ಭಾನುವಾರ, ಜೂನ್ 14, 2015

ಕುಂಬಾರೇಶ್ವರ ದೇವಾಲಯ - ಲಕ್ಕುಂಡಿ


ಕುಂಬಾರೇಶ್ವರ ದೇವಾಲಯವನ್ನು ಮೊದಲು ಕುಂಬಾರ ಗಿರೀಶ್ವರ ದೇವಾಲಯವೆಂದು ಕರೆಯಲಾಗುತ್ತಿತ್ತು. ಈ ದೇವಾಲಯಕ್ಕೆ ಎಂದೂ ಬೀಗ ಜಡಿದಿರುತ್ತದೆ. ನನ್ನ ಎರಡು ಭೇಟಿಗಳಲ್ಲಿ ಈ ದೇವಾಲಯದ ಒಳಗೆ ತೆರಳಲು ನನಗೆ ಸಾಧ್ಯವಾಗಲಿಲ್ಲ.


ಒಂದು ದೇವಾಲಯ, ಒತ್ತುವರಿಗೆ ಯಾವ ರೀತಿಯಲ್ಲಿ ಬಲಿಯಾಗಬಹುದು ಎನ್ನುವುದಕ್ಕೆ ಈ ದೇವಾಲಯ ಒಂದು ಜ್ವಲಂತ ಸಾಕ್ಷಿ. ದೇವಾಲಯದ ಸುತ್ತಲು ಹೊರಗಿನಿಂದ ಒಂದು ಪ್ರದಕ್ಷಿಣೆ ಹಾಕಲು ಒಬ್ಬ ವ್ಯಕ್ತಿ ನುಸುಳುವಷ್ಟು ಕೂಡಾ ಸ್ಥಳವಿಲ್ಲ. ದೇವಾಲಯದ ದ್ವಾರದ ಎಡಭಾಗದಲ್ಲಿ ಗೋಡೆಯೊಂದನ್ನು, ದೇವಾಲಯದ ಗೋಡೆಗೆ ಹಚ್ಚಿಬಿಡಲಾಗಿತ್ತು! ದೇವಾಲಯಕ್ಕೆ ಒಂದು ಸುತ್ತು ಹಾಕಬೇಕಾದರೆ ಎಲ್ಲಾ ದಿಕ್ಕಿನಲ್ಲಿರುವ ಮನೆಗಳಿಗೆ ಸುತ್ತು ಹಾಕಬೇಕಾಗುತ್ತದೆ. ದೇವಾಲಯದ ಒಂದು ಪಾರ್ಶ್ವದ ಚಿತ್ರ ತೆಗೆಯಬೇಕಾದರೆ, ಒಂದು ಕಡೆಯಿರುವ ಮನೆಗಳನ್ನು ದಾಟಿ ಇನ್ನೊಂದು ಬದಿಗೆ ತಲುಪಲು ಬೇರೆ ರಸ್ತೆಯನ್ನೇ ಬಳಸಿ ಹೋಗಬೇಕು!


ಒಂದು ಬದಿಯಲ್ಲಿ ದೇವಾಲಯಕ್ಕೆ ತಾಗಿಕೊಂಡೇ ಕೊಟ್ಟಿಗೆ, ಗೋದಾಮು ಇತ್ಯಾದಿ. ದೇವಾಲಯದ ದ್ವಾರದ ಸಮೀಪವೇ ಹಸು ಕರುಗಳನ್ನು ಕಟ್ಟಲಾಗಿತ್ತು!


ಒಂದು ಪಾರ್ಶ್ವದಲ್ಲಿರುವ ಮನೆಯನ್ನು, ಆ ಮನೆಯವರು ವಿಸ್ತರಿಸುತ್ತಿದ್ದರು. ’ನೀವು ಹಾಗೆ ಮನೆ ಕಟ್ಟಿದರೆ, ದೇವಾಲಯವೇ ಕಾಣುದಿಲ್ಲವಲ್ಲ’ ಎಂದು ನಾನು ಕೇಳಿದರೆ, ಅವರಿಗೆ ನನ್ನ ಪ್ರಶ್ನೆಯೇ ಅರ್ಥವಾಗಲಿಲ್ಲ. ಸ್ವಲ್ಪ ವಿವರಿಸಿದ ಬಳಿಕ, ’ಏ ಅದೆಲ್ಲಾ ಬಿಡ್ರಿ ಸರ, ಮನಿ ಬೇಕಲ್ರಿ....., ಗುಡಿ ದ್ಯಾವ್ರಿಗೆ, ಮನಿ ನಮ್ಗೆ’ ಎಂದು ಮತ್ತೆ ಇಟ್ಟಿಗೆಗೆ ಸಿಮೆಂಟು ಹಾಕುವುದರಲ್ಲಿ ಮಗ್ನರಾದರು. ಅವರ ಪ್ರಕಾರ ಯಾರೂ ಈವರೆಗೆ ಆಕ್ಷೇಪಣೆ ಎತ್ತಿಲ್ಲ.


ಇದೊಂದು ತ್ರಿಕೂಟಾಚಲ ದೇವಾಲಯವಾಗಿದ್ದು, ಹೊರಗೋಡೆಯಲ್ಲಿ ಉತ್ತಮ ಕೆತ್ತನೆಗಳಿವೆ. ಆದರೆ, ಈ ಕೆತ್ತನೆಗಳನ್ನು ಆಸ್ವಾದಿಸಲು ಸಾಧ್ಯವೇ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.


ಈ ಮೊದಲು ಕೇವಲ ೪ ದೇವಾಲಯಗಳ ಜವಾಬ್ದಾರಿಯನ್ನು ಹೊತ್ತಿದ್ದ ಪುರಾತತ್ವ ಇಲಾಖೆ, ಈಗ ಲಕ್ಕುಂಡಿಯಲ್ಲಿರುವ ಎಲ್ಲಾ ದೇವಾಲಯಗಳ ಜವಾಬ್ದಾರಿಯನ್ನು ವಹಿಸಿಕೊಂಡಿದೆ. ಈ ಮನೆಗಳನ್ನು ತೆರವುಗೊಳಿಸುವುದು ಅಸಾಧ್ಯದ ಮಾತು.

2 ಕಾಮೆಂಟ್‌ಗಳು:

ವಿ.ರಾ.ಹೆ. ಹೇಳಿದರು...

ತಮ್ಮ ಬಗಲಲ್ಲೇ ಇರುವ ಇದರ ಮಹತ್ವವೇ ಗೊತ್ತಿಲ್ಲವಲ್ಲ ಆ ಜನರಿಗೆ.! ಬೇಸರವಾಗುತ್ತದೆ.

ರಾಜೇಶ್ ನಾಯ್ಕ ಹೇಳಿದರು...

ವಿಕಾಸ್,

ಮಹತ್ವದ ಅರಿವನ್ನು ಮೂಡಿಸುವ ಕೆಲಸವನ್ನು ಮಾಡಬೇಕಾದವರು - ಗ್ರಾಮ ಪಂಚಾಯತಿ, ಜಿಲ್ಲಾ ಪ್ರಾಧಿಕಾರ, ಇತ್ಯಾದಿ - ಏನೂ ಮಾಡದೇ ಇರುವುದು ಇನ್ನೂ ಖೇದಕರ. ಧನ್ಯವಾದ.