ಭಾನುವಾರ, ಏಪ್ರಿಲ್ 29, 2012

ಕೇದಾರೇಶ್ವರ ದೇವಾಲಯ - ನಾಗಲಾಪುರ


ಇಲ್ಲಿ ದೊರೆತಿರುವ ಕೊನೆಯ ಹೊಯ್ಸಳ ದೊರೆ ೩ನೇ ಬಲ್ಲಾಳನ ಕಾಲದ ಶಾಸನಗಳ ಪ್ರಕಾರ ನಾಗಲಾಪುರ ಒಂದು ಪ್ರಸಿದ್ಧ ಅಗ್ರಹಾರವಾಗಿದ್ದು, ಹೊಯ್ಸಳ ಕಾಲದ ಇತರ ಅಗ್ರಹಾರಗಳಂತೆ ಇಲ್ಲೂ ವಿಷ್ಣು (ಚನ್ನಕೇಶವ) ಮತ್ತು ಶಿವ (ಕೇದಾರೇಶ್ವರ) ದೇವಾಲಯಗಳ ನಿರ್ಮಾಣವಾಯಿತು ಎಂದು ತಿಳಿದುಬಂದಿದೆ. ಊರಿನ ಕೆರೆಯ ತಟದ ಮೇಲೆ ದಕ್ಷಿಣಾಭಿಮುಖವಾಗಿ ಇರುವ ಕೇದಾರೇಶ್ವರ ದೇವಾಲಯವನ್ನು ಇಸವಿ ೧೨೬೦ರಲ್ಲಿ ಹೊಯ್ಸಳ ದೊರೆ ೩ನೇ ನರಸಿಂಹನ ಆಳ್ವಿಕೆಯ ಕಾಲದಲ್ಲಿ ನಿರ್ಮಿಸಲಾಯಿತು. ಶಿಥಿಲಗೊಂಡಿದ್ದ ದೇವಾಲಯವನ್ನು ಪ್ರಾಚ್ಯ ವಸ್ತು ಇಲಾಖೆ ಶ್ರಮವಹಿಸಿ ಜೀರ್ಣೋದ್ಧಾರಗೊಳಿಸಿ ಕಾಪಾಡಿಕೊಂಡಿದೆ.


ಈ ದೇವಾಲಯಕ್ಕೆ ಹೆಚ್ಚಾಗಿ ಬೀಗ ಜಡಿದಿರುತ್ತದೆ. ಜವಾಬ್ದಾರಿ ಹೊತ್ತಿರುವ ಪ್ರಾಚ್ಯ ವಸ್ತು ಇಲಾಖೆಯ ಸಿಬ್ಬಂದಿ (ಬೀಗ ಇರುವ ವ್ಯಕ್ತಿ) ಎಂದಿಗೂ ಇಲ್ಲಿರುವುದಿಲ್ಲ. ಹೆಚ್ಚಿನ ಪ್ರವಾಸಿಗರು ದೇವಾಲಯವಿರುವ ಪ್ರಾಂಗಣದ ಎತ್ತರದ ಗೇಟನ್ನು ದಾಟಲಾಗದೇ ಸುಮಾರು ೪೦ ಮೀಟರುಗಳಷ್ಟು ದೂರದಿಂದಲೇ ದೇವಾಲಯವನ್ನು ವೀಕ್ಷಿಸಿ ನಿರಾಸೆಯಿಂದ ಹಿಂತಿರುಗುತ್ತಾರೆ. ಗೇಟು ಹಾರಿ ಪ್ರಾಂಗಣದೊಳಗೆ ತೆರಳುವ ಸಾಹಸ ಮಾಡಿದರೂ ದೇವಾಲಯದೊಳಗೆ ಹೋಗಲಂತೂ ಅಸಾಧ್ಯ. ಗೇಟಿಗೂ ಬೀಗ, ದೇವಾಲಯದ ದ್ವಾರಕ್ಕೂ ಬೀಗ.


ದೇವಾಲಯ ದಿಬ್ಬವೊಂದರ ಮೇಲಿರುವುದರಿಂದ ಇಲ್ಲಿ ಜಗತಿ ಕಾಣಬರುವುದಿಲ್ಲ. ನವರಂಗ, ಅಂತರಾಳ ಮತ್ತು ಗರ್ಭಗುಡಿಗಳನ್ನೊಳಗೊಂಡಿರುವ ದೇವಾಲಯ ದಕ್ಷಿಣಾಭಿಮುಖವಾಗಿದ್ದರೂ ಗರ್ಭಗುಡಿ ಪೂರ್ವಾಭಿಮುಖವಾಗಿದೆ. ಗೋಪುರ ಮತ್ತು ಮುಖಮಂಟಪ ಕಣ್ಮರೆಯಾಗಿವೆ. ಎತ್ತರದ ಪೀಠದ ಮೇಲೆ ಸಣ್ಣ ಶಿವಲಿಂಗವಿದೆ. ದೇವಾಲಯದೊಳಗೆ ಒಂದು ಕವಾಟದಲ್ಲಿದ್ದ ಚಾಮುಂಡೇಶ್ವರಿಯ ವಿಗ್ರಹ ಹಲವು ವರ್ಷಗಳ ಹಿಂದೆ ಕಳುವಾಯಿತು ಎಂದು ಈ ದೇವಾಲಯದ ಬಗ್ಗೆ ಒಂದು ಲೇಖನದಲ್ಲಿ ಓದಿದ್ದೆ.


’ಬೈಚೋಜ’ ಎಂಬ ಶಿಲ್ಪಿಯು ಇಲ್ಲಿಯ ಮೂರ್ತಿಗಳನ್ನು ಕೆತ್ತಿದ ಶಿಲ್ಪಿ ಎಂದು ನಂಬಲಾಗಿದೆ. ಗಜಾಸುರಮರ್ದನ, ತಾಂಡವೇಶ್ವರ, ಉಮಾಮಹೇಶ್ವರ, ಇತ್ಯಾದಿ ಶಿವನ ರೂಪಗಳನ್ನು ಮತ್ತು ಬ್ರಹ್ಮ, ವಿಷ್ಣು, ದುರ್ಗೆ, ಸರಸ್ವತಿ ಇತ್ಯಾದಿ ಮೂರ್ತಿಗಳನ್ನೂ ಕೆತ್ತಲಾಗಿದೆ.


