ಗುರುವಾರ, ಆಗಸ್ಟ್ 30, 2012

ಗುರುವಾರ, ಆಗಸ್ಟ್ 16, 2012

ಭಾನುವಾರ, ಆಗಸ್ಟ್ 12, 2012

ಚನ್ನಕೇಶವ ದೇವಾಲಯ - ತಂಡಗ


ತಂಡಗ ಚನ್ನಕೇಶವ ದೇವಾಲಯವನ್ನು ಇಸವಿ ೧೩೧೬ರಲ್ಲಿ ನಿರ್ಮಿಸಲಾಯಿತು. ಅದು ಕೊನೆಯ ಹೊಯ್ಸಳ ದೊರೆ ೩ನೇ ವೀರ ಬಲ್ಲಾಳನ ಆಳ್ವಿಕೆಯ ಸಮಯ. ನಿರ್ಮಿಸಿದವರು ಯಾರು ಎಂಬ ಬಗ್ಗೆ ಮಾಹಿತಿ ದೊರಕಲಿಲ್ಲ. ಜಗತಿಯ ಮೇಲೆ ನಿರ್ಮಾಣಗೊಂಡಿರುವ ಈ ಏಕಕೂಟ ದೇವಾಲಯವು ಪೂರ್ವಾಭಿಮುಖವಾಗಿದ್ದು ಮುಖಮಂಟಪ, ನವರಂಗ, ಅಂತರಾಳ ಮತ್ತು ಗರ್ಭಗುಡಿಗಳನ್ನು ಹೊಂದಿದೆ.


ಶಿಖರದ ಎಲ್ಲಾ ೩ ತಾಳಗಳಲ್ಲಿ ಕೆತ್ತನೆಗಳಿದ್ದು ವಿಷ್ಣುವಿನ ಹಲವು ರೂಪಗಳನ್ನು ತೋರಿಸಲಾಗಿದೆ. ಶಿಖರದ ಮೇಲಿನ ಕಲಶ ಇನ್ನೂ ಉಳಿದುಕೊಂಡಿದೆ. ಹಾನಿಗೊಂಡಿರುವ ಚನ್ನಕೇಶವನ ಮೂರ್ತಿಯೊಂದನ್ನು ದೇವಾಲಯದ ಹೊರಗೆ ಇರಿಸಲಾಗಿದೆ.


ದೇವಾಲಯ ಕೈಪಿಡಿಯನ್ನು ಹೊಂದಿದ್ದು ಇಲ್ಲಿಯೂ ಸುಂದರ ಕೆತ್ತನೆಗಳಿವೆ. ದೇವಾಲಯದ ಮುಂಭಾಗದ ಕೈಪಿಡಿ ಎಂದೋ ಬಿದ್ದುಹೋಗಿದ್ದು, ಅಲ್ಲೀಗ ತೇಪೆ ಸಾರಿಸಲಾಗಿದೆ.


ಕೊನೆಯ ಕೆಲವು ಹೊಯ್ಸಳ ದೊರೆಗಳ ಆಳ್ವಿಕೆಯ ಸಮಯದಲ್ಲಿ ಮುಖಮಂಟಪದ ವೈಭವೀಕರಣವನ್ನು ಕಡಿಮೆಗೊಳಿಸಿದಂತೆ ಕಂಡುಬರುತ್ತದೆ. ಇಲ್ಲೂ ಎರಡು ಕಂಬಗಳ ಸರಳ ಹೊರಚಾಚು ಮುಖಮಂಟಪವಿದ್ದು ದೇವಾಲಯದ ದ್ವಾರಕ್ಕೆ ವ್ಯಕ್ತಿಯೊಬ್ಬ ಉದ್ದಂಡ ನಮಸ್ಕಾರ ಮಾಡುವ ಉಬ್ಬುಶಿಲ್ಪವನ್ನು ನೆಲದಲ್ಲಿ ಕೆತ್ತಲಾಗಿದೆ. ಜಗತಿಯ ಮೆಟ್ಟಿಲುಗಳನ್ನೇರಿದ ಕೂಡಲೇ ಚೌಕಾಕಾರದ ಕಲ್ಲೊಂದು ಕಾಣಬರುವುದು. ಇದನ್ನು ’ಆಣೆ ಮಾಡುವ ಕಲ್ಲು’ ಎಂದು ಕರೆಯುತ್ತಾರೆ. ಈ ಉಬ್ಬುಶಿಲ್ಪ ಮತ್ತು ಆಣೆಕಲ್ಲಿನ ಬಗ್ಗೆ ಹೆಚ್ಚಿನ ವಿವರಗಳನ್ನು ಇಲ್ಲಿ ಓದಬಹುದು.


ದೇವಾಲಯದ ಹೊರಗೋಡೆಯಲ್ಲಿ ಕೆಲವು ಭಿತ್ತಿಚಿತ್ರಗಳಿವೆ. ಇವುಗಳಲ್ಲಿ ಎಲ್ಲವೂ ವಿಷ್ಣುವಿನ ಹಲವು ರೂಪಗಳು. ಪ್ರಮುಖವಾದವು ಲಕ್ಷ್ಮೀನರಸಿಂಹನ ಮತ್ತು ಉಗ್ರನರಸಿಂಹನ ಕೆತ್ತನೆಗಳು.


