ಬುಧವಾರ, ಡಿಸೆಂಬರ್ 16, 2015

ಲಕ್ಷ್ಮೀನರಸಿಂಹ ದೇವಾಲಯ ಮತ್ತು ಲಕ್ಕರ್ ಕಾಮತಿ ನಾರಾಯಣ ದೇವಾಲಯ - ಭಟ್ಕಳ

 

ಲಕ್ಷ್ಮೀನರಸಿಂಹ ದೇವಾಲಯ

ನರಸಿಂಹ ಕಿಣಿ ಎಂಬವರು ನೀಡಿದ ದೇಣಿಗೆಯಿಂದ ಈ ದೇವಾಲಯವನ್ನು ಇಸವಿ ೧೫೩೮ರಲ್ಲಿ ನಿರ್ಮಿಸಲಾಗಿದೆ (ಕೆಲವೆಡೆ ೧೫೫೫ ಎನ್ನಲಾಗಿದೆ).



 
ದೇವಾಲಯದ ದಿನ ನಿತ್ಯ ಪೂಜೆ ನೋಡಿಕೊಳ್ಳುವ ಕುಟುಂಬದವರ ಮನೆ ದೇವಾಲಯವಿರುವ ಪ್ರಾಂಗಣದಲ್ಲಿಯೇ ಇದೆ. ಈ ದೇವಾಲಯದ ಹೊರಗೋಡೆಯಲ್ಲಿ ಏನೂ ವಿಶೇಷತೆಯಿಲ್ಲ.


 
ಮುಖ್ಯದ್ವಾರದ ಲಲಾಟದಲ್ಲಿ ಗಣೇಶನ ಕೆತ್ತನೆಯಿದೆ. ಗಣೇಶ ಲಲಾಟದಲ್ಲಿ ಕಾಣಸಿಗುವುದು ಬಹಳ ಅಪರೂಪ. ನೇರಲಿಗೆಯ ದೇವಾಲಯದಲ್ಲಿ ಗರ್ಭಗುಡಿಯ ಲಲಾಟದಲ್ಲಿ ಗಣೇಶನ ಕೆತ್ತನೆಯಿದೆ.


 
ನವರಂಗ, ಅಂತರಾಳ ಮತ್ತು ಗರ್ಭಗುಡಿ ಇರುವ ದೇವಾಲಯವಿದು. ಮನೆಯವರು ನವರಂಗಕ್ಕೆ ರೆಡ್ ಆಕ್ಸೈಡ್ ಹಾಕಿದ್ದಾರೆ. ನವರಂಗದ ನಾಲ್ಕು ಕಂಬಗಳ ತಳಭಾಗದಲ್ಲಿರುವ ಕೆತ್ತನೆಗಳು ಮಾಸಿವೆ.



ನವರಂಗದ ಛಾವಣಿಯಲ್ಲಿ ತಾವರೆಯ ಸುತ್ತಲೂ ಅಷ್ಟದಿಕ್ಪಾಲಕರಿದ್ದರೆ, ನಟ್ಟನಡುವೆ ಬ್ರಹ್ಮನ ಆಕರ್ಷಕ ಕೆತ್ತನೆಯಿದೆ.



 
ಅಂತರಾಳದ ಇಕ್ಕೆಲಗಳಲ್ಲಿ ನಾಗನ ಹೆಡೆಮೆಟ್ಟಿ ನಿಂತಿರುವ ದ್ವಾರಪಾಲಕರಿದ್ದಾರೆ. ಲಲಾಟದಲ್ಲಿ ದೇವಿಯೊಬ್ಬಳ ಕೆತ್ತನೆಯಿದೆ. ಗರ್ಭಗುಡಿಯಲ್ಲಿರುವ ಆಕರ್ಷಕ ಮೂರ್ತಿಗೆ ಮನೆಯವರು ಉತ್ತಮ ಅಲಂಕಾರ ಮಾಡಿದ್ದರು. 


ಗರ್ಭಗುಡಿಯ ಸುತ್ತಲೂ ಕಿರಿದಾದ ಪ್ರದಕ್ಷಿಣಾ ಪಥವಿದೆ. ಇಲ್ಲಿ ಸಾಗುತ್ತಾ, ಗರ್ಭಗುಡಿಯ ಹೊರಗೋಡೆಯಲ್ಲಿರುವ ಸಣ್ಣ ಕೆತ್ತನೆಗಳನ್ನು ನೋಡಬಹುದು.

ಲಕ್ಕರ್ ಕಾಮತಿ ನಾರಾಯಣ ದೇವಾಲಯ


ಈ ದೇವಾಲಯವನ್ನು ಲಕ್ಕರಸ ಕಾಮತ್ ಎಂಬವರು ಇಸವಿ ೧೫೬೭ರಲ್ಲಿ ನಿರ್ಮಿಸಿದರು. ತೀರಾ ಸಾಧಾರಣವಾಗಿರುವ ದೇವಾಲಯವು ನವರಂಗ ಮತ್ತು ಗರ್ಭಗುಡಿಯನ್ನು ಹೊಂದಿದೆ.

 

ದೇವಾಲಯವು ಸುಂದರವಾದ ಮುಖಮಂಟಪವನ್ನು ಹೊಂದಿದ್ದ ಕುರುಹುಗಳನ್ನು ಕಾಣಬಹುದು. ಈಗ ಕೇವಲ ಕಂಬಗಳು ಮತ್ತು ನೆಲಗಟ್ಟು ಮಾತ್ರ ಉಳಿದಿವೆ.



ಗರ್ಭಗುಡಿಯ ದ್ವಾರವು ಅಲಂಕಾರಿಕಾ ಕೆತ್ತನೆಗಳನ್ನು ಮತ್ತು ದ್ವಾರಪಾಲಕರನ್ನು ಹೊಂದಿದೆ.


ಉಳಿದ ದೇವಾಲಯಗಳಂತೆ ಇಲ್ಲೂ ಇಳಿಜಾರು ಮಾಡನ್ನು ಕಾಣಬಹುದಾದರೂ, ಇದು ಸ್ವಲ್ಪ ಎತ್ತರದಲ್ಲಿದೆ. ಊರಿನ ಹೊರಗೆ ಗದ್ದೆಗಳ ನಡುವೆ ಈ ದೇವಾಲಯವಿದೆ.