ಸೋಮವಾರ, ಮೇ 24, 2010

ಉಡುಪಿ ಕೃಷ್ಣನ ಸೇವೆಯ ಚಿತ್ರಗಳು


ಉಡುಪಿ ಕೃಷ್ಣನ ಪ್ರತಿದಿನದ ಅಲಂಕಾರದ ಚಿತ್ರವನ್ನು ಮಧ್ಯಾಹ್ನ ೨ ಗಂಟೆಯ ಒಳಗೆ ಶಿರೂರು ಮಠದ ಅಂತರ್ಜಾಲ ತಾಣದ ಮುಖಪುಟದಲ್ಲಿ ಪ್ರಕಟಿಸಿಯಾಗಿರುತ್ತದೆ. ದೂರದೂರಿನ ಕೃಷ್ಣನ ಪರಮಭಕ್ತರು ಈಗ ಅಂತರ್ಜಾಲದಲ್ಲೇ ಕೃಷ್ಣನ ಪ್ರತಿದಿನದ ಅಲಂಕಾರ ಮತ್ತು ಪೂಜೆ ಇತ್ಯಾದಿಗಳ ಚಿತ್ರಗಳನ್ನು ನೋಡಿ ಸಂತುಷ್ಟರಾಗುತ್ತಿದ್ದಾರೆ. ಈಗ ಕೃಷ್ಣ ದೇವಾಲಯದಲ್ಲಿ ಪ್ರತಿದಿನ ಆಗುವ ಕಾರ್ಯಗಳ (ಪೂಜೆ, ಹರಕೆ, ರಥೋತ್ಸವ, ಏಕಾದಶಿ ವಿಶೇಷ, ಇತ್ಯಾದಿ) ಚಿತ್ರಗಳನ್ನು ಕೂಡಾ ಅದೇ ದಿನ ಶಿರೂರು ಮಠದ ಅಂತರ್ಜಾಲ ತಾಣದಲ್ಲಿ ಪ್ರಕಟಿಸಲಾಗುತ್ತಿದೆ.


ಮೊದಲು ಕೃಷ್ಣನ ಅಲಂಕಾರದ ಚಿತ್ರಗಳನ್ನು ತೆಗೆಯುತ್ತಿದ್ದ ಗೆಳೆಯ ಗುರುದತ್ತನಿಗೇ ಈಗ ಪ್ರತಿದಿನ ನಡೆಯುವ ಎಲ್ಲಾ ವಿಧಿ ವಿಧಾನಗಳ ಚಿತ್ರಗಳನ್ನು ಕೂಡಾ ತೆಗೆಯುವ ಜವಾಬ್ದಾರಿಯನ್ನು ವಹಿಸಲಾಗಿದೆ. ಪ್ರತಿದಿನದ ಕೃಷ್ಣನ ಅಲಂಕಾರದ ಚಿತ್ರವನ್ನು ಶಿರೂರು ಮಠದ ಅಂತರ್ಜಾಲ ತಾಣದ ಮುಖಪುಟದಲ್ಲೇ ಕಾಣಬಹುದಾದರೆ, ಆಯಾ ದಿನಗಳ ಕಾರ್ಯಕ್ರಮಗಳ ಚಿತ್ರಗಳನ್ನು ತಾಣದೊಳಗೆ ಪ್ರವೇಶಿಸಿದರೆ ಬಲಭಾಗದಲ್ಲಿರುವ ಕೊಂಡಿಗಳ ಮೂಲಕ ಕಾಣಬಹುದು. ಗುರುದತ್ ತೆಗೆದಿರುವ ಕೆಲವು ಚಿತ್ರಗಳನ್ನು ಇಲ್ಲಿ ಪ್ರಕಟಿಸಿರುವೆ. ಕೃಷ್ಣನ ಭಕ್ತರು ಇನ್ನು ಶಿರೂರು ಮಠದ ಅಂತರ್ಜಾಲ ತಾಣವನ್ನು ’ನೋಟ್’ ಮಾಡಿಟ್ಟುಕೊಳ್ಳಿರಿ. ಕಂಪ್ಯೂಟರ್ ಪರದೆಯಲ್ಲೇ ಶ್ರೀ ಕೃಷ್ಣ ದರ್ಶನ!

ಮಂಗಳವಾರ, ಮೇ 11, 2010

ಸೆರೆ ಸಿಕ್ಕ ನರಹಂತಕ


ಅರ್ಜೆಂಟಿನಾದ ರಾಜಧಾನಿ ಬ್ಯೂನಸ್ ಐರಸ್-ನಿಂದ ಶುರುವಾಗುವ ಹೆದ್ದಾರಿಯೊಂದು ರಾಜಧಾನಿಯ ಹೊರವಲಯವಾಗಿರುವ ಸ್ಯಾನ್ ಫರ್ನಾಂಡೋ ಎಂಬ ಪ್ರದೇಶದ ಮೂಲಕ ಹಾದುಹೋಗುತ್ತದೆ. ಇದು ರೂಟ್ ನಂಬ್ರ ೨೦೨. ಅಲ್ಲೊಂದು ಬಸ್ಸು ತಂಗುದಾಣ. ಬಸ್ಸು ತಂಗುದಾಣದ ಬಳಿಕ ಇರುವ ಮೂರ್ನಾಲ್ಕು ಅಡ್ಡ ರಸ್ತೆಗಳಲ್ಲಿ ಒಂದಾದ ’ಗೆರಿಬಾಲ್ದಿ ಸ್ಟ್ರೀಟ್’ನಲ್ಲಿರುವ ಮನೆಯೊಂದರಲ್ಲಿ ತನ್ನ ಹೆಂಡತಿ ಮತ್ತು ೩ ಗಂಡು ಮಕ್ಕಳೊಂದಿಗೆ ವಾಸವಾಗಿದ್ದವನ ಹೆಸರು ’ರಿಕಾರ್ಡೊ ಕ್ಲೆಮೆಂಟ್’. ಸಂಜೆ ೭.೩೦ ರಿಂದ ೮.೦೦ ಗಂಟೆಯ ಒಳಗೆ ಬರುವ ೩ ಬಸ್ಸುಗಳಲ್ಲಿ ಯಾವುದಾದರೊಂದು ಬಸ್ಸಿನಲ್ಲಿ ಕ್ಲೆಮೆಂಟ್ ಮನೆಗೆ ಬರುತ್ತಿದ್ದ.

ಅಂದು ಮೇ ೧೧, ೧೯೬೦. ಇವತ್ತಿಗೆ ಸರಿಯಾಗಿ ೫೦ ವರ್ಷಗಳ ಮೊದಲು. ಕಳೆದ ೩ ತಿಂಗಳುಗಳಿಂದ ರಿಕಾರ್ಡೊ ಕ್ಲೆಮೆಂಟಿನ ಚಲನವಲನಗಳ ಮೇಲೆ ನಿಗಾ ಇರಿಸಿದ ಬಳಿಕ ಈಗ ’ಆಪರೇಷನ್ ಅತ್ತಿಲಾ’ ಎಂಬ ಗುಪ್ತ ಕಾರ್ಯಾಚರಣೆಯೊಂದು ತನ್ನ ಪ್ರಮುಖ ಹಂತವನ್ನು ತಲುಪಿತ್ತು. ಸಂಜೆ ೭.೧೫ರ ಸಮಯ. ಕ್ಲೆಮೆಂಟಿನ ಮನೆಯಿಂದ ೨೦ ಮೀಟರುಗಳಷ್ಟು ಮೊದಲು ಮರ್ಸಿಡಿಸ್ ಕಾರೊಂದು ನಿಂತಿತ್ತು. ಕಾರಿನ ಬಾನೆಟ್ ಮೇಲಕ್ಕೇರಿಸಿ ಏನೋ ದುರಸ್ತಿ ಮಾಡುವಂತೆ ಇಬ್ಬರು ನಟಿಸುತ್ತಿದ್ದರು. ಕಾರಿನ ಒಳಗೆ ಇನ್ನಿಬ್ಬರು ಇದ್ದರು. ಇವರೆಲ್ಲರೂ ರಿಕಾರ್ಡೊ ಕ್ಲೆಮೆಂಟಿಗಾಗಿ ಕಾಯುತ್ತಿದ್ದರು.

7.30ರ ನಂತರದ 3 ಬಸ್ಸುಗಳು ಹಾದುಹೋದರೂ ರಿಕಾರ್ಡೊ ಕ್ಲೆಮೆಂಟಿನ ಪತ್ತೆಯಿಲ್ಲ. 8.10ರ ಬಸ್ಸು, ತಂಗುದಾಣಕ್ಕೆ ಬರುವುದು ಕಾಣಿಸಿದ ಕೂಡಲೇ ಎಲ್ಲರೂ ಮತ್ತೆ ಅಲರ್ಟ್ ಆದರು. ಬಸ್ಸು ಒಬ್ಬ ಪ್ರಯಾಣಿಕನನ್ನು ಮಾತ್ರ ಇಳಿಸಿ ಮುಂದೆ ಸಾಗಿತು. ಆಚೀಚೆ ಸಾಗುತ್ತಿದ್ದ ವಾಹನಗಳ ಹೆಡ್ ಲೈಟಿನ ಪ್ರಖರತೆಗೆ ಈ ವ್ಯಕ್ತಿಯ ಆಕೃತಿ ಕಾರಿನ ಬಳಿ ಇದ್ದವರಿಗೆ ಸ್ಪಷ್ಟವಾಗಿ ಕಾಣುತ್ತಿತ್ತು. ಆತನ ಆ ನಡೆಯುವ ಶೈಲಿ! ಭೂಗತನಾಗಿ ೧೫ ವರ್ಷಗಳಾದರೂ ಅದು ಮಾತ್ರ ಬದಲಾಗಿರಲಿಲ್ಲ. ಅದಾಗಲೇ ತಾನು ಬರುವುದು ೩೦ ನಿಮಿಷಗಳಷ್ಟು ತಡವಾಗಿತ್ತು. ಮನೆಯಲ್ಲಿ ತನ್ನ ಸಣ್ಣ ಮಗ ಕಾಯುತ್ತಾ ಇರುತ್ತಾನೆ. ಆದಷ್ಟು ಬೇಗ ಮನೆ ತಲುಪಿ ಎಂದಿನಂತೆ ಆತನ ಜೊತೆ ಆಡುವುದಷ್ಟೇ ಆತನ ಮನಸಿನಲ್ಲಿತ್ತು. ಆದರೆ ತಾನು ಇನ್ನೆಂದೂ ತನ್ನ ಕುಟುಂಬದ ಯಾರನ್ನೂ ನೋಡುವುದಿಲ್ಲ ಎಂಬುವುದು ಕ್ಲೆಮೆಂಟಿಗೆ ಗೊತ್ತಿರಲಿಲ್ಲ!

