ಭಾನುವಾರ, ಫೆಬ್ರವರಿ 28, 2016

ಕಲ್ಲೇಶ್ವರ ದೇವಾಲಯ - ಚನ್ನಗಿರಿ

 

ಚನ್ನಗಿರಿಯಲ್ಲಿ ಈ ದೇವಾಲಯವನ್ನು ಹುಡುಕುವುದೇ ತ್ರಾಸದಾಯಕ. ಸುತ್ತಲೂ ಮನೆಗಳಿಂದ, ಕಟ್ಟಡಗಳಿಂದ ಆವೃತವಾಗಿರುವ ಕಲ್ಲೇಶ್ವರನ ಸನ್ನಿಧಿ ದ್ವಿಕೂಟ ರಚನೆಯಾಗಿದ್ದು, ಪಶ್ಚಿಮದಲ್ಲಿ ಆಕರ್ಷಕ ಶಿವಲಿಂಗ ಮತ್ತು ಉತ್ತರದಲ್ಲಿ ಚನ್ನಕೇಶವನ ಸುಂದರ ಮೂರ್ತಿಯನ್ನು ಹೊಂದಿದೆ.


ಕಲಾಸಕ್ತರಿಗೆ ಈ ದೇವಾಲಯದಲ್ಲಿ ನೋಡಲು ಏನೂ ಇಲ್ಲ. ತೀರಾ ಸಾಧಾರಣ ದೇವಾಲಯದ ಛಾವಣಿಗೆ ಪುರಾತತ್ವ ಇಲಾಖೆ ತೇಪೆ ಸಾರಿಸಿ, ಹೊರಗೋಡೆಗಳನ್ನು ದುರಸ್ತಿಪಡಿಸಿ ತಕ್ಕಮಟ್ಟಿಗೆ ಕಾಪಾಡಿಕೊಂಡಿದೆ.ದಕ್ಷಿಣಾಭಿಮುಖವಾಗಿರುವ ದ್ವಾರದಿಂದ ಒಳಪ್ರವೇಶಿಸಿದರೆ ನಾಲ್ಕು ಕಂಬಗಳ ನವರಂಗ. ಈ ಹೊಯ್ಸಳ ಶೈಲಿಯ ಕಂಬಗಳು ಸುಂದರ ಅಲಂಕಾರಿಕಾ ಕೆತ್ತನೆಗಳನ್ನು ಹೊಂದಿವೆ. ಎರಡೂ ಗರ್ಭಗುಡಿಗಳು ಅಲಂಕಾರವಿಲ್ಲದ ನಾಲ್ಕು ತೋಳುಗಳ ದ್ವಾರಗಳನ್ನು ಹೊಂದಿವೆ.ಅತ್ಯಾಕರ್ಷಕ ಪೀಠದ ಮೇಲಿರುವ ಶಿವಲಿಂಗ ಸುಂದರವಾಗಿ ಕಾಣುತ್ತದೆ. ಗರ್ಭಗುಡಿಯ ಹೊರಗೆ ನಂದಿ ಇದೆ. ಶಂಖಚಕ್ರಪದ್ಮಗದಾಧಾರಿಯಾಗಿರುವ ಚನ್ನಕೇಶವನ ಮೂರ್ತಿಯೂ ಚೆನ್ನಾಗಿದ್ದು, ಪ್ರಭಾವಳಿ ಕೆತ್ತನೆಗಳನ್ನು ಮತ್ತು ಶ್ರೀದೇವಿ ಭೂದೇವಿಯರನ್ನು ಹೊಂದಿದೆ.ನವರಂಗದ ನಾಲ್ಕು ಕಂಬಗಳು ಮತ್ತು ಹೊರಗೋಡೆಯ ಕೆಲವು ಭಾಗಗಳು ಮಾತ್ರ ಉಳಿದಿದ್ದ ದೇವಾಲಯವನ್ನು ಪುರಾತತ್ವ ಇಲಾಖೆ ಶ್ಲಾಘನೀಯವಾಗಿ ದುರಸ್ತಿಪಡಿಸಿದೆ.

ಭಾನುವಾರ, ಫೆಬ್ರವರಿ 21, 2016

ವೀರಭದ್ರ ದೇವಾಲಯ - ಲಕ್ಕುಂಡಿ


ವೀರಭದ್ರ ದೇವಾಲಯವು ಆಧುನಿಕತೆಯ ಎಲ್ಲಾ ರೀತಿಯ ಸ್ಪರ್ಶಗಳನ್ನೂ ಕಂಡಿದೆ. ಶಿಥಿಲಗೊಂಡಿದ್ದ ದೇವಾಲಯವನ್ನು ಅಗತ್ಯಕ್ಕೆ ತಕ್ಕಂತೆ ಮಾರ್ಪಾಡಿಸಿ ಊರವರು ದಿನಾಲೂ ಪೂಜೆ ಸಲ್ಲಿಸಿ, ಊರದೇವರ ರೀತಿಯಲ್ಲಿ ವ್ಯವಸ್ಥೆಯನ್ನು ಮಾಡಿಟ್ಟಿದ್ದಾರೆ.


ಬೃಹತ್ ಸ್ವಾಗತ ದ್ವಾರವನ್ನು ಕಂಡಾಗ ವೀರಭದ್ರ ದೇವಾಲಯ ಹೌದೋ ಅಲ್ಲವೋ ಎಂಬ ಸಂಶಯ ಕಾಡಲಾರಂಭಿಸಿತು. ಈ ಸ್ವಾಗತ ದ್ವಾರವನ್ನು ದಾಟಿ ಪ್ರವೇಶಿಸಿದೊಡನೆ ಬಲಭಾಗದಲ್ಲಿ ಗೋಚರಿಸುವುದು ನಾಲ್ಕು ಕಂಬಗಳು, ಜಗಲಿ, ಜಾಲಂಧ್ರಗಳಿರುವ ಎರಡು ಕಿಟಕಿಗಳು ಮತ್ತು ಎರಡು ದ್ವಾರಗಳಿರುವ, ಮನೆಯಂತೆ ಕಾಣುವ ವೀರಭದ್ರ ದೇವಾಲಯ.


 
ದೇವಾಲಯಕ್ಕೆ ಕಪ್ಪು ಬಣ್ಣವನ್ನು ಬಳಿಯಲಾಗಿತ್ತು. ಎರಡು ದ್ವಾರಗಳಿಗೆ ಚಿನ್ನದ ಬಣ್ಣದ ಲೇಪ. ಜಗಲಿಯಲ್ಲಿ, ಹಿಡಿಕೆಯಿಲ್ಲದ ಕುಟ್ಟುವ ಮುಸಳವೊಂದನ್ನು ಇರಿಸಲಾಗಿತ್ತು.
ದೇವಾಲಯದಲ್ಲಿ ಎರಡು ದ್ವಾರಗಳಿರುವುದು ಇಲ್ಲಿರುವ ಎರಡು ಗರ್ಭಗುಡಿಗಳಿಗಾಗಿ. ಒಂದು ಗರ್ಭಗುಡಿಯಲ್ಲಿ ವೀರಭದ್ರನ ಮೂರ್ತಿಯಿದ್ದು, ಇನ್ನೊಂದರಲ್ಲಿ ಶಿವಲಿಂಗವಿದೆ. ಎರಡೂ ಗರ್ಭಗುಡಿಗಳು ಆಧುನಿಕತೆಯ ಪರಿಪೂರ್ಣತೆಯನ್ನು ಹೊಂದಿದ್ದು, ಪ್ರತ್ಯೇಕ ನಾಲ್ಕು ಕಂಬಗಳ ನವರಂಗ ಹಾಗೂ ಅಂತರಾಳವನ್ನು ಹೊಂದಿವೆ.ವೀರಭದ್ರನ ನವರಂಗದಲ್ಲಿ ಎರಡು ಪಾದುಕೆಗಳಿವೆ. ಶಿವಲಿಂಗದ ನವರಂಗದ ಕಂಬವೊಂದರಲ್ಲಿ ಶಾಸನವೊಂದನ್ನು ಕಾಣಬಹುದು.

ಭಾನುವಾರ, ಫೆಬ್ರವರಿ 14, 2016

ಮಲ್ಲಿಕಾರ್ಜುನ ದೇವಾಲಯ - ಕಾಳಗಿ


ಊರ ನಟ್ಟನಡುವೆ ಇರುವ ಮಲ್ಲಿಕಾರ್ಜುನ ದೇವಾಲಯವು ಮುಖಮಂಟಪ, ನವರಂಗ, ಅಂತರಾಳ ಹಾಗೂ ಗರ್ಭಗುಡಿಯನ್ನೊಳಗೊಂಡಿದೆ. ಸುಮಾರು ನಾಲ್ಕು ಅಡಿ ಎತ್ತರದ ಅಧಿಷ್ಠಾನದ ಮೇಲೆ ನಿರ್ಮಾಣಗೊಂಡಿರುವ ಈ ದೇವಾಲಯವನ್ನು ಇಸವಿ ೧೧೬೩ರಲ್ಲಿ ಬಾಣವಂಶದ ಪ್ರಸಿದ್ಧ ದೊರೆ ಮಹಾಮಂಡಲೇಶ್ವರ ವೀರ ಗೊಂಕರಸನು ನಿರ್ಮಿಸಿದನು ಎಂದು ಶಾಸನಗಳು ತಿಳಿಸುತ್ತವೆ. 
ಸುತ್ತಲೂ ಕಕ್ಷಾಸನವಿರುವ ಮುಖಮಂಟಪವು ವಿಶಾಲವಾಗಿದ್ದು, ನಟ್ಟನಡುವೆ ನಾಲ್ಕು ಕಂಬಗಳ ನವರಂಗವಿದೆ. ನವರಂಗದ ನಡುವೆ ನಂದಿಯ ಮೂರ್ತಿಯಿದೆ. ಮುಖಮಂಟಪದ ಕೆಲವು ಕಂಬಗಳ ಮೇಲೆ ಕೆತ್ತನೆಗಳನ್ನು ಕಾಣಬಹುದು.ಅಂತರಾಳದ ದ್ವಾರದ ಇಕ್ಕೆಲಗಳಲ್ಲಿ ದ್ವಾರಪಾಲಕಿಯರಿದ್ದಾರೆ ಮತ್ತು ಜಾಲಂಧ್ರಗಳ ರಚನೆಯಿದೆ. ದ್ವಾರದ ಮೇಲ್ಭಾಗದಲ್ಲಿ ತಾಂಡವೇಶ್ವರನ ಚಿತ್ರಣವಿದೆ. ಇದಕ್ಕೆ ಕೆಂಪು ಬಣ್ಣ ಬಳಿದು ವಿರೂಪಗೊಳಿಸಿದ್ದಾರೆ. ದ್ವಾರದ ಸ್ವಲ್ಪ ಮೊದಲು ನೆಲದಲ್ಲೇ ಬರೆಯಲಾಗಿರುವ ಎರಡು ಸಾಲುಗಳ ಶಾಸನವಿದೆ.

 
ಗರ್ಭಗುಡಿಯ ದ್ವಾರದ ಲಲಾಟದಲ್ಲಿ ಗಜಲಕ್ಷ್ಮೀಯನ್ನೂ ಮತ್ತು ಇಕ್ಕೆಲಗಳಲ್ಲಿ ಚನ್ನಕೇಶವನನ್ನು ಕಾಣಬಹುದು. ಚನ್ನಕೇಶವನ ಇಕ್ಕೆಲಗಳಲ್ಲಿ ಚಾಮರ ಬೀಸುವ ಪರಿಚಾರಿಕೆಯರಿದ್ದಾರೆ. ಗರ್ಭಗುಡಿಯಲ್ಲಿ ದೊಡ್ಡ ಪೀಠದ ಮೇಲೆ ಆಕರ್ಷಕ ಮುಖವಾಡ ತೊಟ್ಟಿರುವ ಶಿವಲಿಂಗವಿದೆ.


 
ಈ ದೇವಾಲಯವನ್ನು ರಾಮೋಜ ಎಂಬ ಶಿಲ್ಪಿಯ ನೇತೃತ್ವದಲ್ಲಿ ಹನ್ನೆರಡು ಶಿಲ್ಪಿಗಳು ನಿರ್ಮಿಸಿದರು ಎಂದು ಶಾಸನದಲ್ಲಿ ತಿಳಿಸಲಾಗಿದೆ.

ಸೋಮವಾರ, ಫೆಬ್ರವರಿ 08, 2016

ಏರಿಕಲ್ಲನ್ನು ಏರಿ... ಮತ್ತೊಮ್ಮೆ...


೨೦೧೫ರ ಜನವರಿ ತಿಂಗಳಂದು ಉಡುಪಿ ಯೂತ್ ಹಾಸ್ಟೆಲ್ ವತಿಯಿಂದ ಏರಿಕಲ್ಲಿಗೆ ಚಾರಣ ಆಯೋಜಿಸಲಾಗಿತ್ತು. ನಾನೂ ಸೇರಿಕೊಂಡೆ. ಈ ಮೊದಲು ೨೦೦೭ರಲ್ಲಿ ಒಮ್ಮೆ ಏರಿಕಲ್ಲಿಗೆ ತೆರಳಿದ್ದೆ. ಆ ಚಾರಣದ ಸುಂದರ ನೆನಪುಗಳು ಮತ್ತೊಮ್ಮೆ ಏರಿಕಲ್ಲಿನೆಡೆ ತೆರಳಲು ನನಗೆ ಪ್ರೇರಕವಾದವು. ಈ ರಮೇಶ್ ಕಾಮತ್ ಎಲ್ಲೆಲ್ಲೋ ಸುತ್ತಾಡುತ್ತಿರುತ್ತಾರೆ. ಅವರೊಂದಿಗೆ ಸುಧೀರ್ ಕುಮಾರ್ ಕೂಡಾ. ಉಡುಪಿ ಯೂತ್ ಹಾಸ್ಟೆಲ್‍ಗೆ ಏರಿಕಲ್ಲಿಗೆ ದಾರಿ ತಿಳಿದಿರಲಿಲ್ಲ. ಆದರೆ ಈ ಇಬ್ಬರು ಮತ್ತೆ ಮತ್ತೆ ಏರಿಕಲ್ಲನ್ನು ಏರಿಳಿದಿದ್ದರಿಂದ ಅವರನ್ನು ಚಾರಣಕ್ಕೆ ಬರುವಂತೆ ವಿನಂತಿಸಲಾಯಿತು.ಕಾಡಿನೊಳಗೆ ಸುಮಾರು ೪೫ ನಿಮಿಷ ನಡೆದ ಬಳಿಕ, ನಂತರದ ಒಂದುವರೆ ತಾಸು ಚಾರಣ ತೆರೆದ ಪ್ರದೇಶದಲ್ಲಿ. ಅಸಲಿಗೆ ಈ ಚಾರಣ ಸುಲಭದ್ದು. ಆದರೆ ಅಂದು ಬಿಸಿಲು ನಮ್ಮನ್ನು ಹೈರಾಣಾಗಿಸಿತು. ಚಾರಣದುದ್ದಕ್ಕೂ ಎಲ್ಲಿಯೂ ನೀರು ಸಿಗದಿರುವುದರಿಂದ, ಕೊನೆಕೊನೆಗೆ ಅಲ್ಲಿ ನೀರಿಗೆ ಹಾಹಾಕಾರ.ಚಾರಣದ ಒಂದು ಭಾಗದಲ್ಲಿ ಎರಡು ದಾರಿಗಳಿವೆ. ಸುತ್ತುಬಳಸಿ ತೆರಳಿದರೆ ದಾರಿ ’ಯು’ ಆಕಾರದಲ್ಲಿ ತಿರುಗಿ ಬೆಟ್ಟದ ಮೇಲೆ ಬರುವುದು. ಇಲ್ಲವಾದಲ್ಲಿ ನೇರವಾಗಿ ಮೇಲೆ ಹತ್ತಿ ಆ ಸುತ್ತಿ ಬಳಸಿ ಬರುವ ದಾರಿಯನ್ನು ಸೇರಿಕೊಳ್ಳಬಹುದು. ಏಳು ವರ್ಷಗಳ ಹಿಂದೆ ಈ ಶಾರ್ಟ್‍ಕಟ್ ಮೂಲಕ ತೆರಳಿದ್ದೆ. ಇಂದು ಒಂದಿಬ್ಬರು ತರುಣರನ್ನು ಹೊರತುಪಡಿಸಿ ಉಳಿದೆಲ್ಲರೂ ಸುತ್ತಿಬಳಸಿ ಬರುವ ದಾರಿ ಮೂಲಕವೇ ತೆರಳಿದ್ದರೂ, ನಾನು ಹುಂಬತನದಿಂದ ಆ ಶಾರ್ಟ್‍ಕಟ್ ಮೂಲಕ ನೇರವಾಗಿ ಮೇಲೇರತೊಡಗಿದೆ. ಚಾರಣದಲ್ಲಿ ನಾನೇ ಹಿಂದೆ ಇದ್ದಿದ್ದು ಕೂಡಾ ನನ್ನನ್ನು ಈ ನಿರ್ಧಾರ ಕೈಗೊಳ್ಳುವಂತೆ ಮಾಡಿತು.ಅರ್ಧ ದಾರಿ ಏರುವಷ್ಟರಲ್ಲಿ ಯಾಕಾದರೂ ಈ ದಾರಿಯಾಗಿ ಬಂದೆನೋ ಎಂದು ಪರಿತಪಿಸತೊಡಗಿದೆ. ಹಿಂದಿರುಗಿ ನೋಡಿದರೆ ನಾನು ಸುಮಾರಾಗಿ ಮೇಲೆ ಬಂದಾಗಿತ್ತು. ಮತ್ತೆ ಕೆಳಗಿಳಿದು, ಮತ್ತೊಂದು ದಾರಿಯಲ್ಲಿ ಬರುವಷ್ಟರಲ್ಲಿ ತುಂಬಾನೇ ತಡವಾಗುವುದು ಎಂದರಿತು ಬೇರೆ ದಾರಿಯಿಲ್ಲದೆ ಮುನ್ನಡೆದೆ. ಮೇಲೇರಿದಂತೆ ದಾರಿ ಇನ್ನಷ್ಟು ಕಠಿಣ ಮತ್ತು ನೇರ. ಎರಡು ಕಡೆ, ಆ ಪೊದೆಗಳ ನಡುವೆ ಎಲ್ಲಿ ಕಾಲಿಡುವುದೆಂದು ಕಾಣದೆ ಎಡವಿಬಿದ್ದೆ.ಸುಮಾರು ಮುಕ್ಕಾಲು ಭಾಗ ಮೇಲೇರಿದಾಗ, ಮತ್ತೊಂದು ದಾರಿಯಿಂದ ಬರುತ್ತಿದ್ದ ನನ್ನ ಸಹಚಾರಣಿಗರು ಕಾಣಸಿಕ್ಕರು. ಆಹಾ..... ನನಗಿಂತ ಎಷ್ಟೋ ಮುಂದಿದ್ದ ಇವರನ್ನು ನಾನು ಈಗ ಸೇರಿಕೊಂಡೆ ಎಂಬ ಉತ್ಸಾಹ, ಸಂತೋಷದಿಂದ ಮತ್ತೆ ಮೇಲೇರಲು ಆರಂಭಿಸಿದೆ. ಆದರೆ ದಾರಿ ಇನ್ನಷ್ಟು ಕಠಿಣವಾಗತೊಡಗಿತು. ಕೊನೆಗೆ ಒದ್ದಾಡಿ, ಗುದ್ದಾಡಿ, ತಡಬಡಿಸಿ, ಮತ್ತೊಂದೆರಡು ಸಲ ಜಾರಿಬಿದ್ದು, ಉಳಿದವರನ್ನು ಸೇರಿಕೊಂಡೆ.ಏರಿಕಲ್ಲು ಇನ್ನೂ ದೂರವಿತ್ತು. ಆದರೆ ಅಷ್ಟರಲ್ಲಿ ನನ್ನ ದೇಹ ವಿಶ್ರಾಂತಿಗೆ ಬೊಬ್ಬಿಡಲಾರಂಭಿಸಿತ್ತು. ಸುಮಾರು ಹೊತ್ತು ಆ ಬಿಸಿಲಿನಲ್ಲಿಯೇ ವಿಶ್ರಮಿಸಿದೆ. ಆ ಶಾರ್ಟ್‍ಕಟ್ ನನ್ನ ಬೆವರಿಳಿಸಿತ್ತು.
ಅಲ್ಲಿಂದ ಮುಂದೆ ನಿಧಾನವಾಗಿ ನಡೆದು ಇನ್ನೊಂದು ೨೦ ನಿಮಿಷದಲ್ಲಿ ಏರಿಕಲ್ಲಿನ ಬುಡವನ್ನು ತಲುಪಿದೆ. ನಾನೇ ಕೊನೆಯವನೆಂದು ಮತ್ತೆ ಬೇರೆ ಹೇಳಬೇಕೆ? ಇಲ್ಲಿ ಮತ್ತೆ ವಿಶ್ರಾಂತಿ. ಸುತ್ತಲಿನ ಬೆಟ್ಟ ಗುಡ್ಡಗಳ ದೃಶ್ಯದ ಅವಲೋಕನ. ಹರಟೆ. ಕೊರೆತ. ಉದರ ಪೋಷಣೆ. ಜಿಹ್ವಾ ಚಪಲ ಪೂರೈಕೆ. ಇತ್ಯಾದಿ.ಈ ಚಾರಣ ಸುಲಭದ್ದು ಎಂದು ಹೊರಟ ನಮಗೆ ಪ್ರಕೃತಿ ಅಂದು ತಕ್ಕ ಪಾಠ ಕಲಿಸಿತ್ತು. ಸೂರ್ಯದೇವನ ಪ್ಲ್ಯಾನ್ ಬೇರೆನೇ ಇತ್ತು. ಆತ ನಮ್ಮನ್ನು ಸಿಕ್ಕಾಪಟ್ಟೆ ಕಾಡಿದ. ತನ್ನನ್ನು ಗಣನೆಗೆ ತಗೆದುಕೊಳ್ಳದೇ ಚಾರಣ ಆರಂಭಿಸಿದ ನಮ್ಮನ್ನು ತರಾಟೆಗೆ ತೆಗೆದುಕೊಂಡ, ಚಾರಣದ ಹೊಸ ಅನುಭವವನ್ನು ನೀಡಿದ ಮತ್ತು ಸ್ವಲ್ಪ ಜೋರಾಗಿಯೇ ಎಚ್ಚರಿಕೆಯನ್ನೂ ನೀಡಿದ.