ಗುರುವಾರ, ಫೆಬ್ರವರಿ 08, 2007

ಮೇರುತಿ ಪರ್ವತದ ತುದಿಗೆ


ಜನವರಿಯ ಉಡುಪಿ ಯೂತ್ ಹಾಸ್ಟೆಲ್ ಚಾರಣ ಮೇರುತಿ ಪರ್ವತಕ್ಕೆ. ಎರಡು ದ್ವಿಚಕ್ರ ವಾಹನಗಳು, ಒಂದು ಮಾರುತಿ 800 ಮತ್ತು ಒಂದು ಮಾರುತಿ ಓಮ್ನಿಯಲ್ಲಿ ಜನವರಿ 20ರಂದು ನಾವು 15 ಚಾರಣಿಗರು ಮೇರುತಿಯನ್ನೇರಲು ತೆರಳಿದೆವು. ದಾರಿಯಲ್ಲಿ ಸಿಗುವ ತೀರ್ಥಕೆರೆ ಜಲಪಾತದ ಸೌಂದರ್ಯವನ್ನು ಸ್ವಲ್ಪ ಕಾಲ ವೀಕ್ಷಿಸಿ ಮೇರುತಿಯ ತಪ್ಪಲಲ್ಲಿರುವ ಊರು ತಲುಪಿದಾಗ ಮಧ್ಯಾಹ್ನ ಸುಮಾರು 12.45 ಆಗಿತ್ತು. ಅದಾಗಲೇ ಮೈಸೂರಿನಿಂದ ಚಾರಣಕ್ಕೆಂದು ಬಂದಿದ್ದ ಅನಿರುದ್ಧ ಮತ್ತು ರವಿ ನಮ್ಮನ್ನು ಸೇರಿಕೊಂಡಾಗ ಚಾರಣಿಗರ ಸಂಖ್ಯೆ 17ಕ್ಕೇರಿತು. ಈ ಊರಿನಲ್ಲಿರುವ ಕೋಟ ಅಡಿಗರ ಹೋಟೆಲ್ ನಲ್ಲಿ ಉದರ ಪೋಷಣೆಯ ಕೆಲಸ ಭರ್ಜರಿಯಾಗಿಯೇ ನಡೆಯಿತು. ನಮ್ಮ ವಾಹನಗಳನ್ನು ಊರಿನ ದೇವಸ್ಥಾನದ ಪ್ರಾಂಗಣದೊಳಗಿರಿಸಿ ಸುಮಾರು 2 ಗಂಟೆಗೆ ಒಂದು ಟಾಟಾ ಪಿಕ್ ಅಪ್ ವಾಹನ ಮತ್ತೊಂದು ಮಹಿಂದ್ರ ಜೀಪ್ ನಲ್ಲಿ ಮೇರುತಿಯ ಬುಡದಲ್ಲಿದ್ದ ಮೇರ್ತಿಕಾನ್ ಎಸ್ಟೇಟ್ ತಲುಪಿದೆವು. ಇಲ್ಲಿಂದ ನಡಿಗೆ ಪ್ರಾರಂಭ.

