ಬುಧವಾರ, ಮಾರ್ಚ್ 19, 2008

ಮೇಗಣಿ ಯಾತ್ರೆ


ಕಾಡಿನ ನಡುವೆ ಇರುವ ಮೇಗಣಿಗೆ ಚಾರಣ ಮಾಡಬೇಕೆಂದು ನಮ್ಮ ರಾಘವೇಂದ್ರ ಬಹಳ ಕಾಡುತ್ತಿದ್ದರು. ಹಾಗೆಂದೇ ಮಾರ್ಚ್ ೨೦೦೮ ರ ಉಡುಪಿ ಯೂತ್ ಹಾಸ್ಟೆಲ್ ಕಾರ್ಯಕ್ರಮವನ್ನು ೧೬ರಂದು ಈ ಹಳ್ಳಿಗೆ ಇಡಲಾಯಿತು. ನಮ್ಮಲ್ಲಿ ಯಾರೂ ಈ ದಾರಿಯಲ್ಲಿ ಚಾರಣ ಮಾಡಿರಲಿಲ್ಲ. ಬೆಟ್ಟದ ತಪ್ಪಲಿನ ಊರಿಗೆ ತಲುಪಿ ಚಾರಣ ಆರಂಭಿಸಿದಾಗ ೧೦ಗಂಟೆ ಆಗಿತ್ತು. ಈ ಊರಿನವರ ಪ್ರಕಾರ ನಾವು ಮೇಗಣಿ ತಲುಪಿ ಹಿಂತಿರುಗುವುದು ಅಸಾಧ್ಯದ ಮಾತಾಗಿತ್ತು. ಅಲ್ಲದೇ ನಮ್ಮಿಂದ ಅಷ್ಟು ದೂರ ಕ್ರಮಿಸುವುದೂ ಕಷ್ಟಸಾಧ್ಯ ಎಂಬುದು ಅವರ ಅನಿಸಿಕೆ. ಆದರೂ ನಮಗಂತೂ ಕಾಡೊಳಗೆ ಹೋಗಲೇಬೇಕಿತ್ತು. ಆ ಊರಿನಲ್ಲಿ ಅಂದು ನಾಗಮಂಡಲ ಕಾರ್ಯಕ್ರಮವಿದ್ದುದರಿಂದ ನಮಗೆ ಮಾರ್ಗದರ್ಶಕರನ್ನು ಹುಡುಕುವುದೇ ದೊಡ್ಡ ಕೆಲಸವಾಯಿತು. ಅಂತೂ ಕೊನೆಗೆ ಸಿಕ್ಕರು 'ಪುಟ್ಟಯ್ಯ' ಎಂಬ ಅಸಾಮಾನ್ಯ ಮಾರ್ಗದರ್ಶಿ.

ಅರ್ಧ ಗಂಟೆಯೊಳಗೆ ನಾನು ಸುಸ್ತು. ಮುಂದಕ್ಕೆ ಹೋಗಬೇಕೋ ಬೇಡವೋ ಎಂದು ಒಂದೈದು ನಿಮಿಷ ಅಲ್ಲೇ ನಿಂತು ಯೋಚಿಸಿ ನಂತರ ಮುಂದುವರಿದೆ. ಉಳಿದವರೆಲ್ಲಾ ಮುಂದಕ್ಕೆ ಹೋಗಿಯಾಗಿತ್ತು. ನಂತರ ೭೫ ನಿಮಿಷಗಳ ಕಾಲ ನಾನೊಬ್ಬನೇ ಕಾಡಿನ ಆ ದಾರಿಯಲ್ಲಿ ಅಳುಕುತ್ತಾ ಸಾಗಿದೆ. ದಾರಿ ತಪ್ಪುವ ಸಾಧ್ಯತೆ ಇರಲಿಲ್ಲ. ನಾಟಾ ಸಾಗಿಸಲು ಬಲೂ ಹಿಂದೆ ಮಾಡಿದ ರಸ್ತೆಯಿತ್ತು. ಈಗ ಸಂಚಾರವಿಲ್ಲದೆ ರಸ್ತೆಯನ್ನು ಕಾಡು ನುಂಗುತ್ತಿದೆ. ಅಲ್ಲಲ್ಲಿ ಮರಗಳು ಉರುಳಿಬಿದ್ದಿವೆ. ರಸ್ತೆಯ ಇಕ್ಕೆಲಗಳಲ್ಲಿ ದಟ್ಟ ಕಾಡು. ಅಲ್ಲಲ್ಲಿ ಕೂತು ವಿಶ್ರಮಿಸುತ್ತಾ, ಕಾಡಿನ ಸುಂದರ ಮೌನವನ್ನು ಆನಂದಿಸುತ್ತಾ ನಿಧಾನವಾಗಿ ಮುನ್ನಡೆದೆ.


ಈಗ ಒಂದೆರಡು ದಿನಗಳಿಂದ ರಾತ್ರಿ ಮಳೆ ಬೀಳುತ್ತಿದ್ದರಿಂದ ಕಾಡೆಲ್ಲಾ ತಂಪಾಗಿತ್ತು. ಸೂರ್ಯನ ಬಿಸಿಲಿನ ಝಳ ನಮಗೆ ತಾಗುತ್ತಿರಲಿಲ್ಲ. ಮೌನ ಕಾಡಿನ ಸೌಂದರ್ಯವೇ ಅಮೋಘ. ಅದನ್ನು ಅನುಭವಿಸಿದಷ್ಟು ಕಡಿಮೆ. ಒಂದೆಡೆ ದಾರಿಯಲ್ಲಿದ್ದ ಸಣ್ಣ ಬಂಡೆಯ ಮೇಲೆ ವಿಶ್ರಮಿಸೋಣವೆಂದು ಕೂತರೆ, ಐದು ಅಡಿ ದೂರದಲ್ಲಿ ಆನೆಯ ಲದ್ದಿ! ಕೂತಲ್ಲೇ ಮೆಲ್ಲನೆ ಹೆದರಿಕೆ ಶುರುವಾಯಿತು. ಕೂತಲ್ಲಿಂದಲೇ ಸುತ್ತಲು ಕಣ್ಣಾಡಿಸಿದೆ. ರಸ್ತೆಯ ಆಚೀಚೆ ಎಲ್ಲೆಡೆ ದಟ್ಟ ಕಾಡು. ನನ್ನ ಏದುಸಿರಿನ ಸದ್ದು ಬಿಟ್ಟರೆ ಬೇರಾವ ಸದ್ದೂ ಇಲ್ಲ. ಹಿಂತಿರುಗಿ ನೋಡಲೂ ಅಳುಕು. ಚಿಟ್ಟೆ ಹುಲಿ ಎಲ್ಲಾದರೂ ಮರದ ಮೇಲಿಂದ ನನ್ನ ಮೇಲೆ ಜಿಗಿದುಬಿಟ್ಟರೆ..., ಸುಮ್ಮನೆ ನಿಂತಿರುವ ಆನೆ ನಾನು ಕೂತಿರುವುದನ್ನು ಕಂಡು ದಾಳಿ ಮಾಡಿದರೆ...ಎಂಬಿತ್ಯಾದಿ ಭಯ ಹುಟ್ಟಿಸುವ ಯೋಚನೆಗಳು ಮನದೊಳಗೆ ಅಲೆದಾಡಲು ಆರಂಭಿಸಿದವು. ಅಲ್ಲೇ ಕುಳಿತರೆ ಇಂಥವೇ ವಿಚಾರಗಳು ನನ್ನನ್ನು ಇನ್ನಷ್ಟು ಗಾಬರಿಗೊಳ್ಳುವಂತೆ ಮಾಡಿಬಿಡುತ್ತವೆ ಎಂದು ಅಲ್ಲಿಂದ ಮುಂದುವರಿದೆ.

ಬೆವರಿನಿಂದ ಬಟ್ಟೆಯೆಲ್ಲಾ ತೊಯ್ದುಹೋಗಿದ್ದವು. ದಾರಿ ಅಷ್ಟೇನು ಕಷ್ಟದ್ದಾಗಿರಲಿಲ್ಲ. ಮುಖದ ಮೇಲೆಲ್ಲಾ ಬೆವರಿನ ಗೆರೆಗಳು. ಮೌನ ಸಾಮ್ರಾಜ್ಯದಲ್ಲಿ ನಿಧಾನವಾಗಿ ಮುಂದುವರಿಯುತ್ತಿದ್ದಾಗ ಎಡ ಪಾರ್ಶ್ವದಲ್ಲಿ ಅದೇನೋ ಸದ್ದು. ಬೆಚ್ಚಿ ಬಿದ್ದು ಆ ಕಡೆ ನೋಡಿದರೆ 'ಓತಿಕ್ಯಾತ' ತರದ ಜಂತು. ಆನೆಯ ವಿಚಾರ ಮನದಲ್ಲೇ ಸ್ವಲ್ಪ ಸುಳಿದಾಡುತ್ತಿದ್ದರಿಂದ ಸಣ್ಣ ಸದ್ದಾದರೂ ಬೆಚ್ಚಿ ಬೀಳುತ್ತಿದ್ದೆ. ಇನ್ನೂ ಸ್ವಲ್ಪ ಮುಂದೆ ಸಾಗಿ ವಿಶ್ರಮಿಸಲು ನಿಂತುಕೊಂಡೆ. ಸೊಂಟದ ಮೇಲೆ ಕೈಗಳನ್ನಿಟ್ಟು ಆಗಸದೆಡೆ ಮುಖ ಮಾಡಿ ಬಾಯಿ ತೆರೆದು ಏದುಸಿರು ಬಿಡುತ್ತಾ ನಿಂತಾಗ...... ಅದೆಲ್ಲಿಂದಲೋ ತಂಪಾದ ನೀರಿನ ಹನಿಯೊಂದು ಹಣೆ ಮತ್ತು ಮೂಗು ಸಂಧಿಸುವಲ್ಲಿ ಬಿದ್ದು ಹಾಗೆ ಕೆನ್ನೆಯ ಮೇಲೆ ಹರಿದಾಡಿ ಕತ್ತಿನೆಡೆ ಸರಿದುಹೋಯಿತು. ಆಗ ಸಿಕ್ಕ ಸುಖ.....ಅನುಭವಿಸಿದರೇ ತಿಳಿಯುವುದು. ಒಂದೈದು ಕ್ಷಣ ಆ ತಂಪಾದ ಅನುಭವ ನನ್ನನ್ನು ಸುಖದ ಸುಪ್ಪತ್ತಿಗೆಯಲ್ಲಿ ತೇಲಾಡಿಸಿತು. ದಣಿದು ಬಸವಳಿದಿದ್ದ ನನಗೆ ಆ ಒಂದು ನೀರಿನ ಹನಿ ನೀಡಿದ 'ಎನರ್ಜಿ' ಯನ್ನು ಬಣ್ಣಿಸಲಸಾಧ್ಯ.


ಈಗ ಸಮತಟ್ಟಾದ ದಾರಿಯಾಗಿದ್ದರಿಂದ ಬೇಗನೇ ಮುಂದುವರಿದೆ. ಇನ್ನೊಂದೆಡೆ ಆನೆಯ ಲದ್ದಿ ಕಾಣಸಿಕ್ಕಿತು. ಮುಂದೆ ಸಿಗುವ ಮುಕ್ತಿಹೊಳೆ ಎಂಬ ತೊರೆಯೊಂದರ ಬಳಿ ತಂಡದ ಉಳಿದವರು ವಿಶ್ರಮಿಸುತ್ತಿದ್ದರು. ಅಲ್ಲಿಂದ ಸ್ವಲ್ಪ ಮುಂದೆ ನಡೆದಾಗ ಕಾಡು ಒಮ್ಮೆಲೇ ಸರಿದು ವಿಶಾಲ ಬಯಲು ಪ್ರದೇಶಕ್ಕೆ ಎಡೆಮಾಡಿಕೊಟ್ಟಿತು. ಅದ್ಭುತವಾದ ದೃಶ್ಯ. ಬಲಕ್ಕೆ ದೂರದವರೆಗೆ ಹಬ್ಬಿಕೊಂಡಿದ್ದ ವಿಶಾಲವಾದ ಬೆಟ್ಟ. ನೇರವಾಗಿ ಮುಂದಕ್ಕೆ ದೂರದಲ್ಲಿ ಕೊಡಚಾದ್ರಿಯ ರಮ್ಯ ನೋಟ. ವಿರುದ್ಧ ದಿಕ್ಕಿನಲ್ಲಿ ೨ ಬೆಟ್ಟಗಳು ಸಂಧಿಸುವಲ್ಲಿ ಉಂಟಾಗಿರುವ 'ವಿ' ಆಕಾರದ ಆಕೃತಿಯ ಮೂಲಕ ಅರಬ್ಬಿ ಸಮುದ್ರದ ನೋಟ (ಮೇಲಿನ ಚಿತ್ರ). ಇಲ್ಲಿ ಸುಮಾರು ೧೫ ನಿಮಿಷಗಳಷ್ಟು ಕಾಲ ಪ್ರಕೃತಿಯ ಮತ್ತು ಹಸಿರಿನ ವೈಭವವನ್ನು ಕಣ್ತುಂಬಾ ಆನಂದಿಸಿ ಮುಂದುವರಿದೆವು.

