
ಜನವರಿ ೨೮, ೨೦೦೬ ರಂದು ಬಿಳಿಗಾರು ತಲುಪಿದಾಗ ಸಂಜೆ ೭ರ ಸಮಯ. ಅಲ್ಲಿ ಅನಿಲನ ಬಗ್ಗೆ ವಿಚಾರಿಸಿದರೆ ಶಾಲೆ ಕಡೆ ಹೋಗಿದ್ದಾನೆ ಎಂದು ತಿಳಿಯಿತು. ಆ ದಿನ ಬಿಳಿಗಾರಿನ ಶಾಲೆಯ ವಾರ್ಷಿಕೋತ್ಸವ. ಶಾಲೆಯ ವಾರ್ಷಿಕೋತ್ಸವದಲ್ಲಿ ಅನಿಲನದ್ದು ಏಕಪಾತ್ರಾಭಿನಯದ ಕಾರ್ಯಕ್ರಮವಿತ್ತು. ಸ್ವಲ್ಪ ಹೊತ್ತಿನಲ್ಲಿ ಅನಿಲ್ ಹಾಜರಾದ. ’ವಾರ್ಷಿಕೋತ್ಸವ ಇದೆ. ಇವತ್ತು ನನ್ನ ಮನೆಯಲ್ಲೇ ಉಳಿದುಕೊಳ್ಳುವಿರಂತೆ. ನಾಳೆ ಬೆಳಗ್ಗೆ ಕೋಟೆಗೆ ಹೋಗೋಣವೇ’ ಎಂದು ಅನಿಲ್ ಕೇಳಿದಾಗ, ಸಮ್ಮತಿಸದೆ ಬೇರೆ ವಿಧಾನವಿರಲಿಲ್ಲ. ನಂತರ ವಾರ್ಷಿಕೋತ್ಸವದ ಕಾರ್ಯಕ್ರಮಗಳನ್ನು ನೋಡೋಣವೆಂದು ಶಾಲೆಯತ್ತ ತೆರಳಿದೆ.
ಅನಿಲ್ ಕಾನೂರಿನ ಹುಡುಗ. ಬಿಳಿಗಾರಿನಲ್ಲಿ ಒಂದು ಕೋಣೆಯ ಮನೆಯಲ್ಲಿದ್ದುಕೊಂಡು ಶಾಲೆಗೆ ಹೋಗುತ್ತಿದ್ದ. ಜುಲಾಯಿ ೨೦೦೫ರ ಒಂದು ರವಿವಾರ ಯಾವುದೇ ಚಾರಣ ಕಾರ್ಯಕ್ರಮವಿರದಿದ್ದಾಗ ನಾಗೋಡಿ ಘಟ್ಟವನ್ನೇರಿ, ಕೋಗಾರು ಘಟ್ಟವನ್ನಿಳಿದು ಬರೋಣವೆಂದು ತೆರಳಿದಾಗ, ಕಾನೂರು ಕೋಟೆಗೆ ಹೋಗುವ ಬಗ್ಗೆ ದಾರಿ ತಿಳಿಯುವ ಸಲುವಾಗಿ ಬಿಳಿಗಾರಿಗೆ ತೆರಳಿದ್ದೆ. ಆಗ ಅನಿಲನ ಪರಿಚಯವಾಗಿ, ’ಮಳೆ ನಂತರ ಬನ್ನಿ. ಇದೇ ನನ್ನ ರೂಮು. ನಾನಿಲ್ಲೇ ಇರೋದು. ಕಾನೂರು ಕೋಟೆ ತೋರಿಸ್ತೇನೆ’ ಎಂದಿದ್ದ. ಆ ಭೇಟಿಯ ೬ ತಿಂಗಳ ಬಳಿಕ ಈಗ ಅನಿಲನನ್ನು ಹುಡುಕಿಕೊಂಡು ಬಂದಿದ್ದೆ.
ಶಾಲೆಯಲ್ಲಿ ಕಾರ್ಯಕ್ರಮಗಳು ಜೋರಾಗಿಯೇ ನಡೆದಿದ್ದವು. ಹಿಂದೆ ನಿಂತುಕೊಂಡು ಕಾರ್ಯಕ್ರಮಗಳನ್ನು ನೋಡತೊಡಗಿದೆ. ನಾನು ’ಹೊರಗಿನವನು’ ಎಂದು ಅಲ್ಲಿದ್ದವರಿಗೆ ಸುಲಭದಲ್ಲಿ ಗೊತ್ತಾಗುತ್ತಿತ್ತು. ಒಂದಿಬ್ಬರು ಬಂದು ’ಯಾವೂರು?’, ’ಗವರ್ನಮೆಂಟಾ?’ ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿದರು. ಆಗ ಬಂದು ಮುಂದಕ್ಕೆ ಕರೆದೊಯ್ದ ಅನಿಲ್, ತನ್ನ ಉಪಾಧ್ಯಾಯರ ಪರಿಚಯ ಮಾಡಿಸಿದ. ಅವರಲ್ಲೊಬ್ಬರು ಹೊನ್ನಾವರದವರೇ ಆಗಿದ್ದರಿಂದ ಪರಿಚಯ ಸುಲಭವಾಗಿ ಆಯಿತು. ಕಾರ್ಯಕ್ರಮಗಳ ನಿರ್ವಾಹಕರೂ ಇವರೇ ಆಗಿದ್ದರು. ಸ್ವಲ್ಪ ಹೊತ್ತಿನ ಬಳಿಕ ಇವರು ಅನಿರೀಕ್ಷಿತವಾಗಿ, ’ಇವರು ರಾಜೇಶ್ ನಾಯ್ಕ. ದೂರದ ಉಡುಪಿಯಿಂದ ನಮ್ಮ ಊರಿಗೆ ಕಾನೂರು ಕೋಟೆ ನೋಡಲು ಆಗಮಿಸಿದ್ದಾರೆ. ಎಲ್ಲರ ಪರವಾಗಿ ಇವರಿಗೆ ನಮ್ಮ ಊರಿಗೆ ಸ್ವಾಗತ...’ ಎಂದು ಧ್ವನಿವರ್ಧಕದಲ್ಲಿ ಅನೌನ್ಸ್ ಮಾಡಿ ನನ್ನನ್ನು ತೀರಾ ಮುಜುಗರಕ್ಕೊಳಪಡಿಸಿದರು. ಅಲ್ಲೇ ಮುಂದಿನ ಸಾಲಿನಲ್ಲಿ ನನಗಾಗಿ ಕುರ್ಚಿಯೊಂದನ್ನು ಹಾಕಿಸಿದರು. ಸ್ವಲ್ಪ ಹೊತ್ತಿನ ಬಳಿಕ ಯಾರೋ ಬೆನ್ನ ಹಿಂದೆ ’ರಾಜೇಶ್..’ ಎಂದಾಗ ಹಿಂತಿರುಗಿ ನೋಡಿದರೆ ಗೋದಾವರಿಯವರು!
