ಶನಿವಾರ, ಜನವರಿ 31, 2009

ಕಪ್ಪು ಮರಳಿನ ಬೀಚ್


ಸಮುದ್ರಕ್ಕೆ ತಾಗಿಯೇ ಇರುವ ಗುಡ್ಡದ ಬಂಡೆಗಳ ನಡುವೆ ನಡೆದುಕೊಂಡು ಹೋದರೆ ಇಪ್ಪತ್ತು ನಿಮಿಷಗಳ ಬಳಿಕ ಒಂದು ಅಪೂರ್ವ ಕಡಲತೀರ ನಮ್ಮನ್ನು ಸ್ವಾಗತಿಸುತ್ತದೆ. ಇದೇ ಕಪ್ಪು ಮರಳಿನ ಬೀಚ್. ನೂರು ಮೀಟರಿಗೂ ಕಡಿಮೆ ಉದ್ದವಿರುವ ಈ ಬೀಚಿನಲ್ಲಿ ಇರುವುದು ಕಪ್ಪು ಮರಳು. ಸಮೀಪದಲ್ಲೇ ಇರುವ ಬಂಡೆಗಳನ್ನು ದಾಟಿ ಒಂದೆರಡು ನಿಮಿಷ ನಡೆದು ಆ ಕಡೆ ಹೋದರೆ ಅಲ್ಲಿ ಎಲ್ಲೆಡೆ ಇರುವಂತೆ ರೆಗ್ಯುಲರ್ ಮರಳಿನ ಬೀಚ್. ಆದರೆ ಇಲ್ಲಿ ಮಾತ್ರ ಕಪ್ಪು ಮರಳು.


ಕುತೂಹಲದಿಂದ ಒಂದಡಿ ಆಳಕ್ಕೆ ಅಗೆದು ನೋಡಿದೆವು. ಆದರೂ ಮರಳು ಕಪ್ಪು ಬಣ್ಣದ್ದೇ! ಇಲ್ಲಿ ಮರಳು ಕೊಳೆಯಿಂದ ಮಿಶ್ರಿತವಾಗಿ ಕಪ್ಪು ಬಣ್ಣಕ್ಕೆ ತಿರುಗಿದೆ ಎಂದೆನಿಸಿಬೇಡಿ. ಮರಳಿನ ಬಣ್ಣವೇ ಕಪ್ಪು. ಕೈಗೆತ್ತಿಕೊಂಡರೆ ಮಿರಿ ಮಿರಿ ಮಿಂಚುವ ಕಪ್ಪು ಮರಳು.


ಬೀಚಿನ ತುದಿಯಲ್ಲಿ ವಿವಿಧ ಗಾತ್ರದ ಶಂಖಗಳು, ಚಿಪ್ಪುಗಳು ರಾಶಿರಾಶಿಯಾಗಿ ಬಿದ್ದು ಬಣ್ಣದ ಲೋಕವನ್ನೇ ಸೃಷ್ಟಿಸಿವೆ. ಕಪ್ಪು ಮರಳಂತೂ ಫಳ ಫಳ ಹೊಳೆಯುತ್ತದೆ. ಇಲ್ಲಿನ ಸೌಂದರ್ಯಕ್ಕೆ ಮಾರುಹೋಗಿದ್ದ ಬ್ರಿಟೀಷರು ಇಲ್ಲೊಂದು ಪ್ರವಾಸಿ ಮಂದಿರವನ್ನು ನಿರ್ಮಿಸಿದ್ದು ಅದೀಗ ಪಾಳು ಬಿದ್ದಿದೆ. ಸಮುದ್ರ ತಟದಲ್ಲೇ ಸಿಹಿ ನೀರಿನ ಬಾವಿಯೊಂದಿದೆ. ಈ ಬಾವಿ ಹುಡುಕಬೇಕಾದರೆ ಸ್ವಲ್ಪ ಕಷ್ಟಪಡಬೇಕು.


ಈ ಕಪ್ಪು ಮರಳಿನ ರಹಸ್ಯ ತಿಳಿದುಕೊಳ್ಳುವ ಸಲುವಾಗಿ ನಾಗರಾಜ ರಘುವೀರ ಹಬ್ಬು ಎಂಬವರು ಸಂಶೋಧಕ ಆರ್.ಡಿ.ನಾಯ್ಕ ಇವರನ್ನು ಸಂಪರ್ಕಿಸಿದಾಗ, ಕೇರಳದ ಚಾವರಾ, ಓರಿಸ್ಸಾದ ಗಂಜಾಂ ಮತ್ತು ಕನ್ಯಾಕುಮಾರಿಯಲ್ಲಿ ಇಂತಹ ಕಪ್ಪು ಮರಳು ಕಾಣಸಿಗುತ್ತದೆ ಮತ್ತು ಹಲವಾರು ವರ್ಷಗಳಿಂದ ಇಲ್ಲಿನ ಕಡಲಂಚಿನಲ್ಲಿ ಇರುವ ಕಪ್ಪು ಗ್ರಾನೈಟ್ ಶಿಲೆಗಳಿಗೆ ರಭಸದಿಂದ ಬರುವ ತೆರೆಗಳು ಅಪ್ಪಳಿಸಿ ಒಳಕೊರೆತ ಉಂಟಾಗಿ ಈ ಕಪ್ಪು ಕಲ್ಲುಗಳು ಕಪ್ಪು ಮರಳಾಗಿ ಪರಿವರ್ತಿತವಾಗಿರಬಹುದು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.


ರೆಗ್ಯುಲರ್ ಕಡಲ ತೀರಗಿಂತ ಸ್ವಲ್ಪ ಭಿನ್ನವಾಗಿದ್ದು, ಕಪ್ಪು ಮರಳಿನ ವಿಶಿಷ್ಟತೆಯನ್ನು ಕಣ್ಣ ಮುಂದಿಡುವ ಈ ಕಡಲ ತೀರ ತುಂಬಾ ಚಂದದ ಸ್ಥಳ. ಕಪ್ಪು ಮರಳಿನ ಮೆಲಿರುವ ಕಪ್ಪು ಬಂಡೆಗಳ ಮೇಲೆ ಆಸೀನರಾಗಿ ಫೋಟೋ ತೆಗೆಸಿಕೊಳ್ಳುವುದೇ ಮಜಾ. ಫೋಟೋ ತುಂಬಾ ಎಲ್ಲೆಡೆ ಕರಿ ಸಾಮ್ರಾಜ್ಯವೇ!

ಮಾಹಿತಿ: ನಾಗರಾಜ ರಘುವೀರ ಹಬ್ಬು