ಶುಕ್ರವಾರ, ಜನವರಿ 15, 2010

ಕೊನೆಯಲ್ಲಿ ಎಡವಿದ ಕರ್ನಾಟಕ - ೨

ಮೊದಲನೇ ಭಾಗ ಇಲ್ಲಿದೆ.

ಈ ಋತುವಿನ (೨೦೦೯-೧೦) ಆರಂಭದಲ್ಲಿ ಕರ್ನಾಟಕ ರಣಜಿ ತಂಡದ ಆಯ್ಕೆಗಾರರು ಕೆಲವು ದಿಟ್ಟ ನಿರ್ಧಾರಗಳನ್ನು ತೆಗೆದುಕೊಂಡರು. ಯಾವುದೇ ಶಿಫಾರಸುಗಳಿಗೆ ಕಿವಿಗೊಡದಿರುವುದು (ಆದರೂ ಅಖಿಲ್ ಬದಲು ಸ್ಟುವರ್ಟ್ ಬಿನ್ನಿ ಮತ್ತು ಉದಿತ್ ಪಟೇಲ್ ಆಯ್ಕೆಗೊಂಡದ್ದು ಆಶ್ಚರ್ಯ), ತಳವಾಗಿ ಬೇರೂರಿದ ಕೆಲವು ಆಟಗಾರರನ್ನು ಕೈಬಿಡುವುದು, ಯುವಕರಿಗೆ ಮನ್ನಣೆ ನೀಡುವುದು, ಹೊಸ ಕೋಚ್ ಮತ್ತು ಸಹಾಯಕ ಕೋಚ್ ನೇಮಿಸುವುದು ಮತ್ತು ರಾಜ್ಯ ತಂಡದ ಚುಕ್ಕಾಣಿಯನ್ನು ರಾಹುಲ್ ದ್ರಾವಿಡ್-ಗೆ ನೀಡುವುದು.

ಅಶೋಕಾನಂದ್, ಸಯ್ಯದ್ ಕಿರ್ಮಾನಿ, ರಘುರಾಮ್ ಭಟ್ ಮತ್ತು ರಂಗರಾವ್ ಅನಂತ್ ಇವರೇ ನಾಲ್ಕು ಆಯ್ಕೆಗಾರರು. ನಾಲ್ವರೂ ಕರ್ನಾಟಕಕ್ಕೆ ಆಡಿ ಅನುಭವವುಳ್ಳವರು. ಕಳೆದ ಏಳೆಂಟು ವರ್ಷಗಳಲ್ಲಿ ರಾಜ್ಯ ತಂಡದಲ್ಲಿ ಹೆಚ್ಚೇನು ಬದಲಾವಣೆಯಿರಲಿಲ್ಲ. ಒಂದೆರಡು ಆಟಗಾರರನ್ನು ಹೊರತುಪಡಿಸಿದರೆ ಉಳಿದವರೆಲ್ಲಾ ಮೊದಲಿದ್ದವರೇ. ಹೀಗಾಗಿ ಕರ್ನಾಟಕ ಆರಕ್ಕೇರದೆ ಮೂರಕ್ಕಿಳಿಯದೇ ಅಲ್ಲೇ ನಡುವಿನಲ್ಲಿ ತೂಗುಯ್ಯಾಲೆ ಆಡುತ್ತಾ ಉಳಿದುಬಿಟ್ಟಿತು. ಇದನ್ನು ಬದಲಾಯಿಸಲು ಸ್ವಲ್ಪ ಹೆಚ್ಚೇ ರಿಸ್ಕ್ ತಗೊಂಡ ಆಯ್ಕೆಗಾರರು ಕೆಲವರನ್ನು ಕೈಬಿಟ್ಟು ಯುವಕರಿಂದಲೇ ತಂಡವನ್ನು ತುಂಬಿಬಿಟ್ಟರು. ಇದೊಂದು ಮಾಸ್ಟರ್ ಸ್ಟ್ರೋಕ್ ನಿರ್ಣಯವಾಗುತ್ತೆಂದು ಯಾರಿಗೂ ಅರಿವಿರಲಿಲ್ಲ. ಆದರೆ ಆಯ್ಕೆಗಾರರು ರಿಸ್ಕ್ ತಗೊಂಡದ್ದನ್ನು ಮೆಚ್ಚಬೇಕು. ಏನಾದರೂ ಅದ್ಭುತ ಘಟಿಸಬೆಕಾದರೆ ಅಷ್ಟೇ ಮಹತ್ವದ ನಿರ್ಣಯ ಆ ಅದ್ಭುತದ ಹಿಂದೆ ಇರುತ್ತೆ. ಕರ್ನಾಟಕ ಫೈನಲ್ ತನಕ ಧಾವಿಸಿ ಬಂದುದರ ಹಿಂದೆ ಇರುವ ಪ್ರಮುಖ ಕಾರಣವೂ ಇದೇ - ಯುವಕರಿಗೆ ಮನ್ನಣೆ.

