ಬದಾಮಿ ಚಾಲುಕ್ಯ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಬದಾಮಿ ಚಾಲುಕ್ಯ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಗುರುವಾರ, ಸೆಪ್ಟೆಂಬರ್ 15, 2016

ವಿರೂಪಾಕ್ಷ ದೇವಾಲಯ - ಲಕ್ಕುಂಡಿ


ಊರ ನಡುವೆ ಇರುವ ವಿರೂಪಾಕ್ಷ ದೇವಾಲಯವು ನವರಂಗ, ತೆರೆದ ಅಂತರಾಳ ಹಾಗೂ ಗರ್ಭಗುಡಿಯನ್ನು ಒಳಗೊಂಡಿದೆ. ರಾಷ್ಟ್ರಕೂಟ ಶೈಲಿಯ ಈ ದೇವಾಲಯವು ಚೌಕಾಕಾರದ ತಳವಿನ್ಯಾಸವನ್ನು ಹೊಂದಿದೆ. ಇತಿಹಾಸಕಾರರ ಪ್ರಕಾರ ನಿರ್ಮಾಣದ ಬಹಳ ವರ್ಷಗಳ ಬಳಿಕ, ಅಂದರೆ ಚಾಲುಕ್ಯ ಅಥವಾ ಹೊಯ್ಸಳರ ಕಾಲದಲ್ಲಿ ದೇವಾಲಯವನ್ನು ನವೀಕರಿಸಲಾಗಿದೆ. ದೇವಾಲಯಕ್ಕೆ ಮುಖಮಂಟಪ ಹಾಗೂ ಶಿಖರ ಇದ್ದ ಕುರುಹುಗಳನ್ನು ಕಾಣಬಹುದು. ವಿಶಾಲವಾಗಿದ್ದ ಮುಖಮಂಟಪದ ನೆಲಹಾಸು ಮಾತ್ರ ಈಗ ಉಳಿದಿದೆ.


ದೇವಾಲಯದ ದ್ವಾರವು ಪಂಚಶಾಖೆಗಳನ್ನು ಹೊಂದಿದೆ. ನವರಂಗದಲ್ಲಿ ನಾಲ್ಕು ಕಂಬಗಳಿವೆ. ತೆರೆದ ಅಂತರಾಳದಲ್ಲಿ ಇನ್ನೆರಡು ಕಂಬಗಳಿದ್ದು, ಇವುಗಳ ನಡುವೆ ನಂದಿಯ ದೊಡ್ಡ ಮೂರ್ತಿಯಿದೆ.


ಗರ್ಭಗುಡಿಯ ದ್ವಾರವು ಅಲಂಕೃತ ಪಂಚಶಾಖೆಗಳನ್ನು ಹೊಂದಿದ್ದು, ಇವುಗಳಲ್ಲಿ ವಜ್ರತೋರಣ, ವಾದ್ಯಗಾರರು, ಸ್ತಂಭ, ಸಂಗೀತಗಾರರು ಹಾಗೂ ಬಳ್ಳಿಸುರುಳಿಯನ್ನು ಕಾಣಬಹುದು. ಕೆಳಭಾಗದಲ್ಲಿ ಮಾನವ ಕೆತ್ತನೆಗಳಿವೆ.


ದ್ವಾರದ ಮೇಲ್ಭಾಗದಲ್ಲಿ ಗಜಲಕ್ಷ್ಮೀಯ ಸ್ಫುಟವಾದ ಕೆತ್ತನೆಯಿದೆ. ಗಜಲಕ್ಷ್ಮೀಯ ಮೇಲ್ಭಾಗದಲ್ಲಿ ಸಾಲಿನಲ್ಲಿ ಕುಳಿತಿರುವಂತೆ ಪಕ್ಷಿಗಳನ್ನು (ಕಾಗೆಯಂತೆ ಕಾಣುತ್ತವೆ!) ತೋರಿಸಲಾಗಿದೆ.


ಗರ್ಭಗುಡಿಯಲ್ಲಿ ಶಿವಲಿಂಗವಿದ್ದು ದಿನಾಲೂ ಪೂಜೆ ಸಲ್ಲಿಸಿ ದೀಪ ಬೆಳಗಲಾಗುತ್ತದೆ. ದೇವಾಲಯದ ಹೊರಗೋಡೆಯಲ್ಲಿ ಗೋಪುರವಿರುವ ಮಂಟಪಗಳನ್ನು ಕೆತ್ತಿರುವುದನ್ನು ಬಿಟ್ಟರೆ ಬೇರೆ ಯಾವ ಕೆತ್ತನೆಗಳಿಲ್ಲ.


