ಭಾನುವಾರ, ಅಕ್ಟೋಬರ್ 12, 2008

ದಬ್ಬೆ ಜಲಧಾರೆ


ದಿನಾಂಕ: ೨೮ ಸೆಪ್ಟೆಂಬರ್ ೨೦೦೫

ಕಿರಣ್ ಕೃಷ್ಣ ಬೆಂಗಳೂರಿನ ಚಾರಣಿಗ. ಪ್ರತಿ ವರ್ಷ ಮಳೆಗಾಲದಂದು ಆರೇಳು ಗೆಳೆಯರ ಒಂದು ಗುಂಪು ಕಟ್ಟಿಕೊಂಡು ಉತ್ತರ ಕನ್ನಡದ ನಾಲ್ಕಾರು ಜಲಧಾರೆಗಳಿಗೆ ಸುತ್ತಾಡುತ್ತಾರೆ. ೨೦೦೫ ಅಗೋಸ್ಟ್ ತಿಂಗಳಲ್ಲಿ ಇದೇ ರೀತಿ ’ಜಲಧಾರೆ ಪ್ರವಾಸ’ಕ್ಕೆ ಹೊರಟಿದ್ದರು. ದಬ್ಬೆ ಜಲಧಾರೆಯೊಂದನ್ನು ಬಿಟ್ಟು ಅವರು ನೋಡಲಿರುವ ಎಲ್ಲಾ ಜಲಧಾರೆಗಳನ್ನು ನಾನು ಅದಾಗಲೇ ನೋಡಿ ಆಗಿತ್ತು. ’ಹೇಗೂ ನೀವು ದಬ್ಬೆ ನೋಡಿಲ್ಲ. ೨ನೇ ದಿನ ನಾವು ದಬ್ಬೆಗೆ ಹೊರಟಿದ್ದೀವಿ. ಆ ದಿನ ನಮ್ಮನ್ನು ಸೇರಿಕೊಳ್ಳಬಹುದಲ್ಲಾ..’ ಎಂದು ಕಿರಣ್ ಹೇಳಿದಾಗ ನನಗೂ ಹೌದೆನಿಸಿತು. ನಾನು ಕಾರ್ಗಲ್ ತಲುಪಿ ಕಿರಣ್ ಮತ್ತವರ ಗೆಳೆಯರ ಗುಂಪಿಗಾಗಿ ಕಾಯತೊಡಗಿದೆ.


ದಬ್ಬೆ ಜಲಧಾರೆ ಮತ್ತು ಕಾನೂರು ಕೋಟೆಗೆ ಚಾರಣ ತೆರಳುವವರಿಗೆ ಅಧಿಕೃತ ಮಾರ್ಗದರ್ಶಿ ಸಾಗರದ ಮಹೇಶ, ಮುಂಜಾನೆ ೬ಕ್ಕೇ ಈತ ಹಾಜರಾದ. ಹೊಸಗದ್ದೆಯಲ್ಲಿ ನಾಗರಾಜ್ ಅವರ ಮನೆಯಂಗಳದಲ್ಲಿ ಸ್ವಲ್ಪ ವಿಶ್ರಾಮ. ನನಗೆ ಇದು ನಾಗರಾಜ್ ಮತ್ತು ಅವರ ಮನೆ ಮಂದಿಯೊಂದಿಗೆ ಪ್ರಥಮ ಭೇಟಿ. ದಬ್ಬೆ ಜಲಧಾರೆಗೆ ಬರುವ ಚಾರಣಿಗರನ್ನೆಲ್ಲ ಮಹೇಶ, ಈ ಮನೆಗೆ ಕರೆತಂದೆ ಮುಂದುವರಿಸುತ್ತಾನೆ.


ಇಲ್ಲಿಂದ ಮುಂದೆ ಗದ್ದೆ, ತೋಟ, ಬಯಲುಗಳ ದಾರಿಯಲ್ಲಿ ಮಧ್ಯೆ ತೊರೆಯೊಂದನ್ನು ೨ ಸಲ ದಾಟಿ ೪೫ ನಿಮಿಷ ಚಾರಣ ಮಾಡಿದರೆ ಜೈನರ ಮನೆ. ಇದಕ್ಕೆ ದಬ್ಬೆ ಮನೆಯೆಂದೂ ಹೆಸರು. ಜಲಧಾರೆ ವೀಕ್ಷಿಸಲು ಬರುವ ಪ್ರತಿಯೊಬ್ಬರೂ ಈ ಮನೆಯಲ್ಲಿ ಹೆಸರು ಮತ್ತು ವಿಳಾಸವನ್ನು ಬರೆಯಬೇಕು. ಹಿಂದೊಮ್ಮೆ ಹೀಗೆ ಬಂದವರು ಅಸಭ್ಯವಾಗಿ ವರ್ತಿಸಿದ್ದರಿಂದ ಈಗ ಈ ಕ್ರಮ. ಎಲ್ಲರನ್ನು ವೃತ್ತಾಕಾರದಲ್ಲಿ ನಿಲ್ಲಿಸಿ ಮಹೇಶ ಮಾತನಾಡತೊಡಗಿದ. ’ಇದುವರೆಗೆ ದಾರಿ ಬಹಳ ಸುಲಭವಾಗಿತ್ತು. ಇಲ್ಲಿಂದ ಮುಂದೆ ನೋಡಿದರೂ ದಾರಿ ಸುಲಭವಾಗಿರುವಂತೆ ತೋರುತ್ತದೆ. ಆದರೆ ಶೀಘ್ರದಲ್ಲೇ ನಿಮಗೆಲ್ಲರಿಗೂ ಗೊತ್ತಾಗಲಿದೆ ದಾರಿಯ ಬಗ್ಗೆ. ಬಹಳ ಎಚ್ಚರಿಕೆಯಿಂದ ಪ್ರತಿಯೊಬ್ಬರೂ ಸಾಗಬೇಕು. ಎಲ್ಲರೂ ಕ್ಷೇಮವಾಗಿ ಹಿಂತಿರುಗಿ ಬರಬೇಕು. ಹೆಜ್ಜೆ ಹೆಜ್ಜೆಗೂ ಎಚ್ಚರಿಕೆಯಿರಲಿ’ ಎಂದು ಮಾತು ಮುಗಿಸಿದ.


ದಬ್ಬೆ ಮನೆಯ ಮುಂದೆ ನೋಡಿದರೆ ೧೦೦ ಮೀಟರುಗಳಷ್ಟು ದೂರ ಗದ್ದೆಗಳು. ನಂತರ ಕಾಡು. ಈ ಗದ್ದೆಗಳ ಏರಿನಲ್ಲಿ ಸಾಗುತ್ತಿರುವಾಗ ಅಲ್ಲೆಲ್ಲಾ ಜಾರುತ್ತಿತ್ತು. ’ನಿಧಾನವಾಗಿ ನಡೆಯಬೇಕು, ಜಾರುತ್ತಿದೆ. ಬಿದ್ದರೆ ಮೈಯೆಲ್ಲಾ ಕೆಸರು’ ಎಂದು ಮನದಲ್ಲೇ ನನಗೆ ನಾನೇ ಹೇಳಿಕೊಂಡು ಎರಡು ಹೆಜ್ಜೆ ಇಡುವಷ್ಟರಲ್ಲಿ ಜಾರಿ ಗದ್ದೆಗೆ ಬಿದ್ದುಬಿಟ್ಟೆ. ಎಮ್ಮೆ ಕೆಸರಲ್ಲಿ ಉರುಳಾಡಿ ಎದ್ದಾಗ ಹ್ಯಾಗೆ ಕಾಣುತ್ತೋ ಹಾಗೆ ನಾನು ಈಗ ಕಾಣುತ್ತಿದ್ದೆ. ಎಲ್ಲರಿಗೂ ನಗು ಬರುತ್ತಿತ್ತು. ಆದರೆ ನಾನು ಅವರ ಅತಿಥಿಯಾಗಿದ್ದರಿಂದ, ಸೌಜನ್ಯಕ್ಕಾಗಿ ನನ್ನ ಮುಂದೆ ನಗದೇ ಕದ್ದು ಮುಚ್ಚಿ ನಗುತ್ತಿದ್ದರು. ನನ್ನ ಅವತಾರ ನೋಡಿ ನಗು ತಡೆಹಿಡಿಯಲೂ ಅಸಾಧ್ಯವಾಗಿತ್ತು.


ಗದ್ದೆಗಳ ಅಂಚು ತಲುಪಿದ ಕೂಡಲೇ ಪ್ರಪಾತ. ಇಷ್ಟು ಆಳದ ಪ್ರಪಾತವೊಂದು ಇಲ್ಲಿ ಅಡಗಿ ಕುಳಿತಿದೆ ಎಂದು ಕಲ್ಪಿಸಲು ಸಾಧ್ಯವೇ ಇಲ್ಲ. ಮರ ಗಿಡಗಳ ಬೇರು, ಕೊಂಬೆ ಇತ್ಯಾದಿಗಳನ್ನು ಆಧಾರವಾಗಿ ಹಿಡಿದು ಕೆಳಗಿಳಿಯಲಾರಂಭಿಸಿದೆವು. ೧೦ ನಿಮಿಷದ ಬಳಿಕ ದಬ್ಬೆ ಜಲಧಾರೆ ಗೋಚರಿಸುವುದು. ಇನ್ನೂ ಕೆಳಕ್ಕೆ ಇಳಿದು ಜಲಧಾರೆಯ ಬುಡಕ್ಕೆ ತೆರಳಬಹುದು. ಆದರೆ ನೀರಿನ ಹರಿವು ಹೆಚ್ಚಿದ್ದರಿಂದ ಕೆಳಗೆ ಹೋಗುವುದು ಬೇಡವೆಂದು ಮಹೇಶ ನಿರ್ಧರಿಸಿದ. ಡಿಸೆಂಬರ್ ನಂತರ ಬಂದರೆ ಸಲೀಸಾಗಿ ಕೆಳಗಿಳಿಯಬಹುದು. ಈಗ ನಾವು ಕಣಿವೆಯ ಮಧ್ಯದಲ್ಲೇ ನಿಂತು ದಬ್ಬೆಯನ್ನು ನೋಡಿ ತೃಪ್ತಿಪಟ್ಟೆವು.


ದಬ್ಬೆ ಜಲಧಾರೆ ೨೫೦ ಅಡಿಯಷ್ಟು ಎತ್ತರದಿಂದ ಧುಮುಕುತ್ತದೆ. ಕಣಿವೆಯ ಮೇಲ್ಮೈಯನ್ನು ಸ್ಪರ್ಶಿಸುತ್ತಾ ಕೆಳಗೆ ಬರುತ್ತಿದ್ದಂತೆ ಜಲಧಾರೆಯ ಅಗಲವೂ ವಿಸ್ತಾರಗೊಳ್ಳುತ್ತದೆ. ದಬ್ಬೆ ಮನೆಗೆ ಬರುವಾಗ ದಾಟಿದ ತೊರೆಯೇ ನಂತರ ಮುಂದೆ ಇನ್ನೆರಡು ತೊರೆಗಳನ್ನು ತನ್ನಲ್ಲಿ ಸೇರಿಸಿಕೊಂಡು ಮುಂದೆ ಹರಿದು ದಬ್ಬೆ ಜಲಧಾರೆಯನ್ನು ನಿರ್ಮಿಸುತ್ತದೆ. ಜಲಧಾರೆ ಧುಮುಕುವಲ್ಲೇ ಆರಂಭವಾಗುವ ಕಣಿವೆ ನಂತರ ಬಹಳ ಕಿರಿದಾಗಿದೆ. ದೂರದಲ್ಲೊಂದು ಜಿಂಕೆಯೋ, ಕಡವೆಯೋ ನಮಗೆ ಕಂಡುಬಂತು. ಹಿಂತಿರುಗುವಾಗ ಸಿಗುವ ತೊರೆಯಲ್ಲಿ ಹೊರಳಾಡಿ ಬಟ್ಟೆಗೆ, ಮೈಗೆ ಮೆತ್ತಿದ್ದ ಕೆಸರನ್ನು ತೊಳೆದುಕೊಂಡೆ. ಮತ್ತೊಂದು ಸಲ ನಾಗರಾಜ್ ಮನೆಯಲ್ಲಿ ವಿಶ್ರಾಂತಿ ಪಡೆದು, ಭೀಮೇಶ್ವರದತ್ತ ತಂಡ ಹೊರಟಿತು.

