ಶನಿವಾರ, ಸೆಪ್ಟೆಂಬರ್ 28, 2013

ನದಿಯನ್ನು ಕದಿಯುವವರು...


ನೇತ್ರಾವತಿ ನದಿ ತಿರುಗಿಸುವ ಯೋಜನೆಗೆ ಪೂರ್ವಭಾವಿಯಾಗಿ ಎತ್ತಿನಹೊಳೆ ಯೋಜನೆಗೆ ಚಾಲನೆ ನೀಡಲಾಗಿದೆ. ಗೆಳೆಯ ದಿನೇಶ್ ಹೊಳ್ಳ ಕಳೆದೆರಡು ತಿಂಗಳುಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಲ್ಲೆಡೆ ಸಂಚರಿಸಿ ಈ ಯೋಜನೆಯ ಬಗ್ಗೆ ಜನತೆಗೆ ಮಾಹಿತಿ ನೀಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಈಗಾಗಲೇ ಹತ್ತಾರು ಕಾರ್ಯಕ್ರಮಗಳನ್ನೂ ಯಶಸ್ವಿಯಾಗಿ ಕೈಗೊಂಡಿದ್ದಾರೆ. ಜನರಿಗೆ ಈ ಯೋಜನೆಯ ಬಗ್ಗೆ ಮಾಹಿತಿಯ ಕೊರತೆಯಿದ್ದು, ಸಮರ್ಪಕ ಮಾಹಿತಿ ನೀಡಿದರೆ ಜನರು ಎಚ್ಚೆತ್ತು ಈ ಯೋಜನೆಗೆ ಪ್ರತಿರೋಧ ತೋರಬಹುದು ಎನ್ನುವುದು ಅವರ ಆಶಯ. ಈ ಯೋಜನೆಯನ್ನು ವಿರೋಧಿಸಿ ದಿನೇಶ್ ಹೊಳ್ಳ ಎಲ್ಲೆಲ್ಲಿ ಏನೇನು ಕಾರ್ಯಕ್ರಮಗಳನ್ನು ಕೈಗೊಂಡಿದ್ದಾರೆ/ ಕೈಗೊಳ್ಳಲಿದ್ದಾರೆ ಎನ್ನುವುದರ ವಿವರ ಅವರ ಫೇಸ್‍ಬುಕ್ ತಾಣದಲ್ಲಿ ಲಭ್ಯವಿದೆ. ’ನದಿಯನ್ನು ಕದಿಯುವವರು’ ಕವನವನ್ನು ಇಲ್ಲಿ ಪ್ರಕಟಿಸಲು ಅನುಮತಿ ನೀಡಿದ ದಿನೇಶ್ ಹೊಳ್ಳರಿಗೆ ಧನ್ಯವಾದಗಳು.

ಭಾನುವಾರ, ಸೆಪ್ಟೆಂಬರ್ 22, 2013

ಶಾಸನ ಸುಂದರಿದೇವಾಲಯಗಳ ಬಗ್ಗೆ ಮಾಹಿತಿ ಹುಡುಕುವಾಗ ಅದೊಂದು ದಿನ ಈ ಸುಂದರಿಯ ಚಿತ್ರ ಸಿಕ್ಕಿತು. ಜಲಸಂಗಿಯ ಕಲ್ಮೇಶ್ವರ ದೇವಾಲಯದ ಹೊರಗೋಡೆಯಲ್ಲಿ ಅತ್ಯಾಕರ್ಷಕ ಭಂಗಿಯಲ್ಲಿ ನಿಂತಿರುವ ಈ ’ಶಾಸನ ಸುಂದರಿ’ಯನ್ನು ಕಣ್ಣಾರೆ ಕಾಣುವ ತವಕ ದಿನದಿಂದ ದಿನಕ್ಕೆ ಹೆಚ್ಚಾಗತೊಡಗಿತು.


