ಬುಧವಾರ, ಫೆಬ್ರವರಿ 27, 2008

ಸ್ವಾಗತ, ನಮ್ಮ ನಾಡಿಗೆ

ಸೆಪ್ಟೆಂಬರ್ ೮, ೨೦೦೭ ರಂದು ನಾಗಝರಿ ಜಲಧಾರೆ ಚಾರಣದ ಸಮಯದಲ್ಲಿ.....

ಸೋಮವಾರ, ಫೆಬ್ರವರಿ 25, 2008

ಲಕ್ಕುಂಡಿಯ ಶಿಲ್ಪ ಕಲಾ ವೈಭವ


ಲಕ್ಕುಂಡಿ ಗ್ರಾಮದೊಳಗೆ ತಿರುಗಾಡಿದರೆ ಹಿಂದಿನ ಭವ್ಯ ಇತಿಹಾಸದ ಕುರುಹುಗಳನ್ನು ಕಾಣಬಹುದು. ಇದೊಂದು ದೇವಾಲಯಗಳ ಮತ್ತು ಬಾವಿಗಳ ಊರಾಗಿತ್ತು. ಇಲ್ಲಿನ ಕೋಟೆ ೩ ಸುತ್ತಿನದಾಗಿತ್ತು. ಈಗ ಕೋಟೆಯ ೩ ಸುತ್ತುಗಳ ಗೋಡೆಯನ್ನೇ ಮನೆಗಳ ನೆಲಗಟ್ಟನ್ನಾಗಿ ಅಥವಾ ಗೋಡೆಗಳನ್ನಾಗಿ ಬಳಸಲಾಗಿದೆ. ಊರೊಳಗೆ ಸುತ್ತಾಡುವಾಗ ಆಚೀಚೆ ದೃಷ್ಟಿ ಹಾಯಿಸಿದರೆ ಕೋಟೆಯ ಗೋಡೆಗಳ ನೆಲಗಟ್ಟು ಸ್ಪಷ್ಟವಾಗಿ ಕಾಣಸಿಗುವುದು. ಕೋಟೆಯೊಳಗಿನ ಕಂದಕಗಳು ಈಗ ಮಳೆಗಾಲದ ನೀರನ್ನು ಹಾಯಿಸುವ ಮೋರಿಗಳಾಗಿವೆ. ಕಲ್ಯಾಣ ಚಾಳುಕ್ಯರು ಲಕ್ಕುಂಡಿಯ ಹೆಚ್ಚಿನ ದೇವಾಲಯಗಳನ್ನು ಕಟ್ಟಿಸಿದರು ಎನ್ನಲಾಗುತ್ತದೆ. ಈ ದೇವಾಲಯಗಳು ೧೦೮೭ರಲ್ಲಿ ಚೋಳರ ದಾಳಿಯಲ್ಲಿ ಹಾನಿಗೊಳಗಾದಾಗ, ಲಕ್ಕುಂಡಿಯನ್ನು ನಂತರ ಆಳಿದವರು ಹಾನಿಗೊಳಗಾದ ದೇವಾಲಯಗಳನ್ನು ಸರಿಪಡಿಸಿದರು.


ಒಂದೇ ಪ್ರಾಂಗಣದೊಳಗೆ ಮಣಕೇಶ್ವರ ದೇವಾಲಯ ಮತ್ತು ಮುಸುಕಿನ ಬಾವಿ ಇವೆ. ಹಿಂದೆ ಗಿಡ ಮರಗಳಿಂದ ಸುತ್ತುವರಿದು ಮುಸುಕು ಹಾಕಿದಂತೆ ಇದ್ದಿದ್ದರಿಂದ ಮುಸುಕಿನ ಬಾವಿ ಎಂಬ ಹೆಸರು. ಈ ಬಾವಿಯ ಸೌಂದರ್ಯವನ್ನು ಕಣ್ಣಾರೆ ಕಂಡು ಆನಂದಿಸಬೇಕು. ನಾವು ತೆರಳಿದಾಗ ಮುಸುಕಿನ ಬಾವಿ ನೀರಿನಿಂದ ತುಂಬಿತ್ತು. ಎಪ್ರಿಲ್-ಮೇ ತಿಂಗಳಲ್ಲಿ ತೆರಳಿದರೆ ನೀರು ಕಡಿಮೆಯಾಗಿ, ಬಾವಿಯ ಭವ್ಯ ರಚನೆಯನ್ನು ಕಾಣಬಹುದು. ನೀರು ಕಡಿಮೆಯಿರುವಾಗ ಮುಸುಕಿನ ಬಾವಿಯ ಚಿತ್ರಗಳನ್ನು ಶಾಂತಕುಮಾರ್ ಎಂಬವರು ಇಲ್ಲಿ ಹಾಕಿದ್ದಾರೆ, ನೋಡಿ. ಒಂದು ಸಾವಿರ ವರ್ಷ ಹಳೆಯದಾದ ಈ ಬಾವಿ ಇಂದಿಗೂ ತನ್ನ ಸೌಂದರ್ಯವನ್ನು ಉಳಿಸಿಕೊಂಡಿರುವುದು ಸೋಜಿಗವೆನಿಸುತ್ತದೆ. ಲಕ್ಕುಂಡಿಯ ಬಾವಿಗಳ ಪೈಕಿ ಸುಂದರವಾಗಿದ್ದು, ನೋಡಲು ಯೋಗ್ಯವಾಗಿರುವುದೆಂದರೆ ಮುಸುಕಿನ ಬಾವಿ ಮಾತ್ರ.


ಮುಸುಕಿನ ಬಾವಿಗೆ ತಾಗಿಕೊಂಡೇ ಮಣಕೇಶ್ವರ ದೇವಾಲಯವಿದೆ. ಈ ದೇವಾಲಯ ೩ ಗರ್ಭಗುಡಿಗಳನ್ನು ಹೊಂದಿದ್ದು, ಮುಖ್ಯ ಗರ್ಭಗುಡಿಯಲ್ಲಿ ಮಾತ್ರ ಶಿವಲಿಂಗವಿದೆ. ಎಡ ಮತ್ತು ಬಲದಲ್ಲಿರುವ ಗರ್ಭಗುಡಿಗಳಲ್ಲಿ ಏನೂ ಇಲ್ಲ.


ಅತ್ತಿಮಬ್ಬೆಯು ೧೫೦೦ ಜೈನ ಬಸದಿಗಳನ್ನು ನಿರ್ಮಿಸಿರುವಳು ಎಂದು ಇತಿಹಾಸದಲ್ಲಿ ಹೇಳಲಾಗಿದೆ. ಇವೆಲ್ಲಾ ಎಲ್ಲೆಲ್ಲಿ ಇವೆ ಎಂಬ ಬಗ್ಗೆ ಹೆಚ್ಚಿನ ದಾಖಲೆಗಳಿಲ್ಲ. ಲಕ್ಕುಂಡಿಯಲ್ಲಿರುವುದು ಆಕೆ ಕಟ್ಟಿಸಿದ ೧೫೦೧ನೇ ಜೈನ ಬಸದಿ. ಗರ್ಭಗುಡಿಯಲ್ಲಿ ಕರಿಕಲ್ಲಿನ ಮಹಾವೀರನ ವಿಗ್ರಹವಿದೆ. ಈ ಜಿನಾಲಯವನ್ನು ಕಲ್ಯಾಣ ಚಾಲುಕ್ಯರ ಶಿಲ್ಪಕಲಾ ಶೈಲಿಯಲ್ಲಿ ಕಟ್ಟಲಾಗಿದೆ. ಜಿನಾಲಯದ ಬಲಗಡೆ ರುಂಡವಿಲ್ಲದ ತೀರ್ಥಂಕರನ ಕಲ್ಲಿನ ಮೂರ್ತಿಯೊಂದು ಧ್ಯಾನಕ್ಕೆ ಕುಳಿತಿರುವ ರೂಪದಲ್ಲಿದೆ.

ಇಲ್ಲಿ ನಮ್ಮ ಭೇಟಿಯಾದದ್ದು ಮುತ್ತಪ್ಪ ಮುಸುಕಿನಬಾವಿ ಎಂಬ ಸಜ್ಜನರೊಂದಿಗೆ. ಇವರನ್ನು ನಮ್ಮನ್ನು ಉಳಿದ ಎಲ್ಲಾ ದೇವಾಲಯಗಳನ್ನು ತೋರಿಸುವಂತೆ ವಿನಂತಿಸಿದೆ. ನಂತರ ನಾವು ತೆರಳಿದ್ದು ಜಿನಾಲಯಕ್ಕೆ ಸಮೀಪದಲ್ಲೇ ಇರುವ ನಾಗನಾಥ ದೇವಾಲಯಕ್ಕೆ. ಸಣ್ಣ ಶಿವಲಿಂಗದ ಹಿಂದೆ ಶಿವಲಿಂಗದ ನಾಲ್ಕು ಪಟ್ಟು ದೊಡ್ಡದಿರುವ ನಾಗನ ರಚನೆ.

ಲಕ್ಕುಂಡಿ ಕೆರೆಯ ತಟದಲ್ಲಿರುವುದು ಹಾಲುಗುಂದ ಬಸವೇಶ್ವರ ದೇವಾಲಯ. ಈ ದೇವಾಲಯದೊಳಗೆ ಕಾಲಿಟ್ಟೊಡನೆ ಕಂಡುಬರುವುದು ಬೃಹದಾಕಾರದ ನಂದಿ ವಿಗ್ರಹ. ಬಲಕ್ಕೆ ಇರುವ ಗರ್ಭಗುಡಿಯಲ್ಲಿನ ಶಿವಲಿಂಗಕ್ಕೆ ಮುಖ ಮಾಡಿ ಈ ನಂದಿಯನ್ನು ಕೂರಿಸಲಾಗಿದೆ. ಎಡಕ್ಕೆ ಮತ್ತು ನೇರಕ್ಕೆ ಇರುವ ಗರ್ಭಗುಡಿಗಳಲ್ಲೂ ಶಿವಲಿಂಗಗಳಿವೆ. ಒಂದೇ ದೇವಸ್ಥಾನ. ೩ ಗರ್ಭಗುಡಿಗಳು. ಹಾಲುಗುಂದ ಬಸವೇಶ್ವರ ದೇವಸ್ಥಾನದ ಪ್ರಾಂಗಣಕ್ಕೆ ತಾಗಿಕೊಂಡೇ ಇರುವುದು 'ಮಜ್ಜಲ ಬಾವಿ'. ಈ ಬಾವಿಯ ನೀರು ಋತುಮಾನಗಳಿಗೆ ಅನುಗುಣವಾಗಿ ತನ್ನ ಬಣ್ಣವನ್ನು ಬದಲಾಯಿಸುತ್ತದೆ ಎಂಬ ಪ್ರತೀತಿ. ನಾವು ತೆರಳಿದಾಗ ಬಾವಿಯ ನೀರು ಕಪ್ಪು ಬಣ್ಣದಾಗಿತ್ತು. ಕೆಂಪು ಹಾಗೂ ನೀಲಿ ಬಣ್ಣಗಳಿಗೆ ಈ ಬಾವಿಯ ನೀರು ಬದಲಾಗುತ್ತದೆ ಎಂದು ಮುತ್ತಪ್ಪ ತಿಳಿಸಿದರು.


ಸಮೀಪದಲ್ಲೇ ಇರುವುದು ನನೇಶ್ವರ ದೇವಸ್ಥಾನ ಹಾಗೂ ಕಾಶಿ ವಿಶ್ವೇಶ್ವರ ದೇವಾಲಯ.ನನೇಶ್ವರ ದೇವಾಲಯವನ್ನು ೧೨ನೇ ಶತಮಾನದಲ್ಲಿ ನಿರ್ಮಿಸಲಾಗಿದೆ. ಮುಖಮಂಟಪ ವಿಶಾಲವಾಗಿದ್ದು ೨೦ ಕಲ್ಲಿನ ಕಂಬಗಳನ್ನು ಹೊಂದಿದೆ. ಮುಖಮಂಟಪ ದಾಟಿದರೆ ನವರಂಗ ನಂತರ ಅಂತರಾಳ ಮತ್ತು ಗರ್ಭಗುಡಿ. ಈ ದೇವಾಲಯಕ್ಕೆ ೨ ದ್ವಾರಗಳಿವೆ.


ಲಕ್ಕುಂಡಿಯ ಪ್ರಸಿದ್ಧ ದೇವಾಲಯವೆಂದರೆ ಕಾಶಿ ವಿಶ್ವೇಶ್ವರ ದೇವಾಲಯ. ಭವ್ಯವಾಗಿ ಕಾಣುವ ಈ ದೇವಾಲಯ ಕಣ್ಣು ಕುಕ್ಕುವಷ್ಟು ಸುಂದರವಾಗಿದೆ. ಶಿಲ್ಪಕಲೆಯನ್ನು ಹೊಗಳಿದಷ್ಟು ಕಡಿಮೆ. ವಿಶಿಷ್ಟ ಶೈಲಿಯಲ್ಲಿ ನಿರ್ಮಿಸಲಾಗಿರುವ ಅದ್ಭುತ ಶಿಲ್ಪಕಲೆಯ ಸುಂದರ ದೇವಾಲಯ.


ನಂತರ ನಾವು ತೆರಳಿದ್ದು ಊರಿನ ಮಧ್ಯದಲ್ಲಿರುವ ವಿರೂಪಾಕ್ಷ ದೇವಾಲಯಕ್ಕೆ. ದೇವಾಲಯದ ಅತೀ ಹತ್ತಿರದವರೆಗೆ ಅಂದರೆ ಕೇವಲ ಒಂದು ಅಡಿ ಸಮೀಪದವರೆಗೆ ವಾಹನಗಳು ಓಡಾಡುತ್ತವೆ. ಮುಂಭಾಗದಲ್ಲಿನ ಮುಖಮಂಟಪ ಬಿದ್ದುಹೋಗಿದ್ದು ತಳಪಾಯ ಮಾತ್ರ ಉಳಿದಿದೆ. ಈ ತಳಪಾಯದ ಮೇಲೆ ಕುಳಿತು ಹರಟೆ ಹೊಡೆಯುತ್ತಾ ಕಾಲ ಕಳೆಯುತ್ತಾರೆ ಲಕ್ಕುಂಡಿಯ ಜನರು. ಮಕ್ಕಳಿಗಂತೂ ಇದೊಂದು ಕಣ್ಣಾಮುಚ್ಚಾಲೆ ಆಟ ಆಡಲು ಯೋಗ್ಯವಾದ ಸ್ಥಳವಾಗಿದೆ. ಮುತ್ತಪ್ಪನವರಲ್ಲಿ ಈ ಬಗ್ಗೆ ಕೇಳಿದರೆ, 'ಈ ದೇವಾಲಯವನ್ನು ಸರಕಾರ ತನ್ನ ವಶಕ್ಕೆ ತೆಗೆದುಕೊಂಡಿಲ್ಲ' ಎಂಬ ನಿರ್ಲಿಪ್ತ ಉತ್ತರ ನೀಡಿದರು. ಅಲ್ಲೇ ಸಮೀಪದಲ್ಲಿ ರಸ್ತೆಯ ಮತ್ತೊಂದು ಬದಿಯಲ್ಲಿ ಮನೆಗಳ ಸಾಲುಗಳ ಹಿಂದೆ ಮರೆಯಾದಂತೆ ಕಾಣುತ್ತಿತ್ತು ಮಲ್ಲಿಕಾರ್ಜುನ ದೇವಾಲಯ. ಇದರ ಸ್ಥಿತಿಯೂ ವಿರೂಪಾಕ್ಷ ದೇವಾಲಯದಂತೇ!

ಕೊನೆಯದಾಗಿ ಭೇಟಿ ನೀಡಿದ್ದು ಕುಂಬಾರೇಶ್ವರ ದೇವಾಲಯಕ್ಕೆ. ಇದನ್ನು ಸರಕಾರ ತನ್ನ ವಶಕ್ಕೆ ಪಡೆದಿದೆ ಎನ್ನುತ್ತಾ ಮುತ್ತಪ್ಪ ನಮ್ಮನ್ನು ದೇವಾಲಯದ ಸಮೀಪ ಕರೆದೊಯ್ದರು. ದೇವಾಲಯಕ್ಕೆ ಎಷ್ಟು ಸಮೀಪವೋ ಅಷ್ಟು ಸಮೀಪದವರೆಗೆ ಮನೆ ಮಾಡಿಕೊಂಡಿದ್ದಾರೆ ಲಕ್ಕುಂಡಿಯ ಜನರು. ಈ ದೇವಸ್ಥಾನದ ಒಂದು ಹೊರಗೋಡೆಯೇ ಮನೆಯೊಂದರ ಒಳಗೋಡೆ! ದೇವಾಲಯದ ಬಾಗಿಲಿನ ಎಡಕ್ಕೆ ಆಡೊಂದನ್ನು ಕಟ್ಟಲಾಗಿದ್ದರೆ ಬಲಕ್ಕೆ ದನವೊಂದು ಮತ್ತದರ ಕರುವನ್ನು ಕಟ್ಟಲಾಗಿತ್ತು. ಅಲ್ಲೇ ಸಮೀಪ ಅವುಗಳ ಆಹಾರವಾಗಿ ಬೈಹುಲ್ಲು. ಸೆಗಣಿ ರಾಶಿ. ಸರಕಾರ ತನ್ನ ವಶಕ್ಕೆ ಪಡೆದ ಕುಂಬಾರೇಶ್ವರ ದೇವಾಲಯದ ಪರಿಸ್ಥಿತಿ, ಸರಕಾರದ ವಶದಲ್ಲಿರದ ವಿರೂಪಾಕ್ಷ ದೇವಾಲಯಗಿಂತ ಕಡೆ. ಯಾರ ವಶದಲ್ಲಿದ್ದು ಏನು ಪ್ರಯೋಜನ?ಮಾಹಿತಿ: ಮಹೇಶ ಮನಯ್ಯನವರಮಠ

ಸೋಮವಾರ, ಫೆಬ್ರವರಿ 18, 2008

ಅಮೃತೇಶ್ವರ ದೇವಾಲಯ - ಅಣ್ಣಿಗೇರಿ


ಇಸವಿ ೯೦೨ ರಲ್ಲಿ ಆದಿ ಕವಿ ಪಂಪ ಹುಟ್ಟಿದ ಸ್ಥಳವೇ ಈ ಅಣ್ಣಿಗೇರಿ. ಕಳಚೂರಿ ವಂಶದ ದೊರೆ ಬಿಜ್ಜಳನ ಹಾಗೂ ಪಶ್ಚಿಮ ಚಾಲುಕ್ಯ ದೊರೆ ನಾಲ್ಕನೇ ಸೋಮೇಶ್ವರನ ರಾಜಧಾನಿಯಾಗಿಯೂ ಮತ್ತು ಹೊಯ್ಸಳ ದೊರೆ ವೀರ ಬಲ್ಲಾಳನ ಉಪರಾಜಧಾನಿಯಾಗಿಯೂ ಅಣ್ಣಿಗೇರಿ ಪ್ರಸಿದ್ಧಿ ಪಡೆದಿತ್ತು. ಬೆಳವಲನಾಡಿನ ಕೇಂದ್ರ ಕೂಡಾ ಅಣ್ಣಿಗೇರಿಯಾಗಿತ್ತು. ಪ್ರಾಚೀನ ಶಾಸನಗಳಲ್ಲಿ ದಕ್ಷಿಣದ ವಾರಣಾಸಿ ಎಂದೇ ಈ ಊರನ್ನು ಉಲ್ಲೇಖಿಸಲಾಗಿದೆ. ಇಲ್ಲಿ ೨೫ ಶಿಲಾಶಾಸನಗಳು ದೊರಕಿವೆ. ಇವುಗಳಲ್ಲಿ ಇಸವಿ ೭೫೦ರ ದಿನಾಂಕ ಇರುವ ಬದಾಮಿ ಚಾಲುಕ್ಯ ದೊರೆ ಎರಡನೇ ಕೀರ್ತಿವರ್ಮನ ಆಳ್ವಿಕೆಯ ಸಮಯದ ಶಾಸನವೇ ಹಳೆದು. ಶಾಸನಗಳಲ್ಲಿ ಈ ಊರನ್ನು ’ಅನ್ಯತತಾಕ’ ಎಂದೂ ಕರೆಯಲಾಗಿದೆ.


ಅಣ್ಣಿಗೇರಿಯೊಳಗೆ ತಿರುವು ಪಡೆದು ಕಿರಿದಾದ ಅಂಕುಡೊಂಕಾಗಿರುವ ರಸ್ತೆಯಲ್ಲಿ ಊರೊಳಗೆ ತೆರಳಿದರೆ ಭವ್ಯ ಅಮೃತೇಶ್ವರ ದೇವಾಲಯ ಕಾಣಬರುವುದು. ಪೂರ್ವಾಭಿಮುಖವಾಗಿರುವ ಈ ದೇವಾಲಯ ಪಶ್ಚಿಮ ಚಾಲುಕ್ಯ ದೊರೆ ಒಂದನೇ ಸೋಮೇಶ್ವರನ ಆಳ್ವಿಕೆಯ ಸಮಯದಲ್ಲಿ ಇಸವಿ ೧೦೫೦ರಲ್ಲಿ ನಿರ್ಮಾಣಗೊಂಡಿತು. ದೇವಾಲಯವನ್ನು ರಾಷ್ಟ್ರೀಯ ಸ್ಮಾರಕವನ್ನಾಗಿ ಘೋಷಣೆ ಮಾಡಲಾಗಿರುವುದರಿಂದ ಅಣ್ಣಿಗೇರಿ ಬೆಳೆದರೂ ದೇವಾಲಯದ ಪ್ರಾಂಗಣ ಒತ್ತುವರಿಯಿಂದ ಮುಕ್ತವಾಗಿದೆ.


ಕಪ್ಪು ಕಲ್ಲಿನಿಂದ ನಿರ್ಮಿಸಲಾಗಿರುವ ಈ ದೇವಾಲಯದ ಛಾವಣಿ ೭೬ ಕಂಬಗಳ ಅಧಾರದಲ್ಲಿ ನಿಂತಿದೆ. ದೇವಾಲಯದ ಪ್ರಾಂಗಣದೊಳಗೆ ಪ್ರವೇಶಿಸಲು ಅಕ್ಕ ಪಕ್ಕದಲ್ಲೇ ೨ ದ್ವಾರಗಳಿವೆ. ಒಂದು ದ್ವಾರದ ಪ್ರವೇಶದಲ್ಲಿರುವ ಜಗಲಿಯಲ್ಲಿ ೨ ಕಲ್ಲಿನ ಕಂಬಗಳನ್ನಿರಿಸಲಾಗಿರುವುದರಿಂದ ಬಗ್ಗಿಕೊಂಡೇ ಒಳಗೆ ಪ್ರವೇಶಿಸಬೇಕು.


ಪಶ್ಚಿಮ ಚಾಲುಕ್ಯರ ವಾಸ್ತುಶೈಲಿಯನ್ನು ಹೊಂದಿರುವ ಈ ದೇವಾಲಯ ಗರ್ಭಗುಡಿ, ಅಂತರಾಳ, ನವರಂಗ, ವಿಶಾಲ ಸಭಾಮಂಟಪ ಮತ್ತು ಮುಖಮಂಟಪಗಳನ್ನು ಹೊಂದಿದೆ. ಇಲ್ಲಿರುವ ಒಂದು ವೈಶಿಷ್ಟ್ಯವೆಂದರೆ ಏಕಕೂಟ ದೇವಾಲಯವಾದರೂ ಎರಡು ಶಿಖರಗಳ ಉಪಸ್ಥಿತಿ. ಗರ್ಭಗುಡಿಯ ಗೋಪುರ, ಮುಖಮಂಟಪದ ಗೋಪುರಕ್ಕಿಂತ ಎತ್ತರವಿದ್ದು ಆಕರ್ಷಕ ಶಿಲ್ಪಕಲೆಯನ್ನು ಹೊಂದಿದೆ.


ಅಲ್ಲಿದ್ದ ಪ್ರಾಚ್ಯ ವಸ್ತು ಇಲಾಖೆ ಸಿಬ್ಬಂದಿ ನನಗೆ ದೇವಾಲಯದ ಒಳಗಡೆ ಚಿತ್ರಗಳನ್ನು ತೆಗೆಯಲು ಅನುಮತಿ ನೀಡಲಿಲ್ಲ. ಆತ ಅಲ್ಲಿರದಿರುವಾಗ ಚಿತ್ರಗಳನ್ನು ತೆಗೆಯಲಾಗುತ್ತದೆ. ಗರ್ಭಗುಡಿಯಲ್ಲಿ ಸ್ವಯಂಭೂ ಶಿವಲಿಂಗವಿದೆ ಮತ್ತು ದ್ವಾರದ ಲಲಾಟದಲ್ಲಿ ಗಜಲಕ್ಷ್ಮೀಯನ್ನು ಕಾಣಬಹುದು. ಅಂತರಾಳದ ದ್ವಾರವು ಪಂಚಶಾಖೆಗಳಿಂದ ಅಲಂಕೃತಗೊಂಡಿದ್ದು ಜಾಲಂಧ್ರಗಳನ್ನು ಮತ್ತು ಗಜಲಕ್ಷ್ಮೀಯನ್ನು ಹೊಂದಿದೆ. ನವಶಾಖೆಗಳಿರುವ ನವರಂಗದ ದ್ವಾರ (ದೇವಾಲಯದ ಮುಖ್ಯ ದ್ವಾರ) ಈ ದೇವಾಲಯದ ಪ್ರಮುಖ ಆಕರ್ಷಣೆ. ಪ್ರತಿ ಶಾಖೆಯಲ್ಲೂ ಅದ್ಭುತ ಕೆತ್ತನೆಗಳನ್ನು ಹೊಂದಿರುವ ಈ ದ್ವಾರ ಆಸಕ್ತರ ಮನಸೂರೆಗೊಳ್ಳುವುದರಲ್ಲಿ ಸಂಶಯವೇ ಇಲ್ಲ.


ಆರು ಕಂಬಗಳ ಸುಂದರ ಮುಖಮಂಟಪವನ್ನು ದಾಟಿ ಒಳಬಂದರೆ ನವರಂಗ. ನವರಂಗದ ಎಡಕ್ಕೆ ಅಂತರಾಳ ಮತ್ತು ಗರ್ಭಗುಡಿಗಳಿದ್ದರೆ ಬಲಕ್ಕಿರುವ ದ್ವಾರದ ಮೂಲಕ ಒಳಹೊಕ್ಕರೆ ವಿಶಾಲ ಸಭಾಮಂಟಪ. ಸಭಾಮಂಟಪವು ವಿಶಾಲವಾಗಿದ್ದರೂ ತುಂಬಾನೇ ಸರಳವಾಗಿದ್ದು ನಂದಿಯೂ ಇಲ್ಲೇ ಆಸೀನನಾಗಿದ್ದಾನೆ. ಮೂಲ ದೇವಾಲಯ ನಿರ್ಮಾಣಗೊಂಡ ನಂತರದ ವರ್ಷಗಳಲ್ಲಿ ನಿರ್ಮಾಣಗೊಂದಿರುವ ಸಭಾಮಂಟಪ, ನಾಲ್ಕು ದಿಕ್ಕೂಗಳಲ್ಲೂ ಸುಂದರ ದ್ವಾರಗಳನ್ನು ಹೊಂದಿದೆ.


ಗರ್ಭಗುಡಿಯ ಹೊರಗೋಡೆಯಲ್ಲಿ ಮಕರತೋರಣಗಳ ಮತ್ತು ಗೋಪುರಗಳ ಕೆತ್ತನೆಯಿದೆ. ಇರುವ ಮೂರು ದೇವಕೋಷ್ಠಗಳ ಒಳಗಿದ್ದ ಮೂರ್ತಿಗಳು ಕಣ್ಮರೆಯಾಗಿವೆ. ಈ ದೇವಕೋಷ್ಠಗಳಿಗೆ ಕೆತ್ತಲಾಗಿರುವ ಗೋಪುರಗಳು ಆಕರ್ಷಕವಾಗಿವೆ. ದೇವಾಲಯದ ಪ್ರಾಂಗಣದೊಳಗೆ ಗಣೇಶನ ದೇವಾಲಯವಿದೆ ಹಾಗೂ ಸಣ್ಣ ಪುಷ್ಕರಿಣಿಯಿದೆ.

ಮಾಹಿತಿ: ಮಹೇಶ ಮನಯ್ಯನವರಮಠ, ಎ.ಲೋಕೇಶಪ್ಪ ಹಾಗೂ ಪ್ರಾಚ್ಯ ವಸ್ತು ಇಲಾಖೆ.

ಬುಧವಾರ, ಫೆಬ್ರವರಿ 13, 2008

ಸೋಮೇಶ್ವರ ದೇವಾಲಯ - ಹರಳಹಳ್ಳಿ


ನಿರ್ಮಾತೃ: ಪಶ್ಚಿಮ ಚಾಳುಕ್ಯರು (ಕಲ್ಯಾಣಿ ಚಾಳುಕ್ಯರು) - ಪಶ್ಚಿಮ ಚಾಳುಕ್ಯ ವಂಶದ ಯಾವ ದೊರೆ ಹರಳಹಳ್ಳಿಯ ದೇವಾಲಯವನ್ನು ನಿರ್ಮಿಸಿದನು ಎಂಬ ಮಾಹಿತಿ ನನಗೆ ದೊರಕಲಿಲ್ಲ. ತಿಳಿದವರು ಈ ಮಾಹಿತಿ ನೀಡಿದರೆ ತುಂಬಾ ಉಪಕಾರವಾಗುವುದು.


ಇದು ಕಲ್ಯಾಣ ಚಾಲುಕ್ಯರ ಕಾಲದ ದೇವಾಲಯ. ಸಿಕ್ಕಿರುವ ಶಾಸನಗಳಲ್ಲಿ ಹರಳಹಳ್ಳಿಯನ್ನು 'ವಿಕ್ರಮಪುರ' ಎಂದು ಉಲ್ಲೇಖಿಸಲಾಗಿದೆ. ತುಂಗಭದ್ರಾ ನದಿಯ ತಟದಲ್ಲಿರುವ ಈ ದೇವಾಲಯವನ್ನು ಭಾರತೀಯ ಪುರಾತತ್ವ ಇಲಾಖೆ ತನ್ನ ಸುಪರ್ದಿಗೆ ತೆಗೆದುಕೊಂಡಿದ್ದು, ಸುತ್ತಲು ಚಪ್ಪಡಿ ಕಲ್ಲು ಹಾಸುವ ಕೆಲಸ ನಡೆಯುತ್ತಿದೆ. ನದಿಯಲ್ಲಿ ಆಗಾಗ ನೆರೆ ಬರುವುದರಿಂದ ಹರಳಹಳ್ಳಿಯ ಹಳ್ಳಿಗರಿಗೆ ಬೇರೆಡೆ ವಸತಿ ಸೌಕರ್ಯವನ್ನು ನೀಡಲಾಗಿದೆ. ಆದರೂ ಕೆಲವರು ಅಲ್ಲೇ ದೇವಸ್ಥಾನದ ಎದುರಿಗೇ ಮನೆ ಮಾಡಿಕೊಂಡು ವಾಸವಾಗಿದ್ದಾರೆ. ಸರಿಯಾದ ಸಮಯಕ್ಕೆ ಭಾರತೀಯ ಪುರಾತತ್ವ ಇಲಾಖೆ ಎಚ್ಚೆತ್ತುಕೊಂಡಿದೆ. ಇನ್ನು ಸ್ವಲ್ಪ ತಡವಾಗಿದ್ದಲ್ಲಿ ಈ ಸುಂದರ ದೇವಾಲಯದ ಅತಿ ಸಮೀಪದವರೆಗೆ ಮನೆಗಳಾಗುತ್ತಿದ್ದವು.


ದೇವಾಲಯವು ೩ ಗರ್ಭಗುಡಿಗಳನ್ನು ಹೊಂದಿದ್ದು, ೩ ಗರ್ಭಗುಡಿಗಳಿಗೂ ಗೋಪುರಗಳಿವೆ ಮತ್ತು ಎಲ್ಲಾ ಗರ್ಭಗುಡಿಗಳಲ್ಲೂ ಶಿವಲಿಂಗವಿದೆ. ದೇವಸ್ಥಾನದ ನವರಂಗ ಸಣ್ಣದಾಗಿರುವುದರಿಂದ ಇದರ ಮುಖಮಂಟಪವೂ ಸಣ್ಣದಿದೆ. ಈ ನವರಂಗಕ್ಕೆ ಒಂದೇ ದ್ವಾರ ಮತ್ತು ಇದು ದೇವಾಲಯದ ಪ್ರಮುಖ ದ್ವಾರವೂ ಹೌದು.


ಈ ದೇವಾಲಯದಲ್ಲೊಂದು ವೈಶಿಷ್ಟ್ಯವಿದೆ. ಅದೆಂದರೆ ಪ್ರದಕ್ಷಿಣಾ ಪಥ. ಪ್ರಾಚೀನ ದೇವಾಲಯಗಳಲ್ಲಿ ಇದು ಬಹಳ ವಿರಳವಾಗಿ ಕಾಣಬರುತ್ತದೆ. ಮುಖಮಂಟಪದಿಂದ ಒಳಗೆ ಕಾಲಿಟ್ಟರೆ ಪ್ರದಕ್ಷಿಣಾ ಪಥ, ನವರಂಗ ಮತ್ತು ೩ ಗರ್ಭಗುಡಿಗಳು. ನವರಂಗದಲ್ಲಿ ದಿಕ್ಕಿಗೊಂದರಂತೆ ೪ ಬಾಗಿಲುಗಳಿವೆ. ಈ ಎಲ್ಲಾ ಬಾಗಿಲುಗಳು ನೇರವಾಗಿ ಸುತ್ತಲೂ ಇರುವ ಪ್ರದಕ್ಷಿಣಾ ಪಥಕ್ಕೆ ತೆರೆದುಕೊಳ್ಳುತ್ತವೆ. ಹಾಗೇನೇ ಪ್ರದಕ್ಷಿಣಾ ಪಥದಿಂದ ೪ ಬಾಗಿಲುಗಳು ತೆರೆದುಕೊಳ್ಳುತ್ತವೆ - ೩ ಗರ್ಭಗುಡಿಗಳಿಗೆ ಮತ್ತು ನಾಲ್ಕನೇಯದು ದೇವಾಲಯದ ಹೊರಗೆ/ಒಳಗೆ ಪ್ರವೇಶಿಸಲು.


ದೇವಾಲಯದ ಕೆತ್ತನೆ ಕೆಲಸ ಅದ್ಭುತ. ನವರಂಗದ ಜಗುಲಿಯ ಹೊರಭಾಗದ ಮೇಲೆ ಮಿಥುನ ಶಿಲ್ಪಗಳೂ ಇದ್ದವು. ಉಳಿದಂತೆ ೩ ಗೋಪುರಗಳ ರಚನೆ ಸುಂದರವಾಗಿದೆ ಮತ್ತು ಅವುಗಳ ಮೇಲಿನ ಶಿಲ್ಪಕಲೆ ಕೂಡಾ. ಪ್ರಮುಖ ಗರ್ಭಗುಡಿಯ ಗೋಪುರದ ಹಿಂಭಾಗ ಮಿಂಚು/ಸಿಡಿಲು ಬಡಿದು ಹಾನಿಗೊಳಗಾಗಿದೆ.

ಮಾಹಿತಿ: ಪ್ರದೀಪ ಸಾಲಗೇರಿ

ಸೋಮವಾರ, ಫೆಬ್ರವರಿ 11, 2008

ಗಳಗೇಶ್ವರ ದೇವಾಲಯ - ಗಳಗನಾಥ


ನಿರ್ಮಾತೃ: ಐದನೇ ಪಶ್ಚಿಮ ಚಾಳುಕ್ಯ ದೊರೆ ಒಂದನೇ ಸೋಮೇಶ್ವರ (೧೦೪೨-೧೦೬೮)
ಗಳಗೇಶ್ವರ ದೇವಾಲಯವಿರುವುದರಿಂದ ಗಳಗನಾಥ ಎಂಬ ಹೆಸರು ಊರಿಗೆ. ಕನ್ನಡ ಕಾದಂಬರಿಗಳ ಪಿತಾಮಹ ಎಂದು ಕರೆಯಲಾಗುತ್ತಿದ್ದ ಗಳಗನಾಥರ ಹುಟ್ಟೂರು ಕೂಡಾ ಈ ಊರೇ. ಹಳ್ಳಿಯಲ್ಲಿ ಇನ್ನೊಂದು ಕಿಮಿ ಚಲಿಸಿ ತುಂಗಭದ್ರಾ ನದಿಯ ದಂಡೆಗೆ ಬಂದರೆ ಭವ್ಯವಾದ ಗಳಗೇಶ್ವರ ದೇವಾಲಯ. ನದಿ ತಟದ ಪ್ರಶಾಂತ ಮತ್ತು ಸುಂದರ ಪರಿಸರದಲ್ಲಿ ಊಟ ಮುಗಿಸಿ ನಂತರ ದೇವಾಲಯ ನೋಡಲು ತೆರಳಿದೆ.


ತುಂಗಭದ್ರಾ ನದಿ ತಟದಲ್ಲಿ ಎತ್ತರದ ಅಧಿಷ್ಠಾನದ ಮೇಲೆ ಗಳಗೇಶ್ವರ ದೇವಾಲಯವನ್ನು ನಿರ್ಮಿಸಲಾಗಿದೆ. ನೋಡಲು ಅತ್ಯಾಕರ್ಷಕವಾಗಿರುವ ದೇವಸ್ಥಾನ. ಶಿಲ್ಪಕಲೆಯಲ್ಲಿ ಅಷ್ಟೇನೂ ವೈಶಿಷ್ಟ್ಯತೆಯಿರದಿದ್ದರೂ, ದೇವಾಲಯದ ಆಕಾರ ಮತ್ತು ಗರ್ಭಗುಡಿಯ ಮೇಲಿನ ಗೋಪುರದ ನಿರ್ಮಾಣ ಶೈಲಿ ಬೆರಗುಗೊಳಿಸುತ್ತವೆ.


ಹನ್ನೊಂದನೇ ಶತಮಾನದಲ್ಲಿ ನಿರ್ಮಾಣಗೊಂಡ ಈ ದೇವಾಲಯ ಚಾಳುಕ್ಯ ಶೈಲಿಯಲ್ಲಿದೆ. ಗರ್ಭಗುಡಿ ಮತ್ತು ವಿಶಾಲವಾದ ಅಂತರಾಳವನ್ನು ಹೊಂದಿರುವ ಈ ದೇವಾಲಯವನ್ನು ಪ್ರವಾಹದಿಂದ ಹಾನಿಯಾಗದಿರಲಿ ಎಂದು ಎತ್ತರವಾದ ಅಧಿಷ್ಠಾನದ ಮೇಲೆ ಭವ್ಯವಾಗಿ ನಿರ್ಮಿಸಲಾಗಿದೆ. ನಕ್ಷತ್ರಾಕಾರದ ಅಡಿಪಾಯ ಮೇಲಕ್ಕೆ ಹೋದಂತೆ ಕಿರಿದಾಗುತ್ತಾ ಹೋಗುವುದು. ನವರಂಗವು ವಿಶಾಲವಾಗಿರುವುದರಿಂದ ಮುಖಮಂಟಪವೂ ವಿಶಾಲವಾಗಿದ್ದು ಬಹಳ ಸುಂದರವಾಗಿದೆ. ನವರಂಗವನ್ನು ೩ ಕಡೆಗಳಿಂದ ಪ್ರವೇಶಿಸಬಹುದು. ಈ ದೇವಾಲಯದಲ್ಲಿ ೨ ನಂದಿ ಮೂರ್ತಿಗಳಿವೆ. ನವರಂಗದಲ್ಲೊಂದು ದೊಡ್ಡ ನಂದಿ ವಿಗ್ರಹವಿದ್ದರೆ ದೇವಾಲಯದ ಹೊರಗಡೆ ಅಂದರೆ ನವರಂಗದ ಮುಖ್ಯ ದ್ವಾರದ ಮುಂದೆ ಸಣ್ಣ ಸ್ತಂಭದ ಮೇಲೆ ಮತ್ತೊಂದು ನಂದಿಯ ಮೂರ್ತಿಯನ್ನು ಇರಿಸಲಾಗಿದೆ.


ಇಲ್ಲಿ ಎಲ್ಲವೂ ದೊಡ್ಡ ಆಕಾರದ್ದೇ! ನವರಂಗದಲ್ಲಿ ೪ ದೊಡ್ಡ ಗಾತ್ರದ ಚಾಳುಕ್ಯ ಕಾಲದ ಕಂಬಗಳಿವೆ. ನವರಂಗದಲ್ಲಿರುವ ನಂದಿ ಬೃಹತ್ ಆಕಾರದ್ದು. ನಂತರ ದೇವಾಲಯದ ಬಾಗಿಲು ೧೨ ಅಡಿ ಎತ್ತರವಿದೆ. ಬಾಗಿಲಿನೊಳಗೆ ಕಾಲಿರಿಸಿದರೆ ಅಂತರಾಳದಲ್ಲಿ ೫ ಅಡಿ ಎತ್ತರವಿರುವ ವಿಷ್ಣು, ಗಣಪತಿ ಮತ್ತು ಸೂರ್ಯನ ಶಿಲ್ಪಗಳಿವೆ. ನಂತರ ಮುಂದೆ ಗರ್ಭಗುಡಿಯಲ್ಲಿ ಸುಮಾರು ಎರಡುವರೆ ಅಡಿ ಎತ್ತರವಿರುವ ಶಿವಲಿಂಗ. ಇಲ್ಲಿ ದೊರಕಿರುವ ಕೆಲವು ಶಾಸನಗಳಲ್ಲಿ ನದಿಯ ರೇಖಾಚಿತ್ರಗಳಿವೆ. ಇಲ್ಲೆ ಸಮೀಪದಲ್ಲಿ ಮಲ್ಲೇಶ್ವರ, ಹೊನ್ನೇಶ್ವರ ಮತ್ತು ದತ್ತಾತ್ರೇಯ ಗುಡಿಗಳಿದ್ದು ಇವುಗಳಲ್ಲಿ ಹೊನ್ನೇಶ್ವರ ಮತ್ತು ದತ್ತಾತ್ರೇಯ ಗುಡಿಗಳು ಒತ್ತುವರಿಗೆ ಗುರಿಯಾಗಿವೆ.


ದೇವಸ್ಥಾನದ ನವರಂಗದಲ್ಲಿ ಕುಳಿತುಕೊಂಡರೆ ಅದೊಂದು ಸುಂದರ ದೃಶ್ಯ. ಮುಂದೆ ವಿಶಾಲವಾಗಿ ಹರಿಯುವ ತುಂಗಭದ್ರಾ ನದಿ. ಬೀಸುವ ತಣ್ಣನೆಯ ಗಾಳಿ. ಅಲ್ಲಿಂದ ಎದ್ದು ಬರಲು ಮನಸೇ ಆಗುತ್ತಿರಲಿಲ್ಲ. ಆ ದಿನ ನಾನು ಭೇಟಿ ನೀಡಿದ ಎಲ್ಲಾ ಸ್ಥಳಗಳಲ್ಲಿ ನನಗೆ ಬಹಳ ಇಷ್ಟವಾದದ್ದು ಗಳಗನಾಥದ ಗಳಗೇಶ್ವರ ದೇವಾಲಯ. ಶಿಲ್ಪಕಲೆಯಲ್ಲಿ ಕೊಂಡಾಡುವಷ್ಟು ಏನೂ ವೈಶಿಷ್ಟ್ಯವಿಲ್ಲದಿದ್ದರೂ, ದೇವಾಲಯದ ಆಕಾರ, ೨ ನಂದಿಗಳಿರುವ ವಿಶೇಷ ಮತ್ತು ಎಲ್ಲದಕ್ಕೂ ಮಿಗಿಲಾಗಿ ಶತಮಾನಗಳಿಂದಲೂ ದೇವಾಲಯದ ಮುಂದೆ ಹರಿಯುತ್ತಿರುವ ತುಂಗಭದ್ರಾ ನದಿಯ ಮೋಹಕ ದೃಶ್ಯ; ಇವೆಲ್ಲವನ್ನೂ ಪರಿಗಣಿಸಿದರೆ ಇಂತಹ ಸ್ಥಳ ಮತ್ತೊಂದಿರಲಾರದು.

ಮಾಹಿತಿ: ಅಮೃತ್ ಜೋಗಿ