ಭೀಮೇಶ್ವರ ತಿರುವು ತಲುಪಿದಾಗ ಅದಾಗಲೇ ೪.೧೫ ಆಗಿತ್ತು. ಈಗ ಮಳೆ ಬೀಳಲಾರಂಭಿಸಿತು. ಭಟ್ಕಳಕ್ಕೆ ಕೊನೆಯ ಬಸ್ಸು ಭೀಮೇಶ್ವರಕ್ಕೆ ೫.೨೦ಕ್ಕೆ ಆಗಮಿಸುತ್ತದೆ. ಇದು ತಪ್ಪಿದರೆ ನಂತರ ನನಗೆ ಉಡುಪಿಗೆ ಬಸ್ಸಿಲ್ಲ. ಭೀಮೇಶ್ವರವನ್ನು ಒಂದೆರಡು ಸಲ ನೋಡಿದ್ದರೂ ಮತ್ತೆ ನೋಡಬೇಕೆಂಬ ಆಸೆ. ಉಳಿದವರು ಇನ್ನೂ ವಾಹನದಿಂದ ಇಳಿದಿರಲಿಲ್ಲ. ರೈನ್ ಕೋಟ್ ಧರಿಸಿ, ಕಿರಣ್-ಗೆ ಮುಂದೆ ಹೋಗುವೆನೆಂದು ತಿಳಿಸಿ, ಭೀಮೇಶ್ವರದತ್ತ ಹೊರಟೆ.


ಮಳೆಗಾಲದಲ್ಲಿ ಇದು ಭೀಮೇಶ್ವರಕ್ಕೆ ನನ್ನ ಪ್ರಥಮ ಭೇಟಿ. ಅರ್ಚಕರು ಇರಲಿಲ್ಲ. ನಿರ್ಜನ ಪ್ರದೇಶ. ದೇವಸ್ಥಾನ ತಲುಪಿ, ಜಲಧಾರೆಯ ಅಂದವನ್ನು ಕ್ಯಾಮರಾದಲ್ಲಿ ಸೆರೆಹಿಡಿದು ಮರಳಿ ಅರ್ಚಕರ ಮನೆಗೆ ಬರಬೇಕಾದರೆ ಸಮಯ ೫ ಆಗಿತ್ತು. ಮಳೆಯಲ್ಲೇ ಓಡಲು ಶುರುಮಾಡಿದೆ. ಸ್ವಲ್ಪ ದೂರ ಬರುವಷ್ಟರಲ್ಲಿ ಅರ್ಚಕರು ಸಿಕ್ಕರು. ಪ್ರತಿ ಶನಿವಾರ ಸಿದ್ಧಾಪುರ ಸಮೀಪದ ತನ್ನ ಊರಿಗೆ ತೆರಳುವ ಅವರು ೪.೩೦ರ ಬಸ್ಸಿಗೆ ಬಂದಿದ್ದರು. ಮುಂದೆ ತೊರೆಯ ತನಕ ಇಳಿಜಾರಾಗಿದ್ದರಿಂದ ಬೇಗನೇ ಬಂದೆ. ಇಲ್ಲಿದ್ದರು ಕಿರಣ್ ಮತ್ತವರ ಗೆಳೆಯರು. ಎಲ್ಲರಿಗೂ ವಿದಾಯ ಹೇಳಿ ಮುಂದುವರಿದೆ.


ಏದುಸಿರು ಬಿಡುತ್ತಾ ಕೊನೆಯ ತಿರುವಿನ ಬಳಿಗೆ ಬಂದಾಗ ಬಸ್ಸಿನ ಹಾರ್ನ್ ಕೇಳಿಸುತ್ತಿತ್ತು. ಕಾಲುಗಳು ನೋಯುತ್ತಿದ್ದರೂ ಇನ್ನಷ್ಟು ವೇಗವಾಗಿ ಓಡಿದೆ. ರಸ್ತೆ ಕಾಣುತ್ತಿತ್ತು, ಬಸ್ಸು ಕಾಣುತ್ತಿರಲಿಲ್ಲ, ಬಸ್ಸಿನ ಸದ್ದು ಮತ್ತು ಹಾರ್ನ್ ಕೇಳಿಸುತ್ತಿತ್ತು. ಬಸ್ಸು ದಾಟಿ ಹೊಯಿತೇನೋ ಎಂಬ ಕಳವಳ. ಕಡೆಗೂ ರಸ್ತೆ ಬಳಿ ಬಂದಾಗ ಇನ್ನೂ ಬಸ್ಸಿನ ಸದ್ದು ಕೇಳಿಸುತ್ತಿತ್ತು. ಅರ್ಧ ನಿಮಿಷದೊಳಗೆ ಆಗಮಿಸಿದ ದುರ್ಗಾಂಬಾ ಬಸ್ಸನ್ನೇರಿ ಹೊರಟೆ ಉಡುಪಿಯತ್ತ.

12 ಕಾಮೆಂಟ್‌ಗಳು:

Harish - ಹರೀಶ ಹೇಳಿದರು...

ರಾಜೇಶ್, ನೀವು ಈ ಜಲಧಾರೆಗಳ ದಾರಿಯನ್ನೂ ಬ್ಲಾಗಿನಲ್ಲಿ ಹಾಕಿದರೆ ಬಹಳ ಅನುಕೂಲ..

Aravind GJ ಹೇಳಿದರು...

ಸೊಗಸಾದ ಲೇಖನ. ನಾನು ಮಳೆಗಾಲದಲ್ಲಿ ಹೋದಾಗ ಕಣಿವೆಯ ಮಧ್ಯದಲ್ಲೇ ನಿಂತು ನೋಡಬೇಕಾಯಿತು. ಕಣಿವೆಗೆ ಇಳಿಯುವ ಅನುಭವ ಮರೆಯಲಾಗದು!!

ಆದರೆ ಇತ್ತೀಚೆಗೆ ದಬ್ಬೆಗೆ ಹೋದ ಗೆಳೆಯರೊಬ್ಬರು ವಿಪರೀತ ಜನರ ಹಾವಳಿಯಿಂದ ಜಾಗ ಗಬ್ಬೆದ್ದು ಹೋಗುತ್ತಿದೆ ಎಂದರು.

Parisarapremi ಹೇಳಿದರು...

ಸಕ್ಕತ್ತಾಗ್ ಇದ್ಯಲ್ರೀ.. ಆಹ್ಹ್!!

Srik ಹೇಳಿದರು...

