ಗುರುವಾರ, ಸೆಪ್ಟೆಂಬರ್ 06, 2012

ಚನ್ನಕೇಶವ ದೇವಾಲಯ - ನಾಗಲಾಪುರ


ಇಲ್ಲಿ ದೊರೆತಿರುವ ಕೊನೆಯ ಹೊಯ್ಸಳ ದೊರೆ ೩ನೇ ಬಲ್ಲಾಳನ ಕಾಲದ ಶಾಸನಗಳ ಪ್ರಕಾರ ನಾಗಲಾಪುರ ಒಂದು ಪ್ರಸಿದ್ಧ ಅಗ್ರಹಾರವಾಗಿದ್ದು, ಹೊಯ್ಸಳ ಕಾಲದ ಇತರ ಅಗ್ರಹಾರಗಳಂತೆ ಇಲ್ಲೂ ವಿಷ್ಣು (ಚನ್ನಕೇಶವ) ಮತ್ತು ಶಿವ (ಕೇದಾರೇಶ್ವರ) ದೇವಾಲಯಗಳ ನಿರ್ಮಾಣವಾಯಿತು ಎಂದು ತಿಳಿದುಬಂದಿದೆ. ಊರ ನಟ್ಟನಡುವೆ ಪೂರ್ವಾಭಿಮುಖವಾಗಿರುವ ಚನ್ನಕೇಶವ ದೇವಾಲಯವನ್ನು ಇಸವಿ ೧೨೬೦ರಲ್ಲಿ ಹೊಯ್ಸಳ ದೊರೆ ೩ನೇ ನರಸಿಂಹನ ಆಳ್ವಿಕೆಯ ಕಾಲದಲ್ಲಿ ನಿರ್ಮಿಸಲಾಯಿತು. ಶಿಥಿಲಗೊಂಡಿದ್ದ ದೇವಾಲಯವನ್ನು ಪ್ರಾಚ್ಯ ವಸ್ತು ಇಲಾಖೆ ಶ್ರಮವಹಿಸಿ ಜೀರ್ಣೋದ್ಧಾರಗೊಳಿಸಿ ಕಾಪಾಡಿಕೊಂಡಿದೆ.


ಜಗತಿಯ ಮೇಲಿರುವ ದೇವಾಲಯದ ಗೋಪುರ ಮತ್ತು ಮುಖಮಂಟಪ ಬಿದ್ದುಹೋಗಿವೆ. ನವರಂಗದ ಹೊರಗೋಡೆಯೂ ಒಂದು ಪಾರ್ಶ್ವದಲ್ಲಿ ಸಂಪೂರ್ಣವಾಗಿ ನಾಶವಾಗಿದ್ದು ಅಲ್ಲಿ ಬದಲಿ ಕಲ್ಲುಗಳನ್ನು ಬಳಸಿ ಪುನ: ನಿರ್ಮಿಸಲಾಗಿದೆ. ಗರ್ಭಗುಡಿಯ ಹೊರಗೋಡೆ ಮಾತ್ರ ಏನೂ ಹಾನಿಯಾಗದೆ ಉಳಿದುಕೊಂಡಿದೆ.


ನವರಂಗದಲ್ಲಿರುನ ನಾಲ್ಕು ಕಂಬಗಳನ್ನು ಸುಂದರವಾಗಿ ನಿರ್ಮಿಸಲಾಗಿದೆ. ಬಹಳ ಹಿಂದೆ ಈ ಕಂಬಗಳಿಗೆ ಬಳಿಯಲಾಗಿದ್ದ ಸುಣ್ಣವನ್ನು ಸಾಧ್ಯವಾದಷ್ಟು ಮಟ್ಟಿಗೆ ಅಳಿಸಲಾಗಿದೆ. ನವರಂಗದ ಛಾವಣಿಯಲ್ಲೂ ಉತ್ತಮ ಕೆತ್ತನೆಗಳಿವೆ.


ಅಂತರಾಳದ ದ್ವಾರವು ಆರು ತೋಳುಗಳನ್ನು ಹೊಂದಿದ್ದು, ಇವುಗಳಲ್ಲಿ ೩ನೇ ಮತ್ತು ೫ನೇ ತೋಳುಗಳನ್ನೇ ಜಾಲಂಧ್ರಗಳನ್ನಾಗಿ ಮಾರ್ಪಾಡಿಸಿ ಶಿಲ್ಪಿ ತನ್ನ ಚಾಕಚಕ್ಯತೆಯನ್ನು ತೋರಿದ್ದಾನೆ. ಗಮನಿಸಬೇಕಾದ ಇನ್ನೊಂದು ಅಂಶವೆಂದರೆ ಅಂತರಾಳದ ದ್ವಾರದ ಮೇಲೆ ವಿಷ್ಣುವಿನ ಎರಡು ರೂಪಗಳ ಕೆತ್ತನೆಯಿರುವುದು. ಲಲಾಟದಲ್ಲಿ ಒಂದು ಕೆತ್ತನೆಯಿದ್ದರೆ ಇನ್ನೊಂದು ದ್ವಾರದ ಮೇಲಿನ ಅಡ್ಡಪಟ್ಟಿಯಲ್ಲಿ ಇಕ್ಕೆಲಗಳಲ್ಲಿ ಮಕರಗಳಿಂದ ಅಲಂಕೃತಗೊಂಡು ಇದೆ.


ಗರ್ಭಗುಡಿಯಲ್ಲಿ ಮೂರ್ತಿಗೆ ಸಂಬಂಧಿಸಿದಂತೆ ದ್ವಂದ್ವಗಳಿವೆ. ಮೊದಲು ಇಲ್ಲಿ ಚನ್ನಕೇಶವನ ವಿಗ್ರಹವಿದ್ದು ನಂತರ ವಿಜಯನಗರ ಅರಸರ ಆಳ್ವಿಕೆಯ ಸಮಯದಲ್ಲಿ ವೆಂಕಟೇಶ್ವರನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು ಎಂದು ಹೇಳಲಾಗುತ್ತದೆ. ಅದೇನೇ ಇರಲಿ ವಿಗ್ರಹವಂತೂ ಸುಂದರವಾಗಿದೆ.


ದೇವಾಲಯದ ಹೊರಗೋಡೆಯಲ್ಲಿ ಆರು ಪಟ್ಟಿಕೆಗಳಿವೆ. ಮೊದಲ ಮೂರು ಪಟ್ಟಿಕೆಗಳಲ್ಲಿ ಕ್ರಮವಾಗಿ ಆನೆ, ಅಶ್ವಾರೋಹಿಗಳು ಮತ್ತು ಬಳ್ಳಿಸುರುಳಿಯನ್ನು ಕೆತ್ತಲಾಗಿದೆ. ಅಶ್ವಾರೋಹಿಗಳ ಕೆತ್ತನೆಯಂತೂ ಮನೋಜ್ಞವಾಗಿದೆ. ನಾಲ್ಕನೇ ಪಟ್ಟಿಕೆ ಖಾಲಿಯಿದೆ. ಪೌರಾಣಿಕ ಕಥೆಗಳನ್ನು ಬಿಂಬಿಸುವ ಕೆತ್ತನೆಯ ಕೆಲಸ ಯಾವುದೋ ಕಾರಣದಿಂದ ಬಾಕಿ ಉಳಿದಿರಬಹುದು. ಐದನೇ ಪಟ್ಟಿಕೆಯಲ್ಲಿ ಮಕರಗಳಿದ್ದರೆ ಆರನೇ ಪಟ್ಟಿಕೆಯಲ್ಲಿ ಹಂಸಗಳಿವೆ.


ಪಟ್ಟಿಕೆಗಳ ಮೇಲೆ ಹೊರಗೋಡೆಯ ಮಧ್ಯಭಾಗದಲ್ಲಿ ಉದ್ದಕ್ಕೂ ದೇವ ದೇವಿಗಳ ಸುಂದರ ಕೆತ್ತನೆಗಳಿವೆ. ಒಂದಕ್ಕಿಂತ ಒಂದು ಮನಸೂರೆಗೊಳ್ಳುವ ಕಲಾಕೃತಿಗಳು. ಎಷ್ಟು ಕಣ್ತುಂಬಿಕೊಂಡರೂ ಮತ್ತೆ ಮತ್ತೆ ನೋಡಬೇಕೆನ್ನುವ ಬಯಕೆ. ಈ ಎಲ್ಲಾ ಕೆತ್ತನೆಗಳನ್ನು ನೋಡುತ್ತಾ ಹೋದರೆ ಸಮಯ ಕಳೆದದ್ದೇ ಅರಿವಾಗುವುದಿಲ್ಲ. ಈ ಅಜ್ಞಾತ ಶಿಲ್ಪಿಯ ಕೈಚಳಕಕ್ಕೆ ಮಾರುಹೋಗದೆ ಇರಲು ಅಸಾಧ್ಯ.

2 ಕಾಮೆಂಟ್‌ಗಳು:

Srik ಹೇಳಿದರು...

ಇಷ್ಟೆಲ್ಲಾ ಭವ್ಯ ದೇಗುಲಗಳನ್ನು ಪಡೆದ ನಮ್ಮ ನಾಡೇ ಧನ್ಯ! ಅಬ್ಬಾ! ಒಂದೊಂದೂ ದೇಗುಲದ್ದು ಒಂದೊಂದು ಅದ್ಭುತ ಕಥೆ!

ಇವನ್ನೆಲ್ಲಾ ಬೆಳಕಿಗೆ ತರುತ್ತಿರುವ ನಿಮ್ಮ ಬ್ಲಾಗಿಗೆ ಹಾಗು ನಿಮಗೆ ಎಷ್ಟು ಧನ್ಯವಾದಗಳನ್ನು ಹೇಳಿದರೂ ಸಾಲದು.

- ಶ್ರಿಕ್

ರಾಜೇಶ್ ನಾಯ್ಕ ಹೇಳಿದರು...

ಶ್ರೀಕಾಂತ್,
ಧನ್ಯವಾದ.