ಮಂಗಳವಾರ, ಆಗಸ್ಟ್ 25, 2009

ಗಣೇಶ ಬಂದು ಹೋದ


ಕಳೆದ ೬ ವರ್ಷಗಳಲ್ಲಿ ಗಣೇಶ ಚತುರ್ಥಿಗೆ ಮನೆಗೆ ತೆರಳಲಾಗಿರಲಿಲ್ಲ. ಪ್ರತಿ ಸಲ ಏನಾದರೊಂದು ತೊಡಕುಗಳಿದ್ದವು (ಅಥವಾ ನನಗೇ ಮನಸ್ಸಿರಲಿಲ್ಲವೋ). ಆದರೆ ಮನಸ್ಸಿದ್ದಲ್ಲಿ ಮಾರ್ಗವಿದ್ದೇ ಇರುತ್ತದೆ ಎಂಬಂತೆ ಈ ಬಾರಿಯೂ ತೊಡಕುಗಳಿದ್ದರೂ ಹಳದೀಪುರದೆಡೆ ಪ್ರಯಾಣಿಸಿದೆ. ಯಾವಾಗಲೂ ನಮ್ಮ ಮನೆಯಲ್ಲಿ ಚೌತಿ ಎರಡು ದಿವಸ. ಆದರೆ ಪರಿವಾರದಲ್ಲಿ ಮರಣವೊಂದು ಸಂಭವಿಸಿದ್ದರಿಂದ ಈ ಬಾರಿ ಚೌತಿ ಒಂದೇ ದಿನ. ಇನ್ನು ಮುಂದೆ ಚೌತಿಗೆ ಮನೆಯಲ್ಲಿ ಹಾಜರಿರಲೇಬೇಕು. ಗಣೇಶನನ್ನು ಮನೆಗೆ ಸ್ವಾಗತಿಸಿ ನಂತರ ಬೀಳ್ಕೊಡುವವರೆಗಿನ ಕೆಲವು ಚಿತ್ರಗಳು ಇಲ್ಲಿವೆ.





ಗುರುವಾರ, ಆಗಸ್ಟ್ 13, 2009

ಉಡುಪಿ ಯೂತ್ ಹಾಸ್ಟೆಲ್ ಕಾರ್ಯಕ್ರಮ - ೨೦೦೯


ಯೂತ್ ಹಾಸ್ಟೆಲ್ ಆಫ್ ಇಂಡಿಯಾದ ಉಡುಪಿ ಘಟಕ ೨ ರಾತ್ರಿ ಮತ್ತು ೩ ದಿನಗಳ ’ಐಲ್ಯಾಂಡ್ ಎಕ್ಸ್-ಪೆಡಿಷನ್’ ಎಂಬ ಕಾರ್ಯಕ್ರಮವೊಂದನ್ನು ೨೦೦೯ ಅಕ್ಟೋಬರ್ ೩೦, ೩೧ ಮತ್ತು ನವೆಂಬರ್ ೧ ರಂದು ಆಯೋಜಿಸಲಿದೆ.


ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಸಕ್ತಿಯಿದ್ದವರು ಮುಂಚಿತವಾಗಿ ಕೆಳಗೆ ಕೊಟ್ಟಿರುವ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು.
ರಾಘವೇಂದ್ರ ನಾಯಕ್: ೯೯೪೫೪ ೧೪೧೯೩
ಪ್ರೊ.ಕೆ.ಎಸ್.ಅಡಿಗ: ೯೮೪೫೯ ೩೭೫೫೬
ಉಮಾನಾಥ್: ೯೪೪೮೮ ೩೬೦೭೦
ರಾಜೇಶ್ ನಾಯಕ್ ಗುಜ್ಜಾಡಿ: ೯೭೪೧೫ ೦೧೭೭೭
ವಿವೇಕ್ ಕಿಣಿ: ೯೪೪೮೨ ೬೨೨೪೫
ಗುರುದತ್: ೯೮೪೫೧ ೯೩೮೮೩


ಅಕ್ಟೋಬರ್ ೩೦: ಮುಂಜಾನೆ ೯ ಕ್ಕೆ ಬಾರ್ಕೂರಿನಲ್ಲಿ ಸೇರಬೇಕು. ಬಾರ್ಕೂರಿನ ಕೆಲವು ಪುರಾತನ ದೇವಾಲಯಗಳಿಗೆ ಭೇಟಿ ನೀಡಿ ಸಮೀಪದಲ್ಲೇ ಇರುವ ಬೆಣ್ಣೆಕುದ್ರು ಎಂಬಲ್ಲಿಗೆ ಚಾರಣ. ಬೆಣ್ಣೆಕುದ್ರುವಿನಿಂದ ಯಾಂತ್ರಿಕ ದೋಣಿಯಲ್ಲಿ ಸೀತಾನದಿಯಲ್ಲಿ ಪ್ರಯಾಣ. ದಾರಿಯಲ್ಲಿ ಒಂದೆರಡು ಕುದ್ರು (ನದಿಯುಂಟಾದ ದ್ವೀಪಗಳು) ಗಳಲ್ಲಿ ನಿಲುಗಡೆ. ನಂತರ ಸೀತೆ ಮತ್ತು ಸ್ವರ್ಣೆಯರ ಸಂಗಮವನ್ನು ದಾಟಿ, ನಂತರ ಸೀತಾನದಿ ಸಮುದ್ರ ಸೇರುವ ಅಳಿವೆ ಪ್ರದೇಶವಾಗಿರುವ ’ಕೋಡಿ ಕನ್ಯಾನ (ಹಂಗಾರಕಟ್ಟೆ)’ವನ್ನೂ ದಾಟಿ, ಸೀತೆಯ ಹಿನ್ನೀರಿನಲ್ಲಿ ಇನ್ನೂ ಮುಂದಕ್ಕೆ ಸಾಗಿ, ಒಂದೆಡೆ ದೋಣಿಯಿಂದ ಇಳಿದು ಪಾರಂಪಳ್ಳಿ ಎಂಬಲ್ಲಿರುವ ಸುಂದರ ಕಡಲ ತೀರದೆಡೆ ನಡಿಗೆ. ಮೊದಲ ದಿನ ರಾತ್ರಿ ಪಾರಂಪಳ್ಳಿ ಕಡಲ ತೀರದಲ್ಲೇ ಹಾಲ್ಟ್.


ಅಕ್ಟೋಬರ್ ೩೧: ಮುಂಜಾನೆಯೆ ಸಮುದ್ರ ತೀರದಲ್ಲೇ ಸೀತಾ ನದಿ ಸಮುದ್ರ ಸೇರುವ ಅಳಿವೆಯೆಡೆ (ಹಂಗಾರಕಟ್ಟೆ) ನಡಿಗೆ. ಬೀಚ್ ಟ್ರೆಕ್. ಅಳಿವೆಯನ್ನು ದಾಟಿ ಈ ಕಡೆ ಇರುವ ಬೆಂಗ್ರೆಗೆ ಪಯಣ. ಬೆಂಗ್ರೆಯಿಂದ ಹೂಡೆಯ ಮೂಲಕ ಮಲ್ಪೆಯೆಡೆ ಬೀಚ್ ಟ್ರೆಕ್. ಮಲ್ಪೆಗೆ ತುಸು ಮೊದಲು ಹಾಲ್ಟ್.


ನವೆಂಬರ್ ೧: ಮಲ್ಪೆಯೆಡೆ ಸಾಗಿ ಸಮುದ್ರದ ನಡುವೆ ಇರುವ ತೋನ್ಸೆಪಾರ್ ದ್ವೀಪದೆಡೆ ಪಯಣ. ಸಂಜೆ ಇಲ್ಲೇ ಕಾರ್ಯಕ್ರಮದ ಸಮಾರೋಪ.