ರಾಜೇಶ್,

ಮೊದಲ ಚಿತ್ರ ಬಹಳ ಚೆಂದ. ನಾನು ಮೇ ತಿಂಗಳಲ್ಲಿ ದಬ್ಬೆಗೆ ಹೋಗಿದ್ದೆ. ಆಗ ದಬ್ಬೆ ಜಲಪಾತದ ಕೆಳಗೆ ಕುಳಿತು ಮೀಯುವ ಅದೃಷ್ಟ ನನ್ನದಾಗಿತ್ತು. ಮಳೆಗಾಲದಲ್ಲಿ ಒಮ್ಮೆ ಹೋಗಬೇಕೆಂಬ ಆಸೆಯೇನೋ ಇದೆ. ಯಾವಾಗ ಕಾಲ ಕೂಡಿ ಬರುವುದೋ ಗೊತ್ತಿಲ್ಲ. ಭೀಮೇಶ್ವರದ water falls ನಾನು ಹೋದಾಗ ನೀರಿಲ್ಲದೇ ಸೊರಗಿತ್ತು. ಮತ್ತೆ ಮಳೆಗಾಲದಲ್ಲಿ ಹೋಗಬೇಕು.

ಅರವಿಂದ್ ಹೇಳಿರುವಂತೆ ಜನ ಹೆಚ್ಹಾಗಿ ದಬ್ಬೆ ಗಬ್ಬೆ ಆಗಿರುವುದು ನಿಜವೇ ಆದರೆ, ನೀವು ಈ blogನಲ್ಲಿ ದಾರಿಯ ವಿವರಗಳನ್ನು ಹಾಕದಿರುವುದೇ ಉತ್ತಮ ಎಂದು ನನ್ನ ಅಭಿಪ್ರಾಯ. ಎಲ್ಲರಿಗು ಎಲ್ಲಾ ವಿಷಯಗಳು ತಿಳಿಯುವುದು ಒಳ್ಳೆಯದಲ್ಲ... especially ಬೆಂಗಳೂರಿನ ಕೆಲವು ಮಂದಿಗೆ!!

Srikanth - ಶ್ರೀಕಾಂತ ಹೇಳಿದರು...

ಆದಷ್ಟು ಬೇಗ ಭೀಮೇಶ್ವರಕ್ಕೆ ಹೋಗಿ ಸುತ್ತ-ಮುತ್ತ ಇರುವ ಜಲಪಾತಗಳೆಲ್ಲಾ ನೋಡಿ ಬರಬೇಕಲ್ಲ...

VENU VINOD ಹೇಳಿದರು...

ಭೀಮೇಶ್ವರಕ್ಕೆ ನಿಮ್ಮ ಬಳಗದ ಜತೆ ಹಿಂದೆ ಹೋದ ಅನುಭವ ಈಗ ಮತ್ತೆ ಹಸಿರಾಯಿತು...ತಾಜಾ ನಿರೂಪಣೆ ಹಾಗೂ ಅದಕ್ಕೊಪ್ಪುವ ಚಿತ್ರಗಳು...

sp ಹೇಳಿದರು...

Hi Rajesh,

You should have added one of your pictures to the BLOG. It would have been ..."Rajesh Kesaradare BLOG Mosaru" .


Nice blog and great posts buddy. Enjoy!!

ರಾಜೇಶ್ ನಾಯ್ಕ ಹೇಳಿದರು...

