ಸೋಮವಾರ, ಅಕ್ಟೋಬರ್ 16, 2006

ಭರ್ಚಿ ನಾಲಾ ಜಲಪಾತಕ್ಕೆ ಚಾರಣ


ಧಾರವಾಡದಿಂದ ಗಂಗಾಧರ್ ಕಲ್ಲೂರ್ ಫೋನ್ ಮಾಡಿ 'ಸರ, ಹೊಸ ಫಾಲ್ಸ್ ಕಂಡ್-ಹುಡ್ಕೀನಿ, ಈ ಸಂಡೆ ಹೊಂಟೀವಿ, ಬರಾಕ್-ಹತ್ತೀರಿ?' ಎಂದಾಗ, 'ನಡ್ರಿ ಸರ' ಎಂದೆ. ಕಲ್ಲೂರ್-ರೊಂದಿಗೆ ದೂರವಾಣಿಯಲ್ಲಿ ೪ ತಿಂಗಳಿಂದ ಮಾತುಕತೆ ನಡೆದಿದ್ದರೂ ಭೇಟಿಯಾಗಿರಲಿಲ್ಲ. ಈ ಕಲ್ಲೂರ್, ಕೊರಳಿಗೊಂದು 'ಕಂಪಾಸ್' ಮತ್ತು ಬೆನ್ನಿಗೊಂದು 'ಬ್ಯಾಕ್-ಪ್ಯಾಕ್' ಏರಿಸಿಕೊಂಡು ಹೊರಟರೆಂದರೆ, ನಡೆದದ್ದೆ ದಾರಿ. ದಾಂಡೇಲಿ ಸಮೀಪ, ಬೆಳಗಾವಿ ಜಿಲ್ಲೆಯ ಗಡಿಗೆ ತಾಗಿಕೊಂಡೇ ಹರಿಯುವ ಹಳ್ಳ 'ಭರ್ಚಿ ನಾಲಾ'. ಈ ಹಳ್ಳಗುಂಟ ಬೇಸಗೆಯಲ್ಲಿ ಚಾರಣ ಮಾಡಿದ್ದ ಕಲ್ಲೂರ್, ಈ ಜಲಪಾತವನ್ನು ಕಂಡುಹುಡುಕಿದ್ದರು.


ನಿನ್ನೆ ಆದಿತ್ಯವಾರ ಬೆಳಗ್ಗೆ ೯ ಜನರ ನಮ್ಮ ತಂಡ (ವಿವೇಕ್ ಯೇರಿ, ಡಾಕ್ಟರ್ ಗುತ್ತಲ್, ಕಲ್ಲೂರ್, ಡಾಕ್ಟರ್ ಕುಲಕರ್ಣಿ, ಕುಮಾರ್, ವಿನಯ್, ನಾನು ಮತ್ತು ಮಕ್ಕಳಾದ ಓಂಕಾರ್ ಹಾಗೂ ಮಿಂಚು) ಮುಂಜಾನೆ ೬ಕ್ಕೆ ಧಾರವಾಡದಿಂದ ಹೊರಟು ಸುಮಾರು ೯ಕ್ಕೆ 'ಹಂಡಿ ಭಡಂಗನಾಥ' ಮಂದಿರಕ್ಕೆ ಬಂದೆವು.


ಇಲ್ಲಿಂದ ೯.೪೦ಕ್ಕೆ ಚಾರಣ ಆರಂಭ. ಬೆಳಗಾವಿ ಜಿಲ್ಲೆಯಿಂದ ಆರಂಭವಾಗುವ ಚಾರಣ ೩ ತಾಸುಗಳ ಕಠಿಣ ಚಾರಣದ ಬಳಿಕ ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊನೆಗೊಳ್ಳುವುದು. ಸುಮಾರು ೪೦ ನಿಮಿಷಗಳ ಚಾರಣದ ಬಳಿಕ ಎದುರಾಗುವುದೊಂದು ಇಳಿಜಾರು. ಸುಮಾರು ೧೦-೧೨ ಅಡಿ ಎತ್ತರಕ್ಕೆ ಬೆಳೆದಿರುವ ಸಸ್ಯರಾಶಿಯ ನಡುವೆ, ಎದ್ದು ಬಿದ್ದು, ದಾರಿ ಮಾಡಿಕೊಂಡು ಅರ್ಧ ಗಂಟೆಯ ಕಾಲ ಕಡಿದಾದ ಇಳಿಜಾರಿನ ಚಾರಣದ ವಿಶಿಷ್ಟ ಅನುಭವ. ನಂತರ ಕಾಡಿನ ದಾರಿಯಲ್ಲಿ ಮತ್ತೆ ಚಾರಣ. ಕಲ್ಲೂರ್ ಮುಂದೆ, ನಾವು ಅವರ ಹಿಂದೆ. ಕಲ್ಲೂರ್-ರವರ 'ಸೆನ್ಸ್ ಆಫ್ ಫಾರೆಸ್ಟ್' ಅದ್ಭುತ. ಅವರೊಂದಿಗೆ ಮಾತುಕತೆಗಿಳಿದರೆ ತಿಳಿದುಕೊಳ್ಳುವ ವಿಚಾರಗಳು ಹಲವಾರು.


ಜನವರಿಯಲ್ಲಿ ಅಮೇದಿಕಲ್ಲು ಚಾರಣದ ಬಳಿಕ, ಇಷ್ಟು ಕಠಿಣ ಚಾರಣ ಮಾಡಿರಲಿಲ್ಲ. ಕಾಲುಗಳು ಸೋತು ಇನ್ನೇನು ಮುಂದೆ ನಡೆಯಲಾಗದು ಎನ್ನುವಷ್ಟರಲ್ಲಿ ಬಂದೇ ಬಿಟ್ಟಿತು 'ಭರ್ಚಿ ನಾಲಾ ಜಲಪಾತ'. ಸುಮಾರು ೪೫ ಅಡಿಗಳಷ್ಟು ಎತ್ತರವಿದ್ದು, ಎರಡು ಕವಲುಗಳಾಗಿ ಧುಮುಕುವ ಜಲಪಾತದ ಮುಂದೆ ಇರುವ ವಿಶಾಲವಾದ ಜಾಗದಲ್ಲಿ ಮನಸಾರೆ ಜಲಕ್ರೀಡೆಯಾಡಿದರು ಎಲ್ಲರು. ಇದೊಂದು ಫಂಟಾಸ್ಟಿಕ್ ಪ್ಲೇಸ್. ಜನರ, ಸಾಕು ಜಾನುವಾರುಗಳ ಸುಳಿವು, ಕುರುಹು ಇಲ್ಲದ ಎಕ್-ದಂ ಶಾಂತ ಸ್ಥಳ. ಇದು ಭರ್ಚಿ ನಾಲಾ ಜಲಪಾತದ ಎರಡನೇ ಹಂತ. ಮೊದಲನೇ ಹಂತ ಸ್ವಲ್ಪ ಮೇಲ್ಗಡೆ ಇದ್ದು ಸುಮಾರು ೩೦ ಆಡಿ ಎತ್ತರವಿದೆ. ನಂತರದ ಎರಡು ಹಂತಗಳು ಇನ್ನೂ ಸ್ವಲ್ಪ ಮುಂದಿದ್ದು, ಅವು ಕೇವಲ ೧೦-೨೦ ಅಡಿಗಳಷ್ಟು ಎತ್ತರವಿದ್ದಿದ್ದರಿಂದ ನಾವು ಅಲ್ಲಿಗೆ ತೆರಳಲಿಲ್ಲ.


ನಂತರ ಹಿಂತಿರುಗುವಾಗ ನನಗೆ 'ಕ್ರಾಂಪ್ಸ್' ಬಂದು ಬಹಳ ತೊಂದರೆಯಾಯಿತು. ಆದರೂ ಹೇಗಾದರೂ ಮಾಡಿ, ಉಳಿದವರ ಸಹಾಯದಿಂದ, ಅಲ್ಲಲ್ಲಿ ವಿಶ್ರಾಂತಿ ಪಡೆಯುತ್ತಾ, ಕುಮಾರ್ ಆಗಾಗ 'ಇನ್ಸ್ಟಂಟ್ ಎನರ್ಜಿರಿ' ಅನ್ನುತ್ತಾ ನೀಡುತ್ತಿದ್ದ ಬೆಲ್ಲ ತಿನ್ನುತ್ತಾ, ನಿಧಾನವಾಗಿ ಕಾಲೆಳೆದುಕೊಳ್ಳುತ್ತಾ ಮತ್ತೆ 'ಹಂಡಿ ಭಡಂಗನಾಥ' ಮಂದಿರಕ್ಕೆ ಬಂದಾಗ ಸಂಜೆ ೬:೦೦ ಆಗಿತ್ತು.


ನನ್ನಿಂದಾಗಿ ಸುಮಾರು ೬೦ ನಿಮಿಷ ವಿಳಂಬವಾಯಿತು. ಯಾವಾಗಲೂ ಬರದ 'ಕ್ರ್ಯಾಂಪ್ಸ್' ಅಂದೇ ಬರಬೇಕಿತ್ತೆ? ಆದರೂ ಎಲ್ಲರೂ ಬಹಳ 'ಸ್ಪೋರ್ಟಿವ್' ಆಗಿ ವರ್ತಿಸಿ ನನಗೆ ಮುಜುಗರ ಉಂಟಾಗದಂತೆ ನೋಡಿಕೊಂಡರು. ಕುಂಭಾರ್ಡಾ ಗ್ರಾಮದಲ್ಲಿ ಸವಿಯಾದ ಚಹಾ ಹಾಗೂ ಮಂಡಕ್ಕಿ ಸವಿದು, ೯:೩೦ಕ್ಕೆ ಲ್ಯಾಂಡೆಡ್ ಇನ್ ಧಾರವಾಡ್.

ಸೋಮವಾರ, ಅಕ್ಟೋಬರ್ 09, 2006

ಮಲೆಘಟ್ಟ ಜಲಪಾತದೆಡೆ


ನಿನ್ನೆ ಆದಿತ್ಯವಾರ, ನಾನು ಮತ್ತು ಗೆಳೆಯ ಲಕ್ಷ್ಮೀನಾರಾಯಣ ಮುಂಜಾನೆ ೧೦.೩೦ಕ್ಕೆ ಜಲಪಾತದ ಬಳಿ ಬಂದೆವು. ಅಲ್ಲೇ ರಸ್ತೆ ಬದಿಯಲ್ಲಿ ನನ್ನ ಯಮಾಹ ನಿಲ್ಲಿಸಿ, ಅರಣ್ಯ ಇಲಾಖೆ ಹಾಕಿರುವ ಬೇಲಿ ಹಾರಿ ವಾಹನ ಓಡಾಡಿದ ಕುರುಹು ಇದ್ದ ಮಣ್ಣು ರಸ್ತೆಯಲ್ಲಿ ನಡೆಯುತ್ತಾ ಸಾಗಿದೆವು. ಅಲ್ಲಲ್ಲಿ ಸಣ್ಣ ಸಣ್ಣ ಜಲಪಾತಗಳು. ಇವೆಲ್ಲಾ ಮಾನವ ನಿರ್ಮಿತ ಕೃತಕ ಜಲಪಾತಗಳು.


ಸಮೀಪದಲ್ಲೊಂದು ಆಣೆಕಟ್ಟು ನಿರ್ಮಿಸುವಾಗ ಇಲ್ಲಿಂದಲೇ ಕಲ್ಲುಗಳನ್ನು ಗುಡ್ಡ ಸಿಡಿಸಿ, ಒಡೆದು ಸಾಗಿಸಿದ್ದರಿಂದ ಉಂಟಾದ ಕೊರಕಲುಗಳಲ್ಲಿ ಈಗ ಹಳ್ಳದ ನೀರು ಹರಿದು ಅಲ್ಲಲ್ಲಿ ಈ ಕೃತಕ ಜಲಪಾತಗಳು ಉಂಟಾಗಿವೆ. ಆಗ ಕಲ್ಲುಗಳನ್ನು ಸಾಗಿಸಲು ಮಾಡಿದ ರಸ್ತೆಯ ಮೇಲೆಯೇ ನಾವು ನಡೆಯುತ್ತಾ ಇದ್ದೆವು. ಈಗ ಈ ರಸ್ತೆಯ ಮಧ್ಯದಲ್ಲೇ ಸಣ್ಣ ಗಿಡಗಳನ್ನು ನೆಟ್ಟಿರುವ ಅರಣ್ಯ ಇಲಾಖೆ, ದನಗಳಿಂದ ರಕ್ಷಿಸಲು ಬೇಲಿಯನ್ನು ಹಾಕಿದೆ.


ಕೇವಲ ೧೦ ನಿಮಿಷಗಳ ನಡಿಗೆ, ಜಲಪಾತದ ಎರಡನೇ ಹಂತದ ಬಳಿ ನಾವು ಬಂದಾಗಿತ್ತು. ಇದೂ ಕೃತಕ ಜಲಧಾರೆ. ರಸ್ತೆಯಿಂದ ಕಾಣದ ಈ ಹಂತ ಸುಮಾರು ೪೫ ಅಡಿ ಎತ್ತರವಿದ್ದು ಎರಡು ಕವಲುಗಳಾಗಿ ಧುಮುಕುತ್ತದೆ. ನೋಡಲು ಅಷ್ಟೇನು ಆಕರ್ಷಕವಾಗಿ ಕಾಣದ ಎರಡನೇ ಹಂತದ ಪಾರ್ಶ್ವದಿಂದಲೇ ಮೇಲೆ ಹತ್ತಬಹುದು.


ಕಲ್ಲಿನ ಚಪ್ಪಡಿಗಳನ್ನು ಹಿಡಿದು ಅನಾಯಾಸವಾಗಿ ಮೇಲೇರಬಹುದು. ಆದರೆ ಮಳೆ ಬೀಳುತ್ತಿದ್ದರಿಂದ ಮತ್ತು ನೀರಿನ ಹರಿವು ಹೆಚ್ಚಿದ್ದರಿಂದ ನಾನು ಮತ್ತೆ ಮುಂದಕ್ಕೆ ಹೋಗುವ ಸಾಹಸ ಮಾಡಲಿಲ್ಲ. ಲಕ್ಷ್ಮೀನಾರಾಯಣ ಮುಂದಕ್ಕೆ ಹೋಗುವ ಉತ್ಸಾಹದಲ್ಲಿದ್ದ. ಆದರೆ 'ರಿಸ್ಕ್' ತಗೊಳ್ಳಲು ನಾನು ತಯಾರಿರಲಿಲ್ಲ.


ಮೊದಲನೇ ಹಂತವನ್ನು ಇಲ್ಲಿಂದಲೇ ನೋಡಿ ತೃಪ್ತಿಪಟ್ಟೆ. ಸುಮಾರು ೨೫೦ ಅಡಿಗಳಷ್ಟು ಎತ್ತರವಿರುವ ಮೊದಲನೇ ಹಂತ ನೋಡಲು ಆಕರ್ಷಕವಾಗಿದ್ದು, ಕೊನೆಯ ಸುಮಾರು ೧೦೦ ಅಡಿಗಳಷ್ಟು ಎತ್ತರವನ್ನು ಗಿಡಮರಗಳು ಮರೆಮಾಡಿವೆ. ಮೊದಲನೇ ಹಂತದ ಮೇಲೇರಿ, ಹಳ್ಳಗುಂಟ ದಾರಿ ಮಾಡಿಕೊಂಡು ಸಾಗಿದರೆ ೧೫-೨೦ ನಿಮಿಷಗಳಲ್ಲಿ ಮುಖ್ಯ ಜಲಪಾತದ ಬುಡವನ್ನು ತಲುಪಬಹುದು. ಈ ಹಳ್ಳಕ್ಕೆ 'ವಾಂಟೆ ಹಳ್ಳ' ಎಂದು ಹೆಸರು.


ನೇರವಾಗಿ ಬೀಳುವ ಮುಖ್ಯ ಹಂತದ ಚೆಲುವು ನನಗೆ ಬಹಳ ಹಿಡಿಸಿತು. ಎರಡನೇ ಹಂತದ ಮುಂದೆ ಕುಳಿತರೆ ಅದೊಂದು ಅದ್ಭುತ ಅನುಭವ. ಎತ್ತರದ ಗುಡ್ಡ, ಅಗಲವಾಗಿದ್ದು ಆಳವಿಲ್ಲದ ಹಳ್ಳ, ಎರಡು ಪಾರ್ಶ್ವಗಳಲ್ಲಿ ಘಟ್ಟದ ಇಳಿಜಾರು ಮತ್ತು ಮುಂದೆ ೪೫ ಅಡಿಗಳಷ್ಟು ಎತ್ತರದಿಂದ ಧುಮುಕುತ್ತಿರುವ ಜಲಪಾತ. ಸ್ವಲ್ಪ ಕತ್ತೆತ್ತಿ ನೋಡಿದರೆ ಮೊದಲನೇ ಹಂತದ ತುದಿಭಾಗದ ದರ್ಶನ. ಸುಮಾರು ೩೦ ನಿಮಿಷ ಅಲ್ಲಿ ಕುಳಿತು, ನಿಸರ್ಗದ ಸೌಂದರ್ಯವನ್ನು ಮನಸಾರೆ ಸವಿದು ಹಿಂತಿರುಗಿದೆವು.

ಸೋಮವಾರ, ಅಕ್ಟೋಬರ್ 02, 2006

ಹೊಸ ಗೆಳೆಯರೊಂದಿಗೆ ಜಲಪಾತಗಳಿಗೆ ಪ್ರಯಾಣ


ಧಾರವಾಡದ ಗಂಗಾಧರ್ ಕಲ್ಲೂರ್ ದಾಂಡೇಲಿ, ಆಣಶಿ, ಲೋಂಡಾ, ಖಾನಾಪುರ, ಕರ್ನಾಟಕ-ಗೋವಾ ಗಡಿ ಪ್ರದೇಶಗಳಲ್ಲಿ ಚಾರಣ ಕೈಗೊಳ್ಳುವುದರಲ್ಲಿ ಪ್ರಸಿದ್ಧರು. ನನಗೆ ಜಲಪಾತಗಳಲ್ಲಿ ಇರುವ ಆಸಕ್ತಿಯನ್ನು ಗಮನಿಸಿದ ಕಲ್ಲೂರ್, ತನ್ನ ಗೆಳೆಯ ವಿವೇಕ್ ಯೇರಿ ಇವರಿಗೆ ನನ್ನ ಪರಿಚಯ ಮಾಡಿಸಿದರು. ವಿವೇಕ್, ಉತ್ತರಕನ್ನಡ ಜಿಲ್ಲೆಯಲ್ಲಿರುವ ಜಲಪಾತಗಳನ್ನೆಲ್ಲಾ ಬಲ್ಲವರು ಮತ್ತು ಹೆಚ್ಚಿನ ಜಲಪಾತಗಳಿಗೆ ಚಾರಣ ಮಾಡಿರುವರು. ಸುಮಾರು ೨ ತಿಂಗಳುಗಳ ಕಾಲ ದೂರವಾಣಿಯಲ್ಲೇ ಮಾತು, ಜಲಪಾತಗಳ ವಿವರ, ಅಂಚೆ ಮೂಲಕ ಜಲಪಾತಗಳ ಲಿಸ್ಟ್ ಎಕ್ಸ್-ಚೇಂಜ್ ಇತ್ಯಾದಿ ನಡೆಯಿತು. ಮಳೆ ಸ್ವಲ್ಪ ಕಡಿಮೆ ಆದ ಕೂಡಲೇ ಕೂಡಿ ಒಂದು ಪ್ರಯಾಣ ಮಾಡೋಣ ಎಂದಿದ್ದ ವಿವೇಕ್, ಸೆಪ್ಟೆಂಬೆರ್ ೨ಕ್ಕೆ ದೂರವಾಣಿ ಕರೆ ಮಾಡಿ ೧೦ಕ್ಕೆ ಒಂದೆರಡು ಜಲಪಾತಗಳನ್ನು ಹುಡುಕಿಕೊಂಡು ಹೋಗುವ ಎಂದು ತಿಳಿಸಿದರು.

ಮೊದಲೇ ನಿರ್ಧರಿಸಿದಂತೆ ೧೦ನೇ ತಾರೀಕು ಮುಂಜಾನೆ ೭.೦೦ಕ್ಕೆ ಯಲ್ಲಾಪುರದ ಸಂಭ್ರಮ್ ಹೋಟೆಲಿನಲ್ಲಿ ಭೇಟಿಯಾದೆವು. ವಿವೇಕ್-ರೊಂದಿಗೆ ಡಾಕ್ಟರ್ ಗುತ್ತಲ್ ಮತ್ತು ಅಶೋಕ್ ಮನ್ಸೂರ್ ಇದ್ದರು. ಕಲ್ಲೂರ್ ಒಂದು ತಿಂಗಳ ಪ್ರಯಾಣಕ್ಕೆ ನೇಪಾಲಕ್ಕೆ ತೆರಳಿದ್ದರಿಂದ ಬಂದಿರಲಿಲ್ಲ. ಈ ನಾಲ್ಕು ಜನರದ್ದು ಒಂದು 'ಕೋರ್ ಟೀಮ್'. ಜತೆಯಾಗಿ ಹೊಸ ಚಾರಣಗೈಯುವ ಸ್ಥಳಗಳನ್ನು ಕಂಡುಹಿಡಿಯುವುದು ಇವರ ಹವ್ಯಾಸ. ಗುತ್ತಲ್-ರ ಯುನೊ ಕಾರಿನಲ್ಲಿ ಪ್ರಯಾಣ. ನನ್ನ ಹಾಗೂ ಅವರ ಆಸಕ್ತಿ 'ಚಾರಣ, ಪರಿಸರ, ಪ್ರಕೃತಿ' ಇಲ್ಲಿ ಮ್ಯಾಚ್ ಆಗುತ್ತಿದ್ದರಿಂದ ಮಾತುಕತೆ, ವಿಚಾರಗಳ ವಿನಿಮಯ, ಅಲ್ಲಿನ ಹಾಗೂ ಕರಾವಳಿ ಜಿಲ್ಲೆಗಳ ಕಾಡು ಬೆಟ್ಟಗಳ ಹೋಲಿಕೆ, ನಡೆಯುತ್ತಾ ಇತ್ತು.


ಅಂಗಡಿಯೊಂದರಲ್ಲಿ ವಿಚಾರಿಸಿದಾಗ ಯಾವುದೇ ಜಲಪಾತದ ಇರುವಿಕೆಯ ಬಗ್ಗೆ ತಿಳಿಯದು ಎಂದು ಅಲ್ಲಿದ್ದ ಊರಿನ ಕೆಲವರು ಅಭಿಪ್ರಾಯಪಟ್ಟರು. ನಂತರ ಅನಂತ ವೈದ್ಯರಿಗೆ ದೂರವಾಣಿ ಕರೆ ಮಾಡಿ ವಿಚಾರಿಸಿದಾಗ ಅಲ್ಲೊಂದು ಸಣ್ಣ ಜಲಪಾತವಿರುವುದಾಗಿ ವೈದ್ಯರು ತಿಳಿಸಿದರು. ನಂತರ ನಾವು ತೆರಳಿದ್ದು ನೇರವಾಗಿ ವೈದ್ಯರ ಮನೆಗೆ. ೧೯೬೪ರಲ್ಲಿ ಕಟ್ಟಿದ ಭರ್ಜರಿ ಮನೆಯದು. ಮನೆಯೊಳಗಿನ ಮರದಿಂದ ಮಾಡಿದ ಬಾಗಿಲು ಹಾಗೂ ಕಿಟಕಿಗಳ ಮೇಲಿನ ಕೆತ್ತನೆ ಕೆಲಸ ಮೆಚ್ಚಬೇಕಾದ್ದು. ಮನೆ ಕಟ್ಟಿದ ಇಂಜಿನಿಯರ್, ಮೇಸ್ತ್ರಿ ಹಾಗೂ ಮ್ಯಾನೇಜರ್-ಗಳ ಹೆಸರುಗಳನ್ನು ಪ್ರಧಾನ ಬಾಗಿಲಿನ ಮೇಲ್ಗಡೆ ಕೆತ್ತಲಾಗಿತ್ತು. ನಾವೆಲ್ಲೂ ಕಂಡಿರದಂತಹ ವಿಶೇಷವದು. ಆಸರೆ (ಚಹಾ, ತಿಂಡಿ, ನೀರು) ಸ್ವೀಕರಿಸಿದ ಬಳಿಕ ಮನೆಯ ಹುಡುಗರಿಬ್ಬರು ನಮ್ಮೊಂದಿಗೆ ಮಾರ್ಗದರ್ಶಕರಾಗಿ ಬಂದರು.


ಸ್ವಲ್ಪ ದೂರದವರೆಗೆ ವಾಹನ ತೆರಳುವುದು. ಇಲ್ಲಿಂದ ಕೇವಲ ಅರ್ಧ ಗಂಟೆಯ ನಡಿಗೆ. ನಡುವೆ ಸಿಗುವ ಗ್ರಾಮಸ್ಥರು ನಿರ್ಮಿಸಿರುವ ಕಾಲುಸೇತುವೆ ವಿಶಿಷ್ಟವಾಗಿತ್ತು. ಮೊರು ಹಂತಗಳಿರುವ ಉದ್ದನೆಯ ಸೇತುವೆ ಇದು. ಮಧ್ಯದಲ್ಲಿರುವ ಎರಡು ಮರಗಳನ್ನು ಬಳಸಿ ಉಪಾಯವಾಗಿ ರಚಿಸಲಾದ ಈ ಕಾಲು ಸೇತುವೆ ನನಗೆ ಬಹಳ ಇಷ್ಟವಾಯಿತು.


ನಂತರ ಸಣ್ಣ ಕಾಲುವೆಯೊಂದನ್ನು ಹಿಂಬಾಲಿಸಿ ಸ್ವಲ್ಪ ಹೊತ್ತು ನಡೆದಾಗ ಸೂಸಬ್ಬಿ ಜಲಪಾತ ಪ್ರತ್ಯಕ್ಷ. ಬಿಳಿಹೊಳೆ ಸುಮಾರು ೩೦ ಅಡಿಗಳಷ್ಟು ಎತ್ತರದಿಂದ ೩ ಹಂತಗಳಲ್ಲಿ ವೈಯ್ಯಾರವಾಗಿ ಧುಮುಕುತ್ತಿತ್ತು. ನದಿಯಲ್ಲಿ ಸೆಳೆತ ಇದ್ದಿದ್ದರಿಂದ ನಾವ್ಯಾರೂ ನೀರಿಗಿಳಿಯಲಿಲ್ಲ. ನದಿ ತಿರುವೊಂದನ್ನು ಪಡಕೊಂಡ ಕೂಡಲೇ ಧುಮುಕುವುದರಿಂದ ಸ್ವಲ್ಪ ಹೆಚ್ಚಿನ ಆಕರ್ಷಣೆ ಈ ಜಲಧಾರೆಗೆ.

ಭಾನುವಾರ, ಅಕ್ಟೋಬರ್ 01, 2006

ಆಗುಂಬೆಯ ಸಂಜೆಯೂ......'ಹ್ಹಿ ಹ್ಹಿ'ಯು

ಆದಿತ್ಯವಾರಗಳಂದು ಯಾವುದೇ ಚಾರಣ ಇರದಿದ್ದರೆ ಸಂಜೆ ಆಗುಂಬೆಗೆ ಹೋಗುವುದು ರೂಢಿಯಾಗಿಬಿಟ್ಟಿದೆ. ಮಧ್ಯಾಹ್ನ ೩ಕ್ಕೆ ಉಡುಪಿಯಿಂದ ಹೊರಟು, ಸೋಮೇಶ್ವರದಲ್ಲಿ ಬಿಸಿ ಬಿಸಿ ನೀರ್ ದೋಸೆ ಅಥವಾ ಗೋಳಿಬಜೆ ತಿಂದು, ಆಗುಂಬೆ ಚೆಕ್-ಪೋಸ್ಟ್ ಬಳಿ ಚಹಾ ಅಂಗಡಿ ಇಟ್ಟುಕೊಂಡಿರುವ ಪಡಿಯಾರ್-ಗೆ ವಿಶ್ ಮಾಡಿ ಸಂಜೆ ಸುಮಾರು ಐದಕ್ಕೆ ಆಗುಂಬೆಯ ಗೆಸ್ಟ್-ಹೌಸ್ ಮುಂದಿರುವ ಕಲ್ಲಿನ ಆಸನದ ಮೇಲೆ ಆಸೀನರಾದರೆ ಆಗುಂಬೆಯ ಸಂಜೆ ಸವಿಯುವ ಭಾಗ್ಯ ನಮ್ಮದು.

ಈ ಗೆಸ್ಟ್-ಹೌಸ್ ಸ್ವಲ್ಪ ಎತ್ತರದಲ್ಲಿರುವುದರಿಂದ ಆಗುಂಬೆಯ ಸುಂದರ ನೋಟ ಇಲ್ಲಿಂದ ಲಭ್ಯ. ಹಕ್ಕಿಗಳ ಚಿಲಿಪಿಲಿ, ಅಹ್ಲಾದಕರ ವಾತಾವರಣ, ಅನತಿ ದೂರದಲ್ಲಿ ಕಾಣುವ ರಸ್ತೆಯಲ್ಲಿ 'ಭರ್ರ್' ಎಂದು ಹಾದುಹೋಗುವ ಮಿನಿ ರಾಕ್ಷಸರು (ಮಿನಿ ಬಸ್ಸುಗಳು), 'ಕೋಳಿ ಮಾಡುವ ಸಾರ್, ಇರಿ ಊಟಕ್ಕೆ' ಎಂದು ಒತ್ತಾಯಿಸುವ ಅಲ್ಲಿನ ಮೇಟಿ, ಅಲ್ಲೇ ಸಮೀಪದಲ್ಲಿ ಕಾಣುವ ಶಾಲಾ ಮೈದಾನದಲ್ಲಿ ವಾಲಿಬಾಲ್, ಥ್ರೋಬಾಲ್ ಇತ್ಯಾದಿ ಆಡುವ ಹೆಣ್ಮಕ್ಕಳ ಕೂಗಾಟ ಮತ್ತು ಇವೆಲ್ಲದಕ್ಕೆ ತಕ್ಕಂತೆ ನಮ್ಮ ಹರಟೆ. ಕಡು ಬೇಸಿಗೆಯಲ್ಲೂ ಹಸಿರನ್ನು ಉಳಿಸಿಕೊಳ್ಳುವ ಆಗುಂಬೆಯ ಸಂಜೆ ಅದ್ಭುತ! ಆಗುಂಬೆಯ ಸಂಜೆಯ ವೈಶಿಷ್ಟ್ಯತೆ ಅನುಭವಿಸಿದವರಿಗೇ ಗೊತ್ತು.

