ಮಂಗಳವಾರ, ನವೆಂಬರ್ 13, 2007

ಕಲಾವಳಿ - ಕರಾವಳಿಯ ಕಲಾವಿದರ ಸಂಗಮ


ಗೆಳೆಯ ದಿನೇಶ್ ಹೊಳ್ಳ ಕಳೆದ ಒಂದು ತಿಂಗಳಿನಿಂದ ಭಾರೀ ಬ್ಯುಸಿ. ಎಲ್ಲಾದರು ಚಾರಣ ಕಾರ್ಯಕ್ರಮವಿದೆಯೇ ಎಂದು ಫೋನಾಯಿಸಿದರೆ, 'ಓಓಓಓ...' ಎನ್ನುವ ರೀತಿ ನೋಡಿದರೆ ಚಾರಣ ಎಂಬ ಹವ್ಯಾಸವೇ ಮರೆತುಹೋಗಿದೆಯೇ ಎಂಬ ಸಂಶಯ ಬರುತ್ತಲಿದೆ. ಹೊಳ್ಳರು ಬ್ಯುಸಿ ಆದರೆ ಆ ತಿಂಗಳ ಮಂಗಳೂರು ಯೂತ್ ಹಾಸ್ಟೆಲ್ ಚಾರಣ ಹಳ್ಳ ಹಿಡಿದಂತೆ. ಈಗ ಸದ್ಯಕ್ಕೆ ಚಾರಣವಂತೂ ದೂರದ ಮಾತು. ನವೆಂಬರ್ ೨೫ರ ವರೆಗಂತೂ ಅವರಲ್ಲಿ ಮಾತನಾಡಲೂ ಸಮಯವಿಲ್ಲ.

ಕರಾವಳಿಯ ಕಲಾವಿದರೆಲ್ಲಾ ಸೇರಿ ನವೆಂಬರ್೨೪ ಮತ್ತು ೨೫, ೨೦೦೭ರಂದು ಒಂದು ಪ್ರಶಂಸನೀಯ ಕಾರ್ಯಕ್ರಮವನ್ನು ಆಯೋಜಿಸಲಿದ್ದಾರೆ. ಆ ೨ ದಿನಗಳಂದು ಮಂಗಳೂರಿನ ಕದ್ರಿ ಪಾರ್ಕ್ ಬಳಿ ಕರಾವಳಿಯ ಎಲ್ಲಾ ಕಲಾವಿದರನ್ನು ಒಂದೆಡೆ ಸೇರಿಸಿ ಪ್ರತಿ ಕಲಾವಿದನಿಗೂ ಒಂದು ಪ್ರತ್ಯೇಕ 'ಸ್ಟಾಲ್' ನೀಡಿ ಅಲ್ಲಿ ಅಯಾ ಕಲಾವಿದರು ರಚಿಸಿರುವ ಚಿತ್ರಗಳನ್ನು ಪ್ರದರ್ಶನ/ ಮಾರಾಟಕ್ಕೆ ಇಟ್ಟು ಸಂಪೂರ್ಣ ಪ್ರೋತ್ಸಾಹವನ್ನು ಪ್ರತಿ ಕಲಾವಿದನಿಗೆ ನೀಡುವುದು. ಈ ಮಧ್ಯೆ ಅಲ್ಲೇ ಇರುವ 'ಸ್ಟೇಜ್' ನಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ಕದ್ರಿ ಪಾರ್ಕ್ ನ ಪಾರ್ಶ್ವದಲ್ಲಿರುವ ಸುಮಾರು ೧.೫ಕಿಮಿ ಉದ್ದದ ರಸ್ತೆಯಲ್ಲಿ ಈ ೨ ದಿನಗಳಂದು ವಾಹನ ಓಡಾಟ ಇರಲಾರದು. ರಸ್ತೆಯ ೨ ತುದಿಗಳಲ್ಲಿ ಸ್ವಾಗತ ಕಮಾನು. ರಸ್ತೆಯ ಇಕ್ಕೆಲಗಳಲ್ಲಿ ಆಯಾ ಕಲಾವಿದರ 'ಸ್ಟಾಲ್'ಗಳು. ಸುಮಾರು ೨೫೦ ಕಲಾವಿದರು ಪಾಲ್ಗೊಳ್ಳಲಿದ್ದಾರೆ. ಪ್ರತಿ ಕಲಾವಿದ ತನ್ನ ಚಿತ್ರಗಳನ್ನು ಪ್ರದರ್ಶಿಸಲಿದ್ದಾನೆ.

ತನಗಾಗಿ ಕಾದಿರಿಸಿದ 'ಸ್ಟಾಲ್'ನ ಬಾಡಿಗೆಯಾಗಿ ಸಣ್ಣ ಮೊತ್ತವನ್ನು ಪಾವತಿಸಿವುದನ್ನು ಹೊರತುಪಡಿಸಿ, ತಾನು ರಚಿಸಿರುವ ಚಿತ್ರಗಳ ಮಾರಾಟದಿಂದ ಗಳಿಸಿದ ಹಣದಲ್ಲಿ ಆಯೋಜಕರಿಗೆ ಒಂದು ನಯಾ ಪೈಸೆಯನ್ನೂ ಯಾವುದೇ ಕಲಾವಿದ ನೀಡಬೇಕಾಗಿಲ್ಲ. ಉತ್ತಮ ಕಲೆಗಾರಿಕೆಯಿದ್ದೂ ತನ್ನ ಚಿತ್ರಗಳನ್ನು ಪ್ರದರ್ಶಿಸಲು ಹೆಣಗಾಡುವ ಕಲಾವಿದರಿಗೆ ಇದೊಂದು ಸುವರ್ಣಾವಕಾಶ.