ದೇವಾಲಯಕ್ಕಿದ್ದ ಮುಖಮಂಟಪದ ವಿಶಾಲ ನೆಲಹಾಸಿನಲ್ಲಿ ಹಳ್ಳಿಗರು ಲೋಕಾಭಿರಾಮ ಹರಟುತ್ತಾ ಕುಳಿತಿರುತ್ತಾರೆ. ಅಕ್ಕಪಕ್ಕದಲ್ಲೆಲ್ಲಾ ಮನೆ ಹಾಗೂ ಅಂಗಡಿಗಳಿದ್ದು, ದೇವಾಲಯದ ಪರಿಸರದಲ್ಲಿ ಹಳೇ ಸಾಮಾನುಗಳನ್ನು ಎಲ್ಲೆಂದರಲ್ಲಿ ಹರಡಿರುವುದು ಕಂಡುಬರುತ್ತದೆ.

ಭಾನುವಾರ, ಜೂನ್ 05, 2016

ಮಣಕೇಶ್ವರ ದೇವಾಲಯ - ಲಕ್ಕುಂಡಿ


ಮಣಕೇಶ್ವರ ದೇವಾಲಯವು ತ್ರಿಕೂಟಾಚಲವಾಗಿದ್ದು, ಚಾಲುಕ್ಯ ಶೈಲಿಯಲ್ಲಿ ನಿರ್ಮಿಸಲಾಗಿದೆ. ಇಲ್ಲಿರುವ ಮೂರು ಗರ್ಭಗುಡಿಗಳಿಗೆ ಪ್ರತ್ಯೇಕ ಅಂತರಾಳಗಳಿವೆ.



ಎಲ್ಲಾ ಗರ್ಭಗುಡಿಗಳಿಗೆ ಸಾಮಾನ್ಯ ನವರಂಗವಿದೆ. ನವರಂಗದಲ್ಲಿ ನಾಲ್ಕು ಕಂಬಗಳ ನಡುವೆ, ಮೇಲ್ಛಾವಣಿಯಲ್ಲಿ ಆಕರ್ಷಕ ಕೆತ್ತನೆಯಿದೆ.

 

ನವರಂಗದ ಕಂಬವೊಂದರ ಮೇಲೆ ೧೨ನೇ ಶತಮಾನದ ಶಾಸನವೊಂದನ್ನು ಕಾಣಬಹುದು. ಪಾಳುಬಿದಿದ್ದ ದೇವಾಲಯವನ್ನು ಪುರಾತತ್ವ ಇಲಾಖೆ ದುರಸ್ತಿಪಡಿಸಿದೆ.


ದೇವಾಲಯದ ಮುಂದೆನೇ ಸುಂದರವಾದ ಹಾಗೂ ವಿಶಾಲವಾದ ಬಾವಿಯೊಂದಿದೆ. ಇದನ್ನು ಮುಸುಕುನ ಬಾವಿ ಅಥವಾ ಸಿದ್ಧರ ಬಾವಿ ಎಂದು ಕರೆಯುತ್ತಾರೆ. ಆದರೆ ಶಾಸನಗಳಲ್ಲಿ ಈ ಬಾವಿಯನ್ನು ನಾಗರಬಾವಿ ಎಂದು ಕರೆಯಲಾಗಿದೆ.



ಸುಂದರ ಮೆಟ್ಟಿಲುಗಳನ್ನು ಹಾಗೂ ಆಕರ್ಷಕ ಗೋಪುರಗಳುಳ್ಳ ಮಂಟಪಗಳನ್ನು ಹೊಂದಿರುವ ಈ ಬಾವಿ ನೋಡುಗರ ಮನಸೂರೆಗೊಳ್ಳುತ್ತದೆ. ಬಾವಿಯ ಎಲ್ಲಾ ಮಂಟಪಗಳು ಖಾಲಿಯಿದ್ದರೂ, ಪಂಚಶಾಖಾ ದ್ವಾರ ಮತ್ತು ಗಜಲಕ್ಷ್ಮೀಯಿಂದ ಪರಿಪೂರ್ಣವಾಗಿ ಅಲಂಕೃತಗೊಂಡಿವೆ.


ಈ ಬಾವಿಯ ಸಮೀಪದಲ್ಲೇ ಇರುವ ಶಾಸನದಲ್ಲಿ, ಆದಿಕೇಯ ಕೇಶವ ದೇವ ಎಂಬವನ ಮೊಮ್ಮಗನಾಗಿದ್ದ ಹಾಗೂ ವಿಷ್ಣು ಭಟ್ಟ ಎಂಬವನ ಮಗನಾಗಿದ್ದ, ಕೇಶವ ಎಂಬವನು ಈ ಕೆರೆಯ ನಿರ್ವಹಣೆಗಾಗಿ ವಾರ್ಷಿಕ ಒಂದಷ್ಟು ಹಣವನ್ನು ನೀಡುತ್ತಿರುವುದಾಗಿ ಬರೆಯಲಾಗಿದೆ.