ಕಳೆದ ವರ್ಷ ಆಯೋಜಿಸಿದ ಮಾವಿನಕಾರು-ಬಾವುಡಿ-ಮೇಗಣಿ-ದೇವಕುಂದ-ಹುಲ್ಕಡಿಕೆ ಚಾರಣದ ಯಶಸ್ಸಿನ ಬಳಿಕ ಇದೊಂದು ಬೇರೆ ತರಹದ ಪ್ರಯತ್ನ. ಮೇಗಣಿ ಚಾರಣದ ಲ್ಯಾಂಡ್-ಸ್ಕೇಪ್ ಬೇರೇನೆ ಮತ್ತು ಈ ಬಾರಿಯ ಕಾರ್ಯಕ್ರಮದ ಲ್ಯಾಂಡ್-ಸ್ಕೇಪ್ ಬೇರೇನೆ. ಎರಡಕ್ಕೂ ಅಜಗಜಾಂತರ ವ್ಯತ್ಯಾಸ ಇದೆ. ಈ ಬಾರಿ ಉಡುಪಿ ಯೂತ್ ಹಾಸ್ಟೆಲ್ ಕಾರ್ಯಕ್ರಮವನ್ನು ಅರಣ್ಯದ ಪರಿಧಿಯಿಂದ ಹೊರಗಿಡಲು ಬೇರೆ ಕಾರಣಗಳೂ ಇವೆ. ಆದರೆ ಅವನ್ನೆಲ್ಲಾ ಇಲ್ಲಿ ಬರೆಯುವುದು ಅನಾವಶ್ಯಕ.

ಉಡುಪಿ ಜಿಲ್ಲೆಯ ಎರಡು ಪ್ರಮುಖ ನದಿಗಳು ಸ್ವರ್ಣಾ ಮತ್ತು ಸೀತಾ. ಇವೆರಡು ನದಿಗಳು ಹಂಗಾರಕಟ್ಟೆಯ ಸ್ವಲ್ಪ ಮೊದಲು ಸಂಗಮಿಸಿ ನಂತರ ಸೀತಾ ನದಿಯಾಗಿ ಸ್ವಲ್ಪವೇ ದೂರದಲ್ಲಿ ಸಮುದ್ರವನ್ನು ಸೇರುತ್ತದೆ. ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿರುವ ನದಿಗಳ ಹಿನ್ನೀರಿನ ಸೌಂದರ್ಯವನ್ನು ಸವಿದರೆ ಮತ್ತೆ ನೆರೆ ರಾಜ್ಯಕ್ಕೆ ಓಡಿ ಹೋಗಬೇಕಾಗಿಲ್ಲ!

ಭಾನುವಾರ, ಆಗಸ್ಟ್ 09, 2009

ಒಂದು ಸುಂದರ ಜಲಧಾರೆ


ಜನವರಿ ೭, ೨೦೦೬.

ಈ ಜಲಧಾರೆಗೆ ಚಾರಣಗೈಯುವ ಸಲುವಾಗಿ ಗೆಳೆಯ ಪುತ್ತುವಿನೊಂದಿಗೆ ಹೊರಟು, ಮಹಾದೇವ ನಾಯ್ಕರ ಮನೆ ತಲುಪಿದಾಗ ಸಂಜೆ ೭ರ ಸಮಯ. ಮನೆಯಲ್ಲಿ ಮಹಾದೇವ ನಾಯ್ಕರ ಮಗಳು ಮತ್ತು ಶ್ರೀಮತಿಯವರು ಮಾತ್ರ ಇದ್ದರು. ಚಹಾ ಹೀರುತ್ತಿರುವಂತೇ ನಾಯ್ಕರ ಮಗ ಜನಾರ್ಧನ ತಲೆಯ ಮೇಲೊಂದು ದೊಡ್ಡ ಒಣ ಮರದ ತುಂಡನ್ನು ಹೊತ್ತು ’ಹ್ವಾಯ್’ ಎನ್ನುತ್ತಾ ಆಗಮಿಸಿದರು. ಹಿಂದೆನೇ ಅವರ ತಮ್ಮ ಈಶ್ವರ. ಮಹಾದೇವ ನಾಯ್ಕರು ಎಲ್ಲೋ ಹೊರಗಡೆ ಹೋಗಿದ್ದವರು ಮರುದಿನ ಸಂಜೆವರೆಗೆ ಬರಲಿಲ್ಲ. ಜನಾರ್ಧನರ ಅಮ್ಮ ಮತ್ತು ತಂಗಿ ರುಚಿಕರವಾದ ಊಟವನ್ನು ನಮ್ಮಿಬ್ಬರಿಗಾಗಿ ರೆಡಿ ಮಾಡಿದರು. ನನ್ನ ಪ್ರಯಾಣಗಳಲ್ಲಿ ಕಳೆದ ಮತ್ತೊಂದು ಸುಂದರ ಸಂಜೆ. ಮಾತುಕತೆ, ಹರಟೆ ಮತ್ತು ಮುಖ್ಯವಾಗಿ ಆತ್ಮೀಯತೆ ಇವೆಲ್ಲಾ ನಮ್ಮಿಬ್ಬರಿಗೆ ಮತ್ತೊಮ್ಮೆ ದೇವಕಾರದ ನೆನಪಾಗುವಂತೆ ಮಾಡಿತು.


ನೀರು ದೋಸೆ ಮತ್ತು ಬೆಲ್ಲದ ಮುಂಜಾನೆಯ ಉಪಹಾರದ ನಂತರ ೮ ಗಂಟೆಗೆ ಮಾರ್ಗದರ್ಶಿ ನವೀನನೊಂದಿಗೆ ಜಲಧಾರೆಯತ್ತ ಹೊರಟೆವು. ಈ ನವೀನನಿಗೆ ಕಾಡಿನಲ್ಲಿ ಅಲೆಯುವುದು ಎಂದರೆ ಇಷ್ಟ. ಕಾಡಿನಲ್ಲಿ ರಾಮಪತ್ರಿ ಮತ್ತು ಲವಂಗ ಹುಡುಕಿ ತೆಗೆದು, ಮಾರಿ ಜೀವನ ನಡೆಸುತ್ತಾನೆ. ಕಾಡಿನಲ್ಲಿ ಆಹಾರವಿಲ್ಲದೆ ಕೆಲವು ದಿನಗಳ ಕಾಲ ಬದುಕಬಹುದಾದ ವಿಧಾನಗಳ ಬಗ್ಗೆ ನವೀನ ಮಾತನಾಡುತ್ತಿದ್ದ. ಲಿಂಗನಮಕ್ಕಿ ಅಣೆಕಟ್ಟು ನೋಡಬೇಕೆಂಬುದು ಈತನ ಜೀವನದ ಪೂರ್ತಿಯಾಗದ ಆಸೆ.


ಸುಮಾರು ೫೦ ನಿಮಿಷಗಳ ನಡಿಗೆಯ ಬಳಿಕ ಸುಂದರ ಕಾಡಿರುವ ಕಣಿವೆಯಲ್ಲಿ ಇಳಿಯಲಾರಂಭಿಸಿದೆವು. ಸ್ವಲ್ಪ ಹೊತ್ತಿನಲ್ಲಿ ಹೊಳೆಯ ದಡದಲ್ಲಿದ್ದೆವು. ಇಲ್ಲಿಂದ ನದಿಗುಂಟ ೧೦೦ ನಿಮಿಷಗಳ ಚಾರಣದ ಬಳಿಕ ಜಲಧಾರೆಯ ೫ನೇ ಹಂತದ ದರ್ಶನ. ಸ್ವಲ್ಪ ಮೇಲೆ ೪ನೇ ಹಂತದ ಪಾರ್ಶ್ವ ನೋಟ ಲಭ್ಯ. ೩ನೇ ಹಂತದ ತುದಿಯೂ ಇಲ್ಲಿಂದ ಕಾಣುವುದು. ಆದರೆ ಜಲಧಾರೆಗೆ ಸೌಂದರ್ಯವನ್ನು ಕೊಟ್ಟಿರುವುದು ಇಲ್ಲಿರುವ ವಿಶಾಲ ಕೊಳ.


