
ಮಲಪ್ರಭಾ ನದಿ ತಟದಲ್ಲಿರುವ ಸಣ್ಣ ಹಳ್ಳಿ ಅಸೋಗಾ. ಇಲ್ಲೊಂದು ಶಿವನ ದೇವಾಲಯವಿದೆ. ಸುತ್ತಮುತ್ತಲಿನ ಹಳ್ಳಿಗಳ ಜನರಿಗೆ ಇದೊಂದು ಶ್ರೀ ಕ್ಷೇತ್ರ. ದೇವಾಲಯದ ಪ್ರಾಂಗಣ ವಿಶಾಲವಾಗಿದ್ದು ಮರಗಿಡಗಳಿಂದ ಕೂಡಿದೆ ಮತ್ತು ಪ್ರಶಾಂತವಾಗಿದೆ. ವಾರಾಂತ್ಯದಲ್ಲಿ ಇಲ್ಲಿಗೆ ತುಂಬಾ ಜನರು ಬರುತ್ತಾರೆ. ಆಸುಪಾಸಿನ ಊರಿನವರಿಗೆ ಅಸೋಗಾ ಒಂದು ಪಿಕ್ನಿಕ್ ಸ್ಪಾಟ್.


ದೇವಾಲಯದ ಹಿಂದೆ ಒಂದಷ್ಟು ಕೆಳಗಿಳಿದರೆ ಮಲಪ್ರಭಾ ನದಿ. ಕಲ್ಲು ಬಂಡೆಗಳು ಅಲ್ಲಲ್ಲಿ ಹೊರಚಾಚಿ ನಿಂತಿವೆ. ಆದಿತ್ಯವಾರವಾಗಿದ್ದರಿಂದ ವಿಪರೀತ ಜನಸಂತೆ. ವಿಶಾಲವಾದ ಜಾಗವಾಗಿದ್ದರಿಂದ ಜನರೆಲ್ಲಾ ಅಲ್ಲಲ್ಲಿ ಹರಡಿಹೋಗಿದ್ದರು. ಈ ದಂಡೆಯಿಂದ ನದಿಯನ್ನು ದಾಟಿ ಆ ದಂಡೆಯಲ್ಲೂ ಜನರು ಸೇರಿದ್ದರು. ನಾವೂ ಇಲ್ಲಿಯೇ ಮಧ್ಯಾಹ್ನದ ಊಟ ಮುಗಿಸಿದೆವು. ಜನರಿಂದ ತುಂಬಿದ್ದರಿಂದ ನನಗಂತೂ ಈ ಸ್ಥಳ ಸ್ವಲ್ಪನೂ ಇಷ್ಟವಾಗಲಿಲ್ಲ. ಇಲ್ಲಿರುವ ಸಣ್ಣ ದೇವಾಲಯ ಕದಂಬರ ಕಾಲದ್ದು ಎಂದು ಕೇಳಿದ್ದೆ. ಆದರೆ ದೇವಾಲಯದ ಬದಿಯಿಂದಲೇ ನಡೆದುಕೊಂಡು ನದಿಯ ಬಳಿ ತೆರಳಿದರೂ ಹಳೇ ದೇವಾಲಯವನ್ನು ಸುತ್ತುವರೆದಿದ್ದ ಕಾಂಕ್ರೀಟ್ ಆಧುನಿಕತೆಯನ್ನು ಕಂಡು ದೇವಾಲಯವನ್ನು ನೋಡಲು ಮನಸಾಗಲಿಲ್ಲ.

ತಿರುವೊಂದನ್ನು ಪಡೆದ ಕೂಡಲೇ ಮಲಪ್ರಭೆ ಈ ಸ್ಠಳವನ್ನು ಪ್ರವೇಶಿಸುತ್ತಾಳೆ. ಅದುವರೆಗೆ ಪ್ರಶಾಂತವಾಗಿದ್ದ ನದಿಯ ಹರಿವು ಒಮ್ಮೆಲೇ ವೇಗವನ್ನು ಪಡೆದು ಕಲ್ಲುಬಂಡೆಗಳ ನಡುವೆ ನುಸುಳಿ ಹದವಾದ ಇಳಿಜಾರಿನಲ್ಲಿ ರಭಸವಾಗಿ ಹರಿಯುತ್ತಾ ಸುಮಾರು ೭೫ಮೀಟರ್ ಮುಂದೆ ಸಾಗಿದ ಬಳಿಕ ಮತ್ತೆ ಪ್ರಶಾಂತವಾಗುತ್ತದೆ. ನದಿ ರಭಸವಾಗಿ ಹರಿದರೂ ಅಷ್ಟೊಂದು ಆಳವಿಲ್ಲದ ಜಾಗವಾಗಿರುವುದರಿಂದ ಈ ಸ್ಠಳ ಪಿಕ್ನಿಕ್ ಸ್ಠಳವಾಗಿ ಪ್ರಸಿದ್ಧಿ ಪಡೆದಿದೆ.


