ಭಾನುವಾರ, ಏಪ್ರಿಲ್ 15, 2012

ಚನ್ನಕೇಶವ ದೇವಾಲಯ - ಹಿರೆಕಡಲೂರು


ಒಂದು ಊರಿನ ಜನರಿಗೆ ತಮ್ಮ ಊರಿನ ಇತಿಹಾಸದ ಬಗ್ಗೆ ಹೆಮ್ಮೆ ಇಲ್ಲದಿದ್ದರೆ, ಹೊಯ್ಸಳ ಆಳ್ವಿಕೆಯ ಗುರುತಾಗಿ ತಮ್ಮ ಊರಿನಲ್ಲಿರುವ ದೇವಾಲಯದ ಬಗ್ಗೆ ಕಾಳಜಿ, ಅಭಿಮಾನ ಇಲ್ಲದಿದ್ದರೆ ಏನಾಗುತ್ತದೆ ಎಂಬುದಕ್ಕೆ ಹಿರೆಕಡಲೂರಿನ ಚನ್ನಕೇಶವ ದೇವಾಲಯ ಸಾಕ್ಷಿ. ಊರಿನ ಮುಖ್ಯ ರಸ್ತೆಯಿಂದ ಸ್ವಲ್ಪ ಒಳಗೆ ದಿಬ್ಬವೊಂದರ ಮೇಲೆ ಈ ದೇವಾಲಯವಿದೆ. ರಸ್ತೆಯ ಬದಿಯಲ್ಲಿರುವ ಕಟ್ಟೆಯೊಂದರ ಮೇಲೆ ಒಂದಷ್ಟು ಜನರು ಹರಟುತ್ತಾ ಕುಳಿತಿದ್ದರು. ದೇವಾಲಯಕ್ಕೆ ದಾರಿ ತೋರಿಸಿ ನಂತರ ನಮ್ಮನ್ನೇ ಹಿಂಬಾಲಿಸುತ್ತಾ ದೇವಾಲಯಕ್ಕೆ ಬಂದರು.


ಪಾಳುಬೀಳುತ್ತಿರುವ ದೇವಾಲಯವಿದು. ಊರಿನವರಿಗೆ ದೇವಾಲಯದ ಬಗ್ಗೆ ಎಳ್ಳಷ್ಟೂ ಕಾಳಜಿಯಿಲ್ಲ. ಕಾಳಜಿಯೇ ಇಲ್ಲವೆಂದ ಮೇಲೆ ಇನ್ನು ಹೆಮ್ಮೆ ಮತ್ತು ಅಭಿಮಾನ ದೂರದ ಮಾತುಗಳು. ದೇವಾಲಯದ ಸುತ್ತಲೂ ಮತ್ತು ಮೇಲೆಲ್ಲಾ ಗಿಡಗಂಟಿಗಳು. ದೇವಾಲಯಕ್ಕಿದ್ದ ಪ್ರಾಂಗಣ ಬಿದ್ದುಹೋಗಿದ್ದು ಪ್ರಾಂಗಣ ಗೋಡೆಯ ಕಲ್ಲುಗಳಲ್ಲಿ ಕೆಲವು ಅಲ್ಲೇ ಅನಾಥವಾಗಿ ಬಿದ್ದುಕೊಂಡಿದ್ದರೆ, ಹೆಚ್ಚಿನವು ಕಣ್ಮರೆಯಾಗಿವೆ. ಸುತ್ತಲೂ ಗಿಡಗಂಟಿಗಳು ಅದ್ಯಾವ ಪರಿ ವ್ಯಾಪಿಸಿಕೊಂಡಿವೆ ಎಂದರೆ ದೇವಾಲಯಕ್ಕೊಂದು ಪ್ರದಕ್ಷಿಣೆ ಹಾಕಲು ಕಷ್ಟಪಡಬೇಕಾಯಿತು.


ದಿಬ್ಬದ ಮೇಲೆ ನಿರ್ಮಾಣಗೊಂಡ ಹೊಯ್ಸಳ ದೇವಾಲಯಗಳಿಗೆ ಜಗಲಿ(ಜಗತಿ)ಯ ರಚನೆಯಿರುವುದು ಬಹಳ ಕಡಿಮೆ. ಇಂತಹ ದೇವಾಲಯಗಳು ನೇರವಾಗಿ ನೆಲಗಟ್ಟಿನಿಂದಲೇ ಮೇಲೇರುತ್ತವೆ ಮತ್ತು ದೇವಾಲಯ ಹಾಗೂ ಪ್ರಾಂಗಣ ಗೋಡೆಯ ನಡುವಿನ ಅಂತರವೇ ಪ್ರದಕ್ಷಿಣಾ ಪಥವಾಗಿರುತ್ತದೆ. ಹಿರೆಕಡಲೂರಿನ ದೇವಾಲಯ ದಿಬ್ಬದ ಮೇಲೆ ಇರುವುದರಿಂದ ಇಲ್ಲಿ ಜಗಲಿಯಿಲ್ಲ. ಪ್ರಾಂಗಣಕ್ಕಿದ್ದ ದ್ವಾರದ ಗುರುತಾಗಿ ಎರಡು ಕಲ್ಲಿನ ಕಂಬಗಳು ಅನಾಥವಾಗಿ ನಿಂತುಕೊಂಡಿವೆ. ದೇವಾಲಯದ ಹಿಂಭಾಗದಲ್ಲಿ ಪ್ರಾಂಗಣ ಗೋಡೆಯ ಅಳಿದುಳಿದ ಕುರುಹುಗಳನ್ನು ಕಾಣಬಹುದು.


೧೨ನೇ ಶತಮಾನದಲ್ಲಿ ಹೊಯ್ಸಳ ದೊರೆ ಎರಡನೇ ನರಸಿಂಹನ ಆಳ್ವಿಕೆಯ ಕಾಲದಲ್ಲಿ ಈ ದೇವಾಲಯ ನಿರ್ಮಾಣಗೊಂಡಿತು. ಆಗ ಈ ಊರನ್ನು ’ಅರುಂಧತಿಪುರ’ ಎಂದು ಕರೆಯಲಾಗುತ್ತಿತ್ತು. ದೇವಾಲಯದ ಮುಖಮಂಟಪದಲ್ಲಿ ಈಗ ೧೪ ಕಂಬಗಳು ಇವೆ. ಎಲ್ಲವೂ ಸುಸ್ಥಿತಿಯಲ್ಲಿದ್ದಿದ್ದರೆ ಇದೊಂದು ಸುಂದರ ಮುಖಮಂಟಪ.