ವಿಜಯ ಕರ್ನಾಟಕದಲ್ಲಿ ತನ್ನ 'ಸೂರ್ಯಕಾಂತಿ' ಅಂಕಣಕ್ಕಾಗಿ ಕರಾವಳಿಯ ಎಲ್ಲಾ ಕಲಾವಿದರನ್ನು ದಿನೇಶ್ ವ್ಯಕ್ತಿಗತವಾಗಿ ಭೇಟಿ ಮಾಡಬೇಕಾಗಿತ್ತು. ನೂರಕ್ಕಿಂತಲೂ ಅಧಿಕ ಕಲಾವಿದರನ್ನು ಭೇಟಿ ಮಾಡಿ ಮಾತನಾಡಿಸಿರುವ ಮತ್ತು ಸ್ವತ: ಉತ್ತಮ ಕಲಾವಿದನಾಗಿರುವ ದಿನೇಶ್, ಕಲಾವಿದರ ಬವಣೆಗಳನ್ನು ಸಮೀಪದಿಂದ ಬಲ್ಲರು. ಬಡ ಕಲಾವಿದರಿಗಿರುವ ಆರ್ಥಿಕ ಮುಗ್ಗಟ್ಟು, ಪ್ರೋತ್ಸಾಹದ ಕೊರತೆ, ರಾಜಕೀಯ ಇತ್ಯಾದಿಗಳನ್ನು ಸೂಕ್ಷ್ಮವಾಗಿ ಅರ್ಥ ಮಾಡಿಕೊಂಡಿರುವ ದಿನೇಶ್, ತನ್ನಂತೆ ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸುವ ಕೋಟಿ ಪ್ರಸಾದ್ ಆಳ್ವ, ಕರುಣಾಕರ ಎಮ್. ಎಚ್ ಇವರೊಂದಿಗೆ ಸೇರಿ ಈ ದೊಡ್ಡ ಕಾರ್ಯಕ್ರಮವನ್ನು ಆಯೋಜಿಸಿಕೊಂಡಿದ್ದಾರೆ. ಈ ಬಗ್ಗೆ ನನ್ನ ಕೊರೆತ ಇಷ್ಟು ಸಾಕೆನಿಸುತ್ತಿದೆ. ಇನ್ನು ಕೆಳಗೆ ಇರುವ ಹೆಚ್ಚಿನ ಮಾಹಿತಿಯನ್ನು 'ಕುಡ್ಲ ಕಲಾವಳಿ'ಯ 'ಮಾಹಿತಿ ಪುಟ' ದಿಂದ ನೇರವಾಗಿ ಕದ್ದು ಬರೆದಿದ್ಡೇನೆ.

ಇವತ್ತಿನ ಸಮಕಾಲೀನ ಸಂದರ್ಭದಲ್ಲಿ ಎಲ್ಲಾ ಕ್ಷೇತ್ರಗಳ ಹಾಗೆ ಚಿತ್ರಕಲಾ ಕ್ಷೇತ್ರದಲ್ಲೂ ಸಾಕಷ್ಟು ಪ್ರಗತಿ, ಬದಲಾವಣೆಗಳು ಆಗಿವೆಯಾದರೂ, ಅವನ್ನು ಎದುರಿಸುವ ಸವಾಲುಗಳೂ ಕಲಾವಿದರ ಮುಂದೆ ಸಾಕಷ್ಟು ಬೆಳೆದು ನಿಂತಿವೆ. ಇವೆಲ್ಲವುಗಳಿಗೂ ಉತ್ತರಗಳನ್ನು ಕಂಡುಕೊಳ್ಳುವ ದೃಷ್ಟಿಯಿಂದ ಹಾಗೂ ಇಂದಿನ ಅಗತ್ಯತೆಗಳನ್ನು ಕುರಿತು ಗಮನ ಹರಿಸುವಂತಹ ದೊಡ್ಡ ಪ್ರಮಾಣದ ಸಾಮೂಹಿಕ ಕಲಾ ಚಟುವಟಿಕೆಯನ್ನು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಯೋಜಿಸಲು ಇಲ್ಲಿನ ಎಲ್ಲಾ ಕಲಾವಿದರು ನಿರ್ಧಾರ ಮಾಡಿಕೊಂಡಿದ್ದೇವೆ. ಈ ನಿಟ್ಟಿನಲ್ಲಿ ಬದಲಾದ ಜಾಗತೀಕರಣ ಸಂದರ್ಭದಲ್ಲಿ ಮತ್ತು ಇಂತಹ ಪ್ರಗತಿಪರ ಕೇಂದ್ರದಲ್ಲಿ 'ಕುಡ್ಲ ಕಲಾವಳಿ'ಯಂಥ ಬೃಹತ್ ಕಲಾಮೇಳವನ್ನು ಪ್ರಪ್ರಥಮ ಬಾರಿಗೆ ಹಮ್ಮಿಕೊಳ್ಳಲು ಎಲ್ಲಾ ಕಲಾವಿದರು ಸಂಕಲ್ಪ ಮಾಡಿದ್ದೇವೆ. ಇದು ನಮ್ಮ ಸಂಕಲ್ಪ ಮಾತ್ರವಲ್ಲ, ಸಾಂಸ್ಕೃತಿಕವಾಗಿ ಕಲಾ ಸಂಸ್ಕಾರವನ್ನು ಬಿತ್ತಿ ಬೆಳೆಯಿಸುವ ಧ್ಯೇಯವನ್ನು ನಾವು ಹೊಂದಿದ್ದೇವೆ. ಇದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಇಲ್ಲಿನ ಕಲಾವಲಯದ ಪ್ರಮುಖರನೇಕರು ಸೇರಿ 'ಕುಡ್ಲ ಕಲಾವಳಿ' ಕಲಾಮೇಳವನ್ನು ೨೦೦೭ನೇ ನವೆಂಬರ್ ೨೪ ಮತ್ತು ೨೫ರಂದು ಮಂಗಳೂರಿನ 'ಕದ್ರಿ ಪಾರ್ಕ್'ನಲ್ಲಿ ನಡೆಸಲು ನಿಶ್ಚಯಿಸಲಾಗಿದೆ. ಇಂತಹ ಒಂದು ಪರಿಕಲ್ಪನೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಮಂಗಳೂರಿನ ಎಸ್.ಎಸ್.ಕ್ರಿಯೇಶನ್ಸ್ ಬೆನ್ನೆಲುಬಾಗಿ ನಿಂತಿದೆ.

