ಭಾನುವಾರ, ಅಕ್ಟೋಬರ್ 28, 2012

ನಾಗರಮಡಿ


ಪ್ರಜಾವಾಣಿ ಮತ್ತು ಸಂಯುಕ್ತ ಕರ್ನಾಟಕಗಳಲ್ಲಿ ನಾಗರಮಡಿ ’ಜಲಧಾರೆ’ಯ ಬಗ್ಗೆ ಲೇಖನಗಳು ಬಂದಿದ್ದವು. ೨೦೦೭ ಗಾಂಧಿ ಜಯಂತಿಯ ರಜೆಯನ್ನು ಸದುಪಯೋಗಪಡಿಸಿಕೊಳ್ಳೋಣವೆಂದು ಹೊರಟು ನಾಗರಮಡಿ ಇರುವ ಪುಟ್ಟ ಹಳ್ಳಿ ತಲುಪಿದಾಗ ಮಧ್ಯಾಹ್ನ ೧.೦೦ ಆಗಿತ್ತು.


ಈ ಹಳ್ಳಿಯ ಚೆಕ್ ಪೋಸ್ಟ್ ನಲ್ಲಿ ನಮ್ಮನ್ನು ಬಸ್ಸಿನ ನಿರ್ವಾಹಕರು ಇಳಿಸಿದರು. ಅಲ್ಲೇ ಒಂದು ಸಣ್ಣ ಹೋಟೇಲು. ಆ ಹೋಟೇಲ್ ನೋಡಿದರೆ ಹಸಿವೆಲ್ಲಾ ಮಾಯವಾಗಬೇಕು, ಅಷ್ಟು ಕೊಳಕು. ಆದರೆ ಅಲ್ಲಿ ಬೇರೆ ಹೋಟೇಲುಗಳಿರಲಿಲ್ಲ. ಭಲೇ ದಡಿಯರಾಗಿದ್ದ ಅಪ್ಪ-ಮಗ ಜೋಡಿ ಈ ಹೋಟೇಲನ್ನು ನಡೆಸುತ್ತಿದ್ದರು. ಇಲ್ಲಿ ಜನರ ಸಂಚಾರ ಕಡಿಮೆ. ಹೋಟೇಲಿಗೆ ಯಾರೂ ಬರುವಂತೆ ಕಾಣುತ್ತಿರಲಿಲ್ಲ.


ಒಂದೆರಡು ಕಿಮಿ ರಸ್ತೆಯಲ್ಲೇ ನಡೆದ ಬಳಿಕ ಬಲಕ್ಕೆ ತಿರುಗಿ ನೇರ ನಡೆದರೆ ನಾಗರಮಡಿ ಎಂದು ಹೋಟೇಲಿನ ಅಪ್ಪ-ಮಗ ನಮಗೆ ತಿಳಿಸಿದರು. ರಸ್ತೆಯಲ್ಲಿ ನಡೆಯುವಾಗ ನೋಟ ಚೆನ್ನಾಗಿತ್ತು. ದೂರದಲ್ಲೊಂದು ಅತ್ಯಾಕರ್ಷವಾಗಿ ಕಾಣುತ್ತಿದ್ದ ಶಿಖರ. ರಸ್ತೆಯ ಎರಡೂ ಪಾರ್ಶ್ವಗಳಲ್ಲಿ ಗದ್ದೆಗಳು. ಗದ್ದೆಗಳ ನಡುವೆ ಅಲ್ಲಲ್ಲಿ ಮನೆಗಳು. ಬಲಕ್ಕೆ ದೂರದಲ್ಲಿ ಬೆಟ್ಟಗಳ ಸಾಲು. ಅಲ್ಲೆಲ್ಲೋ ನಾಗರಮಡಿ ಇರಬಹುದೆಂದು ಊಹಿಸಿದೆ. ದೇವಸ್ಥಾನದ ಬಳಿ ರಸ್ತೆಯಿಂದ ತಿರುವು ಪಡೆದು ಒಳಗೆ ನಡೆದೆವು. ಐದು ನಿಮಿಷದ ಬಳಿಕ ನಂತರ ಮನೆಗಳಿಲ್ಲ. ಮಣ್ಣಿನ ರಸ್ತೆಯಲ್ಲಿ ೧೫ ನಿಮಿಷ ನಡೆದ ಬಳಿಕ ತೊರೆಯೊಂದರ ಪಾರ್ಶ್ವದಲ್ಲೇ ರಸ್ತೆ ಮುಂದುವರಿಯಿತು. ನಾಗರಮಡಿ ಜಲಧಾರೆ ಇದೇ ಹಳ್ಳದಿಂದ ನಿರ್ಮಿತವಾಗಿರಬಹುದೆಂದು ಮುನ್ನಡೆದೆವು.