ಆಕೆಯ ಚಿತ್ರ ನೋಡಿದ ಆರು ವರ್ಷಗಳ ಬಳಿಕ ಆಕೆಯನ್ನು ಕಣ್ಣಾರೆ ಕಾಣುವ ಸಮಯ ಬಂದೇ ಬಿಟ್ಟಿತು. ದೇವಾಲಯವಿರುವ ಪ್ರಾಂಗಣ ಪ್ರವೇಶಿಸಿದ ಕೂಡಲೇ ಆಕೆ ಕಣ್ಣಿಗೆ ಬಿದ್ದಳು. ವಾಹನದಿಂದ ಇಳಿದ ಕೂಡಲೇ ನೇರವಾಗಿ ಆಕೆಯ ಸನಿಹ ತೆರಳಿದೆ. ಅದೇನು ಮೈಮಾಟ, ಅದೇನು ಆಕರ್ಷಣೆ. ಆಕೆಯ ಕಣ್ಣುಗಳೇ ಕಾಣದಿದ್ದರೂ, ಆಕೆಯ ಸೌಂದರ್ಯವನ್ನು ನೋಡುಗ ಮೆಚ್ಚಬೇಕಾದರೆ ಶಿಲ್ಪಿಯ ಕೆತ್ತನೆ ಕ್ಷಮತೆ ಅದ್ಯಾವ ಮಟ್ಟದಿರಬಹುದೆಂದು ಊಹಿಸಬಹುದು.


ಚಾಲುಕ್ಯ ದೊರೆ ಆರನೇ ವಿಕ್ರಮಾದಿತ್ಯನನ್ನು ಹೊಗಳುವ ಶಾಸನವೊಂದನ್ನು ಬರೆಯುವ ರೀತಿಯಲ್ಲಿ ಈ ಮದನಿಕೆಯನ್ನು ಕೆತ್ತಲಾಗಿರುವುದರಿಂದ ಈಕೆಗೆ ಶಾಸನ ಸುಂದರಿ ಎಂಬ ಹೆಸರು. ಈಕೆಯನ್ನು ಲೇಖನ ಸುಂದರಿ ಎಂದೂ ಕರೆಯಲಾಗುತ್ತದೆ. ಶಾಸನ ಬರೆಯುವ ರೀತಿಯಲ್ಲಿ ಮದನಿಕೆಯನ್ನು ತೋರಿಸಬೇಕಾದರೆ, ಹಲವಾರು ಆಯ್ಕೆಗಳನ್ನು ಪರಿಗಣಿಸಿದ ನಂತರ ಶಿಲ್ಪಿ ಈ ಭಂಗಿಯನ್ನು ಅಂತಿಮಗೊಳಿಸಿರಬಹುದು.


ಕೇಶವನ್ನು ಸುಂದರವಾಗಿ ವಿನ್ಯಸಿಸಿ ಅದಕ್ಕೊಂದು ಬಿಂದಿ, ಆಭರಣಗಳಿಂದ ಅಲಂಕರಿತ ತುರುಬು, ಕಿವಿಗೆ ವೃತ್ತಾಕಾರದ ಉತ್ತಮ ವಿನ್ಯಾಸವುಳ್ಳ ಬಂಗಾರದ ಬೆಂಡೋಲೆ, ತೋಳಿಗೆ ಮುತ್ತುರತ್ನಹವಳಖಚಿತ ಬಂದಿ, ಕೈಗೆ ಚಿನ್ನದ ಕಡಗ, ಬಲಗೈಯ ಹೆಬ್ಬೆರಳು ಮತ್ತು ತೋರುಬೆರಳುಗಳಲ್ಲಿ ವಜ್ರದುಂಗುರಗಳು, ಎದೆಯ ಮೇಲೆ ಇಳಿಬಿಟ್ಟಿರುವ ಮುತ್ತಿನ ಹಾರ, ಕಾಲಿಗೆ ಚಿನ್ನದ ಕಾಲಂದಿಗೆ, ಕಣಕಾಲಿಗೆ ಬೆಳ್ಳಿಯ ನೂಪುರ, ಹೀಗೆ ಈಕೆಯನ್ನು ಸರ್ವಾಭರಣಧಾರಿಣಿಯಾಗಿಸಿ ಕಂಗೊಳಿಸುವಂತೆ ಮಾಡಿದ್ದಾನೆ ಶಿಲ್ಪಿ.