ನಂತರ ಸಿಕ್ಕಿದ ದೇವರಹಳ್ಳದಲ್ಲಿ ಊಟದ ಸಮಯ. ದೇವರಹಳ್ಳದಲ್ಲಿ ನೀರಿನ ಹರಿವು ಕಡಿಮೆಯಿತ್ತು. ಸ್ಥಳ ಬಹಳ ಸುಂದರವಾಗಿತ್ತು. ಭೋಜನ ವಿರಾಮವೆಂದು ೩೦ ನಿಮಿಷಗಳಷ್ಟು ಸಮಯವನ್ನು ದೇವರಹಳ್ಳದಲ್ಲಿ ಕಳೆದೆವು. ಕಡವೆಯ ಕೋಡೊಂದು ಅಲ್ಲಿ ಬಿದ್ದಿತ್ತು. ಬಹಳ ಸುಂದರವಾಗಿದ್ದ ಈ ಕೋಡನ್ನು ಒಯ್ಯಲು ನಮ್ಮವರು ಉತ್ಸುಕರಾಗಿದ್ದರು. ಆದರೆ ಈ ಕೋಡು ಬಹಳ ದೊಡ್ಡದಾಗಿದ್ದರಿಂದ ಯಾರದೇ ಬ್ಯಾಗಿನಲ್ಲಿ ಅದನ್ನು ಬಚ್ಚಿಟ್ಟು ಒಯ್ಯುವುದು ಅಸಾಧ್ಯದ ಮಾತಾಗಿತ್ತು. ದಾರಿಯಲ್ಲಿ ಎಲ್ಲಾದರೂ ಅರಣ್ಯ ಇಲಾಖೆಯವರು ನಮಗೆ ಸಿಕ್ಕಿಬಿಟ್ಟರೆ ನೇರವಾಗಿ ಜೇಲಿಗೆ ಹೋಗಬೇಕಾದ ಪರಿಸ್ಥಿತಿಯನ್ನು ಎದುರಿಸಲು ಯಾರೂ ತಯಾರಿರಲಿಲ್ಲವಾದ್ದರಿಂದ ಆ ಸುಂದರ ಕೋಡನ್ನು ಅಲ್ಲೇ ಬಿಟ್ಟು ಬಂದೆವು. ನಂತರ ದೇವರಹಳ್ಳದಗುಂಟ ಸ್ವಲ್ಪ ಮುಂದೆ ನಡೆದಾಗ ಜಲಧಾರೆ! ದೇವರಹಳ್ಳ ಸ್ವಲ್ಪ ಮುಂದಕ್ಕೆ ಸುಮಾರು ೬೦ ಅಡಿ ಎತ್ತರದ ಜಲಧಾರೆಯೊಂದನ್ನು ನಿರ್ಮಿಸುತ್ತದೆ. ಈಗ ನೀರಿನ ಪ್ರಮಾಣ ಕಡಿಮೆಯಾಗಿದ್ದರಿಂದ ಜಲಧಾರೆ ಸೊರಗಿತ್ತು. ಜಲಧಾರೆಯ ಬುಡಕ್ಕೆ ತೆರಳಲು ಕಷ್ಟಪಡಬೇಕಾಗುತ್ತದೆ.

ಮುಂದೆ ಕಾಡಿನ ದಾರಿಯ ಬಳಿಕ ಮತ್ತೆ ಬಯಲು ಪ್ರದೇಶ ನಂತರ ಮತ್ತೆ ಕಾಡು. ಈಗ ಕಾಡಿನಲ್ಲೇ ಕೊನೆಯ ೩೦ನಿಮಿಷಗಳ ಚಾರಣ. ಈ ಕಾಡಿನೊಳಗೆ ನಡೆಯುವಾಗ ಆಗಸದಲ್ಲಿ ಗುಡುಗಿನ ಹಾವಳಿ. ಮಳೆ ಅಪ್ಪಳಿಸುವ ತಯಾರಿ ಜೋರಾಗಿ ನಡೆದಿತ್ತು. ವೇಗವಾಗಿ ನಡೆಯಲಾರಂಭಿಸಿದೆವು. ಸಂಪೂರ್ಣ ಇಳಿಜಾರಿನ ಹಾದಿ. ಹಾದಿ ಕೊನೆಗೊಳ್ಳುತ್ತಿದ್ದಂತೆ ಮೇಗಣಿ! ತೊರೆಯನ್ನು ದಾಟಿದ ಕೂಡಲೇ ಹಳ್ಳಿಯೊಳಗೆ ಪ್ರವೇಶ. ನಾವೆಲ್ಲರೂ ತೊರೆ ದಾಟಿದ ಕೂಡಲೇ ಮಳೆ ಬೀಳಲಾರಂಭಿಸಿತು. ನಮಗೆ ಸಿಗುವ ಮೊದಲ ಮನೆ ಇನ್ನೂ ೫ ನಿಮಿಷ ದೂರವಿತ್ತು. ಮಳೆಯಲ್ಲೇ ಮುನ್ನಡೆದೆವು.


ಆ ಮನೆ ತಲುಪಿದಾಗ ಸಮಯ ೩.೩೦. ಮಳೆ ಕಡಿಮೆಯಾದ ನಂತರ ಹಳ್ಳಿಯೊಳಗೆ ತೆರಳಿದೆವು. ಅಲ್ಲಿಂದ ಘಟ್ಟದ ಕೆಳಗೆ ಫೋನ್ ಮಾಡಿ ಜೀಪ್-ಗೆ ಬರಹೇಳಿದೆವು. ಮೇಗಣಿಗೆ ೨ ದಾರಿಗಳಿವೆ. ಒಂದು ದಾರಿ ಕೇವಲ ಚಾರಣಕ್ಕೆ ಸೀಮಿತವಾದರೆ ಮತ್ತೊಂದು ದಾರಿ ವಾಹನ ಸಂಚಾರಕ್ಕೆ ಯೋಗ್ಯ.

ಈ ಕಾಡಿನಲ್ಲಿ ಒಂಟಿ ಸಲಗವೊಂದಿತ್ತು. ನಾವು ಬರುವಾಗ ನೋಡಿದ್ದ ಲದ್ದಿ ಈ ಸಲಗದ್ದೇ. ಇದೊಂದೇ ಆನೆ ಈ ಕಾಡಿನಲ್ಲಿದ್ದದ್ದು. ಅದು ಹೇಗೆ ಇಲ್ಲಿ ಬಂತು ಎಂದು ಯಾರಿಗೂ ಗೊತ್ತಿಲ್ಲ. ಬಹಳ ಪ್ರಾಯವಾಗಿದ್ದ ಆನೆಯಾಗಿತ್ತು. ಹಳ್ಳಿಗೆ ಆಗಾಗ ದಾಳಿಯಿಟ್ಟು ಬೆಳೆಗಳನ್ನು ನಾಶ ಮಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿತ್ತು. ಹಳ್ಳಿಗರಿಂದ ತಿಳಿದು ಬಂದದ್ದೇನೆಂದರೆ ಜನವರಿ ೨೭, ೨೦೦೮ರಂದು ಹಳ್ಳಿಯ ಸಮೀಪವೇ ಈ ಆನೆ ಅನಾರೋಗ್ಯದಿಂದ ತೀರಿಕೊಂಡಿತು ಮತ್ತು ಅರಣ್ಯ ಇಲಾಖೆಯವರು ಬಂದು ದಂತವನ್ನು ಕೊಂಡೊಯ್ದರು ಎಂದು.

ಇಲ್ಲಿಗೆ ಬರುವ ಚಾರಣದ ಹಾದಿ ಅಪ್ರತಿಮ. ಈ ಹಾದಿಯನ್ನು ಮನಸಾರೆ ಅನುಭವಿಸಲು, ಆನಂದಿಸಲು ಮತ್ತು ಕಾಡಿನ ಸೌಂದರ್ಯವನ್ನು ಕಾಣುವ ಸಲುವಾಗಿ ಈ ಹಾದಿಯಲ್ಲಿ ಮಾತ್ರ ಬರಬೇಕು. ಡಿಸೆಂಬರ್ ತಿಂಗಳಲ್ಲಿ ಗಂಗಡಿಕಲ್ಲಿಗೆ ಚಾರಣ ಮಾಡಿದ ಬಳಿಕ ೩ ತಿಂಗಳ ನಂತರ ಕೈಗೊಂಡ ಈ ಚಾರಣ ದೇಹವನ್ನು ನೆಟ್ಟಗಾಗಿಸಿತು. ಈ ಹಳ್ಳಿಯಲ್ಲಿರುವುದು ೭ ಕುಟುಂಬಗಳು. ನಾಲ್ಕು ಮೈಲಿ ನಡೆದರೆ ಸಾಗರ ತಾಲೂಕಿನ ಕಾರ್ಣಿ ಗ್ರಾಮ. ಎಲ್ಲಾ ೭ ಕುಟುಂಬಗಳ ಜಮೀನುಗಳನ್ನು ಉದ್ಯಮಿಯೊಬ್ಬರು ಖರೀದಿಸಿದ್ದಾರೆ. ಇಲ್ಲೊಂದು ರೆಸಾರ್ಟ್ ಆರಂಭಿಸುವ ಇರಾದೆ ಇದೆ ಈ ಉದ್ಯಮಿಗೆ. ಅದುವರೆಗೆ ಮೇಗಣಿ ಚಂದ. ಸುತ್ತಮುತ್ತಲಿನ ಕಾಡು ಚಂದ.

1 ಕಾಮೆಂಟ್‌:

ಅನಾಮಧೇಯ ಹೇಳಿದರು...

ಸಿಂಧು:
ರಾಜೇಶ್,

ತುಂಬ ಇಷ್ಟವಾಯಿತು. ಹೋಗಬೇಕು ಇಲ್ಲಿಗೆ ನಾನೂ. ಹೋಗುವ ತಯಾರಿ ಆದ ಕೂಡಲೆ, ಫೋನ್ ಮಾಡುತ್ತೇನೆ ವಿವರ ಕೇಳಿಕೊಳ್ಳಲು.

ಕೊನೆಯ ಪ್ಯಾರಾ ಓದಿ ಮನಸ್ಸು ಮುದುಡಿಹೋಗಿದೆ. ಕೊಟ್ಟಿಗೆಹಾರದ ಮಲಯಮಾರುತವನ್ನು ಜಂಗಲ್ ಲಾಡ್ಜಸ್ ಅವರಿಗೆ ವಹಿಸಿಕೊಡುತ್ತದಂತೆ ನಮ್ಮ ರಾಜ್ಯ ಸರ್ಕಾರ. :( ಈ ಬಗೆಯ ಸುದ್ದಿಗಳು ತುಂಬ ಹಿಂಸೆಕೊಡುತ್ತವೆ.

ಪ್ರೀತಿಯಿಂದ
ಸಿಂಧು


ನಾಗೇಂದ್ರ ತ್ರಾಸಿ:
ಹಾಯ್ ರಾಜೇಶ್,

ಆಗಾಗ ನಾನು ನಿಮ್ಮ ಅಲೆಮಾರಿ ತಾಣದಲ್ಲಿ ಸುತ್ತುತ್ತಿರುತ್ತೇನೆ, ಮೇಗಣಿ ಕುರಿತು ಓದಿ ತುಂಬಾ, ಖುಷಿಯಾಯಿತು ಹಾಗೆಯೇ ಬಾವಡಿಯಲ್ಲೊಂದು ಜಲಪಾತ ಇದೆ ಅದನ್ನು ನೀವು ನೋಡಿದ್ದೀರೋ ಇಲ್ಲವೋ, ನಾನು ಇತ್ತೀಚೆಗೆ ನನ್ನ ಬ್ಲಾಗ್‌‌ನಲ್ಲಿ ಜಲಪಾತದ ಬಗ್ಗೆ ಬರೆದಿದ್ದೇನೆ.

bahumukhi.blogspot.com

ನಾಗೇಂದ್ರ ತ್ರಾಸಿ.


ಅರವಿಂದ್:
ತುಂಬ ಖುಷಿಯಿಂದ ಲೇಖನ ಓದಿದೆ. ಆದರೆ ಕೊನೆಯಲ್ಲಿ ಬೇಸರವಾಯಿತು. ಇತ್ತೀಚೆಗೆ ಪ್ರತಿ ದಿನ ಇಂತಹ ಸುದ್ದಿಗಳನ್ನೇ ಕೇಳುತ್ತಿದ್ದೇನೆ. ಇದೊಂದು ವಿಪರ್ಯಾಸ.

ಮೇಗಣಿಗೆ ಹೇಗೆ ಹೋಗಬೇಕೆಂದು ಗೊತ್ತಾಗಲಿಲ್ಲ. ಆದರೆ ಪರವಾಗಿಲ್ಲ. ಹೋಗಬೇಕೆಂದಾಗ ನಿಮ್ಮನ್ನೇ ಕೇಳುತ್ತೇನೆ!! - ಅರವಿಂದ್


ಶ್ರೀಕಾಂತ್ ಕೆ ಎಸ್:
ಸುಂದರವಾದ ಲೇಖನ! ಆದರೆ ಮೇಗಣಿಯ ಸೌಂದರ್ಯವನ್ನು ನಿಮ್ಮ ಲೇಖನದುದ್ದಕ್ಕೂ ಸವಿಯುತ್ತಾ ಬಂದ ನನಗೆ ಕೊನೆಗೆ ರಿಸಾರ್ಟ್ ವಿಚಾರ ಓದಿ ಬಹಳ ಬೇಸರವಾಯಿತು.

