ್ರಮಿಸಿದೆವು.


ತದನಂತರ ಬೆಟ್ಟವನ್ನು ಇಳಿದು ಒಂದು ಊರನ್ನು ಹೊಕ್ಕೆವು. ಊರನ್ನು ದಾಟಿ, ಊರಿನ ಹೊರವಲಯದ ಮೂಲಕ ಹಾದುಹೋಗುವಾಗ ಅಲ್ಲಿ ಮತ್ತೆ ಸುಂದರ ದೃಶ್ಯಾವಳಿ. ಆದರೆ ಮಳೆ ಮತ್ತೆ ನಮಗೆ ಚಿತ್ರಗಳನ್ನು ತೆಗೆಯಲು ಅವಕಾಶ ನೀಡಲೇ ಇಲ್ಲ.


ಸುಮಾರು ದೂರ ಕ್ರಮಿಸಿದ ಬಳಿಕ ಕಣಿವೆಯೊಂದರ ಅಂಚಿಗೆ ಬಂದೆವು. ಬಲಭಾಗದಲ್ಲಿ ಜಲಧಾರೆ ನಿರ್ಮಿಸುವ ಹಳ್ಳವು ಧುಮುಕುತ್ತಿತ್ತು. ಮರ, ಗಿಡ, ಬೇರು ಇತ್ಯಾದಿಗಳನ್ನು ಹಿಡಿದು ಕೆಳಗಿಳಿಯಲಾರಂಭಿಸಿದೆವು. ಮಳೆಯ ಇರುವಿಕೆ, ಕೆಳಗಿಳಿಯುವುದನ್ನು ಇನ್ನಷ್ಟು ತ್ರಾಸದಾಯಕವನ್ನಾಗಿ ಮಾಡಿತ್ತು. ಸುಮಾರು ಇಪ್ಪತ್ತು ನಿಮಿಷಗಳ ಬಳಿಕ ಮತ್ತದೇ ಹಳ್ಳ ಎದುರಾಯಿತು. ಹಳ್ಳವನ್ನು ದಾಟಿ ಆ ದಟ್ಟ ಕಾಡಿನ ನಡುವೆ ನಡೆದು ಜಲಧಾರೆಯ ಬುಡಕ್ಕೆ ತಲುಪಿದೆವು.


ಸುಮಾರು ೪೦ ಅಡಿ ಎತ್ತರವಿರುವ ಜಲಧಾರೆ ಎರಡು ಕವಲುಗಳಲ್ಲಿ ಧುಮುಕುತ್ತಿತ್ತು. ಒಂದು ಕವಲು ರೌದ್ರವಾಗಿದ್ದರೆ ಇನ್ನೊಂದು ಸೌಮ್ಯವಾಗಿತ್ತು.


ಜಲಧಾರೆಯ ತಳದಲ್ಲಿ ಹೆಚ್ಚು ಸ್ಥಳವಿಲ್ಲ. ಆದರೆ ಕಾಡಿನ ಪ್ರಾಕೃತಿಕ ಛಾವಣಿ ನಮಗೆ ಮಳೆಯಿಂದ ಸುಮಾರಾಗಿ ರಕ್ಷಣೆಯನ್ನು ನೀಡಿತ್ತು. ಮುಖ್ಯವಾಗಿ ಚಿತ್ರಗಳನ್ನು ತೆಗೆಯಲು ನಮಗೆ ಸ್ವಲ್ಪ ಆಸ್ಪದ ನೀಡಿತ್ತು.


ನೆಲಕ್ಕಪಳಿಸಿದ ಕೂಡಲೇ ಹಳ್ಳವು ಎಡಕ್ಕೆ ತಿರುವು ಪಡೆದು ನಂತರ ಮತ್ತೆ ಬಲಕ್ಕೆ ತಿರುವು ಪಡೆದು ಹಾಗೇ ಕಾಡಿನಲ್ಲಿ ಮುಂದಕ್ಕೆ ಸಾಗುತ್ತದೆ.


ಕಣಿವೆಯನ್ನೇರಿ ಹಳ್ಳಿಯ ಹೊರವಲಯ ಪ್ರವೇಶಿಸುವಷ್ಟರಲ್ಲಿ ಮಳೆ ಸಂಪೂರ್ಣವಾಗಿ ನಿಂತುಬಿಟ್ಟಿತು. ಜಲಧಾರೆಯೆಡೆ ಸಾಗುವಾಗ ಮಳೆಯ ಕಾರಣ ಚಿತ್ರಗಳನ್ನು ತೆಗೆಯಲಾಗದ ನಮಗೆ ಈಗ ಚಿತ್ರಗಳನ್ನು ತೆಗೆಯಲು ಫುಲ್ ಟೈಮ್. ಮಳೆ ನಿಂತ ಕೂಡಲೇ ಇರುವ ವಾತಾವರಣವೇ ವಿಶಿಷ್ಟವಾದದ್ದು. ಕೆಲವು ಚಿತ್ರಗಳನ್ನು ತೆಗೆದು ಮುನ್ನಡೆದೆವು.


ನಮ್ಮ ವಾಹನ ಇರುವಲ್ಲಿ ತಲುಪಿದಾಗ ಚಾರಣ ಆರಂಭಿಸಿ ಮೂರುವರೆ ತಾಸುಗಳಾಗಿದ್ದವು. ಅಲ್ಲಿ ರಸ್ತೆಯ ಬದಿಯಲ್ಲಿದ್ದ ದೇವಾಲಯದ ಆವರಣದಲ್ಲಿ ಉದರ ಪೋಷಣೆ ಮುಗಿಸಿ ಹಿಂತಿರುಗಿದೆವು.