ಈ ಶಾಸನವು ಇಸವಿ ೧೧೯೫ರದ್ದಾಗಿದ್ದು, ಅದು ಹೊಯ್ಸಳ ದೊರೆ ಎರಡನೇ ಬಲ್ಲಾಳನ ಆಳ್ವಿಕೆಯ ಸಮಯ. ಹೊಯ್ಸಳರ ಸಮಯದಲ್ಲಿ ಕೆರೆಯ ನಿರ್ವಹಣೆಯೆ ಬಗ್ಗೆ ಶಾಸನ ದೊರೆತಿರುವ ಆಧಾರದ ಮೇರೆಗೆ, ಇತಿಹಾಸಕಾರರು ಈ ಕೆರೆಯ ನಿರ್ಮಾಣ ಚಾಲುಕ್ಯರ ಆಳ್ವಿಕೆಯ ಸಮಯದಲ್ಲಿ ಆಗಿದೆ ಎಂದು ಅಭಿಪ್ರಾಯಪಡುತ್ತಾರೆ.


ಮಣಕೇಶ್ವರ ದೇವಾಲಯವನ್ನು, ಮಣಿಕೇಶ್ವರ ಹಾಗೂ ಮಾಣಿಕ್ಯೇಶ್ವರ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ. ಮುಸುಕಿನ ಬಾವಿಯನ್ನು ನಿರ್ಮಿಸಲು ಬಳಸಿದ ಕಲ್ಲುಗಳನ್ನೇ ಮಣಕೇಶ್ವರ ದೇವಾಲಯದ ನಿರ್ಮಾಣಕ್ಕೆ ಬಳಸಲಾಗಿದೆ.

ಮಂಗಳವಾರ, ಏಪ್ರಿಲ್ 12, 2016

ಹೂಲಿಯ ಇತರ ದೇವಾಲಯಗಳು


ರಾಮೇಶ್ವರ ದೇವಾಲಯ:

ನನ್ನ ಮೊದಲ ಭೇಟಿಯಲ್ಲಿ ಈ ದೇವಾಲಯದತ್ತ ತೆರಳುವುದು ಅಸಾಧ್ಯವಾಗಿತ್ತು. ಗಿಡಗಂಟಿ ಮತ್ತು ಪೊದೆಗಳಿಂದ ಸುತ್ತುವರಿದಿದ್ದ ದೇವಾಲಯದ ಸಮೀಪ ಸುಳಿಯುವುದು ಕೂಡಾ ಕಷ್ಟಕರವಾಗಿತ್ತು. ಎರಡನೇ ಭೇಟಿಯ ಸಮಯದಲ್ಲಿ ಎಲ್ಲವೂ ಬದಲಾಗಿತ್ತು. ದೇವಾಲಯಕ್ಕೆ ತೆರಳಲು ದಾರಿಯಿತ್ತು. ದೇವಾಲಯದೊಳಗೆ ದಿಬ್ಬದಂತೆ ರಾಶಿಬಿದ್ದಿದ್ದ ಮಣ್ಣನ್ನು ತೆಗೆದು ಹೊರಹಾಕಿ ಸ್ವಚ್ಛ ಮಾಡಲಾಗಿತ್ತು.



ಈ ದೇವಾಲಯವಿರುವ ಕೆರೆಯ ಏರಿ ಮತ್ತು ಭೀಮೇಶ್ವರ ದೇವಾಲಯವಿರುವ ಪ್ರಾಂಗಣ ಎದುರುಬದುರಾಗಿದ್ದು ನಡುವೆ ಕೆರೆಯಿದೆ. ಮೊದಲ ಸಲ ಬಂದಾಗ ಭೀಮೇಶ್ವರ ದೇವಾಲಯದ ಪ್ರಾಂಗಣದಿಂದ ಈ ದೇವಾಲಯ ಕಾಣಿಸುತ್ತಿರಲಿಲ್ಲ. ಅಷ್ಟು ದಟ್ಟವಾಗಿ ಬೆಳೆದಿದ್ದ ಗಿಡಗಂಟಿಗಳು ದೇವಾಲಯವನ್ನು ಸುತ್ತುವರೆದು ಮರೆಮಾಚಿದ್ದವು. ಈಗ ಮೇಲಿನ ಚಿತ್ರದಲ್ಲಿರುವಂತೆ ರಾಮೇಶ್ವರ ದೇವಾಲಯ ಸುಂದರವಾಗಿ ಗೋಚರಿಸುತ್ತದೆ.


ನಾಲ್ಕು ಕಂಬಗಳ ನವರಂಗ, ತೆರೆದ ಅಂತರಾಳ ಮತ್ತು ಗರ್ಭಗುಡಿಯನ್ನು ಹೊಂದಿರುವ ದೇವಾಲಯವಿದು. ಈ ದೇವಾಲಯಕ್ಕಿದ್ದ ಮುಖಮಂಟಪ ಈಗ ಬಿದ್ದುಹೋಗಿದೆ ಎಂದು ನಂಬಲಾಗಿದೆ. ನಂದಿಯ ಮೂರ್ತಿಯನ್ನು ಅಂತರಾಳದಲ್ಲಿ ಕಾಣಬಹುದು. ಗರ್ಭಗುಡಿಯು ಅಲಂಕಾರರಹಿತ ಪಂಚಶಾಖಾ ದ್ವಾರವನ್ನು ಹೊಂದಿದ್ದು ಲಲಾಟದಲ್ಲಿ ಗಜಲಕ್ಷ್ಮೀಯ ಕೆತ್ತನೆಯಿದೆ.



ಈ ದೇವಾಲಯದಲ್ಲಿ ದೊರಕಿರುವ ಶಿಲಾಶಾಸನವೊಂದನ್ನು ನವರಂಗದಲ್ಲಿರಿಸಲಾಗಿದೆ. ಇದರಲ್ಲಿ ವಿಷ್ಣುವಿನ ಶೇಷಶಯನ ರೂಪದ ಕೆತ್ತನೆಯನ್ನು ಕಾಣಬಹುದು. ಈ ಕೆತ್ತನೆಯಲ್ಲಿ ಬ್ರಹ್ಮ, ಲಕ್ಷ್ಮೀ ಮತ್ತು ಭೂದೇವಿಯರಿದ್ದಾರೆ. ಕಳಚೂರಿ ದೊರೆ ಬಿಜ್ಜಳನ ಆಳ್ವಿಕೆಯ ಸಮಯದಲ್ಲಿ ಇಸವಿ ೧೧೬೨ರಲ್ಲಿ ಈ ಶಾಸನವನ್ನು ಬರೆಯಲಾಗಿದೆ.



ಕೆರೆ ಸಿದ್ಧೇಶ್ವರ ದೇವಾಲಯ:

ಕೆರೆಯ ಏರಿಯ ಮೇಲೆ ಇರುವ ಈ ದೇವಾಲಯ ದೂರದಿಂದ ಉಗ್ರಾಣದಂತೆ ತೋರುತ್ತದೆ. ಸಂಪೂರ್ಣವಾಗಿ ಬಿದ್ದುಹೋಗಿದ್ದ ದೇವಾಲಯವನ್ನು ಬದಲಿ ಕಲ್ಲುಗಳನ್ನು ಬಳಸಿ ಪುನ: ನಿರ್ಮಿಸಲಾಗಿದೆ. ಸಭಾಮಂಟಪ, ಅಂತರಾಳ ಮತ್ತು ಗರ್ಭಗುಡಿಯನ್ನು ಹೊಂದಿರುವ ದೇವಾಲಯದ ಮುಖಮಂಟಪ ಎಂದೋ ಬಿದ್ದುಹೋಗಿದೆ.


ಸಭಾಮಂಟಪದ ನಡುವೆ ನಾಲ್ಕು ಕಂಬಗಳ ನವರಂಗ ಇದೆ. ಅಂತರಾಳದ ತ್ರಿಶಾಖಾ ದ್ವಾರವನ್ನು ಹೊಂದಿದ್ದು ಜಾಲಂಧ್ರಗಳನ್ನೂ ಹೊಂದಿದೆ. ದ್ವಾರದ ಇಕ್ಕೆಲಗಳಲ್ಲಿ ದೇವಕೋಷ್ಠಗಳಿದ್ದು ಖಾಲಿಯಿವೆ. ದೊರಕಿರುವ ಶಾಸನವೊಂದನ್ನು ಇಲ್ಲೇ ಇರಿಸಲಾಗಿದೆ.


ಗರ್ಭಗುಡಿಯಲ್ಲೇ ಶಿವಲಿಂಗದ ಜೊತೆಗೆ ನಂದಿಯೂ ಇದೆ. ಅಂತರಾಳವಿದ್ದರೂ ನಂದಿ ಗರ್ಭಗುಡಿಯಲ್ಲೇ ಆಸೀನನಾಗಿರುವುದು ಗಮನಾರ್ಹ. ಈ ದೇವಾಲಯಕ್ಕೂ ಒಳಗಡೆ ಎಲ್ಲೆಡೆ ಸುಣ್ಣ ಬಳಿಯಲಾಗಿದೆ.


ಗರ್ಭಗುಡಿಯು ಸುಂದರ ಕೆತ್ತನೆಗಳುಳ್ಳ ಪಂಚಶಾಖಾ ದ್ವಾರವನ್ನು ಹೊಂದಿದೆ. ಇಲ್ಲಿ ಜೋಡಿ ನೃತ್ಯಗಾರರ ಹಲವಾರು ಭಂಗಿಗಳನ್ನು ಕೆತ್ತಲಾಗಿದೆ. ಲಲಾಟದಲ್ಲಿ ಗಜಲಕ್ಷ್ಮೀಯ ಸುಂದರ ಕೆತ್ತನೆಯಿದೆ. ಇಕ್ಕೆಲಗಳಲ್ಲಿ ಅಷ್ಟದಿಕ್ಪಾಲಕರಿದ್ದಾರೆ, ಅಲಂಕಾರಿಕಾ ಕೆತ್ತನೆಗಳಿವೆ.



ಶಾಖೆಗಳ ತಳಭಾಗದಲ್ಲಿರುವ ಮಾನವರೂಪದ ಕೆತ್ತನೆಗಳೂ ಆಕರ್ಷಕವಾಗಿವೆ. ಆದರೆ ಈ ಎಲ್ಲಾ ಕೆತ್ತನೆಗಳು ಸುಣ್ಣದಲ್ಲಿ ಮುಳುಗಿಹೋಗಿದ್ದು ತಮ್ಮ ಆಕರ್ಷಣೆಯನ್ನು ಕಳಕೊಂಡಿವೆ.



ಸೂರ್ಯನಾರಾಯಣ ದೇವಾಲಯ:

ಕೆರೆಯ ಏರಿಯ ಮೇಲೆಯೇ ಇದೆ ಸೂರ್ಯನಾರಾಯಣ ದೇವಾಲಯ. ದೇವಾಲಯದ ಒಂದೊಂದೇ ಕಲ್ಲುಗಳು ಈಗಲೂ ನಿಧಾನವಾಗಿ ಕಳಚಿ ಊರಿನ ಮನೆಗಳನ್ನು ಸೇರಿಕೊಳ್ಳುತ್ತಿವೆ! ಗರ್ಭಗುಡಿ ಮತ್ತು ನವರಂಗಗಳನ್ನು ಮಾತ್ರ ಹೊಂದಿರುವ ಸಣ್ಣ ದೇವಾಲಯವಿದು.


ದೇವಾಲಯವನ್ನು ಗಮನಿಸಿದರೆ ಮುಖಮಂಟಪ ಬಹಳ ಹಿಂದೆನೇ ಕುಸಿದುಬಿದ್ದಿರುವಂತೆ ತೋರುತ್ತದೆ. ದೇವಾಲಯದ ಈಗ ಇರುವ ದ್ವಾರಕ್ಕೆ ಇಕ್ಕೆಲಗಳಲ್ಲಿ ಜಾಲಂಧ್ರಗಳಿವೆ ಮತ್ತು ಈ ಜಾಲಂಧ್ರಗಳಿಗೆ ತಾಗಿಕೊಂಡೇ ಒಂದೊಂದು ಕಲಾತ್ಮಕ ಕಂಬಗಳಿವೆ. ಹೆಚ್ಚಾಗಿ ನವರಂಗದ ದ್ವಾರಗಳು ಹೀಗಿರುತ್ತವೆ. ಸಣ್ಣ ಮುಖಮಂಟಪ ಇದ್ದ ಎಲ್ಲಾ ಕುರುಹುಗಳು ಕಾಣಬರುತ್ತವೆ. ಆದರೆ ಈಗ ಅಲ್ಲೇ ರಸ್ತೆ ಹಾದುಹೋಗಿದೆ ಮತ್ತು ರಸ್ತೆಯಿಂದ ಎರಡು ಹೆಜ್ಜೆ ಇಟ್ಟರೆ ದೇವಾಲಯದ ಒಳಗೆ ಬಂದು ಮುಟ್ಟಬಹುದು!



ದೇವಾಲಯದ ಪಾರ್ಶ್ವಗಳಲ್ಲಿ ಮಣ್ಣಿನ ರಾಶಿಯಿದೆ. ದೇವಾಲಯಕ್ಕೆ ಯಾವಾಗಲೂ ಬೀಗ ಹಾಕಿರುತ್ತದೆ. ಗರ್ಭಗುಡಿಯ ಮೇಲಿರುವ ಕದಂಬ ನಗರ ಶೈಲಿಯ ಶಿಖರದ ಮೇಲೆ ಹುಲ್ಲು ಬೆಳೆದಿರುವುದು ಬಿಟ್ಟರೆ ಇನ್ನೂ ಸುಸ್ಥಿತಿಯಲ್ಲಿದೆ. ಹೊರಗೋಡೆಯಲ್ಲಿ ಮಕರತೋರಣ ಮತ್ತು ಗೋಪುರಗಳ ಕೆತ್ತನೆಗಳಿವೆ.


ರುದ್ರಪಾದ ದೇವಾಲಯ:

ಸಂಪೂರ್ಣವಾಗಿ ಪಾಳುಬಿದ್ದ ದೇವಾಲಯವನ್ನು ಇತ್ತೀಚೆಗಷ್ಟೇ ಸ್ವಚ್ಚಗೊಳಿಸಲಾಗಿದೆ. ನನ್ನ ಮೊದಲ ಭೇಟಿಯಲ್ಲಿ ಇಲ್ಲಿಗೆ ಬರಲು ಸಾಧ್ಯವೇ ಆಗದಷ್ಟು ಮುಳ್ಳುಗಿಡಗಳು ದೇವಾಲಯವನ್ನು ಆವರಿಸಿಬಿಟ್ಟಿದ್ದವು.


ಶಿಥಿಲಗೊಂಡು ಜರ್ಝರಿತಗೊಂಡಿರುವ ದೇವಾಲಯದೊಳಗೆ ನವರಂಗ ಯಾವುದು ಗರ್ಭಗುಡಿ ಯಾವುದು ಎಂದೇ ಗೊಂದಲ ಉಂಟಾಗುತ್ತದೆ. ಸಣ್ಣ ಶಿವಲಿಂಗವೊಂದರ ಮುಂದೆ ಪಾದಗಳ ರಚನೆಯಿರುವ ಚೌಕಾಕಾರದ ಕಲ್ಲಿದೆ. ಇದೇ ಕಾರಣಕ್ಕೆ ಈ ದೇವಾಲಯವನ್ನು ರುದ್ರಪಾದ ದೇವಾಲಯವೆಂದು ಕರೆಯುತ್ತಾರೆ. ಪಾದಗಳ ಮುಂದೆ ಕಲ್ಲಿನ ಅಂಚಿನಲ್ಲಿ ಏನೋ ಬರೆದಿರುವುದನ್ನು ಕಾಣಬಹುದು.



ಇದೇ ರೀತಿ ಇನ್ನೊಂದು ಕಲ್ಲಿನ ಮೇಲೆ ನಾಲ್ಕು ಸಣ್ಣ ಪಾದರಕ್ಷೆಗಳ ಕೆತ್ತನೆಯಿದೆ. ಈ ಪಾದರಕ್ಷೆಗಳ ಮುಂದೆ ಶಂಖ ಚಕ್ರಗಳ ಕೆತ್ತನೆಯಿದ್ದು, ಹಿಂದೆ ಗದೆ ಮತ್ತು ಪದ್ಮಗಳ ಕೆತ್ತನೆಯಿದೆ ಹಾಗೂ ಸುತ್ತಲೂ ಕಮಲಗಳ ಕೆತ್ತನೆಯಿದೆ.


ರೇವಣಸಿದ್ಧೇಶ್ವರ ದೇವಾಲಯ:

ಶಿವಕಾಶಿ ಕಣಿವೆಯ ಪಾರ್ಶ್ವದಲ್ಲಿ ಹೂಲಿಯ ಇತರ ದೇವಾಲಯಗಳೆಡೆ ಮುಖಮಾಡಿ ಬೆಟ್ಟದ ಮೇಲೆ ರೇವಣಸಿದ್ಧೇಶ್ವರ ನೆಲೆಗೊಂಡಿದ್ದಾನೆ.


ಸಭಾಮಂಟಪ ಮತ್ತು ಗರ್ಭಗುಡಿ ಹೊಂದಿರುವ ಸರಳ ದೇವಾಲಯವಿದು. ೧೬ ಕಂಬಗಳ ಸಭಾಮಂಟಪದ ಒಂದು ಭಾಗದ ಗೋಡೆ ನೆಲಕಚ್ಚಿದೆ. ಇನ್ನೊಂದು ಪಾರ್ಶ್ವದ ಗೋಡೆ ಅರ್ಧಭಾಗದಷ್ಟು ಧರಾಶಾಯಿಯಾಗಿದೆ.


ಲಲಾಟದಲ್ಲಿ ಗಜಲಕ್ಷ್ಮೀಯ ಕೆತ್ತನೆಯುಳ್ಳ ತ್ರಿಶಾಖಾ ದ್ವಾರವನ್ನು ಗರ್ಭಗುಡಿಯು ಹೊಂದಿದೆ. ದ್ವಾರದ ಮೇಲ್ಭಾಗದಲ್ಲಿ ಮೂರು ಸಣ್ಣ ಗೋಪುರಗಳ ರಚನೆಯಿದೆ.


ಗರ್ಭಗುಡಿಯೊಳಗೆ ಪೀಠದ ಮೇಲೆ ರೇವಣಸಿದ್ಧೇಶ್ವರನ ಮೂರ್ತಿಯಿದೆ. ಇಲ್ಲಿ ದಿನಾಲೂ ಪೂಜೆ ಸಲ್ಲಿಸಲಾಗುತ್ತದೆ. ದೇವಾಲಯದ ಮುಂದೆನೇ ಹರಿದುಹೋಗುವ ಶಿವಕಾಶಿ ಹಳ್ಳ ಮಳೆ ಇದ್ದಾಗ ಇಲ್ಲೊಂದು ಸಣ್ಣ ಜಲಧಾರೆಯನ್ನು ನಿರ್ಮಿಸುತ್ತದೆ. ಹೂಲಿಗೆ ರವಿವಾರದಂದು ಕುಟುಂಬ ಸಮೇತ ವಿಹಾರಕ್ಕೆ ಬರುವವರಿದ್ದಾರೆ. ಅವರೆಲ್ಲಾ ನೇರವಾಗಿ ಬಂದು ವಿಶ್ರಮಿಸುವುದೇ ಈ ದೇವಾಲಯದ ಮುಂದೆ ಇರುವ ಮರಗಳ ನೆರಳಿನಲ್ಲಿ. ಇಲ್ಲೊಂದು ಎಂದೂ ಬತ್ತದ ಸಣ್ಣ ಬಾವಿಯಿದೆ. ಈ ಬಾವಿಯ ನೀರನ್ನು ಬಳಸಿ ಅಡುಗೆ ಮಾಡಿ, ಊಟ ಮುಗಿಸಿ, ಹೇರಳವಾಗಿ ಲಭ್ಯವಿರುವ ನೆರಳಿನಲ್ಲಿ ಮಧ್ಯಾಹ್ನದ ನಿದ್ದೆ ಮುಗಿಸಿ, ವಿಹಾರ(?) ಮುಗಿಸಿ ಹೋಗುವವರೂ ಇದ್ದಾರೆ.


ಮೈಲಾರಲಿಂಗೇಶ್ವರ ದೇವಾಲಯ:

ಬೆಟ್ಟದ ನಡುವೆ ತುಸು ಮೇಲ್ಭಾಗದಲ್ಲಿ ಇರುವ ಈ ದೇವಾಲಯು ಮುಖಮಂಟಪ ಮತ್ತು ಗರ್ಭಗುಡಿಯನ್ನು ಹೊಂದಿದೆ. ಈ ದೇವಾಲಯದ ಪರಿಸರವನ್ನು ಕೂಡಾ ಇತ್ತೀಚೆಗೆ ಸ್ವಚ್ಛ ಮಾಡಲಾಗಿದೆ.


ಭರಮಪ್ಪ ದೇವಾಲಯ:

ಕಲ್ಲುಗಳನ್ನು ಪೇರಿಸಿ ಇಡಲಾಗಿರುವ ಸಣ್ಣ ಗುಡಿಯೊಳಗಿರುವ ಶಿವಲಿಂಗವೊಂದನ್ನು ಊರವರು ’ಭರಮಪ್ಪ’ ಎಂದು ಪೂಜಿಸುತ್ತಾರೆ. ಹೊರಗೆ ಹಾನಿಗೊಂಡಿರುವ ಗಣೇಶನ ಮೂರ್ತಿಯೊಂದನ್ನು ಇರಿಸಲಾಗಿದೆ.


ಚನ್ನಮ್ಮಾ ದೇವಾಲಯ:

ಗರ್ಭಗುಡಿ ಮಾತ್ರ ಹೊಂದಿರುವ ಈ ದೇವಾಲಯ ಸಣ್ಣ ಜಗತಿಯ ಮೇಲಿದೆ. ಚನ್ನಮ್ಮನ ಸಣ್ಣ ವಿಗ್ರಹವನ್ನು ಇಲ್ಲಿ ಪೂಜಿಸಲಾಗುತ್ತದೆ. ಚನ್ನಮ್ಮನ ಬಳಿಯಲ್ಲೇ ಬಸವನ ಮೂರ್ತಿಯಿದೆ.


ಬನಶಂಕರಿ ದೇವಾಲಯ:

ಸಂಪೂರ್ಣವಾಗಿ ನವೀಕರಿಸಲಾಗಿರುವ ಬನಶಂಕರಿ ದೇವಾಲಯದಲ್ಲಿನ ವಿಗ್ರಹವನ್ನು ವಿಜಯನಗರ ಕಾಲದ್ದು ಎಂದು ನಂಬಲಾಗಿದೆ. ದಿನಾಲೂ ಪೂಜೆ ನಡೆಯುವ ಈ ದೇವಾಲಯದಲ್ಲಿ ಎರಡು ಶಾಸನಗಳು ದೊರಕಿವೆ.


