ಭಾನುವಾರ, ಜೂನ್ 28, 2015

ನಿರಾಶ್ರಿತರ ಊರಲ್ಲೊಂದು ಜಲಧಾರೆ


ಯೋಜನೆಯೊಂದರ ಅನುಷ್ಠಾನದ ಸಲುವಾಗಿ ನಿರಾಶ್ರಿತರಾದವರಿಗಾಗಿ ನಿರ್ಮಿಸಿದ ಈ ಊರಿಗೆ, ಜಲಧಾರೆಯನ್ನೊಂದು ನೋಡಲು, ಅಗಸ್ಟ್ ತಿಂಗಳ ಅದೊಂದು ದಿನ ಮಧ್ಯಾಹ್ನ ಸುಮಾರು ೩ ಗಂಟೆಗೆ ಆಗಮಿಸಿದೆವು. ಹನಿಹನಿಯಾಗಿ ಬೀಳುತ್ತಿದ್ದ ಮಳೆಯ ನಡುವೆ ಊರಿನ ದೇವಾಲಯದ ಬಳಿ ನಮ್ಮ ವಾಹನ ನಿಲ್ಲಿಸಿದೆವು.


ಸಮೀಪದ ತಾಲೂಕು ಕೇಂದ್ರದಿಂದ ದಿನಕ್ಕೆ ಮೂರ್ನಾಲ್ಕು ಸಲ ರಾಜ್ಯ ಸಾರಿಗೆ ಬಸ್ಸು, ಈ ಊರಿಗಿರುವ ರಿಂಗ್‍ರೋಡಿನಲ್ಲಿ ಸಂಚರಿಸಿ, ಊರಿಗೂಂದು ಪ್ರದಕ್ಷಿಣೆ ಹಾಕಿ ಹೋಗುತ್ತದೆ. ಈ ರಿಂಗ್ ರೋಡಿನ ನಡುವೆಲ್ಲಾ ಒಂದಷ್ಟು ರಸ್ತೆಗಳು. ಈ ಎಲ್ಲಾ ರಸ್ತೆಗಳ ನಡುವೆ ಪ್ಲ್ಯಾನ್ ಮಾಡಿ ನಿರ್ಮಿಸಲಾಗಿರುವ ಮನೆಗಳು.


ರಸ್ತೆಯ ಉದ್ದಕ್ಕೂ ಒಬ್ಬನೇ ಒಬ್ಬ ಕಾಣಲಿಲ್ಲ. ಸ್ಮಶಾನ ಮೌನ. ನಿರ್ಜನ ರಸ್ತೆಗಳು. ನನ್ನ ಸಹಚಾರಣಿಗರು ಊಟ ಮಾಡುತ್ತಿರುವಾಗ, ರಸ್ತೆಯುದ್ದಕ್ಕೂ ನಾನೊಬ್ಬನೇ ಯಾರಾದರೂ ಸಿಗುವರೇ ಎಂದು ಸುಮಾರು ೨೦ ಮನೆಗಳನ್ನು ದಾಟಿ ರಿಂಗ್ ರೋಡ್ ಸಿಗುವವರೆಗೂ ನಡೆದೆ. ಒಂದೇ ಒಂದು ಮನೆಯ ಮುಂದೆ ಯಾವುದೇ ಚಟುವಟಿಕೆ ಕಾಣಬರಲಿಲ್ಲ.


ನಂತರ ಇನ್ನೊಂದು ರಸ್ತೆಯಲ್ಲಿ ನಡೆಯುತ್ತಾ, ಸುಮಾರು ೨೫ ಮನೆಗಳನ್ನು ದಾಟಿ ರಿಂಗ್ ರೋಡಿನ ಇನ್ನೊಂದು ತುದಿಗೆ ಬಂದು ಮುಟ್ಟಿದರೂ ಯಾರೂ ಕಾಣಲಿಲ್ಲ. ಎಲ್ಲಾ ಮನೆಗಳಲ್ಲೂ ಮೌನ. ಒಂದು ನಾಯಿ ಅಥವಾ ದನ ಕೂಡಾ ಕಾಣಬರಲಿಲ್ಲ. ನಾನು ನಡೆಯಲು ಆರಂಭಿಸಿ ಸುಮಾರು ಇಪ್ಪತ್ತೈದು ನಿಮಿಷಗಳು ಕಳೆದಿದ್ದವು. ಇಲ್ಲಿಂದ ದೂರದಲ್ಲಿ ಬೆಟ್ಟಗಳ ನಡುವೆ ಜಲಧಾರೆ ಧುಮುಕುತ್ತಿರುವುದು ನನಗೆ ಕಾಣಿಸುತ್ತಿತ್ತು.