'ಕುಡ್ಲ ಕಲಾವಳಿ'ಯಲ್ಲಿ ಕರಾವಳಿಯ ಕಲಾವಿದರ ಚಿತ್ರಕಲೆ, ಶಿಲ್ಪಕಲೆ, ಭಿತ್ತಿ ಕಲೆ, ಛಾಯಾ ಚಿತ್ರಕಲೆ ಹಾಗೂ ಕರಕುಶಲ ಕಲೆಗಳ ಪ್ರದರ್ಶನಕ್ಕಾಗಿ ಸುಮಾರು ೨೦೦ ಕಲಾ ಪ್ರದರ್ಶನ ಮಳಿಗೆಗಳನ್ನು ನಿರ್ಮಿಸಿಕೊಡಲಾಗುವುದು. ೨೫೦ಕ್ಕೂ ಹೆಚ್ಚು ಕಲಾವಿದರು ಮತ್ತು ೭೦೦ಕ್ಕೂ ಹೆಚ್ಚು ಚಿತ್ರಕಲಾ ಸ್ಪರ್ಧಾಳುಗಳು ಭಾಗವಹಿಸಲಿದ್ದಾರೆ. ಅಲ್ಲದೇ, 'ಕುಡ್ಲ ಕಲಾವಳಿ'ಯ ಪ್ರಮುಖ ಅಂಗವಾಗಿ ಚಿತ್ರಕಲಾ ಪ್ರದರ್ಶನ, ಛಾಯಾಚಿತ್ರಕಲಾ ಪ್ರದರ್ಶನ, ಚಿತ್ರಕಲಾ ಸ್ಪರ್ಧೆ ಹಾಗೂ ಕಲಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು.

ಮುಖ್ಯ ಉದ್ದೇಶಗಳು:

  • ಸಮಾಜಿಕವಾಗಿ ಕಲೆಯನ್ನು ಮತ್ತು ಕಲಾಕೃತಿಗಳನ್ನು ಜನಸಮಾನ್ಯರಿಗೆ ತಲುಪಿಸುವುದು

  • ದೃಶ್ಯಕಲೆಯ ವಿವಿಧ ಕಲಾ ಪ್ರಕಾರಗಳನ್ನು ಪರಿಚಯಿಸುವುದು

  • ಪ್ರತಿಭಾವಂತ ಕಲಾವಿದರನ್ನು ಮತ್ತು ಅವರ ಕಲಾಕೃತಿಗಳನ್ನು ಒಂದೇ ವೇದಿಕೆಯಲ್ಲಿ ಪರಿಚಯಿಸುವುದು

  • ಯುವ ಹಾಗೂ ಬೆಳಕಿಗೆ ಬಾರದ ಪ್ರತಿಭಾವಂತ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುವುದು

  • ಸಮಕಾಲೀನ ಕಲಾಕೃತಿಗಳ ಪರಿಚಯ

  • ಕುಶಲಕಲೆಯ ಅಭಿವ್ಯಕ್ತಿಯ ಅಂಶಗಳನ್ನು ಬಿಂಬಿಸುವುದು

  • ಆಧುನಿಕ ಕಲಾ ಬೆಳವಣಿಗೆಗಳ ಪರಿಚಯ

  • ಕಲಾ ಪ್ರಾತ್ಯಕ್ಷಿಕೆಗಳ ಮುಖಾಂತರ ಕಲಾ ತಂತ್ರಗಳನ್ನು ಪರಿಚಯಿಸುವುದು

  • ಹಿರಿಯ ಕಲಾವಿದರೊಬ್ಬರನ್ನು ಸನ್ಮಾನಿಸುವುದು


  • ಕಲಾ ಪ್ರಾತ್ಯಕ್ಷಿಕೆ:

  • ನಿಸರ್ಗ ಚಿತ್ರಣ (Landscape Painting)

  • ಭಿತ್ತಿ ಚಿತ್ರ/ಶಿಲ್ಪ (Murals)

  • ಕೋಲಾಜ್ ಚಿತ್ರ (Collage Works)

  • ಭಾವ ಚಿತ್ರ (Portrait Painting)

  • ಪ್ರತಿಷ್ಠಾಪನಾ ಕಲೆ (Installation Art)

  • ಛಾಯಾ ಚಿತ್ರ (Photography)

  • ಕಾರ್ಯದರ್ಶಿ - ದಿನೇಶ್ ಹೊಳ್ಳ; ಅಧ್ಯಕ್ಷರು - ಗಣೇಶ್ ಸೋಮಯಾಜಿ ಬಿ.; ಸಂಚಾಲಕರು - ಎನ್.ಎಸ್.ಪತ್ತಾರ್; ಸಹ ಸಂಚಾಲಕರು - ರಾಜೇಂದ್ರ ಕೇದಿಗೆ

    ಕುಡ್ಲ ಕಲಾವಳಿ - ಕರುಣಾಕರ್ ಎಮ್.ಎಚ್.; ದೂರವಾಣಿ - (೦೮೨೪) ೪೨೬೯೮೯೬; ವಿ ಅಂಚೆ - kudlakalavali@yahoo.co.in