ನೀರಿನಲ್ಲಿ ಮೂಡುತ್ತಿರುವ ಪ್ರತಿಬಿಂಬವನ್ನು ನೋಡಿ ಮತ್ಸ್ಯಯಂತ್ರಕ್ಕೆ ಅರ್ಜುನ ಬಾಣಬಿಡುವ ಕೆತ್ತನೆ ಮನಗೆಲ್ಲುತ್ತದೆ.


ಹೊರಗೋಡೆಯ ತಳಭಾಗದಲ್ಲಿ ಆರು ಪಟ್ಟಿಕೆಗಳಿದ್ದು ಇದರಲ್ಲಿ ನಾಲ್ಕನೇ ಪಟ್ಟಿಕೆಯಲ್ಲಿ ಯಾವುದೇ ಕೆತ್ತನೆಗಳಿಲ್ಲ. ಉಳಿದವುಗಳಲ್ಲಿ ಕ್ರಮವಾಗಿ ಆನೆ, ಅಶ್ವ, ಬಳ್ಳಿಸುರುಳಿ, ಮಕರ ಮತ್ತು ಹಂಸಗಳ ಕೆತ್ತನೆಗಳಿವೆ.


ನವರಂಗದ ಒಂದು ಪಾರ್ಶ್ವದ ಗೋಡೆ ಉರುಳಿಬಿದ್ದಿದ್ದು ಅದನ್ನು ಪುನ: ರಚಿಸಲಾಗಿದೆ. ಆ ಭಾಗವನ್ನು ಬಿಟ್ಟರೆ ದೇವಾಲಯದ ಹೊರಗೋಡೆಯಲ್ಲಿ ಅದ್ಭುತ ಶಿಲ್ಪ ಕಲಾಕೃತಿಗಳ ರಸದೌತಣ. ಶಿಲ್ಪಕಲಾ ಆಸಕ್ತರಿಗೆ ನಿರಾಸೆ ಮಾಡದ ತಾಣ.

ಶನಿವಾರ, ಏಪ್ರಿಲ್ 21, 2012

ಮಲ್ಲಿಕಾರ್ಜುನ ದೇವಾಲಯ - ಸೂಡಿ


ಹತ್ತು ಹಾಗೂ ಹನ್ನೊಂದನೇ ಶತಮಾನದಲ್ಲಿ ಕಲ್ಯಾಣಿ ಚಾಲುಕ್ಯರ ರಾಜಧಾನಿಯಾಗಿ ಮೆರೆದಿದ್ದ ಊರು ಸೂಡಿ. ಆರನೇ ವಿಕ್ರಮಾದಿತ್ಯನ ಆಳ್ವಿಕೆಯ ಕಾಲದಲ್ಲಿ (೧೦೭೬-೧೧೨೬) ನಾಣ್ಯಗಳನ್ನು ನಿರ್ಮಿಸುವ ಪ್ರಮುಖ ಟಂಕಸಾಲೆ ಸೂಡಿಯಲ್ಲೇ ಇತ್ತು. ರಾಷ್ಟ್ರಕೂಟರ, ಕಲ್ಯಾಣಿ ಚಾಲುಕ್ಯರ ಮತ್ತು ಸೇವುಣ ಯಾದವರ ಕಾಲದ (ಇಸವಿ ೧೦೧೦ರಿಂದ ೧೨೦೨ರವರೆಗೆ ದಿನಾಂಕಗಳಿರುವ) ೧೬ ಶಾಸನಗಳು ಇಲ್ಲಿ ದೊರಕಿವೆ. ಆಗಿನ ಕಾಲದಲ್ಲಿ ಸೂಡಿಯನ್ನು ’ಸೂಂಡಿ’ ಎಂದು ಕರೆಯಲಾಗುತ್ತಿತ್ತು. ಇಲ್ಲಿರುವ ಪ್ರಮುಖ ದೇವಾಲಯಗಳೆಂದರೆ ಶಿವ ದೇವಾಲಯ ಮತ್ತು ಮಲ್ಲಿಕಾರ್ಜುನ ದೇವಾಲಯ.


ಮಲ್ಲಿಕಾರ್ಜುನ ದೇವಾಲಯವನ್ನು ಕಾಡುತ್ತಿರುವ ಸಮಸ್ಯೆ ಒತ್ತುವರಿಯದ್ದು. ತೀರಾ ಇತ್ತೀಚೆಗಷ್ಟೆ ಈ ಎರಡು ದೇವಾಲಯಗಳನ್ನು ತನ್ನ ಸುಪರ್ದಿಗೆ ತೆಗೆದುಕೊಂಡಿರುವ ಪ್ರಾಚ್ಯ ವಸ್ತು ಇಲಾಖೆ ಸೂಕ್ತ ಸಮಯದಲ್ಲೇ ಎಚ್ಚೆತ್ತುಕೊಂಡಿದೆ ಎನ್ನಬಹುದು. ಎತ್ತರವಾದ ಅಧಿಷ್ಠಾನದ ಮೇಲೆ ನಿರ್ಮಾಣಗೊಂಡಿರುವ ದೇವಾಲಯದ ಒಂದು ಪಾರ್ಶ್ವದಲ್ಲಿ ಸಮೀಪದವರೆಗೆ ಮನೆಗಳಿದ್ದು ಎತ್ತರವಾದ ಗೋಡೆಯನ್ನು ನಿರ್ಮಿಸಲಾಗಿದೆ. ಈ ಗೋಡೆಯ ಮತ್ತು ದೇವಾಲಯದ ನಡುವಿನ ಅಂತರದಲ್ಲಿ ಒಬ್ಬ ವ್ಯಕ್ತಿ ನುಸುಳಬಹುದಾದ ಅಂತರ ಮಾತ್ರ ಇದೆ. ಉಳಿದ ಮೂರು ಪಾರ್ಶ್ವಗಳಲ್ಲಿ ರಸ್ತೆಗಳಿವೆ.