ನವರಂಗದ ದ್ವಾರವು ಐದು ತೋಳುಗಳನ್ನು ಹೊಂದಿದ್ದು, ಮೂರನೆಯ ತೋಳನ್ನು ಹೊರತುಪಡಿಸಿ ಉಳಿದವುಗಳಲ್ಲಿ ಪ್ರತ್ಯೇಕ ಬಳ್ಳಿಸುರುಳಿಯ ಕೆತ್ತನೆಗಳಿವೆ. ದ್ವಾರದ ಇಕ್ಕೆಲಗಳಲ್ಲಿ ಶಂಖಚಕ್ರಗದಾಪದ್ಮಧಾರಿಯಾಗಿರುವ ವಿಷ್ಣುವಿನ ಮೂರ್ತಿಗಳಿವೆ. ವಿಷ್ಣುವಿನ ಈ ಮೂರ್ತಿಗಳು ಪ್ರಭಾವಳಿ ಕೆತ್ತನೆ ಮತ್ತು ಪರಿಚಾರಿಕೆಯರನ್ನು ಒಳಗೊಂಡಿವೆ. ದ್ವಾರದ ಮೇಲ್ಗಡೆ ಗಜಲಕ್ಷ್ಮೀಯ ಸ್ಫುಟವಾದ ಕೆತ್ತನೆಯಿದೆ. ಈ ಸುಂದರ ಕೆತ್ತನೆಯೂ ನಶಿಸಿಹೋಗುತ್ತಿದೆ.


ಗರ್ಭಗುಡಿಯು ಸಂಪೂರ್ಣವಾಗಿ ಸೋರುತ್ತಿರುವುದರಿಂದ ದೇವರ ಮೂರ್ತಿಯನ್ನು ನವರಂಗದ ನಾಲ್ಕು ಕಂಬಗಳ ನಡುವೆ ಇರಿಸಲಾಗಿದೆ. ಇಲ್ಲೂ ಅಲ್ಲಲ್ಲಿ ಸೂರು ಸೋರುತ್ತದೆ. ಕೇವಲ ಒಂದೆರಡು ಮಳೆಗೆ ಈ ಪರಿ ನೀರು ಒಳಗೆ ಬಂದರೆ ಇನ್ನು ಮಳೆಗಾಲದಲ್ಲಿ ಇಲ್ಲಿ ದೃಶ್ಯ ಹೇಗಿರಬಹುದೇನೋ?


ಗರುಡನ ಕೆತ್ತನೆಯಿರುವ ಪೀಠದ ಮೇಲೆ ಇರುವ ೬ ಅಡಿ ಎತ್ತರದ ಚನ್ನಕೇಶವನ ಆಕರ್ಷಕ ವಿಗ್ರಹವಿದು. ಬಿಳಿ ಪಾಚಿಯ ಪ್ರಭಾವದಿಂದ ಚನ್ನಕೇಶವ ಶ್ವೇತವರ್ಣಧಾರಿಯಂತೆ ಕಾಣುತ್ತಿದ್ದ. ಶ್ರೀದೇವಿ ಮತ್ತು ಭೂದೇವಿಯರು ಮೈತುಂಬಾ ಸುಣ್ಣ ಬಳಿದವರಂತೆ ಚನ್ನಕೇಶವನ ಇಕ್ಕೆಲಗಳಲ್ಲಿ ಇದ್ದೂ ಕಾಣದವರಾಗಿಬಿಟ್ಟಿದ್ದರು. ವಿಗ್ರಹದಲ್ಲಿರುವ ಪ್ರಭಾವಳಿ ಕೆತ್ತನೆಯೂ ನಶಿಸುತ್ತಿದೆ. ಇಲ್ಲಿ ದೈನಂದಿನ ಪೂಜೆ ನಡೆಯುವುದಿಲ್ಲ. ಊರಿನವರೇ ಯಾರಾದರೂ ಆಸ್ತಿಕರು ಆಗಾಗ ಬಂದು ಚನ್ನಕೇಶವನಿಗೆ ಶೃಂಗಾರ ಮಾಡಿ, ಆರತಿ ಎತ್ತಿ, ಪೂಜೆ ಮಾಡುತ್ತಾರೆ.


ದೇವಾಲಯದ ಮುಖಮಂಟಪದಲ್ಲಿ ಮತ್ತು ನವರಂಗದಲ್ಲಿ ಛಾವಣಿಯ ಒಳಮೇಲ್ಮೈಯಲ್ಲಿ ಆಕರ್ಷಕ ಕೆತ್ತನೆಗಳಿವೆ. ನವರಂಗದಲ್ಲಿರುವ ಕೆತ್ತನೆಯಂತೂ ಮನಮೋಹಕವಾಗಿದೆ.


ದೇವಾಲಯದ ಛಾವಣಿ ಕುಸಿದಿದೆ ಮತ್ತು ಒಂದು ಪಾರ್ಶ್ವದಲ್ಲಿ ಹೊರಗೋಡೆಯ ಕಲ್ಲುಗಳೂ ಕಳಚಿಹೋಗಿವೆ. ಹೊರಗೋಡೆಯಲ್ಲಿ ಮತ್ತು ಗೋಪುರದಲ್ಲಿ ಯಾವುದೇ ಭಿತ್ತಿಚಿತ್ರಗಳಿಲ್ಲ. ಗೋಪುರ ಸುಸ್ಥಿತಿಯಲ್ಲಿದ್ದರೂ, ಮೇಲೆ ಇರುವ ಕಮಲದ ಮುಂಭಾಗವು ಒಡೆದಿದ್ದು ಸೋರುವಿಕೆಗೆ ಇದೇ ಪ್ರಮುಖ ಕಾರಣವಿರಬಹುದು. ಕಲಶದ ತುದಿಯೂ ತುಂಡಾಗಿದೆ.