ಬೇಸಗೆಯ ಹಿತವಾದ ಬಿಸಿಲು, ಚಳಿಗಾಲದ ಮೈ ನಡುಗಿಸುವ ಚಳಿ ಮತ್ತು ಮಳೆಗಾಲದ ಅಬ್ಬರದ ಮಳೆ ಇದನ್ನೆಲ್ಲಾ ಆಗುಂಬೆಯಲ್ಲಿ ಅನುಭವಿಸಿ ಮತ್ತೆ ಮತ್ತೆ ಅಲ್ಲಿಗೆ ತೆರಳುವ ತವಕ ನಮ್ಮ ಗುಂಪಿನ ಪ್ರತಿಯೊಬ್ಬನಿಗೆ. ಆ ಕಲ್ಲಿನ ಬೆಂಚಿನಲ್ಲಿ ಕುಳಿತು ವಿವಿಧ ಪಕ್ಷಿಗಳನ್ನು ಗುರುತಿಸುವ ಪ್ರಯತ್ನ, ಆಗುಂಬೆಯಲ್ಲಿ ಜಾಗ ಖರೀದಿಸುವ ಮಾತು ಇತ್ಯಾದಿಗಳ ಹರಟೆ. ಬೆನ್ನು ಬಿಡದಂತೆ ಬೆನ್ನು ಹತ್ತುವ ಮಳೆರಾಯನ ಆಗುಂಬೆಯ ಅವತಾರವನ್ನು ಒಮ್ಮೆಯಾದರೂ ನೋಡಬೇಕು. ಬೀಳುತ್ತಿರುವ ಮಳೆಯ ನಡುವೆ ರೈನ್ ಕೋಟ್ ಧರಿಸಿಯೇ ಆ ಕಲ್ಲಿನ ಬೆಂಚಿನಲ್ಲಿ ಆಸೀನರಾಗಿ 'ಮಳೆ ವೀಕ್ಷಣೆ' ಮಾಡುತ್ತಾ ಹರಟೆ ಹೊಡೆಯುವುದೇ ಮಜಾ.

ಆಗುಂಬೆ ಚೆಕ್ ಪೋಸ್ಟ್ ಬಳಿಯ ತನ್ನ ಚಹಾ ಅಂಗಡಿಯಲ್ಲಿ ಬಿಸಿ ಬಿಸಿ ಚಟ್ಟಂಬಡೆ ಮತ್ತು ಬಿಸ್ಕುಟಂಬಡೆ ಕರಿಯುವ ಪಡಿಯಾರ್, ಬಹುಶಃ ಆಗುಂಬೆಯಲ್ಲೇ ಇದ್ದು ಹೆಚ್ಚು ಕಮಾಯಿಸುವವರಲ್ಲೊಬ್ಬ. ಈತನ ಚಟ್ಟಂಬಡೆ ಹಾಗೂ ಬಿಸ್ಕುಟಂಬಡೆಗಳ ರುಚಿಗೆ ಮಾರುಹೋಗದವರಿಲ್ಲ. ನಾವು ಆಗುಂಬೆಗೆ ತೆರಳುವಾಗ ಪಡಿಯಾರ್-ಗೆ 'ವಿಶ್' ಮಾಡುವ ಅರ್ಥವೇನೆಂದರೆ 'ಒಂದು ತಾಸಿನಲ್ಲಿ ಹಿಂತಿರುಗಿ ಬರಲಿದ್ದೇವೆ. ಒಂದಷ್ಟು ಚಟ್ಟಂಬಡೆ ಹಾಗೂ ಬಿಸ್ಕುಟಂಬಡೆಗಳನ್ನು ನಮಗಾಗಿ ತೆಗೆದಿಡು'. ಆದ್ದರಿಂದ ಸಂಜೆ ಸುಮಾರು ೬ಕ್ಕೆ ಆಗುಂಬೆ ಗೆಸ್ಟ್ ಹೌಸ್-ನಿಂದ ಉಡುಪಿಗೆ ಹೊರಡುವಾಗ ನಮಗಿರುವ ಟೆನ್ಶನ್ ಚಟ್ಟಂಬಡೆ/ಬಿಸ್ಕುಟಂಬಡೆ ತಿನ್ನಲು ಸಿಗುತ್ತೊ ಇಲ್ವೋ ಎಂಬುದಲ್ಲ, ಬದಲಾಗಿ 'ಹ್ಹಿ ಹ್ಹಿ' ನೋಡಲು ಸಿಗುತ್ತಾನೋ ಇಲ್ವೋ ಎಂಬುದು. ಈ 'ಹ್ಹಿ ಹ್ಹಿ' ಅಲ್ಲೇ ಆಗುಂಬೆ 'ಚೆಕ್ ಪೋಸ್ಟ್'ನಲ್ಲಿ ವಾಸಿಸುವ ನಾಯಿ. ಎಲ್ಲಿಂದಲೋ ಬಂದು ಚೆಕ್-ಪೋಸ್ಟ್ ಬಳಿಯಲ್ಲಿ ಆಚೀಚೆ ಓಡಾಡುತ್ತಿರುವಾಗ, ಅಲ್ಲಿನ ಸಿಬ್ಬಂದಿ ಅದಕ್ಕೆ ಆಶ್ರಯ ನೀಡಿರುವುದರಿಂದ ಈಗ 'ಹ್ಹಿ ಹ್ಹಿ' ಅಲ್ಲೇ ಇರುತ್ತಾನೆ.