ತಿಲಕ್ ನಾಯ್ಡುವನ್ನು ಕೈಬಿಡಬೆಕಾಗಿದ್ದು ಸಹಜವೇ. ಆದರೂ ಕೈ ಬಿಟ್ಟ ರೀತಿ ಸರಿಯಾಗಿರಲಿಲ್ಲ. ಕಳೆದ ೬ ವರ್ಷಗಳಿಂದ ರಾಜ್ಯಕ್ಕಾಗಿ ಆಡುತ್ತಿದ್ದ ತಿಲಕ್ ಗೆ ಒಂದು ಕರೆ ಮಾಡಿ ಆಯ್ಕೆಗಾರರು ವಿಷಯ ತಿಳಿಸಬಹುದಿತ್ತು. ಋತುವಿನ ಮೊದಲೆರಡು ಪಂದ್ಯಗಳಲ್ಲಿ ಆಡಿದ್ದ ತಿಲಕ್, ೩ನೇ ಪಂದ್ಯದಿಂದ ತಂಡದಿಂದ ಹೊರಗೆ. ಆದರೆ ಅದಕ್ಕೊಂದು ರೀತಿ ನೀತಿ ಇರುತ್ತಲ್ಲವೇ? ರಾಜ್ಯಕ್ಕಾಗಿ ಆಡಿದವರಿಗೆ ಆಯ್ಕೆಗಾರರೇ ಗೌರವ ನೀಡದಿದ್ದರೆ ಇನ್ನು ಯಾರು ನೀಡಿಯಾರು? ಕೊನೆಗೆ ಕೋಚ್ ಸನತ್ ಕುಮಾರ್, ನಾಯ್ಡುಗೆ ವಿಷಯ ತಿಳಿಸಬೇಕಾಯಿತು.

ಲೀಗ್ ಹಂತದ ಕೊನೆಯ ಕೆಲವು ಪಂದ್ಯಗಳಲ್ಲಿ ಅಖಿಲ್ ಬದಲು ಸ್ಟುವರ್ಟ್ ಬಿನ್ನಿಯನ್ನು ಆಡಿಸಲಾಯಿತು. ಇದನ್ನು ಮಾತ್ರ ನನಗೆ ಈಗಲೂ ನಂಬಲಾಗುತ್ತಿಲ್ಲ. ಯಾವುದೇ ಸಮಯದಲ್ಲಿ ಕಣ್ಣುಮುಚ್ಚಿ ಅಖಿಲ್-ನನ್ನು ಕರ್ನಾಟಕ ತಂಡಕ್ಕೆ ಆಯ್ಕೆ ಮಾಡಬಹುದು. ಹಾಗೇನೆ ಕಣ್ಣು ಮುಚ್ಚಿ ಬಿನ್ನಿಯನ್ನು ಹೊರಗಿಡಬಹುದು. ಈ ಋತುವಿನಲ್ಲಿ ಹಲವು ಉತ್ತಮ ಆಯ್ಕೆಗಳನ್ನು ಮಾಡಿದ ಆಯ್ಕೆಗಾರರು ಇಲ್ಲೇಕೆ ಎಡವಿದರು ಎಂದು ತಿಳಿಯದು. ಯಾವುದೋ ಕಾಣದ ಕೈ ಕೆಲಸ ಮಾಡಿದೆ. ಬಿನ್ನಿ ಎಂದಿಗೂ ಪಂದ್ಯದ ಸನ್ನಿವೇಶಕ್ಕೆ ತಕ್ಕ ಹಾಗೆ ಆಡಿದವನೇ ಅಲ್ಲ. ಆತನ ಆಟ ಬರೀ ಹೊಡಿ ಬಡಿ. ೨೦-೨೦ಗೆ ಆತ ಸೂಕ್ತ. ಆದರೆ ರಣಜಿ ಪಂದ್ಯಗಳಿಗೆ ಆತನ ಆಟ ಹೇಳಿ ಮಾಡಿಸಿದ್ದೇ ಅಲ್ಲ. ಅಖಿಲ್ ಕೈ ಬಿಟ್ಟದ್ದು ಮಾತ್ರ ಕರ್ನಾಟಕಕ್ಕೆ ದುಬಾರಿಯೇ ಆಯಿತು. ಪ್ರಖ್ಯಾತ ಅಂಕಣಕಾರ ರಾಮಚಂದ್ರ ಗುಹಾ ಕೂಡಾ ಈ ವಿಷಯದ ಬಗ್ಗೆ ಇಲ್ಲಿ ಬರೆದಿದ್ದಾರೆ.

ತಿಲಕ್ ನಾಯ್ಡು, ಅಯ್ಯಪ್ಪ, ರಘು ಇವರನ್ನೆಲ್ಲಾ ಬದಿಗಿಟ್ಟು ಮಿಥುನ್, ಗಣೇಶ್ ಸತೀಶ್, ಮನೀಷ್ ಪಾಂಡೆ, ಗೌತಮ್, ಅಮಿತ್ ವರ್ಮ ಇವರನ್ನು ಆಡಿಸುವ ನಿರ್ಧಾರ ತಗೊಂಡದ್ದು ಯಾವ ಧೈರ್ಯದಲ್ಲೋ ಏನೋ. ಆದರೆ ಆಯ್ಕೆಗಾರರು ತಮ್ಮ ಮೂಲಗಳಿಂದ ಸರಿಯಾದ ಮಾಹಿತಿ ಪಡೆದುಕೊಂಡೇ ಯುವ ಪ್ರತಿಭಾವಂತ ಆಟಗಾರರಿಗೆ ಮನ್ನಣೆ ನೀಡಿದ್ದು. ಹೆಚ್ಚಿನ ಆಟಗಾರರು ತಮ್ಮ ಮೊದಲ ಫುಲ್ ಸೀಸನ್ ಆಡುತ್ತಿದ್ದರಿಂದ ಒಬ್ಬ ಸಮರ್ಥ ನಾಯಕನ ಅವಶ್ಯವಿತ್ತು. ನಾಯಕ ಅನುಭವಿಯಾಗಿದ್ದು, ಸಹ ಆಟಗಾರರ ಗೌರವ ಪಡೆಯುವ ವ್ಯಕ್ತಿತ್ವ ಉಳ್ಳವನಾಗಿದ್ದು, ಉತ್ತಮ ಮಾರ್ಗದರ್ಶನ ನೀಡುವವನಾಗಿರಬೇಕು. ರಾಹುಲ್ ದ್ರಾವಿಡ್ ಗೆ ಕರೆ ಹೋದದ್ದೇ ಆಗ. ತಂಡದ ಆಯ್ಕೆ ವಿಷಯದಲ್ಲಿ ತನ್ನ ಮಾತಿಗೆ ಮಹತ್ವವಿರಬೇಕು ಎಂಬ ಒಂದೇ ಷರತ್ತಿನೊಂದಿಗೆ ದ್ರಾವಿಡ್ ನಾಯಕತ್ವ ಒಪ್ಪಿಕೊಂಡರು. ಮೊದಲ ಸೀಸನ್-ನಲ್ಲಿ ಯುವಕರಿಗೆ ಉತ್ತಮ ಮಾರ್ಗದರ್ಶನ ದ್ರಾವಿಡ್-ನಂತಹ ಮಹಾನ್ ಆಟಗಾರನಿಂದ ಸಿಕ್ಕರೆ ಮುಂದಿನ ಋತುಗಳಲ್ಲಿ ಕರ್ನಾಟಕ ಉತ್ತಮ ತಂಡವಾಗಬಹುದು ಎಂಬ ದೂರಾಲೋಚನೆಯಿಂದ ಆಯ್ಕೆಗಾರರು ಯುವ ತಂಡವನ್ನು ದ್ರಾವಿಡ್ ಕೈಗಿತ್ತರು. ಆದರೆ ತಂಡ ಫೈನಲ್-ವರೆಗೆ ದಾಪುಗಾಲಿಟ್ಟು ಬರಬಹುದೆಂದು ಯಾರೂ ನಿರೀಕ್ಷಿಸಿರಲಿಲ್ಲ.

ದ್ರಾವಿಡ್-ನೊಂದಿಗೆ ಆಡುವುದೇ ಕ್ರಿಕೆಟ್ ಎಜುಕೇಶನ್. ಪ್ರತಿ ಆಟಗಾರನಿಗೂ ಆತನ ಸಾಮರ್ಥ್ಯದ ಪ್ರಕಾರ ಆಡುವಂತೆ ಪ್ರೇರೇಪಿಸಿದ ದ್ರಾವಿಡ್ ತಾನೂ ಉತ್ತಮವಾಗಿ ಆಡುತ್ತಾ ಬಂಡೆಯಂತೆ ರಾಜ್ಯದ ಮತ್ತು ರಾಜ್ಯದ ಯುವ ಆಟಗಾರರ ರಕ್ಷಣೆಗೆ ನಿಂತುಬಿಟ್ಟರು. ದ್ರಾವಿಡ್ ಫೈನಲ್ ಆಡಿದ್ದಿದ್ದರೆ ರಾಜ್ಯದ ಯುವ ಆಟಗಾರರು ನರ್ವಸ್ ಆಗುತ್ತಿರಲಿಲ್ಲ. ಮೊದಲ ಫುಲ್ ಸೀಸನ್ ಆಡುವ ಯುವಕರು ಫೈನಲ್ ಆಡುವಾಗ ತಮ್ಮ ನಾಯಕನ ಸಪೋರ್ಟ್-ಗಾಗಿ ನೋಡುತ್ತಿರುತ್ತಾರೆ. ಆತನ ಮಾರ್ಗದರ್ಶನಕ್ಕಾಗಿ ಹಾತೊರೆಯಿತ್ತಿರುತ್ತಾರೆ. ಆದರೆ ಫೈನಲ್ ಪಂದ್ಯದಲ್ಲಿ ಕರ್ನಾಟಕದ ನಾಯಕನಾದವನಿಗೇ ಮಾರ್ಗದರ್ಶನದ ಅಗತ್ಯವಿದ್ದಾಗ ಇನ್ನು ಆತ ಸಹ ಆಟಗಾರರಿಗೆ ಏನು ಮಾರ್ಗದರ್ಶನ ನೀಡಬಲ್ಲ!?

ಕರ್ನಾಟಕದ ಕೋಚ್ ಆಗಿ ನರಸಿಂಹ ಸನತ್ ಕುಮಾರ್ ಐತಾಳ್ ಮತ್ತು ಸಹಾಯಕ ಕೋಚ್ ಆಗಿ ಸೋಮಶೇಖರ್ ಶಿರಗುಪ್ಪಿ ಇವರ ನೇಮಕವೂ ಅಚ್ಚರಿ ಮೂಡಿಸಿತು. ಮಂಗಳೂರಿನ ಸನತ್ ಕುಮಾರ್ ಒಬ್ಬ ಮಾಜಿ ಮೀಡಿಯಮ್ ಪೇಸರ್. ಕರ್ನಾಟಕಕ್ಕೆ ೧೧ ಪಂದ್ಯಗಳನ್ನು ೧೯೮೬ ಮತ್ತು ೧೯೮೯ ನಡುವೆ ಆಡಿದ್ದರು. ಕಿರ್ಮಾನಿ, ಗುಂಡಪ್ಪ ವಿಶ್ವನಾಥ್, ಸದಾನಂದ್ ವಿಶ್ವನಾಥ್, ರಘುರಾಮ್ ಭಟ್, ಬೃಜೇಶ್ ಪಟೇಲ್, ಕಾರ್ತಿಕ್ ಜೆಶ್ವಂತ್, ಕಾರ್ಲ್ಟನ್ ಸಲ್ಡಾನಾ ಮತ್ತು ರೋಜರ್ ಬಿನ್ನಿ ಇಂತಹ ಘಟಾನುಘಟಿಗಳ ಜೊತೆಯಲ್ಲೇ ಕರ್ನಾಟಕಕ್ಕೆ ಸನತ್ ಕುಮಾರ್ ಆಡಿದ್ದಾರೆ. ಈಗ ಆಯ್ಕೆಗಾರರಗಿರುವ ಆರ್.ಅನಂತ್ ಮತ್ತು ಉತ್ತಮ ಅಂಪಾಯರ್ ಆಗಿ ಹೆಸರು ಮಾಡುತ್ತಿರುವ ಶವೀರ್ ತಾರಾಪೂರ್ ಜೊತೆಗೂ ಸನತ್ ಕರ್ನಾಟಕಕ್ಕೆ ಆಡಿದ್ದಾರೆ. ೧೯೮೬-೮೭ ಋತುವಿನಲ್ಲಿ ಗೋವಾ ವಿರುದ್ಧ ಪಣಜಿಯಲ್ಲಿ ತನ್ನ ಚೊಚ್ಚಲ ರಣಜಿ ಪಂದ್ಯವನ್ನು ಸನತ್ ಆಡಿದರು. ಒಟ್ಟು ೧೧ ಪಂದ್ಯಗಳಲ್ಲಿ ೨೮.೦೮ರ ಸರಾಸರಿಯಂತೆ ೨೩ ವಿಕೆಟ್ ಗಳಿಸಿದರು. ಗೋವಾ ವಿರುದ್ಧ ಗುಲ್ಬರ್ಗಾದಲ್ಲಿ ೮೧ ರನ್ನುಗಳಿಗೆ ೭ ವಿಕೆಟ್ ಗಳಿಸಿದ್ದು ಅವರ ಉತ್ತಮ ಸಾಧನೆ. ಈ ಪಂದ್ಯದಲ್ಲಿ ಸನತ್ ಒಟ್ಟು ೧೧ ವಿಕೆಟ್ ಗಳಿಸಿದ್ದರು. ಕೋಚ್ ಆಗಿ ಜೂನಿಯರ್ ಲೆವೆಲ್-ನಿಂದಲೂ ಸನತ್ ಉತ್ತಮ ಹೆಸರು ಗಳಿಸಿದ್ದಾರೆ. ನಂತರ ಅಸ್ಸಾಮ್ ರಣಜಿ ತಂಡವನ್ನು ೨ ಋತುಗಳಲ್ಲಿ ಕೋಚ್ ಮಾಡಿ ಪ್ಲೇಟ್ ಲೀಗ್-ನ ಸೆಮಿ ಫೈನಲ್ ತನಕ ಕೊಂಡೊಯ್ದದ್ದು ಸನತ್ ಸಾಧನೆ. ಈಗ ರಾಜ್ಯ ತಂಡದಲ್ಲಿ ಆಡುತ್ತಿರುವ ಎಲ್ಲಾ ಯುವ ಆಟಗಾರರನ್ನು ಜೂನಿಯರ್ ಲೆವಲ್ಲಿನಲ್ಲಿ ಕೋಚ್ ಮಾಡಿದ್ದೇ ಸನತ್. ಹಾಗಾಗಿ ಆಟಗಾರರೊಂದಿಗೆ ಉತ್ತಮ ಸಂಬಂಧ ಮತ್ತು ಹೊಂದಾಣಿಕೆ ಇದೆ. ಆಟಗಾರನಾಗಿ ಸನತ್ ಹೆಚ್ಚೇನು ಸಾಧಿಸದಿದ್ದರೂ ಕೋಚ್ ಆಗಿ ಉತ್ತಮ ಸಾಧನೆ ಮಾಡಿದ್ದಾರೆ. ಈ ಋತುವಿನಲ್ಲಿ ಕರ್ನಾಟಕದ ಸಾಧನೆಯ ಬಹು ಪಾಲು ಶ್ರೇಯ ಸನತ್ ಕುಮಾರ್-ಗೆ ಸಲ್ಲಬೇಕು.

