ಗುರುವಾರ, ಸೆಪ್ಟೆಂಬರ್ 06, 2012

ಚನ್ನಕೇಶವ ದೇವಾಲಯ - ನಾಗಲಾಪುರ


ಇಲ್ಲಿ ದೊರೆತಿರುವ ಕೊನೆಯ ಹೊಯ್ಸಳ ದೊರೆ ೩ನೇ ಬಲ್ಲಾಳನ ಕಾಲದ ಶಾಸನಗಳ ಪ್ರಕಾರ ನಾಗಲಾಪುರ ಒಂದು ಪ್ರಸಿದ್ಧ ಅಗ್ರಹಾರವಾಗಿದ್ದು, ಹೊಯ್ಸಳ ಕಾಲದ ಇತರ ಅಗ್ರಹಾರಗಳಂತೆ ಇಲ್ಲೂ ವಿಷ್ಣು (ಚನ್ನಕೇಶವ) ಮತ್ತು ಶಿವ (ಕೇದಾರೇಶ್ವರ) ದೇವಾಲಯಗಳ ನಿರ್ಮಾಣವಾಯಿತು ಎಂದು ತಿಳಿದುಬಂದಿದೆ. ಊರ ನಟ್ಟನಡುವೆ ಪೂರ್ವಾಭಿಮುಖವಾಗಿರುವ ಚನ್ನಕೇಶವ ದೇವಾಲಯವನ್ನು ಇಸವಿ ೧೨೬೦ರಲ್ಲಿ ಹೊಯ್ಸಳ ದೊರೆ ೩ನೇ ನರಸಿಂಹನ ಆಳ್ವಿಕೆಯ ಕಾಲದಲ್ಲಿ ನಿರ್ಮಿಸಲಾಯಿತು. ಶಿಥಿಲಗೊಂಡಿದ್ದ ದೇವಾಲಯವನ್ನು ಪ್ರಾಚ್ಯ ವಸ್ತು ಇಲಾಖೆ ಶ್ರಮವಹಿಸಿ ಜೀರ್ಣೋದ್ಧಾರಗೊಳಿಸಿ ಕಾಪಾಡಿಕೊಂಡಿದೆ.


ಜಗತಿಯ ಮೇಲಿರುವ ದೇವಾಲಯದ ಗೋಪುರ ಮತ್ತು ಮುಖಮಂಟಪ ಬಿದ್ದುಹೋಗಿವೆ. ನವರಂಗದ ಹೊರಗೋಡೆಯೂ ಒಂದು ಪಾರ್ಶ್ವದಲ್ಲಿ ಸಂಪೂರ್ಣವಾಗಿ ನಾಶವಾಗಿದ್ದು ಅಲ್ಲಿ ಬದಲಿ ಕಲ್ಲುಗಳನ್ನು ಬಳಸಿ ಪುನ: ನಿರ್ಮಿಸಲಾಗಿದೆ. ಗರ್ಭಗುಡಿಯ ಹೊರಗೋಡೆ ಮಾತ್ರ ಏನೂ ಹಾನಿಯಾಗದೆ ಉಳಿದುಕೊಂಡಿದೆ.


ನವರಂಗದಲ್ಲಿರುನ ನಾಲ್ಕು ಕಂಬಗಳನ್ನು ಸುಂದರವಾಗಿ ನಿರ್ಮಿಸಲಾಗಿದೆ. ಬಹಳ ಹಿಂದೆ ಈ ಕಂಬಗಳಿಗೆ ಬಳಿಯಲಾಗಿದ್ದ ಸುಣ್ಣವನ್ನು ಸಾಧ್ಯವಾದಷ್ಟು ಮಟ್ಟಿಗೆ ಅಳಿಸಲಾಗಿದೆ. ನವರಂಗದ ಛಾವಣಿಯಲ್ಲೂ ಉತ್ತಮ ಕೆತ್ತನೆಗಳಿವೆ.


ಅಂತರಾಳದ ದ್ವಾರವು ಆರು ತೋಳುಗಳನ್ನು ಹೊಂದಿದ್ದು, ಇವುಗಳಲ್ಲಿ ೩ನೇ ಮತ್ತು ೫ನೇ ತೋಳುಗಳನ್ನೇ ಜಾಲಂಧ್ರಗಳನ್ನಾಗಿ ಮಾರ್ಪಾಡಿಸಿ ಶಿಲ್ಪಿ ತನ್ನ ಚಾಕಚಕ್ಯತೆಯನ್ನು ತೋರಿದ್ದಾನೆ. ಗಮನಿಸಬೇಕಾದ ಇನ್ನೊಂದು ಅಂಶವೆಂದರೆ ಅಂತರಾಳದ ದ್ವಾರದ ಮೇಲೆ ವಿಷ್ಣುವಿನ ಎರಡು ರೂಪಗಳ ಕೆತ್ತನೆಯಿರುವುದು. ಲಲಾಟದಲ್ಲಿ ಒಂದು ಕೆತ್ತನೆಯಿದ್ದರೆ ಇನ್ನೊಂದು ದ್ವಾರದ ಮೇಲಿನ ಅಡ್ಡಪಟ್ಟಿಯಲ್ಲಿ ಇಕ್ಕೆಲಗಳಲ್ಲಿ ಮಕರಗಳಿಂದ ಅಲಂಕೃತಗೊಂಡು ಇದೆ.


ಗರ್ಭಗುಡಿಯಲ್ಲಿ ಮೂರ್ತಿಗೆ ಸಂಬಂಧಿಸಿದಂತೆ ದ್ವಂದ್ವಗಳಿವೆ. ಮೊದಲು ಇಲ್ಲಿ ಚನ್ನಕೇಶವನ ವಿಗ್ರಹವಿದ್ದು ನಂತರ ವಿಜಯನಗರ ಅರಸರ ಆಳ್ವಿಕೆಯ ಸಮಯದಲ್ಲಿ ವೆಂಕಟೇಶ್ವರನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು ಎಂದು ಹೇಳಲಾಗುತ್ತದೆ. ಅದೇನೇ ಇರಲಿ ವಿಗ್ರಹವಂತೂ ಸುಂದರವಾಗಿದೆ.


ದೇವಾಲಯದ ಹೊರಗೋಡೆಯಲ್ಲಿ ಆರು ಪಟ್ಟಿಕೆಗಳಿವೆ. ಮೊದಲ ಮೂರು ಪಟ್ಟಿಕೆಗಳಲ್ಲಿ ಕ್ರಮವಾಗಿ ಆನೆ, ಅಶ್ವಾರೋಹಿಗಳು ಮತ್ತು ಬಳ್ಳಿಸುರುಳಿಯನ್ನು ಕೆತ್ತಲಾಗಿದೆ. ಅಶ್ವಾರೋಹಿಗಳ ಕೆತ್ತನೆಯಂತೂ ಮನೋಜ್ಞವಾಗಿದೆ. ನಾಲ್ಕನೇ ಪಟ್ಟಿಕೆ ಖಾಲಿಯಿದೆ. ಪೌರಾಣಿಕ ಕಥೆಗಳನ್ನು ಬಿಂಬಿಸುವ ಕೆತ್ತನೆಯ ಕೆಲಸ ಯಾವುದೋ ಕಾರಣದಿಂದ ಬಾಕಿ ಉಳಿದಿರಬಹುದು. ಐದನೇ ಪಟ್ಟಿಕೆಯಲ್ಲಿ ಮಕರಗಳಿದ್ದರೆ ಆರನೇ ಪಟ್ಟಿಕೆಯಲ್ಲಿ ಹಂಸಗಳಿವೆ.


ಪಟ್ಟಿಕೆಗಳ ಮೇಲೆ ಹೊರಗೋಡೆಯ ಮಧ್ಯಭಾಗದಲ್ಲಿ ಉದ್ದಕ್ಕೂ ದೇವ ದೇವಿಗಳ ಸುಂದರ ಕೆತ್ತನೆಗಳಿವೆ. ಒಂದಕ್ಕಿಂತ ಒಂದು ಮನಸೂರೆಗೊಳ್ಳುವ ಕಲಾಕೃತಿಗಳು. ಎಷ್ಟು ಕಣ್ತುಂಬಿಕೊಂಡರೂ ಮತ್ತೆ ಮತ್ತೆ ನೋಡಬೇಕೆನ್ನುವ ಬಯಕೆ. ಈ ಎಲ್ಲಾ ಕೆತ್ತನೆಗಳನ್ನು ನೋಡುತ್ತಾ ಹೋದರೆ ಸಮಯ ಕಳೆದದ್ದೇ ಅರಿವಾಗುವುದಿಲ್ಲ. ಈ ಅಜ್ಞಾತ ಶಿಲ್ಪಿಯ ಕೈಚಳಕಕ್ಕೆ ಮಾರುಹೋಗದೆ ಇರಲು ಅಸಾಧ್ಯ.

ಮಂಗಳವಾರ, ಸೆಪ್ಟೆಂಬರ್ 04, 2012

ಸೋಮೇಶ್ವರ ದೇವಾಲಯ - ಕೋಟುಮಚಗಿ


ಶಾಸನಗಳಲ್ಲಿ ಈ ಊರನ್ನು ’ಉಮಚಗಿ’ ಎಂದು ಕರೆಯಲಾಗಿದೆ. ನಂತರದ ದಿನಗಳಲ್ಲಿ ಇಲ್ಲೊಂದು ಕೋಟೆ ಅಸ್ತಿತ್ವಕ್ಕೆ ಬಂದಿದ್ದರಿಂದ ಊರಿನ ಹೆಸರು ’ಕೋಟುಮಚಗಿ’ ಆಗಿದೆ ಎಂದು ಇತಿಹಾಸಕಾರರ ಅಭಿಪ್ರಾಯ. ಇಲ್ಲಿರುವ ಸೋಮೆಶ್ವರ ದೇವಾಲಯವನ್ನು ೧೧ನೇ ಶತಮಾನದಲ್ಲಿ ಚಾಲುಕ್ಯ ಶೈಲಿಯಲ್ಲಿ ನಿರ್ಮಿಸಲಾಗಿದೆ.


ದೇವಾಲಯದ ಮುಖಮಂಟಪ ಮತ್ತು ನವರಂಗವನ್ನು ಸಂಪೂರ್ಣವಾಗಿ ನವೀಕರಿಸಲಾಗಿದೆ. ಗರ್ಭಗುಡಿಯ ಹೊರಗೋಡೆ ಮಾತ್ರ ತನ್ನ ಮೂಲರೂಪದಲ್ಲಿ ಉಳಿದುಕೊಂಡಿದೆ. ಶಾಸನಗಳಲ್ಲಿ ಈ ದೇವಾಲಯವನ್ನು ಸ್ವಯಂಭೂ ಸೋಮೇಶ್ವರ ದೇವಾಲಯವೆಂದು ಕರೆಯಲಾಗಿದೆ.


ನವರಂಗದಲ್ಲಿ ಸ್ಠಳಾವಕಾಶವೇ ಇಲ್ಲ! ಮೊದಲೇ ಸಣ್ಣದಾಗಿರುವ ನವರಂಗದಲ್ಲಿ ಆಷ್ಟು ಒತ್ತೊತ್ತಾಗಿ ಕಂಬಗಳನ್ನು ರಚಿಸಿ, ಕಂಬದಿಂದ ಕಂಬಕ್ಕೆ ಕಮಾನುಗಳನ್ನು ರಚಿಸಲಾಗಿದೆ. ಮಸೀದಿಗಳಲ್ಲಿ ಮತ್ತು ಇತರ ಇಸ್ಲಾಮಿಕ್ ಕಟ್ಟಡಗಳಲ್ಲಿರುವ ಕಮಾನುಗಳ ರಚನೆಯನ್ನು ಇಲ್ಲಿ ಕಂಡು ಬಹಳ ಆಶ್ಚರ್ಯವಾಯಿತು. ಊರಿನವರ ಪ್ರಕಾರ ಭಾಗಶ: ಹಾನಿಗೊಳಗಾಗಿದ್ದ ದೇವಾಲಯವನ್ನು ಬಿಜಾಪುರ ಸುಲ್ತಾನರ ಕಾಲದಲ್ಲಿ ಅಭಿವೃದ್ಧಿಪಡಿಸಲಾಗಿರುವುದರಿಂದ ಈ ಕಮಾನುಗಳ ರಚನೆಯಾಗಿರಬಹುದು.


ಗರ್ಭಗುಡಿ ಸಂಪೂರ್ಣವಾಗಿ ಮಾರ್ಬಲೀಕರಣಗೊಂಡಿದೆ. ಅಂತರಾಳದಲ್ಲಿ ನಂದಿಯ ಮೂರ್ತಿಯಿದೆ. ಶಾಸನಗಳಿಂದ ಈ ಊರು ಅಗ್ರಹಾರವಾಗಿತ್ತು ಎಂದು ತಿಳಿದುಬರುತ್ತದೆ. ಮಹಾಪಾಂಡಿತ್ಯ ಹೊಂದಿದ್ದ ವಿದ್ವಾಂಸರು ಮತ್ತು ಉನ್ನತ ವರ್ಗದ ಬ್ರಾಹ್ಮಣರು ನೆಲೆಸಿದ್ದ ಈ ಊರು ಒಂದು ಪ್ರಸಿದ್ಧ ವಿದ್ಯಾಕೇಂದ್ರವಾಗಿತ್ತು.