ಎಡಕ್ಕೆ ಇರುವ ಕೊರಕಲನ್ನು ಏರಿಯೇ ಉಳಿದ ಹಂತಗಳನ್ನು ವೀಕ್ಷಿಸಲು ತೆರಳಬೇಕು. ಮಳೆಗಾಲದಲ್ಲಿ ಈ ಕೊರಕಲೇ ಮತ್ತೊಂದು ಜಲಧಾರೆ. ಅಲ್ಲೇ ಒಂದು ನಾಗರಹಾವಿನ ಪೊರೆ. ಹಾವುಗಳೆಂದರೆ ನನಗೆ ತುಂಬಾ ಹೆದರಿಕೆ. ’ಹಾ..’ ಎಂದ ಕೂಡಲೇ ಅಲ್ಲಿಂದ ನಾಗಾಲೋಟಗೈಯಲು ತಯಾರಾಗಿರುತ್ತೇನೆ. ಕೊರಕಲಿನಲ್ಲಿ ೫ ನಿಮಿಷ ಏರಿದ ಬಳಿಕ ತಿರುವು ಪಡೆದು ಕಾಡಿನೊಳಕ್ಕೆ ಹೊಕ್ಕೆವು. ಮರಗಳನ್ನು, ಬೇರುಗಳನ್ನು, ಕೊಂಬೆಗಳನ್ನು ಆಧಾರವಾಗಿ ಬಳಸಿ ಮುಂದುವರಿದೆವು. ಈಗ ಕಷ್ಟಕರ ದಾರಿಯಲ್ಲಿ ಕೆಳಗಿಳಿದು ೨ನೇ ಹಂತದ ಬಳಿ ಹೋಗಬೇಕಾಗಿತ್ತು. ಈ ಇಳಿಜಾರಿನಲ್ಲಿ ಏಣಿಯಿಂದ ಇಳಿಯುವ ವಿಧಾನವನ್ನು ಬಳಸಿಯೇ ಕೆಳಗಿಳಿಯಬೇಕಾಗುತ್ತದೆ. ಸಡಿಲವಾಗಿರುವ ಮಣ್ಣು ಜಾರುವುದಲ್ಲದೇ ಅಲ್ಲಲ್ಲಿ ಕಾಲು ಹೂತು ಹೋಗುತ್ತದೆ ಕೂಡಾ.


೨ನೇ ಹಂತ ೩೦ ಅಡಿಯಷ್ಟೆತ್ತರವಿದ್ದರೂ ಸುಂದರವಾಗಿದೆ. ತಳದಲ್ಲಿರುವ ಗುಂಡಿ ಬಹಳ ಆಳವಿದೆ ಎಂದು ನವೀನನ ಅಭಿಪ್ರಾಯ. ಸುತ್ತಲೂ ಕರಿ ಕಲ್ಲಿನ ಮೇಲ್ಮೈಯಿರುವುದರಿಂದ ಈ ಗುಂಡಿಯೊಂದು ಕಾಂಕ್ರೀಟ್ ಬಾವಿ ಇದ್ದ ಹಾಗೆ. ಈ ಬಾವಿಯು ಉಕ್ಕಿ ಹರಿದು ಜಲಧಾರೆಯ ೩ನೇ ಹಂತವನ್ನು ನಿರ್ಮಿಸುತ್ತದೆ. ಮೇಲ್ಭಾಗದಿಂದ ೩ನೇ ಹಂತವನ್ನು ನೋಡಲು ಒಂದೆರಡು ಹೆಜ್ಜೆ ಹಿಂದೆ ಸರಿದರೆ ಅಲ್ಲಿ ಮತ್ತೊಂದು ಹಾವಿನ ಪೊರೆ. ನಾನು ಹೌಹಾರಿದ ಪರಿ ನೋಡಿದ ನವೀನ, ’ಇದೊಂದು ನಾಗರಹಾವುಗಳ ಮನೆ ಇದ್ದ ಹಾಗೆ’ ಎಂದಾಗ, ಆದಷ್ಟು ಬೇಗ ಅಲ್ಲಿಂದ ಹೊರಡುವುದೇ ನನ್ನ ಮುಂದಿನ ಗುರಿಯಾಗಿತ್ತು.