೧೯೯೬. ನಾನು ಬೆಳಗಾವಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದೆ. ಗೆಳೆಯ ಸುಪ್ರೀತ್ ವಾಸವಾಗಿದ್ದ ಮನೆಯಲ್ಲಿ ಸಂಜೆ ಗೆಳೆಯರೆಲ್ಲಾ ಒಟ್ಟುಗೂಡುತ್ತಿದ್ದರು. ಹಾಗಾಗಿ ಕೆಲವು ಸಂಜೆಗಳಲ್ಲಿ ನಾನೂ ಅಲ್ಲಿಗೆ ತೆರಳುತ್ತಿದ್ದೆ. ಅದೊಂದು ದಿನ ನಾನು ಒಳಗೆ ತೆರಳುತ್ತಿದ್ದಂತೆ ಕುಳ್ಳನೆಯ ವ್ಯಕ್ತಿಯೊಬ್ಬ ಹೊರನಡೆದ. ಪರಿಚಯವಿಲ್ಲವಾಗಿದ್ದರಿಂದ ಮಾತು ನಡೆಯಲಿಲ್ಲ. ಒಬ್ಬರಿಗೊಬ್ಬರು ಸ್ಮೈಲ್ ಕೊಟ್ಟೆವು. ಆತ ಬೈಕನ್ನೇರಿ ತೆರಳಿದರೆ ನಾನು ಮನೆಯೊಳಗೆ ಕಾಲಿಟ್ಟೆ. ಒಳಗೆ ಹೋದೊಡನೆ ಸುಪ್ರೀತ್, ’ಅರೆ ರಾಜ, ಸೋಮ್ಯಾ ಈಗಷ್ಟೇ ಹೋದ್ನಲ್ಲೇ’ ಎಂದ. ಆ ಕುಳ್ಳನೆಯ ವ್ಯಕ್ತಿ ಆಗ ಕರ್ನಾಟಕ ರಣಜಿ ತಂಡದ ವಿಕೆಟ್ ಕೀಪರ್ ಆಗಿದ್ದ ಸೋಮಶೇಖರ್ ಶಿರಗುಪ್ಪಿ. ಈಗ ಶಿರಗುಪ್ಪಿ ರಾಜ್ಯ ತಂಡದ ಅಸಿಸ್ಟಂಟ್ ಕೋಚ್. ೨೧ನೇ ವಯಸ್ಸಿನಲ್ಲೇ ರಾಜ್ಯ ತಂಡಕ್ಕೆ ಆಯ್ಕೆಯಾದ ಧಾರವಾಡದ ಸೋಮಶೇಖರ್ ಶಿರಗುಪ್ಪಿ ತನ್ನ ಚೊಚ್ಚಲ ರಣಜಿ ಪಂದ್ಯವನ್ನು ೧೯೯೪-೯೫ ಋತುವಿನಲ್ಲಿ ಹೈದರಾಬಾದ್ ವಿರುದ್ಧ ಬಿಜಾಪುರದಲ್ಲಿ ಆಡಿದರು. ಮೊದಲ ೨ ಋತುಗಳಲ್ಲಿ ಶಿರಗುಪ್ಪಿ ಆಡಿದ್ದು ೨-೩ ಪಂದ್ಯಗಳಲ್ಲಿ ಅಷ್ಟೇ. ಆದರೆ ೧೯೯೬-೯೭ ಋತುವಿನಿಂದ ೨೦೦೩-೦೪ ಋತುವಿನವರೆಗೆ ಶಿರಗುಪ್ಪಿ ರಾಜ್ಯದ ನಂಬರ್ ಒನ್ ಕೀಪರ್ ಆಗಿ ಒಟ್ಟು ೪೧ ಪಂದ್ಯಗಳಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದರು. ವಿಕೆಟ್ ಹಿಂದೆ ಪಡೆದ ಬಲಿಗಳ ಸಂಖ್ಯೆ ೧೧೧. ವೈಯುಕ್ತಿಕ ಅತ್ಯಧಿಕ ಸ್ಕೋರ್ ೧೨೫. ಗಳಿಸಿದ್ದು ಒಂದೇ ಶತಕ. ಆದರೆ ಆ ಪಂದ್ಯದಲ್ಲಿ ಕರ್ನಾಟಕ ಅತಿ ಕಡಿಮೆ ರನ್ನುಗಳಿಗೆ ೫ ವಿಕೆಟ್ ಕಳಕೊಂಡು ಸಂಕಷ್ಟದಲ್ಲಿದ್ದಾಗ ಆಡಲು ಬಂದ ಶಿರಗುಪ್ಪಿ, ರಾಹುಲ್ ದ್ರಾವಿಡ್ ಜೊತೆ ಸೇರಿ ಆರನೇ ವಿಕೆಟ್ಟಿಗೆ ೨೦೦ಕ್ಕೂ ಅಧಿಕ ರನ್ನುಗಳ ಜೊತೆಯಾಟ ನಡೆಸಿ ಕರ್ನಾಟಕವನ್ನು ಪಾರು ಮಾಡಿದರು. ಶಿರಗುಪ್ಪಿ ಒಬ್ಬ ಅತ್ಯುತ್ತಮ ವಿಕೆಟ್ ಕೀಪರ್ ಆದರೆ ಬ್ಯಾಟಿಂಗ್ ಮಾತ್ರ ಸಾಧಾರಣವಾಗಿತ್ತು. ರಾಜ್ಯ ತಂಡದಿಂದ ಹೊರಬಿದ್ದ ಬಳಿಕ ಕೋಚಿಂಗ್ ಪರೀಕ್ಷೆ ಪಾಸು ಮಾಡಿ ಸಣ್ಣ ಪುಟ್ಟ ಕೋಚಿಂಗ್ ಅಸೈನ್-ಮೆಂಟುಗಳನ್ನು ಚೊಕ್ಕವಾಗಿ ನಿರ್ವಹಿಸಿ ಜೂನಿಯರ್ ಮಟ್ಟದಲ್ಲಿ ಉತ್ತಮ ನಿರ್ವಹಣೆ ತೋರಿದರು. ರಾಜ್ಯ ತಂಡದಲ್ಲಿರುವ ಎಲ್ಲಾ ಯುವ ಆಟಗಾರರನ್ನೂ ಚೆನ್ನಾಗಿ ಬಲ್ಲ ಶಿರಗುಪ್ಪಿ ಬೆಂಗಳೂರು ಲೀಗಿನಲ್ಲಿ ಆಡುತ್ತಾ ಕೋಚಿಂಗ್ ಮಾಡುತ್ತಾ ಇದ್ದರು. ಹಿರಿಯ ಕೋಚ್ ಒಬ್ಬನಿಗೆ ಯುವ, ಸಮರ್ಥ ಮತ್ತು ಆಟಗಾರರನ್ನು ಬಲ್ಲ ಒಬ್ಬ ಸಹಾಯಕ ಕೋಚ್ ಬೇಕಿದ್ದಾಗ ಆಯ್ಕೆಯಾದದ್ದು ಶಿರಗುಪ್ಪಿ. ತೆರೆಮರೆಯಲ್ಲೇ ಉಳಿದು ತನ್ನ ಜವಾಬ್ದಾರಿಯನ್ನು ಶಿರಗುಪ್ಪಿ ಚೆನ್ನಾಗಿ ನಿರ್ವಹಿಸಿದ್ದಾರೆ.