ಹನ್ನೆರಡು ಕಂಬಗಳ ಆಕರ್ಷಕ ಮುಖಮಂಟಪ, ನವರಂಗ ಮತ್ತು ೩ ಗರ್ಭಗುಡಿಗಳನ್ನು ಹೊಂದಿರುವ ಮಲ್ಲಿಕಾರ್ಜುನ ದೇವಾಲಯವನ್ನು ೧೧ನೇ ಶತಮಾನದ ಸುಮಾರಿಗೆ ನಿರ್ಮಿಸಲಾಗಿರಬಹುದು ಎಂಬ ಅಭಿಪ್ರಾಯವಿದೆ. ನಿಖರವಾಗಿ ನಿರ್ಮಾಣದ ವರ್ಷವನ್ನು ತಿಳಿಸುವ ಶಾಸನ ಲಭ್ಯವಾಗಿಲ್ಲ. ನವರಂಗದ ದ್ವಾರಕ್ಕೆ ಕೆಂಪುಬಣ್ಣ ಬಳಿಯಲಾಗಿರುವುದರಿಂದ ಕೆತ್ತನೆಗಳು ಇದ್ದೂ ಇಲ್ಲದಂತೆ. ಪಂಚಶಾಖಾ ದ್ವಾರದಲ್ಲಿ ವಜ್ರ ತೋರಣ, ವಾದ್ಯಗಾರರು, ನೃತ್ಯಗಾರರು, ಸ್ತಂಭ ಮತ್ತು ಬಳ್ಳಿಯ ಕೆತ್ತನೆಗಳನ್ನು ಕಾಣಬಹುದು. ಲಲಾಟದಲ್ಲಿ ಗಜಲಕ್ಷ್ಮೀಯ ಹೊರಚಾಚು ಕೆತ್ತನೆಯಿದೆ.


ನವರಂಗದಲ್ಲಿ ಸುಂದರ ಅಲಂಕಾರಿಕ ಕೆತ್ತನೆಗಳುಳ್ಳ ನಾಲ್ಕು ಕಂಬಗಳಿವೆ. ಎಲ್ಲಾ ಗರ್ಭಗುಡಿಗಳಿಗೆ ಇಲ್ಲಿಂದಲೇ ಪ್ರವೇಶ. ಪ್ರಮುಖ ಗರ್ಭಗುಡಿಗೆ ತೆರೆದ ಅಂತರಾಳವಿದ್ದು ಉಳಿದೆರಡು ಗರ್ಭಗುಡಿಗಳಿಗೆ ಅಂತರಾಳಗಳಿಲ್ಲ. ಅಂತರಾಳ ಆರಂಭವಾಗುವಲ್ಲಿ ಎರಡು ಕಂಬಗಳಿದ್ದು ಮೇಲ್ಗಡೆ ಅತ್ಯಾಕರ್ಷಕ ಮತ್ತು ವಿಶಿಷ್ಟ ಮಕರತೋರಣವಿದೆ.


ಇದರಲ್ಲಿ ತ್ರಿಮೂರ್ತಿಗಳನ್ನು ತೋರಿಸಲಾಗಿದ್ದು, ಬ್ರಹ್ಮ ಮತ್ತು ವಿಷ್ಣು ಮಕರಗಳ ಮೇಲೆ ಆಸೀನರಾಗಿರುವಂತೆ ಮತ್ತು ಶಿವನನ್ನು ತಾಂಡವನೃತ್ಯ ಮಾಡುತ್ತಿರುವಂತೆ ತೋರಿಸಲಾಗಿದೆ. ಶಿವನ ಅಕ್ಕ ಪಕ್ಕದಲ್ಲಿ ಇರುವವರು ಬ್ರಹ್ಮ ಹಾಗೂ ವಿಷ್ಣುವೋ ಅಥವಾ ಮಕರಗಳ ಮೇಲಿದ್ದವರು ಬ್ರಹ್ಮ ಮತ್ತು ವಿಷ್ಣು ಆಗಿದ್ದಿರಬಹುದೋ? ಹೆಚ್ಚಾಗಿ ಮಕರಗಳ ಮೇಲೆ ಯಕ್ಷ-ಯಕ್ಷಿಯರನ್ನೂ ಹಾಗೂ ಶಿವನ ಅಕ್ಕಪಕ್ಕದಲ್ಲಿ ಬ್ರಹ್ಮ ಮತ್ತು ವಿಷ್ಣುವಿನ ಕೆತ್ತನೆಯಿರುತ್ತದೆ. ಕೆತ್ತನೆ ಬಹಳ ಮೇಲೆ ಇದ್ದ ಕಾರಣ ಮತ್ತು ಕತ್ತಲೆಯ ಕಾರಣದಿಂದ ನನ್ನ ಸಾಧಾರಣ ಕ್ಯಾಮರಾದಿಂದ ಚಿತ್ರ ಸರಿಯಾಗಿ ಬರಲಿಲ್ಲ. ಚಿತ್ರ ಸರಿಯಾಗಿ ಬಂದಿದ್ದರೆ ಸ್ಪಷ್ಟ ನಿರ್ಣಯಕ್ಕೆ ಬರಬಹುದಿತ್ತು. ಉತ್ತರ ಕರ್ನಾಟಕದ ದೇವಾಲಯಗಳಲ್ಲಿ ವಿದ್ಯುತ್ತಿನದ್ದೇ ಒಂದು ದೊಡ್ಡ ಸಮಸ್ಯೆ. ಟಾರ್ಚ್ ಒಯ್ಯಬೇಕು ಎಂದು ಎಷ್ಟು ನೆನಪು ಮಾಡಿಕೊಂಡರೂ ಕೊನೆ ಕ್ಷಣದಲ್ಲಿ ನೆನಪು ಹಾರಿಬಿಡುತ್ತೇನೆ.


ಪ್ರಮುಖ ಗರ್ಭಗುಡಿಯು ಪಂಚಶಾಖಾ ದ್ವಾರವನ್ನು ಹೊಂದಿದ್ದು ಎಲ್ಲಾ ಶಾಖೆಗಳು ಸುಂದರ ಕೆತ್ತನೆಗಳಿಂದ ಅಲಂಕೃತಗೊಂಡಿವೆ. ಆದರೆ ಇಲ್ಲೂ ಬಣ್ಣ ಬಳಿದು ಕೆತ್ತನೆಗಳ ಅಂದಗೆಡವಲಾಗಿದೆ. ಲಲಾಟದಲ್ಲಿರುವ ಗಜಲಕ್ಷ್ಮೀಯ ಮತ್ತು ಅಷ್ಟದಿಕ್ಪಾಲಕರ ಕೆತ್ತನೆಗಳೂ ತಮ್ಮ ನೈಜರೂಪವನ್ನು ಶಾಶ್ವತವಾಗಿ ಕಳೆದುಕೊಂಡಿವೆ.


ಉತ್ತರದಲ್ಲಿರುವ ಗರ್ಭಗುಡಿಯಲ್ಲಿ ನಿಂತುಕೊಂಡಿರುವ ಭಂಗಿಯಲ್ಲಿ ಉಮಾಮಹೇಶ್ವರನ ಸುಂದರ ಶಿಲ್ಪವಿದೆ. ಧೂಳಿನ ಪರಿಸರವಾಗಿರುವುದರಿಂದ ಮೂರ್ತಿ ತನ್ನ ಹೊಳಪನ್ನು ಕಳೆದುಕೊಳ್ಳುತ್ತಿದೆ. ಮಹೇಶ್ವರ ತನ್ನ ಕೈಯನ್ನು ಉಮೆಯ ಹೆಗಲ ಮೇಲೆ ಇಟ್ಟಿರುವಂತೆ ಮತ್ತು ಆಕೆ ತನ್ನ ಕೈಯನ್ನು ಅತನ ಸೊಂಟವನ್ನು ಬಳಸಿ ಹಿಡಿದುಕೊಂಡಿರುವಂತೆ ಕೆತ್ತಲಾಗಿರುವ ಶಿಲ್ಪದ ಮೋಹಕ ನೋಟಕ್ಕೆ ಮನಸೋತೆ. ಶಿವನ ಪಕ್ಕದಲ್ಲಿ ನಂದಿಯನ್ನು ಮತ್ತು ಉಮೆಯ ಪಕ್ಕದಲ್ಲಿ ಗಣೇಶನನ್ನು ತೋರಿಸಲಾಗಿದೆ.


ದಕ್ಷಿಣದಲ್ಲಿರುವ ಗರ್ಭಗುಡಿಯಲ್ಲಿ ಆಶ್ಚರ್ಯವೊಂದು ಕಾದಿತ್ತು. ಕ್ಯಾಮರಾ ಫ್ಲ್ಯಾಷ್‍ನ ಬೆಳಕಿನಲ್ಲಿ ಯಾರೋ ಮಲಗಿಕೊಂಡಿರುವಂತೆ ಭಾಸವಾಯಿತು. ಚಕಿತಗೊಂಡು ಕ್ಯಾಮರಾದ ಚಿತ್ರವನ್ನು ನೋಡಿದರೆ ಆಭರಣಗಳಿಂದ ಅಲಂಕರಿಸಲ್ಪಟ್ಟಿರುವ ಅನಂತಪದ್ಮನಾಭ! ಇನ್ನೊಂದು ಶಿವಲಿಂಗವನ್ನು ನಿರೀಕ್ಷಿಸಿದ್ದ ನನಗೆ ಈ ಮೂರ್ತಿಯನ್ನು ಕಂಡು ಸಂತೋಷ ಮತ್ತು ಸೋಜಿಗ ಎರಡೂ ಉಂಟಾದವು. ಹೊಳಪಿನ ಕರಿಕಲ್ಲಿನಲ್ಲಿ ಕೆತ್ತಲಾಗಿರುವ ಮೂರ್ತಿಯ ಪ್ರಭಾವಳಿಯಲ್ಲಿ ವಿಷ್ಣುವಿನ ಹತ್ತು ಅವತಾರಗಳನ್ನು ಮತ್ತು ಅಷ್ಟದಿಕ್ಪಾಲಕರನ್ನು ತೋರಿಸಲಾಗಿದೆ. ಈ ಮೂರ್ತಿಯಲ್ಲಿ ಶ್ರೀದೇವಿ, ಭೂದೇವಿ, ಗರುಡ ಮತ್ತು ಬ್ರಹ್ಮರನ್ನೂ ಕಾಣಬಹುದು.

ಮಾಹಿತಿ: ಪ್ರಾಚ್ಯ ವಸ್ತು ಇಲಾಖೆ

ಭಾನುವಾರ, ಏಪ್ರಿಲ್ 15, 2012

ಚನ್ನಕೇಶವ ದೇವಾಲಯ - ಹಿರೆಕಡಲೂರು


ಒಂದು ಊರಿನ ಜನರಿಗೆ ತಮ್ಮ ಊರಿನ ಇತಿಹಾಸದ ಬಗ್ಗೆ ಹೆಮ್ಮೆ ಇಲ್ಲದಿದ್ದರೆ, ಹೊಯ್ಸಳ ಆಳ್ವಿಕೆಯ ಗುರುತಾಗಿ ತಮ್ಮ ಊರಿನಲ್ಲಿರುವ ದೇವಾಲಯದ ಬಗ್ಗೆ ಕಾಳಜಿ, ಅಭಿಮಾನ ಇಲ್ಲದಿದ್ದರೆ ಏನಾಗುತ್ತದೆ ಎಂಬುದಕ್ಕೆ ಹಿರೆಕಡಲೂರಿನ ಚನ್ನಕೇಶವ ದೇವಾಲಯ ಸಾಕ್ಷಿ. ಊರಿನ ಮುಖ್ಯ ರಸ್ತೆಯಿಂದ ಸ್ವಲ್ಪ ಒಳಗೆ ದಿಬ್ಬವೊಂದರ ಮೇಲೆ ಈ ದೇವಾಲಯವಿದೆ. ರಸ್ತೆಯ ಬದಿಯಲ್ಲಿರುವ ಕಟ್ಟೆಯೊಂದರ ಮೇಲೆ ಒಂದಷ್ಟು ಜನರು ಹರಟುತ್ತಾ ಕುಳಿತಿದ್ದರು. ದೇವಾಲಯಕ್ಕೆ ದಾರಿ ತೋರಿಸಿ ನಂತರ ನಮ್ಮನ್ನೇ ಹಿಂಬಾಲಿಸುತ್ತಾ ದೇವಾಲಯಕ್ಕೆ ಬಂದರು.


ಪಾಳುಬೀಳುತ್ತಿರುವ ದೇವಾಲಯವಿದು. ಊರಿನವರಿಗೆ ದೇವಾಲಯದ ಬಗ್ಗೆ ಎಳ್ಳಷ್ಟೂ ಕಾಳಜಿಯಿಲ್ಲ. ಕಾಳಜಿಯೇ ಇಲ್ಲವೆಂದ ಮೇಲೆ ಇನ್ನು ಹೆಮ್ಮೆ ಮತ್ತು ಅಭಿಮಾನ ದೂರದ ಮಾತುಗಳು. ದೇವಾಲಯದ ಸುತ್ತಲೂ ಮತ್ತು ಮೇಲೆಲ್ಲಾ ಗಿಡಗಂಟಿಗಳು. ದೇವಾಲಯಕ್ಕಿದ್ದ ಪ್ರಾಂಗಣ ಬಿದ್ದುಹೋಗಿದ್ದು ಪ್ರಾಂಗಣ ಗೋಡೆಯ ಕಲ್ಲುಗಳಲ್ಲಿ ಕೆಲವು ಅಲ್ಲೇ ಅನಾಥವಾಗಿ ಬಿದ್ದುಕೊಂಡಿದ್ದರೆ, ಹೆಚ್ಚಿನವು ಕಣ್ಮರೆಯಾಗಿವೆ. ಸುತ್ತಲೂ ಗಿಡಗಂಟಿಗಳು ಅದ್ಯಾವ ಪರಿ ವ್ಯಾಪಿಸಿಕೊಂಡಿವೆ ಎಂದರೆ ದೇವಾಲಯಕ್ಕೊಂದು ಪ್ರದಕ್ಷಿಣೆ ಹಾಕಲು ಕಷ್ಟಪಡಬೇಕಾಯಿತು.


ದಿಬ್ಬದ ಮೇಲೆ ನಿರ್ಮಾಣಗೊಂಡ ಹೊಯ್ಸಳ ದೇವಾಲಯಗಳಿಗೆ ಜಗಲಿ(ಜಗತಿ)ಯ ರಚನೆಯಿರುವುದು ಬಹಳ ಕಡಿಮೆ. ಇಂತಹ ದೇವಾಲಯಗಳು ನೇರವಾಗಿ ನೆಲಗಟ್ಟಿನಿಂದಲೇ ಮೇಲೇರುತ್ತವೆ ಮತ್ತು ದೇವಾಲಯ ಹಾಗೂ ಪ್ರಾಂಗಣ ಗೋಡೆಯ ನಡುವಿನ ಅಂತರವೇ ಪ್ರದಕ್ಷಿಣಾ ಪಥವಾಗಿರುತ್ತದೆ. ಹಿರೆಕಡಲೂರಿನ ದೇವಾಲಯ ದಿಬ್ಬದ ಮೇಲೆ ಇರುವುದರಿಂದ ಇಲ್ಲಿ ಜಗಲಿಯಿಲ್ಲ. ಪ್ರಾಂಗಣಕ್ಕಿದ್ದ ದ್ವಾರದ ಗುರುತಾಗಿ ಎರಡು ಕಲ್ಲಿನ ಕಂಬಗಳು ಅನಾಥವಾಗಿ ನಿಂತುಕೊಂಡಿವೆ. ದೇವಾಲಯದ ಹಿಂಭಾಗದಲ್ಲಿ ಪ್ರಾಂಗಣ ಗೋಡೆಯ ಅಳಿದುಳಿದ ಕುರುಹುಗಳನ್ನು ಕಾಣಬಹುದು.


೧೨ನೇ ಶತಮಾನದಲ್ಲಿ ಹೊಯ್ಸಳ ದೊರೆ ಎರಡನೇ ನರಸಿಂಹನ ಆಳ್ವಿಕೆಯ ಕಾಲದಲ್ಲಿ ಈ ದೇವಾಲಯ ನಿರ್ಮಾಣಗೊಂಡಿತು. ಆಗ ಈ ಊರನ್ನು ’ಅರುಂಧತಿಪುರ’ ಎಂದು ಕರೆಯಲಾಗುತ್ತಿತ್ತು. ದೇವಾಲಯದ ಮುಖಮಂಟಪದಲ್ಲಿ ಈಗ ೧೪ ಕಂಬಗಳು ಇವೆ. ಎಲ್ಲವೂ ಸುಸ್ಥಿತಿಯಲ್ಲಿದ್ದಿದ್ದರೆ ಇದೊಂದು ಸುಂದರ ಮುಖಮಂಟಪ.


ನವರಂಗದ ದ್ವಾರವು ಐದು ತೋಳುಗಳನ್ನು ಹೊಂದಿದ್ದು, ಮೂರನೆಯ ತೋಳನ್ನು ಹೊರತುಪಡಿಸಿ ಉಳಿದವುಗಳಲ್ಲಿ ಪ್ರತ್ಯೇಕ ಬಳ್ಳಿಸುರುಳಿಯ ಕೆತ್ತನೆಗಳಿವೆ. ದ್ವಾರದ ಇಕ್ಕೆಲಗಳಲ್ಲಿ ಶಂಖಚಕ್ರಗದಾಪದ್ಮಧಾರಿಯಾಗಿರುವ ವಿಷ್ಣುವಿನ ಮೂರ್ತಿಗಳಿವೆ. ವಿಷ್ಣುವಿನ ಈ ಮೂರ್ತಿಗಳು ಪ್ರಭಾವಳಿ ಕೆತ್ತನೆ ಮತ್ತು ಪರಿಚಾರಿಕೆಯರನ್ನು ಒಳಗೊಂಡಿವೆ. ದ್ವಾರದ ಮೇಲ್ಗಡೆ ಗಜಲಕ್ಷ್ಮೀಯ ಸ್ಫುಟವಾದ ಕೆತ್ತನೆಯಿದೆ. ಈ ಸುಂದರ ಕೆತ್ತನೆಯೂ ನಶಿಸಿಹೋಗುತ್ತಿದೆ.


ಗರ್ಭಗುಡಿಯು ಸಂಪೂರ್ಣವಾಗಿ ಸೋರುತ್ತಿರುವುದರಿಂದ ದೇವರ ಮೂರ್ತಿಯನ್ನು ನವರಂಗದ ನಾಲ್ಕು ಕಂಬಗಳ ನಡುವೆ ಇರಿಸಲಾಗಿದೆ. ಇಲ್ಲೂ ಅಲ್ಲಲ್ಲಿ ಸೂರು ಸೋರುತ್ತದೆ. ಕೇವಲ ಒಂದೆರಡು ಮಳೆಗೆ ಈ ಪರಿ ನೀರು ಒಳಗೆ ಬಂದರೆ ಇನ್ನು ಮಳೆಗಾಲದಲ್ಲಿ ಇಲ್ಲಿ ದೃಶ್ಯ ಹೇಗಿರಬಹುದೇನೋ?