ದೇವಾಲಯ ಸ್ವಚ್ಛ ಮಾಡಲು ಕ್ರಮಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿ ಎಂದು ನಮ್ಮಲ್ಲಿ ಹಳ್ಳಿಗರ ವಿನಂತಿ! ಊರಿನ ಜನರು ದೇವಾಲಯದ ಪರಿಸರವನ್ನಾದರೂ ಸ್ವಚ್ಛ ಮಾಡಬಹುದಲ್ಲವೇ? ಪ್ರಾಚ್ಯ ವಸ್ತು ಇಲಾಖೆಯೇ ಎಲ್ಲವನ್ನೂ ಮಾಡಬೇಕು ಎಂದು ನಿರೀಕ್ಷಿಸಿದರೆ ಅದು ಅಸಾಧ್ಯದ ಮಾತು. ಆ ಇಲಾಖೆಯಾದರೂ ಎಷ್ಟು ಮಾಡೀತು? ಆಯಾ ಊರಿನವರು ತಮ್ಮ ಊರಿನ ದೇವಾಲಯದ ರಕ್ಷಣೆಗೆ ಮುಂದಾದರೆ ಅದಕ್ಕಿಂತ ಉತ್ತಮ ಬೇರೇನೂ ಇಲ್ಲ. ಹಿರೆಕಡಲೂರಿನ ಜನರು ಯಾವಾಗ ಇದನ್ನರಿಯುತ್ತಾರೋ...

ಮಾಹಿತಿ: ourtemples.in

ಭಾನುವಾರ, ಏಪ್ರಿಲ್ 08, 2012

ವಿಶ್ವನಾಥ, ಭೀಮೇಶ್ವರ ಮತ್ತು ಅಗಸ್ತ್ಯೇಶ್ವರ ದೇವಾಲಯಗಳು - ಹೂಲಿ


ವಿಶ್ವನಾಥ ದೇವಾಲಯವನ್ನು ಕಾಶಿ ವಿಶ್ವನಾಥ ದೇವಾಲಯವೆಂದೂ ಕರೆಯುತ್ತಾರೆ. ಮುಖಮಂಟಪ, ಆಯತಾಕಾರದ ಸಣ್ಣ ನವರಂಗ, ತೆರೆದ ಅಂತರಾಳ ಮತ್ತು ಗರ್ಭಗುಡಿಯನ್ನು ಹೊಂದಿರುವ ದೇವಾಲಯವಿದು.


ಮೂಲ ಮುಖಮಂಟಪವು ೧೨ ಕಂಬಗಳನ್ನು ಹೊಂದಿದ್ದು, ಮುಂಭಾಗದ ನಾಲ್ಕು ಕಂಬಗಳು ಬಿದ್ದುಹೋಗಿರುವ ಕುರುಹುಗಳಿವೆ. ಈಗ ಇರುವ ೮ ಕಂಬಗಳಲ್ಲಿ ನಡುವೆ ಇರುವ ನಾಲ್ಕು ಕಂಬಗಳಿಗೆ ಪ್ರಭಾವಳಿ ಕೆತ್ತನೆಯಿದ್ದರೂ ಅವೆಲ್ಲಾ ನಶಿಸಿ ಹೋಗುತ್ತಿವೆ. ಮುಖಮಂಟಪವನ್ನು ಒಳಗೊಂಡು ದೇವಾಲಯದ ಒಳಗೆಲ್ಲಾ ತುಂಬಾ ಕೆಟ್ಟದಾಗಿ ಸುಣ್ಣಬಣ್ಣ ಬಳಿಯಲಾಗಿರುವುದರಿಂದ ಕೆತ್ತನೆಗಳ ನೈಜ ರೂಪ ಮಾಸಿದೆ.


ಈ ನಾಲ್ಕು ಕಂಬಗಳ ಪೈಕಿ ಎರಡು ಕಂಬಗಳ ಶಿರಭಾಗದಲ್ಲಿ ವೃತ್ತಾಕಾರದ ಕಬ್ಬಿಣದ ಸಲಕರಣೆಯನ್ನು ಜೋಡಿಸಿರುವುದು ವಿಸ್ಮಯಕಾರಿಯಾಗಿದೆ. ಅದರ ಮಹತ್ವ ನನಗೆ ತಿಳಿಯಲಿಲ್ಲ. ಇದು ಎಲ್ಲೂ ಕಾಣದ ವೈಶಿಷ್ಟ್ಯ. ಆ ಕಬ್ಬಿಣದ ’ರಿಂಗ್’ಗಳನ್ನು ಅಲ್ಲಿ ಹೇಗೆ ಇರಿಸಲಾಯಿತು ಎಂಬುವುದೇ ಆಶ್ಚರ್ಯ.


ಈ ದೇವಾಲಯದಲ್ಲಿ ನಂದಿಯ ಸುಳಿವಿಲ್ಲ. ಗರ್ಭಗುಡಿಯಲ್ಲಿ ಬಹಳ ಸಣ್ಣ ಶಿವಲಿಂಗವಿದೆ. ಗರ್ಭಗುಡಿಯು ಚತುರ್ಶಾಖಾ ದ್ವಾರವನ್ನು ಹೊಂದಿದೆ. ಲಲಾಟದಲ್ಲಿ ಗಜಲಕ್ಷ್ಮೀಯಿದ್ದಾಳೆ. ದ್ವಾರದ ಶಾಖೆಗಳಲ್ಲಿ ನೃತ್ಯಜೋಡಿಯ, ಸಂಗೀತ/ವಾದ್ಯಗಾರರ ಮತ್ತು ಅಲಂಕಾರಿಕ ಕೆತ್ತನೆಗಳಿರುವುದನ್ನು ಕಾಣಬಹುದು. ಆದರೆ ಈ ಕೆತ್ತನೆಗಳಿಗೆ ಬಹಳ ಅಸಹ್ಯವಾಗಿ ಬಣ್ಣವನ್ನು ಹಚ್ಚಲಾಗಿದೆ. ಮೊದಲು ಯಾವುದೋ ಬಣ್ಣ ಹಚ್ಚಿ ನಂತರ ಅದರ ಮೇಲೆಯೇ ಸುಣ್ಣವನ್ನು ಬಳಿದು ಸಂಪೂರ್ಣ ವಿರೂಪಗೊಳಿಸಲಾಗಿದೆ.


ಗಜಲಕ್ಷ್ಮೀಯ ಆಕರ್ಷಕ ಕೆತ್ತನೆಯ ಮೇಲೆ ಮನಬಂದಂತೆ ಬಣ್ಣಗಳ ಎರಚಾಟ ಮಾಡಲಾಗಿದೆ. ಹೂಲಿಯಲ್ಲಿ ವಿಕೃತ ’ಹೋಲಿ’! ಅದೂ ಪುರಾತನ ದೇವಾಲಯಗಳ ಕೆತ್ತನೆಗಳ ಜೊತೆಗೆ.


