ಗುರುವಾರ, ಸೆಪ್ಟೆಂಬರ್ 15, 2016

ವಿರೂಪಾಕ್ಷ ದೇವಾಲಯ - ಲಕ್ಕುಂಡಿ


ಊರ ನಡುವೆ ಇರುವ ವಿರೂಪಾಕ್ಷ ದೇವಾಲಯವು ನವರಂಗ, ತೆರೆದ ಅಂತರಾಳ ಹಾಗೂ ಗರ್ಭಗುಡಿಯನ್ನು ಒಳಗೊಂಡಿದೆ. ರಾಷ್ಟ್ರಕೂಟ ಶೈಲಿಯ ಈ ದೇವಾಲಯವು ಚೌಕಾಕಾರದ ತಳವಿನ್ಯಾಸವನ್ನು ಹೊಂದಿದೆ. ಇತಿಹಾಸಕಾರರ ಪ್ರಕಾರ ನಿರ್ಮಾಣದ ಬಹಳ ವರ್ಷಗಳ ಬಳಿಕ, ಅಂದರೆ ಚಾಲುಕ್ಯ ಅಥವಾ ಹೊಯ್ಸಳರ ಕಾಲದಲ್ಲಿ ದೇವಾಲಯವನ್ನು ನವೀಕರಿಸಲಾಗಿದೆ. ದೇವಾಲಯಕ್ಕೆ ಮುಖಮಂಟಪ ಹಾಗೂ ಶಿಖರ ಇದ್ದ ಕುರುಹುಗಳನ್ನು ಕಾಣಬಹುದು. ವಿಶಾಲವಾಗಿದ್ದ ಮುಖಮಂಟಪದ ನೆಲಹಾಸು ಮಾತ್ರ ಈಗ ಉಳಿದಿದೆ.


ದೇವಾಲಯದ ದ್ವಾರವು ಪಂಚಶಾಖೆಗಳನ್ನು ಹೊಂದಿದೆ. ನವರಂಗದಲ್ಲಿ ನಾಲ್ಕು ಕಂಬಗಳಿವೆ. ತೆರೆದ ಅಂತರಾಳದಲ್ಲಿ ಇನ್ನೆರಡು ಕಂಬಗಳಿದ್ದು, ಇವುಗಳ ನಡುವೆ ನಂದಿಯ ದೊಡ್ಡ ಮೂರ್ತಿಯಿದೆ.


ಗರ್ಭಗುಡಿಯ ದ್ವಾರವು ಅಲಂಕೃತ ಪಂಚಶಾಖೆಗಳನ್ನು ಹೊಂದಿದ್ದು, ಇವುಗಳಲ್ಲಿ ವಜ್ರತೋರಣ, ವಾದ್ಯಗಾರರು, ಸ್ತಂಭ, ಸಂಗೀತಗಾರರು ಹಾಗೂ ಬಳ್ಳಿಸುರುಳಿಯನ್ನು ಕಾಣಬಹುದು. ಕೆಳಭಾಗದಲ್ಲಿ ಮಾನವ ಕೆತ್ತನೆಗಳಿವೆ.


ದ್ವಾರದ ಮೇಲ್ಭಾಗದಲ್ಲಿ ಗಜಲಕ್ಷ್ಮೀಯ ಸ್ಫುಟವಾದ ಕೆತ್ತನೆಯಿದೆ. ಗಜಲಕ್ಷ್ಮೀಯ ಮೇಲ್ಭಾಗದಲ್ಲಿ ಸಾಲಿನಲ್ಲಿ ಕುಳಿತಿರುವಂತೆ ಪಕ್ಷಿಗಳನ್ನು (ಕಾಗೆಯಂತೆ ಕಾಣುತ್ತವೆ!) ತೋರಿಸಲಾಗಿದೆ.


ಗರ್ಭಗುಡಿಯಲ್ಲಿ ಶಿವಲಿಂಗವಿದ್ದು ದಿನಾಲೂ ಪೂಜೆ ಸಲ್ಲಿಸಿ ದೀಪ ಬೆಳಗಲಾಗುತ್ತದೆ. ದೇವಾಲಯದ ಹೊರಗೋಡೆಯಲ್ಲಿ ಗೋಪುರವಿರುವ ಮಂಟಪಗಳನ್ನು ಕೆತ್ತಿರುವುದನ್ನು ಬಿಟ್ಟರೆ ಬೇರೆ ಯಾವ ಕೆತ್ತನೆಗಳಿಲ್ಲ.


ದೇವಾಲಯಕ್ಕಿದ್ದ ಮುಖಮಂಟಪದ ವಿಶಾಲ ನೆಲಹಾಸಿನಲ್ಲಿ ಹಳ್ಳಿಗರು ಲೋಕಾಭಿರಾಮ ಹರಟುತ್ತಾ ಕುಳಿತಿರುತ್ತಾರೆ. ಅಕ್ಕಪಕ್ಕದಲ್ಲೆಲ್ಲಾ ಮನೆ ಹಾಗೂ ಅಂಗಡಿಗಳಿದ್ದು, ದೇವಾಲಯದ ಪರಿಸರದಲ್ಲಿ ಹಳೇ ಸಾಮಾನುಗಳನ್ನು ಎಲ್ಲೆಂದರಲ್ಲಿ ಹರಡಿರುವುದು ಕಂಡುಬರುತ್ತದೆ.