ಸ್ವಲ್ಪ ಹೊತ್ತಿನ ಬಳಿಕ ಕಲ್ಲಿನ ಕ್ವಾರಿಯೊಂದು ಎದುರಾಯಿತು. ಬೆಟ್ಟವನ್ನು ಶಿಸ್ತುಬದ್ಧವಾಗಿ ಕೊರೆದು ಕರಿಕಲ್ಲನ್ನು ಲೂಟಿಗೈಯಲಾಗಿತ್ತು. ಇದರ ಬದಿಯಲ್ಲೇ ನಿಧಾನವಾಗಿ ಮೇಲೇರಿದೆವು. ಎಡಕ್ಕೆ ಕ್ವಾರಿಯ ಆಳವಿದ್ದರೆ, ಬಲಕ್ಕೆ ಹಳ್ಳ ಹರಿಯುತ್ತಿತ್ತು. ಜಲಧಾರೆಯ ಸದ್ದಂತೂ ಕೇಳಿಸುತ್ತಿರಲಿಲ್ಲ.


ಬೆಟ್ಟದ ಮೇಲೆ ತಲುಪಿದಾಗ ಕೆಳಗೆ ವಿಚಿತ್ರ ಆಕಾರದ ಬಂಡೆಯೊಂದು ಕಂಡುಬಂತು. ಅದರ ಕೆಳಗಡೆಯಿಂದ ಹಳ್ಳವು ಹರಿಯುತ್ತಿತ್ತು. ನೋಡಿಬರೋಣವೆಂದು ಕೆಳಗಿಳಿದರೆ ಅಲ್ಲೇ ಇತ್ತು ನಾಗರಮಡಿ ಜಲಧಾರೆ(?!). ಕೇವಲ ೧೦-೧೨ ಅಡಿ ಎತ್ತರದಿಂದ ನೀರು ಕೆಳಗೆ ಬೀಳುತ್ತಿತ್ತು!ಆದರೆ ಆ ಬಂಡೆ! ನಾಗರಹಾವು ಹೆಡೆ ಎತ್ತಿದಾಗ ಕಾಣುವಂತೆ ಈ ಬಂಡೆ ಕಾಣುತಿತ್ತು. ಅದಕ್ಕೇ ನಾಗರಮಡಿ ಎಂಬ ಹೆಸರು. ಇದು ಸುಮಾರು ೩೦ ಅಡಿ ಎತ್ತರವಿದ್ದು, ಎರಡೂ ಪಾರ್ಶ್ವಗಳಲ್ಲಿರುವ ಕಲ್ಲಿನ ಗೋಡೆಯ ಮೇಲೆ ಆಧಾರವಾಗಿ ನಿಂತಿರುವುದು. ಇದರ ಕೆಳಗೇ ನೀರು ಧುಮುಕಿ, ೨೦ ಅಡಿ ಅಗಲ ಮತ್ತು ೨೫ ಅಡಿ ಉದ್ದದ ಕೊಳವೊಂದನ್ನು ಸೃಷ್ಟಿಸಿ ಮುಂದಕ್ಕೆ ಹರಿದು ಹೋಗುತ್ತಿತ್ತು.