ಊರಿನ ಎರಡು ಕೆರೆಗಳ ಮಧ್ಯೆ ಎತ್ತರದ ಸ್ಥಳದಲ್ಲಿ ಆಕರ್ಷಕ ಪ್ರವೇಶದ್ವಾರವಿರುವ ಪ್ರಾಂಗಣದಲ್ಲಿ ಸೋಮೇಶ್ವರ ದೇವಾಲಯವಿದೆ. ದೇವಾಲಯದ ಸುತ್ತಲೂ ತಿಳಿಯಾದ ಹುಲ್ಲುಹಾಸು ಮತ್ತು ಸದ್ದಿಲ್ಲದ ಪ್ರಶಾಂತ ವಾತಾವರಣ ಇಲ್ಲಿ ಬಹಳ ಸಮಯ ಕಳೆಯಲು ನನಗೆ ಪ್ರೇರಣೆ ನೀಡಿತು. ಸೂರ್ಯ ಮುಳುಗುವವರೆಗೂ ಇಲ್ಲೇ ಇದ್ದು ನಂತರ ಮನೆಯೆಡೆ ಹೊರಟೆವು.


ಐತಿಹಾಸಿಕವಾಗಿ ಕೋಟುಮಚಗಿ ಬಹಳ ಪ್ರಾಮುಖ್ಯತೆಯನ್ನು ಹೊಂದಿರುವ ಸ್ಥಳ. ಇಲ್ಲಿ ಕಲ್ಮೇಶ್ವರ ಎಂಬ ಪ್ರಾಚೀನ ದೇವಾಲಯವೂ ಇದೆ. ಆದರೆ ಅದೀಗ ಸಂಪೂರ್ಣವಾಗಿ ನವೀಕರಣಗೊಂಡಿದೆ. ಸೋಮೇಶ್ವರ ದೇವಾಲಯ ನಿರ್ಮಾಣಗೊಂಡ ಬಗ್ಗೆ ಇರುವ ಐತಿಹಾಸಿಕ ಹಿನ್ನೆಲೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಮಹೇಶ ಸಂಕನಗೌಡರ ಇವರ ಬ್ಲಾಗಿನಲ್ಲಿ ಓದಬಹುದು. ಕೋಟುಮಚಗಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಇಲ್ಲಿ ಓದಬಹುದು.

ಮಾಹಿತಿ: ಪ್ರಾಚ್ಯ ವಸ್ತು ಇಲಾಖೆ

ಭಾನುವಾರ, ಸೆಪ್ಟೆಂಬರ್ 02, 2012

ಬಿಲ್ಲೇಶ್ವರ ಮತ್ತು ಗಣಪತಿ ದೇವಾಲಯಗಳು - ಹಾನಗಲ್


ಕೇವಲ ಗರ್ಭಗುಡಿ ಮಾತ್ರ ಇರುವ ದೇವಾಲಯವಾದರೂ ಬಾಗಿಲವಾಡದಲ್ಲಿ ಉತ್ಕೃಷ್ಟ ಕೆತ್ತನೆಗಳನ್ನು ಹೊಂದಿರುವ ದೇವಾಲಯವಿದು. ಗರ್ಭಗುಡಿಯಲ್ಲಿ ಬಿಲ್ಲೇಶ್ವರ ಎಂದು ಕರೆಯಲ್ಪಡುವ ಸುಂದರವಾದ ಲಿಂಗವಿದ್ದು, ದಿನಾಲೂ ಪೂಜೆ ಸಲ್ಲಿಸಲಾಗುತ್ತದೆ.