ಅಮಿತಾಭ್ ಬಚ್ಚನ್ ಮತ್ತು ಜಯಾ ಬಾಧುರಿ ನಟನೆಯ ಅಭಿಮಾನ್ ಚಿತ್ರದ ಹಾಡು ’ನದಿಯಾ ಕಿನಾರೆ’ ಯನ್ನು ಸಂಪೂರ್ಣವಾಗಿ ಇಲ್ಲೇ ಚಿತ್ರೀಕರಿಸಲಾಗಿತ್ತು. ಮುಖ್ಯ ದೇವಸ್ಥಾನದಿಂದ ಸ್ವಲ್ಪ ಕೆಳಗೆ ಇನ್ನೊಂದು ದೇವಾಲಯವನ್ನು ನಿರ್ಮಿಸಿರುವುದು, ಮುಖ್ಯ ದೇವಸ್ಥಾನದ ಸುತ್ತಲೂ ಸ್ವಲ್ಪ ಆಧುನೀಕರಣ ಮತ್ತು ನದಿಯ ಸಮೀಪ ಅಲ್ಲಲ್ಲಿ ಒಂದಷ್ಟು ಗಿಡಗಂಟಿಗಳು ಬೆಳೆದುಕೊಂಡಿರುವುದು ಬಿಟ್ಟರೆ ಈ ಸ್ಠಳ ಆಗ ಚಿತ್ರೀಕರಿಸಿದಂತೆ ಇದೆ.


ಇಲ್ಲೊಂದು ಸೇತುವೆಯನ್ನು ನಿರ್ಮಿಸುವ ಪ್ರಯತ್ನ ಮಾಡಲಾಗಿತ್ತೋ ಅಥವಾ ಇನ್ನೂ ನಿರ್ಮಿಸುತ್ತಾ ಇದ್ದಾರೋ! ಈ ಅರ್ಧಕ್ಕೆ ಕೈಬಿಟ್ಟ ನಿರ್ಮಾಣದ ಅವಶೇಷಗಳು ಮಲಪ್ರಭೆಯ ಹರಿವಿನ ದೃಶ್ಯವನ್ನು ಸ್ವಲ್ಪ ಮಟ್ಟಿಗೆ ಅಂದಗೆಡಿಸುತ್ತವೆ. ನದಿಯಾ ಕಿನಾರೆ ಹಾಡಿನಲ್ಲಿ ಈ ಕಾಂಕ್ರೀಟ್ ಅವಶೇಷಗಳು ಇಲ್ಲದಿರುವುದನ್ನು ಗಮನಿಸಬಹುದು.


ಟೈಮ್ ಪಾಸ್ ಮಾಡುವುದಿದ್ದರೆ ಒಳ್ಳೆಯ ಸ್ಥಳ. ಆ ದಿನ ನಾವು ಭೇಟಿ ನೀಡಿದ ಎಲ್ಲಾ ಸ್ಥಳಗಳ ಪೈಕಿ ನಾನು ಕಡಿಮೆ ಇಷ್ಟಪಟ್ಟದ್ದು ಅಸೋಗಾವನ್ನು. ಆದರೆ ಇತರರು - ಲೀನಾ, ಆಕೆಯ ಇಬ್ಬರು ತಂಗಿಯರು, ಆಕೆಯ ಅಪ್ಪ - ಹೆಚ್ಚು ಇಷ್ಟಪಟ್ಟದ್ದೂ ಅಸೋಗಾವನ್ನು!
12 ಕಾಮೆಂಟ್ಗಳು:
ಪ್ರೀತಿಯ ರಾಜೇಶ್,
ಚೆನಾಗಿದೆ.
