ಬುಧವಾರ, ಫೆಬ್ರವರಿ 14, 2007

ಶಿರ್ಲ ಜಲಪಾತದ ವೈಭವ


ಶಿರ್ಲ ಜಲಪಾತಕ್ಕೆ ಹೋಗುವ ಇರಾದೆ ಕಳೆದೆರಡು ವರ್ಷಗಳಿಂದಲೂ ಇತ್ತು. ಆದರೆ ಸಮಯ ಕೂಡಿಬಂದಿದ್ದು ಮೊನ್ನೆ ಆದಿತ್ಯವಾರ ೧೧ರಂದು. ಮುಂಜಾನೆ ೭ಕ್ಕೆ ಬಸ್ಸಿದೆ ಎಂದು ಮುನ್ನಾ ದಿನ ನಿಲ್ದಾಣದ ನಿಯಂತ್ರಣಾಧಿಕಾರಿ ನಮಗೆ (ನಾನು ಮತ್ತು ರಾಕೇಶ್ ’ಜಿರಾಫೆ’ ಹೊಳ್ಳ) ತಿಳಿಸಿದ್ದರು. ಆದರೆ ಗಂಟೆ ೮ ಆದರೂ ಬಸ್ಸಿನ ಪತ್ತೆನೇ ಇಲ್ಲ! ಅದಿರಲಿ, ೭ ಗಂಟೆಗೆ ಹೊರಡಬೇಕಿದ್ದ ಇನ್ನೂ ೪ ಬಸ್ಸುಗಳ ಸುಳಿವೂ ಇಲ್ಲ!


ಅಂತೂ ಕೊನೆಗೆ ೮.೩೦ಕ್ಕೆ ಆಯಾ ಹಳ್ಳಿಗಳಿಗೆ ತೆರಳುವ ನಾಲ್ಕೂ ಬಸ್ಸುಗಳು ಸಾಲಿನಲ್ಲಿ ಡಿಪೊದಿಂದ ಆಗಮಿಸಿದವು. ನಮಗೆ ಬೇಕಾದ ಬಸ್ಸು ಕೂಡಾ ಬಂತು. ಅಂತೂ ಆ ಬಸ್ಸು ಹತ್ತಿ ಹಳ್ಳಿಯಲ್ಲಿಳಿದಾಗ ೯.೩೦.


ಅಲ್ಲಿಂದ ನಮ್ಮನ್ನು ಚಂದ್ರು ಎಂಬ ಗ್ರಾಮ ಪಂಚಾಯತ್ ಸದಸ್ಯ ೭ ಕಿಮಿ ದೂರವಿರುವ ೬ ಮನೆಗಳುಳ್ಳ ಮತ್ತೊಂದು ಹಳ್ಳಿಗೆ ತನ್ನ ದ್ವಿಚಕ್ರ ವಾಹನದಲ್ಲಿ ೨ ಟ್ರಿಪ್ ನಲ್ಲಿ ತಲುಪಿಸಿದರು. ನಮಗೆ ದಾರಿ ತೋರಿಸಲು ಯಾರೂ ಇರಲಿಲ್ಲವಾದ್ದರಿಂದ, 'ಸೋಮಕ್ಕ' ಎಂಬವರು ಚಂದ್ರುವಿನಲ್ಲಿ ಸಮೀಪದ ಗ್ರಾಮದಿಂದ ಒಬ್ಬನನ್ನು ಕಳಿಸುವಂತೆ ಕೇಳಿಕೊಂಡರು. ನಾವಿಬ್ಬರು ಒಂದು ತಾಸು ಕಾದದ್ದೇ ಬಂತು. ಯಾರೂ ಬರಲಿಲ್ಲ. ಸೋಮಕ್ಕನಲ್ಲಿ ಜಲಪಾತಕ್ಕೆ ಹೋಗುವ ಹಾದಿಯನ್ನು ಕೇಳಿ, ಆಕೆಗೆ ವಿದಾಯ ಹೇಳಿ, ನಾವಿಬ್ಬರೇ ಹುಡುಕಿಕೊಂಡು ಮುನ್ನಡೆದೆವು. ಅದಾಗಲೇ ಸಮಯ ೧೨.೦೦ ಆಗಿತ್ತು.

ನಂತರ ಎಲ್ಲೆಲ್ಲಿ ದಾರಿ ತಪ್ಪುವ ಚಾನ್ಸ್ ಇತ್ತೋ ಅಲ್ಲೆಲ್ಲಾ ದಾರಿ ತಪ್ಪಿದೆವು. ಮೊದಲನೇ ಬಾರಿ ದಾರಿ ತಪ್ಪಿದಾಗ ಒಂದು ಮನೆಗೆ ಹೋಗಿ ಮುಟ್ಟಿದೆವು. ಆಲ್ಲೊಂದು ಮುದುಕಿ ಮಾತ್ರ ಇತ್ತು. ಆಕೆ 'ಹಾಗೆ ಹೋಗಿ' ಎಂದಳು. ಹಾಗೆ ಹೋದಾಗ ಆ ದಾರಿ ಅದು ಮತ್ತೊಂದು ಮನೆಯಲ್ಲಿ ಕೊನೆಗೊಂಡಿತು. ಇಲ್ಲಿರುವ ಭಟ್ಟರೊಬ್ಬರು ಸರಿಯಾದ ದಾರಿಯನ್ನು ಹೇಳಿದರು. ಬಂದ ದಾರಿಯಲ್ಲೇ ಹಿಂತಿರುಗಿ ಸಿಗುವ ಮೊದಲ ಬಲ ತಿರುವನ್ನು ತಗೊಂಡು, ಸುಮಾರು ೨ ಕಿಮಿ ನಂತರ ಸಿಗುವ ಸಿದ್ಧಿಗಳ ಹಳ್ಳಿಗೆ ಹೋಗುವ ಬಲ ತಿರುವೊಂದನ್ನು ತಗೊಳ್ಳದೆ ಹಾಗೇ ಕೇವಲ ೧೫-೨೦ ಹೆಜ್ಜೆ ಮುನ್ನಡೆದಾಗ ಎಡಕ್ಕೆ ಕಾಲುದಾರಿಯೊಂದು ಕಣಿವೆಗೆ ಇಳಿಯುತ್ತೆ ಅದರಲ್ಲಿ ತೆರಳಿ ಎಂದು ಹೇಳಿದರು.

ಅವರು ಹೇಳಿದಂತೆ ಮುನ್ನಡೆದೆವು. ೧೦ ಅಡಿ ಅಗಲದ, ಎರಡೂ ಬದಿಯಲ್ಲಿ ದಟ್ಟ ಕಾಡಿನಿಂದ ಆವೃತವಾಗಿರುವ, ತರಗಲೆಳೆಗಳಿಂದ ಮುಚ್ಚಿಹೋಗಿರುವ, ನಿಶ್ಯಬ್ದ ರಸ್ತೆಯಿದು. ನಂತರ ಮತ್ತೊಂದು ಸಲ ದಾರಿತಪ್ಪಿದೆವು. ಮತ್ತೆ ಸರಿಯಾದ ದಾರಿಗೆ ಹಿಂತಿರುಗಿ ಹಾಗೆ ಮುನ್ನಡೆದೆವು. ಸ್ವಲ್ಪ ಸಮಯದ ನಂತರ ಒಬ್ಬಂಟಿ ಸಿದ್ಧಿ ಹೆಂಗಸೊಬ್ಬಳು ದಾರಿಯಲ್ಲಿ ಸಿಕ್ಕಾಗ ಆಕೆಯಲ್ಲಿ 'ಶಿರ್ಲ' ಎಲ್ಲಿ ಎಂದಾಗ, ಆಕೆ ಇನ್ನೂ ಮುಂದೆ ಎಡಕ್ಕೆ ಹೋಗಿ ಎಂದಳು. ಸ್ವಲ್ಪವೇ ಮುಂದೆ ಹೋದಾಗ ಆ ಹೆಂಗಸು ಬಂದಿದ್ದ ಕಾಲುದಾರಿ ಬಲಕ್ಕೆ ಕಾಣಿಸಿತು. ಇದೇ ಇರಬೇಕು ಭಟ್ಟರು ಹೇಳಿದ ಸಿದ್ಧಿಗಳ ಹಳ್ಳಿಗೆ ತೆರಳುವ ಬಲ ತಿರುವು ಎಂದುಕೊಂಡು ಅದನ್ನು ತಗೊಳ್ಳದೆ ಸ್ವಲ್ಪ ಮುನ್ನಡೆದಾಗ ಎಡಕ್ಕೆ ಕಾಲುದಾರಿ ಕಾಣಿಸಿತು. ಅಂತೂ ದಾರಿ ಸಿಕ್ಕಿತಲ್ಲಪ್ಪಾ ಎಂದು ಸಮಾಧಾನದ ನಿಟ್ಟುಸಿರು ಬಿಟ್ಟು ನಿಧಾನವಾಗಿ ಕಣಿವೆಯಲ್ಲಿರುವ ಕಾಡಿನೊಳಗೆ ಇಳಿಯಲಾರಂಭಿಸಿದೆವು.

ಆ ಇಳಿಜಾರು ಮುಗಿದ ಕೂಡಲೇ ಹಾದಿ ಮತ್ತೆ ಕವಲೊಡೆಯಿತು. ಬಲಕ್ಕೋ ಅಥವಾ ಎಡಕ್ಕೋ ಎಂದು ಯೋಚಿಸುತ್ತಾ ಕಡೆಗೆ ಎಡಕ್ಕೆ ತೆರಳಿದೆವು. ಆ ಅಸ್ಪಷ್ಟ ಹಾದಿ ನೇರವಾಗಿ ಹಳ್ಳಕ್ಕೆ ತೆರಳಿತು. ಜಲಪಾತದ ಮೇಲ್ಭಾಗದಲ್ಲಿ ನಾವಿರಬಹುದೆಂದು ಹಳ್ಳದ ಹರಿವು ಸ್ಪಷ್ಟವಾಗಿ ತಿಳಿಸುತ್ತಿತ್ತು. ಹಳ್ಳಗುಂಟ ಸ್ವಲ್ಪ ಮುನ್ನಡೆದೆವು. ಆದರೆ ನಂತರ ಸಿಗುವ ವಿಶಾಲವಾದ ಸ್ವಿಮ್ಮಿಂಗ್ ಪೂಲ್ ತರಹ ಇರುವ ಕೆಲವು ಗುಂಡಿಗಳನ್ನು ದಾಟುವುದು ಅಸಾಧ್ಯವೆನಿಸಿದಾಗ ಹಾಗೆ ಹಿಂತಿರುಗಿದೆವು. ಮತ್ತೆ ಹಾದಿ ಕವಲೊಡೆಯುವಲ್ಲಿ ಬಂದು ಸ್ವಲ್ಪ ವಿಶ್ರಾಂತಿ ತಗೊಳ್ಳುತ್ತಾ ಎಲ್ಲೆಲ್ಲಿ ದಾರಿ ತಪ್ಪುವ ಅವಕಾಶ ಇತ್ತೋ ಅಲ್ಲೆಲ್ಲಾ ದಾರಿ ತಪ್ಪಿದೆವು ಎಂದು ಜೋಕ್ ಮಾಡುತ್ತಾ ೪ ಬಾರಿ ದಾರಿ ತಪ್ಪಿದೆವು ಎಂದು ಲೆಕ್ಕ ಹಾಕಿ ನಂತರ ಬಲಕ್ಕೆ ತೆರಳಿದೆವು.

ಈ ಹಾದಿ ಕೂಡಾ ಅಸ್ಪಷ್ಟವಾಗಿತ್ತು. ಜಲಪಾತದ ಸದ್ದೇ ಕೇಳಿಸುತ್ತಿರಲಿಲ್ಲ. ಆದರೆ ಆ ಅಸ್ಪಷ್ಟ ಹಾದಿಯಲ್ಲಿ ತೆರಳುವುದನ್ನು ಬಿಟ್ಟರೆ ನಮ್ಮಲ್ಲಿ ಬೇರೆ ವಿಧಾನವಿರಲಿಲ್ಲ. ಸುಮಾರು ೫ ನಿಮಿಷದ ಏರು ಹಾದಿಯನ್ನು ಕ್ರಮಿಸಿದ ಬಳಿಕ ಮತ್ತೊಂದು ಇಳಿಜಾರು ಸಿಕ್ಕಿತು. ಆಗ ಅಲ್ಲೆಲ್ಲೋ ಅದ್ಯಾವುದೋ ಕಾಡು ಪ್ರಾಣಿಯ ಭಯಂಕರ ಚೀತ್ಕಾರದ ಸದ್ದು. ನಾವಿಬ್ಬರೂ ಹಾಗೇ ನಿಂತುಬಿಟ್ಟೆವು. ಅನತಿ ದೂರದಲ್ಲಿ ಗಿಡಗಳು ಮತ್ತು ಕುರುಚಲು ಸಸ್ಯಗಳು ಅಲುಗಾಡುತ್ತಾ ಇರುವುದು ಮತ್ತು ಆ ಪ್ರಾಣಿ ಮಾಡುವ ಕರ್ಕಶ ಸದ್ದು ಕೇಳುಸುತ್ತಿತ್ತು. ಆದರೆ ಏನೂ ಕಾಣಿಸುತ್ತಿರಲಿಲ್ಲ. ಭಯಭೀತರಾಗಿ ಹಾಗೆ ನಿಂತುಬಿಟ್ಟೆವು. ಇಬ್ಬರ ಬಾಯಲ್ಲೂ ಮಾತಿಲ್ಲ. ಕಣ್ಣಲ್ಲಿ ಕೆಟ್ಟ ಹೆದರಿಕೆ. ಒಂದೈದು ನಿಮಿಷದ ಬಳಿಕ ಮತ್ತೆಲ್ಲಾ ಶಾಂತ ಮೊದಲಿನಂತೆ. ಕಾಡು ಹಂದಿಯಿರಬೇಕು ಎಂದು ಇಳಿಜಾರಿನ ಹಾದಿಯಲ್ಲಿ ಮುನ್ನಡೆದೆವು. ಹೆದರಿಕೆ ಇನ್ನೂ ಕಡಿಮೆಯಾಗಿರಲಿಲ್ಲ. ಕಾಡು ದಟ್ಟವಾಗಿತ್ತು. ಹಾದಿ ಅಸ್ಪಷ್ಟ.


ಈ ಎರಡನೇ ಇಳಿಜಾರು ನೇರವಾಗಿ ಶಿರ್ಲ ಜಲಪಾತದ ಶಿರಭಾಗದ ಮೇಲೆ ಬಲಕ್ಕೆ ಬಂದು ಸೇರುತ್ತದೆ. ಇಲ್ಲೊಂದು ಹೊರಚಾಚಿರುವ ಬಂಡೆಯ ಮೇಲೆ ನಿಂತರೆ ಜಲಪಾತದ ಸುಂದರ ದೃಶ್ಯ ಲಭ್ಯ. ನೀರಿನ ಹರಿವು ಕಡಿಮೆಯಿತ್ತು. ಆದರೂ ವೈಯ್ಯಾರದಿಂದ ನಿಧಾನವಾಗಿ ೧೨೦ ಆಡಿ ಆಳಕ್ಕೆ ಇಳಿಯುವ ಶಿರ್ಲದ ಚೆಲುವು ಮರೆಯಲಸಾಧ್ಯ. ಆ ಬಂಡೆಯ ಮೇಲೆ ಸ್ವಲ್ಪ ಕಾಲ ಕುಳಿತು ಚೆಲುವನ್ನು ಅಸ್ವಾದಿಸಿ ನಂತರ ಕೆಳಗೆ ಇಳಿಯುವ ಸಾಹಸ ಕಾರ್ಯಕ್ಕೆ ಮುಂದಾದೆವು.


ಜಲಪಾತದ ಬಲಕ್ಕಿರುವ ಗುಡ್ಡ ಇಲ್ಲಿ ಕೊನೆಗೊಳ್ಳುತ್ತದೆ. ಈ ಗುಡ್ಡದ ಬದಿಯಲ್ಲೇ ನಿಧಾನವಾಗಿ ಕೆಳಗಿಳಿಯಬೇಕು. ಯಾವಾಗಲೂ ಚಿಗರೆಯಂತೆ ಮುಂದೆ ಓಡುವ ರಾಕೇಶ್ ಕೂಡಾ ಸ್ವಲ್ಪ ಹಿಂಜರಿಯುತ್ತಾ ಅಲ್ಲಲ್ಲಿ ಕೂತುಕೊಂಡು ಕೆಳಗಿಳಿಯುತ್ತಿದ್ದ. ನನ್ನ ಪರಿಸ್ಥಿತಿ ಅಸಹನೀಯ. ಕೆಳಗಿಳಿಯಬೇಕೆಂಬ ಛಲ. ಆದರೆ ಅಪಾಯಕರ ಇಳಿಜಾರಿನ ಹಾದಿ. ಕೆಲವೊಂದು ಕಡೆ ಹಿಡಿದುಕೊಳ್ಳಲು ಯಾವುದೇ ಆಧಾರಗಳಿಲ್ಲ. ಆದರೂ ಕೂತುಕೊಂಡೇ ನಿಧಾನವಾಗಿ ಒಂದೊಂದೇ ಹೆಜ್ಜೆ ಮುಂದಿಡುತ್ತಾ ಅಲ್ಲಲ್ಲಿ ವಿರಮಿಸುತ್ತಾ ಸುಮಾರು ೪೦ ನಿಮಿಷಗಳ ಬಳಿಕ ಕೆಳಗೆ ತಲುಪಿದೆ. ಇಂತಹ 'ಥ್ರಿಲ್ಲಿಂಗ್' ಇಳಿಜಾರು ಎಲ್ಲೂ ಅನುಭವಿಸಿರಲಿಲ್ಲ. ಸ್ವಲ್ಪ ಆಯ ತಪ್ಪಿದರೆ ನೇರವಾಗಿ ಗುಡ್ಡದ ಬದಿಯಲ್ಲೇ ಉರುಳಿ ಶಿರ್ಲದ ಎರಡನೇ ಹಂತದ ಬದಿಗೆ ೭೦-೧೦೦ ಅಡಿ ಉರುಳಿ ಬೀಳುವ ರಿಸ್ಕ್. ನಾನು ಜಲಪಾತದ ಬುಡ ತಲುಪಿದಾಗ ಸಮಯ ೨.೪೫.


ಶಿರ್ಲದ ವೈಭವವನ್ನು ಈಗ ಸಂಪೂರ್ಣವಾಗಿ ವೀಕ್ಷಿಸುವ ಅವಕಾಶ ನಮ್ಮದಾಗಿತ್ತು. ಎರಡು ಕವಲುಗಳಲ್ಲಿ ೧೨೦ ಅಡಿ ಎತ್ತರದಿಂದ ಕೆಳಗೆ ಇರುವ ವಿಶಾಲ ನೀರಿನ ರಾಶಿಗೆ ಧುಮುಕುವ ಎಮ್ಮೆಶಿರ್ಲ ಹಾಗೆ ಮುಂದೆ ಮತ್ತೆರಡು ಹಂತಗಳನ್ನು ಹೊಂದಿದೆ. ಸುಮಾರು ೩೦ ಮತ್ತು ೫೦ ಅಡಿ ಎತ್ತರವಿರಬಹುದು ಈ ಎರಡು ಹಂತಗಳು.


ಜಲಪಾತದ ತಳದಲ್ಲೇ ಇರುವ ವಿಶಾಲ ಕೆರೆಯಂತಹ ಜಲರಾಶಿ ಈ ಸ್ಥಳದ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತದೆ ಎನ್ನಬಹುದು. ರಾಕೇಶ್ ಆ ಕಡೆಯಿಂದ ಈ ಕಡೆಗೆ ಮತ್ತೆ ಈ ಕಡೆಯಿಂದ ಆ ಕಡೆಗೆ ಈಜಾಡುವುದರಲ್ಲೇ ಕಾಲಹರಣ ಮಾಡಿದರೆ ನಾನು ಫೋಟೊ ತೆಗೆಯುವುದರಲ್ಲಿ ವ್ಯಸ್ತನಾದೆ. ನಂತರ ಸುಮಾರು ೪೦ ನಿಮಿಷ ಹಾಗೇ ಕುಳಿತು ಶಿರ್ಲದ ಚೆಲುವನ್ನು ಅಸ್ವಾದಿಸುತ್ತಾ ನಂತರ ಸರಿಯಾಗಿ ೪ ಗಂಟೆಗೆ ನಿಧಾನವಾಗಿ ಮೇಲೇರಲಾರಂಭಿಸಿದೆವು.


ಕಣಿವೆಯ ಮೇಲೆ ಬಂದಾಗ ೪.೪೫ ಆಗಿತ್ತು. ಬಂದ ದಾರಿಯಲ್ಲಿ ಹಿಂತಿರುಗದೆ ಹಾಗೆ ಅದೇ ದಾರಿಯಲ್ಲಿ ಮುನ್ನಡೆದೆವು. ಧಾರವಾಡದ ನನ್ನ ಗೆಳೆಯರು ಆ ದಾರಿ ಮಗದೊಂದು ಊರಿಗೆ ಸೇರುತ್ತದೆ ಎಂದು ಮಾಹಿತಿ ನೀಡಿದ್ದರಿಂದ ನಾವು ಆ ಕಡೆ ಮುನ್ನಡೆದೆವು. ಸಂಪೂರ್ಣವಾಗಿ ದಣಿದಿದ್ದ ನನಗೆ ಈ ದಾರಿ ಬಹಳ ಹಿಡಿಸಿತು. ಎಲ್ಲೂ ಏರುದಾರಿ ಇರಲಿಲ್ಲ. ಪೂರ್ತಿ ಇಳಿಜಾರಿನ ದಾರಿ. ಅದೂ ಕೂಡಾ ಹದವಾದ ಇಳಿಜಾರು. ಈ ೨ ತಾಸಿನ ದಾರಿ ನನಗೆ ಬಹಳ ಸಂತೋಷವನ್ನು ನೀಡಿತು. ದಟ್ಟವಾದ ಕಾಡಾಗಿರಲಿಲ್ಲ ಆದರೆ ಜನವಸತಿಯ ಪ್ರದೇಶವೂ ಆಗಿರಲಿಲ್ಲ. ಕೆಲವೊಮ್ಮೆ ಎರಡೂ ಕಡೆ ಇಳಿಜಾರಿರುವ ಗುಡ್ಡದ ಮೇಲೆ ಹಾದಿ ಸಾಗಿದರೆ ನಂತರ ಎರಡು ಕಡೆ ಏರಿರುವ ಕಣಿವೆಯಲ್ಲಿ ಹಾದಿ ಸಾಗುತ್ತಿತ್ತು. ನಂತರ ಕೆಲವೊಮ್ಮೆ ಗುಡ್ದದ ಬದಿಯಲ್ಲೇ ಹಾವಿನಂತೆ ಹಾದಿಯಿದ್ದರೆ ಕೆಲವು ಕಡೆ ಬಿದಿರು ಕಾಡಿನ ನಡುವೆ ನೇರ ಹಾದಿಯಿರುತ್ತಿತ್ತು. ನನಗಂತೂ ಈ ದಾರಿ ತುಂಬಾನೇ ಹಿಡಿಸಿತು.

ಮಂಗಳವಾರ, ಫೆಬ್ರವರಿ 13, 2007

ಕರ್ನಾಟಕ ಕ್ರಿಕೆಟ್ ೫ - ಜಗದೀಶ್ ಅರುಣ್ ಕುಮಾರ್


ಜೆ ಎ ಕೆ - 'ಜ್ಯಾಕ್' ಎಂದೇ ಕರೆಯಲ್ಪಡುವ ಸಾಹಸಿ ಆರಂಭಿಕ ಆಟಗಾರ ಅರುಣ್ ಕುಮಾರ್. ೧೯೯೩-೯೪ನೇ ಋತುವಿನಲ್ಲಿ ಕೇವಲ ೧೭ ನೇ ವಯಸ್ಸಿನಲ್ಲೇ ಕರ್ನಾಟಕ ತಂಡಕ್ಕೆ ಆಯ್ಕೆಯಾದ ಅರುಣ್, ಆಂಧ್ರದ ವಿರುದ್ಧ ತನ್ನ ಪ್ರಥಮ ಪಂದ್ಯದಲ್ಲಿ ೮೪ ಓಟ ಗಳಿಸಿದರು. ನಂತರ ಗೋವಾ ವಿರುದ್ಧ ೧೪೧; ಹೈದರಾಬಾದ್ ವಿರುದ್ಧ ೨೦ ಮತ್ತು ೨; ತಮಿಳುನಾಡು ವಿರುದ್ಧ ೬ ಮತ್ತು ೬೮; ಪ್ರಿ ಕ್ವಾರ್ಟರ್ ಫೈನಲ್ ನಲ್ಲಿ ಅಸ್ಸಾಂ ವಿರುದ್ಧ ೭೫ ಮತ್ತು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮುಂಬೈ ವಿರುದ್ಧ ೬೫ ಮತ್ತು ೧೦೫. ಆಡಿದ ಪ್ರಥಮ ಋತುವಿನಲ್ಲೇ, ಅರುಣ್ ೬೨.೮೯ ರ ಸರಾಸರಿಯಲ್ಲಿ ೫೬೬ ಓಟಗಳನ್ನು ಗಳಿಸಿ ಮುಂದಿನ ೧೧ ವರ್ಷಗಳ ಕಾಲ ಆರಂಭಿಕನ ಸ್ಥಾನವನ್ನು ತನ್ನದಾಗಿಸಿಕೊಂಡರು.

ಅರುಣ್ ಕುಮಾರ್ ಗೆ ಹಾವುಗಳೆಂದರೆ ತುಂಬಾನೇ ಪ್ರೀತಿ. ಅವರೊಂದಿಗೆ ಹೊಟೇಲ್ ರೂಮ್ ಶೇರ್ ಮಾಡಿಕೊಳ್ಳಲು ಉಳಿದ ಆಟಗಾರರು ಹಿಂಜರಿಯುತ್ತಿದ್ದರು. ಚೇಷ್ಟೆ ಮಾಡುವುದರಲ್ಲಿ ಬಹಳ ಮುಂದಿದ್ದ ಅರುಣ್ ಹಾವುಗಳ ಮೂಲಕ ಸಹ ಆಟಗಾರರನ್ನು ಬಹಳ ಕಾಡಿದ್ದಾರೆ.

ಜ್ಯಾಕ್ ಮುಂದಿನ ವರ್ಷಗಳಲ್ಲಿ ತನ್ನ ಬ್ಯಾಟಿಂಗ್ ನಿಂದ ಕರ್ನಾಟಕಕ್ಕೆ ಹಲವಾರು ಬಾರಿ ಉತ್ತಮ ಆರಂಭವನ್ನು ನೀಡಿದ್ದರು. ಹಲವಾರು ಬಾರಿ ಭಾರತ ತಂಡಕ್ಕೆ ಆಯ್ಕೆಯಾಗುವ ಸಂಭವನೀಯ ಆಟಗಾರರ ಪಟ್ಟಿಯಲ್ಲಿ ಜ್ಯಾಕ್ ಹೆಸರಿರುತ್ತಿತ್ತು. ನಿರಾಸೆಯ ಸಂಗತಿಯೆಂದರೆ ಜ್ಯಾಕ್ ೬೦-೭೦ ಓಟಗಳನ್ನು ಗಳಿಸಿದ ಬಳಿಕ ಸಂಯಮವನ್ನು ಕಳೆದು ಕೆಟ್ಟ ಹೊಡೆತಗಳಿಗೆ ತನ್ನ ವಿಕೆಟ್ ಒಪ್ಪಿಸುವುದನ್ನು ರೂಢಿಮಾಡಿಕೊಂಡಿದ್ದರು. ತನ್ನ ಕ್ರಿಕೆಟ್-ನ ಈ ನ್ಯೂನತೆಯನ್ನು ಜ್ಯಾಕ್ ಸರಿಪಡಿಸಿಕೊಂಡಿದ್ದರೆ ಭಾರತ ತಂಡದಲ್ಲಿ ಮತ್ತೊಬ್ಬ ಕನ್ನಡಿಗನ ಹೆಸರನ್ನು ನಾವೆಲ್ಲರೂ ಕಾಣಬಹುದಿತ್ತು.

೨೦೦೪-೦೫ ರ ರಣಜಿ ಋತುವಿನಲ್ಲಿ ಅರುಣ್ ಕುಮಾರ್-ಗೆ ಶನಿದೆಸೆ ಆರಂಭವಾಗುವ ಎಲ್ಲಾ ಲಕ್ಷಣಗಳು ಕಾಣಬಂದಿದ್ದವು. ಒಂದು ಕಡೆಯಿಂದ ರಾಬಿನ್ ಉತ್ತಪ್ಪ, ಶ್ಯಾಮ್ ಪೊನ್ನಪ್ಪ ಮತ್ತು ಭರತ್ ಚಿಪ್ಲಿ ಇತ್ಯಾದಿ ಯುವ ಆಟಗಾರರಿಗೆ ಅವಕಾಶ ನೀಡುವ ಆಯ್ಕೆಗಾರರ ತವಕ ಮತ್ತೊಂದು ಕಡೆಯಿಂದ ಬ್ಯಾಟಿಂಗ್ ಬಾರದ, ಬೌಲಿಂಗ್ ಬಾರದ, ಕ್ಷೇತ್ರರಕ್ಷಣೆ ಬಾರದ ಮತ್ತು ಕನ್ನಡ ಮೊದಲೇ ಬಾರದ ಸ್ಟುವರ್ಟ್ ಬಿನ್ನಿಯಂತಹವರನ್ನು 'ಆಡಿಸಲೇಬೇಕಾದ' ಅನಿವಾರ್ಯತೆ ಅರುಣ್ ಮೇಲೆ ವಿಪರೀತ ಒತ್ತಡವನ್ನು ತರಲಾರಂಭಿಸಿತು. ಯಾವಾಗಲೂ ಋತುವಿನ ಆರಂಭದಲ್ಲಿ ವಿಫಲರಾಗದ ಅರುಣ್, ಈ ಋತುವಿನ ಮೊದಲ ಎರಡು ಪಂದ್ಯಗಳಲ್ಲಿ ೨೫,೧೩,೨೯ ಮತ್ತು ೬ ಓಟ ಗಳಿಸಿ ವಿಫಲರಾದರು. ಇದೇ ಕಾರಣವನ್ನು ಮುಂದಿಟ್ಟು ನಂತರದ ೫ ಪಂದ್ಯಗಳಲ್ಲಿ ಅವರನ್ನು ಹೊರಗಿಡಲಾಯಿತು. ಆದರೆ ಈ ೫ ಪಂದ್ಯಗಳನ್ನಾಡಿದ ರಾಬಿನ್ ಮತ್ತು ಶ್ಯಾಮ್ ಅವರಿಬ್ಬರ ಒಟ್ಟಾರೆ ಪ್ರದರ್ಶನ ಸಾಧಾರಣವಾಗಿತ್ತು ಅಷ್ಟೆ.

ಆಯ್ಕೆಗಾರರು ನೀಡಿದ ಎಲ್ಲಾ ಸೂಕ್ಷ್ಮ ಸುಳಿವುಗಳ ಮೂಲಕ ಮುಂದಿನ ಋತುವಿನ ರಣಜಿ ತಂಡಕ್ಕೆ ತನ್ನನ್ನು ಪರಿಗಣಿಸಲಾರರು ಎಂಬುದನ್ನು ಮನಗಂಡ ಅರುಣ್ ಕುಮಾರ್, ಬೇರೆ ಕಡೆ ಆಡುವ ಅವಕಾಶಕ್ಕಾಗಿ ಹುಡುಕಾಡತೊಡಗಿದರು. ಅದೇ ಸಮಯದಲ್ಲಿ ಅಸ್ಸಾಮ್ ಕ್ರಿಕೆಟ್ ಬೋರ್ಡ್ ಹೊರ ರಾಜ್ಯದ ಅನುಭವಿ ಆಟಗಾರರಿಗಾಗಿ ಹುಡುಕಾಡುತ್ತಿತ್ತು. ಅರುಣ್ ಕುಮಾರ್ ರಂತಹ ಆಟಗಾರ ಸಿಕ್ಕಿದ್ದು ಅಸ್ಸಾಮ್ ಕ್ರಿಕೆಟ್-ನ ಭಾಗ್ಯ. ಅವರನ್ನು ಕಳೆದುಕೊಂಡು ಸ್ಟುವರ್ಟ್ ಬಿನ್ನಿಯಂತವರ ಆಟ ನೋಡುತ್ತಿರುವುದು ನಮ್ಮ ದೌರ್ಭಾಗ್ಯ.

೨೦೦೪-೦೫ ರಲ್ಲಿ ಎಲೀಟ್ ಲೀಗ್-ನಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಅಸ್ಸಾಮ್ ೨೦೦೫-೦೬ ರ ಋತುವಿನಲ್ಲಿ ಪ್ಲೇಟ್ ಲೀಗ್-ಗೆ ಹಿಂಬಡ್ತಿ ಪಡೆದಿತ್ತು. ಹೀಗೆ ೨೦೦೫-೦೬ ನೇ ಋತುವಿನಲ್ಲಿ ನಮ್ಮ ಅರುಣ್ ಕುಮಾರ್, ಆಸ್ಸಾಮ್ ಪರವಾಗಿ ಆಡಿ ೪ ಪಂದ್ಯಗಳಲ್ಲಿ ೨ ಶತಕಗಳ ಸಹಿತ ೫೭.೬೬ ರ ಸರಾಸರಿಯಲ್ಲಿ ೩೪೬ ಓಟಗಳನ್ನು ಗಳಿಸಿದರು.

ಅರುಣ್ ಕುಮಾರ್ ಅವರ ವ್ಯಕ್ತಿತ್ವ, ಆಟ ಮತ್ತು ಅನುಭವಗಳಿಂದ ಬಹಳ ಆಕರ್ಷಿತವಾದ ಅಸ್ಸಾಮ್ ಕ್ರಿಕೆಟ್ ಬೋರ್ಡ್ ಈ ಪ್ರಸಕ್ತ ಋತುವಿನಲ್ಲಿ (೨೦೦೬-೦೭) ಅವರಿಗೆ ಒಂದು ದೊಡ್ಡ ಜವಾಬ್ದಾರಿಯನ್ನು ನೀಡಿತು. ಅದೇನೆಂದರೆ ಅಸ್ಸಾಮ್ ತಂಡದ ನಾಯಕತ್ವ! ಇದರೊಂದಿಗೆ ಬಂದ ಇನ್ನೂ ದೊಡ್ಡ ಜವಾಬ್ದಾರಿಯೆಂದರೆ ಅಸ್ಸಾಮ್ ತಂಡವನ್ನು ಪ್ಲೇಟ್ ಲೀಗ್-ನ ಫೈನಲ್ ತಲುಪುವಂತೆ ಮಾಡಿ ಮುಂದಿನ ಋತುವಿನಲ್ಲಿ ಎಲೀಟ್ ಲೀಗ್-ನಲ್ಲಿ ಆಡಲು ಅರ್ಹತೆ ಗಳಿಸುವುದು.

ಈ ಪ್ರಸಕ್ತ ಋತುವಿನಲ್ಲಿ ಅರುಣ್ ನಾಯಕತ್ವದಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ಅಸ್ಸಾಮ್ ಈಗ ಪ್ಲೇಟ್ ಲೀಗ್-ನ ಸೆಮಿ ಫೈನಲ್ ತಲುಪಿ ಅಲ್ಲಿ ಎಡವಿತು. ಕೊನೆಯ ದಿನದ ಆಟದ ಮುನ್ನಾ ದಿನ ರಾತ್ರಿ ಒರಿಸ್ಸಾ ಕ್ರಿಕೆಟ್ ಬೋರ್ಡ್ ಆಟದ ಅಂಕಣದ ಮೇಲಿನ ಹುಲ್ಲನ್ನು ಬೋಳಿಸಿ, ಅಂಕಣದಲ್ಲಿದ್ದ ಸೀಳುಗಳನ್ನು ತುಂಬಿಸಿ ಬ್ಯಾಟಿಂಗ್ ಮಾಡಲು ಸುಲಭವಾಗುವಂತೆ ಮಾಡಿತು. ಗೆಲ್ಲಲು ಬೇಕಿದ್ದ ಓಟಗಳನ್ನು ಒರಿಸ್ಸ ಈ ಮೋಸದಿಂದ ಸುಲಭವಾಗಿ ಗಳಿಸಿ ಎಲೀಟ್ ಲೀಗ್ ಗೆ ತೇರ್ಗಡೆ ಹೊಂದಿತು. ಆದರೂ ಈ ಋತುವಿನಲ್ಲಿ ಅಸ್ಸಾಮ್ ಉತ್ತಮ ಆಟವನ್ನು ಪ್ರದರ್ಶಿಸಿದ್ದು, ವೈಯುಕ್ತಿಕವಾಗಿ ಭರ್ಜರಿ ಆಟ ಪ್ರದರ್ಶಿಸಿರುವ ಅರುಣ್, ೫ ಪಂದ್ಯಗಳಲ್ಲಿ ೨ ಶತಕಗಳೊಂದಿಗೆ ೯೦.೩೩ ರ ಸರಾಸರಿಯಲ್ಲಿ ೫೪೨ ಓಟ ಗಳಿಸಿದ್ದಾರೆ. 'ಕರ್ನಾಟಕಾಸ್ ಲಾಸ್ ಇಸ್ ಅಸ್ಸಾಮ್-ಸ್ ಗೈನ್'. ತಾನು ರಣಜಿಗೆ ಪಾದಾರ್ಪಣ ಮಾಡಿದ ಋತುವಿನಲ್ಲೇ ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಆಸ್ಸಾಮ್ ವಿರುದ್ಧ ೭೫ ಓಟ ಗಳಿಸಿದ್ದ ಅರುಣ್-ಗೆ, ೧೩ ವರ್ಷಗಳ ಬಳಿಕ ತಾನು ಇದೇ ತಂಡದ ನಾಯಕನಾಗಿ ಆಡಲಿದ್ದೇನೆ ಎಂಬುದೆಲ್ಲಿ ಗೊತ್ತಿತ್ತು? ಲೈಫ್ ಇಸ್ ಒನ್ ಫುಲ್ ಸರ್ಕಲ್. ಅಸ್ಸಾಮ್ ಪರವಾಗಿ ಕರ್ನಾಟಕದ ಮತ್ತೊಬ್ಬ ಕ್ರಿಕೆಟಿಗ ಸ್ಪಿನ್ನರ್ ಆನಂದ್ ಕಟ್ಟಿ ಕೂಡಾ ಆಡುತ್ತಿದ್ದು, ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದಾರೆ.

ಗುರುವಾರ, ಫೆಬ್ರವರಿ 08, 2007

ಮೇರುತಿ ಪರ್ವತದ ತುದಿಗೆ


ಜನವರಿಯ ಉಡುಪಿ ಯೂತ್ ಹಾಸ್ಟೆಲ್ ಚಾರಣ ಮೇರುತಿ ಪರ್ವತಕ್ಕೆ. ಎರಡು ದ್ವಿಚಕ್ರ ವಾಹನಗಳು, ಒಂದು ಮಾರುತಿ 800 ಮತ್ತು ಒಂದು ಮಾರುತಿ ಓಮ್ನಿಯಲ್ಲಿ ಜನವರಿ 20ರಂದು ನಾವು 15 ಚಾರಣಿಗರು ಮೇರುತಿಯನ್ನೇರಲು ತೆರಳಿದೆವು. ದಾರಿಯಲ್ಲಿ ಸಿಗುವ ತೀರ್ಥಕೆರೆ ಜಲಪಾತದ ಸೌಂದರ್ಯವನ್ನು ಸ್ವಲ್ಪ ಕಾಲ ವೀಕ್ಷಿಸಿ ಮೇರುತಿಯ ತಪ್ಪಲಲ್ಲಿರುವ ಊರು ತಲುಪಿದಾಗ ಮಧ್ಯಾಹ್ನ ಸುಮಾರು 12.45 ಆಗಿತ್ತು. ಅದಾಗಲೇ ಮೈಸೂರಿನಿಂದ ಚಾರಣಕ್ಕೆಂದು ಬಂದಿದ್ದ ಅನಿರುದ್ಧ ಮತ್ತು ರವಿ ನಮ್ಮನ್ನು ಸೇರಿಕೊಂಡಾಗ ಚಾರಣಿಗರ ಸಂಖ್ಯೆ 17ಕ್ಕೇರಿತು. ಈ ಊರಿನಲ್ಲಿರುವ ಕೋಟ ಅಡಿಗರ ಹೋಟೆಲ್ ನಲ್ಲಿ ಉದರ ಪೋಷಣೆಯ ಕೆಲಸ ಭರ್ಜರಿಯಾಗಿಯೇ ನಡೆಯಿತು. ನಮ್ಮ ವಾಹನಗಳನ್ನು ಊರಿನ ದೇವಸ್ಥಾನದ ಪ್ರಾಂಗಣದೊಳಗಿರಿಸಿ ಸುಮಾರು 2 ಗಂಟೆಗೆ ಒಂದು ಟಾಟಾ ಪಿಕ್ ಅಪ್ ವಾಹನ ಮತ್ತೊಂದು ಮಹಿಂದ್ರ ಜೀಪ್ ನಲ್ಲಿ ಮೇರುತಿಯ ಬುಡದಲ್ಲಿದ್ದ ಮೇರ್ತಿಕಾನ್ ಎಸ್ಟೇಟ್ ತಲುಪಿದೆವು. ಇಲ್ಲಿಂದ ನಡಿಗೆ ಪ್ರಾರಂಭ.

ಅಲ್ಲೇ ಇದ್ದ ಗಣಪತಿ ಗುಹೆಗೆ ತೆರಳಿ ಅಲ್ಲಿ ಉಳಿದುಕೊಳ್ಳಬಹುದೆಂದು ನಮಗೆ ಹೇಳಲಾಗಿತ್ತು. ಸುಮಾರು 15ನಿಮಿಷದ ಏರುಹಾದಿಯನ್ನು ಕ್ರಮಿಸಿದ ಬಳಿಕ ಗಣಪತಿ ಗುಹೆಗೆ ಬಂದೆವು. ಗುಹೆಯ ಒಳಗಡೆ ಗಣೇಶನ ಸಣ್ಣ ಮೂರ್ತಿಯಿದೆ. ಇಲ್ಲಿಂದಲೇ ಹರಿಯುವ ಒಂದು ಸಣ್ಣ ತೊರೆಯ ನೀರು ಆಯಾಸವನ್ನು ದಣಿಸಲು ಸಹಕಾರಿಯಾಯಿತು. ಆದರೆ 17 ಜನರು ಉಳಿದುಕೊಳ್ಳುವಷ್ಟು ಜಾಗ ಇಲ್ಲಿರಲಿಲ್ಲ. ಹಾಗೇ ಹಿಂತಿರುಗಿ ಮೇರುತಿಯ ಹಾದಿ ತುಳಿದೆವು. ಮೇರ್ತಿಕಾನ್ ಎಸ್ಟೇಟ್ ಬಹು ಸುಂದರವಾಗಿದೆ. ಎಲ್ಲೋ ಯುರೋಪ್ ನಲ್ಲಿ ನಡೆದಂತೆ ಭಾಸವಾಗುತ್ತಿತ್ತು. ಸುಮಾರು 45 ನಿಮಿಷಗಳ ಬಳಿಕ ಎಸ್ಟೇಟ್ ನಿಂದ ಹೊರಬಂದು ಮೇರುತಿಯ ಬುಡದೆಡೆ ನಡೆಯಲಾರಂಭಿಸಿದೆವು. ಮತ್ತೊಂದು ಅರ್ಧ ಗಂಟೆಯಲ್ಲಿ ನಾವು ಮೇರುತಿಯ ಬುಡ ತಲುಪಿ ಅಲ್ಲೇ ಡೇರೆ ಹಾಕುವುದೆಂದು ನಿರ್ಧರಿಸಿ ಸಮೀಪದಲ್ಲೇ ಇದ್ದ ಬದ್ನೆಕಾನ್ ಎಸ್ಟೇಟ್ ಗೆ ತೆರಳಿ ನೀರಿನ ಬಗ್ಗೆ ವಿಚಾರಿಸಿದಾಗ ಅಲ್ಲಿನ ಮ್ಯಾನೇಜರ್ ನಮ್ಮ ನಿರೀಕ್ಷೆಗೂ ಮೀರಿ ಸಹಕರಿಸಿದರು. ಸುಮಾರು ಒಂದು ಕಿಮಿ ದೂರದವರೆಗೆ ಎಸ್ಟೇಟ್ ನ ನೀರಿನ ಟ್ಯಾಂಕ್ ನ್ನು ಟ್ರಾಕ್ಟರ್ ಮೂಲಕ ಎಳೆದು ನಮ್ಮ ಡೇರೆಯ ಸಮೀಪ ತಂದು ನಿಲ್ಲಿಸಿದರು! ಅವರ ಈ ಸಹಾಯಕ್ಕೆ ಎಷ್ಟೇ ಧನ್ಯವಾದಗಳನ್ನು ತಿಳಿಸಿದರೂ ಕಡಿಮೆ.

ಅತ್ತ ಉಡುಪಿ ಯೂತ್ ಹಾಸ್ಟೆಲ್ ಲೀಡರ್ ಶ್ರೀ ಅಡಿಗರು ಅಡಿಗೆಯ ಕಾಯಕದಲ್ಲಿ ನಿರತರಾದರೆ ನಾವೆಲ್ಲ ಪ್ರಕೃತಿಯ ಸೌಂದರ್ಯವನ್ನು ಅಸ್ವಾದಿಸುತ್ತಾ ಕಾಲ ಕಳೆದೆವು. ಸೂರ್ಯ ಮುಳುಗುತ್ತಾ ಆಗಸದಲ್ಲಿ ಬಣ್ಣಗಳ ಚಿತ್ತಾರ ಮೂಡಿಸುತ್ತಾ ಇದ್ದ. ನಾನು ನೋಡಿದ ಉತ್ತಮ ಸೂರ್ಯಾಸ್ತಗಳಲ್ಲಿ ಇದೊಂದು. ಅತ್ತ ಅಡಿಗೆ ಕಾರ್ಯ ನಡೆಯುತ್ತಿದ್ದಂತೆ ಇತ್ತ ಡೇರೆ ಹಾಕುವ ಕಾರ್ಯ ನಡೆಯಿತು. ಚಳಿಯಂತೂ ವಿಪರೀತವಾಗಿತ್ತು ಹಾಗೇನೇ ಗಾಳಿ ಕೂಡಾ. ಆಡಿಗರ ರುಚಿರುಚಿಯಾದ ಅಡಿಗೆ ಸವಿದ ಬಳಿಕ 13 ಮಂದಿ ಡೇರೆಯ ಒಳಗೆ ಮತ್ತು 4 ಮಂದಿ ಹೊರಗೆ ಮಲಗಿದರು. ಗಾಳಿಯ ರಭಸಕ್ಕೆ ಡೇರೆಯ ಹುಕ್ ಗಳು ಎದ್ದುಬಂದು ಮತ್ತೆ ಮಧ್ಯರಾತ್ರಿ ಮರಳಿ ಸರಿಮಾಡಬೇಕಾಗಿ ಬಂದಿತ್ತು. ಅದಕ್ಕೋಸ್ಕರ ಡೇರೆಯಿಂದ ಹೊರಬಂದಾಗ ಗಾಳಿಯ ರಭಸಕ್ಕೆ ಹೆಜ್ಜೆ ಇಡುವುದು ಕಷ್ಟವಾಗುತ್ತಿತ್ತು ಮೈ ಕೊರೆಯುವ ಚಳಿ ಬೇರೆ. ಹೊರಗೆ ಮಲಗಿದ್ದ ನಾಲ್ವರ ಪರಿಸ್ಥಿತಿ ಕೆಟ್ಟದಾಗಿತ್ತು. ಇಬ್ಬರು ಡೇರೆಯ ಹಿಂದೆ ಮುದುಡಿ ಮಲಗಿದ್ದರೆ ಮತ್ತಿಬ್ಬರು ಅಡಿಗೆಗೆಂದು ಮಾಡಿದ ಬೆಂಕಿಯನ್ನು ಮತ್ತೆ ಉರಿಸಿ ಅದರ ಪಕ್ಕದಲ್ಲಿ ನಿದ್ರಿಸಲು ಪ್ರಯತ್ನಿಸುತ್ತಿದ್ದರು. ರಾತ್ರಿಯೆಲ್ಲಾ ಬೀಸಿದ ರಭಸದ ಗಾಳಿಯಿಂದ ಡೇರೆಯ ಮೇಲಿನ ಹೊದಿಕೆ ಹಾರಾಡುತ್ತಾ ಪಟಪಟ ಸದ್ದು ಮಾಡುತ್ತಿತ್ತು. ಆ ತರಹ ಗಾಳಿಯನ್ನು ನಾನೆಲ್ಲೂ ಅನುಭವಿಸಿರಲಿಲ್ಲ. ದೇವಕಾರದ ಬಳಿಕ ಕಳೆದ ಮತ್ತೊಂದು ಸ್ಮರಣೀಯ ಚಾರಣದ ರಾತ್ರಿ. ಮರುದಿನದ ಸುರ್ಯೋದಯ ಹಿಂದಿನ ದಿನದ ಸೂರ್ಯಾಸ್ತದಷ್ಟೇ ಚೆಲುವಾಗಿತ್ತು.

ಮರುದಿನ ಮುಂಜಾನೆ ಗಂಜಿ ಬೇಯಿಸಿ 7ಕ್ಕೆ ಮೇರುತಿಯ ತುದಿಗೆ ಚಾರಣ. ರಾತ್ರಿ ಕಳೆದ ತಾಣದಿಂದ ಸಮೀಪದಲ್ಲೇ ಇರುವಂತೆ ಕಾಣುತ್ತಿತ್ತು. ಮೊದಲ ಹಂತದ ಮೇಲೆ ತಲುಪಿದ ನಂತರವೇ ಎರಡನೇ ಹಂತ ಗೋಚರಿಸಿತ್ತು. ಅಬ್ಬಾ ಎನ್ನುತ್ತಾ ಮತ್ತೆ ಮುಂದಕ್ಕೆ ನಡೆದೆವು. ಎರಡನೇ ಹಂತದ ತುದಿ ತಲುಪಿದಾಗ ನಂತರ ಮೂರನೇ ಮತ್ತು ನಾಲ್ಕನೇ ಹಂತಗಳು ಗೋಚರಿಸಿದವು. ಸುಮಾರು ೯೦ ನಿಮಿಷಗಳ ಬಳಿಕ ಮೇರುತಿಯ ತುದಿ ತಲುಪಿದೆವು. ಅದೊಂದು ಅದ್ಭುತ ದೃಶ್ಯ - 360 ಕೋನದ ನೋಟ. ಒಂದು ಕಡೆ ಅಮೇದಿಕಲ್ಲು, ಎತ್ತಿನಭುಜ ಮತ್ತು ಮಿಂಚುಕಲ್ಲುಗಳು ಮುಂಜಾನೆಯ ಮಂಜಿನಲ್ಲಿ ಸೋಕಿದ್ದರೆ ಮತ್ತೊಂದು ಬದಿಯಲ್ಲಿ ದತ್ತಪೀಠ ಮತ್ತು ಮುಳ್ಳಾಯ್ಯನಗಿರಿಗಳು ಮಂಜಿನಲ್ಲಿ ತೊಯ್ದುಹೋಗಿದ್ದವು. ಈ ಕಡೆ ಕುದ್ರೆಮುಖ ಮತ್ತು ಕೃಷ್ಣಗಿರಿ ಪರ್ವತಗಳು ತಾವೇನು ಕಡಿಮೆ ಎಂಬಂತೆ ಪೋಸು ಕೊಡುತ್ತಿದ್ದವು. ಅದೊಂದು ರಮಣೀಯ ದೃಶ್ಯ. ಚಾರ್ಮಾಡಿ, ಮೂಡಿಗೆರೆ, ಕೆಮ್ಮಣ್ಣುಗುಂಡಿ ಮತ್ತು ಕುದ್ರೆಮುಖ ಶ್ರೇಣಿಯ ಎಲ್ಲಾ ಬೆಟ್ಟಗಳು ನಿಧಾನವಾಗಿ ತಮ್ಮನ್ನು ಆವರಿಸಿದ್ದ ಮಂಜನ್ನು ಸರಿಸಿ ಪೂರ್ಣವಾಗಿ ದರ್ಶನ ನೀಡಿದಾಗ ಅಲ್ಲಿಂದ ಹಿಂತಿರುಗಲು ಮನಸ್ಸೇ ಆಗುತ್ತಿರಲಿಲ್ಲ. ಒಂದು ಬದಿ ಅದೆಲ್ಲೋ ಕೆಳಗೆ ನಾವು ಏರಿ ಬಂದ ಊರು ಕಾಣುತ್ತಿದ್ದರೆ ಅದರ ವಿರುದ್ಧ ಬದಿಯಲ್ಲಿ ಇನ್ನೊಂದು ಊರು ಗೋಚರಿಸುತ್ತಿತ್ತು. ಗಾಳಿಯ ರಭಸ ಸ್ವಲ್ಪನೂ ಕಡಿಮೆಯಾಗಿರಲಿಲ್ಲ. ಒಂಥರ ಚಳಿಗಾಳಿ.

ಒಲ್ಲದ ಮನಸ್ಸಿನಿಂದ ನಿಧಾನವಾಗಿ ಇಳಿದು ಬಂದು ಗಂಜಿ ಊಟ ಮುಗಿಸಿ ಅಲ್ಲೇ ಬದ್ನೆಕಾನ್ ಎಸ್ಟೇಟ್ ಸಮೀಪ ವಾಸವಿರುವ ನವೀನ್ ಮತ್ತು ರಂಜಿತ್ ಎಂಬ ಪೋರರಿಬ್ಬರ ಮಾರ್ಗದರ್ಶನದಲ್ಲಿ ಬೆಟ್ಟದ ಕೆಳಗಿರುವ ಇನ್ನೊಂದು ಊರಿನೆಡೆ ಹೆಜ್ಜೆ ಹಾಕಿದೆವು. ಸುಂದರವಾದ ಗದ್ದೆ, ತೋಟ, ಸಣ್ಣ ಕಾಡು ಇವುಗಳ ನಡುವೆ ನಡೆದು ಅಲ್ಲಲ್ಲಿ ವಿಶ್ರಮಿಸಿ 180 ನಿಮಿಷಗಳ ಬಳಿಕ ಸುಮಾರು 1.15ಕ್ಕೆ ಕೆಳಗೆ ತಲುಪಿ, ದೇವಸ್ಥಾನದಲ್ಲಿ ಊಟ ಮುಗಿಸಿ ನಮ್ಮ ವಾಹನಗಳನ್ನಿರಿಸಿದ ಊರಿಗೆ ಬಸ್ ಏರಿದೆವು. ಅನಿರುದ್ಧ ಮತ್ತಿ ರವಿ ಮೈಸೂರಿಗೆ ವಾಪಸಾದರೆ ನಾವು ಉಡುಪಿ ತಲುಪಿದಾಗ ರಾತ್ರಿ 8 ಆಗಿತ್ತು. ಇತ್ತೀಚೆಗಿನ ದಿನಗಳಲ್ಲಿ ಕೈಗೊಂಡ ಒಂದು ಉತ್ತಮ ಚಾರಣವಿದಾಗಿತ್ತು.