ದೇವಾಲಯದ ಮುಂಭಾಗ ಏನೂ ಉಳಿದಿರಲಿಲ್ಲ. ಪ್ರಾಚ್ಯ ವಸ್ತು ಇಲಾಖೆ ಬದಲಿ ಕಲ್ಲುಗಳನ್ನು ಬಳಸಿ ಪುನ: ನಿರ್ಮಿಸಿದೆ. ಕಲ್ಯಾಣ ಚಾಲುಕ್ಯ ಶೈಲಿಯ ಈ ದೇವಾಲಯದ ಹೊರಗೋಡೆಯಲ್ಲಿ ಕೆಲವು ಗೋಪುರಗಳನ್ನು ಕಾಣಬಹುದು. ಈ ಗೋಪುರಗಳ ಕೆಳಗೆ ಮಂಟಪಗಳಿದ್ದು, ಇವುಗಳ ಒಳಗೆ ಮೊದಲು ಭಿತ್ತಿಗಳಿದ್ದಿರಬಹುದು. ಈಗ ಏನೂ ಇಲ್ಲ.


ದೇವಾಲಯದ ದ್ವಾರವು ೫ ತೋಳುಗಳನ್ನು ಹೊಂದಿದ್ದು ಮನಮೋಹಕ ಕೆತ್ತನೆಗಳನ್ನು ಹೊಂದಿದೆ. ಈ ತೋಳುಗಳಲ್ಲಿ ಕ್ರಮವಾಗಿ ವಜ್ರತೋರಣ, ನಾಗ ನಾಗಿಣಿ, ನೃತ್ಯಗಾರರು ಸಂಗೀತಗಾರರು, ವಿವಿಧ ಪ್ರಾಣಿಗಳು ಮತ್ತು ಉದ್ದನೆಯ ಬಳ್ಳಿಯನ್ನು ಅದ್ಭುತವಾಗಿ ಕೆತ್ತಲಾಗಿದೆ.


ನಾಗದೇವ ಮತ್ತು ನಾಗದೇವತೆಯರ ಬಾಲದ ಭಾಗವನ್ನು ಸುರುಳಿ ಸುತ್ತಿ ಕೆತ್ತಿರುವುದು ಶಿಲ್ಪಿಯ ನೈಪುಣ್ಯತೆಗೆ ಸಾಕ್ಷಿ. ದ್ವಾರದ ಮೇಲಿರುವ ಗಜಲಕ್ಷ್ಮೀಯ ಕೆತ್ತನೆಯೂ ಸ್ಫುಟವಾಗಿದ್ದು ಆಕರ್ಷಕವಾಗಿದೆ.


ದ್ವಾರದ ತಳಭಾಗದಲ್ಲಿ ೫ ಶಿಲ್ಪಗಳಿವೆ. ನಡುವೆ ಇರುವುದು ಮನ್ಮಥ. ಈತನ ಒಂದು ಪಾರ್ಶ್ವದಲ್ಲಿ ರತಿ ಮತ್ತು ಇನ್ನೊಂದು ಪಾರ್ಶ್ವದಲ್ಲಿ ದಕ್ಷ (ಟಗರಿನ ತಲೆಯಿರುವ ದೇವತೆ). ದಕ್ಷನ ಬದಿಯಲ್ಲಿ ಆತನ ಸೇವಕ ಮತ್ತು ರತಿಯ ಪಕ್ಕ ಆಕೆಯ ಸೇವಕಿ.


 ನಿಬ್ಬೆರಗಿನಿಂದ ಆ ಕೆತ್ತನೆಗಳನ್ನು ಬಹಳಷ್ಟು ಸಮಯ ನೋಡುತ್ತಾ ಇದ್ದೆ. ಬಿಲ್ಲೇಶ್ವರನ ದ್ವಾರವನ್ನಾದರೂ ನೋಡಲು ಹಾನಗಲ್‍ಗೆ ಭೇಟಿ ನೀಡಬೇಕು.

ಅಂದು - ಇಂದು:


ವರ್ಣ ಚಿತ್ರ ೨೦೧೧ರದ್ದು. ಕಪ್ಪು ಬಿಳುಪು ಚಿತ್ರ ಇಸವಿ ೧೮೫೬ರಲ್ಲಿ ತೆಗೆದದ್ದು. ೧೫೬ ವರ್ಷಗಳ ಹಿಂದೆ ಬಿಲ್ಲೇಶ್ವರ ದೇವಾಲಯ ಹೀಗಿತ್ತು. ದ್ವಾರದ ಲಲಾಟ ದೇವಾಲಯದ ಮುಂದೆ ಬಿದ್ದಿರುವುದನ್ನು ಗಮನಿಸಿ. ಆಗ ಅದನ್ನೇ ಮೆಟ್ಟಿಲನ್ನಾಗಿ ಬಳಸಲಾಗುತ್ತಿತ್ತೇನೋ? ಪ್ರಾಚ್ಯ ವಸ್ತು ಇಲಾಖೆ ಎಂಬ ವಿಭಾಗ ಅಸ್ತಿತ್ವಕ್ಕೆ ಬರದೇ ಇದ್ದಿದ್ದರೆ ನಾವು ಎಷ್ಟನ್ನೆಲ್ಲಾ ಶಾಶ್ವತವಾಗಿ ಕಳೆದುಕೊಳ್ಳುತ್ತಿದ್ದೆವು!

