ಶುಕ್ರವಾರ, ಜನವರಿ 24, 2020

ಬೆಡಸಗಾವಿಯ ದೇವಸ್ಥಾನಗಳು


ಬೆಡಸಗಾವಿ ಒಂದು ಐತಿಹಾಸಿಕ ಸ್ಥಳವೆಂಬುದು ಅಲ್ಲಿರುವ ದೇವಾಲಯಗಳನ್ನು, ದೊರಕಿರುವ ಶಾಸನಗಳನ್ನು, ವೀರಗಲ್ಲುಗಳನ್ನು ನೋಡುವಾಗಲೇ ಊಹೆ ಮಾಡಬಹುದು. ಈಗಿನ ಬೆಡಸಗಾವಿ, ಹಿಂದೆ ಬೆಡಸಗಾಮೆ ಆಗಿ ಪ್ರಸಿದ್ಧಿ ಪಡೆದಿತ್ತೆಂದು ಶಿಲಾ ಶಾಸನವೊಂದರಿಂದ ತಿಳಿದುಬರುತ್ತದೆ. ಹಳ್ಳಿಯಲ್ಲಿ ಈಗ ನಾಲ್ಕು ದೇವಾಲಯಗಳಿದ್ದು ಅವುಗಳಲ್ಲಿ ಒಂದು ದೇವಾಲಯ ಮಾತ್ರ ಸಾಧಾರಣ ಸ್ಥಿಥಿಯಲ್ಲಿದ್ದು ಉಳಿದ ೩ ದೇವಾಲಯಗಳು ಜೀರ್ಣಾವಸ್ಥೆಯನ್ನು ತಲುಪಿವೆ. ಬೆಡಸಗಾವಿಯ ಹಾದಿಯಲ್ಲಿ ತುಂಬಾ ಕೆರೆಗಳಿದ್ದು ಈ ಸೀಮೆಯ ವೈಭವಕ್ಕೆ ಪುರಾವೆಯಾಗಿದೆ.


ಇಸವಿ ೧೧೬೩ರಲ್ಲಿ ಕಳಚೂರಿ ಅರಸ ಬಿಜ್ಜಳದೇವನ ಕಾಲದಲ್ಲಿ ನಿರ್ಮಾಣಗೊಂಡಿರುವ ರಾಮಲಿಂಗೇಶ್ವರ ದೇವಾಲಯವೇ ಸ್ವಲ್ಪ ಸುಸ್ಥಿತಿಯಲ್ಲಿರುವಂತದ್ದು. ಛಾವಣಿ ಸೋರಲಾರಂಭಿಸಿದ್ದರಿಂದ ಮೇಲ್ಭಾಗದಿಂದ ಸಂಪೂರ್ಣವಾಗಿ ಕಾಂಕ್ರೀಟ್ ಹಾಕಲಾಗಿದೆ. ಬಹಳ ಸುಂದರ ಪರಿಸರದಲ್ಲಿರುವ ರಾಮಲಿಂಗೇಶ್ವರ ದೇವಾಲಯ ತುಂಬಾನೇ ಸರಳವಾಗಿದ್ದು ಮೂರಡಿ ಎತ್ತರದ ಅಧಿಷ್ಠಾನದ ಮೇಲೆ ನಿರ್ಮಿಸಲ್ಪಟ್ಟಿದೆ.


ದೇವಾಲಯದ ಒಳಗೆ ಕಾಲಿಟ್ಟರೆ ಅಂತರಾಳ ಮತ್ತು ನಂತರ ಗರ್ಭಗುಡಿ. ನಂದಿ ಹೊರಗೆ ಅಧಿಷ್ಠಾನದ ಮೇಲೆಯೇ ಇದೆ. ದೇವಾಲಯದ ಸುತ್ತಲೂ ೧೪ ಕಂಬಗಳಿವೆ. ಅಂತರಾಳದ ನೆಲದಲ್ಲಿ, ನಮಸ್ಕಾರ ಮಾಡುವ ಭಂಗಿಯಲ್ಲಿ ನರ್ತಕಿ(?)ಯೊಬ್ಬಳ ಉಬ್ಬುಶಿಲ್ಪವಿದ್ದು, ಇದು ಈ ಭಾಗದಲ್ಲಿ ಆಳಿದ್ದ ಕದಂಬರ ಸಂಸ್ಕೃತಿಯ ಪ್ರಭಾವವಾಗಿರಬಹುದು. ಕದಂಬರ ದೇವಾಲಯಗಳಿರುವ ಇಕ್ಕೇರಿ, ಕೆಳದಿ ಮತ್ತು ಕವಲೇದುರ್ಗಗಳಲ್ಲೂ ಇದೇ ರೀತಿ, ಗರ್ಭಗುಡಿಯ ಮೊದಲು ನೆಲದಲ್ಲಿ ಉಬ್ಬುಶಿಲ್ಪ/ ರೇಖಾಚಿತ್ರಗಳಿವೆ. ದೇವಾಲಯದ ಸಮೀಪ ಮೂರು ವೀರಗಲ್ಲುಗಳನ್ನು ಮತ್ತು ಒಂದು ಸತಿಗಲ್ಲನ್ನು ಕಾಣಬಹುದು.


ಸುಮಾರು ೩ ಅಡಿ ಎತ್ತರದ ಪಾಣಿಪೀಠದ ಮೇಲಿರುವ ಶಿವಲಿಂಗ ನಯವಾಗಿದ್ದು ಸುಂದರವಾಗಿದೆ. ದೇವಾಲಯದ ಸಮೀಪವೇ ಅಗಾಧ ಆಲದಮರವೊಂದಿದ್ದು ಅದರ ಬುಡದಲ್ಲಿ ಲಿಂಗವೊಂದನ್ನು ಪ್ರತಿಷ್ಠಾಪಿಸಲಾಗಿದೆ. ಜೊತೆಗೊಂದು ನಂದಿಯೂ ಇದೆ. ವರ್ಷಕ್ಕೆರಡು ಸಲ ಜಾತ್ರೆ ನಡೆಯುವ ರಾಮಲಿಂಗೇಶ್ವರ ದೇವರು ತುಂಬಾ ಪವರ್‌ಫುಲ್ ದೇವರೆಂದು ಹಳ್ಳಿಗರ ನಂಬಿಕೆ. ಊರಲ್ಲಿ ಕಳ್ಳತನವಾದಾಗ, ರಾಮಲಿಂಗೇಶ್ವರನಲ್ಲಿ ಕೇಳಿಕೊಂಡಾಗ ಒಂದೆರಡು ವಾರಗಳೊಳಗೆ ಕಳ್ಳರು ಮಾಲು ಸಮೇತ ಸಿಕ್ಕಿಬಿದ್ದುದನ್ನು ಹಳ್ಳಿಗರು ಭಯಭಕ್ತಿಯಿಂದ ವಿವರಿಸುತ್ತಾರೆ. ಹಾಗಾಗಿ ಈಗ ಇಲ್ಲಿ ಕಳ್ಳತನವೇ ಇಲ್ಲವಂತೆ!! ಆದರೂ ’ನಿಧಿಶೋಧಕರು’ ಎಂಬ ವಿಲಕ್ಷಣ ಸ್ವಭಾವದ ಕಳ್ಳರ ಹಾವಳಿ ವಿಪರೀತವಾಗಿ ಇದೆ. ಸುತ್ತಲಿನ ಕಾಡಿನಲ್ಲಿ ಏನಾದರೊಂದು ಅಗೆತ ನಡೆಯುತ್ತಾ ಇರುತ್ತದಂತೆ. ಸಾಬಿಗಳಿರುವ ಒಂದೆರಡು ಹಳ್ಳಿಗಳು ಪಕ್ಕದಲ್ಲಿರುವುದರಿಂದ ಆ ಕಡೆಗೇ ಸಂಶಯದ ದೃಷ್ಟಿಯಿಂದ ನೋಡುತ್ತಾರೆ ಬೆಡಸಗಾವಿಯ ಹಳ್ಳಿಗರು.