    ಭಾನುವಾರ, ನವೆಂಬರ್ 11, 2007

    ೨೦೦೭-೦೮ ರಣಜಿ ಋತು ಮತ್ತು ಕರ್ನಾಟಕ

    ೭೪ನೇ ರಣಜಿ ಋತು ನವೆಂಬರ್ ೩ ರಂದು ಆರಂಭಗೊಂಡಿದೆ. ಈ ಬಾರಿಯಾದರೂ ಮುಂಬೈ ಬಿಟ್ಟು ಬೇರೆ ತಂಡ ರಣಜಿ ಟ್ರೋಫಿ ಗೆಲ್ಲುವುದೋ ... ಕಾದು ನೋಡಬೇಕು. ಕಳೆದ ಋತುವಿನಲ್ಲಿ ಸೆಮಿಫೈನಲ್ ನಲ್ಲಿ ತನ್ನ ಅಭಿಯಾನ ಮುಗಿಸಿದ ಕರ್ನಾಟಕ, ಈ ಋತುವಿನಲ್ಲಿ ಸೆಮಿಫೈನಲ್ ಪ್ರವೇಶಿಸಿದರೆ ಅದೇ ದೊಡ್ಡ ಸಾಧನೆ. ಕಳೆದ ಋತುವಿನಲ್ಲಿ ಕರ್ನಾಟಕದ ಉತ್ತಮ ಪ್ರದರ್ಶನಕ್ಕೆ ಕಾರಣ ರಾಬಿನ್ ಉತ್ತಪ್ಪ. ಪ್ರಮುಖ ಪಂದ್ಯಗಳಲ್ಲಿ ರಾಬಿನ್ ನೀಡಿದ ಉತ್ತಮ ಆರಂಭದಿಂದ ಕರ್ನಾಟಕ ಉತ್ತಮ ಮೊತ್ತಗಳನ್ನು ಕಲೆಹಾಕುವಲ್ಲಿ ಯಶಸ್ವಿಯಾಗಿತ್ತು. ಆದ್ದರಿಂದ ಬೌಲರ್ ಗಳಿಗೂ ಉತ್ತಮ ಮೊತ್ತದ ಬೆಂಬಲವಿದ್ದರಿಂದ ಎದುರಾಳಿ ತಂಡಗಳನ್ನು ಕಬಳಿಸುವಲ್ಲಿ ಕರ್ನಾಟಕ ಸಾಕಷ್ಟು ಯಶಸ್ವಿಯಾಗಿತ್ತು.

    ಅದೇನು ಯೇಸು ಕ್ರಿಸ್ತನ ಮಾಯೆಯೋ, ಆ ರೋಲಂಡ್ ಬ್ಯಾರಿಂಗ್ಟನ್ ಮತ್ತೆ ತಂಡದಲ್ಲಿ ಸ್ಥಾನ ಪಡೆದದ್ದು ಮಹಾದಾಶ್ಚರ್ಯ! ಕಳೆದೆರಡು ಋತುವಿನಲ್ಲಿ ಕಳಪೆ ಪ್ರದರ್ಶನ ನೀಡಿದರೂ ಬ್ಯಾರಿಂಗ್ಟನ್ ಮತ್ತೆ ತನ್ನ ಸ್ಥಾನ ಕಾಯ್ದುಕೊಂಡಿದ್ದಾರೆ. ರೋಲಂಡ್ ಬ್ಯಾರಿಂಗ್ಟನ್ ಒಬ್ಬ ಕಲಾತ್ಮಕ ಆರಂಭಿಕ ಆಟಗಾರ. ತನ್ನಲ್ಲಿರುವ ಪ್ರತಿಭೆಗೆ ತಕ್ಕಂತೆ ಆಡಿದರೆ ಈತನನ್ನು ಔಟ್ ಮಾಡಲು ಎದುರಾಳಿ ಬೌಲರ್ ಗಳು ಹೆಣಗಾಡಬೇಕಾಗುತ್ತದೆ. ಆದರೆ ಕಳೆದೆರಡು ಋತುಗಳಿಂದ ಕ್ರಿಕೆಟ್ ಬಗ್ಗೆ ಮಾತನಾಡುವುದು ಮತ್ತು ಯೋಚಿಸುವುದನ್ನು ಬಿಟ್ಟು ತನ್ನ ಧರ್ಮದ ಬಗ್ಗೆ ಅತಿಯಾಗಿ ಮಾತನಾಡುವುದು ಮತ್ತು ಯೋಚಿಸುವುದನ್ನು ಮಾಡುತ್ತಿರುವುದರಿಂದ ಬ್ಯಾರಿಂಗ್ಟನ್ ಆಟದ ಮೇಲೆ ಗಮನ ಕಳೆದುಕೊಳ್ಳುತ್ತಿದ್ದಾರೆ. ಬ್ಯಾರಿಂಗ್ಟನ್ ಈಗ ಸೀನಿಯರ್ ಆಟಗಾರ. ಅದರಂತೆಯೇ ಅವರು ನಡೆದುಕೊಳ್ಳುವುದೂ ಲೇಸು. ಈ ಋತುವಿನಲ್ಲಾದರೂ ರೋಲಂಡ್, ಕರ್ನಾಟಕಕ್ಕೆ ಒಂದೆರಡಾದರೂ ಉತ್ತಮ ಆರಂಭವನ್ನು ದೊರಕಿಸಿಕೊಡಲಿ. ಆಮೆನ್.

    ಸಿಕ್ಕಿದ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡಿದ್ದ ಭರತ್ ಚಿಪ್ಲಿ ತಂಡದಲ್ಲಿಲ್ಲ! ಆಕರ್ಷಕ ಆಟಗಾರ ಭರತ್, ಕಳೆದ ರಣಜಿ ಋತು ಮತ್ತು ಹಾಲಿ ಕೆ.ಎಸ್.ಸಿ.ಎ ಬೆಂಗಳೂರು ಲೀಗ್ ನಲ್ಲಿ ಉತ್ತಮ ಪ್ರದರ್ಶನ ನೀಡಿದರೂ ಅವರ ಆಯ್ಕೆ ಆಗದಿರುವುದು ಕೆ.ಎಸ್.ಸಿ.ಎ ಯಲ್ಲಿ ಚುಕ್ಕಾಣಿ ಹಿಡಿಯುವವರು ಬದಲಾದರೂ, ಶಿಫಾರಸಿನ ಮತ್ತು ರಾಜಕೀಯದ ಹಳೇ ಚಾಳಿ ಬದಲಾಗಿಲ್ಲ ಎಂಬುದಕ್ಕೆ ನಿದರ್ಶನ. ಸಾಗರದವರಾದ ಭರತ್ ಚಿಪ್ಲಿಗೆ ಬೆಂಗಳೂರಿನಲ್ಲಿ, ಯಾರೂ 'ಗಾಡ್ ಫಾದರ್'ಗಳಿಲ್ಲ. ಈ ಹಿನ್ನಡೆಯಿಂದ ಎದೆಗುಂದದೆ ಭರತ್, ಇನ್ನಷ್ಟು ಉತ್ತಮ ಪ್ರದರ್ಶನ ನೀಡಿ ತಂಡಕ್ಕೆ ಮರಳಿ ಬರಲಿ.

