ಭಾನುವಾರ, ಆಗಸ್ಟ್ 02, 2015

ಗೋವಿಂದಾಯ ನಮ:


ಈ ಜಲಪಾತಕ್ಕೆ ಎರಡು ಸಲ (೨೦೦೪ ಜುಲಾಯಿ ಹಾಗೂ ೨೦೦೪ ಅಗಸ್ಟ್) ತೆರಳಿದ್ದರೂ, ಸಮೀಪದಿಂದ ಚಿತ್ರ ತೆಗೆಯಲು ಸಾಧ್ಯವಾಗಿರಲಿಲ್ಲ. ನೀರಿನ ಹನಿಗಳು ಎಲ್ಲೆಂದರಲ್ಲಿ ಚಿಮ್ಮುತ್ತಿದ್ದವು. ಕಾಡಿನ ಮರೆಯಿಂದ ಹೊರಬಂದು ಜಲಧಾರೆಯ ಮುಂದೆ ನಿಂತ ಕೂಡಲೇ ಮೈಯಿಡೀ ಒದ್ದೆಯಾಗಿಬಿಟ್ಟಿತ್ತು. ಕ್ಯಾಮರಾ ಹೊರತೆಗೆಯುವುದು ದೂರದ ಮಾತು.


ಕಳೆದ ತಿಂಗಳ (ಜುಲಾಯಿ ೨೦೧೫) ಉಡುಪಿ ಯೂತ್ ಹಾಸ್ಟೆಲ್ ಚಾರಣವನ್ನು ಇದೇ ಜಲಧಾರೆಗೆ ಇಡುವಂತೆ ಅಧ್ಯಕ್ಷರಿಗೆ ಸೂಚಿಸಿದ್ದು ನಾನೇ. ಸಮೀಪದಿಂದ ಚಿತ್ರ ತೆಗೆಯುವ ಅಜೆಂಡಾ ಬಾಕಿ ಇತ್ತಲ್ವೆ!


ಸುಮಾರು ೧೦೦ ಅಡಿ ಎತ್ತರದಿಂದ ಬೀಳುವ ಜಲಧಾರೆ, ಹಸಿರು ಹಣೆಗೆ ಶ್ವೇತ ವರ್ಣದ ನಾಮ ಗೀರಿದಂತೆ, ಚಾರಣ ಆರಂಭವಾಗುವ ಹಳ್ಳಿಯಿಂದಲೇ ಕಾಣಬರುತ್ತದೆ. ಈ ನೋಟ ಹನ್ನೊಂದು ವರ್ಷಗಳ ಹಿಂದೆ ಸಿಕ್ಕಿತ್ತು. ಈ ಬಾರಿ ಮಂಜು ಮುಸುಕಿದ್ದರಿಂದ ಜಲಧಾರೆ ಹಳ್ಳಿಯಿಂದ ಕಾಣಿಸುತ್ತಿರಲಿಲ್ಲ.


ಹನ್ನೊಂದು ವರ್ಷಗಳ ಬಳಿಕ ಇಲ್ಲಿಗೆ ಬಂದಿದ್ದರಿಂದ ಹಳ್ಳಿಯಲ್ಲಿ ಬದಲಾವಣೆಗಳಾಗಿದ್ದವು. ಅಲ್ಲಲ್ಲಿ ಹೊಸ ದಾರಿಗಳು ಜನ್ಮ ತಳೆದಿದ್ದವು. ದಾರಿಯ ಬಗ್ಗೆ ಸ್ವಲ್ಪ ಗೊಂದಲ ಉಂಟಾದರೂ, ಕಂಡುಕೊಂಡು ಕಾಡನ್ನು ಹೊಕ್ಕೆವು. ಒಮ್ಮೆ ಕಾಡನ್ನು ಪ್ರವೇಶಿಸಿದ ಬಳಿಕ ನಂತರ ಹೆದ್ದಾರಿಯಂತೆ ಸ್ಪಷ್ಟವಾಗಿರುವ ಕಾಲುದಾರಿ... ಜಲಧಾರೆಯ ಬುಡದವರೆಗೂ.


ಜಲಧಾರೆಯ ಬುಡಕ್ಕಿಂತ ಸ್ವಲ್ಪ ಮೊದಲೇ, ಒಂದಷ್ಟು ಚಿತ್ರಗಳನ್ನು ತೆಗೆದು, ಅಂದಿನ ಅಜೆಂಡಾ ಸಮಾಪ್ತಿಗೊಳಿಸಿದೆ. ಇನ್ನೊಂದು ಹದಿನೈದು ಹೆಜ್ಜೆ ಮುಂದೆ ಬಂದ ಬಳಿಕ ಚಿತ್ರ ತೆಗೆಯುವುದು ಅಸಾಧ್ಯದ ಮಾತು... ಮಳೆಗಾಲದಲ್ಲಿ.


ಶಿವರಾತ್ರಿಗೆ ಸಾವಿರಾರು ಶಿವಭಕ್ತರು ಇಲ್ಲಿಗೆ ದಾಂಗುಡಿಯಿಡುತ್ತಾರೆ. ಅಂದು ದಾರಿಯಿಡೀ ’ಗೋವಿಂದಾ ಗೋವಿಂದಾ’ ಎಂಬ ಮಂತ್ರ ಕಾಡಿನ ಮೌನವನ್ನು ಬೆದರಿಸುತ್ತಿರುತ್ತದೆ. ಈ ಶಿವಭಕ್ತರ ಓಡಾಟದಿಂದಲೇ ಅಷ್ಟು ಸ್ಪಷ್ಟವಾದ ಕಾಲುದಾರಿ ಕಾಡಿನೊಳಗೆ ರೂಪುಗೊಂಡಿದೆ.


ಹನ್ನೊಂದು ವರ್ಷಗಳಲ್ಲಿ ಕಾಡು ಸುಮಾರು ೨೦೦ ಮೀಟರುಗಳಷ್ಟು ಹಿಂದೆ ಸರಿದಿದೆ. ೨೦೦೪ರಲ್ಲಿ ನಾವು ಮನೆಯೊಂದರ ಬಳಿ ಕಾಡನ್ನು ಹೊಕ್ಕು, ನಂತರ ಮನೆಯಿಂದ ೧೫೦ ಮೀಟರುಗಳಷ್ಟು ದೂರವಿದ್ದ ತೊರೆಯೊಂದನ್ನು ದಾಟಿ ಮುನ್ನಡೆದಿದ್ದೆವು. ಇಂದು ಈ ತೊರೆಯ ತನಕ ಖಾಸಗಿ (ಆಕ್ರಮಿತ) ಸ್ಥಳ ಕಾಡನ್ನು ಬಲಿ ಪಡೆದಿದೆ. ತೊರೆ ದಾಟಿದ ಬಳಿಕವೂ ಇನ್ನೊಂದು ೫೦ ಮೀಟರುಗಳಷ್ಟು ದೂರದವರೆಗೆ ಬರೀ ಖಾಲಿ ಸ್ಥಳ. ತದನಂತರ ಕಾಡು. ಮುಂದಿನ ದಿನಗಳಲ್ಲಿ ಇನ್ನೆಷ್ಟು ಕಾಡಿನ ಆಹುತಿ ಕಾದಿದೆಯೋ.... ಆ ಗೋವಿಂದನೇ ಬಲ್ಲ.

3 ಕಾಮೆಂಟ್‌ಗಳು:

sunaath ಹೇಳಿದರು...

ಜಲಧಾರೆಯ ಚಿತ್ರ ತುಂಬ ಚೆನ್ನಾಗಿ ಬಂದಿದೆ. ಜಲಧಾರೆ ಸುಂದರವಾಗಿದೆ.

ರಾಜೇಶ್ ನಾಯ್ಕ ಹೇಳಿದರು...

ಸುನಾಥ್,
ಧನ್ಯವಾದ.

Harisha - ಹರೀಶ ಹೇಳಿದರು...

ಶಿವಭಕ್ತರು ಗೋವಿಂದಾ ಅಂತಾರಾ?
ಸಖತ್ತಾಗಿದೆ ಜಲಪಾತ :)