ಜಲಧಾರೆ ಇರದಿದ್ದರೂ, ಸ್ಥಳ ಮಾತ್ರ ಬಹಳ ಚೆನ್ನಾಗಿತ್ತು. ಆ ಬಂಡೆಯ ರಚನೆ, ಹೆಡೆಯೆತ್ತಿ ನಿಂತಿರುವ ಅದರ ಆಕಾರ, ಬಂಡೆಯ ಅಡಿಯಲ್ಲಿರುವ ಈಜುಕೊಳದಂತಹ ನೀರಿನ ಗುಂಡಿ ಮತ್ತು ಸದ್ದಿಲ್ಲದ ಪ್ರಶಾಂತ ವಾತಾವರಣ.

ಮಾಹಿತಿ: ಅ.ಚಿಂ.ಜ್ಯೋತಿಷಿ ಮತ್ತು ಜಿ.ಡಿ.ಪಾಲೇಕರ

ಭಾನುವಾರ, ಅಕ್ಟೋಬರ್ 21, 2012

ಸಾತಖಂಡಾ!


೨೦೦೭ ಸೆಪ್ಟೆಂಬರ್ ೭. ಧಾರವಾಡದಲ್ಲಿ ವಿವೇಕ್ ಎಲ್ಲಾದರೂ ಹೊರಟಿದ್ದಾರೋ ನೋಡೋಣವೆಂದು ಫೋನಾಯಿಸಿದರೆ, ’ನಾಗಝರಿ ಫಾಲ್ಸ್ ಕಡೆ ಹೋಗೋಣ ಅಂತಿದ್ದೀವಿ..’ ಎಂಬ ಉತ್ತರ. ಅತ್ತ ಧಾರವಾಡದಿಂದ ವಿವೇಕ್ ಮತ್ತು ಗಂಗಾಧರ್ ಕಲ್ಲೂರ್ ಮತ್ತು ಇತ್ತ ಉಡುಪಿಯಿಂದ ನಾನು, ಜಲಧಾರೆ ಇದ್ದ ಊರಿನಲ್ಲಿ ಮುಂಜಾನೆ ಭೇಟಿಯಾಗೋಣವೆಂದು ನಿರ್ಧರಿಸಿದೆವು.


ಮುಂಜಾನೆ ಹಳ್ಳಿಯಲ್ಲೊಂದೆಡೆ ಕಾರನ್ನಿರಿಸಿ ಜಲಧಾರೆಯತ್ತ ಹೊರಟೆವು. ಸುಮಾರು ೨ ಕಿಮಿ ಟಾರು ರಸ್ತೆಯಲ್ಲಿ ನಡೆದು ನಂತರ ಮಣ್ಣಿನ ರಸ್ತೆಗೆ ಹೊರಳಿದೆವು. ನವೆಂಬರ್ ಬಳಿಕ ಪ್ರವಾಸಿಗರನ್ನು ನಾಗಝರಿ ಜಲಧಾರೆಗೆ ಕರೆದೊಯ್ಯುವ ಸಲುವಾಗಿ ಅರಣ್ಯ ಇಲಾಖೆ ನಿರ್ಮಿಸಿದ ರಸ್ತೆ ಇದು. ಎಪ್ರಿಲ್ ನಿಂದ ಅಕ್ಟೋಬರ್ ವರೆಗೆ ಇಲ್ಲಿ ಯಾರನ್ನೂ ಅರಣ್ಯ ಇಲಾಖೆಯವರು ಕರೆದುಕೊಂಡು ಬರುವುದಿಲ್ಲ. ಆದ್ದರಿಂದ ರಸ್ತೆಯಲ್ಲೆಲ್ಲಾ ಗಿಡಗಂಟಿಗಳು ಬೆಳೆದು ನಿಂತಿದ್ದವು.