ಈ ಕೆತ್ತನೆಯಲ್ಲಿರುವ ಪರಿಪೂರ್ಣತೆ ನನ್ನನ್ನು ಬಹಳ ಆಕರ್ಷಿಸಿತು. ಎಡಗಾಲು ನೇರವಾಗಿದ್ದು, ಬಲಗಾಲನ್ನು ಕೊಂಚವೇ ಬಗ್ಗಿಸಿ, ಹಿಮ್ಮಡಿ ನೆಲದಿಂದ ಸ್ವಲ್ಪ ಮೇಲಿರುವಂತೆ ಕೆತ್ತಲಾಗಿದೆ. ಹಾಗೆ ನಿಲ್ಲುವಾಗ ಸೊಂಟ ಪಡೆದುಕೊಳ್ಳುವ ತಿರುವು, ನಾಭಿಯ ಕೆಳಗಿನ ನೆರಿಗೆ, ಕೈಗಳನ್ನು ಅಷ್ಟು ಮೇಲಕ್ಕೆತ್ತಿ ಬರೆಯಬೇಕಾದರೆ ತೋರುವ ಕುಚದ ಭಾಗ, ಸುಂದರವಾಗಿ ತೋರಿಸಲಾಗಿರುವ ಎಡಗೈಯ ಹೆಬ್ಬೆರಳು ಹಾಗೂ ತೋರುಬೆರಳುಗಳ ಉಗುರುಗಳು, ಬಲಗೈಯ ಎರಡು ಬೆರಳುಗಳ ನಡುವಿರುವ ಲೇಖನಿ, ಶಾಸನವನ್ನು ಹಿಡಿದಿರುವ ರೀತಿ, ಹೀಗೆ ಎಲ್ಲೆಡೆ ನಿಖರತೆಯನ್ನು ಈ ಕೆತ್ತನೆ ಹೊಂದಿದೆ.


ಈ ಶಾಸನ ಸುಂದರಿಯು, "ಚಾಲುಕ್ಯ ವಂಶದ ವಿಕ್ರಮಾದಿತ್ಯ ಎಂಬ ರಾಜನು ಏಳು ದ್ವೀಪಗಳಿಂದ ಸಮಾವೇಶಗೊಂಡ ಭೂಮಿಯನ್ನು ತನ್ನದಾಗಿ ಮಾಡಿಕೊಂಡು ರಾಜ್ಯಭಾರ ಮಾಡುತ್ತಿದ್ದಾನೆ" ಎಂದು ಶಾಸನದಲ್ಲಿ ಬರೆದಿದ್ದಾಳೆ. ಈ ದೇವಾಲಯದಲ್ಲಿ, ಈಕೆಯನ್ನು ಹೊರತುಪಡಿಸಿ ಇನ್ನೂ ೨೯ ಮದನಿಕೆಯರಿದ್ದಾರೆ. ಎಲ್ಲರೂ ಶಾಸನ ಸುಂದರಿಯಂತೆ ಸರ್ವಾಭರಣಧಾರಿಣಿಯಾಗಿದ್ದಾರೆ ಮತ್ತು ಅತ್ಯಾಕರ್ಷಕ ರೂಪ ಹೊಂದಿದ್ದಾರೆ. ಆದರೆ ನನ್ನನ್ನು ಅತಿಯಾಗಿ ಆಕರ್ಷಿಸಿದ್ದು ಈ ಶಾಸನ ಸುಂದರಿ.

ಗುರುವಾರ, ಸೆಪ್ಟೆಂಬರ್ 19, 2013

ಉಡುಪಿ ಕೃಷ್ಣಜನ್ಮಾಷ್ಟಮಿಯ ಕೆಲವು ಚಿತ್ರಗಳು - ಭಾಗ ೨


ಕೃಷ್ಣಾಷ್ಟಮಿಯಂದು ಉಡುಪಿಯಲ್ಲಿ ಗೆಳೆಯ ಗುರುದತ್ತ ತೆಗೆದ ಮತ್ತಷ್ಟು ಚಿತ್ರಗಳು. ಇಲ್ಲಿ ಚಿತ್ರಗಳನ್ನು ಪ್ರಕಟಿಸಲು ಅನುಮತಿ ನೀಡಿದ ಗುರುದತ್ತರಿಗೆ ಧನ್ಯವಾದ.