ವಿಶ್ವನಾಥ ದೇವಾಲಯದ ಇನ್ನೊಂದು ವೈಶಿಷ್ಟ್ಯವೆಂದರೆ, ಹೊರಗೋಡೆಯ ಮೂರೂ ಪಾರ್ಶ್ವಗಳಲ್ಲಿ ತಲಾ ಒಂದರಂತೆ ಬಳಸಲಾಗಿರುವ ವೃತ್ತಾಕಾರದ ಉದ್ದನೆಯ ಸ್ತಂಭ. ಏನಾದರೂ ಹೊಸತನವಿರಲಿ ಎಂಬಷ್ಟಕ್ಕೆ ಮಾತ್ರ ಈ ಕಂಬಗಳನ್ನು ವೃತ್ತಾಕಾರವಾಗಿ ರಚಿಸಿರಬಹುದೇ ವಿನ: ಬೇರೆ ಮಹತ್ವವೇನೂ ಇರಲಾರದು.


ದೇವಾಲಯದ ಶಿಖರ ಬಿದ್ದುಹೋಗಿದೆ. ಶಿಖರದ ತಳಭಾಗ ಆಂದರೆ ಮೊದಲನೇ ಮತ್ತು ಭಾಗಶ: ಎರಡನೇ ತಾಳಗಳು ಮಾತ್ರ ಉಳಿದುಕೊಂಡಿವೆ. ಹೊರಗೋಡೆಯಲ್ಲಿ ಕೆಲವು ಮಿನಿ ಗೋಪುರಗಳನ್ನು ಕೆತ್ತಲಾಗಿದ್ದು ಇವುಗಳಲ್ಲಿ ಕೆಲವು ಒಂದು ಸ್ತಂಭವನ್ನು ಹೊಂದಿದ್ದರೆ ಉಳಿದವು ಎರಡು ಸ್ತಂಭಗಳನ್ನು ಹೊಂದಿವೆ.


ವಿಶ್ವನಾಥನ ಸಮೀಪವೇ ಭೀಮೇಶ್ವರನಿದ್ದಾನೆ. ರಚನೆಯಲ್ಲಿ ವಿಶ್ವನಾಥ ದೇವಾಲಯವನ್ನೇ ಹೋಲುವ ಈ ದೇವಾಲಯವು ಆಯತಾಕಾರದ ನವರಂಗ, ತೆರೆದ ಅಂತರಾಳ ಮತ್ತು ಗರ್ಭಗುಡಿಯನ್ನು ಹೊಂದಿದೆ. ದೇವಾಲಯಕ್ಕೆ ಹೊರಚಾಚು ಮುಖಮಂಟಪವಿದ್ದ ಕುರುಹು ಕಾಣಬರುತ್ತದೆ. ಈಗ ಮುಖಮಂಟಪದ ನೆಲಹಾಸು ಮಾತ್ರ ಉಳಿದುಕೊಂಡಿದೆ. ನವರಂಗದಲ್ಲಿ ನಾಲ್ಕು ಖಾಲಿ ದೇವಕೋಷ್ಠಗಳಿವೆ. ಅಂತರಾಳದಲ್ಲಿ ನಂದಿಯ ಮೂರ್ತಿಯಿದೆ ಮತ್ತು ಗರ್ಭಗುಡಿಯಲ್ಲಿರುವ ಭೀಮೇಶ್ವರ ಹೆಸರಿನ ಲಿಂಗವನ್ನು ಆಕರ್ಷಕ ಪೀಠದ ಮೇಲಿರಿಸಲಾಗಿದೆ.


ಈ ದೇವಾಲಯದಲ್ಲೂ ಭರ್ಜರಿಯಾಗಿಯೇ ’ಹೋಲಿ’ ಆಡಲಾಗಿದೆ. ಶಿವಲಿಂಗ (ಪೀಠವನ್ನೂ ಬಿಟ್ಟಿಲ್ಲ) ಮತ್ತು ನಂದಿಯನ್ನು ಬಿಟ್ಟು ಉಳಿದೆಲ್ಲೆಡೆ ಸುಣ್ಣಬಣ್ಣಗಳದ್ದೇ ದರ್ಬಾರು. ಆಕರ್ಷಕ ಕೆತ್ತನೆಗಳನ್ನೊಳಗೊಂಡಿರುವ ಗರ್ಭಗುಡಿಯ ಚತುರ್ಶಾಖಾ ದ್ವಾರದ ದುರವಸ್ಥೆ ನೋಡಿದರೆ ಖೇದವಾಗುತ್ತದೆ.


ದೇವಾಲಯದ ಶಿಖರ ಎಂದೋ ಕಳಚಿಬಿದ್ದಿದೆ. ಹೊರಗೋಡೆಯಲ್ಲಿ ಸುಂದರ ಮಂಟಪದ ರಚನೆಯಿರುವ ಮೂರು ಖಾಲಿ ದೇವಕೋಷ್ಠಗಳಿವೆ. ಹಲವು ಮಕರತೋರಣಗಳನ್ನು, ಸಣ್ಣ ಗೋಪುರಗಳನ್ನು ಮತ್ತು ಒಂದೆರಡು ಕೆತ್ತನೆಗಳನ್ನು ಕೂಡಾ ಇಲ್ಲಿ ಕಾಣಬಹುದು.


ಈ ದೇವಾಲಯವನ್ನು ಊರವರು ’ಕಲ್ಲೇಶ್ವರ’ ಎಂದು ಕರೆಯುತ್ತಾರೆ. ಕಲ್ಲೇಶ್ವರನಿಗೆ ದೊಡ್ಡ ಪ್ರಮಾಣದಲ್ಲಿ ವಾರ್ಷಿಕ ಜಾತ್ರೆಯೂ ನಡೆಯುವುದರಿಂದ ಈ ದೇವಾಲಯಕ್ಕೆ ಬಣ್ಣ ಬಳಿಯಲಾಗಿದೆ. ಕಲ್ಲೇಶ್ವರ ದೇವಾಲಯ ಇರುವ ಪ್ರಾಂಗಣದಲ್ಲೇ ಇವೆ ಎಂಬ ಕಾರಣಕ್ಕೆ ವಿಶ್ವನಾಥ ಮತ್ತು ಅಗಸ್ತ್ಯೇಶ್ವರ ದೇವಾಲಯಗಳಿಗೂ ಬಣ್ಣ ಬಳಿಯಲಾಗಿದೆ.


ಅಗಸ್ತ್ಯೇಶ್ವರ ದೇವಾಲಯವು ಅಂತರಾಳ ಮತ್ತು ಗರ್ಭಗುಡಿಯನ್ನು ಮಾತ್ರ ಹೊಂದಿದೆ. ನವರಂಗ ಮತ್ತು ಮುಖಮಂಟಪಗಳು ಕುರುಹುಗಳೇ ಇಲ್ಲದಂತೆ ನಾಶವಾಗಿವೆ. ಅಂತರಾಳದಲ್ಲಿ ನಂದಿಯ ಮೂರ್ತಿಯಿದೆ. ಅಂತರಾಳದ ದ್ವಾರಕ್ಕೆ ಜಾಲಂಧ್ರಗಳ ರಚನೆಯಿರುವುದು ಮತ್ತು ದ್ವಾರದ ಇಕ್ಕೆಲಗಳಲ್ಲಿ ದೇವಕೋಷ್ಠಗಳಿರುವುದು ನವರಂಗ ಇದ್ದ ಸ್ಪಷ್ಟ ಸಾಕ್ಷಿಯನ್ನು ಒದಗಿಸುತ್ತವೆ. ನವರಂಗ ಇದ್ದ ಬಳಿಕ ಮುಖಮಂಟಪವೂ ಇದ್ದಿರಬಹುದು ಎನ್ನುವುದು ನನ್ನ ಊಹೆ ಮಾತ್ರ.


ಗರ್ಭಗುಡಿಯು ಯಾವುದೆ ಕೆತ್ತನೆಗಳಿಲ್ಲದ ಸರಳ ತ್ರಿಶಾಖಾ ದ್ವಾರವನ್ನು ಹೊಂದಿದೆ. ಲಲಾಟದಲ್ಲಿ ಶಂಖಚಕ್ರಪದ್ಮಗದಾಧಾರಿಯಾಗಿರುವ ವಿಷ್ಣುವಿನ ಕೆತ್ತನೆಯಿರುವುದು ಈ ದೇವಾಲಯದ ಬಹಳ ಪ್ರಮುಖ ವೈಶಿಷ್ಟ್ಯ. ಶಿವಲಿಂಗವಿರುವ ಗರ್ಭಗುಡಿಯ ದ್ವಾರದ ಲಲಾಟದಲ್ಲಿ ವಿಷ್ಣು!

ಅಂದು-ಇಂದು:


ಕಪ್ಪುಬಿಳುಪಿನಲ್ಲಿರುವುದು ಒಂದೇ ಪ್ರಾಂಗಣದೊಳಗಿರುವ ಈ ೩ ದೇವಾಲಯಗಳ ೧೮೭೪ರಲ್ಲಿ ತೆಗೆದ ಚಿತ್ರ.  ವರ್ಣಚಿತ್ರವನ್ನು ೨೦೧೧ರಲ್ಲಿ ತೆಗೆಯಲಾಗಿದೆ. ಮೂರೂ ದೇವಾಲಯಗಳು ಸುಣ್ಣ ಬಣ್ಣದಿಂದ ಮುಕ್ತವಾಗಿರುವುದನ್ನು ಗಮನಿಸಿ. ಉಳಿದಂತೆ ಆಗ ಹೇಗಿದ್ದವೋ ಇಂದಿಗೂ ಹಾಗೇ ಇವೆ.

ಮಾಹಿತಿ: ಪ್ರಾಚ್ಯ ವಸ್ತು ಇಲಾಖೆ

ಭಾನುವಾರ, ಏಪ್ರಿಲ್ 01, 2012

ಯೋಗನರಸಿಂಹ ದೇವಾಲಯ - ಬಗ್ಗವಳ್ಳಿ


ಅದೊಂದು ರಾತ್ರಿ ಬೆಂಗಳೂರಿನಲ್ಲಿ ವಾಸವಾಗಿರುವ ವೈದ್ಯರೊಬ್ಬರು ಗಾಢವಾದ ನಿದ್ರೆಯಲ್ಲಿದ್ದರು. ಮುಂಜಾನೆ ಎರಡರ ಸಮಯವಾಗಿರಬಹುದು. ತಡಬಡಿಸಿದವರಂತೆ ನಿದ್ರೆಯಿಂದ ಎದ್ದು ಕುಳಿತರು. ಆಗಷ್ಟೇ ಕಂಡ ಕನಸು ಅವರನ್ನು ಚಕಿತರನ್ನಾಗಿಯೂ ಮೂಕವಿಸ್ಮಿತರನ್ನಾಗಿಯೂ ಮಾಡಿತ್ತು. ಇಂತಹ ಕನಸೂ ಬೀಳಬಹುದೇ ಎಂದು ವಿಚಾರಕ್ಕೆ ಬಿದ್ದರು.


ಸಂಸಾರ ಸಮೇತ ಹಲವಾರು ವರ್ಷಗಳಿಂದ ಈ ವೈದ್ಯರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಆಸ್ತಿಕರಾಗಿರುವ ಇವರು ತಮ್ಮ ಕುಟುಂಬದ ಮೂಲ ದೇವರು ಎಲ್ಲಿ ನೆಲೆಸಿದ್ದಾನೆ ಎಂಬ ಮಾಹಿತಿಯಿಲ್ಲದೆ ಚಡಪಡಿಸುತ್ತಿದ್ದರು. ಕುಟುಂಬದ ಸದಸ್ಯರ ಎಲ್ಲಾ ಕೊಂಡಿಗಳನ್ನು ಹುಡುಕಿ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ ವಿಚಾರಿಸಿದರೂ ತಮ್ಮ ಮೂಲ ದೇವರು ನೆಲೆಯಾಗಿರುವ ಸ್ಥಳದ ಮಾಹಿತಿ ಇವರಿಗೆ ದೊರಕಿರಲಿಲ್ಲ. ಕಡೆಗೂ ಯೋಗನರಸಿಂಹನಿಗೂ ಇವರ ಮೇಲೆ ಕರುಣೆ ಬಂದಿರಬೇಕು. ಆ ರಾತ್ರಿ ಈ ವೈದ್ಯರ ಕನಸಿನಲ್ಲಿ ಈ ದೇವಾಲಯದ ಚಿತ್ರ, ಊರಿನ ಹೆಸರು ಸಮೇತ ಮೂಡಿಬರುವಂತೆ ಮಾಡಿದ ಯೋಗನರಸಿಂಹ ತಕ್ಷಣ ಅಲ್ಲಿಗೆ ತೆರಳುವಂತೆ ಅಶರೀರವಾಣಿಯ ಮೂಲಕ ಆಜ್ಞೆ ಮಾಡಿದನು. ಇದು ದೇವಾಲಯದ ಆರ್ಚಕರು ನನಗೆ ವಿವರಿಸಿದ ಘಟನೆ. ಆ ವೈದ್ಯರ ಹೆಸರು ಕೇಳಲು ಮರೆತೆ ನೋಡಿ.


ಕನಸು ಕಂಡು ಗರಬಡಿದವರಂತೆ ಎದ್ದು ಕುಳಿತ ವೈದ್ಯರು ಮರುದಿನವೇ ಬಗ್ಗವಳ್ಳಿ ಎಲ್ಲಿದೆ ಎಂದು ಕಂಡುಹುಡುಕಿ ಅಲ್ಲಿಗೆ ಹೊರಟೇಬಿಟ್ಟರು. ಆಗ ದೇವಾಲಯದ ಪರಿಸ್ಥಿತಿ ಹದಗೆಟ್ಟಿತ್ತು. ಎಲ್ಲೆಡೆ ಮುಳ್ಳುಗಿಡಗಳು ಬೆಳೆದುಬಿಟ್ಟಿದ್ದವು. ಮುಖಮಂಟಪ ಸಂಪೂರ್ಣವಾಗಿ ಕುಸಿದುಬಿದ್ದಿತ್ತು. ದೇವಾಲಯದ ಒಳಗೆ ಬಾವಲಿಗಳು ವಾಸವಾಗಿದ್ದವು. ದೇವಾಲಯವಿದ್ದ ಪರಿಸರ ತುಂಬಾ ಮುಳ್ಳುಗಿಡ ಮತ್ತು ಪೊದೆಗಳಿಂದ ಆವೃತವಾಗಿತ್ತು. ತಮ್ಮ ಮೂಲ ದೇವರ ಪರಿಸ್ಥಿತಿ ಕಂಡು ಮರುಗಿದ ವೈದ್ಯರು ತಮ್ಮದೇ ಖರ್ಚಿನಲ್ಲಿ ದೇವಾಲಯವನ್ನೂ ಮತ್ತು ಸುತ್ತಲಿನ ಪರಿಸರವನ್ನು ಸ್ವಚ್ಛಗೊಳಿಸಿದರು. ಯೋಗನರಸಿಂಹನ ಅದೃಷ್ಟ ಚೆನ್ನಾಗಿತ್ತು. ದೇವಾಲಯವಿರುವ ವಿಶಾಲ ಸ್ಥಳದ ಒತ್ತುವರಿ ಆಗಿರಲಿಲ್ಲ.


ನಂತರ ಪ್ರಾಚ್ಯ ವಸ್ತು ಇಲಾಖೆಯನ್ನು ಸಂಪರ್ಕಿಸಿದ ವೈದ್ಯರು ದೇವಾಲಯನ್ನು ಜೀರ್ಣೊದ್ಧಾರಗೊಳಿಸಿ ರಕ್ಷಿಸುವಂತೆ ಕೋರಿಕೊಂಡರು. ಇಲಾಖೆ ದೇವಾಲಯವನ್ನು ಸರಿಪಡಿಸುವ ಕಾರ್ಯ ಆರಂಭಿಸಿತು. ಮೊದಲು ವಿಶಾಲವಾದ ಜಾಗಕ್ಕೆ ಪ್ರಾಂಗಣ ರಚಿಸಲಾಯಿತು. ಮುಖಮಂಟಪವನ್ನು ಮೂಲ ರೂಪಕ್ಕೆ ತಕ್ಕಂತೆ ಮರುನಿರ್ಮಿಸಲಾಯಿತು. ಗೋಪುರದ ಮೇಲೆಲ್ಲಾ ಬೆಳೆದಿದ್ದ ಗಿಡಗಳನ್ನು ತೆಗೆಯಲಾಯಿತು. ದೇವಾಲಯದ ಬಲಪಾರ್ಶ್ವದಲ್ಲಿ ಹೊರಗೋಡೆಯನ್ನು ಆವರಿಸಿದ್ದ ಪಾಚಿಯನ್ನು ತೆಗೆಯುವ ಪ್ರಯತ್ನವನ್ನೂ ಮಾಡಲಾಯಿತು. ಇದೆಲ್ಲದರ ಫಲವಾಗಿ ಇಂದು ಬಗ್ಗವಳ್ಳಿಯ ಯೋಗನರಸಿಂಹ ವಿಶಾಲ ಸ್ಥಳದಲ್ಲಿ ರಾರಾಜಿಸುತ್ತಿದ್ದಾನೆ.


ಇದೊಂದು ತ್ರಿಕೂಟ ದೇವಾಲಯ. ಮೂರೂ ಗರ್ಭಗುಡಿಗಳಿಗೆ ಸಾಮಾನ್ಯ ನವರಂಗವಿದೆ. ಪ್ರಮುಖ ಗರ್ಭಗುಡಿಗೆ ಮಾತ್ರ ಅಂತರಾಳವಿದೆ. ನವರಂಗದ ದ್ವಾರವು ಅಷ್ಟಶಾಖೆಗಳನ್ನು ಹೊಂದಿದ್ದು ಲಲಾಟದಲ್ಲಿ ಗಜಲಕ್ಷ್ಮೀಯ ಆಕರ್ಷಕ ಕೆತ್ತನೆಯಿದೆ. ದ್ವಾರದ ಛಾವಣಿಯ ಸುತ್ತಲೂ ಶಾಸನವನ್ನು ಕಾಣಬಹುದು. ಈ ಶಾಸನದ ಪ್ರಕಾರ ಹೊಯ್ಸಳ ದೊರೆ ಒಂದನೇ ನರಸಿಂಹನು ಇಸವಿ ೧೧೫೭ರಲ್ಲಿ ಈ ದೇವಾಲಯದ ನಿರ್ಮಾಣವನ್ನು ಆರಂಭಿಸಿದನು ಎಂದು ತಿಳಿದುಬರುತ್ತದೆ. ಇಲ್ಲೇ ಇರುವ ಇನ್ನೊಂದು ಶಾಸನವು ೩ನೇ ಬಲ್ಲಾಳನ ಕಾಲದಲ್ಲಿ ದೇವಾಲಯದ ನಿರ್ಮಾಣ ಪೂರ್ಣಗೊಂಡಿರುವ ಬಗ್ಗೆ ಮಾಹಿತಿ ನೀಡುತ್ತದೆ.


ಯೋಗನರಸಿಂಹ ದೇವಾಲಯವೆನ್ನಲಾಗುತ್ತದೆಯಾದರೂ ಪ್ರಮುಖ ಗರ್ಭಗುಡಿಯಲ್ಲಿ ಚನ್ನಕೇಶವನ ವಿಗ್ರಹವಿದೆ. ಗರುಡ ಪೀಠದ ಮೇಲೆ ಶಂಖಚಕ್ರಪದ್ಮಗದಾಧಾರಿಯಾಗಿರುವ ಸುಮಾರು ನಾಲ್ಕಡಿ ಎತ್ತರದ ವಿಗ್ರಹವಿದು.


ಎಡಕ್ಕಿರುವ ಗರ್ಭಗುಡಿಯಲ್ಲಿ ಶಾರದಾಂಬೆಯ ವಿಗ್ರಹವಿದೆ. ಮೊದಲಿನಿಂದಲೂ ಶಾರದಾಂಬೆ ಎಂದು ಈ ವಿಗ್ರಹವನ್ನು ಪೂಜಿಸಲಾಗುತ್ತಿದೆಯಾದರೂ, ಇಲ್ಲಿನ ಅರ್ಚಕರ ಪ್ರಕಾರ ಇತ್ತೀಚೆಗೆ ಇಡಲಾದ ಅಷ್ಟಮಂಗಲ ಪ್ರಶ್ನೆಯ ಪ್ರಕಾರ ಇದು ’ತ್ರಿಪುರ ಸುಂದರಿ’ಯ ವಿಗ್ರಹವೆಂದು ತಿಳಿದುಬಂದಿದೆ.


ಬಲಭಾಗದ ಗರ್ಭಗುಡಿಯಲ್ಲಿ ಯೋಗನರಸಿಂಹ ಆಸೀನನಾಗಿದ್ದಾನೆ. ಹಿರಣ್ಯಕಶಿಪುನನ್ನು ಸಂಹರಿಸಲು ಉಗ್ರನರಸಿಂಹನಾಗಿ ಅವತಾರವೆತ್ತಿದ ಬಳಿಕ, ಆ ಕೋಪದ ಶಮನಕ್ಕಾಗಿ ನರಸಿಂಹನು ಯೋಗಕ್ಕೆ ಕುಳಿತಾಗ ಯೋಗನರಸಿಂಹನಾದನು ಎಂಬ ನಂಬಿಕೆ.


ನವರಂಗದಲ್ಲಿರುವ ಎರಡು ದೇವಕೋಷ್ಠಗಳಲ್ಲಿ ಗಣೇಶ ಮತ್ತು ಲಕ್ಷ್ಮೀನರಸಿಂಹನ ಸುಂದರ ಮೂರ್ತಿಗಳಿವೆ. ನವರಂಗದ ಇನ್ನೊಂದು ಬದಿಯಲ್ಲಿ ಬ್ರಹ್ಮನ ಮೂರ್ತಿಯನ್ನು ಕಾಣಬಹುದು.


ಎಲ್ಲಾ ಗರ್ಭಗುಡಿಗಳ ದ್ವಾರಗಳಿಗೆ ಜಾಲಂಧ್ರಗಳಿವೆ ಮತ್ತು ಲಲಾಟದಲ್ಲಿ ಗಜಲಕ್ಷ್ಮೀಯ ಕೆತ್ತನೆಯಿದೆ. ಶಾರದಾಂಬೆಯ ಗರ್ಭಗುಡಿಯ ದ್ವಾರದ ಮೇಲ್ಭಾಗದಲ್ಲಿ ಮಕರತೋರಣದಿಂದ ಅಲಂಕೃತ ಮತ್ತು ಇಕ್ಕೆಲಗಳಲ್ಲಿ ಚಾಮರಧಾರಿಯರಿರುವ ದೇವಿಯೊಬ್ಬಳ ಕೆತ್ತನೆಯಿದೆ. ಯೋಗನರಸಿಂಹನ ಗರ್ಭಗುಡಿಯ ದ್ವಾರದ ಮೇಲ್ಭಾಗದಲ್ಲಿ ವೇಣುಗೋಪಾಲನ ಕೆತ್ತನೆಯಿದೆ. ಚನ್ನಕೇಶವನ ಅಂತರಾಳದ ಮೇಲ್ಭಾಗದಲ್ಲಿರುವ ಕೆತ್ತನೆ ಏನೆಂದು ತಿಳಿಯಲಿಲ್ಲ.


ಮುಖಮಂಟಪದ ಹೊರಭಾಗದಲ್ಲಿ ತಳದಿಂದ ಐದು ಪಟ್ಟಿಕೆಗಳಿದ್ದು ಇವುಗಳಲ್ಲಿ ಮೊದಲ ಮೂರು ಪಟ್ಟಿಕೆಗಳಲ್ಲಿ ಆನೆ, ಸಿಂಹ ಮತ್ತು ಬಳ್ಳಿಸುರುಳಿ ಕೆತ್ತನೆಗಳನ್ನು ಕಾಣಬಹುದು. ಉಳಿದೆರಡು ಪಟ್ಟಿಕೆಗಳು ಕೆತ್ತನೆರಹಿತವಾಗಿವೆ. ಈ ಪಟ್ಟಿಕೆಗಳ ರಚನೆ ಮುಖಮಂಟಪದ ಸುತ್ತಲೂ ಏಕಪ್ರಕಾರವಾಗಿದ್ದು ನಂತರ (ನವರಂಗ ಮತ್ತು ಗರ್ಭಗುಡಿಗಳ ಹೊರಭಾಗದಲ್ಲಿ) ಬೇರೆ ರೂಪವನ್ನು ಪಡೆದುಕೊಳ್ಳುತ್ತವೆಯಲ್ಲದೆ ಮೊದಲ ನಾಲ್ಕು ಪಟ್ಟಿಕೆಗಳಲ್ಲಿ ಯಾವ ಕೆತ್ತನೆಗಳೂ ಕಾಣಬರುವುದಿಲ್ಲ. ಮೇಲಿನ (ಅಂದರೆ ಐದನೇ) ಪಟ್ಟಿಕೆಯಲ್ಲಿ ಮಾತ್ರ ದೇವದೇವಿಯರ ಸಣ್ಣ ಸಣ್ಣ ಮೂರ್ತಿಗಳನ್ನು ಕೆತ್ತಲಾಗಿದೆ.


ದೇವಾಲಯದ ಹೊರಗೋಡೆಯಲ್ಲಿ ಎರಡು ಸ್ತರಗಳಿವೆ. ಮೇಲಿನಸ್ತರದಲ್ಲಿ ಯಾವುದೇ ಕೆತ್ತನೆಗಳಿಲ್ಲ. ಆದರೆ ಕೆಳಗಿನ ಸ್ತರದ ತುಂಬಾ ಭಿತ್ತಿಗಳಿವೆ. ಹೆಚ್ಚಿನ ಭಿತ್ತಿಗಳು ಕಾಲನ ದಾಳಿಗೆ ತಮ್ಮ ಮೂಲರೂಪವನ್ನು ಕಳೆದುಕೊಂಡರೂ ಚೆನ್ನಾಗಿಯೇ ಕಾಣುತ್ತವೆ ಎನ್ನಬಹುದು. ದೇವಾಲಯದ ಮೇಲ್ಛಾವಣಿಯ ಸುತ್ತಲೂ ಕೈಪಿಡಿಯ ರಚನೆಯಿದೆ.


ಗಣೇಶ, ಉಗ್ರನರಸಿಂಹ, ಅರ್ಜುನ, ಲಕ್ಷ್ಮೀನರಸಿಂಹ, ಕಾಳಿಂಗಮರ್ದನ, ವೇಣುಗೋಪಾಲ, ತಾಂಡವೇಶ್ವರ, ವಿಷ್ಣುವಿನ ಹಲವಾರು ರೂಪಗಳು, ಸರಸ್ವತಿ, ವಾದ್ಯಗಾರರು, ನೃತ್ಯಗಾರ್ತಿಯರು, ನಾಲ್ಕು ಕೈಗಳುಳ್ಳ ವಾದ್ಯಗಾರರು, ಇತ್ಯಾದಿ ಸುಂದರ ಕೆತ್ತನೆಗಳನ್ನು ಕಾಣಬಹುದು.


ಮುಖಮಂಟಪದ ಕಂಬವೊಂದರಲ್ಲಿ ಕೆತ್ತಲಾಗಿರುವ ಗಣೇಶನ ವಿಗ್ರಹ ದೊಡ್ಡದಾಗುತ್ತಿರುವುದು ಇಲ್ಲಿನ ಅರ್ಚಕರ ಸ್ವಂತ ಅನುಭವವಂತೆ. ಅವರು ಇಲ್ಲಿ ಬಂದ ದಿನದಿಂದ ಗಮನಿಸುತ್ತಾ ಇದ್ದಾರಂತೆ. ಗಣೇಶ ಬೆಳೆಯುತ್ತಿದ್ದಾನಂತೆ!


ಈ ಕೆತ್ತನೆಗಳನ್ನು ನೋಡಲು ಕಲಾಸಕ್ತರಿಗೆ ಬಹಳ ಸಮಯ ಬೇಕಾಗುವುದು. ಮೂಲೆಗುಂಪಾಗಿದ್ದ ದೇವಾಲಯದಲ್ಲಿ ಈ ಅದ್ಭುತ ಕೆತ್ತನೆಗಳು ಇನ್ನೂ ಉಳಿದಿರುವುದು ಸೋಜಿಗವೇ ಸರಿ. ಪ್ರಾಚ್ಯ ವಸ್ತು ಇಲಾಖೆ ಎಲ್ಲಾ ಕೆತ್ತನೆಗಳನ್ನು ಸ್ವಚ್ಛಗೊಳಿಸಿರುವುದರಿಂದ ಅವುಗಳ ಅಂದವನ್ನು ಆಸ್ವಾದಿಸಲು ನಮಗೆ ಇಂದು ಸಾಧ್ಯವಾಗಿದೆ.


ತೆರೆಮರೆಯಲ್ಲೇ ಉಳಿದಿರುವ ದೇವಾಲಯಕ್ಕೆ ಸಂದರ್ಶಕರು ಬರುವುದು ಬಹಳ ಕಡಿಮೆ. ಆಗಾಗ ಪೂಜೆ ಸಲ್ಲಿಸಲು ಬರುವುದನ್ನು ಬಿಟ್ಟರೆ ಸ್ಥಳೀಯರಂತೂ ಯಾರೂ ಬರುವುದೇ ಇಲ್ಲ. ಅಪರೂಪಕ್ಕೊಮ್ಮೆ ಅಕ್ಕ ಪಕ್ಕದ ಹಳ್ಳಿಗಳ ಕೆಲವು ಹಿರಿಯ ಆಸಕ್ತರು ತಮ್ಮ ಕುಟುಂಬ ಸಮೇತ ಬಂದು ದೇವಾಲಯದ ನೆರಳಿನಲ್ಲಿ ತಾವು ತಂದ ಊಟ ಮಾಡಿ ವಿಶ್ರಮಿಸಿ ಹೋಗುತ್ತಾರೆ.


ಸ್ಥಳೀಯರಿಗೆ ದೇವಾಲಯದ ಮಹತ್ವದ ಅರಿವಿಲ್ಲ. ಪ್ರಾಚ್ಯ ವಸ್ತು ಇಲಾಖೆ ಸಿಬ್ಬಂದಿಗಳು ವರ್ಷಕ್ಕೊಂದು ಸಲ ಬಂದು ಕಾಣಿಕೆ ಡಬ್ಬಿಯಲ್ಲಿ ಸಂಗ್ರಹವಾಗಿರುವುದನ್ನು ಬಾಚಿಕೊಂಡು ಹೋದರೆ ಮತ್ತೆ ಅವರು ಬರುವುದು ಮುಂದಿನ ವರ್ಷವೇ. ಇಲಾಖೆ ಈ ಸುಂದರ ದೇವಾಲಯದ ಸುತ್ತಲೂ ಉದ್ಯಾನ ನಿರ್ಮಿಸಿದರೆ ಸ್ಥಳದ ಅಂದ ಇಮ್ಮಡಿಗೊಳ್ಳುವುದರಲ್ಲಿ ಸಂದೇಹವಿಲ್ಲ.

ಮಾಹಿತಿ: ಸಂಪತ್ ಕುಮಾರ್ ಡಿ