ದಬ್ಬೆ ಜಲಧಾರೆಗೆ ತೆರಳುವಾಗ ಹೊಸಗದ್ದೆಯಲ್ಲಿ ನಾಗರಾಜ್ ಎಂಬವರ ಮನೆ ಸಿಗುತ್ತದೆ. ಒಂದೆರಡು ಬಾರಿ ತೆರಳಿದ್ದರಿಂದ ಇವರ ಮನೆಯವರ ಪರಿಚಯ ನನಗಿತ್ತು. ಈ ನಾಗರಾಜರ ಮಗಳೇ ಗೋದಾವರಿ. ಇವರ ಮಗ ಇದೇ ಬಿಳಿಗಾರು ಶಾಲೆಯಲ್ಲಿ ಓದುತ್ತಿದ್ದು, ಆತನದ್ದೂ ಒಂದು ಸಣ್ಣ ಕಾರ್ಯಕ್ರಮವಿತ್ತು. ನನ್ನ ಹೆಸರನ್ನು ಅನೌನ್ಸ್ ಮಾಡಿದಾಗ ಹುಡುಕಿಕೊಂಡು ಬಂದು ಮಾತನಾಡಿಸಿದರು. ಬಳಿಕ ಮನೆಗೆ ಬರುವಂತೆ ಒತ್ತಾಯ ಮಾಡತೊಡಗಿದಾಗ, ಅನಿಲನಿಗೆ ಮುಂಜಾನೆ ೭ಕ್ಕೆ ಬರುವೆನೆಂದು ತಿಳಿಸಿ ಹೊಸಗದ್ದೆಯತ್ತ ಹೊರಟೆ. ಆ ದಿನ ರಾತ್ರಿ ಅನುಭವಿಸಿದಷ್ಟು ಚಳಿಯನ್ನು ಎಂದಿಗೂ ಅನುಭವಿಸಿರಲಿಲ್ಲ. ಎರಡು ದಪ್ಪನೆಯ ರಗ್ಗುಗಳನ್ನು ಹೊದ್ದು ಮಲಗಿದರೂ ಚಳಿ ತಡೆದುಕೊಳ್ಳಲಾಗುತ್ತಿರಲಿಲ್ಲ. ನಾನು ಗಡಗಡ ನಡುಗುವುದನ್ನು ನೋಡಿ ನಾಗರಾಜರ ಅಳಿಯ ಚಂದ್ರಶೇಖರ್ ಮತ್ತೊಂದು ರಗ್ಗನ್ನು ’ರಾತ್ರಿ ಚಳಿ ಜೋರಾದರೆ ಬೇಕಾಗಬಹುದು....’ ಎಂದು ನೀಡಿದರು.

ಮುಂಜಾನೆ ೭ಕ್ಕೆ ಬಿಳಿಗಾರಿನಲ್ಲಿ ಅನಿಲ ತಯಾರಾಗಿದ್ದ. ಕಾನೂರಿನಿಂದ ಮುಂದೆ ಕೋಟೆಯವರೆಗಿನ ೮ ಕಿಮಿ ರಸ್ತೆ ಹೆಚ್ಚಿನ ಕಡೆ ತರಗೆಲೆಗಳಿಂದ ಮುಚ್ಚಿಹೋಗಿದೆ. ಹೆಚ್ಚಿನೆಡೆ ರಸ್ತೆ ಕಾಡಿನಿಂದ ಆವೃತವಾಗಿದ್ದು ಕತ್ತಲೆಯ ಕೂಪದಂತಿದೆ. ಕೆಲವೊಂದೆಡೆ ಸಮತಟ್ಟಾದ ರಸ್ತೆಯಲ್ಲಿ ಸಲೀಸಾಗಿ ಸಾಗಬಹುದಾದರೆ ಇನ್ನು ಕೆಲವೆಡೆ ಮೈಯೆಲ್ಲಾ ಕಣ್ಣಾಗಿ ಸಾಗಬೇಕಾಗುತ್ತದೆ. ಕೆಲವೊಂದೆಡೆ ಭಾರಿ ಇಳಿಜಾರಾದರೆ ಮತ್ತೊಂದೆಡೆ ಕಡಿದಾದ ಏರು. ಯಮಾಹಾವಾಗಿದ್ದರಿಂದ ನಮ್ಮಿಬ್ಬರನ್ನೂ ಕೂರಿಸಿ ಸಲೀಸಾಗಿ ಮೇಲೇರಿತು. ಆದರೂ ಅಲ್ಲಲ್ಲಿ, ತರಗೆಲೆಗಳು ಯಾವ ಪರಿ ರಸ್ತೆಯನ್ನು ಮುಚ್ಚಿದ್ದವೆಂದರೆ ಬೈಕಿನ ಗಾಲಿಗಳು ಅವುಗಳಲ್ಲೇ ಹೂತುಹೋಗುತ್ತಿದ್ದವು. ದಾರಿಯಲ್ಲೊಂದೆಡೆ ತಿರುವಿನಲ್ಲಿ ದೂರದಲ್ಲಿ ಗೇರುಸೊಪ್ಪಾದ ಅಣೆಕಟ್ಟು ಗೋಚರಿಸುವುದು.