ಆದರೂ ೩ನೇ ಹಂತವನ್ನು ಸರಿಯಾಗಿ ವೀಕ್ಷಿಸದೇ ಅಲ್ಲಿಂದ ಹಿಂತಿರುಗಲು ಮನಸ್ಸು ಒಪ್ಪುತ್ತಿರಲಿಲ್ಲ. ಪಾರ್ಶ್ವ ನೋಟ ಸಿಕ್ಕರೂ ಸಾಕಿತ್ತು. ಆಚೀಚೆ ನೋಡುತ್ತಿರುವಾಗ ಒಂದು ದೊಡ್ಡ ಮರ ಕಾಣಿಸಿತು. ಈ ಮರ ೩ನೇ ಹಂತದ ನೇರ ಮುಂದೆ ಇರುವಂತೆ ಕಾಣುತ್ತಿತ್ತು. ನವೀನನಿಗೆ ನಮ್ಮನ್ನು ಆ ಮರದೆಡೆ ಕರೆದೊಯ್ಯಲು ವಿನಂತಿಸಿದೆ. ಆದರೆ ಆತ ’ಆ ಮರದೆಡೆ ಹೋಗೋಣ, ಆದರೆ ಮೊದ್ಲು ಇನ್ನೂ ಮೇಲೆ ಹೋಗಿ ೧ನೇ ಫಾಲ್ಸ್ ನೋಡೋಣ’ ಎಂದು ಮುನ್ನಡೆದ.

ಎರಡನೇ ಹಂತದ ಕಲ್ಲಿನ ಮೇಲ್ಮೈಯನ್ನು ಆತನೇನೋ ಸಲೀಸಾಗಿ ಹತ್ತಿದ. ಅಲ್ಲಿ ಹಿಡಿದುಕೊಳ್ಳಲು ಸರಿಯಾಗಿ ಗ್ರಿಪ್ ಸಿಗದೆ ನಾನು ಪರದಾಡುತ್ತಿದ್ದೆ. ಬಲಬದಿಯಲ್ಲಿ ಕೈಗೆಟುಕುವಷ್ಟು ಅಂತರದಲ್ಲಿ ೨ನೇ ಹಂತ ಧುಮುಕುತ್ತಿತ್ತು. ಪುತ್ತು ಹೇಗೋ ಮಾಡಿ ಮೇಲೇರಿದ. ನಾನಿನ್ನೂ ಅರ್ಧ ದಾರಿಯಲ್ಲಿದ್ದೆ. ಒಂದು ಕಡೆ ಮನದ ತುಂಬಾ ನಾಗರಹಾವುಗಳು ತುಂಬಿದ್ದವು. ಕಲ್ಲಿನ ಎಡೆಯಿಂದ ’ಭುಸ್ಸ್’ ಎಂದು ಪ್ರತ್ಯಕ್ಷವಾಗುತ್ತವೋ ಎಂಬ ಹೆದರಿಕೆ. ಮತ್ತೊಂದೆಡೆ ಜಾರಿದರೆ ಕೆಳಗೆ ಬಾಯಿ ತೆರೆದು ಕಾಯುತ್ತಿರುವ ಆಳವಾಗಿರುವ ಗುಂಡಿ. ಮೇಲಕ್ಕೆ ತಲುಪಿದ ಪುತ್ತು, ’ಇದು ನಮ್ಮಿಂದ ಆಗೋ ಮಾತಲ್ಲ. ಆ ನವೀನ್ ಇಲ್ಲಿ ಬೆರಳುಗಳನ್ನಷ್ಟೇ ಆಧಾರವಾಗಿಟ್ಟುಕೊಂಡು ಮತ್ತೆ ರಾಕ್ ಕ್ಲೈಂಬಿಂಗ್ ಮಾಡ್ತಾ ಇದ್ದಾನೆ’ ಎಂದಾಗ, ನವೀನನಿಗೆ ಹಿಂತಿರುಗಿ ಬರಲು ಹೇಳುವಂತೆ ಸೂಚಿಸಿ ಕೆಳಗಿಳಿದೆ. ಅಲ್ಲಿ ಮೇಲಕ್ಕೆ ಹತ್ತುವುದೇ ಹುಚ್ಚುತನದ ನಿರ್ಧಾರವೆಂದು ನನಗನಿಸತೊಡಗಿತ್ತು. ಅಷ್ಟೆಲ್ಲಾ ರಿಸ್ಕ್ ತಗೊಳ್ಳುವ ಬದಲು ನೋಡದೇ ಇರುವುದೇ ಲೇಸು.


೩ನೇ ಹಂತದ ಮುಂದಿರುವಂತೆ ತೋರುತ್ತಿದ್ದ ಆ ಮರವನ್ನು ಗಮನದಲ್ಲಿರಿಸಿ ನವೀನ ಆ ಕಡೆ ದಾರಿ ಮಾಡಿಕೊಂಡು ಮುನ್ನಡೆದ. ಸ್ವಲ್ಪ ಸಮಯದ ಬಳಿಕ ಹಿಂತಿರುಗಿದ ಆತ, ’ಆ ಮರದ ಕಡೆಯಿಂದ ತುಂಬಾ ಚಂದ ಕಾಣಿಸ್ತದ್ರಾ, ಇಷ್ಟು ಚಂದ್ಕೆ ನಾನೂ ನೋಡಿರ್ಲಿಲ್ಲ’ ಎಂದು ನಮ್ಮನ್ನು ಕರೆದೊಯ್ದ. ಜಾರುತ್ತಾ, ಬೀಳುತ್ತಾ ಮೈಯನ್ನೆಲ್ಲಾ ನೋವು ಮಾಡಿಕೊಂಡು ಆ ಮರದತ್ತ ತಲುಪಿದೆವು. ಈ ಮರದ ಬುಡದಲ್ಲೇ ಒಬ್ಬನೇ ನಿಂತುಕೊಳ್ಳಬಹುದಾದಷ್ಟು ಸ್ಥಳಾವಕಾಶವಿದೆ. ಇಲ್ಲಿಂದ ಸುಮಾರು ೮೦ ಅಡಿ ಎತ್ತರವಿರುವ ೩ನೇ ಹಂತದ ಸೌಂದರ್ಯವನ್ನು ಮನಸಾರೆ ಸವಿಯಬಹುದು. ನೀರು ಬೀಳುವಲ್ಲಿರುವ ಗುಂಡಿಯ ನೇರ ಮೇಲೆ ನಾವು ನಿಂತಿದ್ದೆವು. ಈ ಗುಂಡಿಗೆ ಧುಮುಕುವ ನೀರು ಅಲ್ಲೇ ಸುಳಿಯಂತೆ ತಿರುಗಿ ನಂತರ ಹೊರಬಿದ್ದು ೨ನೇ ಹಂತವನ್ನು ಸೃಷ್ಟಿಸುತ್ತದೆ.