ಮಂಗಳವಾರ, ಸೆಪ್ಟೆಂಬರ್ 17, 2013

ಉಡುಪಿ ಕೃಷ್ಣಜನ್ಮಾಷ್ಟಮಿಯ ಕೆಲವು ಚಿತ್ರಗಳು - ಭಾಗ ೧


ಕೃಷ್ಣಜನ್ಮಾಷ್ಟಮಿಯಂದು ಉಡುಪಿಯಲ್ಲಿ ಗೆಳೆಯ ಗುರುದತ್ತ ತೆಗೆದ ಕೆಲವು ಚಿತ್ರಗಳನ್ನು ಇಲ್ಲಿ ಹಾಕಿದ್ದೇನೆ. ಪ್ರಕಟಿಸಲು ಅನುಮತಿ ನೀಡಿದ ಗುರುದತ್ತರಿಗೆ ಧನ್ಯವಾದ.

ಬುಧವಾರ, ಸೆಪ್ಟೆಂಬರ್ 11, 2013

ಮತ್ತೊಮ್ಮೆ ಈ ಜಲಧಾರೆಯತ್ತ...


ಗೆಳೆಯರು ಈ ಜಲಧಾರೆಗೆ ಹೊರಟಿದ್ದರು. ಸುಮಾರು ವರ್ಷಗಳ ಮೊದಲು ಇಲ್ಲಿಗೆ ಅದಾಗಲೇ ಭೇಟಿ ನೀಡಿದ್ದರೂ, ಮತ್ತೆ ಹೊರಟೆ.


ಈ ಜಲಧಾರೆಗೆ ಚಾರಣವೇನೂ ಇಲ್ಲ. ರಸ್ತೆಯಿಂದ ೧೫ ನಿಮಿಷದ ದಾರಿ. ಸುಮಾರು ೬೦ ಅಡಿ ಎತ್ತರದ ಜಲಧಾರೆ.


ಮೊದಲ ಭೇಟಿಯ ವಿವರ ಈ ಬ್ಲಾಗಿನಲ್ಲಿ ಎಲ್ಲೋ ಇದೆ. ಆಗ ಒಬ್ಬನೇ ಹೋಗಿದ್ದೆ. ಈ ಬಾರಿ ಮೂರ್ನಾಲ್ಕು ಗೆಳೆಯರಿದ್ದರು. ಈ ಎರಡನೇ ಭೇಟಿ ನೀಡಿ ೩ ವರ್ಷಗಳೇ ಕಳೆದುಹೋದವು.


ಸದ್ಯಕ್ಕೆ ಈ ಫಾಲ್ಸ್ ಅರಣ್ಯ ಇಲಾಖೆಯ ’ಎಂಟ್ರಿ ಫೀಸ್’ ಕಾಟದಿಂದ ಮುಕ್ತವಾಗಿದೆ. ಸಮೀಪದ ಹಳ್ಳಿಯಲ್ಲಿರುವ ಇನ್ನೊಂದು ಫಾಲ್ಸ್ ನೋಡಬೇಕಿದ್ದರೆ ರೂ.೩೦೦/- ಕೊಡಬೇಕಾಗುತ್ತದೆ!

ಸೋಮವಾರ, ಸೆಪ್ಟೆಂಬರ್ 09, 2013

ಸೂಡಿಯ ಗಣೇಶ


ಸೂಡಿಯಲ್ಲಿರುವ ಗಣಪತಿ ವಿಗ್ರಹ ವಿಶಿಷ್ಟವಾದುದು. ಈಗ ಕೇವಲ ಗರ್ಭಗುಡಿ ಮಾತ್ರ ಉಳಿದಿರುವ ಈ ದೇವಾಲಯದ ಗಣೇಶ ೧೧ ಅಡಿ ಎತ್ತರವಿದ್ದಾನೆ. ಏಕಶಿಲೆಯಿಂದ ಕೆತ್ತಲ್ಪಟ್ಟಿರುವ ಈ ಆಕರ್ಷಕ ಗಣೇಶ ಚತುರ್ಭುಜಾಧಾರಿಯಾಗಿದ್ದಾನೆ.


ಈ ಗಣೇಶನಿಗೆ ವರ್ಷಕ್ಕೆ ಒಂದೇ ಸಲ ಪೂಜೆ ಸಲ್ಲಿಸಲಾಗುತ್ತದೆ ಎಂದು ಎಲ್ಲೋ ಓದಿದ ನೆನಪು. ಬಹುಶ: ಅದು ಗಣೇಶ ಚತುರ್ಥಿಯ ದಿನವಿರಬಹುದು.


ಅಂದಾಜು ೭೦೦ ವರ್ಷಗಳಿಂದ ಆ ಚೌಕಾಕಾರದ ಗರ್ಭಗುಡಿಯಿಂದ ದಿಟ್ಟಿಸುತ್ತ ಕುಳಿತಿರುವ ಗಣೇಶ, ಇನ್ನಷ್ಟು ಶತಮಾನಗಳ ಕಾಲ ಏನೂ ಹಾನಿಗೊಳಗಾಗದೆ ಅದೇ ರೀತಿಯಲ್ಲಿ ಇರಲಿ ಎಂಬ ಆಶಯ.

ಮಂಗಳವಾರ, ಸೆಪ್ಟೆಂಬರ್ 03, 2013

ಕೊಡಗಿನ ಕಂಪು


ಗೆಳೆಯ ರಾಕೇಶ್ ಹೊಳ್ಳ ಎರಡು ದಿನಗಳ ಅವಧಿಯ ಪ್ರವಾಸವನ್ನು ಆಯೋಜಿಸಿದ್ದರು. ನಾನೂ ಹೆಸರು ನೋಂದಾಯಿಸಿ ಉಳಿದವರನ್ನು ಸೇರಿಕೊಂಡೆ. ಆ ಎರಡು ದಿನಗಳಲ್ಲಿ ಭೇಟಿ ನೀಡಿದ ಹಲವಾರು ಸ್ಥಳಗಳಲ್ಲಿ ಈ ಜಲಧಾರೆಯೂ ಒಂದು.


ರಸ್ತೆ ಜಲಧಾರೆಯ ಮಗ್ಗುಲಿನಿಂದಲೇ ಹಾದುಹೋಗುತ್ತದೆ. ಅಲ್ಲಿವರೆಗೆ ವಾಹನದಲ್ಲಿ ರಾಜಾರೋಷವಾಗಿ ಪ್ರಯಾಣಿಸಿ ನಂತರ ರಸ್ತೆಯ ಬದಿಯಲ್ಲಿ ಸ್ವಲ್ಪ ಕೆಳಗಿಳಿದು ಒಂದೆರಡು ನಿಮಿಷ ನಡೆದರೆ ಜಲಧಾರೆಯ ಸಮೀಪ ತಲುಪಬಹುದು.


ಸುಮಾರು ೨೫ ಅಡಿ ಎತ್ತರವಿರುವ ಹಾಗೂ ೫೦ ಅಡಿ ಅಗಲವಿರುವ ಜಲಧಾರೆಯಿದು. ಬಿರುಸು ಮಳೆಯಲ್ಲಿ ಜಲಧಾರೆಯ ಅಗಲ ೮೦-೧೦೦ ಅಡಿಯವರೆಗೂ ವ್ಯಾಪಿಸಿಕೊಳ್ಳುತ್ತದೆ.


ಜಲಧಾರೆಯ ಮುಂದಿರುವ ವಿಶಾಲ ಕೊಳ, ಜಲಕ್ರೀಡೆಯಾಡಲು ಯಾರನ್ನೂ ಆಕರ್ಷಿಸುತ್ತದೆ. ಆದರೆ ಈ ಸುಂದರ ಕೊಳ ಅಷ್ಟೇ ಅಪಾಯಕಾರಿಯೂ ಆಗಿದೆ. ಈಜಲು ಹೋಗಿ ಹಲವರು ಇಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ತಟದ ಸಮೀಪ ಜಲಕ್ರೀಡೆಯಾಡುವುದು ಲೇಸು. ಮುಂದೆ ಹೋದರೆ ಅಪಾಯ.


ಸೌಂದರ್ಯವನ್ನು ಆಸ್ವಾದಿಸುವುದು ಎಂದಿಗೂ ಒಳ್ಳೆಯದು. ಸವಿಯಲು ಹೋದರೆ ಮಾತ್ರ ಅಪಾಯ ಕಾದಿರುತ್ತದೆ.