ಶನಿವಾರ, ಅಕ್ಟೋಬರ್ 13, 2012

ದೋನ್ ಹೊಳಾರ್


ಗೆಳೆಯ ವಿವೇಕ್ ಯೇರಿ ಈ ’ದೋನ್ ಹೊಳಾರ್’ ಬಗ್ಗೆ ೨ ವರ್ಷಗಳಿಂದ ಹೇಳುತ್ತಿದ್ದರು. ತಾನು ಭೇಟಿ ನೀಡಿದರೂ, ನೀರಿನ ಹರಿವು ಬಹಳ ಕಡಿಮೆಯಿದ್ದುದರಿಂದ ಅವರಿಗೆ ಇನ್ನೊಮ್ಮೆ ಭೇಟಿ ನೀಡುವ ಆಸೆಯಿತ್ತು. ಅಲ್ಲೇ ಸಮೀಪ ಇನ್ನೊಂದು ಜಲಧಾರೆಗೆ ಭೇಟಿ ನೀಡುವ ಪ್ಲ್ಯಾನ್ ಹಾಕಿದಾಗ, ದೋನ್ ಹೊಳಾರ್‌ಗೂ ಹೋಗಿಬರೋಣ ಎಂದು ವಿವೇಕ್ ಹೇಳಿದಾಗ ಸಂತೋಷದಿಂದಲೇ ಒಪ್ಪಿಕೊಂಡೆ.


ಜಲಧಾರೆಯ ಸಮೀಪದವರೆಗೂ ರಸ್ತೆ ಇದೆ. ಕೇವಲ ಹತ್ತು ನಿಮಿಷ ನಡೆದರಾಯಿತು. ಆದರೆ ಜಲಧಾರೆ ಇನ್ನೂ ೩ ಕಿಮಿ ದೂರವಿರುವಾಗ ರಸ್ತೆಯಲ್ಲಿ ಸ್ವಲ್ಪ ದೂರದವರೆಗೆ ತುಂಬಾ ಕೆಸರಿದ್ದು, ನಮ್ಮ ವಾಹನದ ಚಕ್ರಗಳೇನಾದರೂ ಹೂತುಹೋದರೆ ಕಷ್ಟ ಎಂದು ಅಲ್ಲೇ ವಾಹನ ನಿಲ್ಲಿಸಿ ಹೆಜ್ಜೆ ಹಾಕಲು ಆರಂಭಿಸಿದೆವು.


ಜಲಧಾರೆಯ ಮೇಲ್ಭಾಗದಲ್ಲಿ ಹಳ್ಳವನ್ನು ದಾಟಬೇಕಾಗುವುದರಿಂದ ಬಿರುಸು ಮಳೆಯಲ್ಲಿ ಇಲ್ಲಿ ಬರುವುದು ಅಸಾಧ್ಯ. ದೋನ್ ಹೊಳಾರ್ ಎಂದರೆ ’ಎರಡು ಭಾಗಗಳು’ ಎಂದರ್ಥ. ಸುಮಾರು ೪೦-೪೫ ಅಡಿಯಷ್ಟು ಎತ್ತರವಿರುವ ಎರಡು ಹಂತಗಳ ಜಲಧಾರೆಯನ್ನು ಸಂದರ್ಶಿಸುವವರಲ್ಲಿ ಪ್ರಮುಖರೆಂದರೆ ಜಿಂಕೆಗಳು, ಕಾಡು ಕೋಣಗಳು, ಕರಡಿಗಳು ಮತ್ತು ಇತರ ಸಣ್ಣ ಪ್ರಾಣಿಗಳು.


ಸಣ್ಣ ಕಣಿವೆಯಲ್ಲಿರುವ ಜಲಧಾರೆ ದಿನವಿಡೀ ಕಾಲಹರಣ ಮಾಡಲು ಸೂಕ್ತ ಸ್ಥಳ. ಜಲಧಾರೆಯ ಮುಂದಿರುವ ಕೊಳದಲ್ಲಿ ಗಂಟೆಗಟ್ಟಲೆ ಕಾಲಹರಣ ಮಾಡಬಹುದು. ಹಳ್ಳದ ಎರಡೂ ಪಾರ್ಶ್ವಗಳಲ್ಲಿರುವ ಕಲ್ಲಿನ ಮೇಲ್ಮೈಯಲ್ಲಿ ಅಂಗಾತ ಮಲಗಬಹುದು. ನೆರಳಿನಲ್ಲಿ ಕೂತು ವಿಶ್ರಮಿಸಬಹುದು. ಶಾಂತ ಪರಿಸರವನ್ನು ಕಲುಷಿತಗೊಳಿಸುವ ಯಾವುದೇ ಶಬ್ದ ಕೇಳಿಬರುವುದಿಲ್ಲ. ನೀರಿನ ಹರಿವಿನ ಶಬ್ದ ಮಾತ್ರ.