ಅಲ್ಲೇ ಇದ್ದ ಗಣಪತಿ ಗುಹೆಗೆ ತೆರಳಿ ಅಲ್ಲಿ ಉಳಿದುಕೊಳ್ಳಬಹುದೆಂದು ನಮಗೆ ಹೇಳಲಾಗಿತ್ತು. ಸುಮಾರು 15ನಿಮಿಷದ ಏರುಹಾದಿಯನ್ನು ಕ್ರಮಿಸಿದ ಬಳಿಕ ಗಣಪತಿ ಗುಹೆಗೆ ಬಂದೆವು. ಗುಹೆಯ ಒಳಗಡೆ ಗಣೇಶನ ಸಣ್ಣ ಮೂರ್ತಿಯಿದೆ. ಇಲ್ಲಿಂದಲೇ ಹರಿಯುವ ಒಂದು ಸಣ್ಣ ತೊರೆಯ ನೀರು ಆಯಾಸವನ್ನು ದಣಿಸಲು ಸಹಕಾರಿಯಾಯಿತು. ಆದರೆ 17 ಜನರು ಉಳಿದುಕೊಳ್ಳುವಷ್ಟು ಜಾಗ ಇಲ್ಲಿರಲಿಲ್ಲ. ಹಾಗೇ ಹಿಂತಿರುಗಿ ಮೇರುತಿಯ ಹಾದಿ ತುಳಿದೆವು. ಮೇರ್ತಿಕಾನ್ ಎಸ್ಟೇಟ್ ಬಹು ಸುಂದರವಾಗಿದೆ. ಎಲ್ಲೋ ಯುರೋಪ್ ನಲ್ಲಿ ನಡೆದಂತೆ ಭಾಸವಾಗುತ್ತಿತ್ತು. ಸುಮಾರು 45 ನಿಮಿಷಗಳ ಬಳಿಕ ಎಸ್ಟೇಟ್ ನಿಂದ ಹೊರಬಂದು ಮೇರುತಿಯ ಬುಡದೆಡೆ ನಡೆಯಲಾರಂಭಿಸಿದೆವು. ಮತ್ತೊಂದು ಅರ್ಧ ಗಂಟೆಯಲ್ಲಿ ನಾವು ಮೇರುತಿಯ ಬುಡ ತಲುಪಿ ಅಲ್ಲೇ ಡೇರೆ ಹಾಕುವುದೆಂದು ನಿರ್ಧರಿಸಿ ಸಮೀಪದಲ್ಲೇ ಇದ್ದ ಬದ್ನೆಕಾನ್ ಎಸ್ಟೇಟ್ ಗೆ ತೆರಳಿ ನೀರಿನ ಬಗ್ಗೆ ವಿಚಾರಿಸಿದಾಗ ಅಲ್ಲಿನ ಮ್ಯಾನೇಜರ್ ನಮ್ಮ ನಿರೀಕ್ಷೆಗೂ ಮೀರಿ ಸಹಕರಿಸಿದರು. ಸುಮಾರು ಒಂದು ಕಿಮಿ ದೂರದವರೆಗೆ ಎಸ್ಟೇಟ್ ನ ನೀರಿನ ಟ್ಯಾಂಕ್ ನ್ನು ಟ್ರಾಕ್ಟರ್ ಮೂಲಕ ಎಳೆದು ನಮ್ಮ ಡೇರೆಯ ಸಮೀಪ ತಂದು ನಿಲ್ಲಿಸಿದರು! ಅವರ ಈ ಸಹಾಯಕ್ಕೆ ಎಷ್ಟೇ ಧನ್ಯವಾದಗಳನ್ನು ತಿಳಿಸಿದರೂ ಕಡಿಮೆ.

ಅತ್ತ ಉಡುಪಿ ಯೂತ್ ಹಾಸ್ಟೆಲ್ ಲೀಡರ್ ಶ್ರೀ ಅಡಿಗರು ಅಡಿಗೆಯ ಕಾಯಕದಲ್ಲಿ ನಿರತರಾದರೆ ನಾವೆಲ್ಲ ಪ್ರಕೃತಿಯ ಸೌಂದರ್ಯವನ್ನು ಅಸ್ವಾದಿಸುತ್ತಾ ಕಾಲ ಕಳೆದೆವು. ಸೂರ್ಯ ಮುಳುಗುತ್ತಾ ಆಗಸದಲ್ಲಿ ಬಣ್ಣಗಳ ಚಿತ್ತಾರ ಮೂಡಿಸುತ್ತಾ ಇದ್ದ. ನಾನು ನೋಡಿದ ಉತ್ತಮ ಸೂರ್ಯಾಸ್ತಗಳಲ್ಲಿ ಇದೊಂದು. ಅತ್ತ ಅಡಿಗೆ ಕಾರ್ಯ ನಡೆಯುತ್ತಿದ್ದಂತೆ ಇತ್ತ ಡೇರೆ ಹಾಕುವ ಕಾರ್ಯ ನಡೆಯಿತು. ಚಳಿಯಂತೂ ವಿಪರೀತವಾಗಿತ್ತು ಹಾಗೇನೇ ಗಾಳಿ ಕೂಡಾ. ಆಡಿಗರ ರುಚಿರುಚಿಯಾದ ಅಡಿಗೆ ಸವಿದ ಬಳಿಕ 13 ಮಂದಿ ಡೇರೆಯ ಒಳಗೆ ಮತ್ತು 4 ಮಂದಿ ಹೊರಗೆ ಮಲಗಿದರು. ಗಾಳಿಯ ರಭಸಕ್ಕೆ ಡೇರೆಯ ಹುಕ್ ಗಳು ಎದ್ದುಬಂದು ಮತ್ತೆ ಮಧ್ಯರಾತ್ರಿ ಮರಳಿ ಸರಿಮಾಡಬೇಕಾಗಿ ಬಂದಿತ್ತು. ಅದಕ್ಕೋಸ್ಕರ ಡೇರೆಯಿಂದ ಹೊರಬಂದಾಗ ಗಾಳಿಯ ರಭಸಕ್ಕೆ ಹೆಜ್ಜೆ ಇಡುವುದು ಕಷ್ಟವಾಗುತ್ತಿತ್ತು ಮೈ ಕೊರೆಯುವ ಚಳಿ ಬೇರೆ. ಹೊರಗೆ ಮಲಗಿದ್ದ ನಾಲ್ವರ ಪರಿಸ್ಥಿತಿ ಕೆಟ್ಟದಾಗಿತ್ತು. ಇಬ್ಬರು ಡೇರೆಯ ಹಿಂದೆ ಮುದುಡಿ ಮಲಗಿದ್ದರೆ ಮತ್ತಿಬ್ಬರು ಅಡಿಗೆಗೆಂದು ಮಾಡಿದ ಬೆಂಕಿಯನ್ನು ಮತ್ತೆ ಉರಿಸಿ ಅದರ ಪಕ್ಕದಲ್ಲಿ ನಿದ್ರಿಸಲು ಪ್ರಯತ್ನಿಸುತ್ತಿದ್ದರು. ರಾತ್ರಿಯೆಲ್ಲಾ ಬೀಸಿದ ರಭಸದ ಗಾಳಿಯಿಂದ ಡೇರೆಯ ಮೇಲಿನ ಹೊದಿಕೆ ಹಾರಾಡುತ್ತಾ ಪಟಪಟ ಸದ್ದು ಮಾಡುತ್ತಿತ್ತು. ಆ ತರಹ ಗಾಳಿಯನ್ನು ನಾನೆಲ್ಲೂ ಅನುಭವಿಸಿರಲಿಲ್ಲ. ದೇವಕಾರದ ಬಳಿಕ ಕಳೆದ ಮತ್ತೊಂದು ಸ್ಮರಣೀಯ ಚಾರಣದ ರಾತ್ರಿ. ಮರುದಿನದ ಸುರ್ಯೋದಯ ಹಿಂದಿನ ದಿನದ ಸೂರ್ಯಾಸ್ತದಷ್ಟೇ ಚೆಲುವಾಗಿತ್ತು.

ಮರುದಿನ ಮುಂಜಾನೆ ಗಂಜಿ ಬೇಯಿಸಿ 7ಕ್ಕೆ ಮೇರುತಿಯ ತುದಿಗೆ ಚಾರಣ. ರಾತ್ರಿ ಕಳೆದ ತಾಣದಿಂದ ಸಮೀಪದಲ್ಲೇ ಇರುವಂತೆ ಕಾಣುತ್ತಿತ್ತು. ಮೊದಲ ಹಂತದ ಮೇಲೆ ತಲುಪಿದ ನಂತರವೇ ಎರಡನೇ ಹಂತ ಗೋಚರಿಸಿತ್ತು. ಅಬ್ಬಾ ಎನ್ನುತ್ತಾ ಮತ್ತೆ ಮುಂದಕ್ಕೆ ನಡೆದೆವು. ಎರಡನೇ ಹಂತದ ತುದಿ ತಲುಪಿದಾಗ ನಂತರ ಮೂರನೇ ಮತ್ತು ನಾಲ್ಕನೇ ಹಂತಗಳು ಗೋಚರಿಸಿದವು. ಸುಮಾರು ೯೦ ನಿಮಿಷಗಳ ಬಳಿಕ ಮೇರುತಿಯ ತುದಿ ತಲುಪಿದೆವು. ಅದೊಂದು ಅದ್ಭುತ ದೃಶ್ಯ - 360 ಕೋನದ ನೋಟ. ಒಂದು ಕಡೆ ಅಮೇದಿಕಲ್ಲು, ಎತ್ತಿನಭುಜ ಮತ್ತು ಮಿಂಚುಕಲ್ಲುಗಳು ಮುಂಜಾನೆಯ ಮಂಜಿನಲ್ಲಿ ಸೋಕಿದ್ದರೆ ಮತ್ತೊಂದು ಬದಿಯಲ್ಲಿ ದತ್ತಪೀಠ ಮತ್ತು ಮುಳ್ಳಾಯ್ಯನಗಿರಿಗಳು ಮಂಜಿನಲ್ಲಿ ತೊಯ್ದುಹೋಗಿದ್ದವು. ಈ ಕಡೆ ಕುದ್ರೆಮುಖ ಮತ್ತು ಕೃಷ್ಣಗಿರಿ ಪರ್ವತಗಳು ತಾವೇನು ಕಡಿಮೆ ಎಂಬಂತೆ ಪೋಸು ಕೊಡುತ್ತಿದ್ದವು. ಅದೊಂದು ರಮಣೀಯ ದೃಶ್ಯ. ಚಾರ್ಮಾಡಿ, ಮೂಡಿಗೆರೆ, ಕೆಮ್ಮಣ್ಣುಗುಂಡಿ ಮತ್ತು ಕುದ್ರೆಮುಖ ಶ್ರೇಣಿಯ ಎಲ್ಲಾ ಬೆಟ್ಟಗಳು ನಿಧಾನವಾಗಿ ತಮ್ಮನ್ನು ಆವರಿಸಿದ್ದ ಮಂಜನ್ನು ಸರಿಸಿ ಪೂರ್ಣವಾಗಿ ದರ್ಶನ ನೀಡಿದಾಗ ಅಲ್ಲಿಂದ ಹಿಂತಿರುಗಲು ಮನಸ್ಸೇ ಆಗುತ್ತಿರಲಿಲ್ಲ. ಒಂದು ಬದಿ ಅದೆಲ್ಲೋ ಕೆಳಗೆ ನಾವು ಏರಿ ಬಂದ ಊರು ಕಾಣುತ್ತಿದ್ದರೆ ಅದರ ವಿರುದ್ಧ ಬದಿಯಲ್ಲಿ ಇನ್ನೊಂದು ಊರು ಗೋಚರಿಸುತ್ತಿತ್ತು. ಗಾಳಿಯ ರಭಸ ಸ್ವಲ್ಪನೂ ಕಡಿಮೆಯಾಗಿರಲಿಲ್ಲ. ಒಂಥರ ಚಳಿಗಾಳಿ.

ಒಲ್ಲದ ಮನಸ್ಸಿನಿಂದ ನಿಧಾನವಾಗಿ ಇಳಿದು ಬಂದು ಗಂಜಿ ಊಟ ಮುಗಿಸಿ ಅಲ್ಲೇ ಬದ್ನೆಕಾನ್ ಎಸ್ಟೇಟ್ ಸಮೀಪ ವಾಸವಿರುವ ನವೀನ್ ಮತ್ತು ರಂಜಿತ್ ಎಂಬ ಪೋರರಿಬ್ಬರ ಮಾರ್ಗದರ್ಶನದಲ್ಲಿ ಬೆಟ್ಟದ ಕೆಳಗಿರುವ ಇನ್ನೊಂದು ಊರಿನೆಡೆ ಹೆಜ್ಜೆ ಹಾಕಿದೆವು. ಸುಂದರವಾದ ಗದ್ದೆ, ತೋಟ, ಸಣ್ಣ ಕಾಡು ಇವುಗಳ ನಡುವೆ ನಡೆದು ಅಲ್ಲಲ್ಲಿ ವಿಶ್ರಮಿಸಿ 180 ನಿಮಿಷಗಳ ಬಳಿಕ ಸುಮಾರು 1.15ಕ್ಕೆ ಕೆಳಗೆ ತಲುಪಿ, ದೇವಸ್ಥಾನದಲ್ಲಿ ಊಟ ಮುಗಿಸಿ ನಮ್ಮ ವಾಹನಗಳನ್ನಿರಿಸಿದ ಊರಿಗೆ ಬಸ್ ಏರಿದೆವು. ಅನಿರುದ್ಧ ಮತ್ತಿ ರವಿ ಮೈಸೂರಿಗೆ ವಾಪಸಾದರೆ ನಾವು ಉಡುಪಿ ತಲುಪಿದಾಗ ರಾತ್ರಿ 8 ಆಗಿತ್ತು. ಇತ್ತೀಚೆಗಿನ ದಿನಗಳಲ್ಲಿ ಕೈಗೊಂಡ ಒಂದು ಉತ್ತಮ ಚಾರಣವಿದಾಗಿತ್ತು.

1 ಕಾಮೆಂಟ್‌:

VENU VINOD ಹೇಳಿದರು...

ರಾಜೇಶ್,

ಇದು ಬಹಳ ಅನ್ಯಾಯ ಕಣ್ರೀ.
ಇಷ್ಟು ಒಳ್ಳೇ ಸ್ಥಳಕ್ಕೆ ಹೊರಡುವಾಗ ನಂಗೆ ಹೇಳ್ಳೇ ಇಲ್ಲ. ಫೋಟೋ, ಬರಹ ನೋಡಿ ಹೊಟ್ಟೆ ಉರಿದ್ಹೋಯ್ತು!
ಅದೇನೇ ಇರಲಿ, ಒಳ್ಳೇ ಬರಹ ಬಿಡಿ.