ತಂಡದ ಮ್ಯಾನೇಜರ್ ಆಗಿ ರಂಗರಾವ್ ಅನಂತ್ (ಆಯ್ಕೆಗಾರನೂ ಹೌದು), ಫಿಸಿಯೋ ಆಗಿ ಮುತ್ತು ಕುಮಾರ್, ಟ್ರೈನರ್ ಆಗಿ ರಮಾಕಾಂತ್ ಮತ್ತು ವಿಡಿಯೋ ಅನಾಲಿಸ್ಟ್ ಆಗಿ ಪ್ರಸನ್ನ ಇವರುಗಳು ಕೂಡಾ ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿ ತಂಡ ಫೈನಲ್ ತಲುಪುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಮಧ್ಯಮ ವೇಗಿ ಶ್ರೀನಾಥ್ ಅರವಿಂದ್ ಲಿಗಾಮೆಂಟ್ ತೊಂದರೆಯಿಂದ ಬಳಲುತ್ತಿದ್ದಾಗ ಅವರನ್ನು ಆಡಲು ಫಿಟ್ ಮಾಡಿದ್ದು ಮುತ್ತು ಕುಮಾರ್. ಸತತವಾಗಿ ಆರೇಳು ಪಂದ್ಯಗಳಲ್ಲಿ ಆಡಿದರೂ ಮತ್ತೊಮ್ಮೆ ಅರವಿಂದ್ ಲಿಗಾಮೆಂಟ್ ತೊಂದರೆಗೆ ಒಳಗಾಗಲಿಲ್ಲ. ಕರ್ನಾಟಕ ಫೈನಲ್ ತಲುಪುವಲ್ಲಿ ಅರವಿಂದ್ ಬೌಲಿಂಗ್ ಕೂಡಾ ಮುಖ್ಯ ಪಾತ್ರ ವಹಿಸಿದ್ದು, ಮುತ್ತು ಕುಮಾರ್ ಕೆಲಸಕ್ಕೆ ಇನ್ನಷ್ಟು ಮಹತ್ವವನ್ನು ನೀಡುತ್ತದೆ.

ಹೆಚ್ಚಾಗಿ ತಂಡ ಉತ್ತಮ ನಿರ್ವಹಣೆ ತೋರಿದರೆ ಎಲ್ಲಾ ಶ್ರೇಯವನ್ನು ಆಟಗಾರರಿಗೆ ನೀಡಲಾಗುತ್ತದೆ. ಆಟಗಾರರಷ್ಟೇ ಕಷ್ಟಪಟ್ಟು ಆದರೆ ತೆರೆಮರೆಯಲ್ಲಿ ಕೆಲಸ ಮಾಡುವ ಕೋಚಿಂಗ್ ಮತ್ತು ಟ್ರೈನಿಂಗ್ ಸ್ಟಾಫನ್ನು ನಾವು ಮರೆಯಬಾರದು. ಕರ್ನಾಟಕದ ಯಶಸ್ಸಿಗೆ ಇವರ ಕೊಡುಗೆಯೂ ಕಡಿಮೆಯೇನಲ್ಲ.

ಯಶಸ್ಸು ಸುಲಭದಲ್ಲಿ ಸಿಗುವುದಿಲ್ಲ. ಫೈನಲ್ ಪಂದ್ಯ ಸೋತ ರಾಜ್ಯ ತಂಡದ ಯುವಕರಿಗೆ ಇದೊಂದು ಉತ್ತಮ ಅನುಭವ. ಹೆಚ್ಚಿನ ಪರಿಶ್ರಮ ಮತ್ತು ಏಕಾಗ್ರತೆ ಬೇಕೇ ಬೇಕು. ಈ ಅನುಭವದಿಂದ ರಾಜ್ಯ ತಂಡಕ್ಕೆ ಮುಂದೆ ಒಳ್ಳೆಯದೇ ಆಗಲಿದೆ. ಈ ವರ್ಷದ ನಿರ್ವಹಣೆಯಿಂದ ಮುಂದಿನ ವರ್ಷ ರಾಜ್ಯ ತಂಡದ ಮೇಲೆ ತುಂಬಾ ನಿರೀಕ್ಷೆ ಇರುತ್ತದೆ. ನಿರೀಕ್ಷೆ ಇದ್ದಾಗ ಚೆನ್ನಾಗಿ ಆಡುವುದು ಕೂಡಾ ಒಂದು ಕಲೆ.

ಫೈನಲ್ ತಲುಪಿದ್ದೇ ದೊಡ್ಡ ಸಾಧನೆ. ಯುವ ಆಟಗಾರರಿಗೆ (ಪ್ರಮುಖವಾಗಿ ಮಣಿ ಅಲಿಯಾಸ್ ಮನೀಷ್ ಪಾಂಡೆ, ಗಣ್ಸಾ ಅಲಿಯಾಸ್ ಗಣೇಶ್ ಸತೀಶ್, ರಂಗನಾಥ್ ವಿನಯ್ ಕುಮಾರ್ ಹಾಗೂ ಅಭಿಮನ್ಯು ಮಿಥುನ್) ಮತ್ತು ಕೋಚಿಂಗ್ ಸ್ಟಾಫಿಗೆ ಮತ್ತೊಮ್ಮೆ ಶುಭಾಶಯಗಳು.

2 ಕಾಮೆಂಟ್‌ಗಳು:

Mahantesh ಹೇಳಿದರು...

nanu koDa a sarti Ranajiyalli Karnataka sadane nodta idde..Koneyalli edaviddu ,aduu 6 rungaLiMda tumbane bejaru mudisuttu....neevu heLiddu neeja, first inings low score+Mum balagoMchigaLa aata+2 tappu nirnayagaLu (Satish +another one of left hander)=Karnataka ranaji kaLedu kolluvaMte ayitu...

Rahul Dravid ge final adalu BCCI anumati niDabekagittu (may be Mumbai lobby)..

rakesh holla ಹೇಳಿದರು...

This time Ranaji Final match was superb. Manish Pande played well...