ಮೊದಲನೇ ಹಂತ ಮತ್ತು ಎರಡನೇ ಹಂತದ ನಡುವಿರುವ ಸುಮಾರು ೨೫-೩೦ ಅಡಿ ಸ್ಥಳ, ಸಂಪೂರ್ಣವಾಗಿ ಕಲ್ಲಿನ ಮೇಲ್ಮೈಯಾಗಿರುವುದಲ್ಲದೇ, ಯಾವುದೇ ತಗ್ಗಿಲ್ಲದ ಸ್ಥಳವಾಗಿದ್ದು, ನೀರು ರಭಸವಾಗಿ ಹರಿಯುತ್ತಾ ಇರುತ್ತದೆ. ಇಲ್ಲಿ ನೀರಿನ ಹರಿವಿನಲ್ಲಿ ಮೈಚಾಚಿ ಮಲಗಿಬಿಟ್ಟರೆ ಅದೊಂದು ಅವರ್ಣನೀಯ ಅನುಭವ ಎನ್ನುವುದು ನನ್ನ ಸಹಚಾರಣಿಗರ ಹೇಳಿಕೆ.


ಇಲ್ಲಿ ಮನುಷ್ಯರ ಸುಳಿದಾಟ ವಿರಳ. ಜಲಧಾರೆಗೆ ಸ್ವಲ್ಪ ಮೊದಲು ರಸ್ತೆ ಕೊನೆಗೊಳ್ಳುವಲ್ಲಿ ದಾರಿಯೊಂದು ಕವಲೊಡೆದಿದ್ದು, ಆ ದಾರಿಯಲ್ಲಿ ಮುಂದೆ ಸಾಗಿದರೆ ನಾಲ್ಕಾರು ಮನೆಗಳುಳ್ಳ ಹಳ್ಳಿಯೊಂದು ಸಿಗುತ್ತದೆ. ಈ ಹಳ್ಳಿ ಬಿಟ್ಟರೆ ಜಲಧಾರೆಯ ಸಮೀಪ ಎಲ್ಲೂ ಮಾನವ ಸಂಚಾರ ಇಲ್ಲವೆನ್ನುವುದು ಕಾಡುಪ್ರಾಣಿಗಳಿಗೆ ವರದಾನವಾಗಿದೆ. ಆದರೆ ಎಲ್ಲಿಯೂ ಎಲ್ಲವೂ ಚೆನ್ನಾಗಿರುವುದಿಲ್ಲ. ಕಣ್ಣಿಗೆ ಕಾಣದ ದುಷ್ಟಶಕ್ತಿಯೊಂದು ಯಾವುದಾದರೊಂದು ರೂಪದಲ್ಲಿ ಅವಿತಿರುತ್ತದೆ ಎನ್ನುವುದು ಈ ಸ್ಥಳಕ್ಕೂ ಅನ್ವಯವಾಗುವ ಮಾತು.


ನೇರವಾದ ಸರಳ ರಸ್ತೆಯಾಗಿದ್ದರಿಂದ ಹಿಂತಿರುಗುವಾಗ ಉಳಿದವರಿಗಿಂತ ನಾನೇ ಮುಂದೆ ಇದ್ದೆ. ಒಂದು ಕಡೆ ದಾರಿ ತಿರುವು ಪಡೆದ ಕೂಡಲೇ ನನ್ನ ಮುಂದೆ ಇಬ್ಬರು ಸ್ತಂಭೀಭೂತರಾದಂತೆ ನಿಂತುಬಿಟ್ಟರು. ಅನಿರೀಕ್ಷಿತವಾಗಿ ಎದುರುಗೊಂಡ ನನ್ನನ್ನು ಕಂಡು ಅವರು ಗಾಬರಿಗೊಂಡಿದ್ದು ಅವರ ಮುಖಭಾವದಿಂದಲೇ ಸ್ಪಷ್ಟವಾಗಿತ್ತು. ಅವರ ಹೆಗಲ ಮೇಲೆ ಜೋತುಬಿದ್ದಿದ್ದ ’ಸಿಂಗಲ್ ಬ್ಯಾರಲ್’ ಬಂದೂಕುಗಳನ್ನು ನೋಡಿ ನಾನೂ ಗಲಿಬಿಲಿಗೊಂಡರೂ ತೋರಗೊಡದೆ ಮುನ್ನಡೆದೆ. ಕ್ಷಣಮಾತ್ರದಲ್ಲಿ ಸಾವರಿಸಿಕೊಂಡ ಅವರಿಬ್ಬರು ರಸ್ತೆಯನ್ನು ಬಿಟ್ಟು ಕಾಡನ್ನು ಹೊಕ್ಕು ಕಣ್ಮರೆಯಾಗಲು ಪ್ರಯತ್ನಿಸಿದರು. ಬೇಟೆಗಾರರು ಸಿಗುವುದೇ ಅಪರೂಪ. ಹಾಗಿರುವಾಗ ಅಚಾನಕ್ ಆಗಿ ಸಿಕ್ಕ ಇವರಿಬ್ಬರನ್ನು ಬಿಡುವುದುಂಟೇ.


’ಹೋಯ್.. ಥಾಂಬಾ, ಕುಟೆ ಧಾಂವ್ತೆ... ಇಥೆ ಯೆ... ಭಿವು ನಕೊ..’ ಎಂದು ನನ್ನ ಕೊಂಕಣಿ ಮಿಶ್ರಿತ ಮರಾಠಿಯಿಂದ ಅವರಿಬ್ಬರನ್ನು ಬಳಿಗೆ ಕರೆದೆ. ಅಳುಕುತ್ತಲೇ ಬಳಿ ಬಂದರು. ಅಷ್ಟರಲ್ಲಿ ಉಳಿದ ಚಾರಣಿಗರು ಸಮೀಪ ಬಂದಾಗಿತ್ತು. ಅವರ ’ಲೋಡೆಡ್’ ಬಂದೂಕುಗಳೊಂದಿಗೆ ಪೋಸು ಕೊಟ್ಟು ಫೋಟೊ ತೆಗೆಸಿಕೊಂಡ ಬಳಿಕ ಉಳಿದ ಸಹಚಾರಣಿಗರು ಮುನ್ನಡೆದರೆ, ವಿವೇಕ್ ಮತ್ತು ನಾನು ಈ ಇಬ್ಬರೊಂದಿಗೆ ಸುಮಾರು ೨೦ ನಿಮಿಷ ಮಾತುಕತೆ ನಡೆಸಿದೆವು. ಬಹಳ ಆಶ್ಚರ್ಯಕರ ಮತ್ತು ಕುತೂಹಲಕಾರಿ ವಿಷಯಗಳು ತಿಳಿದವು. ಅವನ್ನೆಲ್ಲಾ ಇನ್ನೊಮ್ಮೆ ಪ್ರತ್ಯೇಕ ಲೇಖನದಲ್ಲಿ ಬರೆಯುವೆ. ಈ ಪ್ರದೇಶದಲ್ಲಿ ಪ್ರಾಣಿಗಳ ಬೇಟೆಗೆ ಲಗಾಮೇ ಇಲ್ಲ. ಇದೇ ನಾನು ಮೇಲೆ ಹೇಳಿದ ದುಷ್ಟಶಕ್ತಿ.

ಮಾಹಿತಿ: ಗಂಗಾಧರ್ ಕಲ್ಲೂರ್ ಹಾಗೂ ವಿವೇಕ್ ಯೇರಿ

3 ಕಾಮೆಂಟ್‌ಗಳು:

Aravind GJ ಹೇಳಿದರು...

ಸೊಗಸಾದ ಜಲಪಾತ. ಒಮ್ಮೆ ನೋಡಲೇಬೇಕು!!

ಮಾಹಿತಿಗಾಗಿ ಧನ್ಯವಾದಗಳು.

siddeshwar ಹೇಳಿದರು...

beautiful cascade. what a lovely place!

ರಾಜೇಶ್ ನಾಯ್ಕ ಹೇಳಿದರು...

ಅರವಿಂದ್, ಸಿದ್ಧೇಶ್ವರ,
ಧನ್ಯವಾದ.