ಚನ್ನಕೇಶವನಿಗೆ ನಿತ್ಯ ಪೂಜೆ ಸಲ್ಲಿಸಲಾಗುತ್ತದೆ. ಊರಿನ ೨ ಕುಟುಂಬಗಳು ಪೂಜೆಯ ಜವಾಬ್ದಾರಿಯನ್ನು ಹೊತ್ತಿದ್ದು ಒಂದು ವರ್ಷದ ಅವಧಿಯ ನಂತರ ಜವಾಬ್ದಾರಿಯನ್ನು ಮತ್ತೊಬ್ಬರಿಗೆ ಬಿಟ್ಟುಕೊಡುತ್ತಾರೆ. ದೇವಾಲಯದ ಸಮೀಪದವರೆಗೂ ಮನೆಗಳಿದ್ದರೂ ಒಳಗೆಲ್ಲಾ ಸ್ವಚ್ಛವಾಗಿದೆ. ದಿನಾಲೂ ದೇವಾಲಯವನ್ನು ಒರಸಿ ಸ್ವಚ್ಛಗೊಳಿಸಲಾಗುತ್ತದೆ. ನವರಂಗದ ಕಂಬಗಳಿಗೆ, ಅಂತರಾಳ ಮತ್ತು ಗರ್ಭಗುಡಿಯ ದ್ವಾರಗಳಿಗೆ ಸುಣ್ಣ ಬಳಿದಿರುವುದನ್ನು ಪ್ರಾಚ್ಯ ವಸ್ತು ಇಲಾಖೆ ಬಹಳ ಶ್ರಮವಹಿಸಿ ಹೆಚ್ಚಿನ ಮಟ್ಟಿಗೆ ಅಳಿಸಿಹಾಕುವಲ್ಲಿ ಯಶಸ್ವಿಯಾಗಿದೆ.


ಅಂತರಾಳದ ದ್ವಾರಕ್ಕೆ ಕಲಾತ್ಮಕ ಲತಾತೋರಣಗಳಿದ್ದು ಇಬ್ಬದಿಗಳಲ್ಲಿ ಜಾಲಂಧ್ರಗಳಿವೆ. ಮೇಲ್ಗಡೆ ಮಕರತೋರಣದಿಂದ ಅಲಂಕೃತ ಗಜಲಕ್ಷ್ಮೀಯ ಕೆತ್ತನೆಯಿದೆ.


ಗರ್ಭಗುಡಿಯ ದ್ವಾರವು ಐದು ತೋಳುಗಳನ್ನು ಹೊಂದಿದ್ದು ಕೆಳಗಡೆ ಶಂಖಚಕ್ರಗದಾಪದ್ಮಧಾರಿಯಾಗಿರುವ ವಿಷ್ಣುವಿನ ಕೆತ್ತನೆಯಿದೆ. ವಿಷ್ಣುವಿನ ಇಕ್ಕೆಲಗಳಲ್ಲಿ ದೇವಿಯರ ಕೆತ್ತನೆಯಿದೆ(ಭೂದೇವಿ ಮತ್ತು ಶ್ರೀದೇವಿ ಆಗಿರಬಹುದು). ಮೇಲ್ಗಡೆ ಗರುಡನ ಕೆತ್ತನೆಯಿದೆ. ಗರುಡನ ಕೆತ್ತನೆಯ ಮೇಲಿನ ಸಾಲಿನಲ್ಲಿ ೫ ಸಣ್ಣ ಗೋಪುರಗಳನ್ನು ಕೆತ್ತಲಾಗಿದೆ. ಗರುಡಪೀಠದ ಮೇಲಿರುವ ಚನ್ನಕೇಶವನ ವಿಗ್ರಹವನ್ನು ಚೆನ್ನಾಗಿ ಅಲಂಕರಿಸಲಾಗಿತ್ತು. ಪೀಠದ ಮುಂಭಾಗದಲ್ಲಿ ಗರುಡನ ಕೆತ್ತನೆಯ ’ನೂತನ ಆವೃತ್ತಿ’ಯನ್ನು ಗ್ರಾಮಸ್ಥರೇ ಅಳವಡಿಸಿದ್ದಾರೆ!


ದೇವಾಲಯದಲ್ಲಿರುವ ೩ ದ್ವಾರಗಳ ಲಲಾಟಗಳಲ್ಲಿ ೩ ಪ್ರತ್ಯೇಕ ಕೆತ್ತನೆಗಳಿವೆ ಎಂಬುವುದು ಗಮನಾರ್ಹ. ಪ್ರಮುಖ ದ್ವಾರದ ಲಲಾಟದಲ್ಲಿ ಶಾಸನವೊಂದನ್ನು ಕೆತ್ತಲಾಗಿದೆ (ಹೆಚ್ಚಾಗಿ ಈ ಸ್ಥಳದಲ್ಲಿ ಗಜಲಕ್ಷ್ಮೀಯ ಕೆತ್ತನೆಯಿರುವುದು ಕಂಡುಬರುತ್ತದೆ). ಅಂತರಾಳದ ದ್ವಾರದ ಲಲಾಟದಲ್ಲಿ ಗಜಲಕ್ಷ್ಮೀಯ ಕೆತ್ತನೆಯಿದೆ ಮತ್ತು ಗರ್ಭಗುಡಿಯ ದ್ವಾರದ ಲಲಾಟದಲ್ಲಿ ಗರುಡನ ಕೆತ್ತನೆಯಿದೆ.


ಹಿಂದೆ ತಂಡಗವು ಒಂದು ಅಗ್ರಹಾರವಾಗಿತ್ತು (ಬಳುವಳಿಯಾಗಿ ಬ್ರಾಹ್ಮಣರಿಗೆ ನೀಡುವ ಊರು. ತೆರಿಗೆ ಮತ್ತು ಬಾಡಿಗೆಗಳಿಂದ ಮುಕ್ತವಾಗಿರುವ ಊರು). ಶಾಸನಗಳಲ್ಲಿ ತಂಡಗವನ್ನು ’ಶಂಕರನಾರಾಯಣಪುರ’ ಎಂದು ಕರೆಯಲಾಗಿದೆ. ಪುರಾತನ ಭಾರತದ ಬಹು ಪ್ರಸಿದ್ಧ ದೊರೆ ಶಾಲಿವಾಹನ ತಂಡಗದಲ್ಲೇ ಹುಟ್ಟಿದ್ದನಂತೆ. ನಂಬಲಸಾಧ್ಯ! ಯಾವುದೇ ಸಾಕ್ಷಿ ಪುರಾವೆ ಎಲ್ಲೂ ದೊರಕಿಲ್ಲ.

ಭಾನುವಾರ, ಆಗಸ್ಟ್ 05, 2012

ಕಲಕೇರಿ ಸೂರ್ಯನಾರಾಯಣ ದೇವಾಲಯದ ರಹಸ್ಯ


ನಾನು ಬಹಳ ಆಸಕ್ತಿಯಿಂದ ಭೇಟಿ ನೀಡಲು ಎದುರುನೋಡುತ್ತಿದ್ದ ದೇವಾಲಯವಿದು. ಶಾಸನಗಳಲ್ಲಿ ಈ ದೇವಾಲಯವನ್ನು ಜಯಸಿಂಗೇಶ್ವರ ದೇವಾಲಯವೆಂದು ಕರೆಯಲಾಗಿದೆ. ಕೆಲವೆಡೆ ಇದನ್ನು ಬ್ರಹ್ಮೇಶ್ವರ ದೇವಾಲಯವೆಂದೂ ಕರೆಯಲಾಗಿದೆ. ನಂದಿಯು ದೊಡ್ಡದಾಗಿರುವುದರಿಂದ ಊರವರು ಬಸವೇಶ್ವರ ದೇವಾಲಯವೆಂದು ಕರೆಯುತ್ತಾರೆ.


ಪಾಳು ಬಿದ್ದಿದ್ದ ದೇವಾಲಯವನ್ನು ಸಂರಕ್ಷಿಸುವ ಸಲುವಾಗಿ ಕೆಲವು ಗ್ರಾಮಸ್ಥರು ಟ್ರಸ್ಟ್ ಒಂದನ್ನು ರಚಿಸಿ ಅದರ ಮೂಲಕ ಹಣ ಸಂಗ್ರಹಿಸಿದರು. ಹೀಗೆ ಸಂಗ್ರಹಿಸಲಾದ ಹಣದೊಂದಿಗೆ ದೇವಾಲಯವನ್ನು ಜೀರ್ಣೋದ್ಧಾರಗೊಳಿಸುವ ಮನವಿಯನ್ನು ಧರ್ಮಸ್ಥಳದ ಧರ್ಮೋತ್ಥಾನ ಟ್ರಸ್ಟ್‌ಗೆ ಕಳಿಸಲಾಯಿತು. ಮನವಿಯನ್ನು ಸ್ವೀಕರಿಸಿದ ಧರ್ಮೋತ್ಥಾನ ಟ್ರಸ್ಟ್, ದೇವಾಲಯವು ಜೀರ್ಣೊದ್ಧಾರಗೊಳಿಸಲು ಅರ್ಹವೇ ಎಂದು ಪರೀಕ್ಷಿಸಲು ಕಲಕೇರಿಗೆ ಹೋಗಿ ನೋಡಿ ಬರುವಂತೆ ವಿನಂತಿಸಿಕೊಂಡಿದ್ದು ಕಾಂಬೋಡಿಯಾದ ವಿಷ್ಣು ದೇವಾಲಯವನ್ನು ಮತ್ತೆ ನಿರ್ಮಿಸಿದ (ಜೀರ್ಣೋದ್ಧಾರಗೊಳಿಸಿದ) ಖ್ಯಾತಿಯ ಡಾ!ಬಿ.ನರಸಿಂಹಯ್ಯ ಎಂಬವರನ್ನು. ಈ ದೇವಾಲಯದ ಚತುಷ್ಕೂಟ ರಚನೆ ಕಂಡು ಮೂಕವಿಸ್ಮಿತರಾದ ನರಸಿಂಹಯ್ಯನವರು ನಂತರ ಮತ್ತೆ ಮೂರು ಸಲ ಕಲಕೇರಿಗೆ ಬಂದು ದೇವಾಲಯವನ್ನು ಅಧ್ಯಯನ ಮಾಡಿದ್ದಾರೆ. ಅವರ ಪ್ರಕಾರ ಇದೊಂದು ಅಪರೂಪದ ದೇವಾಲಯ ಮತ್ತು ಸಂರಕ್ಷಣೆ ಮಾಡಲೇಬೇಕಾದ ದೇವಾಲಯ. ನರಸಿಂಹಯ್ಯನವರ ಸಲಹೆಗೆ ತಕ್ಕಂತೆ, ಗ್ರಾಮಸ್ಥರ ಸಹಕಾರದೊಂದಿಗೆ ಧರ್ಮೋತ್ಥಾನ ಟ್ರಸ್ಟ್ ದೇವಾಲಯವನ್ನು ಮತ್ತೆ ನೈಜ ರೂಪದಲ್ಲಿ ಕಂಗೊಳಿಸುವಂತೆ ಮಾಡಿದೆ.


೧೧ನೇ ಶತಮಾನದಲ್ಲಿ ಚಾಲುಕ್ಯ ಶೈಲಿಯಲ್ಲಿ ನಿರ್ಮಾಣಗೊಂಡಿರುವ ಬಹಳ ಅಪರೂಪದ ಚತುಷ್ಕೂಟ ದೇವಾಲಯವಿದು. ಹೊರಗೋಡೆಯಲ್ಲಿ ಯಾವುದೇ ಭಿತ್ತಿಗಳಿಲ್ಲ. ಪಶ್ಚಿಮ ಗರ್ಭಗುಡಿಯಲ್ಲಿ ಶಿವಲಿಂಗ, ದಕ್ಷಿಣದಲ್ಲಿ ನಾಗದೇವರು, ಪೂರ್ವ ಮತ್ತು ಉತ್ತರದಲ್ಲಿ ಸೂರ್ಯದೇವನ ಮೂರ್ತಿಗಳನ್ನು ಈಗ ಕಾಣಬಹುದು. ನಾಲ್ಕೂ ಗರ್ಭಗುಡಿಗಳ ಮೇಲೆ ಗೋಪುರಗಳಿವೆ. ದೇವಾಲಯಕ್ಕಿರುವ ಎರಡು ದ್ವಾರಗಳು ಪೂರ್ವದಲ್ಲಿರುವ ಗರ್ಭಗುಡಿಯ ಇಕ್ಕೆಲಗಳಲ್ಲಿವೆ.


ನವರಂಗದಲ್ಲಿ ಚಾಲುಕ್ಯ ಶೈಲಿಯ ನಾಲ್ಕು ಕಂಬಗಳಿವೆ. ಪೂರ್ವದಲ್ಲಿರುವ ಗರ್ಭಗುಡಿಗೆ ತೆರೆದ ಅಂತರಾಳವಿದ್ದರೆ ಪಶ್ಚಿಮದಲ್ಲಿರುವ ಗರ್ಭಗುಡಿಗೆ ದ್ವಾರವಿರುವ ಅಂತರಾಳವಿದೆ. ಉಳಿದೆರಡು ಗರ್ಭಗುಡಿಗಳಿಗೆ ಅಂತರಾಳಗಳಿಲ್ಲ. ಊರಿನಲ್ಲಿ ಅಂದು ವಿದ್ಯುತ್ ಕೈಕೊಟ್ಟಿದ್ದರಿಂದ ಮತ್ತು ದೇವಾಲಯದೊಳಗೆ ಬೆಳಕಿನ ಅಭಾವವಿರುವುದರಿಂದ ಚಿತ್ರಗಳನ್ನು ತೆಗೆಯಲು ಬಹಳ ಕಷ್ಟಪಡಬೇಕಾಯಿತು.


ನವರಂಗದಲ್ಲಿ ೫ ದೇವಕೋಷ್ಠಗಳಿವೆ. ಇವುಗಳಲ್ಲಿ ೨ ಖಾಲಿಯಾಗಿದ್ದು ಉಳಿದವುಗಳಲ್ಲಿ ವಿಷ್ಣು, ಸರಸ್ವತಿ ಮತ್ತು ಸಪ್ತಮಾತೃಕೆಯರ ವಿಗ್ರಹಗಳನ್ನು ಕಾಣಬಹುದು. ಸರಸ್ವತಿಯ ಮೂರ್ತಿಯು ಭಗ್ನಗೊಂಡಿದೆ. ಎಲ್ಲಾ ಗರ್ಭಗುಡಿಗಳು ಅಲಂಕೃತ ಪಂಚಶಾಖಾ ದ್ವಾರಗಳನ್ನು ಮತ್ತು ಲಲಾಟದಲ್ಲಿ ಗಜಲಕ್ಷ್ಮೀಯನ್ನು ಹೊಂದಿವೆ.


ಪೂರ್ವದಲ್ಲಿರುವ ಸೂರ್ಯನ ಮೂರ್ತಿಯು ಅದ್ಭುತವಾಗಿದೆ. ಪೀಠದ ಮುಂಭಾಗದಲ್ಲಿ ಸೂರ್ಯನ ಸಾರಥಿಯೂ ಮತ್ತು ಅಣ್ಣನೂ ಆಗಿರುವ ಅರುಣನು ೭ ಕುದುರೆಗಳುಳ್ಳ ಸೂರ್ಯನ ರಥ(ವಾಹನ)ವನ್ನು ಎಳೆಯುವುದನ್ನು ಕೆತ್ತಲಾಗಿದೆ. ಸೂರ್ಯನ ಇಕ್ಕೆಲಗಳಲ್ಲಿ ಆತನ ಮಡದಿಯರಾದ ಉಷಾ ಮತ್ತು ಪ್ರತ್ಯುಷಾರನ್ನು ತೋರಿಸಲಾಗಿದೆ (ಕೆಲವೆಡೆ ಸಂಜನಾ ಮತ್ತು ಛಾಯಾರನ್ನು ಸೂರ್ಯನ ಮಡದಿಯರು ಎನ್ನಲಾಗಿದ್ದರೆ ಇನ್ನೂ ಕೆಲವೆಡೆ ನಾಲ್ಕೂ ಮಂದಿಯೂ ಆತನ ಮಡದಿಯರು ಎನ್ನಲಾಗಿದೆ). ವಿಗ್ರಹದಲ್ಲಿರುವ ಸುಂದರ ಪ್ರಭಾವಳಿ ಕೆತ್ತನೆಯಲ್ಲಿ ದ್ವಾದಶ ಆದಿತ್ಯರನ್ನು (ಸೂರ್ಯದೇವನ ೧೨ ರೂಪಗಳು) ತೋರಿಸಲಾಗಿದೆ. ವಿಗ್ರಹದ ಪೀಠದ ಮುಂಭಾಗದಲ್ಲಿ ಬರೆದಿರುವ ಪ್ರಕಾರ ಇದನ್ನು ಕೆತ್ತಿರುವ ಶಿಲ್ಪಿಯ ಹೆಸರು ’ಮಲ್ಲೋಜ’. ಅಂತರಾಳದಲ್ಲಿ ನಂದಿಯ ಆಕರ್ಷಕ ಮೂರ್ತಿಯಿದ್ದು ಪಶ್ಚಿಮದ ಗರ್ಭಗುಡಿಯಲ್ಲಿರುವ ಶಿವಲಿಂಗಕ್ಕೆ ಮುಖಮಾಡಿ ಆಸೀನನಾಗಿದ್ದಾನೆ.


ಪಶ್ಚಿಮದಲ್ಲಿ ಪಾಣಿಪೀಠದ ಮೇಲೆ ಒಂದು ಅಡಿ ಎತ್ತರದ ಶಿವಲಿಂಗವಿದೆ. ಅಂತರಾಳದ ದ್ವಾರವು ಇಕ್ಕೆಲಗಳಲ್ಲಿ ಸುಂದರ ಜಾಲಂಧ್ರಗಳನ್ನು ಹೊಂದಿದ್ದು ಲಲಾಟದಲ್ಲಿ ಮಕರತೋರಣದಿಂದ ಅಲಂಕೃತ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರ ಸುಂದರ ಕೆತ್ತನೆಯನ್ನು ಹೊಂದಿದೆ.


ದಕ್ಷಿಣದಲ್ಲಿ ದೊಡ್ಡ ಹಂಸಪೀಠದ ಮೇಲೆ ನಾಗದೇವರ ಸಣ್ಣ ವಿಗ್ರಹವಿದೆ. ಪೀಠದ ಗಾತ್ರಕ್ಕೆ ಮತ್ತು ಅದರ ಮೇಲಿರುವ ವಿಗ್ರಹದ ಗಾತ್ರಕ್ಕೆ ಹೊಂದಾಣಿಕೆಯಿಲ್ಲ. ಅಷ್ಟೇ ಅಲ್ಲದೆ ಹಂಸಪೀಠದ ಮೇಲೆ ಬ್ರಹ್ಮನ ಅಥವಾ ಸರಸ್ವತಿಯ ಮೂರ್ತಿಯಿರಬೇಕು. ಮೂಲ ವಿಗ್ರಹ ಇಲ್ಲಿಂದ ಕಣ್ಮರೆಯಾದ ಬಳಿಕ ಊರಲ್ಲೇ ದೊರಕಿರುವ ನಾಗವಿಗ್ರಹವನ್ನು ಇರಿಸಲಾಗಿರಬಹುದು. ಒಂದು ವಾದದ ಪ್ರಕಾರ ನವರಂಗದಲ್ಲಿರುವ ಸರಸ್ವತಿ ವಿಗ್ರಹ ಮೊದಲು ಗರ್ಭಗುಡಿಯಲ್ಲಿದ್ದು, ಅದು ಭಗ್ನಗೊಂಡ ಬಳಿಕ ಅದರ ಸ್ಥಳದಲ್ಲಿ ನಾಗದೇವರ ವಿಗ್ರಹವನ್ನು ಇಡಲಾಯಿತು ಎಂದು. ಆದರೆ ಈ ವಾದವನ್ನು ಸುಲಭದಲ್ಲಿ ತಳ್ಳಿಹಾಕಬಹುದು. ಏಕೆಂದರೆ ಚತುಷ್ಕೂಟ ದೇವಾಲಯಗಳ ಗರ್ಭಗುಡಿಗಳಲ್ಲಿ ತ್ರಿಮೂರ್ತಿಗಳನ್ನು ಹಾಗೂ ಸೂರ್ಯದೇವನನ್ನು ಪ್ರತಿಷ್ಠಾಪಿಸಲಾಗುತ್ತದೆ ಮತ್ತು ಎಲ್ಲೂ ಸರಸ್ವತಿಯ ವಿಗ್ರಹವನ್ನು ಪ್ರತಿಷ್ಠಾಪಿಸಿರುವ ನಿದರ್ಶನಗಳಿಲ್ಲ. ಹಾಗಾದರೆ ಈ ಗರ್ಭಗುಡಿಯಲ್ಲಿದ್ದ ಮೂಲವಿಗ್ರಹ ಯಾವುದು? ನಂಬಲರ್ಹ ಮೂಲವೊಂದು ನಿಗೂಢ ಮತ್ತು ಸ್ವಾರಸ್ಯಕರ ವಿಷಯವನ್ನು ತಿಳಿಸುತ್ತದೆ.


ಮೇಲಿನ ಚಿತ್ರದಲ್ಲಿ ಎಡಭಾಗದಲ್ಲಿರುವ ಮೂರ್ತಿಯನ್ನು ಗಮನಿಸಿ. ಇದು ಯುಎಸ್‍ಎ ದೇಶದ ಫಿಲಡೆಲ್ಫಿಯಾ ನಗರದ ಪೆನ್ ಸಂಗ್ರಹಾಲಯದಲ್ಲಿರುವ ಬ್ರಹ್ಮನ ಮೂರ್ತಿ. ಬ್ರಹ್ಮನ ಇಕ್ಕೆಲಗಳಲ್ಲಿ ಸರಸ್ವತಿ ಮತ್ತು ಸಾವಿತ್ರಿಯರಿದ್ದಾರೆ. ಬಲಭಾಗದಲ್ಲಿರುವುದು ಕಲಕೇರಿಯಲ್ಲಿರುವ ಸೂರ್ಯದೇವನ ವಿಗ್ರಹ. ಎರಡೂ ವಿಗ್ರಹಗಳ ಪೀಠಭಾಗವು ಒಂದೇ ರೀತಿಯಲ್ಲಿರುವುದಲ್ಲದೇ ಅಲ್ಲಿ ಕೆತ್ತಲಾಗಿರುವ ಮಾಹಿತಿಯೂ ಒಂದೇ ತರಹದಾಗಿದ್ದು, ಕೆತ್ತಿರುವ(ಬರೆದಿರುವ) ರೀತಿ, ಸಾಲುಗಳ ಸಂಖ್ಯೆ ಮತ್ತು ಬರೆದಿರುವ ವಿಷಯ ಎಲ್ಲವೂ ತಾಳೆಯಾಗುತ್ತವೆ. ಬ್ರಹ್ಮನ ಪ್ರಭಾವಳಿ ಕೆತ್ತನೆ ಮತ್ತು ಸೂರ್ಯದೇವನ ಪ್ರಭಾವಳಿ ಕೆತ್ತನೆಗಳನ್ನು ಗಮನಿಸಿದರೆ ಅವುಗಳು ಒಂದೇ ಆಕಾರದಲ್ಲಿರುವುದನ್ನು ಕಾಣಬಹುದು. ಎರಡೂ ವಿಗ್ರಹಗಳು ಸುಮಾರು ೧೭೦ ಸೆಂಟಿಮೀಟರ್ ಎತ್ತರ ಇವೆ. ಈ ಎಲ್ಲಾ ಅಂಶಗಳನ್ನು ಗಮನಿಸಿದರೆ ಕಲಕೇರಿಯ ಬ್ರಹ್ಮ ಈಗ ಫಿಲಡೆಲ್ಫಿಯಾದಲ್ಲಿದ್ದಾನೆ. ಆದರೆ ಈ ಬ್ರಹ್ಮ ಕಲಕೇರಿಯಿಂದ ಕಣ್ಮರೆಯಾಗಿದ್ದು ಯಾವಾಗ? ಫಿಲಡೆಲ್ಫಿಯಾ ತಲುಪಿದ್ದಾದರೂ ಹೇಗೆ?


ಪೆನ್ ಸಂಗ್ರಹಾಲಯದ ದಾಖಲೆಗಳ ಪ್ರಕಾರ ೧೯೧೮ರಲ್ಲಿ ಈ ವಿಗ್ರಹವನ್ನು ಸಂಗ್ರಹಾಲಯಕ್ಕೆ ಮಾರಲಾಗಿತ್ತು. ೧೯೨೨ರಲ್ಲಿ ಸಂಗ್ರಹಾಲಯದ ಅಂದಿನ ನಿರ್ದೇಶಕರಿಗೆ ಭಾರತದಿಂದ ಬಂದ ಪತ್ರವೊಂದರಲ್ಲಿ - ”ಈ ಮೂರ್ತಿಯನ್ನು ೧೮೩೫ರಲ್ಲಿ ಮರಾಠಾ ರಾಜ್ಯದ ಕಲ್ಕೇರಿ ಎಂಬಲ್ಲಿಯ ದೇವಾಲಯವೊಂದರಿಂದ ತೆಗೆಯಲಾಗಿತ್ತು" ಎಂದು ವಿವರವಾಗಿ ಬರೆಯಲಾಗಿದೆ (ಇಂದಿನ ಮಧ್ಯ ಕರ್ನಾಟಕ ಅಂದಿನ ’ಬಾಂಬೇ’ ಅಥವಾ ’ಮರಾಠಾ’ ಎಂದು ಕರೆಯಲ್ಪಡುತ್ತಿದ್ದ ರಾಜ್ಯದ ಭಾಗವಾಗಿತ್ತು). ಚತುಷ್ಕೂಟ ದೇವಾಲಯಗಳಲ್ಲಿ ಸರಸ್ವತಿಯ ಮೂರ್ತಿಯಿರುವ ನಿದರ್ಶನಗಳಿಲ್ಲದ ಕಾರಣ ಬ್ರಹ್ಮನ ಮೂರ್ತಿ ಇದ್ದ ವಾದವನ್ನು ಪ್ರಬಲ ಸಾಕ್ಷಿ ಮತ್ತು ಆಧಾರಗಳಿರುವುದರಿಂದ ನಂಬಬಹುದು.


ಉತ್ತರದಲ್ಲಿ ಗರುಡ ಪೀಠದ ಮೇಲೆ ಸೂರ್ಯದೇವನ ಸಣ್ಣ ಮೂರ್ತಿಯಿದೆ. ಗರುಡ ಪೀಠದ ಮೇಲೆ ವಿಷ್ಣುವಿನ ಮೂರ್ತಿಯಿರಬೇಕಲ್ಲವೇ? ಇಲ್ಲಿಯೂ ಮೂಲ ವಿಗ್ರಹ ಕಣ್ಮರೆಯಾದ ಬಳಿಕ ಸೂರ್ಯನ ವಿಗ್ರಹವನ್ನು ಇರಿಸಲಾಗಿದ್ದು ಪೀಠದ ಗಾತ್ರಕ್ಕೂ ಮೂರ್ತಿಯ ಗಾತ್ರಕ್ಕೂ ತಾಳೆಯಾಗುತ್ತಿಲ್ಲ. ಹಾಗಾದರೆ ಇಲ್ಲಿರಬೇಕಾದ ವಿಷ್ಣುವಿನ ಮೂರ್ತಿ ಈಗ ಎಲ್ಲಿದೆ?


ದೇವಾಲಯದಿಂದ ಹೊರಗೆ ಬಂದಾಗ ಭೇಟಿಯಾಯಿತು ಶ್ರೀ ಶಿವನಂದಪ್ಪ ಕಮ್ಮಾರರದ್ದು. ದೇವಾಲಯದ ಬಗ್ಗೆ ಬಹಳ ಕಾಳಜಿ ಮತ್ತು ಆಸಕ್ತಿ ಹೊಂದಿರುವ ಇವರು ನನ್ನನ್ನು ಅವರ ಮನೆಗೆ ಎಳೆದುಕೊಂಡು ಹೋಗಿ ಉಪಚಾರ ಮಾಡಿದರು. ಅವರೊಂದಿಗೆ ದೇವಾಲಯದ ಬಗ್ಗೆ ಮಾತುಕತೆ ನಡೆಸುತ್ತಿರಬೇಕಾದರೆ ಹಲವಾರು ವಿಷಯಗಳು ತಿಳಿದವು. ಊರವರ ಪ್ರಕಾರ ವಿಷ್ಣುವಿನ ಮೂರ್ತಿಯು ಭಗ್ನಗೊಂಡಿದ್ದು ಅದನ್ನು ದೇವಾಲಯದ ಹೊರಗೆ ಇಡಲಾಗಿದೆ. (ಆನಂತರ ಕಲಕೇರಿಯಲ್ಲೇ ಇರುವ ಸಂಪೂರ್ಣವಾಗಿ ಪಾಳುಬಿದ್ದಿದ್ದ ಸ್ವಯಂಭೂ ಸೋಮೇಶ್ವರ ದೇವಾಲಯದಲ್ಲಿನ ಸೂರ್ಯದೇವರ ವಿಗ್ರಹವನ್ನು ತಂದು ವಿಷ್ಣುವಿನ ಸ್ಥಳದಲ್ಲಿರಿಸಲಾಗಿದೆ. ಈಗ ಸ್ವಯಂಭೂ ಸೋಮೇಶ್ವರ ದೇವಾಲಯವನ್ನು ಪ್ರಾಚ್ಯ ವಸ್ತು ಇಲಾಖೆ ನಳನಳಿಸುವಂತೆ ಮಾಡಿದ್ದು, ಸೂರ್ಯದೇವರು ಇರಬೇಕಾದ ಗರ್ಭಗುಡಿ ಖಾಲಿಯಿದೆ). ಇದು ಹಳ್ಳಿಗರು ನಂಬಿರುವ ವಿಷಯ ಮತ್ತು ಇದಕ್ಕೆ ಯಾವುದೇ ಸಾಕ್ಷಿ ಆಧಾರಗಳಿಲ್ಲ. ವಿಷ್ಣುವಿನ ಆ ಮೂರ್ತಿ ದೇವಾಲಯದ ಹೊರಗೆ ನನಗೆ ಕಾಣಬಂದಿರಲಿಲ್ಲ. ಕಮ್ಮಾರರ ಮನೆಯಿಂದ ಹಿಂತಿರುಗುವಾಗ ಇನ್ನೊಮ್ಮೆ ದೇವಾಲಯದ ಬಳಿ ಹೋಗಿ ನೋಡಿದರಾಯಿತು ಎಂದುಕೊಂಡೆ. ಆದರೆ ಇನ್ನೊಂದು ಮೂಲದ ಪ್ರಕಾರ ಇಲ್ಲಿದ್ದ ವಿಷ್ಣುವಿನ ವಿಗ್ರಹ ಈಗ ಯುಎಸ್‍ಎ ದೇಶದ ನ್ಯೂಯಾರ್ಕ್ ನಗರದ ಮೆಟ್ರೋಪಾಲಿಟನ್ ಸಂಗ್ರಹಾಲಯದಲ್ಲಿದೆ!


ನನ್ನ ಚಾಲಕನಿಗೆ ಮುಂಜಾನೆಯೇ ತಿಳಿಸಿದ್ದೆ - "ಏನಾದ್ರೂ ತಿನ್ಲಿಕ್ಕೆ ಬೇಕಾದ್ರೆ ಈಗ್ಲೇ ಪಾರ್ಸೆಲ್ ಮಾಡಿಸಿಕೊಳ್ಳಿ. ಇನ್ನು ಕತ್ತಲಾಗುವವರೆಗೂ ನಾವು ಹಳ್ಳಿಯಿಂದ ಹಳ್ಳಿಗೆ ಭೇಟಿ ನೀಡುತ್ತಾ ಇರುವುದರಿಂದ ತಿನ್ನಲೂ ಏನೂ ಸಿಗಲಾರದು" ಎಂದು. ನನ್ನ ಮಾತನ್ನು ನಿರ್ಲಕ್ಷಿಸಿದ ಅವರಿಗೆ ಈಗ ಸಿಕ್ಕಾಪಟ್ಟೆ ಹಸಿವಾಗತೊಡಗಿತ್ತು. ಕಮ್ಮಾರರ ಪತ್ನಿ ನಮಗೆ ಊಟದ ರೂಪದಲ್ಲಿ ಮೊಸರು, ಪಡ್ಡು, ತೆಂಗಿನಕಾಯಿ ಚಟ್ಣಿ, ರೊಟ್ಟಿ, ಶೇಂಗಾ ಚಟ್ಣಿ ಇಷ್ಟನ್ನೆಲ್ಲಾ ಅಪರಿಮಿತವಾಗಿ ನೀಡಿದರು. ಹೊಟ್ಟೆ ತುಂಬಿದ ಆನಂದದಲ್ಲಿ ನಿರಾಳನಾದೆ ಆದರೆ ಮರಳಿ ದೇವಾಲಯದೆಡೆ ತೆರಳಲು ಮರೆತೇ ಬಿಟ್ಟೆ. ನನ್ನ ಚಾಲಕನಂತೂ ’ಸಂಜೆವರೆಗೆ ಇನ್ನೇನೂ ಪ್ರಾಬ್ಲೆಮಿಲ್ಲ’ ಎನ್ನುತ್ತಾ ಬಹಳ ಸಂತೋಷದಲ್ಲಿದ್ದ.


ಮೇಲೆ ಹೇಳಿದ ಇನ್ನೊಂದು ಮೂಲದ ಪ್ರಕಾರ ಬ್ರಹ್ಮನ ವಿಗ್ರಹವನ್ನು ಪೆನ್ ಸಂಗ್ರಹಾಲಯಕ್ಕೆ ಮಾರಿದ ವ್ಯಕ್ತಿಯೇ ವಿಷ್ಣುವಿನ ವಿಗ್ರಹವನ್ನು ನ್ಯೂಯಾರ್ಕ್‌ನ ಮೆಟ್ರೋಪಾಲಿಟನ್ ಸಂಗ್ರಹಾಲಯಕ್ಕೆ ಮಾರಿಬಿಟ್ಟಿದ್ದನು. ಮೆಟ್ರೋಪಾಲಿಟನ್ ಸಂಗ್ರಹಾಲಯದ ನಿರ್ದೇಶಕರಿಗೆ ಬರೆದ ಪತ್ರದ ಪ್ರಕಾರ ಎರಡೂ ವಿಗ್ರಹಗಳನ್ನು ಭಾರತದಿಂದ ಒಟ್ಟಿಗೆ ತರಲಾಗಿತ್ತು. ಬ್ರಹ್ಮನನ್ನು ಪೆನ್ ಸಂಗ್ರಹಾಲಯಕ್ಕೆ ಮಾರಿದ್ದ ವರ್ಷವೇ (೧೯೧೮) ವಿಷ್ಣುವನ್ನು ಮೆಟ್ರೋಪಾಲಿಟನ್ ಸಂಗ್ರಹಾಲಯಕ್ಕೆ ಮಾರಲಾಗಿತ್ತು. ವಿಷ್ಣುವಿನ ಪೀಠದ ಮುಂಭಾಗದಲ್ಲಿ ಬರೆಯಲಾಗಿರುವ ಮಾಹಿತಿಯ ಪ್ರಕಾರ ಈ ಮೂರ್ತಿಯನ್ನು ಕೆತ್ತಿರುವ ಶಿಲ್ಪಿಯು ಸೂರ್ಯನನ್ನು ಕೆತ್ತಿದ ಮಲ್ಲೋಜನೊಂದಿಗೆ ಹಾಗೂ ಬ್ರಹ್ಮನನ್ನು ಕೆತ್ತಿದ ಶಿಲ್ಪಿಯೊಂದಿಗೆ ತನಗೆ ಇರುವ ಪರಿಚಯದ ಬಗ್ಗೆ ಹೇಳಿಕೊಂಡಿದ್ದಾನೆ.


ಈ ದೇವಾಲಯದಲ್ಲಿದ್ದ ಬ್ರಹ್ಮ ಮತ್ತು ವಿಷ್ಣುವಿನ ಮೂರ್ತಿಗಳು ಈಗ ಯುಎಸ್‍ಎ ದೇಶ ಸೇರಿರುವುದನ್ನು ಸಂಶೋಧನೆಯ ಮೂಲಕ ಅದೇ ದೇಶದವರಾಗಿರುವ ಜಾನ್ ಹೆನ್ರಿ ರೈಸ್ ಎಂಬವರು ಕಂಡುಕೊಂಡಿರುವುದು ಗಮನಾರ್ಹವಾದ ವಿಷಯ. ಪ್ರಾಚ್ಯ ವಸ್ತು ಇಲಾಖೆಗೂ ಇದರ ಬಗ್ಗೆ ಮಾಹಿತಿಯಿರಲಿಲ್ಲ. ಬ್ರಿಟಿಷರು ಹೀಗೆ ಇನ್ನೆಷ್ಟು ಮನಮೋಹಕ ವಿಗ್ರಹಗಳನ್ನು ನಮ್ಮ ದೇವಾಲಯಗಳಿಂದ ಹೊರಗೆ ಸಾಗಿಸಿ ಹಣ ಗಳಿಸಿರಬಹುದು?


ಸೂರ್ಯನಾರಾಯಣ ದೇವಾಲಯದಲ್ಲಿ ಇಷ್ಟೆಲ್ಲಾ ವಿಷಯಗಳು ಅಡಗಿಕೊಂಡಿವೆ. ಬ್ರಹ್ಮ, ವಿಷ್ಣು, ಮಹೇಶ್ವರರಿರುವ ಚತುಷ್ಕೂಟ ದೇವಾಲಯ ಬಹಳ ಅಪರೂಪ. ಈಗ ದೇವಾಲಯ ತನ್ನ ಮೂಲ ರೂಪದಲ್ಲಿ ಕಂಗೊಳಿಸುತ್ತಿದೆಯಾದರೂ ಬ್ರಹ್ಮ ಮತ್ತು ವಿಷ್ಣುವಿನ ವಿಗ್ರಹಗಳೂ ಕೂಡಾ ಇದ್ದಿದ್ದರೆ ಪರಿಪೂರ್ಣ ಚತುಷ್ಕೂಟ ದೇವಾಲಯವನ್ನು ಕಾಣುವ ಭಾಗ್ಯ ನಮ್ಮದಾಗಿರುತ್ತಿತ್ತು.

ಮಾಹಿತಿ: ಜಾನ್ ಹೆನ್ರಿ ರೈಸ್ ಅವರ ಸಂಶೋಧನಾ ಪ್ರಬಂಧ ಮತ್ತು ಶಿವನಂದಪ್ಪ ಕಮ್ಮಾರ