ಹರೀಶ,
ಜಲಧಾರೆಗಳಿಗೆ ತೆರಳುವ ದಾರಿಯನ್ನು ನಾನು ಯಾಕೆ ಇಲ್ಲಿ ಬರೆಯುವುದಿಲ್ಲ ಎಂಬ ಬಗ್ಗೆ ನಿಮಗೊಂದು ಈ ಮೈಲ್ ಕಳಿಸಿದ ನೆನಪು ನನಗಿದೆ. ದಾರಿಯ ಬಗ್ಗೆ ಪ್ರಕೃತಿ ಪ್ರಿಯರಿಗೆ ತಿಳಿದರೆ ಆಕ್ಷೇಪವಿಲ್ಲ. ಆದರೆ ಪ್ರಕೃತಿಯ ಬಗ್ಗೆ ಎಳ್ಳಷ್ಟೂ ಕಾಳಜಿಯಿಲ್ಲದವರಿಗೆ ತಿಳಿದು ಅವರಲ್ಲಿ ಭೇಟಿ ನೀಡಿ ಆ ಸ್ಥಳದ ಅಂದಗೆಡಿಸುವುದನ್ನು ನಾನು ಕಣ್ಣಾರೆ ನೋಡಿರುವಾಗ (ಒಂದೆರಡು ಸ್ಥಳಗಳು ಅಂದಗೆಡಲು ನನ್ನ ಲೇಖನಗಳ ಮೂಲಕ ನಾನೇ ಕಾರಣಕರ್ತನೂ ಆಗಿರುವಾಗ) ಹೇಗೆ ದಾರಿ ತಿಳಿಸುವುದು? ಆಸಕ್ತಿಯಿರುವವರು ಕೇಳಿದಾಗ ದಾರಿ ತಿಳಿಸಿದರಾಯಿತು.

ಅರವಿಂದ್,
ಕೆಳಗಿಳಿದರೆ ಅದೂಂದು ಅಪೂರ್ವ ಅನುಭವವೇನೋ. ಅಲ್ಲೀಗ ಜನರ ಹಾವಳಿ ವಿಪರೀತ ಆಗಿರುವುದಂತೂ ನಿಜ. ಈ ಪರಿ ಜನ ಬರುವುದರಿಂದ ಜಲಪಾತದ ಬಳಿಯಿರುವ ಮನೆಯವರೂ ಹಣ ಮಾಡಲು ಆರಂಭಿಸಿದ್ದಾರೆ. ದಬ್ಬೆ ಮನೆಯಲ್ಲೀಗ ಒಬ್ಬರಿಗೆ ೫ ರೂಪಾಯಿ ನೀಡಿದ ಬಳಿಕವಷ್ಟೇ ಜಲಪಾತ ನೋಡಲು ಅನುಮತಿ. ಇಷ್ಟೇ ಅಲ್ಲದೆ ಕೆಳಗಿಳಿಯಲು ಸುಲಭವಾಗಲು ಹಗ್ಗವನ್ನೂ ಆ ಮನೆಯವರು ನೀಡುತ್ತಾರೆ. ಹಗ್ಗದ ಬಾಡಿಗೆ: ೧೫ ರೂಪಾಯಿ ಮಾತ್ರ! ಜೈ ದಬ್ಬೆ.

ಅರುಣ್,
ಸಕತ್ತಾಗಿಯೇನೋ ಇದೆ. ಆದರೆ ಈಗ ದಬ್ಬೆ ಮನೆಯವರೆಗೂ ರಸ್ತೆ ಇದೆ. ವಾಹನದಿಂದ ಇಳಿದು, ಪ್ರವೇಶ ದರ ತೆತ್ತು, ಬಾಡಿಗೆ ಹಗ್ಗ ಪಡೆದು ಸುಲಭದಲ್ಲಿ ಭೇಟಿ ನೀಡಬಹುದು. ಬಹುಶ: ನಿಮಗಿಷ್ಟವಾಗಲಾರದು.

ಶ್ರೀಕಾಂತ್,
ನಿಮ್ಮ ಮಾತು ೧೦೦ ಶೇಕಡಾ ಸರಿ. ಕಾಲಕ್ಕೆ ತಕ್ಕಂತೆ ದಬ್ಬೆ ಬದಲಾಗುತ್ತಿದೆ.

ಶ್ರೀಕಾಂತ್ ಕೆ ಎಸ್,
ತಡವೇಕೆ..?

ವೇಣು,
ವಂದನೆ.

ಎಸ್ ಪಿ ಯವರೆ,
ತುಂಬಾ ತುಂಬಾ ಥ್ಯಾಂಕ್ಸ್, ಪ್ರೋತ್ಸಾಹದ ಮಾತುಗಳಿಗಾಗಿ.

ಶರಶ್ಚಂದ್ರ ಕಲ್ಮನೆ ಹೇಳಿದರು...

ರಾಜೇಶ್ ಅವ್ರೆ ಕಳೆದ ವಾರ ಪುಷ್ಪಗಿರಿ ಚಾರಣಕ್ಕೆ ಹೋಗಿದ್ದೆ. ಅಲ್ಲೊಬ್ಬ ಚಾರಣಿಗನ ಪರಿಚಯವಾಯಿತು. ಅವರು "ಬೆಳ್ಳಿ ಗುಂಡಿ" ಅನ್ನೋ ಜಲಪಾತದ ಬಗ್ಗೆ ತಿಳಿಸಿದರು. ಅದು ದಬ್ಬೆಯ ಹತ್ತಿರ ಇದೆಯಂತೆ. ನಿಮ್ಮಲ್ಲೆನಾದ್ರು ಮಾಹಿತಿ ಇದೆಯೇ? ತುಂಬ ಕಷ್ಟದ ಹಾದಿ, ಮಾರ್ಗದರ್ಶಕರು ಇಲ್ಲದೆ ಹೋಗಬೇಡಿ ಅಂತ ಎಚ್ಚರಿಕೆ ಬೇರೆ ಕೊಟ್ರು. ನೋಡಿ ಎಲ್ಲಾದರು ಮಾಹಿತಿ ದೊರೆತರೆ ತಿಳಿಸಿ.

ರಾಜೇಶ್ ನಾಯ್ಕ ಹೇಳಿದರು...

ಶರಶ್ಚಂದ್ರ,
ಬೆಳ್ಳಿಗುಂಡಿ ಜಲಧಾರೆಯನ್ನು ಕುಡುಮರಿ ಎಂದೂ ಕರೆಯಲಾಗುತ್ತದೆ. ನನ್ನ ಬ್ಲಾಗಿನಲ್ಲಿ ಕುಡುಮರಿ ಎಂದು ಟೈಪ್ ಮಾಡಿ ಸರ್ಚ್ ಮಾಡಿ.

ಶರಶ್ಚಂದ್ರ ಕಲ್ಮನೆ ಹೇಳಿದರು...

ಧನ್ಯವಾದಗಳು ರಾಜೇಶ್ ಮಾಹಿತಿಗಾಗಿ. ಇದು ದಬ್ಬೆ ಜಲಪಾತದ ಹತ್ತಿರ ಇದೆಯಾ ? ಅಂದರೆ ಸಾಗರದ ಕಡೆಯಿಂದ ಇಲ್ಲಿಗೆ ತೆರಳಬಹುದ? ನಿಮ್ಮ ಕೂಸಳ್ಳಿ ಜಲಪಾತದ (dreamroutes.org) ಮಾಹಿತಿಯೊಂದಿಗೆ ನನಗೆ ಸುಂದರ ನೆನಪುಗಳಿವೆ. ಆ ಮಾಹಿತಿ ಓದುತ್ತಿದ್ದ ಸಮಯದಲ್ಲಿ ಉಂಟಾದ ಹೇಳಲಾಗದ ಸಂತೋಷದ ಅನುಭವ ನಿಮ್ಮ ಬ್ಲಾಗಲ್ಲಿ "ಕುಡುಮರಿ ಜಲಪಾತ" ಓದಿದಾಗ ಮತ್ತೆ ಆಯಿತು. ಅಂದ ಹಾಗೆ dreamroutes.org ಏನಾಯಿತು.

ರಾಜೇಶ್ ನಾಯ್ಕ ಹೇಳಿದರು...

ಶರಶ್ಚಂದ್ರ,
ಮಾಹಿತಿ ಈಮೈಲ್ ಮಾಡಿದ್ದೇನೆ.