ಕೋಟೆಗೆ ಒಂದು ಕಿಮಿ ಮೊದಲು ಸುರೇಶ್ ಎಂಬವರ ಮನೆಗೆ ತೆರಳಿದೆವು. ಇಲ್ಲೇ ಬೈಕನ್ನಿರಿಸಿ ಕೋಟೆಯೆಡೆ ತೆರಳಿದೆವು. ಹೆಚ್ಚಿನ ಚಾರಣಿಗರು ಹೊಸಗದ್ದೆಯಲ್ಲಿಳಿದು ದಬ್ಬೆ ಮುಗಿಸಿ, ಅಲ್ಲಿಂದ ಕಾನೂರಿಗೆ ಬರುತ್ತಾರೆ. ಕಾನೂರಿನಲ್ಲಿ ರಾತ್ರಿ ತಂಗಿ ಮರುದಿನ ಕೋಟೆ ನೋಡಿ, ಗೇರುಸೊಪ್ಪಾದ ಹಾದಿ ತುಳಿದು ದೋಣಿಯಲ್ಲಿ ಶರಾವತಿಯನ್ನು ದಾಟಿ ಇನ್ನೂ ಸ್ವಲ್ಪ ನಡೆದರೆ ಗೇರುಸೊಪ್ಪಾ ತಲುಪುತ್ತಾರೆ.

ಸುರೇಶ್ ಮನೆಯಿಂದ ಕೋಟೆಯ ದಾರಿಯಲ್ಲಿ ಅಲ್ಲಲ್ಲಿ ಕೆಲವು ಅವಶೇಷಗಳು. ದೇವಸ್ಥಾನ, ಕಾಲುವೆಗಳಿದ್ದ ಕುರುಹುಗಳು. ಈಗ ಸುತ್ತಲೂ ಕಾಡು ಆವರಿಸಿದೆ. ಕೋಟೆಯ ದ್ವಾರ ಚಿಕ್ಕದಾಗಿದೆ. ಅಲ್ಲಲ್ಲಿ ಕಳ್ಳ ದ್ವಾರಗಳು. ೩ ಸುತ್ತಿನ ಕೋಟೆ ಇದಾಗಿದೆ. ವಿಶಾಲವಾದ ದಿಬ್ಬದ ಮೇಲೆ ಕಾನೂರು ಕೋಟೆ ಇರುವುದು. ಸಂಪೂರ್ಣವಾಗಿ ಕೋಟೆ ನೋಡುವುದಾದರೆ ೩ ದಿನಗಳು ಬೇಕು. ಕಾನೂರಿನಿಂದ ಬರುವಾಗ ಇಳಿಜಾರೊಂದು ಸಿಗುವಾಗಲೇ ಕೋಟೆಯಿರುವ ದಿಬ್ಬದ ದರ್ಶನವಾಗುವುದು. ೩ ದಿಕ್ಕುಗಳಲ್ಲಿ ಆಳವಾದ ಕಣಿವೆಯಿರುವುದು ಕಾನೂರು ಕೋಟೆಯ ವೈಶಿಷ್ಟ್ಯ.

ಗೇರುಸೊಪ್ಪಾದ ಕಾಳು ಮೆಣಸಿನ ರಾಣಿ ಎಂದೇ ಪ್ರಖ್ಯಾತವಾಗಿದ್ದ ಚನ್ನಭೈರಾದೇವಿಯ ರಾಜಧಾನಿಯಾಗಿ ಕಾನೂರು ಪ್ರಸಿದ್ಧಿ ಪಡೆದಿತ್ತು. ಬೇರೆ ದೇಶಗಳೊಂದಿಗೆ ಸಾಂಬಾರು ಪದಾರ್ಥಗಳ ವ್ಯವಹಾರದಲ್ಲಿ ಮುಂಚೂಣಿಯಲ್ಲಿದ್ದರಿಂದ ಚನ್ನಭೈರಾದೇವಿಯನ್ನು ’ಸಾಂಬಾರು ರಾಣಿ’ ಎಂದೂ ಗುರುತಿಸಲಾಗುತ್ತಿತ್ತು. ಈ ಕೋಟೆಯನ್ನೂ ಅವಳೇ ಕಟ್ಟಿಸಿದಳೆಂದು ಹೇಳಲಾಗುತ್ತದೆ. ಕೋಟೆಯ ಒಂದನೇ ಹಂತವನ್ನು ಕಲ್ಲಿನಲ್ಲಿ ಕಟ್ಟಲಾಗಿದ್ದು ಹೊರಗೋಡೆಯನ್ನೊಂದು ಬಿಟ್ಟು ಏನೂ ಉಳಿದಿಲ್ಲ. ಈ ಕಲ್ಲಿನ ಗೋಡೆಗಳನ್ನು ಕಾಡು ಆವರಿಸಿಕೊಂಡು ಬಿಟ್ಟಿದೆಯಾದರೂ ದೃಢವಾಗಿವೆ. ಎರಡನೇ ಸುತ್ತನ್ನು ಕೆಂಪು ಕಲ್ಲಿನಿಂದ ಕಟ್ಟಲಾಗಿದೆ. ಇಲ್ಲಿ ಅರಮನೆ, ದರ್ಬಾರ್, ಅಂತ:ಪುರ, ಉದ್ಯಾನವನ, ಗೋದಾಮು ಇತ್ಯಾದಿಗಳಿದ್ದವೆಂದು ಹೇಳಲಾಗುತ್ತದೆ. ಇಲ್ಲಿ ಕೆಲವೆಡೆ ಗುಂಡಿಗಳನ್ನು ತೋಡಲಾಗಿತ್ತು. ’ಇಲ್ಲೇಕೆ ಇಂಗುಗುಂಡಿಗಳನ್ನು ಮಾಡಿದ್ದೀರಾ’ ಎಂದು ಸುರೇಶರಲ್ಲಿ ಕೇಳಿದರೆ, ’ಇವು ಇಂಗುಗುಂಡಿಗಳಲ್ಲ. ನಿಧಿ ಹುಡುಕುವವರು ಅಗೆದ ಗುಂಡಿಗಳು!’ ಎನ್ನಬೇಕೆ. ೩ನೇ ಸುತ್ತನ್ನು ಇಟ್ಟಿಗೆಯಿಂದ ನಿರ್ಮಿಸಲಾಗಿದೆ. ಈ ಕೋಟೆಗೆ ಪ್ರವೇಶ ಮತ್ತು ನಿರ್ಗಮನ ಒಂದೇ ಬಾಗಿಲಿನಿಂದ.


ಕಾನೂರು ಕೋಟೆಯನ್ನು ಸತ್ಯಾನಾಶ ಮಾಡಿದವರೆಂದರೆ ಈ ನಿಧಿ ಹುಡುಕುವವರು. ಕೋಟೆಯ ತುತ್ತತುದಿಯಲ್ಲಿ ಸಂಪೂರ್ಣವಾಗಿ ಶಿಲೆಯಿಂದ ನಿರ್ಮಿಸಲಾಗಿರುವ ೨ ದೇವಾಲಯಗಳಿವೆ. ಇವುಗಳಲ್ಲಿ ಒಂದನ್ನಂತೂ ಗರ್ಭಗುಡಿಯನ್ನು ಕೂಡಾ ಬಿಡದೆ ಅಗೆದು ಹಾಕಲಾಗಿದೆ. ಎಷ್ಟು ಆಳಕ್ಕೆ ಅಗೆದಿದ್ದಾರೆಂದರೆ, ಏಣಿಯನ್ನು ಇಳಿಬಿಟ್ಟು ೧೦ ಅಡಿ ಆಳಕ್ಕೆ ಅಗೆದು