ಮರಳಿ ೫ನೇ ಹಂತದ ಬಳಿ ಬಂದಾಗ ಸಮಯ ಮಧ್ಯಾಹ್ನ ೧.೦೦ ಆಗಿತ್ತು. ೫ನೇ ಹಂತವೆ ಎಲ್ಲಾ ಹಂತಗಳಿಗಿಂತ ಸುಂದರವಾಗಿರುವುದು. ನೀರಿನ ಸದ್ದು, ಪ್ರಕೃತಿಯ ಮೌನ ಮತ್ತು ಹಕ್ಕಿಗಳ ಸಂಗೀತ ಕೇಳುತ್ತಾ ಬಂಡೆಗಳೆಡೆಯಲ್ಲಿ ಮೈಯನ್ನು ಒರಗಿಸಿ ಜಲಧಾರೆಯ ಅತಿಥಿಗಳಾಗಿ ಅವಿಸ್ಮರಣೀಯ ಸಮಯವನ್ನು ಕಳೆದೆವು. ಸುಮಾರು ೨ ಗಂಟೆಗೆ ಅಲ್ಲಿಂದ ಹೊರಟು ಕಣಿವೆಯೇರುವಲ್ಲಿ ತಲುಪಿ, ಸ್ವಲ್ಪ ವಿಶ್ರಮಿಸಿದ ಬಳಿಕ ಕಣಿವೆಯನ್ನೇರಲಾರಂಭಿಸಿದೆವು. ನನಗಂತೂ ಇದು ಸಾಕುಮಾಡಿತು. ಕೊನೆಕೊನೆಗೆ ಎರಡೂ ಕಾಲುಗಳು ಶಕ್ತಿ ಕಳಕೊಂಡು ಅವುಗಳನ್ನು ಎಳೆದುಕೊಂಡು ಬರುವ ಸ್ಥಿತಿ ತಲುಪಿದ್ದೆ. ೫.೩೦ಕ್ಕೆ ನಾಯ್ಕರ ಮನೆಯಲ್ಲಿದ್ದೆವು.


ಹಿಂತಿರುಗುವಾಗ ದಾರಿಯುದ್ದಕ್ಕೂ ಬೇಗ ಬೇಗ ಎಂದು ಅವಸರ ಮಾಡುತ್ತಿದ್ದ ಪುತ್ತು, ಈಗ ಇನ್ನಷ್ಟು ಅವಸರ ಮಾಡತೊಡಗಿದ. ಆತನಿಗೆ ಅಂದು ಆರಂಭಗೊಳ್ಳುವ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯೊಂದರಲ್ಲಿ ರೆಫ್ರೀ ಆಗಿ ಕಾರ್ಯಮಾಡಲಿತ್ತು. ಬಿಸಿ ನೀರಿನ ಸ್ನಾನದ ಬಳಿಕ ನಮಗೆ ಊಟಕ್ಕೆ ಬರುವಂತೆ ಹೇಳಲಾಯಿತು. ಅದುವರೆಗೆ ಅವಸರ ಮಾಡುತ್ತಿದ್ದ ಪುತ್ತು ಈಗ ಮೌನವ್ರತ ಧರಿಸಿದ ಸನ್ಯಾಸಿಯಂತಾಗಿದ್ದ. ’ಊಟ’ ಎಂಬ ಎರಡು ಅಕ್ಷರಗಳ ಶಬ್ದ ತನ್ನ ಮಾಯೆಯನ್ನು ಮಾಡಿತ್ತು. ’ಟು ಹೆಲ್ ವಿತ್ ವಾಲಿಬಾಲ್ ಟುರ್ನಾಮೆಂಟ್’ ಅನ್ನುತ್ತಾ ಊಟಕ್ಕೆ ಕುಳಿತೇಬಿಟ್ಟ! ’ಏನನ್ನಾದರೂ ಬಿಟ್ಟೆನು, ಆದರೆ ತಿನ್ನುವ ಅವಕಾಶ ಬಿಡೆನು’ ಇದುವೇ ಪುತ್ತು ಸ್ಟೈಲ್.

೭ ಗಂಟೆಗೆ ವಾಲಿಬಾಲ್ ಪಂದ್ಯಾಟದಲ್ಲಿರಬೇಕಾದವನನ್ನು ಅಲ್ಲಿ ತಲುಪಿಸಿದಾಗ ಸಮಯ ೭.೩೦. ರಾತ್ರಿ ೧೧ಕ್ಕೆ ನಾನು ಉಡುಪಿ ತಲುಪಿದಾಗ ನನ್ನನ್ನು ಸ್ವಾಗತಿಸಿದ್ದು ಮಳೆ! ಜನವರಿಯಲ್ಲಿ ಮಳೆ!