ಶುಕ್ರವಾರ, ಸೆಪ್ಟೆಂಬರ್ 26, 2008

ನಗರೇಶ್ವರ ದೇವಸ್ಥಾನ - ಬಂಕಾಪುರ


೨೧-೦೬-೨೦೦೮

ನಗರೇಶ್ವರ ದೇವಸ್ಥಾನ ತಲುಪಿದಾಗ ನನಗೆ ಕಂಡದ್ದು ಒಂದು ಭವ್ಯ ದೇವಸ್ಥಾನದ ಮುಖಮಂಟಪದಲ್ಲಿ ಕೂತು ಓದುತ್ತಿದ್ದ ಒಬ್ಬ ವಿದ್ಯಾರ್ಥಿ ಮತ್ತು ಜತನದಿಂದ ದೇವಾಲಯವನ್ನು ಕಾಯುವ ಕಾಯಕದಡಿ ಸುತ್ತಲೂ ಗುಡಿಸುತ್ತಿದ್ದ ಪುರಾತತ್ವ ಇಲಾಖೆಯ ಉದ್ಯೋಗಿ ಗುರುರಾಜ. ಆ ವಿದ್ಯಾರ್ಥಿಯೇನೋ ನನ್ನನ್ನು ನೋಡಿದ ಆದರೆ ಗುರುರಾಜ ತನ್ನ ಕೆಲಸದಲ್ಲಿ ಅದೆಷ್ಟು ಮಗ್ನರಾಗಿದ್ದರೆಂದರೆ ನಾನು ದೇವಾಲಯದ ಒಂದು ಸುತ್ತು ಹಾಕಿ ನಂತರ ದೇವಾಲಯವನ್ನು ಪ್ರವೇಶಿಸುವವರೆಗೂ ಅವರು ನನ್ನನ್ನು ಗಮನಿಸಿಯೇ ಇರಲಿಲ್ಲ.


ಅದೆಷ್ಟೋ ದಿನಗಳ ಬಳಿಕ ದೇವಾಲಯ ನೋಡಲು ಒಬ್ಬ ಪ್ರವಾಸಿಗ ಬಂದ ಎಂದು ನನ್ನನ್ನು ಕಂಡು ಗುರುರಾಜರಿಗೆ ಎಲ್ಲಿಲ್ಲದ ಸಂತೋಷ. ೧೧ನೇ ಶತಮಾನದಲ್ಲಿ ಕಲ್ಯಾಣಿ ಚಾಳುಕ್ಯರ ಸಮಯದಲ್ಲಿ ಈ ದೇವಾಲಯದ ನಿರ್ಮಾಣವಾಗಿತ್ತೆಂಬ ವಿಷಯ ಬಿಟ್ಟರೆ ಇವರಿಗೆ ಈ ದೇವಾಲಯದ ಬಗ್ಗೆ ಬೇರೇನೂ ಗೊತ್ತಿಲ್ಲ.


ಭೂ ಮಟ್ಟದಿಂದ ಐದಾರು ಅಡಿ ಕೆಳಗಿರುವ ದೇವಾಲಯ ಶಾಂತ ಮತ್ತು ಸುಂದರ ಪರಿಸರದಲ್ಲಿದೆ. ಮುಖಮಂಟಪದಲ್ಲಿ ೬೬ ಸುಂದರ ಕಲಾತ್ಮಕ ಕಂಬಗಳಿರುವುದರಿಂದ ಇದನ್ನು ೬೬ ಕಂಬಗಳ ದೇವಾಲಯವೆಂದೂ ಕರೆಯುತ್ತಾರೆ. ವಿಶಾಲ ಮುಖಮಂಟಪ, ನವರಂಗ, ಅಂತರಾಳ ಮತ್ತು ಗರ್ಭಗುಡಿಗಳನ್ನು ಈ ದೇವಾಲಯ ಹೊಂದಿದೆ. ಗರ್ಭಗುಡಿಯಲ್ಲಿ ಶಿವಲಿಂಗವಿಲ್ಲ. ದೇವಾಲಯದಲ್ಲೆಲ್ಲೂ ನಂದಿಯೂ ಕಾಣಬರುವುದಿಲ್ಲ. ಛಾವಣಿಯಲ್ಲಿ ಎಲ್ಲೆಲ್ಲಿ ಜಾಗ ಲಭ್ಯವಿದೆಯೋ ಅಲ್ಲೆಲ್ಲಾ ಬೇರೆ ಬೇರೆ ಆಕಾರದಲ್ಲಿ ಸುಂದರವಾಗಿ ಕಮಲಗಳನ್ನು ಕೆತ್ತಲಾಗಿದೆ. ಮುಖಮಂಟಪದ ನಟ್ಟ ನಡುವೆ ಛಾವಣಿಯಲ್ಲಿ ಅತಿ ಸುಂದರ ಕಮಲವನ್ನು ಕೆತ್ತಲಾಗಿದೆ. ಗುರುರಾಜರ ಅನುಮತಿ ಪಡೆದು ಅಲ್ಲೇ ಅಂಗಾತ ಮಲಗಿ ಕಮಲದ ಈ ಅದ್ಭುತ ಕೆತ್ತನೆಯ ಸೌಂದರ್ಯವನ್ನು ಸವಿದೆ. ಮುಖಮಂಟಪಕ್ಕೆ ೩ ಕಡೆಗಳಿಂದ ದ್ವಾರವಿದೆ.


ಮುಖಮಂಟಪದ ಬಳಿಕ ಸಣ್ಣ ಸುಖನಾಸಿ. ಸುಖನಾಸಿಯಲ್ಲಿ ಅದ್ಭುತ ಮತ್ತು ಸೂಕ್ಷ್ಮ ಕೆತ್ತನೆ ಕೆಲಸವಿರುವ ೨ ಆಕರ್ಷಕ ಕಂಬಗಳಿವೆ. ಮುಖಮಂಟಪದ ೬೬ ಕಂಬಗಳೂ ಈ ೨ ಕಂಬಗಳಿಗೆ ಸಾಟಿಯಾಗಲಾರವು. ಸುಖನಾಸಿ ದಾಟಿದರೆ ೩ ದ್ವಾರಗಳುಳ್ಳ ನವರಂಗ. ನವರಂಗದ ಪ್ರಮುಖ ಬಾಗಿಲು ೫ ತೋಳಿನದ್ದಾಗಿದ್ದು, ಎಲ್ಲಾ ತೋಳುಗಳಲ್ಲೂ ಸುಂದರ ಕೆತ್ತನೆಯಿದೆ. ಮೇಲ್ಗಡೆಯಿದ್ದ ಗಜಲಕ್ಷ್ಮೀಯ ಕೆತ್ತನೆ ನಶಿಸಿಹೋಗಿದೆ. ಇಕ್ಕೆಲಗಳಲ್ಲಿದ್ದ ಸುಂದರ ಜಾಲಂಧ್ರಗಳೂ ಬಿದ್ದುಹೋಗಿವೆ. ದೇವಾಲಯದ ಬಲಭಾಗದಿಂದ ನವರಂಗಕ್ಕಿದ್ದ ದ್ವಾರ ಸಂಪೂರ್ಣವಾಗಿ ಬಿದ್ದುಹೋಗಿದ್ದು, ಪುರಾತತ್ವ ಇಲಾಖೆ ಅಲ್ಲಿ ತೇಪೆ ಸಾರಿಸಿ ಆ ದ್ವಾರವನ್ನು ಮುಚ್ಚಿಬಿಟ್ಟಿದೆ. ಆದರೆ ದೇವಾಲಯದ ಎಡಭಾಗದಿಂದ ನವರಂಗಕ್ಕಿದ್ದ ದ್ವಾರ ಇನ್ನೂ ಗಟ್ಟಿಮುಟ್ಟಾಗಿ ಸುಂದರವಾಗಿದ್ದು ಸಣ್ಣ ಮುಖಮಂಟಪವನ್ನು ಹೊಂದಿದೆ. ಇದೂ ೫ ತೋಳಿನದ್ದಾಗಿದ್ದು, ಎಲ್ಲಾ ತೋಳುಗಳಲ್ಲೂ ಸುಂದರ ಕೆತ್ತನೆಯಿದೆ ಮತ್ತು ಮೇಲ್ಗಡೆ ಗಜಲಕ್ಷ್ಮೀಯ ಕೆತ್ತನೆಯಿದೆ. ಈ ದ್ವಾರದ ಮುಖಮಂಟಪದ ಸುತ್ತಲೂ ಅಪೂರ್ವ ಕೆತ್ತನೆಯಿದೆ.

ನವರಂಗದಲ್ಲಿ ೪ ಕಂಬಗಳಿವೆ. ಇಲ್ಲಿಯೂ ಛಾವಣಿಯಲ್ಲಿ ಕಮಲಗಳ ಹಾವಳಿ. ಅಂತರಾಳದ ದ್ವಾರ ಜಾಲಂಧ್ರಗಳನ್ನು ಹೊಂದಿದ್ದು, ಮೇಲೆ ಏನೋ ಕೆತ್ತನೆಗಳಿವೆ. ಈ ಜಾಲಂಧ್ರಗಳಿಗೆ ತಾಗಿಕೊಂಡೇ ಶಾಸನಗಳನ್ನು ಕೆತ್ತಲಾಗಿದೆ. ಅಂತರಾಳ ದಾಟಿದರೆ ಖಾಲಿ ಗರ್ಭಗುಡಿ.


ಬಂಕಾಪುರದಲ್ಲಿ ದೇವಾಲಯವಿದೆ ಎಂದು ತಿಳಿದಾಗ ಅದಿಷ್ಟು ಭವ್ಯವಾಗಿರಬಹುದೆಂಬ ಎಳ್ಳಷ್ಟೂ ಕಲ್ಪನೆಯಿರಲಿಲ್ಲ. ಇಲ್ಲಿಗೆ ಪ್ರವಾಸಿಗರು ಬರುವುದು ಬಹಳ ಕಡಿಮೆ. ಆದರೆ ಪಾನಮತ್ತರಾಗಿ ದಾಂಧಲೆಯಿಬ್ಬಿಸುವವರು, ಇಸ್ಪೀಟ್ ಆಡುವವರು, ಕೋಳಿ/ಮಾಂಸ/ಸಾರಾಯಿ ಇತ್ಯಾದಿಗಳನ್ನು ತಂದು ಪಾರ್ಟಿ ಮಾಡುವವರು ಇಲ್ಲಿಗೆ ಬರುತ್ತಲೇ ಇರುತ್ತಾರೆ ಮತ್ತು ತಾನು ಆಕ್ಷೇಪಿಸಿದರೆ, ’ನೀ ಯಾರ ಹೇಳೂವ....ಈ ಜಾಗ ನಿನ್ನಪ್ಪಂದೇನ...’ ಎಂದು ತನಗೇ ಗದರಿಸುತ್ತಾರೆ ಎಂದು ಗುರುರಾಜ ತನ್ನ ಅಳಲು ತೋಡಿಕೊಂಡರು. ’ಆದರೂ ಅಂಥವರೆಲ್ಲಾ ಬಂದಾಗ, ತಾನು ಆಕ್ಷೇಪಿಸಿದಾಗ ಅವರಿಂದ ಏನು ಉತ್ತರ ಬರುತ್ತದೆಂದು ಗೊತ್ತಿದ್ದೂ, ಆಕ್ಷೇಪಿಸುವುದನ್ನು ನಿಲ್ಲಿಸಿಲ್ಲ....ನಿಲ್ಲಿಸುವುದೂ ಇಲ್ಲ’ ಎಂದು ಗುರುರಾಜ್ ಹೇಳಿದಾಗ ಮೆಚ್ಚಿದೆ. ಸ್ವಲ್ಪವೇ ಹೊತ್ತಿನ ಬಳಿಕ ಇಂತಹ ಸನ್ನಿವೇಶಗಳನ್ನು ಅವರು ಹೇಗೆ ನಿಭಾಯಿಸುತ್ತಾರೆ ಎಂದು ಪ್ರತ್ಯಕ್ಷ ಕಂಡೆ.

ಅಲ್ಲಿಗೆ ಬಂದಿದ್ದ ೩ ಸಾಬಿ ಯುವಕರು ಮುಖಮಂಟಪದಲ್ಲಿ ಕೂತು ಬೀಡಿ ಸೇದುತ್ತಿದ್ದರು! ಉತ್ತರ, ಪ್ರತ್ಯುತ್ತರಗಳ ಬಳಿಕ ಗುರುರಾಜರ ಕೊನೆಯ ಮಾತಿಗೆ ಆ ಯುವಕರು ಬಾಲ ಮುದುಡಿದ ನಾಯಿಗಳಂತೆ ತೆಪ್ಪಗೆ ಅಲ್ಲಿಂದ ಹೊರಗೆ ಹೋಗಿ ಬೀಡಿ ಸೇದಲಾರಾಂಭಿಸಿದರು. ’ಎಲ್ಲಿಯ ಗುಡಿ..ದೇವ್ರೇ ಇಲ್ಲ..’ ಎಂಬ ಆ ಯುವಕರ ಮಾತಿಗೆ, ’ಮಸೀದಿಯಲ್ಲೂ ದೇವರ ಮೂರ್ತಿಯಿರೋಲ್ಲ, ಆದರೆ ಅಲ್ಲಿ ದೇವರಿಲ್ಲ ಅನ್ನೋದಿಕ್ಕೆ ಆಗುತ್ಯೇ? ..ಅಲ್ಲಿ ಹೇಗೆ ದೇವರಿದ್ದಾನೆ..ಹಾಗೇನೇ ಇಲ್ಲೂ ದೇವರಿದ್ದಾನೆ. ದೇವರಿರ್ಬೇಕಾದ್ರೆ ಮೂರ್ತಿ ಇರ್ಬೇಕು ಅಂತಾ ಇಲ್ಲ. ಮಸೀದಿಯಲ್ಲಿ ಬೀಡಿ ಸೇದೋ ಧೈರ್ಯ ಇದೆಯಾ ನಿಮ್ಗೆ..’ ಎಂಬ ಗುರುರಾಜರ ಮಾತಿಗೆ ಅವರಲ್ಲಿ ಉತ್ತರವಿರಲಿಲ್ಲ. ಆ ಸನ್ನಿವೇಶವನ್ನು ಗುರುರಾಜ್ ಹೇಗೆ ನಿಭಾಯಿಸುತ್ತಾರೆ ಎಂಬ ಕುತೂಹಲ ನನಗಿತ್ತು. ಅವರು ನಿಭಾಯಿಸಿದ ರೀತಿಯನ್ನು ಬಹಳ ಮೆಚ್ಚಿ, ಅವರನ್ನು ಅಭಿನಂದಿಸಿ ಅಲ್ಲಿಂದ ಹೊರಟೆ.

ಭಾನುವಾರ, ಸೆಪ್ಟೆಂಬರ್ 21, 2008

ಚಾರ್ಮಾಡಿಯಲ್ಲೊಂದು ಜಲಪಾತ


ದಿನಾಂಕ: ೨೧ ಸೆಪ್ಟೆಂಬರ್ ೨೦೦೩.

ಮಲೆಕುಡಿಯರ ನಾಡು, ಚಾರ್ಮಾಡಿ-ಬಿಸಿಲೆ ಅರಣ್ಯಗಳಲ್ಲಿ ಅಲೆದಾಡುವ ಆನೆಗಳ ಬೀಡು, ಅಣಿಯೂರು ನದಿಯ ಮೂಲಸ್ಥಾನ - ದಟ್ಟ ಕಾಡಿನಲ್ಲಿ ಅಡಗಿ ಕುಳಿತಿರುವ ಮಲೆಕುಡಿಯರೇ ವಾಸವಾಗಿರುವ ಈ ಪುಟ್ಟ ಹಳ್ಳಿ. ಇಲ್ಲಿಗೆ ಚಾರಣಗೈಯುವುದೇ ಒಂದು ವಿಶಿಷ್ಟ ಅನುಭವ.

ಈ ಜಲಧಾರೆಯನ್ನು ನೋಡಲು ಖಾಸಗಿ ಸಂಸ್ಥೆಯೊಂದರ ಎಸ್ಟೇಟ್ ಮೂಲಕ ಹಾದುಹೋಗಬೇಕಾಗಿರುವುದರಿಂದ ಮುಂಚಿತವಾಗಿ ಆ ಎಸ್ಟೇಟ್ ಧಣಿಗಳಿಂದ ಅನುಮತಿ ಅಗತ್ಯ. ಕಾಡಿನ ನಡುವೆ ಧುತ್ತೆಂದು ಎದುರಾಗುವ ಈ ಎಸ್ಟೇಟ್ ಮಾಲೀಕರು ಪ್ರಖ್ಯಾತ ಕಾಡುಕಳ್ಳರು. ಈ ಪ್ರದೇಶದಲ್ಲಿ ಅಪಾರ ಪ್ರಮಾಣದಲ್ಲಿ ಕಾಡು ಕಡಿದು ನಾಶ ಮಾಡಿರುವ ಕುಖ್ಯಾತಿ ಇವರದ್ದು.


ಮುಖ್ಯ ರಸ್ತೆಯಿಂದ ಸುಮಾರು ೧೫೦ ನಿಮಿಷಗಳ ಚಾರಣ. ಎಸ್ಟೇಟ್ ಬಿಟ್ಟರೆ ಚಾರಣದ ಉಳಿದ ಹಾದಿ ಸುಂದರ ಕಾಡಿನ ನಡುವೆ ಆನೆಗಳ ಲದ್ದಿಗಳ ದರ್ಶನ ನೀಡುತ್ತಾ ಮಲೆಕುಡಿಯರ ಹಳ್ಳಿಯಲ್ಲಿ ಕೊನೆಗೊಳ್ಳುತ್ತದೆ. ಹಳ್ಳಿಯಿಂದ ತುಸು ಮುಂದೆ ಸಾಗಿ ಕಣಿವೆಯನ್ನು ಸ್ವಲ್ಪ ಕಷ್ಟಪಟ್ಟು ಇಳಿದರೆ ಈ ಸುಂದರ ಜಲಧಾರೆ. ಒಂದೇ ನೆಗೆತಕ್ಕೆ ಸುಮಾರು ೧೦೦ ಅಡಿ ಆಳಕ್ಕೆ ಧುಮುಕುವ ಅಂದದ ಜಲಧಾರೆ ಇದು.


ವಿಜಯ ಕರ್ನಾಟಕ ಮಂಗಳೂರು ಆವೃತ್ತಿಯಲ್ಲಿ ಚಾರಣ ತಾಣಗಳ ಬಗ್ಗೆ ಬರೆಯುತ್ತಿದ್ದ ದಿನೇಶ್ ಹೊಳ್ಳರನ್ನು ಮೊದಲ ಬಾರಿ ಭೇಟಿಯಾದಾಗ, ೨ ದಿನಗಳ ಬಳಿಕ ಈ ಜಲಧಾರೆಗೆ ಚಾರಣವಿರುವುದೆಂದು ತಿಳಿಸಿದ್ದರು. ಮಂಗಳೂರು ಯೂತ್ ಹಾಸ್ಟೆಲ್-ನೊಂದಿಗೆ ಇದು ನನ್ನ ಮೊದಲ ಚಾರಣ.

ಸೋಮವಾರ, ಸೆಪ್ಟೆಂಬರ್ 15, 2008

ಕಲ್ಲೇಶ್ವರ ದೇವಾಲಯ - ಬಾಗಳಿ


ಬಾಗಳಿಯಲ್ಲಿರುವ ಕಲ್ಲೇಶ್ವರ ದೇವಾಲಯವನ್ನು ಕರ್ನಾಟಕದ ಖಜುರಾಹೊ ಎನ್ನುತ್ತಾರೆ. ಕೆರೆಯ ಬದಿಯಲ್ಲಿರುವ ದೇವಾಲಯವನ್ನು ನವೀಕರಿಸಿ ಪುರಾತತ್ವ ಇಲಾಖೆ ಪ್ರಶಂಸನೀಯ ಕೆಲಸ ಮಾಡಿದೆ. ದೇವಾಲಯದ ಗರ್ಭಗುಡಿ ರಾಷ್ಟ್ರಕೂಟರ ಶೈಲಿಯಲ್ಲಿದೆ. ನವರಂಗ ಚಾಳುಕ್ಯ ಶೈಲಿಯಲ್ಲಿದೆ. ಮುಖಮಂಟಪ/ಸುಖನಾಸಿ ಹೊಯ್ಸಳ ಶೈಲಿಯಲ್ಲಿದೆ. ಕಡೆಯದಾಗಿ ದೇವಾಲಯದ ಗೋಪುರ ವಿಜಯನಗರ ಶೈಲಿಯಲ್ಲಿದೆ. ನಾಲ್ಕು ಶೈಲಿಗಳ ಮಿಲನ ಬೇರೆಲ್ಲಾದರೂ ಕಾಣಸಿಕ್ಕೀತೆ?

ಪೂರ್ವಾಭಿಮುಖವಾಗಿರುವ ಈ ಏಕಕೂಟ ದೇವಾಲಯವನ್ನು ಇಸವಿ ೧೧೧೮ರಲ್ಲಿ ಚಾಲುಕ್ಯ ದೊರೆ ೬ನೇ ವಿಕ್ರಮಾದಿತ್ಯನು ನಿರ್ಮಿಸಿದನೆಂದು ಶಾಸನಗಳಲ್ಲಿ ತಿಳಿಸಲಾಗಿದೆ. ಇಲ್ಲಿ ಸಿಕ್ಕಿರುವ ೪೧ ಶಾಸನಗಳಲ್ಲಿ ೧೨ ಚಾಲುಕ್ಯ ದೊರೆ ೬ನೇ ವಿಕ್ರಮಾದಿತ್ಯನ ಕಾಲದ್ದಾಗಿವೆ. ಬಾಗಳಿ ಊರಿನಲ್ಲಿ ಸುಂದರ ವೀರಗಲ್ಲುಗಳೂ ದೊರೆತಿವೆ. ಗರ್ಭಗುಡಿಯಲ್ಲಿರುವ ಕಲ್ಲೇಶ್ವರನ ಮೇಲೆ ಯುಗಾದಿಯ ಶುಭ ದಿನದಂದು ಸೂರ್ಯನ ಕಿರಣಗಳು ಬೀಳುತ್ತವಂತೆ. ಗರ್ಭಗುಡಿಯ ಮೇಲೆ ಗೋಪುರವಿದ್ದರೂ ಯುಗಾದಿಯ ದಿನದಂದು ಮಾತ್ರ ಸೂರ್ಯನ ಕಿರಣಗಳು ಹೇಗೆ ಒಳಗೆ ತೂರಿ ಬರುತ್ತವೆಂದು ಕಾರಣವನ್ನು ಕಂಡು ಹಿಡಿಯಲು ಇದುವರೆಗೆ ಆಗಿಲ್ಲವಂತೆ. ಆದರೆ ಇದನ್ನು ವೀಕ್ಷಿಸಲು ಯುಗಾದಿಯಂದು ಬಹಳಷ್ತು ಜನರು ಇಲ್ಲಿ ಸೇರುತ್ತಾರೆ.


ಸುಂದರ ಉದ್ಯಾನದ ನಡುವೆ ಇರುವ ದೇವಾಲಯವನ್ನು ಹೊಕ್ಕರೆ ಮುಖಮಂಟಪದಲ್ಲಿ ಅತ್ಯುನ್ನತ ಕೆತ್ತನೆಯಿರುವ ೬೪ ಕಂಬಗಳ ಸ್ವಾಗತ. ಇವುಗಳಲ್ಲಿ ನಟ್ಟನಡುವೆ ಇರುವ ೪ ಕಂಬಗಳಿಗೆ ಪ್ರಭಾವಳಿಯಿರುವ ವಿಶಿಷ್ಟ ಕೆತ್ತನೆ. ಎಲ್ಲಾ ೬೪ ಕಂಬಗಳನ್ನು ಬೇರೆ ಬೇರೆ ರೀತಿಯಲ್ಲಿ ನಿರ್ಮಿಸಲಾಗಿದೆ. ಮೇಲ್ನೋಟಕ್ಕೆ ಕಂಬಗಳ ವಿನ್ಯಾಸದಲ್ಲಿ ವ್ಯತ್ಯಾಸ ಗೊತ್ತಾಗುತ್ತದೆ. ಆದರೆ ಕೂಲಂಕುಷವಾಗಿ ಗಮನಿಸಲು ನನಗೆ ತಾಳ್ಮೆ ಮತ್ತು ಸಮಯ ಇರಲಿಲ್ಲ. ಇಲ್ಲಿಗೆ ಬರುವ ಕೆಲವು ಅನಾಗರೀಕರು ಈ ಸುಂದರ ಕಂಬಗಳ ಮೇಲೆ ತಮ್ಮ ಹೆಸರುಗಳನ್ನು ಬರೆದು ಅವುಗಳ ಅಂದಗೆಡಿಸಿರುವುದು ಖೇದಕರ. ನಂದಿ ಮುಖಮಂಟಪದ ಆರಂಭದಲ್ಲೇ ಇದೆ.

ನವರಂಗಕ್ಕೆ ಎರಡು ದ್ವಾರಗಳಿವೆ. ಒಂದು ದ್ವಾರ ಪಾರ್ಶ್ವದಲ್ಲಿದ್ದು ದೇವಾಲಯದ ಹೊರಗೆ ತೆರೆದುಕೊಂಡರೆ, ಇನ್ನೊಂದು ದ್ವಾರ ಪ್ರಮುಖ ದ್ವಾರವಾಗಿದ್ದು, ಮುಖಮಂಟಪ/ಸುಖನಾಸಿಗೆ ತೆರೆದುಕೊಳ್ಳುತ್ತದೆ. ಎರಡೂ ದ್ವಾರಗಳು ಉನ್ನತ ಕೆತ್ತನೆ ಕೆಲಸವನ್ನು ಹೊಂದಿದ್ದು ಆಕರ್ಷಕವಾಗಿವೆ. ನವರಂಗದ ಪ್ರಮುಖ ದ್ವಾರ ೭ ತೋಳಿನದ್ದಾಗಿದ್ದು ಗಜಲಕ್ಷ್ಮಿಯ ಸುಂದರ ಕೆತ್ತನೆಯನ್ನು ಮತ್ತು ಮೇಲ್ಗಡೆ ದೇವ ದೇವಿಯರ ಸೂಕ್ಷ್ಮ ಕೆತ್ತನೆಯನ್ನೂ ಹೊಂದಿದೆ. ಕೆಳಗಡೆ ದ್ವಾರಪಾಲಕ(ಕೆ)ಯರ ಕೆತ್ತನೆಗಳು. ನವರಂಗದ ಇನ್ನೊಂದು ದ್ವಾರವೂ ೭ ತೋಳಿನದ್ದಾಗಿದ್ದು ಪ್ರತಿಯೊಂದು ತೋಳಿನಲ್ಲೂ ಸುಂದರ ಕೆತ್ತನೆ ಕೆಲಸವನ್ನು ಮಾಡಲಾಗಿದೆ. ಈ ದ್ವಾರ ಬಾಗಳಿ ಕಲ್ಲೇಶ್ವರ ದೇವಾಲಯದ ಪ್ರಮುಖ ಆಕರ್ಷಣೆ ಎನ್ನಬಹುದು. ಸಮೀಪದಲ್ಲಿ ಸಿಕ್ಕಿರುವ ಅಪೂರ್ಣ ದೇವಾಲಯದಲ್ಲಿದ್ದ ನಂದಿಯ ಮೂರ್ತಿಯನ್ನು ನವರಂಗದಲ್ಲಿರಿಸಲಾಗಿದೆ.

ಅಂತರಾಳದ ದ್ವಾರಕ್ಕೆ ಸುಂದರ ಜಾಲಂಧ್ರದ ರಚನೆಯಿದೆ. ಗರ್ಭಗುಡಿಯ ದ್ವಾರ ೫ ತೋಳಿನದ್ದಾಗಿದೆ. ಕಲ್ಲೇಶ್ವರನಿಗೆ ಊರಿನವರು ಸುಂದರ ಮುಖವಾಡವನ್ನು ಮಾಡಿಸಿದ್ದಾರೆ. ದೇವಾಲಯದಲ್ಲಿ ದಿನಾಲೂ ಪೂಜೆ ನಡೆಯುತ್ತದೆ.


