ಕಾರವಾರದಲ್ಲಿ ಒಬ್ಬ ಹಿರಿಯ ಚಾರಣಿಗರಿದ್ದಾರೆ. ಕಳೆದ ೧೦ ವರ್ಷಗಳಿಂದಲೂ ವಿವಿಧ ದಿನ/ವಾರಪತ್ರಿಕೆಗಳಲ್ಲಿ ಇವರ ಲೇಖನಗಳನ್ನು ಓದುತ್ತಿದ್ದೇನೆ. ಈ ಹಿರಿಯರು ಬರೆದ ಲೇಖನಗಳಿಂದಲೇ ಕೆಲವು ಜಲಧಾರೆಗಳ ಪರಿಚಯ ನನಗಾಗಿದ್ದು.
ಕಳೆದ ವರ್ಷ ಜುಲಾಯಿ ತಿಂಗಳ ಅದೊಂದು ಶನಿವಾರ
ರಾಕೇಶ ಹೊಳ್ಳ ಮನೆಗೆ ಬಂದಿದ್ದರು. ಸಂಗ್ರಹದಲ್ಲಿದ್ದ ಎಲ್ಲಾ ಲೇಖನಗಳನ್ನು ಜಾಲಾಡುತ್ತಿರುವಾಗ ಹಾಗೇ ಮಡಿಚಿ ಇಟ್ಟುಬಿಟ್ಟಿದ್ದ ಕಾಗದದ ಚೂರನ್ನು ತೆರೆದೆ. ಅದು ಜಲಧಾರೆಯೊಂದರ ಬಗ್ಗೆ ಆ ಹಿರಿಯರು ಬರೆದಿದ್ದ ಲೇಖನವಾಗಿತ್ತು. ೧೦-೧೫ ಅಡಿ ಎತ್ತರದ ಜಲಧಾರೆಯ ಚಿತ್ರವೊಂದಿತ್ತು ಮತ್ತು ’ಅದ್ಭುತ’, ’ಮನಮೋಹಕ’, ’ರುದ್ರ ರಮಣೀಯ’ ಎಂದು ಜಲಧಾರೆಯನ್ನು ಹೊಗಳಲಾಗಿತ್ತು. ಲೇಖನದಲ್ಲಿದ್ದ ಚಿತ್ರದಲ್ಲಿ ಅದ್ಭುತವೇನಿದೆ? ಮನಮೋಹಕವೇನಿದೆ? ರುದ್ರ ರಮಣೀಯವೇನಿದೆ? ಎಂದು ನಾವಿಬ್ಬರೂ ಎಲ್ಲಾ ಕೋನಗಳಲ್ಲಿ ಚಿತ್ರವನ್ನು ನೋಡುತ್ತಾ ಅವರನ್ನು ಗೇಲಿ ಮಾಡಿದೆವು. ಆದರೂ ಬೇರೇನೂ ಪ್ಲ್ಯಾನ್ ಇಲ್ಲವಾದ್ದರಿಂದ ಅಲ್ಲಿಗೇ ಹೋಗಿ ಬರೋಣ ಎಂದು ನಿರ್ಧರಿಸಿದೆವು.
ಜಲಧಾರೆ ಇರುವ ಊರಿನಲ್ಲಿ ಗದ್ದೆಯಲ್ಲೊಂದಷ್ಟು ಮಂದಿ ಕೆಲಸ ಮಾಡುತ್ತಿದ್ದರು. ಅವರಲ್ಲೊಬ್ಬ, ’ಅಲ್ಲಿಗೆ ಹೋದ್ರೆ ನೀವು ವಾಪಸ್ ಬರುದಿಲ್ರೀ’! ಎಂದು ಹೆದರಿಸಿಯೇಬಿಟ್ಟ. ಚಕಿತಗೊಂಡ ನಾನು ’ಯಾಕೆ’ ಎಂದು ಕೇಳಿದರೆ, ’ಕಾಡುಪ್ರಾಣಿಗಳು ತುಂಬಾ ಇವೆ’ ಎಂದ. ಅವನ ಮಾತು ಕೇಳಿ ಜೋರಾಗಿ ನಕ್ಕುಬಿಟ್ಟೆ. ನನ್ನ ನಗುವಿನಲ್ಲಿದ್ದ ಕುಹಕವನ್ನು ಅರಿತ ಆತನೊಂದಿಗಿದ್ದ ಇತರರು ಆತನೆಡೆಗೆ ನಕ್ಕರು. ಮುಜುಗರಗೊಂಡ ಆತ ಕೂಡಲೇ ಮಾತನ್ನು ಬದಲಾಯಿಸಿ ’ವಿಪರೀತ ಇಂಬ್ಳ ಕಾಟ, ಒಂದೊಂದು ಕಾಲ್ಗೆ ೩೦-೫೦ ಹತ್ಕೊಳ್ತವೆ’ ಎಂದ.
ಕೇವಲ ೧೫ ವರ್ಷಗಳ ಮೊದಲು ಹೇರಳ ಮತ್ತು ವೈವಿಧ್ಯಮಯ ವನ್ಯಜೀವಿಗಳ ನೆಲೆಯಾಗಿದ್ದ ಈ ಭಾಗದಲ್ಲಿ ಈಗ ಕೆಲವು ಹಂದಿಗಳು ಮಾತ್ರ ಉಳಿದುಕೊಂಡಿವೆ. ಹೊರಗಿನಿಂದ ಬಂದು ನೆಲೆಸಿರುವ ಜನರು ಕಾಡನ್ನು ಎಲ್ಲೆಲ್ಲಿ ಸಾಧ್ಯವೋ ಅಲ್ಲಿ ನಾಶಪಡಿಸಿ ಗದ್ದೆ, ತೋಟ ಮಾಡಿಕೊಂಡಿದ್ದಾರೆ. ೨೦ ವರ್ಷಗಳ ಮೊದಲು ನಾಲ್ಕು ಮನೆಗಳಿದ್ದು, ದಟ್ಟ ಮತ್ತು ದುರ್ಗಮ ಕಾಡಿನ ನಡುವೆ ಇದ್ದ ಸ್ಥಳ ಇಂದು ಊರಾಗಿದ್ದು ೭೧ ಮನೆಗಳಿವೆ. ಅತ್ಯುತ್ತಮ ರಸ್ತೆಯಿದೆ, ಶಾಲೆಯಿದೆ, ಬಸ್ಸು ಸೌಕರ್ಯವಿದೆ, ಸೇತುವೆಗಳ ನಿರ್ಮಾಣ ನಡೆಯುತ್ತಿದೆ. ಇಪ್ಪತ್ತು ವರ್ಷಗಳ ಮೊದಲು ಮುಖ್ಯ ಊರಿನಿಂದ ಕಾಡಿನ ಅಂಚಿಗೆ ಬರಲು ೧೫ಕಿಮಿ ಕ್ರಮಿಸಿದರೆ ಸಾಕಿತ್ತು. ಇಂದು ಅದೇ ಕಾಡು ವೈಮಾನಿಕ ಅಂತರ ಲೆಕ್ಕ ಹಾಕಿದರೆ ೫-೬ ಕಿಮಿ ಹಿಂದೆ ಸರಿದಿದೆ. ಈಗ ಮುಖ್ಯ ಊರಿನಿಂದ ಕಾಡಿನಂಚಿಗೆ ಬರಲು ೨೩ಕಿಮಿ ಕ್ರಮಿಸಬೇಕು! ನನ್ನ ಮಕ್ಳು ಇದ್ದ ಎಲ್ಲಾ ಪ್ರಾಣಿಗಳನ್ನು ಹೊಡೆದು ತಿಂದು ಮುಗಿಸಿಬಿಟ್ಟಿದ್ದಾರೆ, ಆದರೂ ಮತ್ತೆ ’ಕಾಡುಪ್ರಾಣಿಗಳು’ ಎಂದು ನಮ್ಮನ್ನು ಹೆದರಿಸುವುದು ಬೇರೆ.
ದಾರಿಯಲ್ಲಿ ಸಿಕ್ಕ ಮನೆಯೊಂದರಲ್ಲಿ ದಾರಿ ಕೇಳಲು ನಿಂತಾಗ ಸಜೇಶ್ ಎಂಬ ಯುವಕ ಎದುರಾದ. ಆತನಿಗೆ ನಮ್ಮೊಂದಿಗೆ ಬರಲು ವಿನಂತಿಸಿದಾಗ ಆತನಿಗೆ ಮನಸ್ಸಿದ್ದರೂ ’ಮನೆಯಲ್ಲಿ ತುಂಬಾ ಕೆಲಸವಿದೆ, ಅದನ್ನು ಮೊದ್ಲು ಮಾಡು’ ಎಂದು ಆತನ ಅಮ್ಮ ಗದರಿಸಿದರು. ಆದರೂ ಸ್ವಲ್ಪ ದೂರದವರೆಗೆ ಬಂದು ದಾರಿ ತೋರಿಸಿ ಹಿಂತಿರುಗಿದ.
ಜಲಧಾರೆಯಿಂದ ಕಾಲುವೆಯೊಂದರ ಮೂಲಕ ನೀರನ್ನು ಹಳ್ಳಿಗರು ತಮ್ಮ ತಮ್ಮ ಜಾಗಕ್ಕೆ ಹರಿದುಬರುವ ಹಾಗೆ ಮಾಡಿಕೊಂಡಿದ್ದಾರೆ. ಈ ಕಿರಿದಾದ ಕಾಲುವೆಗುಂಟ ನಡೆದರೆ ನೇರವಾಗಿ ಜಲಧಾರೆಯಿರುವಲ್ಲಿ ತಲುಪುತ್ತೀರಿ ಎಂದು ಸಜೇಶ್ ಹೇಳಿದ್ದರು. ಸುಮಾರು ೬೦ ನಿಮಿಷ ಕಿರಿದಾದ ಕಾಲುವೆಗುಂಟ ನಡೆದ ಬಳಿಕ ಜಲಧಾರೆ ನಿರ್ಮಿಸುವ ಹಳ್ಳವನ್ನು ತಲುಪಿದೆವು.
ಮುಂದೆ ಇದ್ದ ಬಂಡೆಗಳ ಬೃಹತ್ ರಾಶಿ ಎಲ್ಲವನ್ನೂ ಮರೆಮಾಚಿತ್ತು. ಬಲಕ್ಕೆ ಬೆಟ್ಟದ ಕಡಿದಾದ ಇಳಿಜಾರಿನಲ್ಲಿ ದಟ್ಟ ಕಾಡು. ಎಡಕ್ಕೆ ಮತ್ತಷ್ಟು ಆಳಕ್ಕೆ ಭೋರ್ಗರೆಯುತ್ತ ಹರಿಯುತ್ತಿರುವ ಹಳ್ಳ. ಜಲಧಾರೆ ಎಲ್ಲಿ ಎಂದು ಹುಡುಕಾಡುತ್ತಾ ಲೇಖನದಲ್ಲಿ ಬಳಸಿದ ಪದಪುಂಜಗಳನ್ನು ನೆನಪಿಸಿಕೊಂಡು ನಕ್ಕೆವು.
ರಾಕೇಶ್ ಮತ್ತು ಅನಿಲ್ ಆ ಬಂಡೆಗಳ ರಾಶಿಯನ್ನು ಎಚ್ಚರಿಕೆಯಿಂದ ಮೇಲೇರಿದರು. ನಿಧಾನವಾಗಿ ಪ್ರತಿ ಹೆಜ್ಜೆಯನ್ನು ನಾಲ್ಕಾರು ಬಾರಿ ರಿಹರ್ಸಲ್ ಮಾಡುತ್ತಾ ನಾನೂ ಮೇಲೇರಿದೆ. ಏನೋ ದೊಡ್ಡ ಸಾಹಸ ಮಾಡಿದಂತಾಯಿತು. ನನ್ನನ್ನು ಮೇಲಕ್ಕೆಳೆದುಕೊಂಡ ಬಳಿಕ ಅವರಿಬ್ಬರೂ ಮುನ್ನಡೆದರು. ನಾನೂ ಸ್ವಲ್ಪ ಸಾವರಿಸಿಕೊಂಡು ಎರಡು ಹೆಜ್ಜೆ ಇಟ್ಟೆನಷ್ಟೇ ಜಾರಿ ಬಿದ್ದುಬಿಟ್ಟೆ. ಮುನ್ನಡೆದಿದ್ದ ಅವರಿಬ್ಬರಿಗೂ ಮಳೆ ಮತ್ತು ನೀರಿನ ಸದ್ದಿನಲ್ಲಿ ನಾನು ಬಿದ್ದದ್ದು ಗೊತ್ತಾಗಲೇ ಇಲ್ಲ. ನನ್ನ ಅದೃಷ್ಟ ಚೆನ್ನಾಗಿತ್ತು. ಏನೂ ಆಗದೆ ಪಾರಾದೆ. ಇದರ ಬಗ್ಗೆ ಇನ್ನೊಮ್ಮೆ ವಿವರವಾಗಿ ಬರೆಯುವೆ.
ಅಲ್ಲೇ ಸ್ವಲ್ಪ ಮುಂದೆ ಕಾಣುತ್ತಿತ್ತು ಲೇಖನದಲ್ಲಿದ್ದ ೧೦-೧೫ ಅಡಿ ಎತ್ತರದ ಜಲಧಾರೆ. ಈ ಸಣ್ಣ ಜಲಧಾರೆಯ ಸುತ್ತ ಮುತ್ತ ಮತ್ತು ಮೇಲೆಲ್ಲಾ ಕಾಡು ಬಹಳ ದಟ್ಟವಾಗಿದ್ದು, ಅದರ ಹಿಂದಿನ ನೋಟವನ್ನು ಮರೆಮಾಚಿತ್ತು. ಸೂಕ್ಷ್ಮವಾಗಿ ಗಮನಿಸಿದಾಗ ದೊಡ್ಡ ಜಲಧಾರೆಯೊಂದು ಸುಮಾರು ೧೦೦ ಅಡಿಗಳಷ್ಟು ಎತ್ತರದಿಂದ ಬೀಳುತ್ತಿರುವ ಅಸ್ಪಷ್ಟ ನೋಟ! ಈಗ ಕಾರವಾರದ ಹಿರಿಯರ ಬಗ್ಗೆ ಮತ್ತವರ ಲೇಖನದ ಬಗ್ಗೆ ಗೇಲಿ ಮಾಡಿದ್ದೆಲ್ಲಾ ನೆನಪಾಗಿ ಒಂದೆಡೆ ಮುಜುಗರವಾಗತೊಡಗಿದರೆ ಇನ್ನೊಂದೆಡೆ ಸಣ್ಣ ಜಲಧಾರೆಯಿರಬಹುದು ಎಂದು ನಿರೀಕ್ಷಿಸಿ, ಭರ್ಜರಿ ಜಲಧಾರೆ ನೋಡಲು ಸಿಕ್ಕಿದ ಆನಂದ.
ಈ ಜಲಧಾರೆ ತನ್ನ ಪೂರ್ಣ ನೋಟ ಸುಲಭದಲ್ಲಿ ಬಿಟ್ಟುಕೊಡುತ್ತಿರಲಿಲ್ಲ. ನಾವು ಹಳ್ಳವನ್ನು ದಾಟುವ ಮೊದಲು ಅಸ್ಪಷ್ಟವಾಗಿ ಗೋಚರಿಸುತ್ತಿದ್ದ ಜಲಧಾರೆ ಹಳ್ಳ ದಾಟಿದ ಬಳಿಕ ಕಾಣಿಸುತ್ತಿರಲಿಲ್ಲ! ಮತ್ತೊಂದಷ್ಟು ಬಂಡೆಗಳ ರಾಶಿ ಜಲಧಾರೆಯನ್ನು ಮರೆಮಾಚಿತ್ತು. ಆದರೆ ಇಲ್ಲೇಕೋ ಮುಂದುವರಿಯುವುದು ಬೇಡ ಎಂದು ನನಗನಿಸತೊಡಗಿತು. ಅದೆಷ್ಟೇ ಪ್ರಯತ್ನಿಸಿದರೂ ಆ ತೊಡಕನ್ನು ದಾಟಲು ಸುಲಭ ದಾರಿ ಸಿಗುತ್ತಿರಲಿಲ್ಲ. ರಾಕೇಶ್ ಮತ್ತು ಅನಿಲ್ ಅದಾಗಲೇ ಏನೋ ಸರ್ಕಸ್ ಮಾಡಿ ಮೇಲೇರಿದ್ದರು. ಜಲಧಾರೆ ಅದ್ಭುತವಾಗಿದೆ ಎಂದು ಅವರು ಕೈಸನ್ನೆ ಮಾಡುತ್ತಿರಬೇಕಾದರೆ ನನಗೆ ಪೀಕಲಾಟ. ಮೊದಲು ಸಿಕ್ಕಿದ್ದ ಬಂಡೆಗಳ ರಾಶಿಯ ಬಳಿ ಭಾರಿ ಅನಾಹುತದಿಂದ ಕೂದಲೆಳೆಯಷ್ಟು ಅಂತರದಿಂದ ಪಾರಾಗಿದ್ದೆ. ಕೊನೆಗೂ ಮುಂದುವರಿಯುವುದು ಬೇಡ ಎಂದು ನಿರ್ಧರಿಸಿದೆ. ’ಎಂತ ನೀವು’ ಎಂದು ನಕ್ಕ ರಾಕೇಶ್ ಕೆಳಗಿಳಿದು ಬಂದು, ತನ್ನ ತೊಡೆಯ ಮೇಲೆ ಕಾಲನ್ನು ಇಟ್ಟು ಮೇಲಕ್ಕೇರುವಂತೆ ಹೇಳಿದರು. ಅಲ್ಲಿಂದ ಅನಿಲ್, ನನ್ನ ಎರಡೂ ಕೈಗಳನ್ನು ಹಿಡಿದು ಮೇಲಕ್ಕೆ ಎಳೆದರು.
ಪ್ರಕೃತಿ ಏನನ್ನೆಲ್ಲಾ ತನ್ನ ಒಡಲಲ್ಲಿ ಅಡಗಿಸಿಟ್ಟುಕೊಂಡಿದೆ! ಜಲಧಾರೆಯ ಈ ನೂತನ ವಿನ್ಯಾಸ ಬಹಳ ಮೆಚ್ಚುಗೆಯಾಯಿತು. ಈ ಜಲಧಾರೆಯ ನೋಟ ವಿಶಿಷ್ಟವಾಗಿದೆ. ಸುಮಾರು ೧೫೦ ಅಡಿ ಎತ್ತರದಿಂದ ಬೀಳುವ ಜಲಧಾರೆ ಮೊದಲು ೩ ಕವಲುಗಳಲ್ಲಿ ನಂತರ ೨ ಕವಲುಗಳಲ್ಲಿ ಮತ್ತು ಅಂತಿಮವಾಗಿ ಒಂದೇ ಕವಲಿನಲ್ಲಿ ಬೀಳುತ್ತದೆ.
ಜಲಧಾರೆಯ ಅಂದದ ಬಗ್ಗೆ ಚಿತ್ರಗಳೇ ಎಲ್ಲವನ್ನೂ ಹೇಳುತ್ತವೆ. ಸುತ್ತಲೂ ಇರುವ ಕಾಡು, ’ತಾನೂ ಇದ್ದೇನೆ’ ಎಂದು ಹೇಳುವಂತೆ ಸ್ವಲ್ಪ ಮಾತ್ರ ಕಾಣುತ್ತಿದ್ದ ಅಂಬರ, ಸುತ್ತಲಿನ ಮರಗಿಡಗಳ ಮೇಲೆ ಸಿಂಚನಗೊಳ್ಳುತ್ತಿದ್ದ ಜಲಧಾರೆಯ ನೀರಿನ ಹನಿಗಳು, ಆಗಾಗ ಮೋಡಗಳ ಮರೆಯಿಂದ ಹೊರಬರುತ್ತಿದ್ದ ನೇಸರ, ಹನಿಹನಿಯಾಗಿ ಬೀಳುತ್ತಿದ್ದ ಹದವಾದ ಮಳೆ ಇವೆಲ್ಲಾ ಜಲಧಾರೆಯ ಅಂದಕ್ಕೆ ಇನ್ನಷ್ಟು ಮೆರುಗು ನೀಡಿದ್ದವು.
ಸುಮಾರು ಅರ್ಧಗಂಟೆ ಅಲ್ಲೇ ಕುಳಿತಿದ್ದ ನಾವು ಜಲಧಾರೆಯ ಅಪ್ರತಿಮ ನೋಟವನ್ನು ಹೊಗಳುತ್ತಾ ಇದ್ದೆವು. ಆ ಹಿರಿಯರು ಬಳಸಿದ ಶಬ್ದಗಳು ಮತ್ತು ಬಣ್ಣಿಸಿದ ರೀತಿ ಎಲ್ಲವೂ ಈಗ ನಮಗೆ ಅರ್ಥಗರ್ಭೀತವಾಗಿ ಕಾಣತೊಡಗಿದವು.
ಮರುದಿನ ಕಾರವಾರದ ಹಿರಿಯರ ದೂರವಾಣಿ ನಂಬರ್ ಹುಡುಕಿ ತೆಗೆದು ಅವರಿಗೆ ಕರೆ ಮಾಡಿ ಪರಿಚಯ ಮಾಡಿಸಿಕೊಂಡೆ. ಈ ಜಲಧಾರೆಯ ವಿಷಯ ತಿಳಿಸಿದ್ದಕ್ಕಾಗಿ ಧನ್ಯವಾದಗಳನ್ನು ಹೇಳಿ ಒಂದಷ್ಟು ಸಮಯ ಮಾತನಾಡಿದೆ. ಆಗ ಅವರು ಹೇಳಿದ ಜಲಧಾರೆಗಳ ಲಿಸ್ಟು ಕೇಳಿಯೇ ದಂಗಾದೆ. ಒಂದಷ್ಟು ಜಲಧಾರೆಗಳನ್ನು ನೋಡಿ ನಾನು ಬೀಗುತ್ತಿರಬೇಕಾದರೆ ಈ ಹಿರಿಯರು ಯಾರಿಗೂ ಗೊತ್ತಿರದ ಸುಮಾರಷ್ಟು ಜಲಧಾರೆಗಳನ್ನು ಹುಡುಕಿ ತೆಗೆದಿದ್ದಾರೆ. ಕೆಲವು ಹೊಸ ಜಲಧಾರೆಗಳ ಮಾಹಿತಿ ಅವರಿಂದ ದೊರಕಿತು. ಈಗ ಮಳೆ ಆರಂಭವಾಗಲಿ. ಅವರ ಮನೆಯ ದೂರವಾಣಿ ಮತ್ತೆ ರಿಂಗಿಣಿಸಲಿದೆ.