ಕೆಳ ದವಡೆಯ ಹಲ್ಲುಗಳು ಹೊರಚಾಚಿ ಮೇಲ್ತುಟಿಯನ್ನು ಮರೆಮಾಡಿರುವುದರಿಂದ ನಗುತ್ತಾ ಇರುವಂತೆ ಈ ನಾಯಿ ಕಾಣಿಸುತ್ತದೆ. ಈ 'ಹ್ಹಿ ಹ್ಹಿ' ಎಂದರೆ ನಮಗೆ ಬಹಳ ಪ್ರೀತಿ. ತೊಡೆಯ ಮೇಲೆ ಮುಂಗಾಲುಗಳನ್ನಿಟ್ಟು ಆಸೆಯಿಂದ ತಿಂಡಿ ಬೇಡುವ ಆತನ ಭಂಗಿ, ನಾವು ಕಿಸೆಯೊಳಗೆ ಕೈ ಹಾಕಿದರೆ ಆಸೆಯಿಂದ ನೋಡುವ ಆತನ ಕಣ್ಣುಗಳು, ಬಡಕಲು ದೇಹವಿದ್ದರೂ ಉತ್ಸಾಹದ ಚಿಲುಮೆಯಂತಿರುವ 'ಹ್ಹಿ ಹ್ಹಿ' ಯನ್ನು ನೋಡದೇ ನಮ್ಮ ಆಗುಂಬೆ ಭೇಟಿ ಅಪೂರ್ಣ. ಕಳೆದ ಅಗೋಸ್ಟ್ ತಿಂಗಳಂದು ನಗರಕ್ಕೆ ಹೋದಾಗ, ಹಿಂತಿರುಗಿ ಬರುವಾಗ ಆಗುಂಬೆಯ ಮೂಲಕ ಬಂದೆ. ಪಡಿಯಾರ್ ಅಂಗಡಿ ಮುಚ್ಚುತ್ತಿದ್ದ. ರುಚಿಯಾದ ಚಟ್ಟಂಬಡೆ ತಿನ್ನಲು ಸಿಗಲಿಲ್ಲ ಎಂದು ನಿರಾಸೆಯಾದರೂ, 'ಹ್ಹಿ ಹ್ಹಿ' ಯನ್ನು ನೋಡಿ ಸಂತೋಷವಾಯಿತು. ಇದ್ದ ಕೆಲವು ಬಿಸ್ಕಿಟ್ ಚೂರುಗಳನ್ನು ಕೊಟ್ಟಾಗ ಆನಂದದಿಂದ 'ಹ್ಹಿ ಹ್ಹಿ' ತಿಂದ. ಮೊನ್ನೆ ಸೆಪ್ಟೆಂಬರ್ ೧೬ರಂದು ಮತ್ತೊಮ್ಮೆ ಆಗುಂಬೆಗೆ ತೆರಳಿದಾಗ, 'ಹ್ಹಿ ಹ್ಹಿ' ನಾಪತ್ತೆ. ಐದಾರು ದಿನಗಳಿಂದ ಆತನ ಪತ್ತೆಯಿಲ್ಲ ಎಂದು ಪಡಿಯಾರ್ ಹಾಗೂ ಚೆಕ್-ಪೋಸ್ಟ್ ಸಿಬ್ಬಂದಿಗಳು ತಿಳಿಸಿದಾಗ ಏನೋ ಕಳವಳ. ಉಡುಪಿಯಲ್ಲಿ ಗೆಳೆಯರಿಗೆ 'ಹ್ಹಿ ಹ್ಹಿ' ನಾಪತ್ತೆಯಾಗಿರುವುದು ತಿಳಿಸಿದಾಗ 'ಕಳೆದ ಮೂರ್ನಾಲ್ಕು ತಿಂಗಳುಗಳಿಂದ ಅಲ್ಲೇ ಅಡ್ದಾಡುತ್ತಿರುವ ಚಿಟ್ಟೆ ಹುಲಿಗೆ ಬಲಿಯಾಗಿರಬಹುದು ಅಥವಾ ಸಂಗಾತಿಯನ್ನರಸಿ ಹೋಗಿರಬಹುದು' ಎಂಬ ಮಾತು. 'ಹ್ಹಿ ಹ್ಹಿ' ಎರಡು ಬಾರಿ ಆ ಚಿಟ್ಟೆ ಹುಲಿಯಿಂದ ಸ್ವಲ್ಪದರಲ್ಲೇ ತಪ್ಪಿಸಿಕೊಂಡಿದ್ದ. ಮೊರನೇ ಸಲ ಅದೃಷ್ಟ ಕೈಕೊಟ್ಟಿತೇ... ಅಥವಾ ಸಂಗಾತಿಯನ್ನರಸಿ ಹೋಗಿದ್ದನೇ..? ಎಂಬುದು ಮುಂದಿನ ಸಲ ಆಗುಂಬೆಗೆ ತೆರಳುವಾಗ ಉತ್ತರ ಸಿಗುವ ಪ್ರಶ್ನೆ.

'ಹ್ಹಿ ಹ್ಹಿ' ಯನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು.