ಭಾನುವಾರ, ಸೆಪ್ಟೆಂಬರ್ 27, 2015

ಹ್ಯಾಟ್ರಿಕ್ ಸಾಧಿಸಿತೇ ರಾಜ್ಯ ತಂಡ...?

ಸತತ ಎರಡು ಬಾರಿ ರಣಜಿ ಚಾಂಪಿಯನ್ಸ್ ಆಗಿರುವ ರಾಜ್ಯ ತಂಡ ಈಗ ಮೂರನೇ ಬಾರಿಯೂ ರಣಜಿ ಪ್ರಶಸ್ತಿ ಗೆದ್ದು ಹ್ಯಾಟ್ರಿಕ್ ಸಾಧಿಸಿತೇ?

ಕಳೆದೆರಡು ವರ್ಷಗಳ ನಿರ್ವಹಣೆಯತ್ತ ಗಮನ ಹರಿಸಿದರೆ, ತಂಡದಲ್ಲಿರುವ ಮೀಸಲು ಆಟಗಾರರ ಸಾಮರ್ಥ್ಯವನ್ನು ಗಣನೆಗೆ ತೆಗೆದುಕೊಂಡರೆ ಹಾಗೂ ಪ್ರಸಕ್ತ ಋತುವಿನಲ್ಲಿ ರಾಜ್ಯ ತಂಡವಿರುವ ಗುಂಪಿನಲ್ಲಿರುವ ಇತರ ತಂಡಗಳತ್ತ ಗಮನ ಹರಿಸಿದರೆ ಕನಿಷ್ಟ ಸೆಮಿ ಫೈನಲ್ ತನಕ ಕರ್ನಾಟಕ ತಲುಪಬಹುದು ಎಂದು ಹೇಳಬಹುದು. ಅಲ್ಲಿವರೆಗೆ ತಲುಪಬೇಕಾದರೂ ರಾಜ್ಯ ತಂಡದ ಆಟಗಾರರ ಮನೋಸ್ಥಿತಿ ಮತ್ತು ಪ್ರೇರೆಪಣೆ ಉನ್ನತ ಮಟ್ಟದಲ್ಲಿರಬೇಕಾಗುತ್ತದೆ.

ಕೆ ಎಲ್ ರಾಹುಲ್ ಅದಾಗಲೇ ರಾಷ್ಟ್ರ ತಂಡವನ್ನು ಪ್ರತಿನಿಧಿಸಿದ್ದಾರೆ. ಆದರೆ ಅಲ್ಲಿ ಕೂಡಾ ಅವರ ಪ್ರದರ್ಶನ ನೀರಸ. ಆಡಿದ ಹತ್ತು ಇನ್ನಿಂಗ್ಸ್‌ಗಳಲ್ಲಿ ಎರಡು ಶತಕಗಳನ್ನು ಬಾರಿಸಿದ್ದಾರೆ. ಆದರೆ ಉಳಿದ ಎಂಟು ಇನ್ನಿಂಗ್ಸ್‌ಗಳಲ್ಲಿ ಅವರ ಸಾಧನೆ ಒಂದಂಕಿ ಸ್ಕೋರ್‌ಗಳು! ಅದಾಗಲೇ ತಾನು ರಾಷ್ಟ್ರ ತಂಡವನ್ನು ಪ್ರತಿನಿಧಿಸಿದ್ದೇನೆ ಎಂಬ ಗರ್ವದಿಂದ ಇವರು ಆಡುತ್ತಾರೋ ಅಥವಾ ತಾನಿನ್ನೂ ಕಲಿಯಲು ಬಹಳಷ್ಟಿದೆ ಎಂಬ ಮನೋಭಾವದಿಂದ ಆಡುತ್ತಾರೋ ಎನ್ನುವುದು ಮುಖ್ಯವಾಗಲಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿಗೆ ಇವರು ಆಯ್ಕೆಯಾಗುವುದು ಖಚಿತವಿರುವುದರಿಂದ, ಅದೇನಿದ್ದರೂ ನಾಲ್ಕೈದು ರಣಜಿ ಪಂದ್ಯಗಳಿಗೆ ಮಾತ್ರ ಇವರು ಲಭ್ಯವಿರುವರು.

ರವಿಕುಮಾರ್ ಸಮರ್ಥ್, ಸಮರ್ಥ ಆರಂಭಿಕ ಆಟಗಾರ. ಇವರು ಕೆಲವೊಮ್ಮೆ ಮೂರನೇ ಕ್ರಮಾಂಕದಲ್ಲೂ ಆಡುತ್ತಾರೆ. ಕಳೆದ ಋತುವಿನಲ್ಲಿ ಉತ್ತಮ ಪ್ರದರ್ಶನ ನೀಡಿರುವ ಇವರಿಂದ ಈ ಬಾರಿಯೂ ಅದೇ ಮಟ್ಟದ ಆಟವನ್ನು ನಿರೀಕ್ಷಿಸಬಹುದು.

ರಾಬಿನ್ ಉತ್ತಪ್ಪ! ತನ್ನ ಸ್ವಾಭಾವಿಕ ಹೊಡೆಬಡಿಯ ಆಟವನ್ನು ಬದಿಗಿರಿಸಿ, ಸಾಂಪ್ರದಾಯಿಕ ಆಟವನ್ನು ಮೈಗೂಡಿಸಲು ಎಲ್ಲಾ ಕಸರತ್ತನ್ನು ಮಾಡಿ, ಕೊನೆಗೆ ಅತ್ತ ಸ್ವಾಭಾವಿಕವಾಗಿ ಬಂದದ್ದನ್ನೂ ಕಳಕೊಂಡು, ಇತ್ತ ಏನಾಗಬೇಕು ಎಂದು ಹೊರಟಿದ್ದರೋ ಅದೂ ಆಗದೆ, ಸಂಪೂರ್ಣ ಗೊಂದಲದಲ್ಲಿರುವ ಆಟಗಾರ. ರಾಷ್ಟ್ರ ತಂಡದಲ್ಲಿ ಮರಳಿ ತನ್ನ ಸ್ಥಾನ ಗಳಿಸಬೇಕೆಂಬ ಛಲದಿಂದ ಕಳೆದೆರಡು ಋತುಗಳಲ್ಲಿ ಆಡಿದ್ದ ರಾಬಿನ್, ರಾಷ್ಟ್ರ ತಂಡಕ್ಕೆ ಆಯ್ಕೆಯಾದರೂ ಅಲ್ಲಿ ಮತ್ತೆ ನೀರಸ ಪ್ರದರ್ಶನ ನೀಡಿ ಹೊರಬಿದ್ದರು. ಅಲ್ಲಿ ಇವರ ನೀರಸ ಪ್ರದರ್ಶನಕ್ಕೆ ಅವರಲ್ಲಿದ್ದ ಗೊಂದಲವೇ ಕಾರಣ. ಈಗ ಮರಳಿ ರಾಷ್ಟ್ರ ತಂಡದಲ್ಲಿ ರಾಬಿನ್ ಸ್ಥಾನ ಪಡೆಯುವುದು ಕಷ್ಟವಿದ್ದು, ಅವರಿಗೂ ಅದು ಅರಿವಾದಂತಿದೆ. ಪರಿಸ್ಥಿತಿ ಹೀಗಿರುವಾಗ ಅದೇ ಛಲ, ಏಕಾಗ್ರತೆ ಮತ್ತು ಗೆಲ್ಲುವ ಆಸೆ ಇರುವುದೇ?. ಕಾದು ನೋಡೋಣ.

ಮನೀಷ್ ಪಾಂಡೆ. ಆರಕ್ಕೇರದೆ ಮತ್ತು ಮೂರಕ್ಕಿಳಿಯದೇ ಅಲ್ಲೇ ಕುಟುಕುಟು ಮಾಡುತ್ತಿರುವ ಬಹಳ ನಿರಾಸೆ ಮಾಡಿದ ಆಟಗಾರ. ಏಳು ವರ್ಷಗಳಿಂದ ರಾಜ್ಯ ತಂಡಕ್ಕೆ ಆಡುತ್ತಿದ್ದರೂ, ಇನ್ನೂ ಸತತ ಎರಡು ಋತುಗಳಲ್ಲಿ ಸಮಂಜಸವಾದ ಆಟವನ್ನು ಪ್ರದರ್ಶಿಸಲು ವಿಫಲರಾಗುತ್ತಿದ್ದಾರೆ. ಕಳೆದ ಋತುವಿನಲ್ಲಿ ಸಾಧಾರಣ ಪ್ರದರ್ಶನ ನೀಡಿದರೂ ರಾಷ್ಟ್ರ ತಂಡಕ್ಕೆ ಆಯ್ಕೆಯಾದದ್ದು ಅವರ ಅದೃಷ್ಟ. ಅಲ್ಲೂ ಸಾಧಾರಣ ಆಟವನ್ನೇ ಆಡಿದರೇ ವಿನ: ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲಿಲ್ಲ. ಸ್ವಲ್ಪ ಸಂಯಮದಿಂದ ಆಡಿದರೆ ಉತ್ತಮ ಸ್ಕೋರ್‌ಗಳನ್ನು ಸತತವಾಗಿ ಗಳಿಸಬಹುದಲ್ಲವೇ, ಎಂದು ಪ್ರಶ್ನೆ ಕೇಳಿದರೆ ನಾನು ಆಡುವುದೇ ಹಾಗೆ ಎಂಬ ಉತ್ತರ! ಇವರಿಗೆ ’ಬಿಗ್ ಮ್ಯಾಚ್ ಪ್ಲೇಯರ್’ ಎಂಬ ನಾಮಾಂಕಿತವಿದೆ. ಆದರೆ ಆ ಬಿಗ್ ಮ್ಯಾಚ್ ತನಕ ತಲುಪಬೇಕಾದರೆ, ಇವರ ಬ್ಯಾಟ್ ಹೆಚ್ಚೆಚ್ಚು ಮಾತನಾಡಬೇಕಾಗುತ್ತದೆ. ರಾಷ್ಟ್ರ ತಂಡಕ್ಕೆ ಆಡಿ ಅಲ್ಲಿಂದ ಹೊರಬಿದ್ದ ಬಳಿಕ ಮತ್ತೆ ಆ ಛಲ ಇದೆಯೇ? ನೋಡೋಣ.

ಕರುಣ್ ನಾಯರ್ ಕಳೆದ ಋತುವಿನಲ್ಲಿ ಫೈನಲ್ ಪಂದ್ಯದವರೆಗೆ ಏನೂ ಮಾಡಲಿಲ್ಲ. ಅಲ್ಲೊಂದು ತ್ರಿಶತಕ ಬಾರಿಸಿ, ಅದರ ಬಲದ ಮೇಲೆಯೇ ರಾಷ್ಟ್ರ ’ಎ’ ತಂಡಕ್ಕೆ ಹಾಗೂ ನಂತರ ರಾಷ್ಟ್ರ ತಂಡಕ್ಕೂ ಆಯ್ಕೆಯಾದರು. ಇವರಿನ್ನೂ ರಾಷ್ಟ್ರ ತಂಡಕ್ಕೆ ಆಡಲಿಲ್ಲ. ಈ ಬಾರಿಯಾದರೂ ಉತ್ತಮ ನಿರ್ವಹಣೆ ಇವರಿಂದ ನಿರೀಕ್ಷಿಸಬಹುದು.

ಸ್ಟುವರ್ಟ್ ಬಿನ್ನಿ ರಾಜ್ಯ ತಂಡಕ್ಕೆ ಪಾದಾರ್ಪಣೆ ಮಾಡಿದ್ದು ೨೦೦೩ರಲ್ಲಿ. ತದನಂತರ ೭ ಋತುಗಳಲ್ಲಿ, ಯಾರದೋ ಮಗ ಎಂಬ ಕಾರಣಕ್ಕಷ್ಟೇ ರಾಜ್ಯ ತಂಡದಲ್ಲಿ ಒಂದು ಸ್ಥಾನ ಇವರಿಗೆ ಮೀಸಲು. ಮದುವೆಯಾದ ಬಳಿಕ ೨೦೧೦-೧೧ರ ಋತುವಿನಿಂದ ಉತ್ತಮ ಆಟ ಪ್ರದರ್ಶಿಸಿ ರಾಜ್ಯ ತಂಡದ ಬೆನ್ನೆಲುಬಾಗಿ ಪರಿವರ್ತಿತರಾದರು. ಈವರೆಗೂ ಅದೇ ಮಟ್ಟದಲ್ಲಿ ಉತ್ತಮ ಆಟ ಪ್ರದರ್ಶಿಸುತ್ತಿದ್ದಾರೆ. ಆದರೆ ಇವರು ಮೊದಲೆಲ್ಲಾ ರಾಜ್ಯ ತಂಡಕ್ಕೆ ಮಾಡಿದ ಅನ್ಯಾಯದ ಫಲವೆಂಬಂತೆ ಕಳೆದೆರಡು ವರ್ಷಗಳಲ್ಲಿ ರಾಜ್ಯ ತಂಡ ಪ್ರಶಸ್ತಿ ಗೆದ್ದಾಗ ಫೈನಲ್ ಪಂದ್ಯದಲ್ಲಿ ಇವರು ಆಡಿರಲಿಲ್ಲ! ೨೦೦೯-೧೦ರ ಋತುವಿನಲ್ಲಿ ಮೈಸೂರಿನಲ್ಲಿ ನಡೆದ ರಣಜಿ ಫೈನಲ್ ಪಂದ್ಯದ ಸಮಯದಲ್ಲಿ ಸಂಜೆಯ ವೇಳೆಗೆ ಕಂಠಪೂರ್ತಿ ಕುಡಿದು ಬೇಜವಾಬ್ದಾರಿ ವರ್ತನೆ ತೋರಿದ್ದ ಆಪಾದನೆ ಇರುವ ಇವರಿಗೆ ಇನ್ನೆಂದೂ ಫೈನಲ್ ಪಂದ್ಯದಲ್ಲಿ ಆಡದಿರುವಂತೆ ಚಾಮುಂಡೇಶ್ವರಿಯ ಶಾಪವಿರಬಹುದೇ? ಈ ಬಾರಿ ಇವರು ಮೊದಲ ನಾಲ್ಕಾರು ಪಂದ್ಯಗಳಲ್ಲಿ ಅಲಭ್ಯರಿರುವರು.

ವಿನಯ್ ಕುಮಾರ್‌ರನ್ನು ಎಷ್ಟು ಹೊಗಳಿದರೂ ಕಡಿಮೆ. ದೇಶದಲ್ಲೇ ರಣಜಿ ಮಟ್ಟದಲ್ಲಿ ಅತ್ಯುತ್ತಮ ನಾಯಕನಾಗಿ ತನ್ನ ಛಾಪನ್ನು ಮೂಡಿಸಿದ್ದಾರೆ. ರಾಷ್ಟ್ರಮಟ್ಟದಲ್ಲಿ ಎಲ್ಲಾ ದೇಶೀಯ ಆಟಗಾರರ ಗೌರವವನ್ನು ಗಳಿಸಿದ್ದಾರೆ. ಇವರ ನಾಯಕತ್ವದ ತಂತ್ರಗಳಿಗೆ ಮೌನವಾಗಿ ಎದುರಾಳಿ ತಂಡದ ಕೋಚ್‍ಗಳು ತಲೆಯಲ್ಲಾಡಿಸಿದ್ದಾರೆ. ಬರೀ ಉತ್ತಮ ನಾಯಕನಾಗಿರದೆ, ಮುಂಚೂಣಿಯಲ್ಲಿ ನಿಂತು, ಉತ್ತಮ ಬೌಲಿಂಗ್ ಪ್ರದರ್ಶನ ನೀಡಿ ತಂಡವನ್ನು ಮುನ್ನಡೆಸುತ್ತಿರುವುದು ಇವರ ಹೆಗ್ಗಳಿಕೆ. ರಾಷ್ಟ್ರ ತಂಡಕ್ಕೆ ಇವರಿಗೆ ಇನ್ನು ಬಾಗಿಲು ಕ್ಲೋಸ್ ಆಗಿದೆ. ಆದರೂ ಆ ನಿರಾಸೆ, ತನ್ನ ರಣಜಿ ನಾಯಕತ್ವಕ್ಕೆ ಮತ್ತು ಆಟಕ್ಕೆ ಯಾವುದೇ ಧಕ್ಕೆ ಉಂಟು ಮಾಡದಂತೆ ಆಡುವ ಸಾಮರ್ಥ್ಯವಿರುವ ರಾಜ್ಯ ತಂಡದ ಏಕೈಕ ಆಟಗಾರ. ನಡತೆ, ನಿರ್ವಹಣೆ ಎಲ್ಲದರಲ್ಲೂ ಎ ಪ್ಲಸ್. ರಾಜ್ಯ ತಂಡದ, ಅಷ್ಟೇ ಏಕೆ, ನಮ್ಮ ರಾಷ್ಟ್ರದಲ್ಲೂ ಯಾವುದೇ ಆಟಗಾರ ಇವರ ವೃತ್ತಿಪರತೆಗೆ ಸಾಟಿಯಾಗಲಾರ. ಕಳೆದೆರಡು ಋತುಗಳಲ್ಲಿ ಇವರ ನಾಯಕತ್ವ ಮತ್ತು ಬೌಲಿಂಗ್ ರಾಜ್ಯ ತಂಡ ವಿಜಯಿಯಾಗಿ ಹೊರಹೊಮ್ಮುವಲ್ಲಿ ಅತೀ ಪ್ರಮುಖ ಪಾತ್ರ ವಹಿಸಿವೆ.

ಉಳಿದಂತೆ ಬೌಲಿಂಗ್ ವಿಭಾಗದಲ್ಲಿ ಮಿಥುನ್ ಮತ್ತು ಅರವಿಂದ್, ನಾಯಕನಿಗೆ ಎಂದಿಗೂ ಅತ್ಯುತ್ತಮ ಬೆಂಬಲ ನೀಡುವ ಆಟಗಾರರು. ಇವರಿಬ್ಬರಿಂದ ಮತ್ತದೇ ಉತ್ತಮ ಪ್ರದರ್ಶನವನ್ನು ನಿರೀಕ್ಷಿಸಬಹುದು.

ಶ್ರೇಯಸ್ ಗೋಪಾಲ್ ಒಬ್ಬ ಲಕ್ಕಿ ಆಟಗಾರ. ತನ್ನ ಮೊದಲ ಎರಡು ಋತುಗಳಲ್ಲೇ, ರಣಜಿ ಪ್ರಶಸ್ತಿ, ರಾಷ್ಟ್ರೀಯ ಏಕದಿನ ಪಂದ್ಯಾಟದ ಪ್ರಶಸ್ತಿ ಹಾಗೂ ಇರಾನಿ ಟ್ರೋಫಿ ಇವಿಷ್ಟನ್ನೂ ಗೆದ್ದ ತಂಡದ ಆಟಗಾರನಾಗಿ ಇದ್ದರು. ಮೊದಲ ಋತುವಿನಲ್ಲಿ ಇವರ ಬೌಲಿಂಗ್ ಪ್ರತಿಭೆ ಹೊರಹೊಮ್ಮಿದರೆ, ಎರಡನೇ ಋತುವಿನಲ್ಲಿ ಬ್ಯಾಟಿಂಗ್ ಪ್ರತಿಭೆಯೂ ಹೊರಹೊಮ್ಮಿತು. ಯುವ ಪ್ರತಿಭಾವಂತ ಆಟಗಾರ ಈ ಬಾರಿಯೂ ಉತ್ತಮ ಪ್ರದರ್ಶನ ನೀಡಬಹುದು.

ರಾಜ್ಯ ತಂಡ ಶ್ರೇಯಸ್ ಗೋಪಾಲ್‍ರನ್ನು ಸ್ಪಿನ್ನರ್ ಆಗಿ ಆಡಿಸಿದರೆ, ಜಗದೀಶ್ ಸುಚಿತ್ ಮತ್ತೆ ಅವಕಾಶವಂಚಿತರಾಗಬೇಕಾಗುತ್ತದೆ. ಒಂದು ವೇಳೆ ಇಬ್ಬರು ವೇಗಿಗಳನ್ನು ಆಡಿಸಿ, ಒಬ್ಬ ಹೆಚ್ಚುವರಿ ಸ್ಪಿನ್ನರ್ ಆಡಿಸುವ ನಿರ್ಧಾರ ಮಾಡಿದರೆ, ತಕ್ಷಣ ಬೃಜೇಶ್ ಪಟೇಲ್ ತನ್ನ ಮಗ ಉದಿತ್ ಪಟೇಲ್‍ರನ್ನು ಆಡಿಸುವಂತೆ ಒತ್ತಡ ಹಾಕುತ್ತಾರೆ. ಆದರೆ ಸುಚಿತ್ ಉತ್ತಮ ನಿರ್ವಹಣೆ ತೋರುತ್ತಿರುವುದರಿಂದ, ಈ ಬಾರಿ ಬೃಜೇಶ್ ಪಟೇಲ್ ಒತ್ತಡ ಕೆಲಸ ಮಾಡುತ್ತೋ ಅಥವಾ ಸುಚಿತ್ ನೀಡಿದ ಪ್ರದರ್ಶನ ಕೆಲಸ ಮಾಡುತ್ತೋ ನೋಡೋಣ. ಈ ಬಾರಿಯೂ ಸುಚಿತ್‍ರನ್ನು ಆಡಿಸದಿದ್ದರೆ, ಅವರು ಬೇರೆ ರಾಜ್ಯಕ್ಕೆ ವಲಸೆ ಹೋಗುವುದೇ ಒಳ್ಳೆಯದು.

ಅಭಿಷೇಕ್ ರೆಡ್ಡಿ ಹಾಗೂ ಶಿಶಿರ್ ಭವಾನೆ ಸಿಕ್ಕಿದ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಂಡ ಆಟಗಾರರು. ಅತ್ತ ಮಯಾಂಕ್ ಅಗರ್ವಾಲ್ ಕೂಡಾ ಭಾರತ ಎ ತಂಡಕ್ಕೆ ಉತ್ತಮ ನಿರ್ವಹಣೆ ತೋರಿ ಈ ಬಾರಿಯಾದರೂ ರಾಜ್ಯ ತಂಡದ ಆರಂಭಿಕ ಆಟಗಾರನಾಗಿ ಉತ್ತಮ ಪ್ರದರ್ಶನ ತೋರಲು ಉತ್ಸುಕರಾಗಿದ್ದಾರೆ.

ತಂಡ ಉತ್ತಮವಾಗಿದೆ. ಸಮರ್ಥ ನಾಯಕನಿದ್ದಾನೆ. ಆದರೆ ಕಳೆದ ವರ್ಷ ತಂಡ ಪ್ರಶಸ್ತಿ ಗೆಲ್ಲುವಂತೆ ಮಾಡಿದ್ದು ಬೌಲರ್‌ಗಳು. ಈ ಋತುವಿನಲ್ಲಾದರೂ ಬ್ಯಾಟ್ಸ್‌ಮನ್‍ಗಳು ಎಚ್ಚೆತ್ತು ಉತ್ತಮ ಪ್ರದರ್ಶನ ನೀಡಬೇಕು.

ಎರಡು ವರ್ಷಗಳ ಹಿಂದೆ ಹೈದರಾಬಾದಿನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮಹಾರಾಷ್ಟ್ರವನ್ನು ಸೋಲಿಸಿ ಪ್ರಶಸ್ತಿ ಗೆದ್ದ ರಾಜ್ಯ ತಂಡದ ಸದಸ್ಯರಾಗಿದ್ದ ಗಣೇಶ್ ಸತೀಶ್ ಮತ್ತು ಅಮಿತ್ ವರ್ಮ, ಕಳೆದ ವರ್ಷ ಕ್ರಮವಾಗಿ ವಿದರ್ಭ ಹಾಗೂ ಕೇರಳ ತಂಡಗಳ ಪರವಾಗಿ ಆಡಿದ್ದರು. ಈ ಋತುವಿನಲ್ಲಿ ಗಣೇಶ್ ಸತೀಶ್ ವಿದರ್ಭ ಪರವಾಗಿಯೇ ಆಡಲಿದ್ದು, ಅಮಿತ್ ವರ್ಮ ಅಸ್ಸಾಮ್ ತಂಡಕ್ಕೆ ವರ್ಗಾವಣೆ ತೆಗೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಈ ಋತುವಿನ ತನ್ನ ಮೊದಲ ಪಂದ್ಯವನ್ನು ಕರ್ನಾಟಕ ಅಸ್ಸಾಮ್ ವಿರುದ್ಧ ಆಡಲಿದ್ದು, ತನ್ನ ಮೂರನೇ ಪಂದ್ಯವನ್ನು ವಿದರ್ಭ ವಿರುದ್ಧ ಆಡಲಿದೆ. ಈ ಪಂದ್ಯಗಳಲ್ಲಿ ಅಮಿತ್ ಮತ್ತು ಗಣೇಶ್ ತಮ್ಮ ಮಾಜಿ ತಂಡದ ಮತ್ತು ತಮ್ಮ ಮಾಜಿ ಸಹ ಆಟಗಾರರ ವಿರುದ್ಧ ಯಶಸ್ಸು ಕಾಣಲು ಹಾತೊರೆಯುತ್ತಿರಬಹುದು.

ರಾಜ್ಯ ತಂಡಕ್ಕೆ ಯಶಸ್ಸು ದೊರೆಯಲಿ.

ಗುರುವಾರ, ಸೆಪ್ಟೆಂಬರ್ 17, 2015

ಗಣೇಶ ೨೦೧೫...


ಗಣೇಶ ಚತುರ್ಥಿ ೨೦೧೫ರ ಶುಭಾಶಯಗಳು