ಪಕ್ಷಿಪ್ರಿಯರಿಗಂತೂ ಈ ಕಾಡುಗಳು ಸ್ವರ್ಗ. ಪಕ್ಷಿ ವೀಕ್ಷಣೆಯಲ್ಲಿ ನನಗೆ ಅಷ್ಟು ಆಸಕ್ತಿಯಿಲ್ಲ. ಆದರೆ ಕಲ್ಲೂರ್ ಅವರೊಂದಿಗೆ ಎಲ್ಲಾದರು ತೆರಳಿದರೆ, ಪಕ್ಷಿಗಳನ್ನು ಗುರುತಿಸಿ ಅವುಗಳ ಶಬ್ದವನ್ನು ಅನುಕರಣೆ ಮಾಡಿ ಅವುಗಳ ವರ್ತನೆಯನ್ನು ಗಮನಿಸಿ ವಿವರಣೆ ಮತ್ತು ಮಾಹಿತಿ ನೀಡುವಾಗ ಆಸಕ್ತಿ ಕೆರಳದೆ ಇರಲು ಅಸಾಧ್ಯ. ಎಂದೂ ನೋಡದ, ಗೊತ್ತಿರದ ಸುಮಾರು ೧೫ ಬಗೆಯ ಪಕ್ಷಿಗಳನ್ನು ಅಂದು ನೋಡಿದೆ. ೩ ಬೇರೆ ಬೇರೆ ಜಾತಿಯ ಮರಕುಟಕ ಪಕ್ಷಿಗಳನ್ನು ತನ್ನ ಬೈನಾಕುಲರ್ ನಲ್ಲಿ ಕಲ್ಲೂರ್ ತೋರಿಸಿದರು. ಕಾಡಿನ ಹಾದಿಯಲ್ಲಿ ಸಾಗುವಾಗ ಯಾರಿಗೂ ಕೇಳಿಸದ ಶಬ್ದಗಳು ಈ ಕಲ್ಲೂರ್ ಗೆ ಕೇಳಿಸುತ್ತವೆ. ಹಕ್ಕಿಯೊಂದರ ಶಬ್ದ ಕೇಳಿಸಿದೊಡನೆ ಅಲ್ಲೇ ನಿಂತು, ನಮ್ಮನ್ನೂ ನಿಲ್ಲಿಸಿ, ’ನೋಡ್ರಿ ಅದು ಈ ಪಕ್ಷಿ, ಇದು ಆ ಪಕ್ಷಿ...’ ಎನ್ನುತ್ತಾ ಚಾರಣದ ಸಂಪೂರ್ಣ ಅನುಭವವನ್ನು ನೀಡುತ್ತಾರೆ. ಪಕ್ಷಿಗಳಲ್ಲದೆ, ಕೀಟಗಳು, ಗಿಡಗಳ ಬಗ್ಗೆಯೂ ಅಪಾರ ಮಾಹಿತಿಯನ್ನು ಕಲ್ಲೂರ್ ನಮಗೆ ದೊರಕಿಸುತ್ತಾ ಸಾಗುತ್ತಾರೆ. ಇವರೊಂದಿಗೆ ಚಾರಣಕ್ಕೆ ತೆರಳಿದರೆ ಅದೊಂದು ’ನೇಚರ್ ಟ್ಯೂಷನ್’.


ಜೀಪ್ ರಸ್ತೆ ಒಮ್ಮೆಲೇ ಕೊನೆಗೊಂಡು ಇಳಿಜಾರಿನ ಕಾಲುದಾರಿ ಆರಂಭಗೊಳ್ಳುತ್ತದೆ. ಇಳಿಜಾರು ಆರಂಭವಾಗುವಲ್ಲೇ ದೂರದಲ್ಲಿ ನಾಗಝರಿ ಜಲಧಾರೆಯ ದರ್ಶನವಾಗುತ್ತದೆ. ಇಲ್ಲಿ ಕಾಣಿಸುವುದು ಜಲಧಾರೆಯ ಮೇಲಿನ ೩ ಹಂತಗಳು. ಇಲ್ಲಿಂದ ನಾಗಝರಿ ಕಣಿವೆಗೆ ಇಳಿದು, ಎದುರಾಗುವ ನಾಗಝರಿ ಹಳ್ಳವನ್ನು ದಾಟಿ, ಹಳ್ಳಗುಂಟ ಸ್ವಲ್ಪ ಹೊತ್ತು ನಡೆದರೆ ನಾಗಝರಿ ಜಲಧಾರೆ.


ಇಲ್ಲಿಂದ ಕಾಣಿಸುವುದು ಜಲಧಾರೆಯ ೬ ಮತ್ತು ೭ನೇ ಹಂತಗಳು ಮಾತ್ರ. ಮೇಲಿನ ೫ ಹಂತಗಳನ್ನು ನೋಡಬೇಕಿದ್ದಲ್ಲಿ ಜಲಧಾರೆಯ ಪಾರ್ಶ್ವದಲ್ಲೇ ಬಂಡೆಯ ಮೇಲ್ಮೈಯನ್ನು ಏರಬೇಕು. ನಾನು ಕೆಳಗೆ ಇರಲು ನಿರ್ಧರಿಸಿದರೆ ಉಳಿದವರು ಮೇಲೇರತೊಡಗಿದರು. ಆರನೇ ಹಂತದ ಮೇಲ್ಭಾಗದವರೆಗೂ ಅವರುಗಳು ಕಾಣಿಸುತ್ತಿದ್ದರು. ನಂತರ ಮಾಯವಾದವರು ಕಡೆಗೆ ಒಬ್ಬೊಬ್ಬರಾಗಿ ಕೆಳಗಿಳಿದು ಬರುವುದು ೧೫ ನಿಮಿಷದ ಬಳಿಕ ಕಾಣಿಸಿತು.


ನಾಗಝರಿ ಜಲಧಾರೆಯಲ್ಲಿ ಅರಣ್ಯ ಇಲಾಖೆಯವರು ’ರಾಕ್ ಕ್ಲೈಂಬಿಂಗ್’ ಇತ್ಯಾದಿ ಸಾಹಸ ಕ್ರೀಡೆಗಳನ್ನು ಏರ್ಪಡಿಸುತ್ತಾರೆ. ಖಾಸಗಿಯವರು ಕೂಡಾ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಇಂತಹ ಚಟುವಟಿಕೆಗಳನ್ನು ಏರ್ಪಡಿಸುತ್ತಾರೆ. ನಾಗಝರಿ ಜಲಪಾತ ಸಂದರ್ಶಿಸಲು ಪ್ರಕೃತಿ ಪ್ರಿಯರಿಗೆ ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳು ಮಾತ್ರ ಪ್ರಶಸ್ತ ಸಮಯ. ಗೌಜಿ, ಗಲಾಟೆ, ಕೇಕೇ ಹಾಕುವ ಗುಂಪು ಬರುವುದು ನವೆಂಬರ್-ನಿಂದ. ಜಲಧಾರೆಗೆ ಸಾತಖಂಡಾ ಜಲಪಾತ ಎಂಬ ಹೆಸರೂ ಇದೆ. ಇದು ಮರಾಠಿ ಭಾಷೆಯಿಂದ ಬಂದ ಹೆಸರು. ಏಳು ಹಂತಗಳಿರುವುದರಿಂದ ’ಸಾತ’ಖಂಡಾ ಎಂಬ ಹೆಸರು.

ಮಂಗಳವಾರ, ಅಕ್ಟೋಬರ್ 16, 2012

ಶನಿವಾರ, ಅಕ್ಟೋಬರ್ 13, 2012

ದೋನ್ ಹೊಳಾರ್


ಗೆಳೆಯ ವಿವೇಕ್ ಯೇರಿ ಈ ’ದೋನ್ ಹೊಳಾರ್’ ಬಗ್ಗೆ ೨ ವರ್ಷಗಳಿಂದ ಹೇಳುತ್ತಿದ್ದರು. ತಾನು ಭೇಟಿ ನೀಡಿದರೂ, ನೀರಿನ ಹರಿವು ಬಹಳ ಕಡಿಮೆಯಿದ್ದುದರಿಂದ ಅವರಿಗೆ ಇನ್ನೊಮ್ಮೆ ಭೇಟಿ ನೀಡುವ ಆಸೆಯಿತ್ತು. ಅಲ್ಲೇ ಸಮೀಪ ಇನ್ನೊಂದು ಜಲಧಾರೆಗೆ ಭೇಟಿ ನೀಡುವ ಪ್ಲ್ಯಾನ್ ಹಾಕಿದಾಗ, ದೋನ್ ಹೊಳಾರ್‌ಗೂ ಹೋಗಿಬರೋಣ ಎಂದು ವಿವೇಕ್ ಹೇಳಿದಾಗ ಸಂತೋಷದಿಂದಲೇ ಒಪ್ಪಿಕೊಂಡೆ.


ಜಲಧಾರೆಯ ಸಮೀಪದವರೆಗೂ ರಸ್ತೆ ಇದೆ. ಕೇವಲ ಹತ್ತು ನಿಮಿಷ ನಡೆದರಾಯಿತು. ಆದರೆ ಜಲಧಾರೆ ಇನ್ನೂ ೩ ಕಿಮಿ ದೂರವಿರುವಾಗ ರಸ್ತೆಯಲ್ಲಿ ಸ್ವಲ್ಪ ದೂರದವರೆಗೆ ತುಂಬಾ ಕೆಸರಿದ್ದು, ನಮ್ಮ ವಾಹನದ ಚಕ್ರಗಳೇನಾದರೂ ಹೂತುಹೋದರೆ ಕಷ್ಟ ಎಂದು ಅಲ್ಲೇ ವಾಹನ ನಿಲ್ಲಿಸಿ ಹೆಜ್ಜೆ ಹಾಕಲು ಆರಂಭಿಸಿದೆವು.


ಜಲಧಾರೆಯ ಮೇಲ್ಭಾಗದಲ್ಲಿ ಹಳ್ಳವನ್ನು ದಾಟಬೇಕಾಗುವುದರಿಂದ ಬಿರುಸು ಮಳೆಯಲ್ಲಿ ಇಲ್ಲಿ ಬರುವುದು ಅಸಾಧ್ಯ. ದೋನ್ ಹೊಳಾರ್ ಎಂದರೆ ’ಎರಡು ಭಾಗಗಳು’ ಎಂದರ್ಥ. ಸುಮಾರು ೪೦-೪೫ ಅಡಿಯಷ್ಟು ಎತ್ತರವಿರುವ ಎರಡು ಹಂತಗಳ ಜಲಧಾರೆಯನ್ನು ಸಂದರ್ಶಿಸುವವರಲ್ಲಿ ಪ್ರಮುಖರೆಂದರೆ ಜಿಂಕೆಗಳು, ಕಾಡು ಕೋಣಗಳು, ಕರಡಿಗಳು ಮತ್ತು ಇತರ ಸಣ್ಣ ಪ್ರಾಣಿಗಳು.


ಸಣ್ಣ ಕಣಿವೆಯಲ್ಲಿರುವ ಜಲಧಾರೆ ದಿನವಿಡೀ ಕಾಲಹರಣ ಮಾಡಲು ಸೂಕ್ತ ಸ್ಥಳ. ಜಲಧಾರೆಯ ಮುಂದಿರುವ ಕೊಳದಲ್ಲಿ ಗಂಟೆಗಟ್ಟಲೆ ಕಾಲಹರಣ ಮಾಡಬಹುದು. ಹಳ್ಳದ ಎರಡೂ ಪಾರ್ಶ್ವಗಳಲ್ಲಿರುವ ಕಲ್ಲಿನ ಮೇಲ್ಮೈಯಲ್ಲಿ ಅಂಗಾತ ಮಲಗಬಹುದು. ನೆರಳಿನಲ್ಲಿ ಕೂತು ವಿಶ್ರಮಿಸಬಹುದು. ಶಾಂತ ಪರಿಸರವನ್ನು ಕಲುಷಿತಗೊಳಿಸುವ ಯಾವುದೇ ಶಬ್ದ ಕೇಳಿಬರುವುದಿಲ್ಲ. ನೀರಿನ ಹರಿವಿನ ಶಬ್ದ ಮಾತ್ರ.


ಮೊದಲನೇ ಹಂತ ಮತ್ತು ಎರಡನೇ ಹಂತದ ನಡುವಿರುವ ಸುಮಾರು ೨೫-೩೦ ಅಡಿ ಸ್ಥಳ, ಸಂಪೂರ್ಣವಾಗಿ ಕಲ್ಲಿನ ಮೇಲ್ಮೈಯಾಗಿರುವುದಲ್ಲದೇ, ಯಾವುದೇ ತಗ್ಗಿಲ್ಲದ ಸ್ಥಳವಾಗಿದ್ದು, ನೀರು ರಭಸವಾಗಿ ಹರಿಯುತ್ತಾ ಇರುತ್ತದೆ. ಇಲ್ಲಿ ನೀರಿನ ಹರಿವಿನಲ್ಲಿ ಮೈಚಾಚಿ ಮಲಗಿಬಿಟ್ಟರೆ ಅದೊಂದು ಅವರ್ಣನೀಯ ಅನುಭವ ಎನ್ನುವುದು ನನ್ನ ಸಹಚಾರಣಿಗರ ಹೇಳಿಕೆ.


ಇಲ್ಲಿ ಮನುಷ್ಯರ ಸುಳಿದಾಟ ವಿರಳ. ಜಲಧಾರೆಗೆ ಸ್ವಲ್ಪ ಮೊದಲು ರಸ್ತೆ ಕೊನೆಗೊಳ್ಳುವಲ್ಲಿ ದಾರಿಯೊಂದು ಕವಲೊಡೆದಿದ್ದು, ಆ ದಾರಿಯಲ್ಲಿ ಮುಂದೆ ಸಾಗಿದರೆ ನಾಲ್ಕಾರು ಮನೆಗಳುಳ್ಳ ಹಳ್ಳಿಯೊಂದು ಸಿಗುತ್ತದೆ. ಈ ಹಳ್ಳಿ ಬಿಟ್ಟರೆ ಜಲಧಾರೆಯ ಸಮೀಪ ಎಲ್ಲೂ ಮಾನವ ಸಂಚಾರ ಇಲ್ಲವೆನ್ನುವುದು ಕಾಡುಪ್ರಾಣಿಗಳಿಗೆ ವರದಾನವಾಗಿದೆ. ಆದರೆ ಎಲ್ಲಿಯೂ ಎಲ್ಲವೂ ಚೆನ್ನಾಗಿರುವುದಿಲ್ಲ. ಕಣ್ಣಿಗೆ ಕಾಣದ ದುಷ್ಟಶಕ್ತಿಯೊಂದು ಯಾವುದಾದರೊಂದು ರೂಪದಲ್ಲಿ ಅವಿತಿರುತ್ತದೆ ಎನ್ನುವುದು ಈ ಸ್ಥಳಕ್ಕೂ ಅನ್ವಯವಾಗುವ ಮಾತು.