ಆ ರಿಂಗ್ ರೋಡಿನಲ್ಲಿ ನಿಂತು, ಇನ್ನೇನು ಮಾಡುವುದು ಎಂದು ಯೋಚಿಸುತ್ತಿರುವಾಗ, ಆ ಹನಿಹನಿ ಮಳೆಯ ಸದ್ದಿನ ನಡುವೆ ಬಹಳ ಇಂಪಾದ ಸದ್ದೊಂದು ಕೇಳಿಬಂತು. ನಮ್ಮ ರಾಜ್ಯ ಸಾರಿಗೆ ಬಸ್ಸಿನ, ಗೇರು ಬದಲಾಯಿಸುವಾಗ ಉಂಟಾಗುವ ಘರ್ಜನೆ ಸಮಾನ ಸದ್ದು, ಆ ತಲೆಚಿಟ್ಟು ಹಿಡಿಸುತ್ತಿದ್ದ ಮೌನವನ್ನು ಸೀಳಿ ಬಂದು ನನ್ನ ಕಿವಿಗಳಲ್ಲಿ ಮಾರ್ದನಿಸಿತು.


ಇನ್ನೊಂದು ನಿಮಿಷದ ಬಳಿಕ ಬಸ್ಸು ನನ್ನ ಬಳಿಯೇ ಬಂದು ನಿಂತಿತು. ಮಧ್ಯವಯಸ್ಕ ಮಹಿಳೆಯೊಬ್ಬಳು ಬಸ್ಸಿನಿಂದ ಇಳಿದಳು. ಆಕೆಯ ಬಳಿ ಜಲಧಾರೆಯ ಬಗ್ಗೆ ಕೇಳಿದೆ. ವಾಚಾಳಿಯಾಗಿದ್ದ ಆಕೆ, ಎಲ್ಲಿ ಹೋಗಬೇಕು, ಯಾವ ದಾರಿಯಾಗಿ ಬರಬೇಕು, ವಾಹನ ಎಲ್ಲಿ ನಿಲ್ಲಿಸಬೇಕು, ಎಷ್ಟು ನಡೆಯಬೇಕು, ಕವಲೊಡೆದ ದಾರಿಯಲ್ಲಿ ಯಾವ ದಾರಿಯಲ್ಲಿ ಸಾಗಬೇಕು ಮತ್ತು ಯಾಕೆ ಆ ದಾರಿಯಾಗಿ ಸಾಗಬೇಕು, ಎಷ್ಟು ದೂರ ನಡೆಯಬೇಕು, ಜಲಧಾರೆ ಎಷ್ಟು ಎತ್ತರವಿದೆ, ಇವೆಲ್ಲಾ ಮಾಹಿತಿಯನ್ನು ಒಂದೇ ಉಸಿರಿಗೆ ಹೇಳಿದಳು. ಆಕೆಯ ಪ್ರಕಾರ, ಜಲಧಾರೆಯನ್ನು ನೋಡಲು ನಾವು ಊರನ್ನು ಪ್ರವೇಶಿಸುವ ಅವಶ್ಯಕತೆಯೇ ಇಲ್ಲ. ರಿಂಗ್‍ರೋಡಿನಲ್ಲೇ ಬಂದು ಅಲ್ಲೊಂದೆಡೆ ತಿರುವು ಪಡೆದರಾಯಿತು. ಅದಾಗಲೇ ಸಮಯ ನಾಲ್ಕು ದಾಟಿದ್ದರಿಂದ ಇಂದು ತೆರಳಲು ನಿಮಗೆ ಸಾಧ್ಯವಿಲ್ಲ ಎಂದು ಆಕೆ ತಿಳಿಸಿದಳು. 


ಅಷ್ಟರಲ್ಲಿ ನನ್ನ ಸಹಚಾರಣಿಗರು ನನ್ನನ್ನು ಹುಡುಕುತ್ತಾ ಅಲ್ಲಿ ಬಂದರು. ಅವರಿಗೂ ಈ ಊರಲ್ಲಿ ಜನವಸತಿ ಇದೆಯೇ ಎಂಬ ಸಂಶಯ ಕಾಡಲಾರಂಭಿಸಿತ್ತು. ಈ ಬಗ್ಗೆ ಆ ಮಹಿಳೆಯನ್ನು ಕೇಳಿದರೆ ಆಕೆ ನಕ್ಕು, ಆ ಮೌನದ ಹಿಂದಿರುವ ಕಾರಣವನ್ನು ತಿಳಿಸಿದಳು. ಪುನರ್ವಸತಿಗೆಂದು ನಿಗದಿಪಡಿಸಿದ ಸ್ಥಳ ಅದೇಕೋ ಬಹಳಷ್ಟು ನಿರಾಶ್ರಿತರಿಗೆ ಇಷ್ಟವಾಗಲಿಲ್ಲ. ಕೆಲವರು ಇಲ್ಲಿಗೆ ಬರಲೊಪ್ಪದೆ ಬೇರೆಡೆ ತೆರಳಿದರೆ, ಹೆಚ್ಚಿನವರು ಸ್ವಲ್ಪ ಸಮಯ ಇಲ್ಲಿ ವಾಸಿಸಿ, ತಮ್ಮ ಹೆಸರಿಗೆ ಪಡೆದ ಮನೆಯನ್ನು ಹಾಗೇ ಬಿಟ್ಟು, ಬೇರೆಡೆ ನೆಲೆಸಿದ್ದಾರೆ. ಈ ಊರಿನಲ್ಲಿ ಈ ನಿರಾಶ್ರಿತರ ಕಾಲೊನಿ ನಿರ್ಮಾಣಗೊಳ್ಳುವ ಮೊದಲಿನಿಂದಲೂ ವಾಸಿಸುತ್ತಿರುವ ಜನರೂ ಇದ್ದಾರೆ. ಅವರ ಮನೆಗಳೆಲ್ಲಾ ರಿಂಗ್‍ರೋಡಿನ ಹೊರಗೆ ಇವೆ. ರಿಂಗ್‍ರೋಡಿನ ವರ್ತುಲದೊಳಗೆ ನಿರಾಶ್ರಿತರು, ಹೊರಗೆ ಮೂಲವಾಸಿಗಳು.


ಮುಂದಿನ ವರ್ಷ ಮತ್ತೆ ಅಗಸ್ಟ್ ತಿಂಗಳ ಅದೊಂದು ದಿನ ಮುಂಜಾನೆಯೇ ಈ ಊರಿನತ್ತ ಹೊರಟೆವು. ಈ ಬಾರಿ ಮುಖ್ಯ ರಸ್ತೆಯಿಂದ ನೇರವಾಗಿ ರಿಂಗ್‍ರೋಡಿಗೇ ತಿರುಗಿದೆವು. ಒಂದೆರಡು ಕಿಮಿ ದೂರ ಸಾಗಿದೊಡನೇ ದೂರದಲ್ಲಿ ಜಲಧಾರೆ ಕಾಣಿಸಿತು, ಹಾಗೇ ಮುಂದುವರಿದು ಆ ಮಹಿಳೆ ನೀಡಿದ ಕರಾರುವಾಕ್ ಮಾಹಿತಿಯ ಪ್ರಕಾರ ವಾಹನವನ್ನು ಒಂದೆಡೆ ನಿಲ್ಲಿಸಿ ಚಾರಣ ಆರಂಭಿಸಿದೆವು.


ಬಯಲುಪ್ರದೇಶದ ನಡುವೆ ನಮ್ಮ ಚಾರಣ ಸಾಗಿತ್ತು. ನಮ್ಮ ಬಲಕ್ಕೆ ಬೆಟ್ಟಗಳ ತಪ್ಪಲಿನವರೆಗೂ ಹಸಿರು ಗದ್ದೆಗಳ ಸುಂದರ ನೋಟ. ಜಲಧಾರೆ ನಿರ್ಮಿಸುವ ಹಳ್ಳದ ಬಳಿಯೇ ರಸ್ತೆ ಕೊನೆಗೊಳ್ಳುತ್ತದೆ. ಹಳ್ಳದ ಆ ಕಡೆ ದೇವಾಲಯವೊಂದಿದೆ. ಅಲ್ಲಿಂದ ಹಳ್ಳಗುಂಟ ಸ್ವಲ್ಪ ಮುನ್ನಡೆದು ನಂತರ ಸಿಗುವ ಕಾಲುಹಾದಿಯಲ್ಲಿ ೨೦ ನಿಮಿಷ ನಡೆದರೆ ಜಲಧಾರೆಯ ಮುಂದೆನೇ ದಾರಿ ಕೊನೆಗೊಳ್ಳುತ್ತದೆ.


ವಿಶಾಲವಾದ ಕಲ್ಲಿನ ಗೋಡೆಯ ಒಂದು ಬದಿಯಲ್ಲಿ ಭೋರ್ಗರೆಯುವ ಜಲಧಾರೆಯ ನಯನ ಮನೋಹರ ದೃಶ್ಯವನ್ನು ಆನಂದಿಸುವ ಭಾಗ್ಯ ನಮ್ಮದಾಗಿತ್ತು. ಕಾಡಿನ ನಡುವೆ ಸಣ್ಣ ತೆರೆದ ಸ್ಥಳದಲ್ಲಿ ಸುಮಾರು ೫೦ ಅಡಿ ಎತ್ತರದ ಜಲಧಾರೆಯನ್ನು ನಿರ್ಮಿಸಿ ಧುಮ್ಮಿಕ್ಕಿದ ಕೂಡಲೇ, ಹಳ್ಳವು ತಿರುವು ಪಡೆದು ಘಟ್ಟದ ಕೆಳಗೆ ಧಾವಿಸುತ್ತದೆ.


ನೀರು ಬೀಳುವಲ್ಲಿ ಗುಂಡಿಯಿರದ ಕಾರಣ ಯಾವುದೇ ಅಡೆತಡೆಯಿಲ್ಲದೆ ನೀರು ಬೀಳುವಲ್ಲಿ ತೆರಳಬಹುದು. ಹಳ್ಳಗುಂಟ ಸ್ವಲ್ಪ ಕೆಳಗೆ ಬಂದರೆ ಅಲ್ಲಿ ಜಲಕ್ರೀಡೆಯಾಡಲು ಸೂಕ್ತ ಕೊಳಗಳಿವೆ. ಮಳೆಗಾಲದಲ್ಲೇ ಇಲ್ಲಿ ಬಂದರೆ ಚೆನ್ನ.


ಕಲ್ಲಿನ ಗೋಡೆಯ ಇನ್ನೊಂದು ತುದಿಯಿಂದ ಮೇಲಕ್ಕೆ ಹತ್ತಿ ಹೋಗಬಹುದು. ನಮಗೆ ಸಮಯದ ಅಭಾವವಿದ್ದುದರಿಂದ ನಾವು ಮುಂದೆ ತೆರಳುವ ಯೋಚನೆ ಮಾಡಲಿಲ್ಲ. ಜಲಧಾರೆಯ ಮೇಲೆ ತೆರಳಿದರೆ ಇನ್ನೂ ಹಲವು ಹಂತಗಳಿವೆ. ಈಗ ನಾವು ನೋಡುತ್ತಿರುವುದು ಜಲಧಾರೆಯ ಕೆಳಗಿನ ಹಂತ. ನಮಗೆ ರಿಂಗ್‍ರೋಡಿನಿಂದ ಕಂಡುಬಂದದ್ದು ಇದರ ಮೇಲಿನ ಹಂತಗಳು. ಮೇಲೆ ಹತ್ತಿದ ಬಳಿಕ ನಂತರ ಇನ್ನೆಷ್ಟು ಮುಂದಕ್ಕೆ ತೆರಳಬಹುದು ಹಾಗೂ ರಸ್ತೆಯಿಂದ ಕಾಣುವ ಹಂತಗಳನ್ನು ನೋಡಲು ಸಾಧ್ಯವೇ ಎನ್ನುವುದು ಊಹೆಗೆ ಬಿಟ್ಟ ವಿಷಯ. ಆದರೆ ಈ ಜಲಧಾರೆಗೆ ಇನ್ನೊಂದು ಭೇಟಿ ನೀಡಲು ಈ ಒಂದು ನೆವ ಸಾಕು.

ಭಾನುವಾರ, ಜೂನ್ 21, 2015

ಶಾಂತಿಗ್ರಾಮದ ದೇವಾಲಯಗಳು


ಶಿಲಾಶಾಸನಗಳಲ್ಲಿ ದೊರಕಿರುವ ಮಾಹಿತಿಯ ಪ್ರಕಾರ ಹೊಯ್ಸಳ ದೊರೆ ವಿಷ್ಣುವರ್ಧನನ ಪಟ್ಟದ ರಾಣಿ ಶಾಂತಲಾ ದೇವಿಯು ೧೨ನೇ ಶತಮಾನದಲ್ಲಿ ಶಾಂತಿಗ್ರಾಮವೆಂಬ ಊರನ್ನು ಸ್ಥಾಪಿಸಿದಳು. ಶಾಂತಿಗ್ರಾಮದಲ್ಲಿ ನಾಲ್ಕು ಪ್ರಮುಖ ದೇವಾಲಯಗಳಿವೆ. ಇವುಗಳಲ್ಲಿ ಒಂದು ದೇವಾಲಯದ ನಿರ್ಮಾಣ ಹೊಯ್ಸಳ ಆಳ್ವಿಕೆಯ ಕಾಲದ ನಂತರ ಆಗಿದ್ದು, ಉಳಿದ ಮೂರು ದೇವಾಲಯಗಳ ನಿರ್ಮಾಣ ಹೊಯ್ಸಳರ ಆಳ್ವಿಕೆಯ ಸಮಯದಲ್ಲಿ ಆಗಿದೆ. ಈ ಮೂರು ದೇವಾಲಯಗಳನ್ನು ಶಾಂತಲಾದೇವಿ ನವೀಕರಣಗೊಳಿಸಿದ್ದಳು ಎಂಬ ಮಾಹಿತಿಯುಳ್ಳ ಶಾಸನ ಶಾಂತಿಗ್ರಾಮದಲ್ಲಿ ದೊರಕಿದೆ.


ಕೇಶವ ದೇವಾಲಯವನ್ನು ಹೊಯ್ಸಳರ ಆಳ್ವಿಕೆಯ ಸಮಯದ ನಂತರ ನಿರ್ಮಾಣಗೊಂಡಿರುವುದಾಗಿ ಇತಿಹಾಸಕಾರರು ಅಭಿಪ್ರಾಯಪಡುತ್ತಾರೆ. ಕಾಲಕಾಲಕ್ಕೆ ನವೀಕರಣಗೊಂಡಿರುವ ದೇವಾಲಯದ ಮೂಲ ರೂಪ ಹೊಯ್ಸಳ ದೇವಾಲಯಗಳಂತೆ ಇರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ದೇವಾಲಯಕ್ಕೆ ಬೀಗ ಹಾಕಿದ್ದರಿಂದ ನಮಗೆ ಒಳಗೆ ತೆರಳಲು ಆಗಲಿಲ್ಲ.


ಕೇಶವ ದೇವಾಲಯದ ಹೊರಗೋಡೆಯಲ್ಲಿ ಯಾವುದೇ ಭಿತ್ತಿಚಿತ್ರಗಳಿಲ್ಲ. ಹಲವಾರು ಸಣ್ಣ ಗೋಪುರಗಳನ್ನು ಹೊರಗೋಡೆಯುದ್ದಕ್ಕೂ ಕೆತ್ತಲಾಗಿದೆ. ಅಲ್ಲಲ್ಲಿ ಕೆಲವು ದೇವದೇವಿಯರ ಮೂರ್ತಿಗಳನ್ನು ಕಾಣಬಹುದು. ಆದರೆ ಇವುಗಳನ್ನು ತೀರಾ ಇತ್ತೀಚೆಗೆ ನಿರ್ಮಿಸಲಾಗಿದೆ.


ದೇವಾಲಯವು ಮುಖಮಂಟಪ, ನವರಂಗ ಮತ್ತು ಗರ್ಭಗುಡಿಯನ್ನು ಹೊಂದಿರುವುದನ್ನು ಕಾಣಬಹುದು.


ನರಸಿಂಹ ದೇವಾಲಯವನ್ನು ಹೊಯ್ಸಳರ ಆಳ್ವಿಕೆಯ ಕಾಲದಲ್ಲಿ ನಿರ್ಮಿಸಲಾಗಿದ್ದು, ದೇವಾಲಯವು ಮುಖಮಂಟಪ, ನವರಂಗ, ಅಂತರಾಳ ಮತ್ತು ಗರ್ಭಗುಡಿಯನ್ನು ಹೊಂದಿದೆ. ಗರ್ಭಗುಡಿಯ ಮೇಲೆ ಸಾಮಾನ್ಯ ಗೋಪುರವಿದೆ ಮತ್ತು ಹೊರಗೋಡೆಯಲ್ಲಿ ಯಾವ ಕೆತ್ತನೆಗಳೂ ಇಲ್ಲ.


ಶಾಂತಿಗ್ರಾಮದಲ್ಲಿ ಇರುವ ದೇವಾಲಯಗಳ ಪೈಕಿ, ಈ ದೇವಾಲಯಕ್ಕೆ ಭಕ್ತರ ಭೇಟಿ ಹೆಚ್ಚು. ಹರಕೆ, ಮದುವೆ ಹಾಗೂ ಇನ್ನಿತರ ಸಮಾರಂಭಗಳು ಇಲ್ಲಿ ನಡೆಯುತ್ತಲೇ ಇರುತ್ತವೆ. ಭಕ್ತರು ದೇವಾಲಯಕ್ಕೆ ದೊಡ್ಡ ಗೋಪುರವುಳ್ಳ ಪ್ರವೇಶ ದ್ವಾರವನ್ನು ನಿರ್ಮಿಸಿದ್ದಾರೆ. ಹಾಗೇನೆ, ದೇವಾಲಯದ ಸುತ್ತಲೂ ಮಾಡು ಹಾಕಿಸಲಾಗಿದೆ. ದೇವಾಲಯದೊಳಗೆ ನೆಲಕ್ಕೆಲ್ಲಾ ಮಾರ್ಬಲ್ಲು.


ನರಸಿಂಹ ದೇವಾಲಯವೆಂದು ಕರೆಯಲಾಗುತ್ತಿದೆಯಾದರೂ, ಗರ್ಭಗುಡಿಯಲ್ಲಿರುವ ಮೂರ್ತಿಯು ನರಸಿಂಹನು ಯೋಗಾಸನದಲ್ಲಿರುವುದನ್ನು ತೋರಿಸುತ್ತಿದೆ. ಹಾಗಾಗಿ ಈ ದೇವಾಲಯವನ್ನು ಯೋಗನರಸಿಂಹ ದೇವಾಲಯವೆಂದೂ ಕರೆಯಲಾಗುತ್ತದೆ.


ದ್ವಿಕೂಟ ಶೈಲಿಯ ವೀರಭದ್ರ ದೇವಾಲಯವು ಪಾಳುಬೀಳುತ್ತಿದೆ. ದೇವಾಲಯಕ್ಕೆ ಬೀಗ ಹಾಕಲಾಗಿದ್ದರಿಂದ ಹೊರಗಿನಿಂದ ನೋಡಿಯೇ ತೃಪ್ತಿಪಡಬೇಕಾಯಿತು.


ದೇವಾಲಯದ ಪ್ರಮುಖ ದ್ವಾರವು ಯಾವುದೇ ಅಲಂಕಾರಗಳಿಲ್ಲದ ಪಂಚಶಾಖೆಗಳನ್ನು ಹೊಂದಿದೆ. ಲಲಾಟದಲ್ಲಿ ಮಾಸುತ್ತಿರುವ ಗಜಲಕ್ಷ್ಮೀ ಹಾಗೂ ತಳದಲ್ಲಿ ದ್ವಾರಪಾಲಕರನ್ನು ಕಾಣಬಹುದು. ಮುಖಮಂಟಪ, ನವರಂಗ ಮತ್ತು ಎರಡು ಗರ್ಭಗುಡಿಗಳನ್ನು ಈ ದೇವಾಲಯ ಹೊಂದಿದೆ.


ಪಶ್ಚಿಮದಲ್ಲಿರುವ ಪ್ರಮುಖ ಗರ್ಭಗುಡಿಯಲ್ಲಿ ವೀರಭದ್ರನ ವಿಗ್ರಹವಿದೆ. ದಕ್ಷಿಣದಲ್ಲಿರುವ ಎರಡನೇ ಗರ್ಭಗುಡಿಯಲ್ಲಿರುವ ಮೂರ್ತಿಯ ಬಗ್ಗೆ ಮಾಹಿತಿ ದೊರಕಲಿಲ್ಲ. ಪ್ರಮುಖ ಗರ್ಭಗುಡಿಯ ಮೆಲೆ ಗೋಪುರವಿದ್ದು, ಇದರ ಹೊರಕವಚ ಕಳಚಿಬೀಳುತ್ತಿದೆ. ದೇವಾಲಯವು ಭವ್ಯ ಮುಖಮಂಟಪವನ್ನು ಹೊಂದಿದ್ದ ಕುರುಹನ್ನು ಕಾಣಬಹುದು. ಈ ದೇವಾಲಯದಲ್ಲಿ ಕಾಳಿಯ ಎಂಟು ಕೈಗಳುಳ್ಳ (ಮಹಿಷಾಸುರಮರ್ದಿನಿ) ಅದ್ಭುತ ಮೂರ್ತಿಯಿದೆ. ನಮಗದನ್ನು ನೋಡಲಾಗಲಿಲ್ಲ. ಇದೇ ಕಾರಣಕ್ಕೆ ಊರವರು ಈ ದೇವಾಲಯವನ್ನು ಕಾಳಮ್ಮ ದೇವಾಲಯವೆಂದು ಕರೆಯುತ್ತಾರೆ.


ದೇವಾಲಯದ ಸ್ಥಿತಿ ಕಂಡರೆ ಖೇದವಾಗದೆ ಇರದು. ಕಲ್ಲಿನ ರಾಶಿಯನ್ನು ಪೇರಿಸಿ ಇಟ್ಟಂತೆ ಕಾಣುತ್ತಿದೆ ಒಂದೊಮ್ಮೆ ರಾರಾಜಿಸುತ್ತಿದ್ದ ಈ ದೇವಾಲಯ. ನವರಂಗದ ಹೊರಗೋಡೆಯ ಕಲ್ಲಿನ ಕವಚಗಳೇ ಮಾಯವಾಗುತ್ತಿವೆ! ಯಾರ ಮನೆ ಸೇರಿವೆಯೇನೋ! ತನ್ನ ವಾಸಸ್ಥಾನದ ಜೀರ್ಣೋದ್ಧಾರದ ನಿರೀಕ್ಷೆಯಲ್ಲಿದ್ದಾನೆ ವೀರಭದ್ರ.


ಶಾಂತಿಗ್ರಾಮದಲ್ಲಿ ಹೊಯ್ಸಳರು ಇಸವಿ ೧೧೨೩ರಲ್ಲಿ ನಿರ್ಮಿಸಿದ ಧರ್ಮೇಶ್ವರ ದೇವಾಲಯ ನಮಗೆ ಸಿಗಲಿಲ್ಲ. ಊರವರಲ್ಲಿ ವಿಚಾರಿಸಿದರೆ ನಾವು ಅದಾಗಲೇ ನೋಡಿದ್ದ ಮೂರು ದೇವಾಲಯಗಳತ್ತ ಕೈ ತೋರಿಸುತ್ತಿದ್ದರೇ ವಿನ: ಧರ್ಮೇಶ್ವರನ ವಿಷಯವೇ ಅವರಿಗೆ ಗೊತ್ತಿರಲಿಲ್ಲ. ಈಗ ಬೇರೆ ಹೆಸರಿನಿಂದ ಕರೆಯಲಾಗುತ್ತಿರಬಹುದು. ಆದರೂ, ನಮಗೆ ಈ ಧರ್ಮೇಶ್ವರನ ಕುರುಹೇ ಸಿಗಲಿಲ್ಲ. ಇನ್ನೂ ಸ್ವಲ್ಪ ಹುಡುಕಿದರೆ ಸಿಗುತ್ತಿತ್ತೇನೋ. ಆದರೆ ಅದಾಗಲೇ ಶಾಂತಿಗ್ರಾಮದ ಪ್ರಾಚೀನ ದೇವಾಲಯಗಳ ಸ್ಥಿತಿ-ದುಸ್ಥಿತಿ ಕಂಡು ನಿರಾಶರಾಗಿದ್ದ ನಾವು ಅಲ್ಲಿಂದ ಹೊರಟೆವು.

ಭಾನುವಾರ, ಜೂನ್ 14, 2015

ಕುಂಬಾರೇಶ್ವರ ದೇವಾಲಯ - ಲಕ್ಕುಂಡಿ


ಕುಂಬಾರೇಶ್ವರ ದೇವಾಲಯವನ್ನು ಮೊದಲು ಕುಂಬಾರ ಗಿರೀಶ್ವರ ದೇವಾಲಯವೆಂದು ಕರೆಯಲಾಗುತ್ತಿತ್ತು. ಈ ದೇವಾಲಯಕ್ಕೆ ಎಂದೂ ಬೀಗ ಜಡಿದಿರುತ್ತದೆ. ನನ್ನ ಎರಡು ಭೇಟಿಗಳಲ್ಲಿ ಈ ದೇವಾಲಯದ ಒಳಗೆ ತೆರಳಲು ನನಗೆ ಸಾಧ್ಯವಾಗಲಿಲ್ಲ.


ಒಂದು ದೇವಾಲಯ, ಒತ್ತುವರಿಗೆ ಯಾವ ರೀತಿಯಲ್ಲಿ ಬಲಿಯಾಗಬಹುದು ಎನ್ನುವುದಕ್ಕೆ ಈ ದೇವಾಲಯ ಒಂದು ಜ್ವಲಂತ ಸಾಕ್ಷಿ. ದೇವಾಲಯದ ಸುತ್ತಲು ಹೊರಗಿನಿಂದ ಒಂದು ಪ್ರದಕ್ಷಿಣೆ ಹಾಕಲು ಒಬ್ಬ ವ್ಯಕ್ತಿ ನುಸುಳುವಷ್ಟು ಕೂಡಾ ಸ್ಥಳವಿಲ್ಲ. ದೇವಾಲಯದ ದ್ವಾರದ ಎಡಭಾಗದಲ್ಲಿ ಗೋಡೆಯೊಂದನ್ನು, ದೇವಾಲಯದ ಗೋಡೆಗೆ ಹಚ್ಚಿಬಿಡಲಾಗಿತ್ತು! ದೇವಾಲಯಕ್ಕೆ ಒಂದು ಸುತ್ತು ಹಾಕಬೇಕಾದರೆ ಎಲ್ಲಾ ದಿಕ್ಕಿನಲ್ಲಿರುವ ಮನೆಗಳಿಗೆ ಸುತ್ತು ಹಾಕಬೇಕಾಗುತ್ತದೆ. ದೇವಾಲಯದ ಒಂದು ಪಾರ್ಶ್ವದ ಚಿತ್ರ ತೆಗೆಯಬೇಕಾದರೆ, ಒಂದು ಕಡೆಯಿರುವ ಮನೆಗಳನ್ನು ದಾಟಿ ಇನ್ನೊಂದು ಬದಿಗೆ ತಲುಪಲು ಬೇರೆ ರಸ್ತೆಯನ್ನೇ ಬಳಸಿ ಹೋಗಬೇಕು!


ಒಂದು ಬದಿಯಲ್ಲಿ ದೇವಾಲಯಕ್ಕೆ ತಾಗಿಕೊಂಡೇ ಕೊಟ್ಟಿಗೆ, ಗೋದಾಮು ಇತ್ಯಾದಿ. ದೇವಾಲಯದ ದ್ವಾರದ ಸಮೀಪವೇ ಹಸು ಕರುಗಳನ್ನು ಕಟ್ಟಲಾಗಿತ್ತು!


ಒಂದು ಪಾರ್ಶ್ವದಲ್ಲಿರುವ ಮನೆಯನ್ನು, ಆ ಮನೆಯವರು ವಿಸ್ತರಿಸುತ್ತಿದ್ದರು. ’ನೀವು ಹಾಗೆ ಮನೆ ಕಟ್ಟಿದರೆ, ದೇವಾಲಯವೇ ಕಾಣುದಿಲ್ಲವಲ್ಲ’ ಎಂದು ನಾನು ಕೇಳಿದರೆ, ಅವರಿಗೆ ನನ್ನ ಪ್ರಶ್ನೆಯೇ ಅರ್ಥವಾಗಲಿಲ್ಲ. ಸ್ವಲ್ಪ ವಿವರಿಸಿದ ಬಳಿಕ, ’ಏ ಅದೆಲ್ಲಾ ಬಿಡ್ರಿ ಸರ, ಮನಿ ಬೇಕಲ್ರಿ....., ಗುಡಿ ದ್ಯಾವ್ರಿಗೆ, ಮನಿ ನಮ್ಗೆ’ ಎಂದು ಮತ್ತೆ ಇಟ್ಟಿಗೆಗೆ ಸಿಮೆಂಟು ಹಾಕುವುದರಲ್ಲಿ ಮಗ್ನರಾದರು. ಅವರ ಪ್ರಕಾರ ಯಾರೂ ಈವರೆಗೆ ಆಕ್ಷೇಪಣೆ ಎತ್ತಿಲ್ಲ.


ಇದೊಂದು ತ್ರಿಕೂಟಾಚಲ ದೇವಾಲಯವಾಗಿದ್ದು, ಹೊರಗೋಡೆಯಲ್ಲಿ ಉತ್ತಮ ಕೆತ್ತನೆಗಳಿವೆ. ಆದರೆ, ಈ ಕೆತ್ತನೆಗಳನ್ನು ಆಸ್ವಾದಿಸಲು ಸಾಧ್ಯವೇ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.


ಈ ಮೊದಲು ಕೇವಲ ೪ ದೇವಾಲಯಗಳ ಜವಾಬ್ದಾರಿಯನ್ನು ಹೊತ್ತಿದ್ದ ಪುರಾತತ್ವ ಇಲಾಖೆ, ಈಗ ಲಕ್ಕುಂಡಿಯಲ್ಲಿರುವ ಎಲ್ಲಾ ದೇವಾಲಯಗಳ ಜವಾಬ್ದಾರಿಯನ್ನು ವಹಿಸಿಕೊಂಡಿದೆ. ಈ ಮನೆಗಳನ್ನು ತೆರವುಗೊಳಿಸುವುದು ಅಸಾಧ್ಯದ ಮಾತು.