ಹಾಕಲಾಗಿದೆ. ೨ನೇ ದೇವಸ್ಥಾನದಲ್ಲಿ ಯಾವುದೇ ಗುಂಡಿಗಳು ಇರಲಿಲ್ಲವಾದ್ದರಿಂದ, ಮೊದಲನೇ ದೇವಸ್ಥಾನದಲ್ಲಿ ನಿಧಿ ಶೋಧಕರಿಗೆ ಏನೂ ಸಿಗಲಿಕ್ಕಿರಲಿಲ್ಲ. ಸಿಕ್ಕಿದ್ದಿದ್ದರೆ ೨ನೇ ದೇವಸ್ಥಾನವನ್ನು ಹಾಗೆ ಬಿಡುತ್ತಿದ್ದರೇ? ದೇವಸ್ಥಾನಗಳ ಮುಂದಿದ್ದ ಸುಮಾರು ೨೦ ಅಡಿ ಎತ್ತರದ ಸ್ತಂಭವನ್ನು ಕೂಡಾ ಉರುಳಿಸಿ ಅದರ ಅಡಿಯಲ್ಲೂ ಅಗೆಯಲಾಗಿದೆ. ದೇವಸ್ಥಾನದ ದ್ವಾರದಲ್ಲಿದ್ದ ಕಲ್ಲಿನ ಪೀಠವೊಂದನ್ನು ಕಿತ್ತೊಯ್ಯುವ ಸಾಹಸವನ್ನೂ ಮಾಡಲಾಗಿದೆ. ಸ್ವಲ್ಪ ದೂರ ಇಳಿಜಾರು ಕೊನೆಗೊಳ್ಳುವಲ್ಲಿ ಈ ಪೀಠ ಬಿದ್ದಿದೆ. ಇಳಿಜಾರಿನಲ್ಲಿ ದೂಡಿಕೊಂಡು ತರಲಾಗಿದ್ದು, ನಂತರ ಅದನ್ನು ಎತ್ತಲೂ ಆಗದೆ ಹಾಗೆ ಬಿಟ್ಟುಹೋಗಲಾಗಿದೆ.

ಕಾನೂರು ಕೋಟೆಯಲ್ಲಿ ೧೨ ಕೆರೆಗಳಿವೆ. ಕೋಟೆಯನ್ನೆಲ್ಲಾ ಸುತ್ತಾಡಿದರೆ ಎಲ್ಲಾ ಕೆರೆಗಳನ್ನೂ ನೋಡಬಹುದು. ತನಗೆ ಗೊತ್ತಿದ್ದಷ್ಟು ಸ್ಥಳಗಳನ್ನು ಸುರೇಶ್ ನನಗೆ ತೋರಿಸಿದರು.

ಕೋಟೆಯ ೨ನೇ ಸುತ್ತಿನಿಂದ ಒಂದನೇ ಸುತ್ತಿಗೆ ಬರಲು ಶಾರ್ಟ್-ಕಟ್ ಒಂದಿದೆ. ಇದನ್ನು ಕಳ್ಳ ಮಾರ್ಗವೆನ್ನುತ್ತಾರೋ ಅಥವಾ ಶೀಘ್ರ ದಾರಿ ಎನ್ನುತ್ತಾರೋ ಅರಿಯೆ. ಆದರೆ ಇದು ಬಹಳ ಸುಂದರವಾಗಿತ್ತು ಮತ್ತು ಸ್ವಚ್ಛವಾಗಿತ್ತು ಕೂಡಾ. ಕೋಟೆಯಲ್ಲಿ ನಾನು ಇಷ್ಟಪಟ್ಟದ್ದು ದೇವಸ್ಥಾನಗಳು ಮತ್ತು ಈ ಕಳ್ಳದಾರಿ.

ಕಾನೂರು ಕೋಟೆಯ ಅರ್ಧಾಂಶಕ್ಕಿಂತಲೂ ಹೆಚ್ಚಿನ ಭಾಗವನ್ನು ಈಗ ಕಾಡು ಆವರಿಸಿಕೊಂಡಿದೆ. ಗೋಡೆಯ ಕಲ್ಲುಗಳು ಒಂದೊಂದಾಗಿ ಕಳಚಿಕೊಳ್ಳುತ್ತಿವೆ. ಕೋಟೆಯ ಗೋಡೆಗಳ ಮೇಲೆ ಕುಳಿತರೆ ಕೆಲವೊಂದೆಡೆ ಸುಂದರ ನೋಟ ಲಭ್ಯ. ಆದರೆ ಹೆಚ್ಚಿನೆಡೆ ಕೋಟೆಯ ದುರವಸ್ಥೆಯನ್ನು ನೋಡಿ ಬೇಜಾರಾಗದೇ ಇರದು.