ನೇರವಾದ ಸರಳ ರಸ್ತೆಯಾಗಿದ್ದರಿಂದ ಹಿಂತಿರುಗುವಾಗ ಉಳಿದವರಿಗಿಂತ ನಾನೇ ಮುಂದೆ ಇದ್ದೆ. ಒಂದು ಕಡೆ ದಾರಿ ತಿರುವು ಪಡೆದ ಕೂಡಲೇ ನನ್ನ ಮುಂದೆ ಇಬ್ಬರು ಸ್ತಂಭೀಭೂತರಾದಂತೆ ನಿಂತುಬಿಟ್ಟರು. ಅನಿರೀಕ್ಷಿತವಾಗಿ ಎದುರುಗೊಂಡ ನನ್ನನ್ನು ಕಂಡು ಅವರು ಗಾಬರಿಗೊಂಡಿದ್ದು ಅವರ ಮುಖಭಾವದಿಂದಲೇ ಸ್ಪಷ್ಟವಾಗಿತ್ತು. ಅವರ ಹೆಗಲ ಮೇಲೆ ಜೋತುಬಿದ್ದಿದ್ದ ’ಸಿಂಗಲ್ ಬ್ಯಾರಲ್’ ಬಂದೂಕುಗಳನ್ನು ನೋಡಿ ನಾನೂ ಗಲಿಬಿಲಿಗೊಂಡರೂ ತೋರಗೊಡದೆ ಮುನ್ನಡೆದೆ. ಕ್ಷಣಮಾತ್ರದಲ್ಲಿ ಸಾವರಿಸಿಕೊಂಡ ಅವರಿಬ್ಬರು ರಸ್ತೆಯನ್ನು ಬಿಟ್ಟು ಕಾಡನ್ನು ಹೊಕ್ಕು ಕಣ್ಮರೆಯಾಗಲು ಪ್ರಯತ್ನಿಸಿದರು. ಬೇಟೆಗಾರರು ಸಿಗುವುದೇ ಅಪರೂಪ. ಹಾಗಿರುವಾಗ ಅಚಾನಕ್ ಆಗಿ ಸಿಕ್ಕ ಇವರಿಬ್ಬರನ್ನು ಬಿಡುವುದುಂಟೇ.


’ಹೋಯ್.. ಥಾಂಬಾ, ಕುಟೆ ಧಾಂವ್ತೆ... ಇಥೆ ಯೆ... ಭಿವು ನಕೊ..’ ಎಂದು ನನ್ನ ಕೊಂಕಣಿ ಮಿಶ್ರಿತ ಮರಾಠಿಯಿಂದ ಅವರಿಬ್ಬರನ್ನು ಬಳಿಗೆ ಕರೆದೆ. ಅಳುಕುತ್ತಲೇ ಬಳಿ ಬಂದರು. ಅಷ್ಟರಲ್ಲಿ ಉಳಿದ ಚಾರಣಿಗರು ಸಮೀಪ ಬಂದಾಗಿತ್ತು. ಅವರ ’ಲೋಡೆಡ್’ ಬಂದೂಕುಗಳೊಂದಿಗೆ ಪೋಸು ಕೊಟ್ಟು ಫೋಟೊ ತೆಗೆಸಿಕೊಂಡ ಬಳಿಕ ಉಳಿದ ಸಹಚಾರಣಿಗರು ಮುನ್ನಡೆದರೆ, ವಿವೇಕ್ ಮತ್ತು ನಾನು ಈ ಇಬ್ಬರೊಂದಿಗೆ ಸುಮಾರು ೨೦ ನಿಮಿಷ ಮಾತುಕತೆ ನಡೆಸಿದೆವು. ಬಹಳ ಆಶ್ಚರ್ಯಕರ ಮತ್ತು ಕುತೂಹಲಕಾರಿ ವಿಷಯಗಳು ತಿಳಿದವು. ಅವನ್ನೆಲ್ಲಾ ಇನ್ನೊಮ್ಮೆ ಪ್ರತ್ಯೇಕ ಲೇಖನದಲ್ಲಿ ಬರೆಯುವೆ. ಈ ಪ್ರದೇಶದಲ್ಲಿ ಪ್ರಾಣಿಗಳ ಬೇಟೆಗೆ ಲಗಾಮೇ ಇಲ್ಲ. ಇದೇ ನಾನು ಮೇಲೆ ಹೇಳಿದ ದುಷ್ಟಶಕ್ತಿ.

ಮಾಹಿತಿ: ಗಂಗಾಧರ್ ಕಲ್ಲೂರ್ ಹಾಗೂ ವಿವೇಕ್ ಯೇರಿ

ಶನಿವಾರ, ಅಕ್ಟೋಬರ್ 06, 2012