    ಆರಕ್ಕಿಂತ ಮೇಲೇರದ ಮತ್ತು ೩ಕ್ಕಿಂತ ಕೆಳಗಿಳಿಯದ ತಿಲಕ್ ನಾಯ್ಡುವಿಗೇ ಮತ್ತೆ ಮಣೆ ಹಾಕಲಾಗಿದೆ. ಈ ನಾಯ್ಡುಗಾರುಗೆ 'ಇನ್-ಫ್ಲುಯನ್ಸ್'ಗೇನೂ ಕಡಿಮೆ ಇಲ್ಲ. ಕಳೆದ ಋತುವಿನಲ್ಲಿ ದೇವರಾಜ್ ಪಾಟೀಲ್ ರೂಪದಲ್ಲಿ ಪ್ರತಿಸ್ಪರ್ಧಿಯೊಬ್ಬ ತಂಡದಲ್ಲಿದ್ದರಿಂದಲೇ ತಿಲಕ್, ತನ್ನ ರಣಜಿ ಜೀವನದ ಉತ್ತಮ ಋತುವನ್ನು ಆಡಿದ್ದರು. ಅದೇ ಕಾರಣದಿಂದ ಈಗ ತಂಡದಲ್ಲಿದ್ದಾರೆ. ಕಳೆದ ಋತುವಿನ ೨೦-೨೦ ರಾಷ್ಟ್ರೀಯ ಪಂದ್ಯಾವಳಿಯಲ್ಲಿ ಕರ್ನಾಟಕದ ವಿಕೆಟ್ ಕೀಪರ್ ಆಗಿ ಪಾಟೀಲ್ ಆಡಿದ್ದರು. ವಿಕೆಟ್ ಹಿಂದೆ ಉತ್ತಮ ನಿರ್ವಹಣೆ ತೋರಿದ್ದಲ್ಲದೇ, ಆರಂಭಿಕ ಆಟಗಾರನಾಗಿ ಬಿರುಸಿನ ಆರಂಭವನ್ನೂ ನೀಡಿ ಪಾಟೀಲ್ ಗಮನ ಸೆಳೆದಿದ್ದರು. ಕಳೆದ ಋತುವಿನಲ್ಲಿ ತಂಡದಲ್ಲಿದ್ದೂ ಒಂದೇ ಪಂದ್ಯವನ್ನಾಡದ ದೇವರಾಜ್ ಪಾಟೀಲ್-ಗೆ ಈ ಬಾರಿಯಾದರೂ ತಿಲಕ್ ನಾಯ್ಡು ಜಾಗದಲ್ಲಿ ಒಂದೆರಡು ಅವಕಾಶ ನೀಡಿದರೆ, ಕರ್ನಾಟಕಕ್ಕೆ ಒಬ್ಬ ಉತ್ತಮ ವಿಕೆಟ್ ಕೀಪರ್ ಮತ್ತು ಬ್ಯಾಟ್ಸ್-ಮನ್ ದೊರಕಿದಂತಾಗುವುದು.

    ಕರ್ನಾಟಕಕ್ಕೆ ಮತ್ತೊಮ್ಮೆ ರಣಜಿ ಟ್ರೋಫಿ ಸಿಗುವವರಗೆ ತಾನು ನಿವೃತ್ತನಾಗುವುದಿಲ್ಲ ಎಂದು ಸುನಿಲ್ ಜೋಶಿ ಪಣತಟ್ಟಿರುವಂತೆ ತೋರುತ್ತಿದೆ. ಸ್ಪಿನ್ ವಿಭಾಗದಲ್ಲಿ ಅಪ್ಪಣ್ಣ, ಜೋಶಿಗೆ ಉತ್ತಮ ಜೊತೆ ನೀಡಬಲ್ಲರು. ಕೊಡಗಿನ ಪಾಲಿಬೆಟ್ಟದ ಸಮೀಪ ಕಾಲಹರಣ ಮಾಡುತ್ತಿದ್ದ ಅಪ್ಪಣ್ಣ, ಕಳೆದ ಋತುವಿನಲ್ಲಿ ರಣಜಿಗೆ ಪಾದಾರ್ಪಣ ಮಾಡಿ, ಭಾರತ ೧೯ ವರ್ಷದೊಳಗಿನವರ ತಂಡಕ್ಕೆ ಆಡುವಷ್ಟರ ಮಟ್ಟಕ್ಕೆ ಬೆಳೆದದ್ದು ಸೋಜಿಗದ ಕತೆ. ಇನ್ನು ದಾವಣಗೆರೆಯ ವಿನಯ್ ಕುಮಾರ್, ಕೊಡಗಿನ ಅಯ್ಯಪ್ಪ ಮತ್ತು ಮೈಸೂರಿನ ಧನಂಜಯ ವೇಗದ ಬೌಲರ್ ಗಳು.