ಈ ದೇವಾಲಯದ ಸಮೀಪ ಉತ್ಖನನ ನಡೆಸುತ್ತಿರುವಾಗ ಕೆರೆಯ ಮರಳಿನಲ್ಲಿ ಹುದುಗಿಹೋಗಿದ್ದ ಮತ್ತೊಂದು ದೇವಾಲಯ, ಕಲ್ಲಿನ ಮೂರ್ತಿಗಳು ಮತ್ತು ಕೆಲವು ಬೃಹದಾಕಾರದ ಕಂಬಗಳು ಸಿಕ್ಕಿವೆ. ಈ ಹೊಸದಾಗಿ ಕಂಡುಹುಡುಕಿರುವ ಸಣ್ಣ ದೇವಾಲಯದಲ್ಲಿ ಯಾವುದೇ ಮೂರ್ತಿ ಕಂಡುಬರಲಿಲ್ಲ. ಈ ದೇವಾಲಯದ ಕೆಲವೊಂದು ಕೆತ್ತನೆ ಕೆಲಸಗಳು ಅಪೂರ್ಣವಾಗಿರುವುದರಿಂದ ದೇವಾಲಯದ ನಿರ್ಮಾಣವನ್ನು ಅರ್ಧಕ್ಕೇ ಕೈಬಿಡಲಾಗಿತ್ತು ಎಂದು ಊಹಿಸಬಹುದು. ದೇವಾಲಯದ ಸಮೀಪ ಸಿಕ್ಕಿರುವ ಎಲ್ಲಾ ಶಾಸನಗಳನ್ನು, ಮೂರ್ತಿಗಳನ್ನು ಬಾಗಳಿ ಊರಿನಲ್ಲಿರುವ ಸಂಗ್ರಹಾಲಯದಲ್ಲಿ ಇಡಲಾಗಿದೆ.

ಮುಖಮಂಟಪದ ಬಲಬದಿಯಲ್ಲೊಂದು ಗರ್ಭಗುಡಿಯಿದ್ದು ಇದರಲ್ಲಿ ಉಗ್ರನರಸಿಂಹ ಹಿರಣ್ಯಕಷಿಪುವನ್ನು ತೊಡೆಯ ಮೇಲೆ ಇರಿಸಿ ಉದರವನ್ನು ಬಗೆಯುವ ಮತ್ತು ಪ್ರಹ್ಲಾದ ಹಾಗೂ ನಾರದ ಮುನಿ ಇದನ್ನು ವೀಕ್ಷಿಸುವ ಅದ್ಭುತ ಕೆತ್ತನೆಯ ಕರಿಕಲ್ಲಿನ ಮೂರ್ತಿಯಿದೆ. ಮೂರ್ತಿ ಎಷ್ಟು ನಯವಾಗಿದೆಯೆಂದರೆ ಧೂಳಿನ ಕಣ ಕೂಡಾ ಜಾರಿ ಕೆಳಗೆ ಬೀಳಬೇಕು. ಉಗ್ರನರಸಿಂಹನ ಕೈಬೆರಳಿನ ಉಗುರುಗಳು ಕೂಡಾ ಸ್ಪಷ್ಟವಾಗಿ ಕಾಣುತ್ತವೆ. ಅಷ್ಟು ಅದ್ಭುತವಾಗಿ ಮತ್ತು ಸೂಕ್ಷ್ಮವಾಗಿ ಕೆತ್ತಲಾಗಿದೆ ಈ ಮೂರ್ತಿಯನ್ನು. ಎಷ್ಟೇ ವಿನಂತಿಸಿದರೂ ಅಲ್ಲಿನ ಸಿಬ್ಬಂದಿ ಈ ಅಪ್ರತಿಮ ಮೂರ್ತಿಯ ಚಿತ್ರ ತೆಗೆಯಲು ಬಿಡಲೇ ಇಲ್ಲ. ಬೇರೆ ಉಪಾಯವಿಲ್ಲದೆ ಕಣ್ತುಂಬಾ ಈ ಮೂರ್ತಿಯನ್ನು ನೋಡುತ್ತಾ ಬಹಳ ಹೊತ್ತು ಅಲ್ಲೇ ಕುಳಿತೆ. ದೇವಸ್ಥಾನ ಪ್ರೇಮಿಗಳು ಬಾಗಳಿಯ ಕಲ್ಲೇಶ್ವರ ದೇವಸ್ಥಾನಕ್ಕೆ ಈ ಉಗ್ರನರಸಿಂಹನ ಮೂರ್ತಿಯನ್ನು ನೋಡಲಾದರೂ ಭೇಟಿ ನೀಡಲೇಬೇಕು.

ದೇವಾಲಯಕ್ಕೊಂದು ಸುತ್ತು ಹಾಕುವಾಗ ಗರ್ಭಗುಡಿಯ ಹೊರಭಾಗದಲ್ಲಿ ಸುಂದರ ಮತ್ತು ವಿಶಿಷ್ಟ ಮಿಥುನ ಶಿಲ್ಪಗಳನ್ನು ಕಾಣಬಹುದು. ಅಲ್ಲಿನ ಸಿಬ್ಬಂದಿ ಇವುಗಳ ಬಗ್ಗೆ ಸಂಪೂರ್ಣ ವಿವರಣೆ ನೀಡುತ್ತಾರೆ. ಇದೇ ಕಾರಣಕ್ಕಾಗಿ ಈ ದೇವಾಲಯವನ್ನು ಕರ್ನಾಟಕದ ಖಜುರಾಹೋ ಎನ್ನುತ್ತಾರಂತೆ!

ಭಾನುವಾರ, ಸೆಪ್ಟೆಂಬರ್ 07, 2008

ಜಲಧಾರೆಯನ್ನು ಹುಡುಕಿದ್ದು ...


ದಿನಾಂಕ: ಜುಲಾಯಿ ೧೭, ೨೦೦೫

ಲಾಲ್ಗುಳಿ ಮಿಶನ್ ವೈಫಲ್ಯದ ಬಳಿಕ ಹಿಂತಿರುಗುವಾಗ ಈ ಜಲಧಾರೆಯ ಬಗ್ಗೆ ಮಾಹಿತಿಯನ್ನು ಉತ್ತರ ಕನ್ನಡದ ಜಲಧಾರೆಗಳ ಬಗ್ಗೆ ಬಂದಿದ್ದ ಲೇಖನವೊಂದರಲ್ಲಿ ಓದಿದ್ದ ನೆನಪಾಯಿತು. ಅನಿಲನಲ್ಲಿ ಹೇಳಿದಾಗ ಹುಡುಕೋಣವೆಂದು ಉತ್ಸಾಹದಿಂದಲೇ ಒಪ್ಪಿದ.

ಮಾಹಿತಿ ಪಡೆಯಲು ಮನೆಯೊಂದಕ್ಕೆ ತೆರಳಿದೆವು. ಅಲ್ಲೊಬ್ಬ ನಾಲ್ಕನೇ ತರಗತಿ ಓದುವ ಪೋರ, ಬಲಕ್ಕೆ ಹೋಗಿ ಎಡಕ್ಕೆ ಹೋಗಿ ನೇರಕ್ಕೆ ಹೋಗಿ ಎಡಕ್ಕೆ ಹೋಗಿ ಎಂದು ಕನ್ಫ್ಯೂಸ್ ಮಾಡಿಬಿಟ್ಟ. ನಂತರ ಆತನ ಅಜ್ಜ, ದಾರಿ ಸರಿಯಾಗಿ ಹೇಳಲು ಆಗುದಿಲ್ಲವೆಂದೂ, ಬಹಳ ಕಡೆ ಅಲ್ಲಲ್ಲಿ ಎಡಕ್ಕೆ ಬಲಕ್ಕೆ ತಿರುಗಬೇಕೆಂದು ಹೇಳಿ ಪ್ರಮುಖ ರಸ್ತೆಯಿಂದ ಎಲ್ಲಿ ತಿರುವು ಪಡೆಯಬೇಕೆಂಬ ಮಾಹಿತಿ ನೀಡಿದರು.


ಆ ಹಿರಿಯರು ಹೇಳಿದಲ್ಲಿ ತಿರುವು ತಗೊಂಡು ನೇರವಾಗಿ ಮುನ್ನಡೆದೆವು. ಒಂದು ಕಿ.ಮಿ. ಬಳಿಕ ಅಲ್ಲೊಂದಷ್ಟು ಮನೆಗಳು. ವಿಚಾರಿಸಿದಾಗ, ಸ್ವಲ್ಪ ಮೊದಲೇ ಸಿಗುವ ನಾವು ನಿರ್ಲಕ್ಷಿಸಿ ಬಂದಿದ್ದ ಕವಲು ದಾರಿಯಲ್ಲಿ ತೆರಳಬೇಕೆಂದು ತಿಳಿಯಿತು. ಹಾಗೆ ಹಿಂದೆ ಬಂದರೆ ಅಲ್ಲಿ ಒಂದೇ ಪಾರ್ಶ್ವದಲ್ಲಿ ೩ ದಾರಿಗಳು. ಆದದ್ದಾಗಲಿ ಎಂದು ಒಂದು ರಸ್ತೆಯಲ್ಲಿ ತೆರಳಿದೆವು. ಸ್ವಲ್ಪ ಮುಂದೆ ಮತ್ತೆ ೪ ಕವಲುಗಳು! ಇಲ್ಲೊಂದು ರಸ್ತೆಯನ್ನು ಆಯ್ಕೆ ಮಾಡಿ ಅದರಲ್ಲಿ ತೆರಳಿದೆವು. ಮುಂದೆ ಮತ್ತೆರಡು ಕಡೆ ದಾರಿಗಳು ಕವಲೊಡೆದಿದ್ದವು. ಆದರೂ ನೇರ ರಸ್ತೆಯಲ್ಲೇ ಮುಂದೆ ಸಾಗಿದಾಗ, ರಸ್ತೆ ಕೊನೆಗೊಂಡು ಕಾಲುದಾರಿ ಆರಂಭವಾಯಿತು.

ಸುಮಾರು ೨೦ ನಿಮಿಷ ನಡೆದ ಬಳಿಕ ಇಳಿಜಾರಿನಲ್ಲಿ ಮನೆಯೊಂದು ಕಾಣಿಸಿತು. ನಾವಿನ್ನೂ ಪೊದೆಗಳ ಮರೆಯಲ್ಲಿದ್ದೆವು ಮತ್ತು ಮನೆ ಸ್ಪಷ್ಟವಾಗಿ ಕಾಣುತ್ತಿರಲಿಲ್ಲ. ’ಯಾರು..ಯಾರು..ಅಲ್ಲೇ ನಿಲ್ಲಿ...ಏನು ಬೇಕು?’ ಎಂಬ ಹೆಣ್ಣು ಧ್ವನಿ ಕೇಳಿಸಿದಾಗ ಅಲ್ಲೇ ನಿಂತೆವು. ಜಲಧಾರೆಯ ಬಗ್ಗೆ ಕೇಳಿದಾಗ, ’ಇಲ್ಯಾಕೆ ಬಂದ್ರಿ..ಹೋಗಿ ಹೋಗಿ..ನಾಯಿ ಬಿಡ್ತೆ..ಶಿರ್ಲು ಇಲ್ಲಿಲ್ಲ..ಬೇರೆ ದಾರಿ..ಹೋಗಿ ಹೋಗಿ... ಮುಂದೆ ಬಂದ್ರೆ ನಾಯಿ ಬಿಡ್ತೆ’ ಎಂದು ಮನೆಯ ಅಂಗಳದಿಂದ ಸಿದ್ಧಿ ಹೆಂಗಸೊಬ್ಬಳ ಅಸ್ಪಷ್ಟ ಆಕೃತಿ ಅರಚಾಡುವುದು ಕಾಣಿಸಿತು. ಆಕೆಯ ೨ ನಾಯಿಗಳು ನಮ್ಮ ಬಳಿ ಬಾಲ ಅಲ್ಲಾಡಿಸುತ್ತಾ ಬಿಸ್ಕಿಟ್ ತಿನ್ನುತ್ತಿರುವುದನ್ನು ಆಕೆ ಗಮನಿಸಿರಲಿಲ್ಲ! ಆಕೆಯ ವರ್ತನೆಯ ಬಗ್ಗೆ ಗುಮಾನಿ ಬಂದರೂ ಇನ್ನು ಅಲ್ಲಿರುವುದು ವ್ಯರ್ಥ ಎಂದೆನೆಸಿ ಹಿಂತಿರುಗಿದೆವು.

ನಂತರ ಕವಲೊಡೆದ ಹಲವಾರು ದಾರಿಗಳಲ್ಲಿ ಒಂದನ್ನು ಆಯ್ಕೆ ಮಾಡಿ ಅದರಲ್ಲಿ ಸುಮಾರು ೧೦ ನಿಮಿಷ ನಡೆದರೂ ಯಾವುದೇ ಮನೆಯ ಅಥವಾ ಜನರ ಸುಳಿವಿಲ್ಲ. ಇನ್ನೊಂದು ಕವಲೊಡೆದಿದ್ದ ರಸ್ತೆಯಲ್ಲಿ ತೆರಳಿದರೆ ಅದೂ ವ್ಯರ್ಥ. ಇಷ್ಟೆಲ್ಲಾ ಅಡ್ಡಾಡಿದ ಬಳಿಕ ಏನೇ ಆಗಲಿ ಈ ಜಲಧಾರೆಯನ್ನು ಹುಡುಕಿಯೇ ಸಿದ್ಧ ಎಂದು ಅನಿಲ ಪಣತೊಟ್ಟೇಬಿಟ್ಟ. ಈಗ ಮಗದೊಂದು ಕವಲೊಡೆದ ದಾರಿಯಲ್ಲಿ ಅನಿಲ ಬೈಕನ್ನು ಓಡಿಸಿದ. ಇಲ್ಲಿಯೂ ಮನೆಯೊಂದಿತ್ತು. ಆದರೆ ಮನೆಗೆ ಬೀಗ ಜಡಿಯಲಾಗಿತ್ತು. ಅಲ್ಲಿಂದ ಹಿಂತಿರುಗಿ ಎಲ್ಲಿ ಹೋಗಬೇಕೆಂದು ತಿಳಿಯದೇ ಸಿಕ್ಕಿದ ಇನ್ನೊಂದು ದಾರಿಯಲ್ಲಿ ತೆರಳಿದೆವು.

ಸ್ವಲ್ಪ ದೂರ ಬೈಕು ಓಡಿಸಿ ದೂರದಲ್ಲಿ ತೋಟವೊಂದು ಕಾಣಿಸಿದಾಗ ನಡೆಯಲಾರಂಭಿಸಿದೆವು. ಇಲ್ಲಿ ೨ ಮನೆಗಳಿದ್ದವು. ಸಮೀಪವಿದ್ದ ಮನೆಯ ಬಳಿ ತೆರಳಿದೆವು. ಈ ಮನೆಯಲ್ಲಿ ನಾಲ್ಕಾರು ಮಕ್ಕಳು ಮತ್ತು ಒಬ್ಬ ಯುವ ಸಿದ್ಧಿ ಹೆಂಗಸು. ಈಕೆ ಕೂಡಾ ನಮ್ಮನ್ನು ನೋಡಿ ವ್ಯಾಘ್ರಿಣಿಯಂತೆ ಘರ್ಜಿಸತೊಡಗಿದಳು. ’ಶಿರ್ಲುಗೆ ಹೋಗ್ಬೇಕು..ದಾರಿ ಯಾವುದು’ ಎಂದು ಕೇಳಿದಾಗ, ’ಇದು ದಾರಿ ಅಂತ ಯಾರು ಹೇಳೀರು ನಿಮ್ಗೆ, ಹೋಗಿ ಹೋಗಿ...ಆ ಕಡೆ ಹೋಗ್ಬೇಕು’ ಎಂದು ಕೈಯನ್ನು ಆಗಸದೆಡೆ ತೋರಿಸಿದಳು! ಕುಡಿಯಲು ನೀರು ಕೇಳಿದಾಗ ಆಕೆ ನೀಡಿದ ನೀರನ್ನು ನೋಡಿ ಅನಿಲ್, ’ನಾವು ನೀರು ಕೇಳಿದ್ದು ಕುಡೀಲಿಕ್ಕೆ...ಕಾಲು ತೊಳೀಲಿಕ್ಕಲ್ಲ’ ಎಂದಾಗ, ಮತ್ತಷ್ಟು ಸಿಟ್ಟುಗೊಂಡ ಆಕೆ, ’ಅದೇಯ ನೀರು..ಕಾಲು, ಮುಖ ಎಲ್ಲಾ ತೊಳೀಲಿಕ್ಕೆ ...ಕುಡೀಲಿಕ್ಕೆ...ಎಲ್ಲಾ ಅದೇ ನೀರೇಯ...ನೀರಂತೆ ನೀರು...ಬೇಡಾದ್ರೆ ನಿಮ್ಗ್ಯಾರು ಕುಡೀಲಿಕ್ಕೆ ಹೇಳೀರು...’ ಎಂದು ಗೊಣಗತೊಡಗಿದಾಗ ನನಗಂತೂ ನಗು ಬರತೊಡಗಿತ್ತು. ಇವರೆಲ್ಲಾ ಈ ರೀತಿ ಯಾಕೆ ವರ್ತಿಸುತ್ತಿದ್ದರು ಎಂಬುದು ನಿಗೂಢ.

ನಂತರ ಇನ್ನೊಂದು ಮನೆಯ ದಾರಿಯಲ್ಲಿ ಸಾಗಿದೆವು. ನಮ್ಮ ಅದೃಷ್ಟಕ್ಕೆ ಇದು ಸಿದ್ಧಿ ಮನೆಯಾಗಿರಲಿಲ್ಲ! ಇಲ್ಲಿ ದಾರಿ ಕೇಳಿದಾಗ ಮನೆಯ ಬಳಿ ಹರಿಯುತ್ತಿದ್ದ ಸಣ್ಣ ಮೋರಿಯಲ್ಲೇ ಹೋಗಲು ಹೇಳಲಾಯಿತು.


ಈ ಸಣ್ಣ ಕಾಲುವೆಯಲ್ಲಿ ಒಂದೈದು ನಿಮಿಷ ನಡೆದ ಬಳಿಕ ಅಂತೂ ಕೊನೆಗೆ ಜಲಧಾರೆಯ ದರ್ಶನವಾಯಿತು. ಎರಡು ತಾಸು ಮತ್ತು ೧೫ ನಿಮಿಷದ ಹುಡುಕಾಟದ ಬಳಿಕ ಸಿಕ್ಕಿದ ಜಲಧಾರೆ ನಿರಾಸೆ ಮಾಡಲಿಲ್ಲ. ನೀರಿನ ಹರಿವು ಕಡಿಮೆ ಇದ್ದರೂ ಸೌಂದರ್ಯಕ್ಕೆ ಈ ಜಲಧಾರೆಗೆ ತನ್ನದೇ ಸ್ಥಾನ ಇದೆ. ಕರಿಕಲ್ಲಿನ ಅಡ್ಡಗೋಡೆಗೆ ಸವರಿಕೊಂಡೇ ಸುಮಾರು ೭೦-೮೦ ಅಡಿಯಷ್ಟು ಎತ್ತರದಿಂದ ಬಳಿಕುತ್ತಾ ಇಳಿಯುವ ಜಲಧಾರೆಯ ತಂಪು ನೋಟ. ಅನಿಲನಂತೂ ಅದಾಗಲೇ ಸ್ನಾನ ಮಾಡತೊಡಗಿದ್ದ. ಮುಖ್ಯ ರಸ್ತೆಯಿಂದ ಜಲಧಾರೆ ಹುಡುಕಲು ನಮಗೆ ೧೩೫ ನಿಮಿಷಗಳು ಬೇಕಾದರೆ ಹಿಂತಿರುಗುವಾಗ ಕೇವಲ ೨೨ ನಿಮಿಷದಲ್ಲಿ ಮುಖ್ಯ ರಸ್ತೆಗೆ ಬಂದಿದ್ದೆವು!


ಒಂದೇ ತಿಂಗಳ ಬಳಿಕ ಅಗೋಸ್ಟ್-ನಲ್ಲಿ ಮತ್ತೊಮ್ಮೆ ಇಲ್ಲಿಗೆ ಬಂದಿದ್ದೆ. ಜಲಧಾರೆಯ ಕರಿಕಲ್ಲಿನ ಗೋಡೆಯೇ ಕಾಣಿಸುತ್ತಿರಲಿಲ್ಲ. ನೀರಿನ ಅಗಾಧ ಹರಿವು ಜಲಧಾರೆಯ ಇನ್ನೊಂದು ರೂಪವನ್ನು ಕಣ್ಣ ಮುಂದೆ ಇಟ್ಟಿತ್ತು. ಅಷ್ಟೆಲ್ಲಾ ನೀರು ಬೀಳುತ್ತಿದ್ದರೂ ಜಲಧಾರೆಯ ಅತ್ಯಂತ ಸಮೀಪ ಅಂದರೆ ನೀರು ಬೀಳುವಲ್ಲಿಂದ ಕೇವಲ ನಾಲ್ಕೈದು ಅಡಿ ದೂರದವರೆಗೂ ಯಾವುದೇ ಅಪಾಯವಿಲ್ಲದೆ ಸಾಗಬಹುದು.

ಸೋಮವಾರ, ಸೆಪ್ಟೆಂಬರ್ 01, 2008

ಕಾಳಿ ಕೊಳ್ಳದ ಕಥೆ/ವ್ಯಥೆ - ೫

ಮುರುಡೇಶ್ವರ ವಿದ್ಯುತ್ ಸಂಸ್ಥೆ ಕಾಳಿ ನದಿಗೆ ೫ನೇ ಅಣೆಕಟ್ಟನ್ನು ನಿರ್ಮಿಸಲು ಮುಂದಾಗಿತ್ತು. ದಾಂಡೇಲಿ ಸಮೀಪದ ’ಮಾವ್ಲಿಂಗಿ’ ಎಂಬಲ್ಲಿಂದ ೫ ಕಿ.ಮಿ. ನದಿಗುಂಟ ಮೇಲ್ಗಡೆ ಅಣೆಕಟ್ಟನ್ನು ನಿರ್ಮಿಸುವ ಇರಾದೆಯಿತ್ತು. ಕದ್ರಾ ಮತ್ತು ಕೊಡಸಳ್ಳಿ ಅಣೆಕಟ್ಟುಗಳ ಬಳಿಕ ಕಾಳಿ ಕೊಳ್ಳದಲ್ಲಿ ಕಾಡಿನ ನಾಶಕ್ಕೆ ಆಸ್ಪದವಿರುವಂತಹ ಯಾವುದೇ ಅಣೆಕಟ್ಟನ್ನು ಇನ್ನು ಮುಂದೆ ನಿರ್ಮಿಸಲಾಗುವುದಿಲ್ಲ ಎಂಬ ಅದೇಶವನ್ನು ೧೯೮೭ರಲ್ಲಿ ರಾಜ್ಯ ಸರಕಾರ ಸಂಸತ್ತಿನಲ್ಲಿ ಹೊರಡಿಸಿತ್ತು. ಇದನ್ನು ಕಡೆಗಣಿಸಿ ಮುರುಡೇಶ್ವರ ಸಂಸ್ಥೆ ಈ ಅಣೆಕಟ್ಟು ನಿರ್ಮಾಣಕ್ಕೆ ಅನುಮತಿ ಪಡೆಯಲು ಹರಸಾಹಸ ಮಾಡಿತು. ೧೮೦ ಕೋಟಿ ರೂಪಾಯಿ ವೆಚ್ಚದಲ್ಲಿ ೨೧೦ ಹೆಕ್ಟೇರ್ ಕಾಡನ್ನು ಮುಳುಗಿಸಿ ಈ ಅಣೆಕಟ್ಟನ್ನು ನಿರ್ಮಿಸಿ ಕೇವಲ ೧೭ ಮೆಗಾವ್ಯಾಟ್(!) ವಿದ್ಯುತ್ ಉತ್ಪಾದಿಸುವ ಮಂಡನೆಯನ್ನು ಮುರುಡೇಶ್ವರ ಸಂಸ್ಥೆ ಸರಕಾರದ ಮುಂದೆ ಇಟ್ಟಿತು.

ಭ್ರಷ್ಟ ಸರಕಾರಕ್ಕೆ ಅನುಮೋದನೆ ನೀಡುವ ಇರಾದೆಯಿತ್ತೇನೋ. ಆದರೆ ೧೯೮೭ರ ಆ ಆದೇಶ ಮತ್ತು ಆ ಅದೇಶವನ್ನು ಗೌರವಿಸಲು ಸೂಚಿಸಿದ ನ್ಯಾಯಾಲಯ; ಈ ವಿಷಯಗಳ ಮುಂದೆ ಸರಕಾರ ಏನೂ ಮಾಡುವಂತಿರಲಿಲ್ಲ. ಯಲ್ಲಾಪುರದಿಂದ ಸತತವಾಗಿ ಆರಿಸಿ ಬರುತ್ತಿರುವ (ಈ ಬಾರಿ ಸೋತಿದ್ದಾರೆ), ಕನ್ನಡ ಸರಿಯಾಗಿ ಮಾತನಾಡಲು ಬರದ ಕಾಡು ಕಳ್ಳ ಮಂತ್ರಿಯೊಬ್ಬರ ಸಂಪೂರ್ಣ ಬೆಂಬಲ ಮುರುಡೇಶ್ವರ ಸಂಸ್ಥೆಗಿತ್ತು. ಈ ಅಣೆಕಟ್ಟಿನ ನಿರ್ಮಾಣದಿಂದ ಪರಿಸರದ ಮೇಲೆ ಉಂಟಾಗುವ ಹಾನಿಯ ಬಗ್ಗೆ ಮುರುಡೇಶ್ವರ ಸಂಸ್ಥೆ ಎರಡು ದೋಷಪೂರಿತ ವರದಿಗಳನ್ನು ಸರಕಾರಕ್ಕೆ ಸಲ್ಲಿಸಿ ವಂಚನೆ ಮಾಡಲು ಹೊರಟಾಗ ಈ ವಂಚನೆಯನ್ನು ಬಯಲಿಗೆಳೆದದ್ದು ಕಾಳಿ ಬಚಾವೋ ಆಂದೋಲನ. ಮುರುಡೇಶ್ವರ ಸಂಸ್ಥೆಯ ಪ್ರತಿ ಹೆಜ್ಜೆಯನ್ನು ಊಹಿಸಿ ಅದಕ್ಕಿಂತ ಒಂದು ಹೆಜ್ಜೆ ಮುಂದಿದ್ದ ಕಾಳಿ ಬಚಾವೋ ಆಂದೋಲನ ಸರಕಾರ ಈ ಯೋಜನೆಯನ್ನು ಕೈ ಬಿಡುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿತು. ಸೂಪಾ ಮತ್ತು ಬೊಮ್ಮನಹಳ್ಳಿ ಅಣೆಕಟ್ಟುಗಳ ನಡುವೆ ಈ ಅಣೆಕಟ್ಟನ್ನು ನಿರ್ಮಿಸುವ ಇರಾದೆ ಇತ್ತು. ಹಾಗೆಲ್ಲಾದರೂ ಆಗಿದ್ದಿದ್ದರೆ ದಾಂಡೇಲಿಯ ಪ್ರಮುಖ ಆಕರ್ಷಣೆಯಾಗಿರುವ ’ವೈಟ್ ರಿವರ್ ರಾಫ್ಟಿಂಗ್’ ಕಣ್ಮರೆಯಾಗುತ್ತಿತ್ತು.

ಕಾಳಿಯ ನೀರು ಕುಡಿಯಲಿಕ್ಕೆ ಯೋಗ್ಯವಾಗಿಲ್ಲ. ಇದಕ್ಕೆ ಪ್ರಮುಖ ಕಾರಣ ತನ್ನ ತ್ಯಾಜ್ಯಗಳನ್ನು ಶುದ್ಧೀಕರಿಸದೆ ನೇರವಾಗಿ ಕಾಳಿಯ ಒಡಲಿಗೆ ಬಿಡುತ್ತಿರುವ ದಾಂಡೇಲಿಯ ವೆಸ್ಟ್ ಕೋಸ್ಟ್ ಪೇಪರ್ ಕಾರ್ಖಾನೆ. ಈ ಕಾರಣದಿಂದ ಬೊಮ್ಮನಹಳ್ಳಿ ಜಲಾಶಯದ ತುಂಬಾ ವೆಸ್ಟ್ ಕೋಸ್ಟ್ ಕಾರ್ಖಾನೆಯ ತ್ಯಾಜ್ಯ ತುಂಬಿಕೊಂಡಿದೆ. ಹೀಗೆ ಜಲಾಶಯದಲ್ಲಿ ಸಂಗ್ರಹವಾಗಿರುವ ಈ ತ್ಯಾಜ್ಯಗಳು ಅಂತರ್ಜಲವನ್ನು ಎಷ್ಟು ಕಲುಷಿತಗೊಳಿಸಿವೆಯೆಂದರೆ ಸುತ್ತಮುತ್ತಲ ಹಳ್ಳಿಗಳಲ್ಲಿ ನೀರು ಕುಡಿಯಲು ಯೋಗ್ಯವಾಗಿಲ್ಲ.

ದಾಂಡೇಲಿಯ ನಂತರ ಕಾಳಿಯ ದಂಡೆಯಲ್ಲಿರುವ ಜಮೀನು ಕೃಷಿಗೆ ಯೋಗ್ಯವಾಗಿಲ್ಲ. ವೆಸ್ಟ್ ಕೋಸ್ಟ್ ಕಾರ್ಖಾನೆಯ ತ್ಯಾಜ್ಯ, ನದಿಯಲ್ಲಿ ನೀರು ಹೆಚ್ಚಾದಾಗ ತೇಲಿ ಬಂದು ಗದ್ದೆಗಳನ್ನು ಕೃಷಿಗೆ ಅಯೋಗ್ಯವನ್ನಾಗಿ ಮಾಡಿವೆ. ಈ ಜಮೀನಿನಲ್ಲಿ ಈಗ ಏನೂ ಬೆಳೆಯಲಾಗುತ್ತಿಲ್ಲ. ಕಾಳಿಯನ್ನೇ ನಂಬಿಕೊಂಡಿದ್ದ ಇಲ್ಲಿನ ಜನರಿಗೆ ಈಗ ಆ ನೀರನ್ನೇ ಬಳಸಲಾಗದಂತಹ ಪರಿಸ್ಥಿತಿ. ಕಲುಷಿತ ನೀರನ್ನು ಕುಡಿದು ಮೃತಪಡುವ ಜಾನುವಾರುಗಳು, ಹಲವಾರು ರೋಗಗಳಿಂದ ಬಳಲಿ ಆಸ್ಪತ್ರೆಗೆ ದಾಖಲಾಗುವ ಹಳ್ಳಿಗರು ಇವೆಲ್ಲಾ ಗಮನಕ್ಕೆ ಬಾರದೆ ನಡೆಯುತ್ತಿವೆ. ಗರ್ಭದಲ್ಲೇ ಶಿಶುವಿನ ಮರಣ, ಚರ್ಮ ರೋಗ, ಕಿಡ್ನಿ ವೈಫಲ್ಯ ಇತ್ಯಾದಿ ರೋಗಗಳಿಂದ ಜನರು ಬಳಲುತ್ತಿದ್ದಾರೆ.

ಕೆಲವೊಂದು ಹಳ್ಳಿಗಳಲ್ಲಿ ಜನರು ಹೈನುಗಾರಿಕೆಯಿಂದಲೇ ಜೀವನ ಸಾಗಿಸುತ್ತಿದ್ದರು. ಆದರೆ ಎಲ್ಲಾ ಜಾನುವಾರುಗಳು ಕಾಳಿಯ ನೀರನ್ನು ಕುಡಿದು ಮೃತಪಟ್ಟ ಬಳಿಕ ಈಗ ಇವರೆಲ್ಲಾ ಅಲ್ಲಲ್ಲಿ ದಿನಗೂಲಿ ನೌಕರರಾಗಿ ಕೆಲಸ ಮಾಡುತ್ತಿದ್ದಾರೆ. ಒಂದೊಂದು ಮನೆಯಲ್ಲಿ ೧೦, ೧೫, ೪೦ ಹೀಗೆ ದೊಡ್ಡ ಸಂಖ್ಯೆಯಲ್ಲಿ ಜಾನುವಾರುಗಳು ಕಾಳಿಯ ನೀರನ್ನು ಕುಡಿದು ಮೃತಪಟ್ಟಿವೆ. ಆದರೆ ಇವರ ದೂರುಗಳನ್ನು ಕೇಳುವವರು ಯಾರೂ ಇಲ್ಲ. ಜಾನುವಾರುಗಳ ಮರಣಕ್ಕೆ ಪರಿಹಾರ ನೀಡುವವರೂ ಇಲ್ಲ. ಇನ್ನೂ ಕೆಲವೆಡೆ ಕೃಷಿಯನ್ನು ನಂಬಿಕೊಂಡಿದ್ದ ಕುಟುಂಬಗಳ ಸದಸ್ಯರೂ ಕಾಳಿಯ ಕಲುಷಿತ ನೀರಿನಿಂದ ತಮ್ಮ ಜಮೀನು ಕೃಷಿಗೆ ಅಯೋಗ್ಯವಾದ ಬಳಿಕ ದಿನಗೂಲಿಗಳಾಗಿ ಜೀವನ ಸಾಗಿಸುತ್ತಿದ್ದಾರೆ. ಇಷ್ಟೆಲ್ಲಾ ಆದರೂ ಕಾಳಿ ನದಿಯನ್ನು ತಾನು ಯಾವುದೇ ರೀತಿಯಲ್ಲಿ ಕಲುಷಿತ ಮಾಡುತ್ತಿಲ್ಲ ಎಂದೇ ವೆಸ್ಟ್ ಕೋಸ್ಟ್ ಕಾರ್ಖಾನೆ ಹೇಳಿಕೆ ನೀಡುತ್ತಿದೆ. ಸಂಸ್ಥೆ ಇತ್ತೀಚೆಗೆ ತ್ಯಾಜ್ಯ ಶುದ್ಧೀಕರಣ ಮಾಡುತ್ತಿದೆ ಎಂದು ಕೇಳಿ ಬರುತ್ತಿದೆಯಾದರೂ, ಸಂಸ್ಥೆಯಿಂದ ತ್ಯಾಜ್ಯ ಹರಿದು ಬರುವ ಮೋರಿಯನ್ನು ಗಮನಿಸಿದರೆ ಆ ಮಾತನ್ನು ನಂಬುವುದು ಅಸಾಧ್ಯ.

ಮರಳು ಸಾಗಣೆಯ ದಂಧೆ ಕೂಡಾ ಕಾಳಿ ಕೊಳ್ಳವನ್ನು ಕಾಡುತ್ತಿದೆ. ಸೂಪಾ ಅಣೆಕಟ್ಟಿನ ಸಮೀಪ ಪಾಂಢರಿ ನದಿಯಿಂದ ಅವ್ಯಾಹತವಾಗಿ ಮರಳು ಲೂಟಿಯ ದಂಧೆ ನಡೆಯುತ್ತಿದೆ. ಇದನ್ನು ವಿರೋಧಿಸಿದವರಿಗೆ ಮರಳು ಮಾಫಿಯಾ ಜೀವ ಬೆದರಿಕೆಯನ್ನೊಡ್ಡಿ ಮರಳು ಲೂಟಿಯನ್ನು ನಡೆಸುತ್ತಿದೆ. ಐದಾರು ವರ್ಷಗಳ ಹಿಂದೆ ನಡೆದಷ್ಟು ಅವ್ಯಾಹತವಾಗಿ ಮರಳು ಲೂಟಿ ಈಗ ನಡೆಯುತ್ತಿಲ್ಲ. ಆದರೆ ಅದಾಗಲೇ ಆದ ಹಾನಿ? ಪಾಂಢರಿ ನದಿ ಕೆಲವೊಂದೆಡೆ ತನ್ನ ಗಾತ್ರದಲ್ಲಿ ದುಪ್ಪಟ್ಟಾಗಿದೆ. ನದಿ ಕೊರೆತ ಪಾಂಢರಿಯಲ್ಲಿ ಕಳೆದ ನಾಲ್ಕಾರು ವರ್ಷಗಳಿಂದ ಆಗುತ್ತಿದೆ ಅದ್ದರಿಂದ ಸಡಿಲಗೊಂಡ ಮಣ್ಣು ಕುಸಿದು ಕಾಡು ನದಿಯ ಒಡಲು ಸೇರುತ್ತಿದೆ ಎಂಬುದು ಬೇಸರದ ಸಂಗತಿ. ಮರಳು ಸಾಗಣೆಯ ದಂಧೆ ದಾಂಡೇಲಿಯ ಮೊದಲೇ ಕಾಳಿ ನದಿ ಪಾತ್ರಕ್ಕೆ ಸೀಮಿತವಾಗಿದೆ. ದಾಂಡೇಲಿಯ ನಂತರ ಕಾಳಿ ಇಷ್ಟು ಕಲುಷಿತಗೊಂಡಿದ್ದಾಳೆಂದರೆ ಮರಳು ಮಾಫಿಯಾಕ್ಕೂ ಕಾಳಿ ದಂಡೆಯ ಮರಳು ಬೇಡವಾಗಿದೆ!

ಕಾಳಿ ಕೊಳ್ಳದಲ್ಲಿ ಕಳೆದ ೫ ವರ್ಷಗಳಿಂದ ಯಾವುದೇ ಘಟನೆಗಳು ನಡೆದಿಲ್ಲ. ಎಲ್ಲವೂ ಶಾಂತವಾಗಿದೆ. ಇದಕ್ಕೆ ಮುಖ್ಯ ಕಾರಣ ಕಾಳಿ ಬಚಾವೋ ಆಂದೋಲನ. ದಾಂಡೇಲಿಯಲ್ಲಿ ಅಣೆಕಟ್ಟನ್ನು ನಿರ್ಮಿಸುವ ಪ್ರಸ್ತಾವವನ್ನು ಸರಕಾರ ನೆನೆಗುದಿಗೆ ತಳ್ಳುವಲ್ಲಿ ಬಹಳ ಬಹಳ ಪ್ರಮುಖ ಪಾತ್ರ ವಹಿಸಿದ್ದು ಕಾಳಿ ಬಚಾವೋ ಆಂದೋಲನ.

ಕಾನೂನನ್ನು ತಿರುಚಿ ಅಥವಾ ಇನ್ನೇನಾದರೂ ಮಾಡಿ ಏನೇ ಆಗಲಿ, ಆಣೆಕಟ್ಟು ನಿರ್ಮಿಸಿಯೇ ಸಿದ್ಧ ಎಂದು ಹೊರಟಿದ್ದ ಮುರುಡೇಶ್ವರ ವಿದ್ಯುತ್ ಸಂಸ್ಥೆಗೆ ಕಾನೂನಿನ ಚೌಕಟ್ಟಿನೊಳಗಿದ್ದುಕೊಂಡೇ ಚೆಳ್ಳೆಹಣ್ಣು ತಿನ್ನಿಸಿದ್ದು ಕಾಳಿ ಬಚಾವೋ ಆಂದೋಲನ. ಈ ಅಂದೋಲನ ಜೀವಂತವಾಗಿರುವುದರಿಂದ ಸೂಪಾ ಹಿನ್ನೀರಿನ ಪ್ರದೇಶದಲ್ಲಿ ಮರಳು ಸಾಗಣೆ ದಂಧೆ ಸ್ವಲ್ಪ ಹಿಡಿತದಲ್ಲಿದೆ. ಸುಂದರ್ ಲಾಲ್ ಬಹುಗುಣರವರು ಕಾಳಿ ನದಿಯ ಪರ ಹೋರಾಟದಲ್ಲಿ ಭಾಗವಹಿಸಿ ಈ ಆಂದೋಲನದ ಬಲ ವೃದ್ಧಿಸಿದರು. ರಾಜ್ಯ ಮಟ್ಟದಲ್ಲಿ ಆಗೀಗ ಸುದ್ದಿ ಮಾಡುತ್ತಿದ್ದ ’ಕಾಳಿ’ ಈಗ ರಾಷ್ಟ್ರ ಮಟ್ಟದಲ್ಲಿ ಸುದ್ದಿ ಮಾಡತೊಡಗಿದಾಗ ಸರಕಾರ ಕಾಳಿ ಬಚಾವೋ ಆಂದೋಲನವನ್ನು ಗಂಭೀರವಾಗಿ ಪರಿಗಣಿಸಬೇಕಾಯಿತು.

ವೆಸ್ಟ್ ಕೋಸ್ಟ್ ಕಾರ್ಖಾನೆಗೆ ಈ ಕಾಳಿ ಬಚಾವೋ ಆಂದೋಲನ ಬಹು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಜನರ ತೊಂದರೆಗಳಿಗೆ ಸ್ಪಂದಿಸದೇ, ತಮ್ಮ ಕಾರ್ಖಾನೆಯ ತ್ಯಾಜ್ಯಗಳಿಂದ ಕಾಳಿ ಕೊಳ್ಳದ ಜನರ ಸ್ವಾಸ್ಥ್ಯವನ್ನು ಹದಗೆಡಿಸುತ್ತಾ, ರಾಜಕಾರಣಿಯೊಬ್ಬನನ್ನು ಜೇಬಿನೊಳಗಿಟ್ಟುಕೊಂಡು ಹಾಯಾಗಿದ್ದ ಈ ಸಂಸ್ಥೆಗೆ ತನ್ನ ಜವಾಬ್ದಾರಿಯ ಪಾಠ ಹೇಳಿಕೊಟ್ಟದ್ದು ಕಾಳಿ ಬಚಾವೋ ಆಂದೋಲನ. ಸುತ್ತಮುತ್ತಲ ಹಳ್ಳಿಗಳಲ್ಲಿ ಕಾಳಿ ನದಿಯಿಂದ ಬಾಧಿತ ಜನರನ್ನು ನೇರವಾಗಿ ಸಂಸ್ಥೆಯ ಮುಖ್ಯಸ್ಥರೊಡನೆಯೇ ಮುಖಾಮುಖಿ ಭೇಟಿ ಮಾಡಿಸಲಾಯಿತು. ಕಾಳಿ ಬಚಾವೋ ಆಂದೋಲನದ ಅಂತರ್ಜಾಲ ತಾಣದಲ್ಲಿ ಹಳ್ಳಿಗರು ತಮ್ಮ ತೊಂದರೆಗಳನ್ನು ಹೇಳಿಕೊಳ್ಳುವ ಚಿತ್ರಗಳಿವೆ.

ದಾಂಡೇಲಿಯಿಂದ ಬೆಂಗಳೂರಿಗೆ ಪಾದಯಾತ್ರೆಯನ್ನು ಮಾಡಲಾಯಿತು. ಕಾಳಿ ನದಿ ಪಾತ್ರದುದ್ದಕ್ಕೂ ಇರುವ ಹಳ್ಳಿಗಳಲ್ಲೂ ಪಾದಯಾತ್ರೆ ಮಾಡಿ ಜನರಿಗೆ ಆಂದೋಲನದ ಬಗ್ಗೆ ಮಾಹಿತಿ ನೀಡಲಾಯಿತು. ಈ ಎಲ್ಲಾ ವಿಷಯಗಳ ಬಗ್ಗೆ ಮತ್ತು ವೆಸ್ಟ್ ಕೋಸ್ಟ್ ಕಾರ್ಖಾನೆಯ ನಿರ್ಲಕ್ಷ್ಯದ ಬಗ್ಗೆ ವಿವರವಾದ ಲೇಖನಗಳು ಕಾಳಿ ಬಚಾವೋ ಆಂದೋಲನದ ಅಂತರ್ಜಾಲ ತಾಣದಲ್ಲಿದೆ. ಕಾಳಿ ಬಚಾವೋ ಆಂದೋಲನದ ಆಫೀಸುಗಳು ಶಿರಸಿ ಮತ್ತು ಬೆಂಗಳೂರಿನಲ್ಲಿವೆ.

ಕಾಳಿ ಕೊಳ್ಳವನ್ನು ಶಾಶ್ವತವಾಗಿ ಉಳಿಸಿಕೊಳ್ಳಬೇಕು. ಅದನ್ನು ರಕ್ಷಿಸುವ ಜವಾಬ್ದಾರಿಯಿರುವ ಸರಕಾರವೇ ಅದನ್ನು ಅಳಿಸುವ ಪ್ರಯತ್ನದಲ್ಲಿ ಮುಂದಾಳತ್ವ ವಹಿಸಿರುವುದು ವಿಪರ್ಯಾಸ. ಕಾಳಿ ಕೊಳ್ಳದಿಂದ ಈಗ ವಾರ್ಷಿಕ ೧೨೦೦ ಮೆಗಾವ್ಯಾಟ್ ವಿದ್ಯುತ್ತನ್ನು ಉತ್ಪಾದಿಸಲಾಗುತ್ತಿದೆ. ಸರಕಾರದ ಪ್ರಕಾರ ಕಾಳಿ ಕೊಳ್ಳದಿಂದ ಹೆಚ್ಚೆಂದರೆ ೧೭೦೦ ಮೆಗಾವ್ಯಾಟ್ ವಿದ್ಯುತ್ತನ್ನು ಉತ್ಪಾದಿಸಬಹುದು ಮತ್ತು ಆ ಇರಾದೆ ಸರಕಾರಕ್ಕೆ ಇದೆ ಕೂಡಾ. ಇನ್ನೊಂದು ಅಣೆಕಟ್ಟು ಬರಲಾರದು ಆದರೆ ಇರುವ ೪ ವಿದ್ಯುತ್ ಉತ್ಪಾದನಾ ಕೇಂದ್ರಗಳಲ್ಲಿ ವಿದ್ಯುತ್ ಘಟಕಗಳ ಸಂಖ್ಯೆ ಹೆಚ್ಚಾಗಬಹುದು.

ಕಾಳಿ ಕೊಳ್ಳದ ಅಣೆಕಟ್ಟುಗಳಿಂದ ನೆಲೆ ಕಳೆದುಕೊಂಡ ೧೫೦೦೦ ಕುಟುಂಬಗಳು ಎಲ್ಲೆಲ್ಲಿ ಹೋಗಿ ಬದುಕು ರೂಪಿಸಿಕೊಂಡಿದ್ದಾರೋ? ಇವರೆಲ್ಲರ ತ್ಯಾಗ ನಾವು ಮರೆಯಬಾರದು.