ಪರೇಶ್ವರ ಗುಡಿಯಂತೂ ಕಪ್ಪು ಕಲ್ಲುಗಳನ್ನು ಒಂದೆಡೆ ಪೇರಿಸಿಟ್ಟಿರುವಂತೆ ಕಾಣುತ್ತದೆ. ಪರೇಶ್ವರನ ಸನ್ನಿಧಾನ ಸಂಪೂರ್ಣವಾಗಿ ಜೀರ್ಣಾವಸ್ಥೆ ತಲುಪಿದೆ. ದೇವಾಲಯದೊಳಗೆ ಸಪ್ತಮಾತೃಕೆಯರ ಮೂರ್ತಿಯಿದೆ ಮತ್ತು ಅಪರೂಪದ ಕಾರ್ತಿಕೇಯನ ಮೂರ್ತಿಯೂ ಇದೆ. ಉಳಿದ ೩ ಮೂರ್ತಿಗಳನ್ನು ವೀರಭದ್ರ, ಮಹಿಷಮರ್ಧಿನಿ ಮತ್ತು ವಿಷ್ಣುವಿನದೆಂದು ಹೇಳಲಾಗುತ್ತದೆ. ಮೂರು ತಲೆಗಳುಳ್ಳ ನಾಗನ ಕೆತ್ತನೆಯೂ ಇದೆ.


ಪರೇಶ್ವರ ಗುಡಿಯು ನಾಲ್ಕು ಕಂಬಗಳ ನವರಂಗ ಮತ್ತು ಗರ್ಭಗುಡಿಯನ್ನು ಹೊಂದಿದೆ. ನವರಂಗದಲ್ಲಿ ನಂದಿ ಮತ್ತು ಗರ್ಭಗುಡಿಯಲ್ಲಿ ಶಿವಲಿಂಗವಿದೆ. ಆಶ್ಚರ್ಯವೆಂಬಂತೆ ದೇವಾಲಯ ಕುಸಿಯುತ್ತಿದ್ದರೂ ನವರಂಗದ ನಾಲ್ಕೂ ಕಂಬಗಳು ಸುಂದರವಾಗಿದ್ದವು. ಪರೇಶ್ವರನಿಗೆ ವರ್ಷಕ್ಕೆರಡು ಬಾರಿ ಜಾತ್ರೆ ನಡೆಯುತ್ತದೆ ಮತ್ತು ಈ ಸಂದರ್ಭದಲ್ಲಿ ಅನ್ನಸಂತರ್ಪಣೆಯೂ ನಡೆಯುತ್ತದೆ. ಈ ಅನ್ನ ಸಂತರ್ಪಣೆಯ ಮುಖ್ಯ ಉದ್ದೇಶ ಪರ ಊರಿನಿಂದ ಬರುವವರಿಗೆ ಊಟದ ವ್ಯವಸ್ಥೆ ಮತ್ತು ಪ್ರಸಾದ ಸಲ್ಲಿಸುವ ಸಲುವಾಗಿ. ಪರಊರಿನವರ ಸೇವೆಗಾಗಿಯೇ ಈ ಅನ್ನ ಸಂತರ್ಪಣೆ. ಹಾಗಾಗಿ ಪರದೇಶದ ಗುಡಿ ಎಂದೂ ಈ ದೇವಾಲಯವನ್ನು ಕರೆಯಲಾಗುತ್ತದೆ. ಅದಕ್ಕೇ ಪರೇಶ್ವರ ಎಂಬ ಹೆಸರು.


ಪರೇಶ್ವರ ದೇವಾಲಯದಿಂದ ಸ್ವಲ್ಪ ಮುಂದೆ ದಿಬ್ಬವೊಂದರ ಮೇಲೆ ವೀರಭದ್ರ ದೇವರ ಗುಡಿಯಿದೆ. ಮುಖಮಂಟಪ ಮತ್ತು ಗರ್ಭಗುಡಿಯುಳ್ಳ ಸಣ್ಣ ದೇವಾಲಯವಿದು. ಈ ದೇವಾಲಯದ ಪ್ರಮುಖ ಆಕರ್ಷಣೆ ಸುಮಾರು ೫ ಅಡಿ ಎತ್ತರವಿರುವ ವೀರಭದ್ರನ ವಿಗ್ರಹ.


ರಸ್ತೆಯಲ್ಲೇ ಸ್ವಲ್ಪ ಮುಂದೆ ಸಾಗಿದರೆ ಜೀರ್ಣಾವಸ್ಥೆಯಲ್ಲಿರುವ ಇನ್ನೊಂದು ದೇವಾಲಯ. ಇದನ್ನು ಗುಗ್ಗಳೇಶ್ವರ ದೇವಾಲಯವೆಂದು ಕರೆಯುತ್ತಾರೆ. ಲಿಂಗಾಯತರು ಗುಗ್ಗಳ ಅರ್ಪಿಸುವ ಪದ್ಧತಿಗೆ ಈ ದೇವಾಲಯ ಮೀಸಲಾಗಿರುವುದರಿಂದ ದೇವರಿಗೆ ಗುಗ್ಗಳೇಶ್ವರ ಎಂದು ಹೆಸರು.


ಈ ದೇವಾಲಯ ನವರಂಗ, ಅಂತರಾಳ ಮತ್ತು ಗರ್ಭಗೃಹಗಳನ್ನು ಹೊಂದಿದೆ. ನಂದಿ ನವರಂಗದ ಮೊದಲೇ ಇದೆ. ನವರಂಗದ ನಾಲ್ಕು ಕಂಬಗಳು ಸಾಧಾರಣವಾಗಿವೆ. ಅಂತರಾಳದ ದ್ವಾರಕ್ಕೆ ಜಾಲಂಧ್ರಗಳಿವೆ ಮತ್ತು ಶಿವಲಿಂಗ ಸಣ್ಣದಾಗಿದೆ. ಸಪ್ತಮಾತೃಕೆಯರ ಕೆತ್ತನೆ ಫಲಕ ಇಲ್ಲಿದೆ. ಸಪ್ತಮಾತೃಕೆಯ ಜೊತೆಗೆ ಗಣೇಶನನ್ನೂ ಹಾಗೂ ಶಿವನನ್ನೂ ತೋರಿಸಲಾಗಿದೆ. ಫಲಕದ ತಳಭಾಗದಲ್ಲಿ ಎಲ್ಲರ ವಾಹನಗಳನ್ನು ತೋರಿಸಲಾಗಿದೆ. ಗುಗ್ಗಳೇಶ್ವರ ದೇವಾಲಯದ ಗೋಪುರ ಎಂದರೆ ಏಳೆಂಟು ಕಲ್ಲುಗಳನ್ನು ಲಗೋರಿ ಆಟದಲ್ಲಿ ಇಟ್ಟಂತೆ ಒಂದರ ಮೇಲೋಂದು ಇಟ್ಟಿರುವುದು.

ಮಾಹಿತಿ: ಜಿ.ಎಂ. ಬೊಮ್ನಳ್ಳಿ

3 ಕಾಮೆಂಟ್‌ಗಳು:

Srinath ಹೇಳಿದರು...

Nice pics. I always enjoy your blogs since 2012. I was little worried about when you posted"Astangaa " nice to see you again. Thanks for sharing. Keep writing

ರಾಜೇಶ್ ನಾಯ್ಕ ಹೇಳಿದರು...

ಶ್ರೀನಾಥ್,
ಧನ್ಯವಾದ.

sathya ಹೇಳಿದರು...

Nice post!
VOIP Services in India
VOIP Providers
IVR Call Center Software