ನಿಮ್ಮ ಫೋಟೋಗಳ ಮೂಲಕ ನೋಡಿದರೆ ಇದನ್ನ ಯಾವುದಾದರೂ ವಾರದ(ರಜೆಯಿಲ್ಲದ) ದಿನಗಳಲ್ಲಿ ಹೋಗಿ ನೋಡಿಬರಬೇಕು ಅನ್ನಿಸುತ್ತಿದೆ.
ನದಿ ದಂಡೆ ನಂಗೆ ಅಕ್ಕಿಹೆಬ್ಬಾಳನ್ನು(ಹೇಮಾವತಿ) ನೆನಪಿಸುತ್ತಿದೆ.
ನದಿಯಾಕಿನಾರೆ ಇಲ್ಲಿ ಚಿತ್ರೀಕರಿಸಲ್ಪಟ್ಟಿತು ಎಂಬ ವಿಶೇಷಣ ಈ ಜಾಗವನ್ನ ನೋಡಲೇಬೇಕು ಅನ್ನಿಸುವಂತೆ ಮಾಡಿದೆ.
ಲೀನಾರ ಮಗಳಿಗೆ ಅಸೋಗಾ ಇಷ್ಟ ಆಗಲಿಲ್ಲವಾ :)
ಪ್ರೀತಿಯಿಂದ
ಸಿಂಧು
ಉತ್ತಮ ಮಾಹಿತಿ. ಧನ್ಯವಾದಳು.
ರಾಜೇಶ್,
ಉತ್ತಮ ಫೋಟೋಗಳೊಂದಿಗೆ ಉತ್ತಮ ಮಾಹಿತಿ ಕೂಡಾ
ಚೆನ್ನಾಗಿದೆ..... ಚಿತ್ರ+ಮಾಹಿತಿ ಹೋಗ್ಬೇಕು ಅನಿಸ್ತಿದೆ..!
ಸಿಂಧು,
ಹ್ಹ ಹ್ಹ... ಲೀನಾಳ ಮಗಳಿಗೆ ಪ್ರವಾಸ ಆದರೆ ಆಯಿತು ಅಷ್ಟೆ. ಆಕೆ ಎಂಜಾಯ್ ಮಾಡದೆ ಇರುತ್ತಾಳೋ!
ಸುನಾಥ, ಗುರು, ಈಶ್ವರ್,
ಧನ್ಯವಾದ.
ಹೇಗೆ ಹೋಗೋದು ಅಲ್ಲಿಗೆ?
ಶ್ರೀನಿಧಿ,
ದಾರಿಯ ಬಗ್ಗೆ ಮಾಹಿತಿ ಬ್ಲಾಗಿನಲ್ಲಿ ನಾನು ಎಂದೂ ಹಾಕುವುದಿಲ್ಲ. ಆಸಕ್ತಿಯಿದ್ದವರು ಲೇಖನದಲ್ಲಿರುವ ’ಹಿಂಟ್’ಗಳನ್ನು ಹಿಂಬಾಲಿಸಿ ಸ್ಥಳವನ್ನು ಹುಡುಕಬೇಕು. ಪರಿಸರದ ಬಗ್ಗೆ ಕಾಳಜಿಯಿಲ್ಲದವರ ಕೈಗೆ ಇಂತಹ ಸ್ಥಳಗಳ ಬಗ್ಗೆ ಮಾಹಿತಿ ಸಿಗಬಾರದು ಎಂಬ ಉದ್ದೇಶದಿಂದ ನಾನು ದಾರಿಯ ಬಗ್ಗೆ ಬರೆಯುವುದಿಲ್ಲ. ನಿಮ್ಮಂತಹ ಆಸಕ್ತಿಯಿದ್ದವರಿಗೆ ಮತ್ತು ಕಾಳಜಿಯಿದ್ದವರಿಗೆ ದಾರಿಯ ಬಗ್ಗೆ ಮಾಹಿತಿ ನೀಡುವುದಕ್ಕೆ ನಂದೇನೂ ಅಭ್ಯಂತರವಿಲ್ಲ. ಆದರೆ ಎಲ್ಲರಿಗೂ ಎಲ್ಲಾ ಮಾಹಿತಿ ಸಿಗಬಾರದು ನೋಡಿ. ನೀವೂ ತಿರುಗಾಡಿ ಅಲೆದಾಡಿ ರೂಢಿಯುಳ್ಳವರು. ಲೇಖನದಲ್ಲಿರುವ ಹಿಂಟ್ ಗಳನ್ನು ನೋಡಿದರೆ ಸುಲಭದಲ್ಲಿ ಸ್ಥಳವನ್ನು ಹುಡುಕಿತೆಗೆಯಬಹುದು.
ಕ್ಷಮೆಯಿರಲಿ.
ಇತ್ತೀಚೆಗಷ್ಟೇ ನಿಮ್ಮ ಬ್ಲಾಗ್ 'ಅಲೆಮಾರಿಯ ಅನುಭವಗಳು' ಕಣ್ಣಿಗೆ ಬಿದ್ದಿತ್ತು
ಭಂಡಾರ'ದಿಂದ (archives) ೨೦೦೬ ರಿಂದ ಮೊದಲ್ಗೊಂಡು ಇತ್ತೀಚೆಗಿನ ವರೆಗಿನ ನಿಮ್ಮೆಲ್ಲಾ ಲೇಖನಗಳನ್ನು ಓದಲಾರಂಭಿಸಿದೆ
ಆದರೆ ಯಾವುದೇ ತಾಣ'ದ ಬಗ್ಗೆ ಬರೆಯುವಾಗಲೂ ಅಲ್ಲಿಗೆ ತಲುಪುವ ಮಾರ್ಗ ಸೂಚಿ ನೀಡಿರದಿದ್ದುದು ಮೊದಲಿಗೆ ಒಂದಷ್ಟು ಅಸಮಾಧಾನ ತಂದಿತ್ತು
ನಂತರ ಕಾಮೆಂಟ್ಸ್'ನ ಮೂಲಕ ನಿಮ್ಮ ಉದ್ದೇಶ ತಿಳಿದ ನಂತರವಷ್ಟೇ ನೀವು ಮಾಡಿದ್ದು ಸರಿಯೆನಿಸಿತ್ತು
ಸಾಕಷ್ಟು ರಮಣೀಯ ತಾಣಗಳ ಬಗ್ಗೆ ಪರಿಚಯಿಸಿದ್ದೀರ
ಧನ್ಯವಾದಗಳು
ಬಸವ ರಾಜು ಎಲ್.
ಬಸವರಾಜು,
ಪ್ರೋತ್ಸಾಹಕ್ಕೆ ಧನ್ಯವಾದಗಳು. ನಾಲ್ಕೈದು ಕಡೆ ಟಿಪ್ಪಣಿ ಬರೆದಿದ್ದೀರಿ. ಎಲ್ಲದಕ್ಕೂ ಇಲ್ಲೇ ಧನ್ಯವಾದಗಳು ಎಂದು ಹೇಳುತ್ತಿದ್ದೇನೆ. ಬರ್ತಾ ಇರಿ.
ನೀವು, ಯಾವುದೇ ಜಾಗಕ್ಕೆ ಹೋಗುವ ಬಗ್ಗೆ ತಿಳಿಸಿರುವುದಿಲ್ಲ ... ಇಂತಹ ನಿಮ್ಮ ''ಪರಿಸರದ ಬಗ್ಗೆ ಕಾಳಜಿಯಿಲ್ಲದವರ ಕೈಗೆ ಇಂತಹ ಸ್ಥಳಗಳ ಬಗ್ಗೆ ಮಾಹಿತಿ ಸಿಗಬಾರದು ಎಂಬ ಉದ್ದೇಶದಿಂದ ನಾನು ದಾರಿಯ ಬಗ್ಗೆ ಬರೆಯುವುದಿಲ್ಲ." ಈ ಮಾತು ೧೦೦ ಕ್ಕೆ ೧೦೦ ಸತ್ಯ .. ನಾನು ಸ್ವತಹ ಕೆಲವು ಜಾಗಗಳನ್ನು ಪ್ರಕಟಿಸಿದ್ದರಿಂದ (ಬ್ಲಾಗ್ ಅಥವಾ ದಿನಪತ್ರಿಕೆ ,ಚಿತ್ರೀಕರಣ ) ಹಾಳಗಿರುವುದನ್ನು ಕಂಡಿದ್ದೇನೆ .. ಧನ್ಯವಾದಗಳು
ಶ್ರೀನಾಥ್,
ಧನ್ಯವಾದ.
ಕಾಮೆಂಟ್ ಪೋಸ್ಟ್ ಮಾಡಿ