
ಗೆಳೆಯರೆ,
ಇಂದಿಗೆ ನಾನು 'ಅಲೆಮಾರಿಯ ಅನುಭವಗಳ'ನ್ನು ತಮಗೆಲ್ಲರಿಗೂ ಹೇಳಿಕೊಳ್ಳಲು ಆರಂಭಿಸಿ ಒಂದು ವರ್ಷವಾಯಿತು. ಈ ಒಂದು ವರ್ಷದಲ್ಲಿ ಚಾರಣ/ಪ್ರಯಾಣದ ಬಗ್ಗೆ ಬರೆದಷ್ಟನ್ನು ಕಳೆದ ೩೪ ವರ್ಷಗಳಲ್ಲಿ ಬರೆದಿರಲಿಲ್ಲ. ಅನೇಕ ಪ್ರಕೃತಿ ಪ್ರಿಯ ಗೆಳೆಯರ ಪರಿಚಯವಾಗಿದೆ. ಇಲ್ಲಿಗೆ ಭೇಟಿ ನೀಡಿ, ಏನೇ ಬರೆದರೂ ಓದಿ, ಚೆನ್ನಾಗಿದ್ದಲ್ಲಿ ಟಿಪ್ಪಣಿ ಬರೆದು ಪ್ರೋತ್ಸಾಹ ನೀಡಿದ್ದೀರಿ. ನನ್ನ ಪ್ರಮುಖ ಉದ್ದೇಶ ಚೆನ್ನಾಗಿ ಬರೆಯುವುದಕ್ಕಿಂತ, ನಮ್ಮ ಕರ್ನಾಟಕದಲ್ಲಿ ನಾನು ಭೇಟಿ ನೀಡಿದ ಸ್ಥಳಗಳ ಬಗ್ಗೆ ಪ್ರಕೃತಿ ಪ್ರಿಯರಿಗೆ ತಿಳಿಸುವುದು. ಆ ನಿಟ್ಟಿನಲ್ಲಿ ಸಾಕಷ್ಟು ಮಟ್ಟಿಗೆ ಸಫಲನಾಗಿದ್ದೇನೆ ಎಂದು ನಾನು ಭಾವಿಸಿದ್ದೇನೆ.
ಕೆಲವೊಮ್ಮೆ ಹೊಸ 'ಪೋಸ್ಟ್' ಹಾಕುವಲ್ಲಿ ತಡವಾದರೂ ತಾಳ್ಮೆಯಿಂದ ಕಾದಿದ್ದೀರಿ. ಟಿಪ್ಪಣಿ ಬರೆಯಲೂ ಏನೂ ಇಲ್ಲದಿದ್ದರೂ ಬರೆದು ಪ್ರೋತ್ಸಾಹ ನೀಡಿದವರು ಹಲವರು. ತಮ್ಮ ಬ್ಲಾಗಿನಿಂದ ಲಿಂಕ್ ಕೊಟ್ಟು ಸಹಕರಿಸಿದ್ದೀರಿ.
ಸೆಪ್ಟೆಂಬರ್ ೨೦೦೬ರಲ್ಲಿ ಗೆಳೆಯ ವೇಣು ವಿನೋದ್ ತನ್ನ ಬ್ಲಾಗ್ ಬಗ್ಗೆ ಹೇಳಿದಾಗ, ನಾನೂ ಯಾಕೆ ನನ್ನ ತಿರುಗಾಟದ ಬಗ್ಗೆ ಬರೆಯಬಾರದು ಎಂದೆನಿಸಿತು. ಕೂಸಳ್ಳಿ ಘಟನೆಯ ಬಗ್ಗೆ ಯೋಚಿಸಿದಾಗ 'ಬೇಡ'ವೆಂದೆನಿಸತೊಡಗಿತು. ಸುಮಾರು ಯೋಚಿಸಿ ಕಡೆಗೂ ಬರೆಯೋಣ ಎಂದು ನಿರ್ಧರಿಸಿ 'ಅಲೆಮಾರಿಯ ಅನುಭವಗಳು' ಶುರುಮಾಡಿದೆ. ಒಂದು ವರ್ಷ ಬ್ಲಾಗ್ ಲೋಕದಲ್ಲಿ ಉತ್ತಮ ಪ್ರಯಾಣವಾಗಿದೆ. ಹಿತೈಷಿಗಳ ಪರಿಚಯವಾಗಿದೆ. ವೇಣುಗೆ ಧನ್ಯವಾದಗಳು.
ಆಗುಂಬೆಯ ಸಂಜೆಯೂ ...... 'ಹ್ಹಿ ಹ್ಹಿ'ಯು ನಿಂದ ಆರಂಭಿಸಿ ಹೀಗೊಂದು ಊರಿನವರೆಗೆ ಪ್ರತಿಯೊಂದನ್ನೂ ಓದಿದವರು ಹಲವರು. ಆಯ್ದು ಓದಿದವರು ಕೆಲವರು. ಎಲ್ಲರ ಪ್ರೋತ್ಸಾಹಕ್ಕೆ ನಾನು ಋಣಿ.
ಜೂನ್ ೧, ೨೦೦೩ರ ಮಡೆನೂರು ಪ್ರಯಾಣದಿಂದ ಶುರುಮಾಡಿ ಮೊನ್ನೆ ಸೆಪ್ಟೆಂಬರ್ ೮, ೨೦೦೭ರ ನಾಗಝರಿ ಜಲಪಾತಕ್ಕೆ ಚಾರಣದವರೆಗೆ ಭೇಟಿ ನೀಡಿದ ತಾಣಗಳು ಅದೆಷ್ಟೋ. ಇನ್ನೂ ಎಷ್ಟೋ ನೋಡಬೇಕಿದೆ. ಈ ನಾಲ್ಕು ವರ್ಷಗಳು ನಿಸ್ಸಂದೇಹವಾಗಿ ನನ್ನ ಜೀವನದ ಉತ್ತಮ ವರ್ಷಗಳು. ಸತತ ೭ ವಾರ ಪ್ರತಿ ವಾರಾಂತ್ಯದಲ್ಲಿ ಅಲೆದಾಡಿದ್ದಿದೆ. ಸತತ ೪ ವಾರಾಂತ್ಯ ಎಲ್ಲೂ ಹೋಗದೇ ನಿಷ್ಕ್ರಿಯವಾಗಿದ್ದೂ ಇದೆ. ಆದರೆ ಪ್ರಕೃತಿಯೊಂದಿಗೆ ಈ ನಾಲ್ಕು ವರ್ಷಗಳಲ್ಲಿ ನಾನು ಕಳೆದ ಸಮಯವಿದೆಯಲ್ಲಾ, ಅಪರಿಚಿತ ಸ್ಥಳಗಳಿಗೆ ತೆರಳಿದಾಗ ಪರಿಚಯವಾದ ಜನರ ಸ್ನೇಹವಿದೆಯಲ್ಲಾ, ಇವು ಮಾತ್ರ ಅವಿಸ್ಮರಣೀಯ. ಇನ್ನೂ ಹೆಚ್ಚು ಅವಿಸ್ಮರಣೀಯ ಸಮಯವನ್ನು ಪ್ರಕೃತಿಯೊಂದಿಗೆ ಕಳೆಯಲು ಕಾತುರನಾಗಿದ್ದೇನೆ.
ಕರ್ನಾಟಕ ಕ್ರಿಕೆಟ್ ನನಗೆ ಪ್ರಿಯವಾದ ವಿಷಯವಾಗಿರುವುದರಿಂದ ಆಗಾಗ 'ಚಾರಣ/ಪ್ರಯಾಣ'ದ ಹೊರತಾಗಿ ಕ್ರಿಕೆಟ್ ವಿಷಯದ ಬಗ್ಗೆಯೂ ಬರೆದಿದ್ದೇನೆ. ಬರೆಯುತ್ತೇನೆ ಕೂಡಾ. 'ಅಲೆಮಾರಿಯ ಅನುಭವಗಳು' ಇಲ್ಲಿಗೆ ಚಾರಣದ ಬಗ್ಗೆ ಮಾತ್ರ ಓದಲು ಬರುವವರಿಗೆ ಕ್ರಿಕೆಟ್ ಲೇಖನ ನೋಡಿ ನಿರಾಸೆಯಾಗಬಹುದು. ಕ್ಷಮೆಯಿರಲಿ.
ಮೇಲೆ ಹಾಕಿದ ಚಿತ್ರ ಶರಾವತಿ ಕಣಿವೆಯದ್ದು. ಜೋಗದಿಂದ ಹೊನ್ನಾವರದೆಡೆ ತೆರಳುವಾಗ ಈ ದೃಶ್ಯ ಸಿಗುವುದು. ೧೯೯೫ರಲ್ಲಿ ಜೋಗಕ್ಕೆ ಮೊದಲ ಬಾರಿಗೆ ಹೋದಾಗ, ಆಗಿನ್ನೂ ಗೇರುಸೊಪ್ಪಾದಲ್ಲಿ ಆಣೆಕಟ್ಟು ನಿರ್ಮಾಣಗೊಂಡಿರಲಿಲ್ಲ. ಆಗ ಇಲ್ಲಿ ಕಾಣುವ ದೃಶ್ಯ ಬೇರೇನೇ ಇತ್ತು. ಅತಿ ಆಳದಲ್ಲಿ, ಎರಡು ಗುಡ್ಡಗಳ ತಳದಲ್ಲಿ ಸಣ್ಣ ಗೆರೆಯಂತೆ ಶರಾವತಿ ಹರಿಯುತ್ತಿದ್ದಳು. ಆಗ ನನ್ನ ಬಳಿ ಕ್ಯಾಮರಾ ಇರಲಿಲ್ಲವಾದ್ದರಿಂದ, ಆ ದೃಶ್ಯದ ನೆನಪು ಮಾತ್ರ ಉಳಿದಿದೆ. ಅಣೆಕಟ್ಟು ನಿರ್ಮಾಣದ ಬಳಿಕ, ಈಗ ಶರಾವತಿ ಎರಡೂ ಗುಡ್ಡಗಳ ಅರ್ಧಕ್ಕಿಂತಲೂ ಮೇಲಕ್ಕೆ ಏರಿ ವಿಶಾಲವಾದ ಜಲಸಾಗರದಂತೆ ನಿಂತಿದ್ದಾಳೆ.