ಗರುಡನ ಕೆತ್ತನೆಯಿರುವ ಪೀಠದ ಮೇಲೆ ಇರುವ ೬ ಅಡಿ ಎತ್ತರದ ಚನ್ನಕೇಶವನ ಆಕರ್ಷಕ ವಿಗ್ರಹವಿದು. ಬಿಳಿ ಪಾಚಿಯ ಪ್ರಭಾವದಿಂದ ಚನ್ನಕೇಶವ ಶ್ವೇತವರ್ಣಧಾರಿಯಂತೆ ಕಾಣುತ್ತಿದ್ದ. ಶ್ರೀದೇವಿ ಮತ್ತು ಭೂದೇವಿಯರು ಮೈತುಂಬಾ ಸುಣ್ಣ ಬಳಿದವರಂತೆ ಚನ್ನಕೇಶವನ ಇಕ್ಕೆಲಗಳಲ್ಲಿ ಇದ್ದೂ ಕಾಣದವರಾಗಿಬಿಟ್ಟಿದ್ದರು. ವಿಗ್ರಹದಲ್ಲಿರುವ ಪ್ರಭಾವಳಿ ಕೆತ್ತನೆಯೂ ನಶಿಸುತ್ತಿದೆ. ಇಲ್ಲಿ ದೈನಂದಿನ ಪೂಜೆ ನಡೆಯುವುದಿಲ್ಲ. ಊರಿನವರೇ ಯಾರಾದರೂ ಆಸ್ತಿಕರು ಆಗಾಗ ಬಂದು ಚನ್ನಕೇಶವನಿಗೆ ಶೃಂಗಾರ ಮಾಡಿ, ಆರತಿ ಎತ್ತಿ, ಪೂಜೆ ಮಾಡುತ್ತಾರೆ.


ದೇವಾಲಯದ ಮುಖಮಂಟಪದಲ್ಲಿ ಮತ್ತು ನವರಂಗದಲ್ಲಿ ಛಾವಣಿಯ ಒಳಮೇಲ್ಮೈಯಲ್ಲಿ ಆಕರ್ಷಕ ಕೆತ್ತನೆಗಳಿವೆ. ನವರಂಗದಲ್ಲಿರುವ ಕೆತ್ತನೆಯಂತೂ ಮನಮೋಹಕವಾಗಿದೆ.


ದೇವಾಲಯದ ಛಾವಣಿ ಕುಸಿದಿದೆ ಮತ್ತು ಒಂದು ಪಾರ್ಶ್ವದಲ್ಲಿ ಹೊರಗೋಡೆಯ ಕಲ್ಲುಗಳೂ ಕಳಚಿಹೋಗಿವೆ. ಹೊರಗೋಡೆಯಲ್ಲಿ ಮತ್ತು ಗೋಪುರದಲ್ಲಿ ಯಾವುದೇ ಭಿತ್ತಿಚಿತ್ರಗಳಿಲ್ಲ. ಗೋಪುರ ಸುಸ್ಥಿತಿಯಲ್ಲಿದ್ದರೂ, ಮೇಲೆ ಇರುವ ಕಮಲದ ಮುಂಭಾಗವು ಒಡೆದಿದ್ದು ಸೋರುವಿಕೆಗೆ ಇದೇ ಪ್ರಮುಖ ಕಾರಣವಿರಬಹುದು. ಕಲಶದ ತುದಿಯೂ ತುಂಡಾಗಿದೆ.


ದೇವಾಲಯ ಸ್ವಚ್ಛ ಮಾಡಲು ಕ್ರಮಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿ ಎಂದು ನಮ್ಮಲ್ಲಿ ಹಳ್ಳಿಗರ ವಿನಂತಿ! ಊರಿನ ಜನರು ದೇವಾಲಯದ ಪರಿಸರವನ್ನಾದರೂ ಸ್ವಚ್ಛ ಮಾಡಬಹುದಲ್ಲವೇ? ಪ್ರಾಚ್ಯ ವಸ್ತು ಇಲಾಖೆಯೇ ಎಲ್ಲವನ್ನೂ ಮಾಡಬೇಕು ಎಂದು ನಿರೀಕ್ಷಿಸಿದರೆ ಅದು ಅಸಾಧ್ಯದ ಮಾತು. ಆ ಇಲಾಖೆಯಾದರೂ ಎಷ್ಟು ಮಾಡೀತು? ಆಯಾ ಊರಿನವರು ತಮ್ಮ ಊರಿನ ದೇವಾಲಯದ ರಕ್ಷಣೆಗೆ ಮುಂದಾದರೆ ಅದಕ್ಕಿಂತ ಉತ್ತಮ ಬೇರೇನೂ ಇಲ್ಲ. ಹಿರೆಕಡಲೂರಿನ ಜನರು ಯಾವಾಗ ಇದನ್ನರಿಯುತ್ತಾರೋ...

ಮಾಹಿತಿ: ourtemples.in

ಭಾನುವಾರ, ಏಪ್ರಿಲ್ 08, 2012

ವಿಶ್ವನಾಥ, ಭೀಮೇಶ್ವರ ಮತ್ತು ಅಗಸ್ತ್ಯೇಶ್ವರ ದೇವಾಲಯಗಳು - ಹೂಲಿ


ವಿಶ್ವನಾಥ ದೇವಾಲಯವನ್ನು ಕಾಶಿ ವಿಶ್ವನಾಥ ದೇವಾಲಯವೆಂದೂ ಕರೆಯುತ್ತಾರೆ. ಮುಖಮಂಟಪ, ಆಯತಾಕಾರದ ಸಣ್ಣ ನವರಂಗ, ತೆರೆದ ಅಂತರಾಳ ಮತ್ತು ಗರ್ಭಗುಡಿಯನ್ನು ಹೊಂದಿರುವ ದೇವಾಲಯವಿದು.


ಮೂಲ ಮುಖಮಂಟಪವು ೧೨ ಕಂಬಗಳನ್ನು ಹೊಂದಿದ್ದು, ಮುಂಭಾಗದ ನಾಲ್ಕು ಕಂಬಗಳು ಬಿದ್ದುಹೋಗಿರುವ ಕುರುಹುಗಳಿವೆ. ಈಗ ಇರುವ ೮ ಕಂಬಗಳಲ್ಲಿ ನಡುವೆ ಇರುವ ನಾಲ್ಕು ಕಂಬಗಳಿಗೆ ಪ್ರಭಾವಳಿ ಕೆತ್ತನೆಯಿದ್ದರೂ ಅವೆಲ್ಲಾ ನಶಿಸಿ ಹೋಗುತ್ತಿವೆ. ಮುಖಮಂಟಪವನ್ನು ಒಳಗೊಂಡು ದೇವಾಲಯದ ಒಳಗೆಲ್ಲಾ ತುಂಬಾ ಕೆಟ್ಟದಾಗಿ ಸುಣ್ಣಬಣ್ಣ ಬಳಿಯಲಾಗಿರುವುದರಿಂದ ಕೆತ್ತನೆಗಳ ನೈಜ ರೂಪ ಮಾಸಿದೆ.


ಈ ನಾಲ್ಕು ಕಂಬಗಳ ಪೈಕಿ ಎರಡು ಕಂಬಗಳ ಶಿರಭಾಗದಲ್ಲಿ ವೃತ್ತಾಕಾರದ ಕಬ್ಬಿಣದ ಸಲಕರಣೆಯನ್ನು ಜೋಡಿಸಿರುವುದು ವಿಸ್ಮಯಕಾರಿಯಾಗಿದೆ. ಅದರ ಮಹತ್ವ ನನಗೆ ತಿಳಿಯಲಿಲ್ಲ. ಇದು ಎಲ್ಲೂ ಕಾಣದ ವೈಶಿಷ್ಟ್ಯ. ಆ ಕಬ್ಬಿಣದ ’ರಿಂಗ್’ಗಳನ್ನು ಅಲ್ಲಿ ಹೇಗೆ ಇರಿಸಲಾಯಿತು ಎಂಬುವುದೇ ಆಶ್ಚರ್ಯ.


ಈ ದೇವಾಲಯದಲ್ಲಿ ನಂದಿಯ ಸುಳಿವಿಲ್ಲ. ಗರ್ಭಗುಡಿಯಲ್ಲಿ ಬಹಳ ಸಣ್ಣ ಶಿವಲಿಂಗವಿದೆ. ಗರ್ಭಗುಡಿಯು ಚತುರ್ಶಾಖಾ ದ್ವಾರವನ್ನು ಹೊಂದಿದೆ. ಲಲಾಟದಲ್ಲಿ ಗಜಲಕ್ಷ್ಮೀಯಿದ್ದಾಳೆ. ದ್ವಾರದ ಶಾಖೆಗಳಲ್ಲಿ ನೃತ್ಯಜೋಡಿಯ, ಸಂಗೀತ/ವಾದ್ಯಗಾರರ ಮತ್ತು ಅಲಂಕಾರಿಕ ಕೆತ್ತನೆಗಳಿರುವುದನ್ನು ಕಾಣಬಹುದು. ಆದರೆ ಈ ಕೆತ್ತನೆಗಳಿಗೆ ಬಹಳ ಅಸಹ್ಯವಾಗಿ ಬಣ್ಣವನ್ನು ಹಚ್ಚಲಾಗಿದೆ. ಮೊದಲು ಯಾವುದೋ ಬಣ್ಣ ಹಚ್ಚಿ ನಂತರ ಅದರ ಮೇಲೆಯೇ ಸುಣ್ಣವನ್ನು ಬಳಿದು ಸಂಪೂರ್ಣ ವಿರೂಪಗೊಳಿಸಲಾಗಿದೆ.


ಗಜಲಕ್ಷ್ಮೀಯ ಆಕರ್ಷಕ ಕೆತ್ತನೆಯ ಮೇಲೆ ಮನಬಂದಂತೆ ಬಣ್ಣಗಳ ಎರಚಾಟ ಮಾಡಲಾಗಿದೆ. ಹೂಲಿಯಲ್ಲಿ ವಿಕೃತ ’ಹೋಲಿ’! ಅದೂ ಪುರಾತನ ದೇವಾಲಯಗಳ ಕೆತ್ತನೆಗಳ ಜೊತೆಗೆ.


ವಿಶ್ವನಾಥ ದೇವಾಲಯದ ಇನ್ನೊಂದು ವೈಶಿಷ್ಟ್ಯವೆಂದರೆ, ಹೊರಗೋಡೆಯ ಮೂರೂ ಪಾರ್ಶ್ವಗಳಲ್ಲಿ ತಲಾ ಒಂದರಂತೆ ಬಳಸಲಾಗಿರುವ ವೃತ್ತಾಕಾರದ ಉದ್ದನೆಯ ಸ್ತಂಭ. ಏನಾದರೂ ಹೊಸತನವಿರಲಿ ಎಂಬಷ್ಟಕ್ಕೆ ಮಾತ್ರ ಈ ಕಂಬಗಳನ್ನು ವೃತ್ತಾಕಾರವಾಗಿ ರಚಿಸಿರಬಹುದೇ ವಿನ: ಬೇರೆ ಮಹತ್ವವೇನೂ ಇರಲಾರದು.


ದೇವಾಲಯದ ಶಿಖರ ಬಿದ್ದುಹೋಗಿದೆ. ಶಿಖರದ ತಳಭಾಗ ಆಂದರೆ ಮೊದಲನೇ ಮತ್ತು ಭಾಗಶ: ಎರಡನೇ ತಾಳಗಳು ಮಾತ್ರ ಉಳಿದುಕೊಂಡಿವೆ. ಹೊರಗೋಡೆಯಲ್ಲಿ ಕೆಲವು ಮಿನಿ ಗೋಪುರಗಳನ್ನು ಕೆತ್ತಲಾಗಿದ್ದು ಇವುಗಳಲ್ಲಿ ಕೆಲವು ಒಂದು ಸ್ತಂಭವನ್ನು ಹೊಂದಿದ್ದರೆ ಉಳಿದವು ಎರಡು ಸ್ತಂಭಗಳನ್ನು ಹೊಂದಿವೆ.


ವಿಶ್ವನಾಥನ ಸಮೀಪವೇ ಭೀಮೇಶ್ವರನಿದ್ದಾನೆ. ರಚನೆಯಲ್ಲಿ ವಿಶ್ವನಾಥ ದೇವಾಲಯವನ್ನೇ ಹೋಲುವ ಈ ದೇವಾಲಯವು ಆಯತಾಕಾರದ ನವರಂಗ, ತೆರೆದ ಅಂತರಾಳ ಮತ್ತು ಗರ್ಭಗುಡಿಯನ್ನು ಹೊಂದಿದೆ. ದೇವಾಲಯಕ್ಕೆ ಹೊರಚಾಚು ಮುಖಮಂಟಪವಿದ್ದ ಕುರುಹು ಕಾಣಬರುತ್ತದೆ. ಈಗ ಮುಖಮಂಟಪದ ನೆಲಹಾಸು ಮಾತ್ರ ಉಳಿದುಕೊಂಡಿದೆ. ನವರಂಗದಲ್ಲಿ ನಾಲ್ಕು ಖಾಲಿ ದೇವಕೋಷ್ಠಗಳಿವೆ. ಅಂತರಾಳದಲ್ಲಿ ನಂದಿಯ ಮೂರ್ತಿಯಿದೆ ಮತ್ತು ಗರ್ಭಗುಡಿಯಲ್ಲಿರುವ ಭೀಮೇಶ್ವರ ಹೆಸರಿನ ಲಿಂಗವನ್ನು ಆಕರ್ಷಕ ಪೀಠದ ಮೇಲಿರಿಸಲಾಗಿದೆ.