ತ್ರಿಕೂಟೇಶ್ವರ ದೇವಾಲಯ:

ಊರಿನ ಹೊರಗೆ ಇರುವ ಈ ತ್ರಿಕೂಟ ದೇವಾಲಯ ನವೀನ ದೇವಾಲಯವೋ ಅಥವಾ ಪ್ರಾಚೀನ ದೇವಾಲಯವೋ ಎಂಬ ಮಾಹಿತಿ ದೊರಕಲಿಲ್ಲ. ಗೋಪುರಗಳನ್ನು ಕಂಡರೆ ಪ್ರಾಚೀನ ದೇವಾಲಯದಂತೆ ತೋರುತ್ತದೆ. ದೇವಾಲಯದ ನವೀಕರಣದ ಕೆಲಸ ಇನ್ನೂ ನಡೆಯುತ್ತಿತ್ತು. ದೇವಾಲಯಕ್ಕೆ ಬೀಗ ಜಡಿಯಲಾಗಿತ್ತು.

ಮಾಹಿತಿ: ಪ್ರಾಚ್ಯ ವಸ್ತು ಇಲಾಖೆ

ಸೋಮವಾರ, ಮಾರ್ಚ್ 07, 2016

ನೀಲಕಂಠೇಶ್ವರ ದೇವಾಲಯ - ಲಕ್ಕುಂಡಿ

 

ನೀಲಕಂಠೇಶ್ವರ ದೇವಾಲಯವು ನವರಂಗ, ತೆರೆದ ಅಂತರಾಳ ಹಾಗೂ ಗರ್ಭಗುಡಿಯನ್ನು ಹೊಂದಿದೆ. ಶಿಥಿಲಾವಸ್ಥೆಯನ್ನು ತಲುಪಿರುವ ದೇವಾಲಯವಿದು. ನವರಂಗದ ಹೊರಗೋಡೆಗಳು ಕಣ್ಮರೆಯಾಗಿದ್ದು, ಮೂರೂ ದಿಕ್ಕುಗಳಿಂದಲೂ ನವರಂಗಕ್ಕೆ ಮುಕ್ತ ಪ್ರವೇಶ.

 

ಗರ್ಭಗುಡಿಯ ದ್ವಾರವು ಪಂಚಶಾಖೆಗಳನ್ನು ಹೊಂದಿದ್ದು, ಲಲಾಟದಲ್ಲಿ ಅದೇನೋ ವಿಶಿಷ್ಟ ಮತ್ತು ಅಪರೂಪದ ಕೆತ್ತನೆಯಿದೆ. ದ್ವಾರಕ್ಕೆ ಕೆಂಪು ಬಣ್ಣ ಬಳಿಯಲಾಗಿದ್ದರಿಂದ ಈ ಕೆತ್ತನೆ ಅದೇನೆಂದು ತಿಳಿದುಕೊಳ್ಳಲಾಗಲಿಲ್ಲ.


ಗರ್ಭಗುಡಿಯಲ್ಲಿ ಎತ್ತರದ ಪಾಣಿಪೀಠದ ಮೇಲೆ ಉದ್ದನೆಯ ಶಿವಲಿಂಗವಿದೆ. ಗರ್ಭಗುಡಿಯಲ್ಲೇ ನಂದಿಯ ಸಣ್ಣ ಮೂರ್ತಿಯಿದೆ.



 
ದೇವಾಲಯದ ಹೊರಗೋಡೆಗಳ ಕಲ್ಲಿನ ಕವಚ ಕಣ್ಮರೆಯಾಗುತ್ತಿವೆ. ಹೊರಗೋಡೆಯಲ್ಲಿ ದೊಡ್ಡ ಗೋಪುರವಿರುವ ಮಂಟಪಗಳನ್ನು ಹಾಗೂ ಕಿರುಗೋಪುರವಿರುವ ಸ್ತಂಭಗಳನ್ನು ಕಾಣಬಹುದು.



 
ಈ ದೇವಾಲಯ ಪ್ರಸಿದ್ಧಿ ಪಡೆಯಲು ಇನ್ನೊಂದು ಕಾರಣವಿದೆ. ಮುಂಗಾರು ಮಳೆ ಚಲನಚಿತ್ರದ ಹಾಡೊಂದರಲ್ಲಿ ಈ ದೇವಾಲಯದ ಹೊರಗೋಡೆ ಮತ್ತು ನವರಂಗದ ಕಂಬಗಳು ೨೧ ಸೆಕೆಂಡುಗಳ ಕಾಲ (೩:೨೧ರಿಂದ) ಮಿಂಚಿ ಕಣ್ಮರೆಯಾಗುತ್ತವೆ!