    ಕರ್ನಾಟಕದ ಬ್ಯಾಟಿಂಗ್ ರಘು ಮತ್ತು ಯೆರೆ ಗೌಡರನ್ನೇ ನೆಚ್ಚಿಕೊಂಡಿದೆ. ಇವರಿಬ್ಬರೊಂದಿಗೆ ಯುವ ಆಟಗಾರ ಪವನ್, ನಾಯ್ಡು ಮತ್ತು ಸವ್ಯಸಾಚಿ ಬಾಲಚಂದ್ರ ಅಖಿಲ್. ಕಳೆದ ಋತುವಿನಲ್ಲಿ ಬ್ಯಾಟಿಂಗ್-ನಲ್ಲಿ ಉತ್ತಪ್ಪ ಬಳಿಕ ಮಿಂಚಿದವರು ರಘು ಮತ್ತು ನಾಯಕ ಯೆರೆ ಗೌಡ. ಈ ಬಾರಿ ಇವರಿಬ್ಬರು ಚೆನ್ನಾಗಿ ಆಡಿದರೆ ಮಾತ್ರ ಕರ್ನಾಟಕಕ್ಕೆ ಉಳಿಗಾಲ. ಮುಂಬೈ ವಿರುದ್ಧ ಕಳೆದ ವಾರ ನಡೆದ ಪಂದ್ಯದಲ್ಲಿ ಕರ್ನಾಟಕವನ್ನು ಪಾರು ಮಾಡಿದ್ದೇ ರಾಹುಲ್ ದ್ರಾವಿಡ್. ರಾಹುಲ್ ದ್ವಿಶತಕ ಮತ್ತು ಪವನ್ ಜತೆ ಅವರ ಶತಕದ ಜೊತೆಯಾಟದಿಂದ ಕರ್ನಾಟಕ ಪಂದ್ಯವನ್ನು ೧೪೨ ರನ್ನುಗಳ ಹಿನ್ನಡೆಯಿದ್ದರೂ ಡ್ರಾ ಮಾಡಿಕೊಂಡು ಒಂದು ಅಂಕವನ್ನು ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ರಾಹುಲ್ ಇನ್ನು ಒಂದು ಪಂದ್ಯಕ್ಕೆ ಮಾತ್ರ ಲಭ್ಯವಿರುವರು. ತನ್ನ ಎರಡನೇ ರಣಜಿ ಪಂದ್ಯವನ್ನಾಡುತ್ತಿದ್ದ ಯುವ ಆಟಗಾರ ಪವನ್, ದ್ರಾವಿಡ್ ನಂತಹ ಮಹಾನ್ ಆಟಗಾರನ ಜೊತೆ ಶತಕದ ಜೊತೆಯಾಟದಲ್ಲಿ ಪಾಲ್ಗೊಂಡು, ಇನ್ನಿಂಗ್ಸ್ ಹೇಗೆ ಆಡಬೇಕು ಎಂಬ ಪಾಠ ಕಲಿಯಲು ಸಿಕ್ಕಿದ್ದು ಅವರ ಅದೃಷ್ಟ. ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯಗಳಿಗೆ ರಾಬಿನ್ ಉತ್ತಪ್ಪ ಆಯ್ಕೆಯಾಗಲಾರರು ಎಂದಾದರೆ ಕರ್ನಾಟಕದ ಎರಡನೇ ಪಂದ್ಯದ ನಂತರ ಅವರು ಲಭ್ಯವಿರಬಹುದು. ಮೊದಲೆರಡು ಪಂದ್ಯಗಳಿಗೆ ರಾಹುಲ್ ದ್ರಾವಿಡ್ ಮತ್ತು ಅನಿಲ್ ಕುಂಬ್ಳೆ ಲಭ್ಯವಿರುವರು.

    ಮತ್ತೊಂದು ಸಂತೋಷದ ಸುದ್ದಿಯೆಂದರೆ ಉದಿತ್ ಪಟೇಲ್ ಮತ್ತು ಸ್ಟುವರ್ಟ್ ಬಿನ್ನಿ ತಂಡದಲ್ಲಿಲ್ಲ. ಇಂಡಿಯನ್ ಕ್ರಿಕೆಟ್ ಲೀಗ್ ಸೇರಿದ್ದರಿಂದ ಬಿನ್ನಿ, ತಾನಾಗಿಯೇ ಆಯ್ಕೆಗೆ ತನ್ನನ್ನು ಅನರ್ಹಗೊಳಿಸಿಕೊಂಡರೆ (ಆಯ್ಕೆಯಾಗಲಾರೆನು ಎಂದು ತಿಳಿದ ಬಳಿಕ ಇಂಡಿಯನ್ ಕ್ರಿಕೆಟ್ ಲೀಗ್ ಸೇರಿರಬೇಕು!) ಉದಿತ್ ಆಯ್ಕೆಯಾಗಲಿಲ್ಲ (ದೇವರ ದಯೆ). ಸುಧೀಂದ್ರ ಶಿಂದೆ ಮತ್ತೆ ಮರಳಿ ತಂಡಕ್ಕೆ ಬಂದಿದ್ದಾರೆ. ಇವರೊಬ್ಬ ಉತ್ತಮ ಆಟಗಾರ. ಈ ಬಾರಿಯಾದರೂ ಸಿಕ್ಕಿದ ಅವಕಾಶಗಳನ್ನು ಶಿಂದೆ ಸರಿಯಾಗಿ ಉಪಯೋಗಿಸಿಕೊಂಡು ತಂಡದಲ್ಲಿ ತನ್ನ ಸ್ಥಾನ ಭದ್ರಗೊಳಿಸಲಿ.

    ತಂಡ: ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್, ಎನ್.ಸಿ.ಅಯ್ಯಪ್ಪ, ಸುನಿಲ್ ಜೋಶಿ, ಯೆರೆ ಗೌಡ, ಸಿ.ರಘು, ಬ್ಯಾರಿಂಗ್ಟನ್ ರೋಲಂಡ್, ಕೆ.ಬಿ.ಪವನ್, ಶ್ರೀನಿವಾಸ ಧನಂಜಯ, ಆರ್.ವಿನಯ್ ಕುಮಾರ್, ಸುಧೀಂದ್ರ ಶಿಂದೆ, ಬಾಲಚಂದ್ರ ಅಖಿಲ್, ಕೆ.ಪಿ.ಅಪ್ಪಣ್ಣ, ದೇವರಾಜ ಪಾಟೀಲ್, ತಿಲಕ್ ನಾಯ್ಡು ಮತ್ತು ರಾಬಿನ್ ಉತ್ತಪ್ಪ.

    ಇತರೆಡೆ ಕಳೆದ ಋತುವಿನಲ್ಲಿ ಪ್ಲೇಟ್ ಲೀಗ್-ನಲ್ಲಿ ಅಸ್ಸಾಮ್ ತಂಡವನ್ನು ನಾಯಕನಾಗಿ ಪ್ರತಿನಿಧಿಸಿದ್ದ ಕರ್ನಾಟಕದ ಮಾಜಿ ಆರಂಭಿಕ ಆಟಗಾರ ಜಗದೀಶ್ ಅರುಣ್ ಕುಮಾರ್, ಈ ಋತುವಿನಲ್ಲಿ ಪ್ಲೇಟ್ ಲೀಗ್-ನಲ್ಲಿ ಗೋವಾದ ಪರವಾಗಿ ಆಡಲಿದ್ದಾರೆ. ಅರುಣ್, ಗೋವಾವನ್ನು ನಾಯಕನಾಗಿ ಮುನ್ನಡೆಸಲಿದ್ದಾರೆ ಮತ್ತು ಈ ಋತುವಿನ ಮೊದಲ ಪಂದ್ಯದಲ್ಲಿ ಅರುಣ್ ನಾಯಕತ್ವದಲ್ಲಿ ಗೋವಾ ತನ್ನ ಮೊದಲ ಪಂದ್ಯವನ್ನು ಹರ್ಯಾನಾ ವಿರುದ್ಧ ಗೆದ್ದಿದೆ. ೨೦೦೫-೦೬ ಋತುವಿನಲ್ಲಿ ರಾಜಸ್ಥಾನದ ಪರವಾಗಿ ೩ ಪಂದ್ಯಗಳನ್ನು ಆಡಿದ್ದ ಕರ್ನಾಟಕದ ಮತ್ತೋರ್ವ ಮಾಜಿ ಆರಂಭಿಕ ಆಟಗಾರ ಮಿಥುನ್ ಬೀರಾಲ ಈ ಋತುವಿನಲ್ಲಿ ಹರ್ಯಾನವನ್ನು ಪ್ರತಿನಿಧಿಸಲಿದ್ದಾರೆ.

    ಅಂತೆಯೇ ಅರುಣ್ ಕುಮಾರ್ ತೆರವುಗೊಳಿಸಿದ ಅಸ್ಸಾಮ್ ತಂಡದ ನಾಯಕತ್ವವನ್ನು ತಮಿಳುನಾಡಿನ ಶ್ರೀಧರನ್ ಶರತ್ ವಹಿಸಿಕೊಂಡಿದ್ದಾರೆ. ಕಳೆದ ಋತುವಿನ ಅಂತ್ಯದಲ್ಲಿ ಪ್ರಥಮ ದರ್ಜೆ ಕ್ರಿಕೆಟ್-ನಿಂದ ನಿವೃತ್ತಿ ಘೋಷಿಸಿದ್ದ ಶರತ್, ಈಗ ನಿವೃತ್ತಿಯಿಂದ ಹೊರಬಂದು ಅಸ್ಸಾಮ್ ತಂಡದ ಚುಕ್ಕಾಣಿ ಹಿಡಿದಿದ್ದಾರೆ. ಅವರೊಂದಿಗೆ ಮಾಜಿ ಭಾರತ ಮತ್ತು ತಮಿಳುನಾಡಿನ ಆರಂಭಿಕ ಆಟಗಾರ ಸದಗೋಪನ್ ರಮೇಶ್ ಕೂಡಾ ಅಸ್ಸಾಮ್ ಪರವಾಗಿ ಆಡುತ್ತಿದ್ದಾರೆ.

    ಕರ್ನಾಟಕದ ಪಂದ್ಯಗಳು:
    ೧. ನವೆಂಬರ್ ೩ ರಿಂದ ೬ - ಮುಂಬೈ ವಿರುದ್ಧ ಮುಂಬೈನಲ್ಲಿ
    ೨. ನವೆಂಬರ್ ೧೫ ರಿಂದ ೧೮ - ಹಿಮಾಚಲ ಪ್ರದೇಶ ವಿರುದ್ಧ ಬೆಂಗಳೂರಿನಲ್ಲಿ
    ೩. ನವೆಂಬರ್ ೨೩ ರಿಂದ ೨೬ - ತಮಿಳುನಾಡು ವಿರುದ್ಧ ಚೆನ್ನೈನಲ್ಲಿ
    ೪. ಡಿಸೆಂಬರ್ ೧ ರಿಂದ ೪ - ರಾಜಸ್ಥಾನ ವಿರುದ್ಧ ಬೆಂಗಳೂರಿನಲ್ಲಿ
    ೫. ಡಿಸೆಂಬರ್ ೯ ರಿಂದ ೧೨ - ಸೌರಾಷ್ಟ್ರ ವಿರುದ್ಧ ಬೆಂಗಳೂರಿನಲ್ಲಿ
    ೬. ಡಿಸೆಂಬರ್ ೧೭ ರಿಂದ ೨೦ - ದೆಹಲಿ ವಿರುದ್ಧ ಬೆಂಗಳೂರಿನಲ್ಲಿ
    ೭. ಡಿಸೆಂಬರ್ ೨೫ ರಿಂದ ೨೮ - ಮಹಾರಾಷ್ಟ್ರ ವಿರುದ್ಧ ಪುಣೆ/ ಕೊಲ್ಲಾಪುರ/ ನಾಸಿಕ್ ನಲ್ಲಿ

    ಭಾನುವಾರ, ನವೆಂಬರ್ 04, 2007

    ಮತ್ತೊಂದು ಜಲಧಾರೆ


    ಈ ಬಾರಿ ನನ್ನೊಂದಿಗಿದ್ದವರು ವಿನಯ್. ಹೊಸ್ಮಾರು ಎಂಬಲ್ಲಿ ಮಂಗಳೂರಿನಿಂದ ಬರಬೇಕಾಗಿದ್ದ ವಿನಯ್ ತನ್ನ ಪಲ್ಸರ್ ಬೈಕಿನಲ್ಲಿ ಮೊದಲೇ ಬಂದು ನನಗಾಗಿ ಕಾಯುತ್ತಿದ್ದರು. ನನ್ನ ಯಮಾಹಾ ಸ್ವಲ್ಪ ತೊಂದರೆ ಕೊಡುತ್ತಿದ್ದರಿಂದ ಅಂದು ಸ್ವಲ್ಪ ನಿಧಾನವಾಗಿ ಚಲಾಯಿಸಿ ತಡವಾಯಿತು.

    ಒಂದೆಡೆ ತಿರುವು ತಗೊಂಡು ೪ ಕಿಮಿ ಬಳಿಕ ರಸ್ತೆ ಕೊನೆಗೊಳ್ಳುತ್ತದೆ. ಇಲ್ಲೇ ನಮ್ಮ ಬೈಕುಗಳನ್ನಿಟ್ಟು ಜಲಪಾತದೆಡೆ ನಡೆಯಲಾರಂಭಿಸಿದೆವು. ಸುಮಾರು ದೂರ 'ಜೀಪ್ ಟ್ರ್ಯಾಕ್' ನಲ್ಲಿ ದಾರಿ ಸಾಗಿದರೆ ನಂತರದ ಹಾದಿ ಕಾಲುದಾರಿ. ಸುಮಾರು ೪೦ ನಿಮಿಷಗಳ ಬಳಿಕ ಬಲಕ್ಕೆ ಸಿಗುವ ಸಣ್ಣ ತೋಟವೊಂದು 'ಲ್ಯಾಂಡ್ ಮಾರ್ಕ್'. ಇಲ್ಲೇ ಸ್ವಲ್ಪ ಮುಂದೆ ಎಡಕ್ಕೆ ಸಿಗುವ ಕಾಲುದಾರಿಯಲ್ಲಿ ಕಣಿವೆಯಲ್ಲಿಳಿದರೆ ದಾರಿ ಜಲಪಾತದ ಮೇಲ್ಭಾಗಕ್ಕೆ ಬಂದು ಕೊನೆಗೊಳ್ಳುತ್ತದೆ. ೨ ವರ್ಷಗಳ ಹಿಂದೆ ಇಲ್ಲಿಗೆ ಬಂದಾಗ ಕೆಳಗಿಳಿಯಲು ದಾರಿ ಗೊತ್ತಾಗದೆ ಮೇಲಿನಿಂದಲೇ ಕತ್ತು ಕೊಂಕಿಸಿ ನೀರು ಕೆಳಗೆ ಧುಮುಕುವುದನ್ನು ನೋಡಿ ಅಸಮಾಧಾನದಿಂದಲೇ ಹಿಂತಿರುಗಿದ್ದೆ. ಕೆಳಗಿಳಿದು ನೋಡಬೇಕು ಎಂದೇ ಈ ಬಾರಿಯ ಭೇಟಿಯನ್ನು ಹಮ್ಮಿಕೊಂಡಿದ್ದು.


    ಕೆಳಗಿಳಿಯಲು ದಾರಿಯೇ ಇರಲಿಲ್ಲ. ಮುಳ್ಳುಕಂಟಿಗಳ ನಡುವೆ ಸಣ್ಣ ದಾರಿ ಮಾಡಿಕೊಂಡು ವಿನಯ್ ಸ್ವಲ್ಪ ಮುಂದೆ ಹೋಗಿ ನಂತರ ದಾರಿ ಮಾಡಲೂ ಸಾಧ್ಯವಿರಲಿಲ್ಲವಾದ್ದರಿಂದ ಹಿಂತಿರುಗಿದರು. ಜಲಪಾತದ ಪಾರ್ಶ್ವಕ್ಕೆ ಬಂದು, ಸ್ವಲ್ಪ ಕೆಳಗಿಳಿದು ಪ್ರಯತ್ನಿಸಿದರೂ ನೋ ಸಕ್ಸೆಸ್. ಸಾಧ್ಯವಿಲ್ಲ ಎಂದು ಮರಳಿ ಮೇಲೇರುವಾಗ, ವಿನಯ್ ಅಲ್ಲೇ ಬದಿಯಲ್ಲಿ ಸಣ್ಣ 'ಓಪನಿಂಗ್'ನೊಳಗೆ ಹೇಗೋ ನೂರಿ, ಮುಳ್ಳುಕಂಟಿಗಳನ್ನು ಬದಿಗೆ ಸರಿಸಿ ದಾರಿ ಮಾಡಿಕೊಂಡು ಮುನ್ನಡೆದರು. ಹೆದರಿಕೆಯಾಗುತ್ತಿದ್ದರೂ, ತೋರ್ಗೊಡದೆ ಮೌನವಾಗಿ ಅವರನ್ನು ಹಿಂಬಾಲಿಸಿದೆ. ಕಗ್ಗತ್ತಲಿನಂತಿದ್ದ ಜಾಗ. ಮರಗಳ ಬುಡದಲ್ಲಿ ಏನೇನೋ ಗೂಡುಗಳು. ಇಳಿಜಾರಿನ ದಾರಿಯಾಗಿತ್ತು. ಕೊನೆಯ ೫ ಅಡಿಯಷ್ಟು ಅಂತರವನ್ನು ಬಹಳ ಕಷ್ಟದಿಂದ ದಾಟಿ, ೧೫ ನಿಮಿಷದಲ್ಲಿ ಜಲಪಾತದ ಬುಡದಲ್ಲಿದ್ದೆವು.

    ವಿನಯ್ ಜೊತೆಯಿರದಿದ್ದರೆ ನನ್ನಿಂದ ಜಲಪಾತದ ಬುಡಕ್ಕೆ ತೆರಳಲು ಸಾಧ್ಯವಿರುತ್ತಿರಲಿಲ್ಲ. ಇಲ್ಲಿಂದ ಸಿಕ್ಕ ನೋಟ ಅದ್ಭುತ. ಮೇಲಿನಿಂದ ನೇರವಾಗಿ ಧುಮುಕುತ್ತಿರುವಂತೆ ಕಾಣುತ್ತಿದ್ದ ಜಲಪಾತ, ಕೆಳಗಿನಿಂದ ನೋಡಿದಾಗ ೧೨೦ ಡಿಗ್ರೀ ಆಕಾರದಲ್ಲಿದ್ದು ತನ್ನ ನಿಜವಾದ ರೂಪವನ್ನು ತೋರ್ಪಡಿಸಿತ್ತು. ಈ ಜಲಧಾರೆ ಕುದುರೆಮುಖ ರಕ್ಷಿತಾರಣ್ಯದ ಪರಿಧಿಯೊಳಗಡೆ ಇದೆ.


    ಜಲಪಾತ ೩ ಹಂತಗಳನ್ನೊಳಗೊಂಡಿದೆ. ನಾವು ಬಂದಿದ್ದು ೨ನೇ ಹಂತದ ಬುಡಕ್ಕೆ. ಇನ್ನೂ ಕೆಳಗೆ ಇಳಿಯುವುದು ಅಪಾಯಕಾರಿಯಾಗಿದ್ದರಿಂದ ಆ ವಿಚಾರವನ್ನು ಕೈಬಿಟ್ಟೆವು. ಜಲಪಾತದ ಒಟ್ಟಾರೆ ಎತ್ತರ ೧೨೦ ಅಡಿಗಳಷ್ಟು ಇರಬಹುದು.

    ಮಾಹಿತಿ: ಉಮೇಶ ನಡ್ತಿಕಲ್