ಗಣಪತಿ ದೇವಾಲಯ:


ರಾಜ್ಯದಲ್ಲಿ ಇಂತಹ ದೇವಾಲಯ ಬಹಳ ಅಪರೂಪ (ಇರಲಾರದು). ದಕ್ಷಿಣಾಭಿಮುಖವಾಗಿರುವ ಈ ದೇವಾಲಯದ ಪ್ರಮುಖ ವೈಶಿಷ್ಟ್ಯವೆಂದರೆ ಇದರ ಶಿಖರ. ’ಭೂಮಿಜ ಶಿಖರ’ ಶೈಲಿಯನ್ನು ಹೊಂದಿರುವ ಗಣಪತಿ ದೇವಾಲಯ ಮುಖಮಂಟಪ, ನವರಂಗ, ಅಂತರಾಳ ಮತ್ತು ಗರ್ಭಗುಡಿಯನ್ನು ಹೊಂದಿದೆ. ಇಂತಹ ಶಿಖರ ಶೈಲಿ ಹೆಚ್ಚಾಗಿ ಉತ್ತರ ಭಾರತದ ದೇವಾಲಯಗಳಲ್ಲಿ ಕಾಣಬರುತ್ತದೆ.


ಮುಖಮಂಟಪವು ಕಕ್ಷಾಸನವನ್ನು ಹೊಂದಿದೆ. ನವರಂಗದ ನಾಲ್ಕು ಕಂಬಗಳ ನಡುವಿರುವ ಅಂಕಣದಲ್ಲಿ ಸುಂದರ ತಾವರೆಯನ್ನು ಕೆತ್ತಲಾಗಿದೆ.


ನಾಲ್ಕು ತೋಳುಗಳ ದ್ವಾರವಿರುವ ಗರ್ಭಗುಡಿಯಲ್ಲಿ ಗಣೇಶನ ಮೂರ್ತಿಯಿದೆ. ಗಣೇಶನನ್ನು ಪದ್ಮದ ಮೇಲೆ ಕೂರಿಸಿರುವುದು ಈ ದೇವಾಲಯದ ಇನ್ನೊಂದು ಆಕರ್ಷಣೆ.

ಅಂದು - ಇಂದು:


೧೮೮೫ ರಲ್ಲಿ ಗಣಪತಿ ದೇವಾಲಯ ಹೀಗಿತ್ತು. ಇಂದಿಗೂ ಸ್ವಲ್ಪ ಬದಲಾವಣೆ ಕಂಡದ್ದು ಬಿಟ್ಟರೆ ಹಾಗೇ ಇದೆ. ಛಾವಣಿಯನ್ನು ಈಗ ಸಂಪೂರ್ಣವಾಗಿ ಕಾಂಕ್ರೀಟ್ ಹಾಕಿ ದುರಸ್ತಿ ಮಾಡಲಾಗಿದೆ. ಕಕ್ಷಾಸನ ಮತ್ತು ಛಾವಣಿಯ ನಡುವಿರುವ ಅಂತರವನ್ನು ಊರಿನವರೇ ಮುಚ್ಚಿರುವುದನ್ನು ಗಮನಿಸಿ. ದೇವಾಲಯ ’ಸೆಗಣಿ ರೊಟ್ಟಿ’ ಒಣಗಿಸಲು ಬಳಕೆಯಾಗುತ್ತಿದ್ದ ಸಮಯವದು. ಚಿತ್ರದಲ್ಲಿ ಕಟ್ಟಿಗೆಗಳ ರಾಶಿ ಇದ್ದಲ್ಲೇ ಈಗ ಮನೆಯಿರುವುದರಿಂದ ಇದೇ ಜಾಗದಲ್ಲಿ ನಿಂತು ಚಿತ್ರ ತೆಗೆಯುವುದು ಅಸಾಧ್ಯ.