ಈ ದೇವಾಲಯದಲ್ಲೂ ಭರ್ಜರಿಯಾಗಿಯೇ ’ಹೋಲಿ’ ಆಡಲಾಗಿದೆ. ಶಿವಲಿಂಗ (ಪೀಠವನ್ನೂ ಬಿಟ್ಟಿಲ್ಲ) ಮತ್ತು ನಂದಿಯನ್ನು ಬಿಟ್ಟು ಉಳಿದೆಲ್ಲೆಡೆ ಸುಣ್ಣಬಣ್ಣಗಳದ್ದೇ ದರ್ಬಾರು. ಆಕರ್ಷಕ ಕೆತ್ತನೆಗಳನ್ನೊಳಗೊಂಡಿರುವ ಗರ್ಭಗುಡಿಯ ಚತುರ್ಶಾಖಾ ದ್ವಾರದ ದುರವಸ್ಥೆ ನೋಡಿದರೆ ಖೇದವಾಗುತ್ತದೆ.


ದೇವಾಲಯದ ಶಿಖರ ಎಂದೋ ಕಳಚಿಬಿದ್ದಿದೆ. ಹೊರಗೋಡೆಯಲ್ಲಿ ಸುಂದರ ಮಂಟಪದ ರಚನೆಯಿರುವ ಮೂರು ಖಾಲಿ ದೇವಕೋಷ್ಠಗಳಿವೆ. ಹಲವು ಮಕರತೋರಣಗಳನ್ನು, ಸಣ್ಣ ಗೋಪುರಗಳನ್ನು ಮತ್ತು ಒಂದೆರಡು ಕೆತ್ತನೆಗಳನ್ನು ಕೂಡಾ ಇಲ್ಲಿ ಕಾಣಬಹುದು.


ಈ ದೇವಾಲಯವನ್ನು ಊರವರು ’ಕಲ್ಲೇಶ್ವರ’ ಎಂದು ಕರೆಯುತ್ತಾರೆ. ಕಲ್ಲೇಶ್ವರನಿಗೆ ದೊಡ್ಡ ಪ್ರಮಾಣದಲ್ಲಿ ವಾರ್ಷಿಕ ಜಾತ್ರೆಯೂ ನಡೆಯುವುದರಿಂದ ಈ ದೇವಾಲಯಕ್ಕೆ ಬಣ್ಣ ಬಳಿಯಲಾಗಿದೆ. ಕಲ್ಲೇಶ್ವರ ದೇವಾಲಯ ಇರುವ ಪ್ರಾಂಗಣದಲ್ಲೇ ಇವೆ ಎಂಬ ಕಾರಣಕ್ಕೆ ವಿಶ್ವನಾಥ ಮತ್ತು ಅಗಸ್ತ್ಯೇಶ್ವರ ದೇವಾಲಯಗಳಿಗೂ ಬಣ್ಣ ಬಳಿಯಲಾಗಿದೆ.


ಅಗಸ್ತ್ಯೇಶ್ವರ ದೇವಾಲಯವು ಅಂತರಾಳ ಮತ್ತು ಗರ್ಭಗುಡಿಯನ್ನು ಮಾತ್ರ ಹೊಂದಿದೆ. ನವರಂಗ ಮತ್ತು ಮುಖಮಂಟಪಗಳು ಕುರುಹುಗಳೇ ಇಲ್ಲದಂತೆ ನಾಶವಾಗಿವೆ. ಅಂತರಾಳದಲ್ಲಿ ನಂದಿಯ ಮೂರ್ತಿಯಿದೆ. ಅಂತರಾಳದ ದ್ವಾರಕ್ಕೆ ಜಾಲಂಧ್ರಗಳ ರಚನೆಯಿರುವುದು ಮತ್ತು ದ್ವಾರದ ಇಕ್ಕೆಲಗಳಲ್ಲಿ ದೇವಕೋಷ್ಠಗಳಿರುವುದು ನವರಂಗ ಇದ್ದ ಸ್ಪಷ್ಟ ಸಾಕ್ಷಿಯನ್ನು ಒದಗಿಸುತ್ತವೆ. ನವರಂಗ ಇದ್ದ ಬಳಿಕ ಮುಖಮಂಟಪವೂ ಇದ್ದಿರಬಹುದು ಎನ್ನುವುದು ನನ್ನ ಊಹೆ ಮಾತ್ರ.


ಗರ್ಭಗುಡಿಯು ಯಾವುದೆ ಕೆತ್ತನೆಗಳಿಲ್ಲದ ಸರಳ ತ್ರಿಶಾಖಾ ದ್ವಾರವನ್ನು ಹೊಂದಿದೆ. ಲಲಾಟದಲ್ಲಿ ಶಂಖಚಕ್ರಪದ್ಮಗದಾಧಾರಿಯಾಗಿರುವ ವಿಷ್ಣುವಿನ ಕೆತ್ತನೆಯಿರುವುದು ಈ ದೇವಾಲಯದ ಬಹಳ ಪ್ರಮುಖ ವೈಶಿಷ್ಟ್ಯ. ಶಿವಲಿಂಗವಿರುವ ಗರ್ಭಗುಡಿಯ ದ್ವಾರದ ಲಲಾಟದಲ್ಲಿ ವಿಷ್ಣು!

ಅಂದು-ಇಂದು:


ಕಪ್ಪುಬಿಳುಪಿನಲ್ಲಿರುವುದು ಒಂದೇ ಪ್ರಾಂಗಣದೊಳಗಿರುವ ಈ ೩ ದೇವಾಲಯಗಳ ೧೮೭೪ರಲ್ಲಿ ತೆಗೆದ ಚಿತ್ರ.  ವರ್ಣಚಿತ್ರವನ್ನು ೨೦೧೧ರಲ್ಲಿ ತೆಗೆಯಲಾಗಿದೆ. ಮೂರೂ ದೇವಾಲಯಗಳು ಸುಣ್ಣ ಬಣ್ಣದಿಂದ ಮುಕ್ತವಾಗಿರುವುದನ್ನು ಗಮನಿಸಿ. ಉಳಿದಂತೆ ಆಗ ಹೇಗಿದ್ದವೋ ಇಂದಿಗೂ ಹಾಗೇ ಇವೆ.

ಮಾಹಿತಿ: ಪ್ರಾಚ್ಯ ವಸ್ತು ಇಲಾಖೆ