ಶನಿವಾರ, ಅಕ್ಟೋಬರ್ 01, 2016

ಅಸ್ತಂಗತ


ಇಂದು ’ಅಲೆಮಾರಿಯ ಅನುಭವಗಳು’ ಆರಂಭಗೊಂಡು ಹತ್ತು ವರ್ಷಗಳಾದವು. 

ಈ ಬ್ಲಾಗಿನಿಂದ ನನ್ನ ಜೀವನದಲ್ಲಿ ಕೆಲವು ಧನಾತ್ಮಕ ಬೆಳವಣಿಗೆಗಳು ಆದವು. ’ಬರೆಯುವುದು’ ಅಂದರೆ ಹೇಗೆ ಎಂದೇ ಅರಿಯದ ನಾನು ಸಾಧಾರಣ ಮಟ್ಟಿಗೆ ಅದನ್ನು ಕಲಿತುಕೊಂಡೆ. ಹಲವಾರು ಸಮಾನ ಮನಸ್ಕರ ಪರಿಚಯವಾಯಿತು. ಪರಿಚಯ ಗೆಳೆತನವಾಗಿ ಬೆಳೆಯಿತು.

ನಿಮಗೆಲ್ಲರಿಗೆ ಗೊತ್ತಿರುವಂತೆ ನಾನು ಎಲ್ಲೂ ಸ್ಥಳಗಳ ಬಗ್ಗೆ ಮಾಹಿತಿ ನೀಡುವುದಿಲ್ಲ. ಮಾಹಿತಿ ಕೇಳಬಾರದು ಮತ್ತು ಮಾಹಿತಿ ನೀಡಬಾರದು ಇದು ನನ್ನ ನಿಲುವು. ಚಾರಣ ಮಾಡಿ ಗೊತ್ತಿದ್ದವರು ಸ್ಥಳಗಳನ್ನು ತಾವಾಗಿಯೇ ಹುಡುಕಿಕೊಳ್ಳಬೇಕು.

ಒಂದು ಗಮ್ಯ ಸ್ಥಾನವನ್ನು ಬಹಳ ಕಷ್ಟಪಟ್ಟು ಮತ್ತು ಅಲ್ಲಿ ಇಲ್ಲಿ ವಿಚಾರಿಸಿ ಮಾಹಿತಿ ಪಡೆದುಕೊಂಡಿರುತ್ತೇವೆ. ಹಾಗಿರುವಾಗ ಆ ಮಾಹಿತಿಯನ್ನು ಅಷ್ಟು ಸುಲಭದಲ್ಲಿ ಯಾಕೆ ಎಲ್ಲೆಡೆ ಹಂಚಬೇಕು? ಇನ್ನೂ ಕೆಲವೊಮ್ಮೆ ದಾರಿ ತಪ್ಪಿ, ಗಮ್ಯ ಸ್ಥಳ ಸಿಗದೇ, ಚಾರಣವನ್ನು ಮೊಟಕುಗೊಳಿಸಿ ಹಿಂತಿರುಗಿ, ನಂತರ ಇನ್ನೊಂದು ದಿನ ಮತ್ತೆ ತೆರಳಿ, ನಾವು ನೋಡಬೇಕಾದ ಸ್ಥಳವನ್ನು ತಲುಪುತ್ತೇವೆ. ಅಂತಹ ಚಾರಣಗಳಲ್ಲಿ ನಾವು ವ್ಯಯಿಸಿದ ಸಮಯ, ಶ್ರಮಕ್ಕೆ ಬೆಲೆ ಕಟ್ಟಲಾಗದು. ಅವನ್ನೆಲ್ಲಾ ಸುಲಭದಲ್ಲಿ ಬೇರೆಯವರಿಗೆ ಹರಿವಾಣದಲ್ಲಿ ತೆಂಗಿನಕಾಯಿ ಇಟ್ಟು ದಾನ ಮಾಡಿದರೆ ನಮ್ಮ ಶ್ರಮ ಮತ್ತು ಸಮಯಕ್ಕೆ ನಾವೇ ಬೆಲೆ ನೀಡದಂತೆ.

ಚಾರಣ ಎನ್ನುವುದು ಆರಾಧನೆ ಇದ್ದ ಹಾಗೆ. ಪ್ರಕೃತಿಯ ಆರಾಧನೆ. ಅದಕ್ಕೂ ಭಾಗ್ಯ ಬೇಕು. ಇಲ್ಲಿ ಉದಾಸೀನ ಮಾಡಿದರೆ ಆ ಸಮಯ ಹೋದಂತೆ. ಅದು ಮತ್ತೆ ಬರದು. ಚಾರಣದಲ್ಲಿ ಮೌನಕ್ಕೆ ಪ್ರಾಶಸ್ತ್ಯ ದೊರಕಬೇಕು. ಆಗಲೇ ಚಾರಣದ ಸಂಪೂರ್ಣ ಚಿತ್ರಣ ಬಹಳ ವರ್ಷಗಳವರೆಗೆ ಅಚ್ಚಳಿಯದೇ ನಮ್ಮೊಡನೆ ಇರುತ್ತದೆ.

ಅದೆಷ್ಟೋ ಪರಿಸ್ಥಿತಿಗಳು ಹಾಗೂ ಸನ್ನಿವೇಶಗಳು ನಮ್ಮ ಪರವಾಗಿ ಇರಬೇಕು. ಮೊದಲನೆಯದಾಗಿ ಮನೆಯಲ್ಲಿ ಪೂರಕ ವಾತಾವರಣವಿರಬೇಕು ಮತ್ತು ಎರಡನೆಯದಾಗಿ ಚಾರಣ ಮಾಡುವಾಗ ಉತ್ತಮ ಸಂಗವಿರಬೇಕು. ಇವೆರಡು ನಮ್ಮ ಹತೋಟಿಯಲ್ಲಿರದ ವಿಷಯಗಳು. ಇವೆರಡನ್ನೂ ದೇವರು ನನಗೆ ಇದುವರೆಗೆ ಕರುಣಿಸಿದ್ದಾನೆ. 

ನಾನು ಚಾರಣದಲ್ಲಿ ಅನುಭವಿಸಿದ್ದು ಮತ್ತು ಪ್ರಯಾಣದ ಸಂದರ್ಭದಲ್ಲಿ ನೋಡಿದ್ದನ್ನು ಯಥಾವತ್ತಾಗಿ ಅಕ್ಷರ ರೂಪಕ್ಕೆ ಇಳಿಸುವ ನನ್ನ ಪ್ರಯತ್ನವನ್ನು ಹುರಿದುಂಬಿಸಿ ಪ್ರೋತ್ಸಾಹಿಸಿದ ಎಲ್ಲಾ ಓದುಗರಿಗೆ ಮತ್ತು ಗೆಳೆಯರಿಗೆ ನಾನು ಎಂದಿಗೂ ಋಣಿ.