ಆದಷ್ಟು ಬೇಗ ಮೇಗಣಿಗೆ ಒಮ್ಮೆ ಹೋಗಿ ಬರಬೇಕು ಎಂದುಕೊಳ್ಳುತ್ತಿದ್ದೇನೆ. - ಶ್ರೀಕಾಂತ್ ಕೆ ಎಸ್

ಪ್ರಶಾಂತ್:
ಮೇಗಣಿ - ಇದೇ ಮೊದಲು ಈ ಸ್ಥಳದ ಬಗ್ಗೆ ಕೇಳಿದ್ದು... ಚೆನ್ನಾಗಿವೆ - ಫೋಟೋ ಮತ್ತು ಲೇಖನ ಎರಡೂ...

ಇತ್ತೀಚೆಗೆ ಎಲ್ಲಾ ಕಡೆನೂ ಹೀಗೆ ಆಗ್ತಾ ಇವೆ... ರೆಸಾರ್ಟ್ಸ್ ಗಳು ನಾಯಿಕೊಡೆಗಳ ತರಹ ಮೇಲೇಳುತ್ತಿವೆ :(

BTW ದಿನಾಂಕವನ್ನು ಮಾರ್ಚ್ ೨೦೦೭ ರ ೧೬ ಅಂತ ಬರೆದಿದ್ದೀರಿ... ೨೦೦೮ ಅಲ್ಲವೆ - ಪ್ರಶಾಂತ್ ಎಮ್ಮೆಗನಿ ಯತ್ರೆ ಸುಪೆರ್ ಸರ್. - ಪ್ರವೀಣ್ ಮಾವಿನಸರ


ಜೋಮನ್:
ನಾಯ್ಕ್‌ರೇ,

ಮೇಗಣಿ ಲೇಖನ ಸೊಗಸಾಗಿದೆ. ಚಿತ್ರಗಳೂ.ಬಟ್ಕಳದಿಂದ ನಾಗವಳ್ಳಿ ಮಾರ್ಗವಾಗಿ ಸಾಗರಕ್ಕೆ ಹೋಗುವ ದಾರಿಯಲ್ಲೂ, (ಹಾಡವಳ್ಳಿಯ ನಂತರ) ಮೆಘಾನೆ ಅಂತ ಒಂದು ಸುಂದರ ಕಾಡಿನ ಗ್ರಾಮವಿದೆ.ಕಾಡಿನಲ್ಲಿ ಏಳೆಂಟು ಕಿ.ಮಿ ನಡೆದರೆ ಸೂಜಿಯ ತುದಿಯ ಮೇಲೆ ಇರುವಂತಹ ಒಂದು ಪರ್ವತ ಈ ಊರು. ಒಂದಿಷ್ಟು ಬುಡಕಟ್ಟು ಕುಟುಂಬಗಳು, ಪ್ರವಾಸೋದ್ಯಮ ಇಲಾಖೆ ಪುರಾತನ ಕಾಲದಲ್ಲಿ ಕಟ್ಟಿದ ಒಂದು ಟೂರಿಸ್ಟ್ ಬಂಗಲೆಯೂ ಇದೆ. ನಾನು ಅದರ ಬಗ್ಗೆಯೇ ಬರೆದಿರಬಹುದು ಎಂದು ಓದಿದೆ. ಆದರೆ ಈ ಮೇಗಣಿ ಬೇರೆಯ ಊರು. ಲೇಖನ ಓದಿದ ನಂತರವೂ ಈ ಮೇಗಣಿ ಎನ್ನುವುದು ಎಲ್ಲಿ ಬರುತ್ತದೆ ಅಂತ ಸ್ವಷ್ಟವಾಗಿ ಅರ್ಥವಾಗಲಿಲ್ಲ.

ಹಾಗೆಯೇ ಮುಂದಿನ ಬಾರಿ ಚಾರಣ ಹೊರಡುವಾಗ ನಮಗೂ ಒಂದು ಮಾತು ಹೇಳಿ. ನಾವೂ ಬರಬಹುದಾ?

ಧನ್ಯವಾದಗಳು.
ಜೋಮನ್.


ರಾಜೇಶ್ ನಾಯ್ಕ:
ಸಿಂಧು,
ಮಲಯಮಾರುತದ ಬಗ್ಗೆ ಗೊತ್ತಿರಲಿಲ್ಲ. ನಿಮ್ಮ ಟಿಪ್ಪಣಿ ಓದಿದ ಬಳಿಕ ದಿಗಿಲಾಯಿತು. ಈ ಜಂಗಲ್ ಲಾಡ್ಜಸ್ ಎಂಬ ದೆವ್ವ ಕರ್ನಾಟಕದ ಕಾಡುಗಳಿಗೆ ಜಿಗಣೆಯಂತೆ ಅಂಟಿಕೊಳ್ಳುತ್ತಿದೆ.

ನಾಗೆಂದ್ರ,
ಇದು ನಿಮ್ಮ ಮೊದಲ ಟಿಪ್ಪಣಿ ಅಲೆಮಾರಿಯ ಅಂಕಣದಲ್ಲಿ. ಸ್ವಾಗತ. ಬಾವಡಿ ಜಲಧಾರೆಯ ಬಗ್ಗೆ ಶ್ರೀಪತಿ ಹಕ್ಲಾಡಿ ಬರೆದಿರುವ ಲೇಖನ ನನ್ನಲ್ಲಿದೆ. ನೀವು ಮತ್ತು ಶ್ರೀಪತಿ ಹಕ್ಲಾಡಿಯವರು ಒಟ್ಟಿಗೆ ಬಾವಡಿ ಜಲಧಾರೆಗೆ ಹೋಗಿದ್ದೀರೆಂದು ನಿಮ್ಮ ಬ್ಲಾಗಿನಲ್ಲಿ ಓದಿದ ನಂತರ ತಿಳಿಯಿತು. ಕಳೆದ ನವೆಂಬರ್ ತಿಂಗಳಲ್ಲಿ ಬಾವಡಿಗೆ ಹೋಗೋಣವೆಂದಿದ್ದೆ, ಆಗಲಿಲ್ಲ. ಈ ಬಾರಿ ನೋಡಬೇಕು..

ಅರವಿಂದ್,
ಧನ್ಯವಾದಗಳು. ಅವಶ್ಯವಾಗಿ ಕೇಳಿರಿ. ಎಲ್ಲ ಮಾಹಿತಿಯನ್ನೂ ನೀಡುವೆ.

ಶ್ರೀಕಾಂತ್,
ಆದಷ್ಟು ಬೇಗ ಹೋಗಿ ಬನ್ನಿರಿ...ರೆಸಾರ್ಟ್ ಆಗುವ ಮೊದಲೇ..

ಪ್ರಶಾಂತ್,
ದಿನಾಂಕವನ್ನು ಸರಿಪಡಿಸಿದ್ದೇನೆ.

ಜೋಮನ್,
ಮೆಘಾನೆಗೆ ತೆರಳಿದ್ದೇನೆ. ಅಲ್ಲಿರುವ ಹೆಡ್-ಗುಡ್ಡವನ್ನು ಏರಲಾಗಲಿಲ್ಲ. ಮುಂದಿನ ಸಲ ಅಲ್ಲಿಗೆ ಹೋಗಿ ಈ ಗುಡ್ಡಾವನ್ನು ಏರಿ ಬರಬೇಕು. ಚಾರಣಕ್ಕೆ ನೀವು ಅವಶ್ಯವಾಗಿ ಬರಬಹುದು. ನಿಮ್ಮ ಮೊಬೈಲ್ ಸಂಖ್ಯೆಯನ್ನು ನನ್ನ ವಿ-ಅಂಚೆ ವಿಳಾಸಕ್ಕೆ ಕಳುಹಿಸುವಿರಂತೆ. ಪ್ರತಿ ತಿಂಗಳ ಯೂತ್ ಹಾಸ್ಟೆಲ್ ಕಾರ್ಯಕ್ರಮದ ಬಗ್ಗೆ ಮಾಹಿತಿ ಎಲ್ಲರಿಗೂ ಎಸ್.ಎಮ್.ಎಸ್ ಮೂಲಕ ಮುಂಚಿತವಾಗಿಯೇ ತಿಳಿಸಲಾಗುತ್ತದೆ. ಅನುಕೂಲವಾದಲ್ಲಿ ಬರಬಹುದು.ಪ್ರವೀಣ್,
ಧನ್ಯವಾದಗಳು