ಶುಕ್ರವಾರ, ಜನವರಿ 31, 2020

ನಾಗೇಶ್ವರ ದೇವಾಲಯ - ಲಕ್ಕುಂಡಿ


ನಾಗೇಶ್ವರ ದೇವಾಲಯವು ಎರಡು ಕಂಬಗಳ ಹೊರಚಾಚು ಮುಖಮಂಟಪ, ನವರಂಗ, ತೆರೆದ ಅಂತರಾಳ ಹಾಗೂ ಗರ್ಭಗುಡಿಯನ್ನು ಹೊಂದಿದೆ. ಮುಖಮಂಟಪದ ಇಳಿಜಾರಿನ ಮಾಡಿನ ಸ್ವಲ್ಪ ಭಾಗ ಮಾತ್ರ ಉಳಿದಿದೆ. ಎರಡು ಕಂಬಗಳಲ್ಲೂ ಉತ್ತಮ ಅಲಂಕಾರಿಕಾ ಕೆತ್ತನೆಗಳಿವೆ.


ದೇವಲಾಯದ ದ್ವಾರವು ನಾಲ್ಕು ಅಲಂಕಾರರಹಿತ ತೋಳುಗಳನ್ನು ಹೊಂದಿದೆ. ನವರಂಗದಲ್ಲಿರುವ ನಾಲ್ಕು ಕಂಬಗಳು ಆಕರ್ಷಕವಾಗಿವೆ.


ಗರ್ಭಗುಡಿಯ ದ್ವಾರವು ಪಂಚಶಾಖೆಗಳನ್ನು ಹೊಂದಿದೆ. ಎಲ್ಲಾ ಶಾಖೆಗಳಲ್ಲೂ ಸುಂದರ ಅಲಂಕಾರವನ್ನು ಕಾಣಬಹುದು.


ಗರ್ಭಗುಡಿಯು ಪಾಣಿಪೀಠದ ಮೇಲೆ ಶಿವಲಿಂಗವನ್ನು ಹೊಂದಿದೆ. ಪಾಣಿಪೀಠದ ಮುಂಭಾಗದಲ್ಲಿ ೫ ಸಿಂಹ(?)ಗಳನ್ನು ಕಾಣಬಹುದು! ಶಿವಲಿಂಗದ ಹಿಂದೆ ಕಿರೀಟದಿಂದ ಅಲಂಕೃತವಾಗಿರುವ, ಏಳು ಹೆಡೆಗಳ ನಾಗದೇವರ ಮೂರ್ತಿಯಿದೆ. ನಾಗದೇವನ ಇಕ್ಕೆಲಗಳಲ್ಲಿ ಸಹಾಯಕರಿದ್ದಾರೆ.


ದೇವಾಲಯದ ಹೊರಗೋಡೆಯಲ್ಲಿ ಉತ್ತಮ ಕೆತ್ತನೆಗಳಿವೆ. ತಳಭಾಗದಲ್ಲಿ ಎರಡು ಖಾಲಿ ಪಟ್ಟಿಕೆಗಳಿವೆ. ಮಧ್ಯಭಾಗದಲ್ಲಿ, ಗೋಪುರ ಮತ್ತು ಎರಡು ಕಂಬಗಳುಳ್ಳ ಹಲವಾರು ಮಂಟಪಗಳನ್ನು ಹಾಗೂ ಇತರ ಕೆತ್ತನೆಗಳಿವೆ.


ದೇವಾಲಯದ ಮೇಲ್ಭಾಗದಲ್ಲಿ ಮತ್ತು ಕೈಪಿಡಿಯಲ್ಲಿ ಇನ್ನಷ್ಟು ಸುಂದರ ಕೆತ್ತನೆಗಳಿವೆ.


ಈ ದೇವಾಲಯವು ಮೊದಲು ಬಸದಿಯಾಗಿತ್ತೆಂದು ನಂಬಲಾಗಿದೆ. ದೇವಾಲಯದ ದ್ವಾರದ ಲಲಾಟದಲ್ಲಿ ಗಜಗಳಿದ್ದರೂ ಲಕ್ಷ್ಮೀಯಿರಬೇಕಾದಲ್ಲಿ ತೀರ್ಥಂಕರನ ಕೆತ್ತನೆಯಿರುವುದು, ಗರ್ಭಗುಡಿಯ ದ್ವಾರದ ಲಲಾಟದಲ್ಲಿ ತೀರ್ಥಂಕರನಿರುವುದು ಹಾಗೂ ದೇವಾಲಯದ ಕೈಪಿಡಿಯಲ್ಲಿ ಹಲವೆಡೆ ತೀರ್ಥಂಕರರ ಕೆತ್ತನೆಯಿರುವುದು ಈ ಮಾತಿಗೆ ಪುಷ್ಟಿ ನೀಡುತ್ತದೆ. ಅದರೆ ಅದೇನೇ ಇರಲಿ, ಈಗ ಇದು ನಾಗೇಶ್ವರ ದೇವಾಲಯ.

ಕಾಮೆಂಟ್‌ಗಳಿಲ್ಲ: