ಸೋಮವಾರ, ಫೆಬ್ರವರಿ 18, 2008

ಅಮೃತೇಶ್ವರ ದೇವಾಲಯ - ಅಣ್ಣಿಗೇರಿ


ಇಸವಿ ೯೦೨ ರಲ್ಲಿ ಆದಿ ಕವಿ ಪಂಪ ಹುಟ್ಟಿದ ಸ್ಥಳವೇ ಈ ಅಣ್ಣಿಗೇರಿ. ಕಳಚೂರಿ ವಂಶದ ದೊರೆ ಬಿಜ್ಜಳನ ಹಾಗೂ ಪಶ್ಚಿಮ ಚಾಲುಕ್ಯ ದೊರೆ ನಾಲ್ಕನೇ ಸೋಮೇಶ್ವರನ ರಾಜಧಾನಿಯಾಗಿಯೂ ಮತ್ತು ಹೊಯ್ಸಳ ದೊರೆ ವೀರ ಬಲ್ಲಾಳನ ಉಪರಾಜಧಾನಿಯಾಗಿಯೂ ಅಣ್ಣಿಗೇರಿ ಪ್ರಸಿದ್ಧಿ ಪಡೆದಿತ್ತು. ಬೆಳವಲನಾಡಿನ ಕೇಂದ್ರ ಕೂಡಾ ಅಣ್ಣಿಗೇರಿಯಾಗಿತ್ತು. ಪ್ರಾಚೀನ ಶಾಸನಗಳಲ್ಲಿ ದಕ್ಷಿಣದ ವಾರಣಾಸಿ ಎಂದೇ ಈ ಊರನ್ನು ಉಲ್ಲೇಖಿಸಲಾಗಿದೆ. ಇಲ್ಲಿ ೨೫ ಶಿಲಾಶಾಸನಗಳು ದೊರಕಿವೆ. ಇವುಗಳಲ್ಲಿ ಇಸವಿ ೭೫೦ರ ದಿನಾಂಕ ಇರುವ ಬದಾಮಿ ಚಾಲುಕ್ಯ ದೊರೆ ಎರಡನೇ ಕೀರ್ತಿವರ್ಮನ ಆಳ್ವಿಕೆಯ ಸಮಯದ ಶಾಸನವೇ ಹಳೆದು. ಶಾಸನಗಳಲ್ಲಿ ಈ ಊರನ್ನು ’ಅನ್ಯತತಾಕ’ ಎಂದೂ ಕರೆಯಲಾಗಿದೆ.


ಅಣ್ಣಿಗೇರಿಯೊಳಗೆ ತಿರುವು ಪಡೆದು ಕಿರಿದಾದ ಅಂಕುಡೊಂಕಾಗಿರುವ ರಸ್ತೆಯಲ್ಲಿ ಊರೊಳಗೆ ತೆರಳಿದರೆ ಭವ್ಯ ಅಮೃತೇಶ್ವರ ದೇವಾಲಯ ಕಾಣಬರುವುದು. ಪೂರ್ವಾಭಿಮುಖವಾಗಿರುವ ಈ ದೇವಾಲಯ ಪಶ್ಚಿಮ ಚಾಲುಕ್ಯ ದೊರೆ ಒಂದನೇ ಸೋಮೇಶ್ವರನ ಆಳ್ವಿಕೆಯ ಸಮಯದಲ್ಲಿ ಇಸವಿ ೧೦೫೦ರಲ್ಲಿ ನಿರ್ಮಾಣಗೊಂಡಿತು. ದೇವಾಲಯವನ್ನು ರಾಷ್ಟ್ರೀಯ ಸ್ಮಾರಕವನ್ನಾಗಿ ಘೋಷಣೆ ಮಾಡಲಾಗಿರುವುದರಿಂದ ಅಣ್ಣಿಗೇರಿ ಬೆಳೆದರೂ ದೇವಾಲಯದ ಪ್ರಾಂಗಣ ಒತ್ತುವರಿಯಿಂದ ಮುಕ್ತವಾಗಿದೆ.


ಕಪ್ಪು ಕಲ್ಲಿನಿಂದ ನಿರ್ಮಿಸಲಾಗಿರುವ ಈ ದೇವಾಲಯದ ಛಾವಣಿ ೭೬ ಕಂಬಗಳ ಅಧಾರದಲ್ಲಿ ನಿಂತಿದೆ. ದೇವಾಲಯದ ಪ್ರಾಂಗಣದೊಳಗೆ ಪ್ರವೇಶಿಸಲು ಅಕ್ಕ ಪಕ್ಕದಲ್ಲೇ ೨ ದ್ವಾರಗಳಿವೆ. ಒಂದು ದ್ವಾರದ ಪ್ರವೇಶದಲ್ಲಿರುವ ಜಗಲಿಯಲ್ಲಿ ೨ ಕಲ್ಲಿನ ಕಂಬಗಳನ್ನಿರಿಸಲಾಗಿರುವುದರಿಂದ ಬಗ್ಗಿಕೊಂಡೇ ಒಳಗೆ ಪ್ರವೇಶಿಸಬೇಕು.


ಪಶ್ಚಿಮ ಚಾಲುಕ್ಯರ ವಾಸ್ತುಶೈಲಿಯನ್ನು ಹೊಂದಿರುವ ಈ ದೇವಾಲಯ ಗರ್ಭಗುಡಿ, ಅಂತರಾಳ, ನವರಂಗ, ವಿಶಾಲ ಸಭಾಮಂಟಪ ಮತ್ತು ಮುಖಮಂಟಪಗಳನ್ನು ಹೊಂದಿದೆ. ಇಲ್ಲಿರುವ ಒಂದು ವೈಶಿಷ್ಟ್ಯವೆಂದರೆ ಏಕಕೂಟ ದೇವಾಲಯವಾದರೂ ಎರಡು ಶಿಖರಗಳ ಉಪಸ್ಥಿತಿ. ಗರ್ಭಗುಡಿಯ ಗೋಪುರ, ಮುಖಮಂಟಪದ ಗೋಪುರಕ್ಕಿಂತ ಎತ್ತರವಿದ್ದು ಆಕರ್ಷಕ ಶಿಲ್ಪಕಲೆಯನ್ನು ಹೊಂದಿದೆ.


ಅಲ್ಲಿದ್ದ ಪ್ರಾಚ್ಯ ವಸ್ತು ಇಲಾಖೆ ಸಿಬ್ಬಂದಿ ನನಗೆ ದೇವಾಲಯದ ಒಳಗಡೆ ಚಿತ್ರಗಳನ್ನು ತೆಗೆಯಲು ಅನುಮತಿ ನೀಡಲಿಲ್ಲ. ಆತ ಅಲ್ಲಿರದಿರುವಾಗ ಚಿತ್ರಗಳನ್ನು ತೆಗೆಯಲಾಗುತ್ತದೆ. ಗರ್ಭಗುಡಿಯಲ್ಲಿ ಸ್ವಯಂಭೂ ಶಿವಲಿಂಗವಿದೆ ಮತ್ತು ದ್ವಾರದ ಲಲಾಟದಲ್ಲಿ ಗಜಲಕ್ಷ್ಮೀಯನ್ನು ಕಾಣಬಹುದು. ಅಂತರಾಳದ ದ್ವಾರವು ಪಂಚಶಾಖೆಗಳಿಂದ ಅಲಂಕೃತಗೊಂಡಿದ್ದು ಜಾಲಂಧ್ರಗಳನ್ನು ಮತ್ತು ಗಜಲಕ್ಷ್ಮೀಯನ್ನು ಹೊಂದಿದೆ. ನವಶಾಖೆಗಳಿರುವ ನವರಂಗದ ದ್ವಾರ (ದೇವಾಲಯದ ಮುಖ್ಯ ದ್ವಾರ) ಈ ದೇವಾಲಯದ ಪ್ರಮುಖ ಆಕರ್ಷಣೆ. ಪ್ರತಿ ಶಾಖೆಯಲ್ಲೂ ಅದ್ಭುತ ಕೆತ್ತನೆಗಳನ್ನು ಹೊಂದಿರುವ ಈ ದ್ವಾರ ಆಸಕ್ತರ ಮನಸೂರೆಗೊಳ್ಳುವುದರಲ್ಲಿ ಸಂಶಯವೇ ಇಲ್ಲ.


ಆರು ಕಂಬಗಳ ಸುಂದರ ಮುಖಮಂಟಪವನ್ನು ದಾಟಿ ಒಳಬಂದರೆ ನವರಂಗ. ನವರಂಗದ ಎಡಕ್ಕೆ ಅಂತರಾಳ ಮತ್ತು ಗರ್ಭಗುಡಿಗಳಿದ್ದರೆ ಬಲಕ್ಕಿರುವ ದ್ವಾರದ ಮೂಲಕ ಒಳಹೊಕ್ಕರೆ ವಿಶಾಲ ಸಭಾಮಂಟಪ. ಸಭಾಮಂಟಪವು ವಿಶಾಲವಾಗಿದ್ದರೂ ತುಂಬಾನೇ ಸರಳವಾಗಿದ್ದು ನಂದಿಯೂ ಇಲ್ಲೇ ಆಸೀನನಾಗಿದ್ದಾನೆ. ಮೂಲ ದೇವಾಲಯ ನಿರ್ಮಾಣಗೊಂಡ ನಂತರದ ವರ್ಷಗಳಲ್ಲಿ ನಿರ್ಮಾಣಗೊಂದಿರುವ ಸಭಾಮಂಟಪ, ನಾಲ್ಕು ದಿಕ್ಕೂಗಳಲ್ಲೂ ಸುಂದರ ದ್ವಾರಗಳನ್ನು ಹೊಂದಿದೆ.


ಗರ್ಭಗುಡಿಯ ಹೊರಗೋಡೆಯಲ್ಲಿ ಮಕರತೋರಣಗಳ ಮತ್ತು ಗೋಪುರಗಳ ಕೆತ್ತನೆಯಿದೆ. ಇರುವ ಮೂರು ದೇವಕೋಷ್ಠಗಳ ಒಳಗಿದ್ದ ಮೂರ್ತಿಗಳು ಕಣ್ಮರೆಯಾಗಿವೆ. ಈ ದೇವಕೋಷ್ಠಗಳಿಗೆ ಕೆತ್ತಲಾಗಿರುವ ಗೋಪುರಗಳು ಆಕರ್ಷಕವಾಗಿವೆ. ದೇವಾಲಯದ ಪ್ರಾಂಗಣದೊಳಗೆ ಗಣೇಶನ ದೇವಾಲಯವಿದೆ ಹಾಗೂ ಸಣ್ಣ ಪುಷ್ಕರಿಣಿಯಿದೆ.

ಮಾಹಿತಿ: ಮಹೇಶ ಮನಯ್ಯನವರಮಠ, ಎ.ಲೋಕೇಶಪ್ಪ ಹಾಗೂ ಪ್ರಾಚ್ಯ ವಸ್ತು ಇಲಾಖೆ.

ಕಾಮೆಂಟ್‌ಗಳಿಲ್ಲ: