ಭಾನುವಾರ, ಮೇ 15, 2011

ಹಾರ್ನಹಳ್ಳಿಯ ಚನ್ನಕೇಶವ ಮತ್ತು ಸೋಮೇಶ್ವರ


ಹಾರ್ನಹಳ್ಳಿ ೧೮೮೨ರವರೆಗೆ ಒಂದು ತಾಲೂಕು ಕೇಂದ್ರವಾಗಿತ್ತು. ಅರಸೀಕೆರೆ ತಾಲೂಕು ರಚನೆಯಾದ ಬಳಿಕ ಅದರೊಂದಿಗೆ ಹಾರ್ನಹಳ್ಳಿ ವಿಲೀನವಾಯಿತು. ಹಿಂದೆ ಈ ಗ್ರಾಮವನ್ನು ಲಕ್ಷ್ಮೀನರಸಿಂಹಪುರವೆಂದೂ ನಂತರ ಹಿರಿಯ ಸೋಮನಾಥಪುರವೆಂದೂ ನಂತರ ಹಾರುವನಹಳ್ಳಿಯೆಂದೂ ಕರೆಯಲಾಗುತ್ತಿತ್ತು. ಊರಿನ ನಟ್ಟನಡುವೆ ಹಾದುಹೋಗುವ ರಸ್ತೆಯ ಇಕ್ಕೆಲಗಳಲ್ಲಿ ಸಮಾನ ಅಂತರಗಳಲ್ಲಿ ಕೇಶವ ದೇವಾಲಯ ಮತ್ತು ಸೋಮೇಶ್ವರ ದೇವಾಲಯಗಳಿವೆ. ಎರಡೂ ದೇವಾಲಯಗಳನ್ನು ೧೩ನೇ ಶತಮಾನದಲ್ಲಿ ನಿರ್ಮಿಸಲಾಗಿದೆ.


ಪೂರ್ವಾಭಿಮುಖವಾಗಿರುವ ಕೇಶವ ದೇವಾಲಯವನ್ನು ಇಸವಿ ೧೨೩೪ ರಲ್ಲಿ ನಿಜೇಶ್ವರ ಭಟ್ಟ, ಸಂಕಣ್ಣ ಮತ್ತು ಗೋಪಣ್ಣ ಎಂಬ ಮೂವರು ಸಹೋದರರು ತಮ್ಮ ತಂದೆಯ ಸ್ಮರಣಾರ್ಥ ಮಲ್ಲಿತಮ್ಮ ಎಂಬ ಶಿಲ್ಪಿಯಿಂದ ನಿರ್ಮಿಸಿದರು. ಈ ಮಲ್ಲಿತಮ್ಮನೇ ನಂತರ ಸೋಮನಾಥಪುರ, ನುಗ್ಗೇಹಳ್ಳಿ ಮತ್ತು ಹೊಸಹೊಳಲು ದೇವಾಲಯಗಳಲ್ಲಿಯೂ ಕೆಲಸ ಮಾಡಿದ್ದನೆಂದು ನಂಬಲಾಗಿದೆ. ಪ್ರಧಾನ ಗರ್ಭಗುಡಿಯಲ್ಲಿ ಚನ್ನಕೇಶವ ದೇವರ ಮೂರ್ತಿಯಿದ್ದು, ಉಳಿದೆರಡರಲ್ಲಿ ಲಕ್ಷ್ಮೀನರಸಿಂಹ ಮತ್ತು ಗೋಪಾಲಕೃಷ್ಣ ಮೂರ್ತಿಗಳಿವೆ. ತ್ರಿಕೂಟ ಶೈಲಿಯ ದೇವಸ್ಥಾನದ ಪ್ರಧಾನ ಗರ್ಭಗುಡಿಯ ಮೇಲ್ಭಾಗದಲ್ಲಿ ಆಕರ್ಷಕ ಗೋಪುರವಿದೆ.


ಶಾಸನಗಳಲ್ಲಿ ಈ ದೇವಾಲಯವನ್ನು ನರಸಿಂಹ ದೇವಾಲಯವೆಂದು ಕರೆಯಲಾಗಿದೆ. ದೇವಾಲಯ ನಿರ್ಮಿಸಿದ ೩ ಸಹೋದರರು ಪ್ರತಿಷ್ಠಾಪಿಸಿದ್ದು ಲಕ್ಷ್ಮೀನರಸಿಂಹ ದೇವರ ಮೂರ್ತಿಯನ್ನಾಗಿದ್ದರಿಂದ ಶಾಸನಗಳಲ್ಲಿ ಹಾಗೆ ಹೇಳಿದ್ದಿರಬಹುದು. ಮುಖಮಂಟಪ, ಸುಖನಾಸಿ ಮತ್ತು ನಾಲ್ಕು ಕಂಬಗಳ ನವರಂಗವನ್ನು ದೇವಾಲಯ ಹೊಂದಿದೆ. ನವರಂಗದ ಛಾವಣಿಯಲ್ಲೂ ಸುಂದರ ಕೆತ್ತನೆಗಳಿವೆ. ಸುಖನಾಸಿಯಲ್ಲಿ ಒಂದು ಪಾರ್ಶ್ವದಲ್ಲಿ ೩೦ ಮೂಲೆಗಳ ಕಂಬ ಮತ್ತು ಇನ್ನೊಂದು ಪಾರ್ಶ್ವದಲ್ಲಿ ೬೦ ಮೂಲೆಗಳ ಕಂಬವಿದೆ. ಇಲ್ಲಿ ದಿನಾಲೂ ಪೂಜೆ ನಡೆಯುತ್ತದೆ. ನವರಾತ್ರಿ, ವೈಕುಂಠ ಏಕಾದಶಿ ಮತ್ತು ಶ್ರಾವಣ ಮಾಸಗಳಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ.


ದೇವಾಲಯದ ಹೊರಗೋಡೆಯಲ್ಲಿ ಭಿತ್ತಿಚಿತ್ರಗಳನ್ನು ಅದ್ಭುತವಾಗಿ ಮತ್ತು ಒತ್ತೊತ್ತಾಗಿ ಕೆತ್ತಲಾಗಿದೆ. ಹೊರಗೋಡೆಯ ತಳಭಾಗದಿಂದ ಒಂದರ ಮೇಲೊಂದರಂತೆ ೬ ಪಟ್ಟಿಗಳಲ್ಲಿ (ಸಾಲುಗಳಲ್ಲಿ) ವಿವಿಧ ಕೆತ್ತನೆಗಳನ್ನು ಮಾಡಲಾಗಿದೆ. ತಳಭಾಗದಲ್ಲಿ ಮೊದಲು ಆನೆಗಳ ಸಾಲನ್ನು ನಂತರ ಅಶ್ವಗಳ ಸಾಲನ್ನು ಕೆತ್ತಲಾಗಿದೆ. ಮೂರನೆಯದಾಗಿ ಬಳ್ಳಿ ಸುರುಳಿಯನ್ನು ಕೆತ್ತಲಾಗಿದೆ. ನಾಲ್ಕನೇ ಸಾಲನಲ್ಲಿ ಯಾವುದೇ ಕೆತ್ತನೆಗಳಿಲ್ಲ. ಐದನೇ ಸಾಲಿನಲ್ಲಿ ಮಕರ ಹಾಗೂ ಕೊನೆಯ ಪಟ್ಟಿಯಲ್ಲಿ ಹಂಸಗಳ ಸಾಲನ್ನು ಕೆತ್ತಲಾಗಿದೆ.


ಈ ಆರು ಪಟ್ಟಿಗಳ ಮೆಲೆ ಭಿತ್ತಿಚಿತ್ರಗಳನ್ನು ಕೆತ್ತಲಾಗಿದೆ. ಈ ಕೆತ್ತನೆಗಳಿಗೆ ಮಾರುಹೋಗದಿರಲು ಅಸಾಧ್ಯ. ಇಲ್ಲಿ ೧೪೦ ಕೆತ್ತನೆಗಳಿದ್ದು ಪ್ರತಿಯೊಂದು ಸುಮಾರು ೨-೩ ಅಡಿ ಎತ್ತರವಿವೆ. ಬಲಮುರಿ ಗಣೇಶನ ಕೆತ್ತನೆಯಂತೂ ಅದ್ಭುತವಾಗಿದೆ.


ಉಳಿದ ಪ್ರಮುಖ ಕೆತ್ತನೆಗಳು - ಕಾಳಿಂಗಮರ್ದನ, ರತಿ ಮನ್ಮಥ, ಬ್ರಹ್ಮ, ಮಹಿಷಾಸುರಮರ್ದಿನಿ, ವಾಮನ, ಹರಿಹರ, ದುರ್ಗಾ, ಭೈರವ, ದಕ್ಷಿಣಾಮೂರ್ತಿ, ಹಿರಣ್ಯಕಷಿಪು, ಆರು ಕೈಗಳ ವೀಣಾ ಸರಸ್ವತಿ, ಬಲರಾಮ, ಪರಶುರಾಮ, ಇತ್ಯಾದಿ.


ಸೋಮೇಶ್ವರ ದೇವಾಲಯ ದಕ್ಷಿಣಾಭಿಮುಖವಾಗಿದೆ. ಮುಖಮಂಟಪದ ಮೇಲೆ ನಂದಿಯ ಮೂರ್ತಿಯನ್ನು ಕೂರಿಸಿರುವುದು ವಿಶೇಷ. ಚನ್ನಕೇಶವ ದೇವಾಲಯದಲ್ಲಿ ೩ ಗರ್ಭಗುಡಿಗಳು ಮತ್ತು ಒಂದೇ ದ್ವಾರವಿದ್ದರೆ, ಇಲ್ಲಿ ಒಂದೇ ಗರ್ಭಗುಡಿ ಮತ್ತು ೩ ದ್ವಾರಗಳಿವೆ. ಗರ್ಭಗುಡಿಯಲ್ಲಿ ಸೋಮೇಶ್ವರ ಹೆಸರಿನ ಶಿವಲಿಂಗವಿದ್ದು ಮೇಲ್ಭಾಗದಲ್ಲಿ ಕಲಶವಿರುವ ಗೋಪುರವಿದೆ. ದೇವಾಲಯಕ್ಕೆ ಬೀಗ ಹಾಕಿದ್ದರಿಂದ ನಮಗೆ ಒಳಗೆ ತೆರಳಲಾಗಲಿಲ್ಲ.


ಹೊರಗೋಡೆಯಲ್ಲಿರುವ ಕೆತ್ತನೆಗಳ ರಚನೆ ಮತ್ತು ತಳಭಾಗದಲ್ಲಿರುವ ಪಟ್ಟಿಗಳ ರಚನೆ ಎಲ್ಲವೂ ಚನ್ನಕೇಶವ ದೇವಾಲಯವನ್ನೇ ಹೋಲುತ್ತದೆ. ಆದರೆ ಇಲ್ಲಿ ಕೆತ್ತನೆಗಳ ಕಾರ್ಯ ಅಪೂರ್ಣವಾಗಿದೆ. ಹೊರಗೋಡೆಯಲ್ಲಿ ತಳಭಾಗದಿಂದ ೬ ಪಟ್ಟಿಗಳೇನೋ ಇವೆ. ಆದರೆ ಇವುಗಳ ಮೇಲಿನ ಕೆತ್ತನೆ ಕೆಲಸ ಕೆಲವೊಂದೆಡೆ ಮಾತ್ರ ಇದೆ. ಇಲ್ಲೂ ಮೊದಲ ಸಾಲಿನಲ್ಲಿ ಆನೆಗಳು ಮತ್ತು ಎರಡನೇ ಸಾಲಿನಲ್ಲಿ ಅಶ್ವಗಳಿವೆ. ಆದರೆ ನಂತರದ ಸಾಲುಗಳಲ್ಲಿ ಕೆಲವೆಡೆ ಮಾತ್ರ ಕೆತ್ತನೆಗಳಿವೆ.


ಹೊರಗೋಡೆಯಲ್ಲಿ ಭಿತ್ತಿಚಿತ್ರಗಳಿವೆ. ಆದರೆ ದೇವಾಲಯದ ಸುತ್ತಲೂ ಎಲ್ಲೆಡೆಯಲ್ಲೂ ಕೆತ್ತಲಾಗಿಲ್ಲ. ಇಲ್ಲಿರುವ ಪ್ರಮುಖ ಕೆತ್ತನೆಗಳು - ಭೈರವ, ದುರ್ಗಾ, ಲಕ್ಷ್ಮೀ, ತ್ರಿವಿಕ್ರಮ, ಹರಿಹರ, ಮೋಹಿನಿ, ತಾಂಡವ ಗಣೇಶ, ಮಹಿಷಾಸುರಮರ್ದಿನಿ, ವೇಣುಗೋಪಾಲ, ನೃತ್ಯ ಭಂಗಿಯಲ್ಲಿರುವ ಶಿವ, ಕಾಳಿಂಗಮರ್ದನ, ಇತ್ಯಾದಿ.


ಹಾರ್ನಹಳ್ಳಿಯಲ್ಲೊಂದು ವಿಶಾಲವಾದ ಸುಂದರ ಕೆರೆ ಇದೆ. ೧೧ನೇ ಶತಮಾನದಲ್ಲಿ ಹೊಯ್ಸಳ ದೊರೆ ಸೋಮೇಶ್ವರನು ತನ್ನ ಮಗಳು ನಾಗರತಿಯ ಹೆಸರಿನಲ್ಲಿ ಕಟ್ಟಿರುವ ಪುರಾತನ ಕೆರೆ ಇದು. ಈಗಲೂ ಈ ಕೆರೆಯನ್ನು ’ನಾಗರ್ತಿ ಕೆರೆ’ಯೆಂದೇ ಕರೆಯಲಾಗುತ್ತದೆ.


ಸೋಮೇಶ್ವರನು ಇಲ್ಲಿ ಕೋಟೆಯೊಂದನ್ನೂ ನಿರ್ಮಿಸಿದ್ದಾನೆ. ಊರಿನಲ್ಲಿ ಕೋಟೆಯ ಅವಶೇಷಗಳನ್ನು ಕಾಣಬಹುದು ಎನ್ನಲಾಗುತ್ತದೆಯಾದರೂ ನನಗಂತೂ ಎಲ್ಲೂ ಕಾಣಬರಲಿಲ್ಲ. ಊರಿನ ಹೊರಗೆ ಎಲ್ಲಾದರೂ ಇರಬಹುದು.

ಮಾಹಿತಿ: ಐ.ಸೇಸುನಾಥನ್, ಬಿ.ಆರ್.ಸತ್ಯನಾರಾಯಣ ಮತ್ತು ನಾಗೇಂದ್ರ ಹಾರ್ನಹಳ್ಳಿ

ಭಾನುವಾರ, ಮೇ 08, 2011

ಶಬರಿ ಕೊಳ್ಳ - ಸುರೇಬಾನ


ಇದು ನನಗೆ ತುಂಬಾ ನಿರಾಸೆಯುಂಟುಮಾಡಿದ ಸ್ಥಳ. ಕಣಿವೆಯ ನೋಟ ಸುಂದರವಾಗಿದ್ದರೂ ಸ್ಥಳದಲ್ಲಿ ಗಲೀಜು ಹೆಚ್ಚೇ ಇತ್ತು. ಎಲ್ಲಕ್ಕಿಂತಲೂ ಮಿಗಿಲಾಗಿ ಇಲ್ಲಿದ್ದ ಜಲಧಾರೆ ಈಗ ಶಾಶ್ವತವಾಗಿ ಕಣ್ಮರೆಯಾಗಿದೆ ಎಂಬುದನ್ನು ಕೇಳಿ ಬಹಳ ಖೇದವಾಯಿತು. ಈ ಜಲಧಾರೆಯನ್ನು ನೋಡಲೆಂದೇ ಶಬರಿ ಕೊಳ್ಳಕ್ಕೆ ಬಂದರೆ ಅದು ದರ್ಶನ ನೀಡದೆ ಈಗ ೩ನೇ ವರ್ಷ ಎಂದು ಕೇಳಿ ಬಹಳ ನಿರಾಸೆಯಾಯಿತು.


ಕಣಿವೆ ತುಂಬಾ ವೃಕ್ಷಗಳೇ ತುಂಬಿಹೋಗಿವೆ. ಎಲ್ಲಾ ಉತ್ತಮ ಜಾತಿಯ ವೃಕ್ಷಗಳು. ವೃಕ್ಷಗಳ ತುಂಬಾ ಪಕ್ಷಿಗಳು. ಪಕ್ಷಿಗಳ ಕಲರವ ಕಿವಿಗಳಿಗೆ ಇಂಪಾದ ಅನುಭವವನ್ನು ನೀಡಿತು. ಎರಡೂ ಕಡೆಯಿಂದ ಮೇಲಕ್ಕೆ ಹಬ್ಬಿರುವ ಬೆಟ್ಟಗಳು. ಎರಡೂ ಬೆಟ್ಟಗಳು ಸಂಧಿಸುವ ಸ್ಥಳದಲ್ಲಿ ಇದ್ದ ಜಲಧಾರೆ ಮಾಯ. ಶಬರಿಯ ಮಂದಿರದ ಪಕ್ಕದಲ್ಲೇ ಎರಡು ನೀರಿನ ಹೊಂಡಗಳು. ಅಲ್ಲೇ ಶಬರಿ ರಾಮನಿಗೆ ನೀಡಿದ್ದ ಬೋರೆ ಹಣ್ಣುಗಳ ಮರ.


ಶ್ರೀರಾಮನ ದರ್ಶನಕ್ಕಾಗಿ ಶಬರಿ ಕಾದು ನಿಂತಿದ್ದು, ಆತ ಬಂದಾಗ ಬಟ್ಟಲು ತುಂಬಾ ಇದ್ದ ಬೋರೆ ಹಣ್ಣುಗಳಲ್ಲಿ ಸಿಹಿಯಾದುದು ಯಾವುದೆಂದು ತಾನೇ ತಿಂದು ಪರೀಕ್ಷಿಸಿ ಆ ಹಣ್ಣನ್ನು ಮಾತ್ರ ಶ್ರೀರಾಮನಿಗೆ ನೀಡಿದಳು. ರಾಮನು ಆಕೆಯ ಭಕ್ತಿಯನ್ನು ಮೆಚ್ಚಿ ವರ ಕೇಳು ಎಂದಾಗ, ಆಕೆ ರಾಮನ ತೊಡೆಯ ಮೇಲೆ ಶಿರವನ್ನಿಟ್ಟು ಅಲ್ಲೇ ಕೊನೆಯುಸಿರೆಳೆಯಲು ಇಚ್ಛಿಸಿದಾಗ ಆಕೆಗೆ ನೀರು ಬೇಕಿತ್ತು. ರಾಮ ಕುಳಿತಲ್ಲಿಂದಲೇ ಬಾಣ ಬಿಟ್ಟು ನೀರು ಪುಟಿದ ಸ್ಥಳವನ್ನು ಈಗ ಎಣ್ಣೆಹೊಂಡ ಎನ್ನಲಾಗುತ್ತದೆ. ಈ ಹೊಂಡದ ನೀರು ಎಂದಿಗೂ ಬತ್ತುವುದಿಲ್ಲ ಮತ್ತು ಇದನ್ನು ಪವಿತ್ರ ತೀರ್ಥವೆಂದು ಇಲ್ಲಿಗೆ ಬರುವ ಭಕ್ತಾದಿಗಳು ಭಾವಿಸುತ್ತಾರೆ. ಆದರೆ ಈ ಹೊಂಡ ತುಂಬಾ ಗಲೀಜಾಗಿತ್ತು. ಅದನ್ನು ಸ್ವಚ್ಛ ಮಾಡದೇ ಅದೆಷ್ಟು ವರ್ಷಗಳಾದವೋ.


ಇಲ್ಲಿರುವ ಬೋರೆ ಹಣ್ಣಿನ ಮರದ ಎಲ್ಲಾ ಹಣ್ಣುಗಳನ್ನು ಲೀನಾ ಮತ್ತು ಆಕೆಯ ತಂಡ ಪೂರ್ತಿಯಾಗಿ ಖಾಲಿಮಾಡಿತು. ಸರಿಯಾಗಿ ಹಣ್ಣಾದ ಮೇಲೆ ತಿಂದರೆ ಅದ್ಭುತ ರುಚಿಯಿರುತ್ತೆ ಎನ್ನುತ್ತಾ ಇನ್ನೂ ಪಕ್ವವಾಗದ ಹಣ್ಣುಗಳನ್ನು ಕೂಡಾ ಚೀಲದಲ್ಲಿ ತುಂಬಿಸಿಕೊಂಡರು. ಪುಕ್ಕಟೆ ಸಿಕ್ಕಿದರೆ ಬಾಚುವ ನಮ್ಮ ಚಾಳಿ ಕಂಡು ಸೋಜಿಗವೆನಿಸಿತು!


ಶಬರಿಯ ದೇಗುಲ ಬಹಳ ವಿಶಾಲ ಮುಖಮಂಟಪವನ್ನು ಹೊಂದಿದೆ. ನವರಂಗವೂ ಚೆನ್ನಾಗಿದೆ. ಗರ್ಭಗುಡಿಯಲ್ಲಿರುವ ಶಬರಿಯ ಮೂರ್ತಿಯು ಸಣ್ಣ ಆಕಾರದಾಗಿದ್ದು, ಹಸಿರು ಬಣ್ಣದ ಸೀರೆಯನ್ನು ತೊಡಿಸಲಾಗಿತ್ತು. ಈ ಸೀರೆಯಲ್ಲಿ ಶಬರಿ ಬಹಳ ಆಕರ್ಷಕವಾಗಿ ಕಾಣುತ್ತಿದ್ದಳು. ಅಲ್ಲೇ ಸಮೀಪದಲ್ಲಿ ರಾಮನ ಭೇಟಿಯ ನೆನಪಿಗಾಗಿ ಸಣ್ಣ ರಾಮ ದೇವಾಲಯವನ್ನೂ ನಿರ್ಮಿಸಲಾಗಿದೆ.

ಮಾಹಿತಿ: ವಿವೇಕ್ ಯೇರಿ

ಭಾನುವಾರ, ಮೇ 01, 2011

ಅಡಗೂರು ಲಕ್ಷ್ಮೀನಾರಾಯಣ


ಅಡಗೂರಿನ ಲಕ್ಷ್ಮೀನಾರಾಯಣ ದೇವಾಲಯ ತ್ರಿಕೂಟ ಶೈಲಿಯ ದೇವಾಲಯವಾಗಿದ್ದರೂ ಪ್ರಮುಖ ಗರ್ಭಗುಡಿಯ ಮೇಲೆ ಮಾತ್ರ ಗೋಪುರದ ರಚನೆಯಿದೆ. ಲಕ್ಷ್ಮೀನಾರಾಯಣನನ್ನು ಇಲ್ಲಿ ’ವಡಗನಾರಾಯಣ’ ಎಂಬ ಹೆಸರಿನಿಂದಲೂ ಕರೆಯುತ್ತಾರೆ. ಸಣ್ಣದಾದರೂ ಆಕರ್ಷಕ ಮುಖಮಂಟಪವಿದ್ದು, ಕುಳಿತುಕೊಳ್ಳಲು ವ್ಯವಸ್ಥೆಯಿದೆ. ಎಲ್ಲಾ ೩ ಗರ್ಭಗುಡಿಗಳಿಗೆ ಸಾಮಾನ್ಯ ನವರಂಗವಿದೆ. ಪ್ರಮುಖ ಗರ್ಭಗುಡಿಗೆ ಮಾತ್ರ ಅಂತರಾಳವಿದೆ. ಪ್ರಮುಖ ಗರ್ಭಗುಡಿಯಲ್ಲಿ ಲಕ್ಷ್ಮೀ ಮತ್ತು ನಾರಾಯಣನ ವಿಗ್ರಹವಿದ್ದರೆ, ಉಳಿದೆರಡರಲ್ಲಿ ವೇಣುಗೋಪಾಲನ ಮತ್ತು ಸರಸ್ವತಿ ದೇವಿಯ ವಿಗ್ರಹಗಳಿವೆ. ವೇಣುಗೋಪಾಲನ ಒಂದು ಕಾಲು ಭಗ್ನಗೊಂಡಿದೆ.


ದೇವಾಲಯದ ಹೊರಗೋಡೆಯಲ್ಲಿ ಯಾವುದೇ ಕೆತ್ತನೆಗಳಿಲ್ಲದಿದ್ದರೂ ಆಕರ್ಷಕವಾಗಿ ನಿರ್ಮಿಸಲಾಗಿದೆ. ಶಿಖರವೂ ಸುಂದರವಾಗಿದೆ. ಇತರ ಹೊಯ್ಸಳ ದೇವಾಲಯಗಳಂತೆ ಇದು ಕೂಡಾ ನಕ್ಷತ್ರಾಕಾರದ ಜಗುಲಿಯ ಮೇಲೆ ನಿರ್ಮಿತಗೊಂಡಿದ್ದು ಪೂರ್ವಾಭಿಮುಖವಾಗಿದೆ. ೧೧ನೇ ಶತಮಾನದಲ್ಲಿ ಸಣ್ಣ ಪ್ರಮಾಣದಲ್ಲಿ ನಿರ್ಮಿತಗೊಂಡಿದ್ದ ದೇವಾಲಯವನ್ನು ನಂತರ ೧೩ನೇ ಶತಮಾನದಲ್ಲಿ ಹೊಯ್ಸಳರು ಅಭಿವೃದ್ಧಿಪಡಿಸಿರಬಹುದು ಎಂದು ನಂಬಲಾಗಿದೆ. ಆದರೆ ದೇವಾಲಯ ಏನೇನೂ ಸ್ವಚ್ಚವಾಗಿಲ್ಲ. ಮುಖಮಂಟಪದಲ್ಲೇ ಸಿಗರೇಟು ತುಂಡುಗಳನ್ನು ಕಂಡು ಅವಕ್ಕಾದೆ. ಒಳಗೆಲ್ಲಾ ಕಸ ಕಡ್ಡಿಗಳು ಮತ್ತು ಧೂಳು. ಊರವರಿಗೆ ಈ ದೇವಾಲಯದ ಬಗ್ಗೆ ಸ್ವಲ್ಪನೂ ಕಾಳಜಿಯಿಲ್ಲವೇ ಎಂದೆನಿಸತೊಡಗಿತು.


ದೇವಾಲಯಕ್ಕೆ ಯಾವಾಗಲೂ ಬೀಗ ಜಡಿದಿರುತ್ತದೆ. ಅಲ್ಲೇ ಸಮೀಪದಲ್ಲಿರುವ ಮನೆಯಿಂದ ಬೀಗದಕೈಯನ್ನು ಪಡೆದುಕೊಳ್ಳಬೇಕು. ಊರವರಲ್ಲಿ ದೇವಾಲಯವನ್ನು ಯಾಕೆ ಸ್ವಚ್ಛವಾಗಿಟ್ಟುಕೊಳ್ಳಬಾರದು ಎಂದು ಮಾತುಕತೆ ಆರಂಭಿಸಿದೆ. ಇಷ್ಟು ಸ್ವಚ್ಛವಾಗಿರುವುದೇ ದೊಡ್ಡ ವಿಷಯ ಎಂದು ಅವರು ಮಾತಿಗಾರಂಭಿಸಿದರು. ದೇವಾಲಯಕ್ಕೆ ಈಗ ಪ್ರಾಂಗಣವಿದೆ. ಅದು ಕೂಡಾ ಒಂದು ವರ್ಷದ ಹಿಂದೆ ನಿರ್ಮಿಸಲಾಗಿತ್ತು. ಪ್ರಾಂಗಣವಿದ್ದರೂ ಗೇಟು ಇರಲಿಲ್ಲ. ಹಾಗಾಗಿ ದನ ಕರುಗಳಿಗೆ ಮತ್ತು ಹಳ್ಳಿಗರಿಗೆ ಇದೊಂದು ಬಹಿರ್ದೆಸೆ ಮಾಡುವ ತಾಣವಾಗಿತ್ತು! ನಾವು ತೆರಳಿದಾಗ ಗೇಟನ್ನು ತಯಾರು ಮಾಡಿ ತರಲಾಗಿತ್ತು, ಆದರೆ ಕೂರಿಸಿರಲಿಲ್ಲ. ಇನ್ನೊಂದೆರಡು ದಿನದಲ್ಲಿ ಅದನ್ನು ಕೂರಿಸಲಿದ್ದೇವೆ. ಗೇಟೊಂದು ಬಿದ್ದರೆ ನಂತರ ಸ್ವಲ್ಪ ನಿರಾಳವಾಗಿರಬಹುದು ಎಂದು ಊರವರ ಅಭಿಪ್ರಾಯ. ಮೊದಲು ದೇವಾಲಯಕ್ಕೆ ಹೇಳುವವರು ಕೇಳುವವರು ಯಾರೂ ಇರಲಿಲ್ಲ. ಈಗ ಊರವರು ಒಂದು ಸಮಿತಿಯನ್ನು ರಚಿಸಿ ಅದರ ಪ್ರಕಾರ ದೇವಾಲಯದ ಅಭಿವೃಧ್ಧಿಯನ್ನು ಕೈಗೆತ್ತಿಕೊಂಡಿದ್ದಾರೆ. ದೇವಾಲಯದ ಒಳಗೆ ತುಂಬಾ ಗಲೀಜು ಇದೆ. ಅದನ್ನು ಇನ್ನು ಸ್ವಚ್ಛ ಮಾಡಬೇಕಷ್ಟೇ ಎಂದು ಅವರು ಒಪ್ಪಿಕೊಂಡರು. ಈ ಕಾರ್ಯ ಆದಷ್ಟು ಬೇಗ ಆಗಲಿ.

ಇಷ್ಟೆಲ್ಲಾ ನಿರ್ಲಕ್ಷಿಸಿದರೂ ದೇವಾಲಯದ ೩ ವಿಗ್ರಹಗಳು, ಬಣ್ಣ ಸ್ವಲ್ಪ ಮಾಸಿದೆ ಎನ್ನುವುದನ್ನು ಹೊರತುಪಡಿಸಿದರೆ ಇನ್ನೂ ಸುಸ್ಥಿತಿಯಲ್ಲಿವೆ ಎಂದರೆ ಅಚ್ಚರಿಪಡುವ ವಿಷಯ. ದೇವಾಲಯದ ಬೀಗದಕೈ ಇರುವ ಮನೆಯ ಅಜ್ಜಿ ನಮ್ಮನ್ನು ತುಂಬಾ ಅದರದಿಂದ ಬರಮಾಡಿಕೊಂಡು ಲೀನಾಳಿಗೆ ಅರಶಿನ ಕುಂಕುಮ ಹೂವು ಇತ್ಯಾದಿ ನೀಡಿ ಹಾರೈಸಿ ಬೀಳ್ಕೊಟ್ಟಳು. ಲೀನಾಳಿಗೆ ಊರಿನ ಹೆಸರು ನೆನಪಿಲ್ಲದಿದ್ದರೂ ಅಜ್ಜಿಯ ಆತ್ಮೀಯತೆಯ ನೆನಪು ಮಾತ್ರ ಇದೆ.