ಕ್ಲೆಮೆಂಟ್ ಬಸ್ಸು ತಂಗುದಾಣದಿಂದ ಸ್ವಲ್ಪ ಮುಂದೆ ಬಂದು ಗೆರಿಬಾಲ್ದಿ ಸ್ಟ್ರೀಟ್-ಗೆ ತಿರುಗಿದಂತೆ, ಕಾರಿನ ಬಾನೆಟ್ ಬಳಿ ನಿಂತಿದ್ದ ಇಬ್ಬರಲ್ಲಿ ಒಬ್ಬ ಆತೆನೆಡೆ ನಿಧಾನವಾಗಿ ನಡೆಯಲಾರಂಭಿಸಿದ. ಕ್ಲೆಮೆಂಟ್-ನತ್ತ ನಡೆಯುತ್ತಿದ್ದ ಈ ಮೊಸ್ಸಾದ್ ಗುಪ್ತಚರನ ಹೆಸರು ಪೀಟರ್ ಮಾಲ್ಕಿನ್.

ಕ್ಲೆಮೆಂಟ್ ತನ್ನನ್ನು ಸಮೀಪಿಸಿದಂತೆ ತಾನು ಕಲಿತಿದ್ದ ಒಂದೇ ಸ್ಪಾನಿಷ್ ವಾಕ್ಯವನ್ನು ಮಾಲ್ಕಿನ್ ಉಸುರಿದ: ’ಉನ್ಮೊಮೆಂಟೊ, ಸೆನ್ಯೋರ್’ (ಒಂದ್ನಿಮಿಷ, ಸಾರ್). ಒಂದು ಕ್ಷಣ ವಿಚಲಿತನಾದ ಕ್ಲೆಮೆಂಟ್ ನಿಂತು ಒಂದು ಹೆಜ್ಜೆ ಹಿಂದೆ ಸರಿದ. ಕೂಡಲೇ ಆತನತ್ತ ಹಾರಿದ ಮಾಲ್ಕಿನ್, ಒಂದು ಕೈಯನ್ನು ಆತನ ಕುತ್ತಿಗೆಯ ಸುತ್ತಲೂ ಬಳಸಿ ಆತನನ್ನು ಬಲವಾಗಿ ಹಿಡಿದುಕೊಂಡನು. ಆ ಕ್ಷಣದಲ್ಲಿ ಕ್ಲೆಮೆಂಟ್ ಜೋರಾಗಿ ಕಿರುಚಿಕೊಂಡ. ’ಸದ್ದು ಮಾಡಬೇಡ. ಅದರಿಂದೇನೂ ಪ್ರಯೋಜನವಾಗದು’ ಎಂದು ಮಾಲ್ಕಿನ್ ಎಚ್ಚರಿಸಿದ ಕೂಡಲೇ ಕಾರಿನ ಬಾನೆಟ್ ಬಳಿ ಇದ್ದ ಗುಪ್ತಚರ ಮೆಈರ್ ಬಳಿ ಬಂದು, ಅವರಿಬ್ಬರು ಕ್ಲೆಮೆಂಟ್-ನನ್ನು ಎತ್ತಿ ಕಾರಿನೆಡೆ ಒಯ್ದರು. ಕಾರಿನ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಗುಪ್ತಚರ ಊಝಿ ಕೈದಿಯನ್ನು ಒಳಗೆ ಎಳೆದುಕೊಂಡನು. ಎಲ್ಲರೂ ಒಳಗೆ ಕುಳಿತ ಬಳಿಕ ಚಾಲಕನಾಗಿದ್ದ ಗುಪ್ತಚರ ಹೆನ್ಸ್, ಅದಾಗಲೇ ಎಲ್ಲಾ ರೀತಿಯಿಂದಲೂ ಸಜ್ಜುಗೊಳಿಸಲಾಗಿದ್ದ ಅಡಗುತಾಣಕ್ಕೆ ಮರ್ಸಿಡಿಸ್ ಕಾರನ್ನು ಓಡಿಸಿದ.

ಹೀಗೆ ದ್ವಿತೀಯ ಮಹಾಯುದ್ಧದ ನಂತರ ೧೫ ವರ್ಷಗಳ ತನಕ ತಲೆಮರೆಸಿಕೊಂಡಿದ್ದ ಬಹಳ ಪ್ರಮುಖ ನಾಝಿ (ಉಚ್ಚಾರ: ನಾತ್-ಝಿ) ಯುದ್ಧಕೈದಿ ಈಗ ಇಸ್ರೇಲ್ ಗುಪ್ತಚರ ವಿಭಾಗ ಮೊಸ್ಸಾದ್ ಕೈಗೆ ಸಿಕ್ಕಿಬಿದ್ದ. ಯುರೋಪಿನಾದ್ಯಂತ ಅಸಂಖ್ಯಾತ ಯಹೂದಿಗಳನ್ನು ಅಮಾನುಷವಾಗಿ ಕೊಲೆಗೈದು ತಲೆಮರೆಸಿಕೊಂಡಿರುವ ಮಾಜಿ ನಾಝಿ ಅಧಿಕಾರಿಗಳನ್ನು ಮೊಸ್ಸಾದ್ ಮತ್ತು ಯಹೂದಿಗಳು ಹುಡುಕಾಡುತ್ತಲೇ ಇದ್ದರು. ಇದರ ಪ್ರತಿಫಲವಾಗಿ ಈಗ ಸೆರೆಸಿಕ್ಕಿದ್ದು ರಿಕಾರ್ಡೊ ಕ್ಲೆಮೆಂಟ್ ಎಂದು ಹೆಸರು ಬದಲಾಯಿಸಿಕೊಂಡಿದ್ದ ಮತ್ತು ಯಹೂದಿಗಳ ಮಾರಣಹೋಮ ಸಲೀಸಾಗಿ ಮತ್ತು ಸುಗಮವಾಗಿ ನಡೆಯುವಂತೆ ಡೆತ್ ಕ್ಯಾಂಪ್, ಗ್ಯಾಸ್ ಚೇಂಬರ್ ಇತ್ಯಾದಿಗಳ ರೂವಾರಿಯಾಗಿದ್ದ ಈ ನಾಝಿ ಅಧಿಕಾರಿ.

ಈ ನಾಝಿ ಅಧಿಕಾರಿಯ ಗುರುತು ಹಿಡಿಯಲು ಅವಶ್ಯವಿರುವ ಎಲ್ಲ ವಿವರಗಳನ್ನು ಮೊಸ್ಸಾದ್, ನಾಝಿ ಎಸ್.ಎಸ್ (ಶು-ಟ್-ಝ್ ಸ್ಟಾಫೆ) ಪಡೆಯ ಕಡತಗಳಿಂದ ಪಡೆದುಕೊಂಡಿತ್ತು. ಗುಪ್ತಚರ ಹೆನ್ಸ್, ಜರ್ಮನ್ ಭಾಷೆಯಲ್ಲಿ ವಿಚಾರಣೆ ಆರಂಭಿಸಿದ.

’ವೀ ಹೈಸನ್ ಸೀ?’ (Whats your name?)

’ರಿಕಾರ್ಡೊ ಕ್ಲೆಮೆಂಟ್’

ನಾಲ್ಕು ಬಾರಿ ಹೆನ್ಸ್ ಈ ಪ್ರಶ್ನೆಯನ್ನು ಕೇಳಿದರೂ, ಅದೇ ಉತ್ತರವನ್ನು ಆ ನಾಝಿ ಅಧಿಕಾರಿ ನೀಡಿದ. ಅಸಹನೆಯಿಂದ ಹೆನ್ಸ್, ಆತನ ಕೋಟ್ ಮತ್ತು ಅಂಗಿಗಳನ್ನು ಬಿಚ್ಚಲು ಉಳಿದವರಿಗೆ ಆದೇಶಿಸಿದ. ಬಳಿಕ ಕ್ಲೆಮೆಂಟಿನ ಎಡ ಭುಜವನ್ನು ಮೇಲಕ್ಕೆತ್ತಿದರೆ ಅಲ್ಲಿ ಆತನ ರಕ್ತದ ಗುಂಪಿಗೆ ಸಂಬಂಧಿಸಿದ ಹಚ್ಚೆಯನ್ನು ಅಳಿಸಿಹಾಕಿದ್ದ ಗುರುತು ಇತ್ತು! ನಂತರ ಎಲ್ಲರೂ ಅಳತೆ ತೆಗೆಯುವ ಟೇಪುಗಳನ್ನು ಹಿಡಿದುಕೊಂಡು ಆ ಅಧಿಕಾರಿಯ ಸುತ್ತಲೂ ಓಡಾಡತೊಡಗಿದರು. ತಲೆಯ ಅಳತೆ, ದೇಹದ ಅಳತೆ, ಪಾದರಕ್ಷೆಯ ಆಳತೆ ಎಲ್ಲವೂ ತಾಳೆಯಾದವು. ಆತನ ಎದೆಯ ಮೇಲಿದ್ದ ಗಾಯದ ಗುರುತು ಕೂಡಾ ಎಸ್.ಎಸ್ ಕಡತದಲ್ಲಿ ವಿವರಿಸಿದಂತೆ ಇತ್ತು. ಮತ್ತೆ ಹೆನ್ಸ್ ಕೇಳಲು ಆರಂಭಿಸಿದ.

’ವೀ ಹೈಸನ್ ಸೀ?’

’ಒಟ್ಟೋ ಹೆನಿಂಗರ್’

ಎರಡನೇ ಮಹಾಯುದ್ಧ ಮುಗಿದ ಬಳಿಕ ಈ ನಾಝಿ ಅಧಿಕಾರಿ ತನ್ನ ಹೆಸರನ್ನು ಒಟ್ಟೋ ಹೆನಿಂಗರ್ ಎಂದು ಬದಲಾಯಿಸಿಕೊಂಡು ೫ ವರ್ಷ ಯುರೋಪಿನಲ್ಲೇ ತಲೆಮರೆಸಿಕೊಂಡಿದ್ದ. ನಂತರ ಅರ್ಜೆಂಟಿನಾಕ್ಕೆ ಪಲಾಯನ ಮಾಡಿ ತನ್ನ ಹೆಸರನ್ನು ರಿಕಾರ್ಡೊ ಕ್ಲೆಮೆಂಟ್ ಎಂದು ಬದಲಾಯಿಸಿಕೊಂಡಿದ್ದ. ಇವೆಲ್ಲವೂ ಮೊಸ್ಸಾದ್-ಗೆ ಗೊತ್ತಿತ್ತು.

’ವೀ ಹೈಸನ್ ಸೀ?’

’ಒಟ್ಟೋ ಹೆನಿಂಗರ್’

'ಯಹೊರ್ ಎಸ್.ಎಸ್ ತ್ಸಾಲ್ ವಾರ್ ೪೫೫೨೬'. (Your SS Number was 45526)

’ನೈನ್. ಎಸ್ ಇಸ್ತ್ ೪೫೩೨೬’ (No. It is 45326)

’ದಾಸ್ ಈಸ್ತ್ ಗೂತ್. ನೂನ್, ವೀ ಹೈಸನ್ ಸೀ?’ (Thats good. Now, whats your name?)

’ಇಶ್ ಬಿನ್ ಅಡಾಲ್ಫ್ ಅಯ್ಕ್ಮನ್’ (I am Adolf Eichmann)

ಯಾರು ಈ ಅಡಾಲ್ಫ್ ಅಯ್ಕ್ಮನ್? ಯುದ್ಧ ನಡೆಯುತ್ತಿದ್ದ ಸಮಯದಲ್ಲಿ ಈತ ಕಾದಾಟಕ್ಕೆ ತೆರಳಿದವನಲ್ಲ. ಈತ ಯಾವುದೇ ನಾಝಿ ಯುದ್ಧ ಪಡೆಗಳ ಸದಸ್ಯನೂ ಆಗಿರಲಿಲ್ಲ. ಎರಡನೇ ಮಹಾಯುದ್ಧದಲ್ಲಿ ಯಹೂದಿಗಳ ಸರ್ವನಾಶ ಹಿಟ್ಲರ್-ನ ಉದ್ದೇಶಗಳಲ್ಲಿ ಒಂದಾಗಿತ್ತು. ಇದರ ಸಂಪೂರ್ಣ ಜವಾಬ್ದಾರಿಯನ್ನು ಅಡಾಲ್ಫ್ ಅಯ್ಕ್ಮನ್-ಗೆ ನೀಡಲಾಗಿತ್ತು. ಜರ್ಮನಿ ಶರಣಾಗುವಷ್ಟರಲ್ಲಿ ಅಯ್ಕ್ಮನ್, ೬ ಮಿಲಿಯನ್ ಯಹೂದಿಗಳನ್ನು ಮುಗಿಸಿದ್ದ! ಇನ್ನೊಂದು ವರ್ಷ ಯುದ್ಧ ನಡೆದಿದ್ದರೆ ಅಯ್ಕ್ಮನ್, ಯುರೋಪಿನಿಂದ ಎಲ್ಲಾ ಯಹೂದಿಗಳನ್ನು ಕಣ್ಮರೆ ಮಾಡಿಬಿಡುತ್ತಿದ್ದ.

೧೯೩೩ರಲ್ಲಿ ಅಯ್ಕ್ಮನ್, ನಾಝಿ ಆಂತರಿಕ ಪಡೆಯಾಗಿದ್ದ ಎಸ್.ಎಸ್ (ಶುಟ್-ಝ್ ಸ್ಟಾಫೆ) ಸೇರಿಕೊಂಡ. ಇಲ್ಲೇ ಆತನಿಗೆ ಆ ನಂಬರ್ ೪೫೩೨೬ ಸಿಕ್ಕಿದ್ದು! ೧೯೩೪ರಲ್ಲಿ ಆತನನ್ನು ಡಕಾವ್ ಎಂಬಲ್ಲಿದ್ದ ಕುಖ್ಯಾತ ಕ್ಯಾಂಪಿನ ಗಾರ್ಡ್ ಆಗಿ ನೇಮಿಸಲಾಯಿತು. ಅದೇ ವರ್ಷ ಆತನನ್ನು ’ಯಹೂದಿಗಳ ವಿಭಾಗ’ಕ್ಕೆ ವರ್ಗಾವಣೆ ಮಾಡಲಾಯಿತು. ಇಲ್ಲಿಂದಲೇ ಯಹೂದಿಗಳ ಬಗ್ಗೆ ಆಸಕ್ತಿ ತೋರಲು ಅಯ್ಕ್ಮನ್ ಆರಂಭಿಸಿದ. ಯುರೋಪಿನ ಯಹೂದಿಗಳಿಗೆ ರಾಹುಕಾಲ ಆರಂಭವಾಗಿತ್ತಲ್ಲದೇ ಮುಂದಿನ ೧೧ ವರ್ಷಗಳ ಕಾಲ ಜವರಾಯ, ಅಯ್ಕ್ಮನ್ ರೂಪದಲ್ಲಿ ಯಹೂದಿಗಳನ್ನು ಬೆಂಬಿಡದಂತೆ ಭೀಕರವಾಗಿ ಕಾಡಿದ.

ಅಡಾಲ್ಫ್ ಅಯ್ಕ್ಮನ್ ಒಬ್ಬ ಮಹತ್ವಾಕಾಂಕ್ಷಿ. ಮುಂದೆ ’ಯಹೂದಿಗಳ ವಿಭಾಗ’ ನಾಝಿ ಪಾರ್ಟಿಯ ಒಳಗೆ ದೊಡ್ಡ ಮಟ್ಟದ ರೂಪವನ್ನು ಪಡೆದುಕೊಳ್ಳಲಿದೆ ಎಂದು ಅಯ್ಕ್ಮನ್ ಗ್ರಹಿಸಿದ್ದ. ಈ ಯಹೂದಿಗಳ ವಿಭಾಗದ ಮುಖ್ಯಸ್ಥ ತಾನೇ ಆಗಬೇಕೆಂಬುದು ಈತನ ಆಸೆಯಾಗಿತ್ತು. ಹಾಗಾಗಿ ಯಹೂದಿ ಸಂಸ್ಕೃತಿಯ ಎಲ್ಲಾ ಆಯಾಮಗಳನ್ನು ಆಳವಾಗಿ ಅಧ್ಯಯನ ಮಾಡಿದ. ಯಹೂದಿಗಳ ಸಭೆಗಳಲ್ಲಿ ಹಾಜರಿದ್ದು ಅವರ ಆಚಾರ ವಿಚಾರಗಳನ್ನು ಗಮನಿಸಿದ. ನಡೆ ನುಡಿ ಇತ್ಯಾದಿಗಳನ್ನು ಕಲಿತ. ನಗರಗಳಲ್ಲಿ ಯಹೂದಿಗಳು ವಾಸವಾಗಿದ್ದ ಭಾಗಗಳಿಗೆ ತೆರಳಿ ಅವರ ಜೀವನಶೈಲಿಯನ್ನು ಅಭ್ಯಸಿಸಿದ. ಯಹೂದಿಗಳ ’ಝೊಯೊನಿಸಮ್’ ಎಂಬ ರಾಜಕೀಯ ಆಂದೋಲನದ ಬಗ್ಗೆ ತಿಳಿದುಕೊಂಡ. ಅವರ ಭಾಷೆಗಳಾದ ’ಹೀಬ್ರೊ’ ಮತ್ತು ’ಯಿಡ್ಡಿಶ್’ ಕಲಿತ. ಅಲ್ಪ ಸಮಯದಲ್ಲೇ ನಾಝಿ ಎಸ್.ಎಸ್ ನಲ್ಲಿ ’ಯಹೂದಿ ಸ್ಪೆಷಲಿಸ್ಟ್’ ಎಂದು ಗುರುತಿಸಿಕೊಂಡ.

೧೯೩೯ರಲ್ಲಿ ಅಯ್ಕ್ಮನ್-ನನ್ನು ಗೆಸ್ಟಾಪೊ (ನಾಝಿ ಸಿಕ್ರೇಟ್ ಸ್ಟೇಟ್ ಪೊಲೀಸ್) ವಿಭಾಗ ೪ರ ಮುಖ್ಯಸ್ಥನಾಗಿ ನೇಮಕ ಮಾಡಲಾಗುವುದರ ಮೂಲಕ ಲೆಫ್ಟಿನಂಟ್ ಕರ್ನಲ್ ಮಟ್ಟಕ್ಕೆ ಭಡ್ತಿ ನೀಡಲಾಯಿತು. ನಾಝಿ ಹಿಡಿತದಲ್ಲಿರುವ ಎಲ್ಲಾ ೧೬ ದೇಶಗಳಲ್ಲಿನ ಯಹೂದಿಗಳ ಬಗ್ಗೆ ಕಾನೂನು ರೂಪಿಸುವುದು ಅಥವಾ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಗೆಸ್ಟಾಪೊದ ಈ ವಿಭಾಗದ ಜವಾಬ್ದಾರಿಯಾಗಿತ್ತು. ಯುದ್ಧ ಮುಗಿಯುವವರೆಗೂ ಇದೇ ಹುದ್ದೆಯಲ್ಲಿ ಅಯ್ಕ್ಮನ್ ಮುಂದುವರೆದ.

ನಾಝಿ ಜರ್ಮನಿಯಲ್ಲಿ ಅಡಾಲ್ಫ್ ಅಯ್ಕ್ಮನ್ ಖ್ಯಾತಿ ಗಳಿಸಿದ ರೀತಿ ನೋಡಿದರೆ ಬೆರಗಾಗದೇ ಇರದು. ಕೇವಲ ೩ ವರ್ಷಗಳಲ್ಲಿ ಮಾಮೂಲಿ ಪೇದೆಯಿಂದ (ಸಾರ್ಜೆಂಟ್) ಗೆಸ್ಟಾಪೊ ವಿಭಾಗ ೪ರ ಮುಖ್ಯಸ್ಥನ ಸ್ಥಾನಕ್ಕೆ (ಲೆಫ್ಟಿನಂಟ್ ಕರ್ನಲ್) ಈತ ಏರಿಬಿಟ್ಟಿದ್ದ. ಅಯ್ಕ್ಮನ್-ನನ್ನು ಮೊದಲಿನಿಂದಲೂ ಬಲ್ಲವರು ಈ ೩ ವರ್ಷಗಳಲ್ಲಿ ಆತನಲ್ಲಿ ಆದ ಬದಲಾವಣೆಗಳನ್ನು ಕಂಡು ಬೆರಗಾಗಿದ್ದರು. ತನಗಾಗಿಯೇ ಮೀಸಲಾಗಿಟ್ಟ ದೊಡ್ಡ ಅರಮನೆಯಂತಹ ಕಚೇರಿಯಲ್ಲಿ ಕೆಲಸ ಮಾಡುತ್ತಾ, ಡ್ರೈವರ್ ಇರುವ ಕಾರಿನಲ್ಲಿ ಓಡಾಡುತ್ತಾ, ನೀಟಾಗಿ ಸಂಪೂರ್ಣ ಎಸ್.ಎಸ್ ಪಡೆಯ ಸಮವಸ್ತ್ರವನ್ನು ಶಿಸ್ತಿನಲ್ಲಿ ಧರಿಸಿ, ಒಬ್ಬ ಸರ್ವಾಧಿಕಾರಿಯ ಗತ್ತಿನಲ್ಲಿ ಅಯ್ಕ್ಮನ್ ಓಡಾಡುತ್ತಿದ್ದ. ೪ ವರ್ಷಗಳ ವೈವಾಹಿಕ ಜೀವನ, ಇಬ್ಬರು ಮಕ್ಕಳು ಮತ್ತು ಯುರೋಪಿನಲ್ಲಿ ಹೋದಲ್ಲೆಲ್ಲಾ ಗೆಳತಿಯರು ಹೀಗೆ ಅಡಾಲ್ಫ್ ಅಯ್ಕ್ಮನ್ ಜೀವಿಸುತ್ತಿದ್ದ.

ಯುರೋಪಿನ ದೇಶಗಳ ಪೈಕಿ ಪೋಲಂಡಿನಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ (೩.೪ ಮಿಲಿಯನ್) ಯಹೂದಿಗಳು ವಾಸವಾಗಿದ್ದರು. ಜರ್ಮನಿ, ಪೋಲಂಡ್-ನ್ನು ಅತಿಕ್ರಮಿಸಿದ ಬಳಿಕ ಯಹೂದಿಗಳನ್ನೆಲ್ಲಾ ಬಂಧಿಸಿ ವಾರ್ಸಾದಲ್ಲಿನ ’ಘೆಟ್ಟೋ’ಗಳಲ್ಲಿ ತುಂಬಿಸಲಾಯಿತು. ಹಸಿವು ಮತ್ತು ರೋಗಗಳಿಂದ ಸಾವಿರಾರು ಜನರು ಈ ಘೆಟ್ಟೋಗಳಲ್ಲೇ ಅಂತ್ಯ ಕಂಡರು. ಇಂತಹ ಘೆಟ್ಟೋಗಳು ರೈಲು ಮಾರ್ಗಗಳ ಸಮೀಪದಲ್ಲೇ ಇರುವಂತೆ ಅಯ್ಕ್ಮನ್ ನೋಡಿಕೊಳ್ಳುತ್ತಿದ್ದ. ಮುಂದಿನ ದಿನಗಳಲ್ಲಿ ಲಕ್ಷಾಂತರ ಯಹೂದಿಗಳನ್ನು ರೈಲುಗಳ ಮೂಲಕ ಇಂತಹ ಘೆಟ್ಟೋಗಳಿಗೆ ಮತ್ತು ಕ್ಯಾಂಪುಗಳಿಗೆ ಕರೆತರಲು ಸುಲಭವಾಗುತ್ತದೆ ಎಂದು ಯುದ್ಧದ ಆರಂಭದ ದಿನಗಳಲ್ಲೇ ಊಹಿಸಿದ್ದ ಈ ಆಸಾಮಿ.

ಎಸ್.ಎಸ್.ಪಡೆಗಳ ಸುಪರ್ದಿಯೊಳಗೆ ಐನ್-ಝಾಟ್-ಸ್-ಗ್ರೊಪ್ಪೆನ್ (ಸ್ಪೆಷಲ್ ಆಪರೇಷನ್ಸ್ ಯುನಿಟ್) ಎಂದು ಹೊಸ ಉಪವಿಭಾಗವೊಂದನ್ನು ರಚಿಸಲಾಯಿತು. ಈ ಉಪವಿಭಾಗದಲ್ಲಿ ಹಲವಾರು ತಂಡಗಳನ್ನು ರಚಿಸಲಾಯಿತು. ಪ್ರತಿ ತಂಡದ ಒಂದು ದಿನದ ಕಾರ್ಯಾಚರಣೆ ಈ ರೀತಿ ಇತ್ತು. ಒಂದು ಹಳ್ಳಿಗೆ ತೆರಳಿ ಅಲ್ಲಿನ ಎಲ್ಲಾ ಯಹೂದಿಗಳನ್ನು ಒಟ್ಟು ಮಾಡುವುದು. ಅವರಲ್ಲಿನ ಬೆಲೆಬಾಳುವ ವಸ್ತುಗಳನ್ನು ಒಟ್ಟು ಮಾಡಿ, ನಂತರ ಅವರನ್ನು ಊರಿನ ಹೊರಗೆ ಅದಾಗಲೇ ಅಗೆಯಲಾಗಿರುವ ದೊಡ್ಡ ಹೊಂಡದ ಬಳಿ ಕರೆದೊಯ್ಯಲಾಗುತ್ತಿತ್ತು. ಅಲ್ಲಿ ಅವರು ಧರಿಸಿದ ಉಡುಪುಗಳನ್ನು ಕಳಚುವಂತೆ ಆದೇಶಿಸಲಾಗುತ್ತಿತ್ತು. ನಂತರ ಅವರ ಕೊಲೆ ಮಾಡಿ, ಶವಗಳನ್ನೆಲ್ಲಾ ಆ ಹೊಂಡದಲ್ಲೇ ಹಾಕಿ ಮಣ್ಣು ಮುಚ್ಚಿಬಿಡುವುದು. ಈ ಕಾರ್ಯಾಚರಣೆಯಡಿ ಸೋವಿಯತ್ ಯೂನಿಯನ್-ನನ್ನು ಅತಿಕ್ರಮಿಸಿದ ಒಂದೇ ವರ್ಷದಲ್ಲಿ ಎಸ್.ಎಸ್.ಐನ್-ಝಾಟ್-ಸ್-ಗ್ರೊಪ್ಪೆನ್, ೩ ಲಕ್ಷ ಯಹೂದಿಗಳನ್ನು ಕೊಲೆ ಮಾಡಿತು. ಈ ಐನ್-ಝಾಟ್-ಸ್-ಗ್ರೊಪ್ಪೆನ್ ತಂಡಗಳ ಕಾರ್ಯಾಚರಣೆಗಳ ಚಿತ್ರಗಳು ಭೀಕರವಾಗಿವೆ. ಅವುಗಳನ್ನು ಇಲ್ಲಿ ನೋಡಬಹುದು. ಪ್ರತ್ಯಕ್ಷದರ್ಶಿಯೊಬ್ಬನ ಮಾತುಗಳನ್ನು ಇಲ್ಲಿ ಓದಬಹುದು.

ಎಸ್.ಎಸ್. ಐನ್-ಝಾಟ್-ಸ್-ಗ್ರೊಪ್ಪೆನ್ ಕಾರ್ಯವೈಖರಿಯನ್ನು ವೀಕ್ಷಿಸಲು ಅಯ್ಕ್ಮನ್, ಇಲ್-ಝಿಯೊ ಎಂಬಲ್ಲಿಗೆ ತೆರಳಿದನು. ಇಲ್ಲಿ ಆಗಷ್ಟೇ ಶವಗಳನ್ನು ಹೊಂಡದಲ್ಲಿ ಹಾಕಿ ಮುಚ್ಚಲಾಗಿತ್ತು. ಮೃತ ದೇಹಗಳ ವಿಪರೀತ ಒತ್ತಡದಿಂದ ರಕ್ತ, ’ಗೀಸರ್’ನಿಂದ ನೀರು ಚಿಮ್ಮುವಂತೆ ಹೊಂಡದಿಂದ ಹೊರಗೆ ಚಿಮ್ಮುತ್ತಿತ್ತು. ಎಸ್.ಎಸ್.ಐನ್-ಝಾಟ್-ಸ್-ಗ್ರೊಪ್ಪೆನ್ ಕಾರ್ಯಕ್ಷಮತೆಗೆ ಮೆಚ್ಚುಗೆ ವ್ಯಕ್ತಪಡಿಸಿ ಅಯ್ಕ್ಮನ್ ಬರ್ಲಿನ್-ಗೆ ಹಿಂತಿರುಗಿದ. ತದನಂತರ ಎಸ್.ಎಸ್.ನ ಹಿರಿಯ ಅಧಿಕಾರಿಯಾಗಿದ್ದ ಹೈನ್ರಿಚ್ ಹೀಮ್ಲರ್ ಅದೊಮ್ಮೆ ಇಂತಹ ಕೊಲೆಗಳನ್ನು ವೀಕ್ಷಿಸಿ ತಲೆ ತಿರುಗಿ ಬಿದ್ದರು. ಕೂಡಲೇ ಅಯ್ಕ್ಮನ್-ನನ್ನು ಸಂಪರ್ಕಿಸಿದ ಅವರು, ಸಾಯುವವರು ಹೇಗೂ ಸಾಯುತ್ತಾರೆ ಆದರೆ ನಮ್ಮ ಸೈನಿಕರಿಗೆ ಆ ರೀತಿ ಕೊಲ್ಲುವುದರಿಂದ ಬರುವ ಮಾನಸಿಕ ತೊಂದರೆಗಳನ್ನಾದರೂ ತಪ್ಪಿಸಿದಂತಾಗುತ್ತದೆ ಎಂದು ತಿಳಿಸಿ ಯಹೂದಿಗಳನ್ನು ಕೊಲೆಗೈಯುವ ಬೇರೆ ಮಾರ್ಗವನ್ನು ಕಂಡುಹುಡುಕುವಂತೆ ಸೂಚಿಸಿದರು. ಆಗ ಅಯ್ಕ್ಮನ್ ತನ್ನ ಗಮನ ತಿರುಗಿಸಿದ್ದು, ಗ್ಯಾಸ್ ಚೇಂಬರ್-ಗಳತ್ತ!

೧೯೪೨ರಲ್ಲಿ ಬರ್ಲಿನ್-ನಲ್ಲಿ ಅಯ್ಕ್ಮನ್ ಸೇರಿದಂತೆ ೧೫ ಪ್ರಮುಖ ನಾಝಿ ಅಧಿಕಾರಿಗಳು ’ಯಹೂದಿ ಪ್ರಾಬ್ಲೆಮ್’ಗೊಂದು ಫೈನಲ್ ಸೊಲ್ಯುಷನ್ ಕಂಡುಹುಡುಕುವ ಸಲುವಾಗಿ ಸಭೆ ಸೇರಿದ್ದರು. ಯುರೋಪಿನ ಎಲ್ಲಾ ೧೧ ಮಿಲಿಯನ್ ಯಹೂದಿಗಳನ್ನು ನಾಶ ಮಾಡುವುದಾಗಿ ನಿರ್ಧರಿಸಲಾಯಿತು. ಯುರೋಪಿನ ಉದ್ದಗಲಕ್ಕೆ ಒಬ್ಬನೇ ಒಬ್ಬ ಯಹೂದಿ ಇರಕೂಡದು ಎಂಬ ಮಾತುಗಳೊಂದಿಗೆ ಸಭೆಯನ್ನು ಮುಗಿಸಲಾಯಿತು.

ಕೂಡಲೇ ಕಾರ್ಯಪ್ರವೃತ್ತನಾದ ಅಯ್ಕ್ಮನ್, ಸೊಬಿಬೊರ್, ಮೈದೊನೆಕ್, ಬೆಲ್-ಝೆತ್ಸ್, ಹೆಲ್ಮ್-ನೊ, ಟ್ರೆಬ್ಲಿಂಕಾ ಮತ್ತು ಆಷ್-ವಿತ್-ಝ್ ಡೆತ್ ಕ್ಯಾಂಪುಗಳಲ್ಲಿದ್ದ ಗ್ಯಾಸ್ ಚೇಂಬರ್-ಗಳತ್ತ ವೃದ್ಧರು, ಮಹಿಳೆಯರು, ಗರ್ಭಿಣಿಯರು, ಮಕ್ಕಳು ಎಂಬ ಭೇದಭಾವವಿಲ್ಲದೆ ಹಿಂಡು ಹಿಂಡು ಯಹೂದಿಗಳನ್ನು ಕಳುಹಿಸಲು ಆರಂಭಿಸಿದ. ಗ್ಯಾಸ್ ಚೇಂಬರುಗಳು ಖಾಲಿ ಇರಬಾರದು. ದಿನದ ೨೪ ಗಂಟೆಗಳಲ್ಲೂ ಅವು ಕಾರ್ಯನಿರತವಾಗಿರಬೇಕು ಎಂಬುವುದು ಅಯ್ಕ್ಮನ್ ನಿಲುವಾಗಿತ್ತು. ಹಾಗೆ ಆಗಲು ಎಲ್ಲಾ ಡೆತ್ ಕ್ಯಾಂಪುಗಳಿಗೆ ನಿಯಮಿತ ಸಂಖ್ಯೆಯಲ್ಲಿ ಯಹೂದಿಗಳ ಸರಬರಾಜು ಆಗುತ್ತಲೇ ಇರಬೇಕು. ಆದ್ದರಿಂದ ಜರ್ಮನಿ ಅತಿಕ್ರಮಿಸಿಕೊಂಡಿದ್ದ ದೇಶಗಳ ಉದ್ದಗಲಕ್ಕೆ ಬಿಡುವಿಲ್ಲದೆ ಪ್ರಯಾಣಿಸಿದ ಅಯ್ಕ್ಮನ್, ಎಲ್ಲಾ ಡೆತ್ ಕ್ಯಾಂಪುಗಳಿಗೆ ವಾರಕ್ಕೆರಡು ರೈಲುಗಳಾದರೂ ಬರುವಂತೆ ನೋಡಿಕೊಳ್ಳುತ್ತಿದ್ದ. ಯುದ್ಧ ಅಂತ್ಯ ಕಂಡಾಗ ಯುರೋಪಿನ ೭೨% ಯಹೂದಿಗಳನ್ನು ಮತ್ತು ಪೋಲಂಡಿನ ೮೫% ಯಹೂದಿಗಳನ್ನು ಅಯ್ಕ್ಮನ್ ಮುಗಿಸಿದ್ದ.

ಮಾರ್ಚ್ ೧೯೪೪ರಲ್ಲಿ ಜರ್ಮನಿ, ಹಂಗೇರಿ ದೇಶವನ್ನು ಅತಿಕ್ರಮಿಸಿತು. ಯುರೋಪಿನಲ್ಲಿ ಆಗ ಅತ್ಯಧಿಕ ಸಂಖ್ಯೆಯಲ್ಲಿ ಯಹೂದಿಗಳ ಜನಸಂಖ್ಯೆ (೭,೨೫,೦೦೦) ಇದ್ದದ್ದು ಹಂಗೇರಿಯಲ್ಲಿ ಮಾತ್ರ. ಅತಿಕ್ರಮಿಸಿದ ದಿನವೇ ತನ್ನ ’ಗೆಸ್ಟಾಪೊ ಸ್ಪೆಷಲ್ ಸೆಕ್ಷನ್ ಕಮಾಂಡೋ’ಗಳೊಂದಿಗೆ ಹಂಗೇರಿಗೆ ಬಂದ ಅಯ್ಕ್ಮನ್, ಮೇ ೧೯೪೪ರಿಂದ ಗೂಡ್ಸ್ ರೈಲುಗಳನ್ನು ’ಯಹೂದಿ’ಗಳೆಂಬ ಸರಕುಗಳಿಂದ ತುಂಬಿಸಿ ಆಷ್-ವಿತ್-ಝ್ ಡೆತ್ ಕ್ಯಾಂಪಿಗೆ ಹೊರಡಿಸಲು ಆರಂಭಿಸಿದ. ನಂತರ ಡೆತ್ ಕ್ಯಾಂಪಿಗೆ ತೆರಳಿದ ಅಯ್ಕ್ಮನ್, ಖುದ್ದಾಗಿ ನಿಂತು ಈ ಯಹೂದಿಗಳನ್ನು ಮುಗಿಸುವ ಕೆಲಸ ಇನ್ನಷ್ಟು ವೇಗವಾಗಿ ಆಗುವಂತೆ ನೋಡಿಕೊಂಡ. ಹಂಗೇರಿಯ ಯಹೂದಿಗಳ ನಿರ್ನಾಮ ಮಾಡುವ ಕೆಲಸವನ್ನು ಅಯ್ಕ್ಮನ್ ಎಷ್ಟು ತ್ವರಿತಗತಿಯಲ್ಲಿ ನಿರ್ವಹಿಸಿದನೆಂದರೆ ಕೇವಲ ೪೫ ದಿನಗಳಲ್ಲಿ ಹಂಗೇರಿಯ ಯಹೂದಿಗಳಲ್ಲಿ ಅರ್ಧದಷ್ಟು ಜನರು (೩,೮೧,೬೬೧) ಆಷ್-ವಿತ್-ಝ್ ಡೆತ್ ಕ್ಯಾಂಪಿಗೆ ಆಗಮಿಸಿಯಾಗಿತ್ತು.

೧೯೪೪ರ ಕೊನೆಯಲ್ಲಿ ಮಿತ್ರರಾಷ್ಟ್ರಗಳು ಎಲ್ಲಾ ದಿಕ್ಕುಗಳಿಂದ ಜರ್ಮನಿಯನ್ನು ಸುತ್ತುವರಿದಿದ್ದವು. ಸೋವಿಯತ್ ಸೇನೆ ಹಂಗೇರಿ ರಾಜಧಾನಿ ಬುಡಾಪೆಸ್ಟ್ ಸಮೀಪಕ್ಕೆ ಆಗಮಿಸಿದಾಗ, ಯಹೂದಿಗಳ ಸಾಗಾಟವನ್ನು ನಿಲ್ಲಿಸುವಂತೆ ಅಯ್ಕ್ಮನ್-ಗೆ ಆದೇಶಿಸಲಾಯಿತು. ಇದನ್ನು ಕಡೆಗಣಿಸಿದ ಅಯ್ಕ್ಮನ್, ಇನ್ನೂ ೫೦,೦೦೦ ಹಂಗೇರಿ ಯಹೂದಿಗಳನ್ನು ಕಲೆ ಹಾಕಿ ಅವರನ್ನು ೮ ದಿನಗಳ ಕಾಲ ಡೆತ್ ಕ್ಯಾಂಪಿನೆಡೆ ನಡೆದುಕೊಂಡು ಹೋಗುವಂತೆ ಆದೇಶಿಸಿದ.

ಸೋವಿಯತ್ ಸೈನ್ಯ ಬುಡಾಪೆಸ್ಟಿನ ಸನಿಹ ಬಂದಂತೆ ಅಯ್ಕ್ಮನ್ ಅಸ್ಟ್ರಿಯಾದತ್ತ ತೆರಳಿದ. ಅಲ್ಲಿ ಕೆಲವು ನಾಝಿ ಸೈನಿಕರನ್ನು ಸೇರಿಕೊಂಡ. ಸ್ವಲ್ಪ ಸಮಯದಲ್ಲೇ ಈ ಸೈನಿಕರಿಗೆ ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಶರಣಾಗುವಂತೆ ಆದೇಶ ದೊರಕಿತು, ಯಾಕೆಂದರೆ ಜರ್ಮನಿ ಶರಣಾಗಿತ್ತು. ಶರಣಾಗಲು ಅಯ್ಕ್ಮನ್-ಗೆ ಮನಸಿರಲಿಲ್ಲ. ಅದಕ್ಕಿಂತಲೂ ಮುಖ್ಯವಾಗಿ ಉಳಿದ ಸೈನಿಕರಿಗೆ ಆತನ ಜೊತೆಯಲ್ಲಿ ಶರಣಾಗಲು ಮನಸಿರಲಿಲ್ಲ. ಅಂತಹ ಕುಖ್ಯಾತಿಯನ್ನು ಅಯ್ಕ್ಮನ್ ಪಡೆದಿದ್ದ. ಉಳಿದ ಸೈನಿಕರ ಕೋರಿಕೆಯ ಮೇರೆಗೆ ಬೆಟ್ಟದ ಬದಿಯಲ್ಲಿದ್ದ ಕಾಲುದಾರಿಯಲ್ಲಿ ದೂರದಲ್ಲಿ ಅಯ್ಕ್ಮನ್ ಮರೆಯಾದ. ಬಳಿಕ ಆತನ ಸುಳಿವೇ ಇರಲಿಲ್ಲ, ೧೫ ವರ್ಷಗಳ ನಂತರ ಮೊಸ್ಸಾದ್ ಕೈಗೆ ಸಿಗುವವರೆಗೆ.

ಯುದ್ಧದ ಬಳಿಕ ಅಯ್ಕ್ಮನ್, ಉತ್ತರ ಜರ್ಮನಿಯ ಹಳ್ಳಿಯೊಂದರಲ್ಲಿ ಒಟ್ಟೋ ಹೆನಿಂಗರ್ ಎಂದು ಹೆಸರು ಬದಲಾಯಿಸಿ ೫ ವರ್ಷ ತಲೆಮರೆಸಿಕೊಂಡಿದ್ದನು. ನಂತರ ಇಟಲಿಗೆ ತೆರಳಿ ತಾನೊಬ್ಬ ನೆಲೆಯಿಲ್ಲದವ (ರೆಫ್ಯೂಜಿ) ಎಂದೂ ತನ್ನ ಹೆಸರು ರಿಕಾರ್ಡೊ ಕ್ಲೆಮೆಂಟ್ ಎಂದೂ ರೆಡ್ ಕ್ರಾಸ್ ಸೊಸೈಟಿಗೆ ನಂಬಿಸಿ ಮಾನವೀಯತೆಯ ಆಧಾರದ ಮೆಲೆ ಅವರಿಂದ ಪಾಸ್ ಪೋರ್ಟ್ ಗಿಟ್ಟಿಸಿಕೊಂಡನು. ದ್ವಿತೀಯ ಮಹಾಯುದ್ಧದ ಬಳಿಕ ನಾಝಿ ಅಧಿಕಾರಿಗಳಿಗೆ ಆಸರೆ ನೀಡಿದ್ದ ದೇಶಗಳಲ್ಲಿ ಅರ್ಜೆಂಟಿನಾ, ಸಿರಿಯ, ಜೋರ್ಡಾನ್ ಮತ್ತು ಪರಗ್ವೆ ಪ್ರಮುಖವಾದವು. ಅರ್ಜೆಂಟಿನಾದಲ್ಲಿ ನೆಲೆ ನಿಂತಿದ್ದ ಮಾಜಿ ನಾಝಿಗಳ ಸಹಾಯದಿಂದ ಅಯ್ಕ್ಮನ್ ಅಲ್ಲಿಗೆ ತೆರಳಿದನು. ನಂತರ ತನ್ನ ಹೆಂಡತಿ ಮತ್ತು ಮಕ್ಕಳನ್ನೂ ಅಲ್ಲಿಗೆ ಕರೆಸಿಕೊಂಡ. ತನ್ನ ಹೆಸರನ್ನು ಬದಲಾಯಿಸಿಕೊಂಡಿದ್ದರೂ, ತನ್ನ ಕುಟುಂಬದ ಸದಸ್ಯರ ಹೆಸರುಗಳನ್ನು ಅಯ್ಕ್ಮನ್ ಬದಲಾಯಿಸಿರಲಿಲ್ಲ. ಇದು ಆತನನ್ನು ಪತ್ತೆಹಚ್ಚುವಲ್ಲಿ ಮೊಸ್ಸಾದ್-ಗೆ ಬಹಳ ನೆರವಾಯಿತು.

ಲೋಥರ್ ಹರ್ಮನ್ ಎಂಬ ಯಹೂದಿ ೧೯೩೪ರಲ್ಲಿ ಡಕಾವ್ ಕ್ಯಾಂಪಿನಲ್ಲಿ ಸೆರೆಯಾಳಾಗಿದ್ದನು. ನಂತರ ಅಲ್ಲಿಂದ ತಪ್ಪಿಸಿಕೊಂಡು ಅರ್ಜೆಂಟಿನಾಕ್ಕೆ ಪಲಾಯನಗೈದು ಬ್ಯೂನಸ್ ಐರಿಸ್-ನಲ್ಲಿ ತನ್ನ ಕುಟುಂಬದ ಜೊತೆ ವಾಸಿಸುತ್ತಿದ್ದನು. ಅಯ್ಕ್ಮನ್ ಕೂಡಾ ಡಕಾವ್ ಕ್ಯಾಂಪಿನಲ್ಲಿ ನಾಝಿ ಪೇದೆಯಾಗಿ ಸೇವೆ ಸಲ್ಲಿಸಿದ್ದರಿಂದ, ಹರ್ಮನ್ ಆತನ ಗುರುತು ಹಿಡಿಯಬಲ್ಲವನಾಗಿದ್ದ. ಹರ್ಮನ್-ನ ಮಗಳು ಮತ್ತು ಅಯ್ಕ್ಮನ್-ನ ಮಗ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ತನ್ನ ತಂದೆ ಯಹೂದಿಗಳನ್ನು ನಾಶ ಮಾಡಿದ ಪರಿಯನ್ನು ಅಯ್ಕ್ಮನ್-ನ ಮಗ ಈ ಹುಡುಗಿಯತ್ತ ಕೊಚ್ಚಿಕೊಳ್ಳತೊಡಗಿದ್ದ. ಅಯ್ಕ್ಮನ್ ಅರ್ಜೆಂಟಿನಾದಲ್ಲಿರುವ ವಿಷಯವನ್ನು ಮೊಸ್ಸಾದ್-ಗೆ ತಿಳಿಸಲಾಯಿತು.

ಇಸ್ಸೆರ್ ಹಾರೆಲ್ ಆಗ ಮೊಸ್ಸಾದ್ ಮುಖ್ಯಸ್ಥರಾಗಿದ್ದರು. ಆಪರೇಷನ್ ಅತ್ತಿಲಾ ಕಾರ್ಯಾಚರಣೆಯನ್ನು ಯಶಸ್ವಿಗೊಳಿಸಿದ ಶ್ರೇಯ ಹಾರೆಲ್-ಗೆ ಸಲ್ಲುತ್ತದೆ. ತನ್ನ ಪ್ರಮುಖ ಗುಪ್ತಚರ ಪೀಟರ್ ಮಾಲ್ಕಿನ್-ನನ್ನು, ಹಾರೆಲ್ ಈ ಕೆಲಸಕ್ಕಾಗಿ ನಿಯುಕ್ತಿಗೊಳಿಸಿದ್ದರು. ಮಾಲ್ಕಿನ್ ಒಬ್ಬ ಪೋಲಂಡಿನ ಯಹೂದಿ. ೧೯೩೩ರಲ್ಲಿ ಈತ ಕೇವಲ ೪ ವರ್ಷದವನಾಗಿದ್ದಾಗ ಆತನ ಹೆತ್ತವರು ತಮ್ಮ ೩ ಗಂಡುಮಕ್ಕಳೊಂದಿಗೆ ಪ್ಯಾಲೆಸ್ತೀನಿಗೆ ಪಲಾಯನಗೈದಿದ್ದರು. ಆದರೆ ಮಾಲ್ಕಿನ್-ನ ಅಕ್ಕ ಫ್ರೂಮಾ ಪೋಲಂಡಿನಲ್ಲಿ ಉಳಿದುಬಿಟ್ಟಳು. ಪ್ಯಾಲೆಸ್ತೀನಿಗೆ ಬರಲು ಅನುಮತಿ ಸುಲಭದಲ್ಲಿ ದೊರಕುತ್ತಿರಲಿಲ್ಲ. ಆಕೆ ತನ್ನ ಗಂಡ ಮತ್ತು ಇಬ್ಬರು ಮಕ್ಕಳೊಂದಿಗೆ ನಂತರ ಬರುವೆನೆಂದು ತಿಳಿಸಿದ್ದಳು.

೧೯೩೮ರವರೆಗೆ ಫ್ರೂಮಾಳಿಂದ ಪತ್ರಗಳು ಬರುತ್ತಿದ್ದವು. ೧೯೩೯ರಲ್ಲಿ ಜರ್ಮನಿ ಪೋಲಂಡನ್ನು ಅತಿಕ್ರಮಿಸುವ ಮೂಲಕ ಎರಡನೇ ಮಹಾಯುದ್ಧ ಆರಂಭವಾಯಿತು. ಆ ನಂತರ ಫ್ರೂಮಾಳಿಂದ ಯಾವ ಪತ್ರವೂ ಬರಲಿಲ್ಲ. ಪೋಲಂಡಿನಿಂದ ತಪ್ಪಿಸಿಕೊಂಡು ಪ್ಯಾಲೆಸ್ತೀನಿಗೆ ಯಹೂದಿಗಳು ಬರುತ್ತಲೇ ಇದ್ದರು. ಬಂದವರೆಲ್ಲಾ ನಾಝಿ ಭೀಕರತೆಯ ಕತೆಗಳೊಂದಿಗೆ ಬರುತ್ತಿದ್ದರು. ಡೆತ್ ಕ್ಯಾಂಪುಗಳಿಗೆ ಅಯ್ಕ್ಮನ್, ಯಹೂದಿಗಳನ್ನು ಬಂಧಿಸಿ ಕಳುಹಿಸುತ್ತಿದ್ದ ವಿವರಗಳನ್ನು ಇವರು ಪ್ಯಾಲೆಸ್ತೀನಿನಲ್ಲಿ ನೆಲೆ ನಿಂತವರಿಗೆ ತಿಳಿಸತೊಡಗಿದರು. ಫ್ರೂಮಾ, ಆಕೆಯ ಮಕ್ಕಳ ಮತ್ತು ಗಂಡನ ಜೀವನ ಕೂಡಾ ಇತರ ಯಹೂದಿಗಳಂತೆ ಯಾವುದೋ ಒಂದು ಡೆತ್ ಕ್ಯಾಂಪಿನಲ್ಲಿ ಕೊನೆಗೊಂಡಿತ್ತು.

ತನ್ನ ಅಕ್ಕನಿಂದ ಬಂದಿದ್ದ ಪತ್ರಗಳನ್ನು ಅರ್ಜೆಂಟಿನಾಕ್ಕೆ ತೆರಳುವ ಒಂದು ವಾರ ಮೊದಲಿನವರೆಗೆ ಮಾಲ್ಕಿನ್ ಓದಿರಲಿಲ್ಲ. ಗುಪ್ತಚರ ಕೆಲಸವಾಗಿದ್ದರಿಂದ ತಾನು ಎಲ್ಲಿಗೆ ತೆರಳುವೆ ಎಂದು ಆತ ತನ್ನ ಅಮ್ಮನಿಗೂ ತಿಳಿಸುವಂತಿರಲಿಲ್ಲ. ಈಗ ತನ್ನ ಅಕ್ಕನ ಕುಟುಂಬದ ಕೊಲೆಗಾರನನ್ನು ತಾನು ಹಿಡಿಯಲು ಹೋಗುತ್ತಿರುವಾಗ, ಆಕೆ ಬರೆದಿದ್ದ ಪತ್ರಗಳನ್ನು ಓದುವ ಆಸೆಯಾಗಿತ್ತು. ಇಷ್ಟು ವರ್ಷ ಅಕ್ಕನ ಪತ್ರಗಳನ್ನು ಓದು ಎಂದರೂ ಓದದವ ಈಗ ಯಾಕೆ ಅನಿರೀಕ್ಷಿತವಾಗಿ ಕೇಳುತ್ತಿದ್ದಾನೆ ಎಂದು ಆತನ ಅಮ್ಮನಿಗೆ ಅನಿಸಿದರೂ ಆಕೆ ಏನೂ ಹೇಳದೆ ಎಲ್ಲಾ ಪತ್ರಗಳನ್ನು ಮಗನಿಗೆ ತಂದುಕೊಟ್ಟಳು.

ಒಂದು ರಾತ್ರಿ ಬೆಳಗಾಗುವವರೆಗೆ ಆ ಪತ್ರಗಳನ್ನು ಮತ್ತೆ ಮತ್ತೆ ಓದಿದ ಮಾಲ್ಕಿನ್, ಅಕ್ಕನ ಕುಟುಂಬದ ಮತ್ತು ತನ್ನ ಇತರ ೮೫ ಸಂಬಂಧಿಕರ ಸಾವಿಗೆ ಸೇಡು ತೀರಿಸಲು ದೊರಕಿರುವ ಅವಕಾಶವನ್ನು ಯಾವುದೆ ಕಾರಣಕ್ಕೂ ವಿಫಲವಾಗಲು ಬಿಡಬಾರದು ಎಂದು ನಿರ್ಧರಿಸಿದ್ದ. ತನ್ನ ಮೇಲಧಿಕಾರಿ ಇಸ್ಸೆರ್ ಹಾರೆಲ್ ಮತ್ತು ಇತರ ಸಂಗಡಿಗರೊಂದಿಗೆ ಸೇರಿ ಎಲ್ಲಾ ಅಪಾಯಗಳನ್ನು ಗಮನದಲ್ಲಿಟ್ಟುಕೊಂಡು ಮಾಲ್ಕಿನ್, ಅಯ್ಮನ್-ನನ್ನು ಸೆರೆಡಿಯುವ ರೀತಿಯನ್ನು ಪ್ಲ್ಯಾನ್ ಮಾಡಿದ್ದ.

ಈ ಕಾರ್ಯಚರಣೆಯಲ್ಲಿ ಭಾಗವಹಿಸಿದ್ದ ಮೊಸ್ಸಾದ್-ನ ಎಲ್ಲಾ ೩೦ ಗುಪ್ತಚರರ ಕುಟುಂಬಗಳ ಒಬ್ಬನಾದರೂ ಅಯ್ಕ್ಮನ್-ನ ಡೆತ್ ಕ್ಯಾಂಪುಗಳಲ್ಲಿ ಮರಣಹೊಂದಿದ್ದರು. ಈಗ ಆತನನ್ನು ಸೆರೆಹಿಡಿದದ್ದಾಯಿತು. ಆದರೆ ಆತನನ್ನು ಈಗ ಇಸ್ರೇಲಿಗೆ ಕರೆದೊಯ್ಯುವುದು ಹೇಗೆ? ಅರ್ಜೆಂಟಿನಾ ಮೇ ೧೯೬೦ರಲ್ಲಿ ತನ್ನ ೧೫೦ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತಿತ್ತು. ಆ ನಿಟ್ಟಿನಲ್ಲಿ ಅದುವರೆಗೆ ರಾಜತಾಂತ್ರಿಕ ಸಂಬಂಧಗಳಿಲ್ಲದ ದೇಶಗಳೊಂದಿಗೆ ಸಂಬಂಧಗಳನ್ನು ಬೆಸೆದುಕೊಳ್ಳುವ ಇರಾದೆಯೊಂದಿಗೆ ಅರ್ಜೆಂಟಿನಾ ಹಲವಾರು ದೇಶಗಳಿಂದ ರಾಜತಾಂತ್ರಿಕರನ್ನು, ಅತಿಥಿಗಳನ್ನು ಈ ಉತ್ಸವಕ್ಕೆ ಆಮಂತ್ರಿಸಿತ್ತು. ಇದರಲ್ಲಿ ಇಸ್ರೇಲ್ ಕೂಡಾ ಸೇರಿತ್ತು. ಅದುವರೆಗೆ ಇಸ್ರೇಲಿನ ಯಾವುದೇ ವಿಮಾನ ಅರ್ಜೆಂಟಿನಾದ ವಾಯುಪ್ರದೇಶದ ಮೇಲೆ ಹಾರಿರಲಿಲ್ಲ. ಇಸ್ಸೆರ್ ಹಾರೆಲ್, ಇಸ್ರೇಲಿನ ಅಧ್ಯಕ್ಷರೊಡನೆ ಚರ್ಚಿಸಿ ಈ ಟಾಪ್ ಸೀಕ್ರೆಟ್ ಕೆಲಸಕ್ಕಾಗಿ ಅರ್ಜೆಂಟಿನಾಕ್ಕೆ ತೆರಳಲಿದ್ದ ವಿಮಾನವನ್ನು ಬಳಸಿಕೊಳ್ಳಲು ಅನುಮತಿ ಕೋರಿದನು. ಕೂಡಲೇ ಅನುಮತಿ ಸಿಕ್ಕಿತು.

ಅತ್ತ ಇಸ್ರೇಲಿನ ವಿದೇಶಾಂಗ ವ್ಯವಹಾರಗಳ ಸಚಿವ ಬ್ಯೂನಸ್ ಐರಸ್-ನಲ್ಲಿ ತನ್ನ ದೇಶ ಹಾಗೂ ಅರ್ಜೆಂಟಿನಾದ ನಡುವೆ ಒಂದು ಉತ್ತಮ ಬಾಂಧವ್ಯ ಇಂದಿನಿಂದ ಆರಂಭವಾಗಲಿದೆ (ತನ್ನ ದೇಶ ಅಯ್ಕ್ಮನ್-ನನ್ನು ಅರ್ಜೆಂಟಿನಾದಿಂದ ಅದೇ ದಿನ ಕಿಡ್ನಾಪ್ ಮಾಡಲಿದೆ ಎಂಬುದರ ಅರಿವಿಲ್ಲದೆ) ಎಂದು ಭಾಷಣ ಮಾಡುತ್ತಿದ್ದರೆ, ಇತ್ತ ಇಸ್ಸರ್ ಹಾರೆಲ್ ಮತ್ತು ಆತನ ಉಳಿದ ಮೊಸ್ಸಾದ್ ಸಂಗಡಿಗರು ಆ ಬಾಂಧವ್ಯ ಶುರುವಾಗುವ ಮೊದಲೇ ಕೊನೆಗೊಳಿಸುವ ಕಾರ್ಯಕ್ಕೆ ಅಣಿಗೊಂಡಿದ್ದರು. ಅಯ್ಕ್ಮನ್-ಗೆ ಎಲ್-ಅಲ್ (ಇಸ್ರೇಲಿನ ಸರಕಾರಿ ವಿಮಾನ ಸಂಸ್ಥೆ) ಸಿಬ್ಬಂದಿಯ ಸಮವಸ್ತ್ರವನ್ನು ತೊಡಿಸಲಾಯಿತು. ಉತ್ಸವದ ಗಮ್ಮತ್ತು ಮುಗಿಸಿ ಹಿಂತಿರುಗುವ ಸಿಬ್ಬಂದಿಗಳಂತೆ ಪೋಸು ಕೊಟ್ಟು ಉಳಿದ ಸಿಬ್ಬಂದಿಗಳೊಂದಿಗೆ ಅಯ್ಕ್ಮನ್-ನನ್ನು ವಿಮಾನವನ್ನೇರಿಸಲಾಯಿತು. ಯಹೂದಿಗಳ ನಂಬರ್ ವನ್ ವೈರಿ ಈಗ ಅವರಿಂದಲೇ ಸೆರೆ ಹಿಡಿಯಲ್ಪಟ್ಟು, ಅವರದೇ ದೇಶದ ವಿಮಾನದಲ್ಲಿ ಅವರದೇ ದೇಶಕ್ಕೆ ನ್ಯಾಯವನ್ನು ಎದುರಿಸಲು ತೆರಳುತ್ತಿದ್ದನು. ನಂತರ ಅರ್ಜೆಂಟಿನಾಕ್ಕೆ ಈ ವಿಷಯ ತಿಳಿದು ಅವರು ರಂಪಾಟ ಮಾಡಿದ್ದೂ ಇದೆ. ಹೆಚ್ಚು ರಂಪಾಟ ಮಾಡಿದರೆ ನಾಝಿ ಯುದ್ಧಕೈದಿಗಳಿಗೆ ತಮ್ಮ ದೇಶ ಆಸರೆ ನೀಡಿದೆ ಎಂದು ಅಧಿಕೃತವಾಗಿ ಪ್ರಚಾರವಾಗಬಹುದು ಎಂದು ಅರಿತ ಅರ್ಜೆಂಟಿನಾ ಈ ವಿಷಯವನ್ನು ಅಲ್ಲಿಗೇ ಬಿಟ್ಟಿತು.

ಇಸ್ರೇಲಿನಲ್ಲಿ ಅಯ್ಕ್ಮನ್ ಮೇಲೆ ವಿಚಾರಣೆ ನಡೆಸಿ ಆತನನ್ನು ತಪ್ಪಿತಸ್ಥನೆಂದು ಸಾಬೀತುಪಡಿಸಿ ಮರಣದಂಡನೆಯನ್ನು ವಿಧಿಸಲಾಯಿತು. ಮೇ ೩೧, ೧೯೬೨ರಲ್ಲಿ ಆತನನ್ನು ಗಲ್ಲಿಗೇರಿಸಲಾಯಿತು. ೧೯೪೮ರಲ್ಲಿ ಸ್ವಾತಂತ್ರ್ಯ ಪಡೆದ ಬಳಿಕ ಇಂದಿನವರೆಗೆ ಇಸ್ರೇಲಿನ ಇತಿಹಾಸದಲ್ಲಿ ಮರಣದಂಡನೆಗೆ ಗುರಿಯಾಗಿರುವ ಏಕೈಕ ವ್ಯಕ್ತಿ ಈ ಅಡಾಲ್ಫ್ ಅಯ್ಕ್ಮನ್.

ಭಾನುವಾರ, ಮೇ 02, 2010

ಉಡುಪಿ ಕೃಷ್ಣ


ಇದು ಉಡುಪಿಯ ಕೃಷ್ಣನ ಒಂದು ಅಲಂಕಾರದ ಚಿತ್ರ. ಈಗ ಶಿರೂರು ಮಠದ ಪರ್ಯಾಯದ ಅವಧಿ. ಹಾಗಾಗಿ ಕೃಷ್ಣನಿಗೆ ಮಹಾಪೂಜೆ ಸಲ್ಲಿಸುವ ಮೊದಲ ಹಕ್ಕು ಶಿರೂರು ಮಠದ ಸ್ವಾಮಿಗಳಿಗೆ ಮಾತ್ರ. ಈ ಮಹಾಪೂಜೆಯನ್ನೂ ಸೇರಿಸಿ ಕೃಷ್ಣನಿಗೆ ದಿನಾಲೂ ೧೬ ಪೂಜೆಗಳಿವೆ. ಉಳಿದ ಮಠದ ಸ್ವಾಮಿಗಳು ಮಹಾಪೂಜೆಯೊಂದನ್ನು ಬಿಟ್ಟು ಇತರ ೧೫ ಪೂಜೆಗಳಲ್ಲಿ ಯಾವುದನ್ನಾದರೂ ಸಲ್ಲಿಸಬಹುದು. ತಮ್ಮ ಪರ್ಯಾಯವಲ್ಲದ ಸಮಯದಲ್ಲಿ ಇತರ ಮಠದ ಸ್ವಾಮಿಗಳು ಪೂಜೆ ಸಲ್ಲಿಸಲೇಬೇಕೆಂಬ ಯಾವ ನಿಯಮವೂ ಇಲ್ಲ. ಪೂಜೆ ಸಲ್ಲಿಸುವುದು ಅವರವರ ಇಷ್ಟ. ಪೂಜೆಯನ್ನು ಸಲ್ಲಿಸುವಲ್ಲಿ ಹಿರಿಯ ಸ್ವಾಮಿಗಳಿಗೆ ಆದ್ಯತೆ ನೀಡಲಾಗುತ್ತದೆ. ಇತರ ಮಠಗಳ ಸ್ವಾಮಿಗಳು ಪೂಜೆ ಸಲ್ಲಿಸಿದ ಬಳಿಕ ನಂತರ ಉಳಿದ ಇತರ ಪೂಜೆಗಳನ್ನು ಪರ್ಯಾಯ ಮಠದ ಸ್ವಾಮಿಯವರು ಸಲ್ಲಿಸುತ್ತಾರೆ. ಒಂದು ವೇಳೆ ಆ ದಿನ ಉಳಿದ ೭ ಮಠಗಳ ಸ್ವಾಮಿಗಳು ಯಾವುದೇ ಪೂಜೆ ಸಲ್ಲಿಸದೇ ಇದ್ದಲ್ಲಿ, ಪರ್ಯಾಯ ಮಠದ ಸ್ವಾಮಿಗಳೇ ದಿನದ ಎಲ್ಲಾ ಪೂಜೆಗಳನ್ನೂ ಸಲ್ಲಿಸಬೇಕು.

ಕೃಷ್ಣನಿಗೆ ಹಲವಾರು ಅಲಂಕಾರಗಳಿವೆ. ೪೦೦ ವರ್ಷಗಳ ಮೊದಲು ವಾದಿರಾಜ ಸ್ವಾಮಿಗಳು ಕೃಷ್ಣನಿಗೆ ೪೦೦ ಅಲಂಕಾರಗಳನ್ನು ಮಾಡಿದ್ದು ಇದುವರೆಗಿನ ದಾಖಲೆ. ಈ ವಾದಿರಾಜ ಸ್ವಾಮಿಗಳೇ ಪರ್ಯಾಯದ ಅವಧಿಯನ್ನು ೨ ತಿಂಗಳಿನಿಂದ ೨ ವರ್ಷಕ್ಕೆ ವಿಸ್ತರಿಸಿದವರು. ಇವರ ಹೆಸರಿನಲ್ಲಿರುವ ೪೦೦ ಅಲಂಕಾರಗಳ ದಾಖಲೆಯನ್ನು ಮುರಿಯಲು ಈಗಿನ ಪರ್ಯಾಯ ಸ್ವಾಮಿಗಳಿಗೆ ಮುಜುಗರ. ತಾನು ವಾದಿರಾಜ ಸ್ವಾಮಿಗಳಷ್ಟು ಪಾಂಡಿತ್ಯ ಗಳಿಸಿಲ್ಲ, ಅವರ ಮಟ್ಟಕ್ಕಿನ್ನೂ ತಾನು ತಲುಪಿಲ್ಲ ಎಂಬ ಭಾವನೆ ಈ ಸ್ವಾಮಿಗಳದ್ದು. ಆದ್ದರಿಂದ ಶಿರೂರು ಸ್ವಾಮಿಗಳು ೩೬೫ ಅಲಂಕಾರಗಳನ್ನು ಮಾಡುವ ನಿರ್ಧಾರ ಮಾಡಿದ್ದಾರೆ. ಅವರ ಅಲಂಕಾರಗಳಿನ್ನೂ ಆರಂಭಗೊಂಡಿಲ್ಲ. ಕೃಷ್ಣನಿಗೆ ಈಗ ಉಳಿದ ಮಠಗಳ ಸ್ವಾಮಿಗಳು ತಾವು ಪೂಜೆ ಸಲ್ಲಿಸುವಾಗ ಅಲಂಕಾರ ಮಾಡುತ್ತಾರೆ.

ಗೆಳೆಯ ಗುರುದತ್ತ ಒಬ್ಬ ಅದ್ಭುತ ಫೋಟೋಗ್ರಾಫರ್. ಪ್ರತಿ ದಿನದ ಅಲಂಕಾರವನ್ನು ಕ್ಯಾಮರಾ ಕಣ್ಣಿನಲ್ಲಿ ಸೆರೆ ಹಿಡಿಯುವುದು ಈಗ ಗುರುದತ್ತನ ಕೆಲಸ. ಪ್ರತಿದಿನದ ಕೃಷ್ಣನ ಅಲಂಕಾರದ ಚಿತ್ರವನ್ನು ಮಧ್ಯಾಹ್ನ ೨ ಗಂಟೆಯ ಒಳಗೆ ಶಿರೂರು ಮಠದ ಅಂತರ್ಜಾಲ ತಾಣದಲ್ಲಿ ಪ್ರಕಟಿಸಿ ಆಗಿರುತ್ತದೆ.

ಈಗ ಗುರು ತನ್ನನ್ನು ಸಂಪೂರ್ಣವಾಗಿ ಕೃಷ್ಣನ ಸೇವೆಗೆ ಮುಡಿಪಾಗಿಟ್ಟಿದ್ದಾನೆ. ಚಾರಣವಿಲ್ಲ, ಬೇರೆ ಫೋಟೋಗ್ರಾಫಿ ಅಸೈನ್-ಮೆಂಟುಗಳಿಲ್ಲ, ಪ್ರೊಫೆಷನಲ್ ಶೂಟ್-ಗಳಿಲ್ಲ, ಪ್ರಕೃತಿಯ ಜೊತೆ ಒಡನಾಟವಿಲ್ಲ. ಸಂಕ್ಷಿಪ್ತವಾಗಿ ಹೇಳಬೇಕೆಂದರೆ ಈಗ ಕೃಷ್ಣನ ಸೇವೆ ಬಿಟ್ಟು ಬೇರೇನೂ ಇಲ್ಲ! ಕೃಷ್ಣನ ಸೇವೆ ದಿನಾಲೂ ಮಾಡುವುದರಿಂದ ಕೆಲವು ಆಚರಣೆಗಳನ್ನು ಗುರು ತನ್ನ ದಿನನಿತ್ಯದ ಜೀವನದಲ್ಲಿ ಈಗ ಅಳವಡಿಸಿಕೊಳ್ಳಬೇಕಾಗಿದೆ. ಮುಂಜಾನೆ ಬಲೂ ಬೇಗ ಸ್ನಾನ, ಮಡಿ ಆಚರಣೆ, ಕೇವಲ ಸಸ್ಯಹಾರಿ ಆಹಾರ ಸೇವನೆ, ಬ್ರಹ್ಮಚಾರಿ ಜೀವನ, ಇತ್ಯಾದಿ. ದಿನಾಲೂ ಚಿತ್ರ ತೆಗೆಯಲು ಇರುವುದರಿಂದ ಮುಂದಿನ ಪರ್ಯಾಯದವರೆಗೆ ಉಡುಪಿ ಬಿಟ್ಟು ಹೋಗುವಂತಿಲ್ಲ! ಗುರುವಿನ ಡೆಡಿಕೇಶನ್ ಮೆಚ್ಚಲೇಬೇಕು. ಆದರೂ ನಮಗೆಲ್ಲ ಸಣ್ಣ ಗಾಬರಿಯೊಂದು ಆರಂಭವಾಗಿದೆ. ಎರಡು ವರ್ಷಗಳ ಕೃಷ್ಣನ ಮತ್ತು ಸ್ವಾಮಿಗಳ ಸಾಮೀಪ್ಯದ ಬಳಿಕ ತಾನು ಇನ್ನು ಸನ್ಯಾಸಿಯಾಗುತ್ತೇನೆ ಎಂದು ಈತ ಹೊರಟರೆ...!

ಶಿರೂರು ಮಠದ ಅಂತರ್ಜಾಲ ತಾಣದಲ್ಲಿ ಪ್ರತಿನಿತ್ಯ ಕೃಷ್ಣನ ಹೊಸ ಅಲಂಕಾರದ ಚಿತ್ರಗಳನ್ನು ಕಾಣಬಹುದು. ಅಲ್ಲೇ ಸ್ವಲ್ಪ ಜಾಲಾಡಿದರೆ ಉಡುಪಿ ಕೃಷ್ಣನಿಗೆ ಸಂಬಂಧಿಸಿದಂತೆ ಗುರು ತೆಗೆದ ಇನ್ನೂ ಇತರ ಚಿತ್ರಗಳನ್ನೂ ಕಾಣಬಹುದು.